Monday, October 13, 2008

ದೇಶದಲ್ಲಿ ಬಡತನ, ಭಯೋತ್ಪಾದನೆ ನಿಷೇಧ!

(ಬೊಗಳೂರು ನಿಷೇಧ ಬ್ಯುರೋದಿಂದ)
ಬೊಗಳೂರು, ಅ. ೧೩- ಇದೀಗ ದೇಶಾದ್ಯಂತ ನಿಷೇಧಗಳ ಯುಗ. ಶ್ರೀರಾಮನ ದಾಸರು ಧೂಮನನ್ನು ನಿಷೇಧಿಸಿ, ಇದೀಗ ಹೆಂಡ-ತಿಯರನ್ನು ನಿಷೇಧಿಸಲು ಹೊರಟಿದ್ದಾರೆ. ಮತ್ತೊಂದೆಡೆ ಮತಾಂತರ ನಿಷೇಧದ ಆಗ್ರಹವೂ, ಪಕ್ಷಾಂತರ ನಿಷೇಧದ ಒತ್ತಾಸೆಯೂ, 'ಗಂಡಾಂ'ತರವನ್ನು ತಡೆಯಬೇಕೆಂಬ ಒಕ್ಕೊರಲ ಕೂಗೂ ಕೇಳಿಬರುತ್ತಲೇ ಇದೆ.

ಇಷ್ಟೆಲ್ಲದರ ಮಧ್ಯೆಯೇ, ವಿಪ್ರ ಸಿಂಗರಂತೂ ಪರಿಷತ್ತು ಮತ್ತು ದಳಗಳನ್ನು ನಿಷೇಧಿಸಲು ಆಗ್ರಹಿಸಿದ್ದಾರೆ. ಇದರ ಹಿಂದೆ ವಿಧಾನ ಪರಿಷತ್ತು ಮತ್ತು ಜನತಾ ದಳ ಎಂಬ ಅಕ್ಷರಗಳೂ ಸೇರಿಕೊಂಡಿವೆಯೇ ಎಂಬ ಬಗ್ಗೆ ಬೊಗಳೂರು ಬ್ಯುರೋ ತನಿಖೆ ನಡೆಸುತ್ತಿದೆ.

ಆದರೆ, ಯಾರಿಗೂ ತಿಳಿಯದ ವಿಷಯವೊಂದು ಬೊಗಳೂರು ಮಂದಿಗೆ ಇರುವ ಮತ್ತು ಇರಬಹುದಾದ ಪ್ರತಿಯೊಂದು ಮನೆಮನೆಯಲ್ಲಿಯೂ ಕೇಳಿಬರುತ್ತಿದೆ. ಅದೇನೆಂದರೆ ಕೇಂದ್ರ ಸರಕಾರದ ಉನ್ನತ ಮಟ್ಟದ ಸಮಿತಿ ಕೈಗೊಂಡಿರುವ ಹತ್ತು ಹಲವು ನಿಷೇಧದ ನಿರಾಧಾರ ನಿರ್ಧಾರಗಳು.

ದೇಶದಲ್ಲಿ ಕ್ಷೋಭೆಗೆ ಕಾರಣವಾಗುತ್ತಿರುವುದು ಮತ್ತು ತಮ್ಮ ಓಟಿನ ಬ್ಯಾಂಕಿನ ಮೇಲೆ ತೀವ್ರ ಪರಿಣಾಮ ಬೀರುತ್ತಿರುವುದು ಭಯೋತ್ಪಾದನೆ. ಹೀಗಾಗಿ ಭಯೋತ್ಪಾದನೆಯನ್ನೇ ನಿಷೇಧಿಸಲು ಕೇಂದ್ರ ಚಿಂತಿಸಿದೆ. ಜತೆಗೇ ಬಾಂಬು ಸ್ಫೋಟಿಸುವುದನ್ನು ನಿಷೇಧಿಸುವ ಚಿಂತನೆ ಬಲವಾಗಿ ಕೇಳಿಬರುತ್ತಿದೆ. ಇದರೊಂದಿಗೆ, ದೇಶವನ್ನು ಕಾಡುತ್ತಿರುವ ಸಮಸ್ಯೆಗಳಾದ ಬೆಲೆ ಏರಿಕೆಯನ್ನೂ ನಿಷೇಧಿಸಿ ಆದೇಶ ಹೊರಡಿಸಲಿರುವ ಕೇಂದ್ರವು, ಹಣದುಬ್ಬರಕ್ಕೆ ನಿಷೇಧ ಹೇರಲು ಕೂಡ ನಿರ್ಧರಿಸಿದೆ.

ನಮ್ಮದು ಬಡ ರಾಷ್ಟ್ರ ಎಂಬೆಲ್ಲಾ ಆರೋಪಗಳು ಹೆಚ್ಚಾಗಿ ಕೇಳಿಬರುತ್ತಿರುವುದರಿಂದ ದೇಶದಲ್ಲಿ ಬಡತನವನ್ನೂ ನಿಷೇಧಿಸುವ ಕುರಿತು ಚಾಣಾಕ್ಷ ಸಚಿವರು ತೀರ್ಮಾನ ಕೈಗೊಂಡಿದ್ದು, ಮತ್ತೊಬ್ಬ ಅತಿ ಚಾಣಾಕ್ಷ ಮಂತ್ರಿ ಮಹೋದಯರಂತೂ ಬಡವರನ್ನೇ ನಿಷೇಧಿಸಲು ಯೋಜನೆ ರೂಪಿಸಿ ಸಲಹೆ ನೀಡಿದ್ದಾರೆ.

ಆದರೆ ಪ್ರತಿಪಕ್ಷದವರಂತೂ, ಬೆಲೆ ಸಿಕ್ಕಾಪಟ್ಟೆ ಏರಿಸಿದ, ಕುಸಿಯುತ್ತಿರುವ ಸೆನ್‌ಸೆಕ್ಸ್‌ಗೆ ಉತ್ತೇಜನ ನೀಡದ, ಜನಸಾಮಾನ್ಯರು ಆಹಾರ ಧಾನ್ಯಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಈ ದಿನಗಳಲ್ಲಿ ಪರಮಾಣು ತಿನ್ನುವಂತೆ ಮಾಡಿದ ಸರಕಾರವನ್ನೇ ನಿಷೇಧಿಸಬೇಕೆಂದು ಕೂಗೆಬ್ಬಿಸುತ್ತಿರುವುದು ಮಾತ್ರ ಅಧಿಕಾರ ಅನುಭೋಗಿಗಳ ನಿದ್ದೆ ಕೆಡಿಸಿದೆ. ಇನ್ನೂ ಯಾವ್ಯಾವುದನ್ನು ನಿಷೇಧಿಸಬಹುದು ಎಂಬುದರ ಕುರಿತು ಓದುಗರಿಂದ ಸಲಹೆ ಆಹ್ವಾನಿಸಲಾಗಿದ್ದು, ಇದನ್ನು ಕೇಂದ್ರದ Unprecedented Price Agenda ಸರಕಾರಕ್ಕೆ ತಲುಪಿಸಿ, ಈ ಸಲಹೆಯನ್ನು ನಿಷೇಧಿಸದಂತೆ ಕೋರಲಾಗುತ್ತದೆ!

4 comments:

 1. ನಿಷೇಧಗಳ ಪಟ್ಟಿಗೆ ದೇಶಭಕ್ತಿಯನ್ನು ಸೇರಿಸಬೇಕು ಆದರೆ ದೇಶಭಕ್ತರನ್ನು ಸೇರಿಸಬಾರದು ಎಂದು ವಿನಂತಿಸುತ್ತೇನೆ.

  ReplyDelete
 2. ಸುನಾಥರೆ,
  ಅದೀಗಾಗಲೇ ಹಳಸಿದ ವಿಚಾರ. ದೇಶಭಕ್ತಿಯನ್ನೂ, ದೇಶ ಭಕ್ತರನ್ನೂ ಅದ್ಯಾವಾಗಲೋ ನಿಷೇಧಿಸಿದಂತೆ ತೋರುತ್ತಿದೆ.

  ReplyDelete
 3. ಲಕ್ಷ್ಮೀ ಅವರೆ,
  ಏನಿದು... ಅಕ್ಷರ ಗುಚ್ಛ? ಹೇಗೆ ಓದೋದು ಅಂತ ಕಂಗೆಡಿಸಿದ್ದಕ್ಕೆ ಧನ್ಯವಾದ.

  ReplyDelete

ನಿಮ್ಮ ಸಲಹೆ/ಅಭಿಪ್ರಾಯ ತಿಳಿಸಿ..

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...