Thursday, November 27, 2008

ನುಡಿಸಿರಿಗೆ ಹೊರಟಿದೆ ಬೊಗಳೆ ದಂಡು!

ಮೂಡಬಿದ್ರಿಯಲ್ಲಿ ನಡೆಯುತ್ತಿರುವ ಸಾಹಿತ್ಯದ ಔತಣಕೂಟದಲ್ಲಿ ಸುಗ್ರಾಸ ಭೋಜನ ಮಾಡಲೆಂದು ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು ದಂಡು ಕಟ್ಟಿಕೊಂಡು ಜಾತ್ರೆಗೆ ಹೊರಟಂತೆ ಹೊರಟಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ.

ವಿಶೇಷವಾಗಿ ಅಲ್ಲಿನ ಭೋಜನಾಲಯ ಸಿಬ್ಬಂದಿಗೆ ಈ ಕುರಿತು ಎಚ್ಚರಿಕೆಯ ಮುನ್ಸೂಚನೆ ನೀಡಲಾಗಿದೆ. ಈಗಾಗಲೇ ಇದು ಸಾಹಿತ್ಯ ಸಮಾರಾಧನೆ, ಕನ್ನಡ ಸಾಹಿತ್ಯ ಜಾತ್ರೆ ಮತ್ತು ಸಾಹಿತ್ಯದ ರಸದೌತಣ ನಡೆಯಲಿದೆ ಎಂಬುದಾಗಿ ನಾಡೆಲ್ಲಾ ಪ್ರಚಾರವಾಗಿರುವ ಹಿನ್ನೆಲೆಯಲ್ಲಿ ಬೊಗಳೆ ರಗಳೆ ಬ್ಯುರೋಗೆ ಬ್ಯುರೋವೇ ಬಾಯಲ್ಲಿ ನೀರೂರಿಸಿದ ಕಾರಣ, ಬ್ಯುರೋ ಇರುವ ಚೆನ್ನೈಯಲ್ಲಿ ನೆರೆ ಹಾವಳಿ ಜೋರಾಗಿತ್ತು ಎಂಬುದನ್ನು ಪತ್ತೆ ಹಚ್ಚಲಾಗಿದೆ.

ನುಡಿಸಿರಿಯಲ್ಲಿ ಆಳ್ವರು ಏನನ್ನೆಲ್ಲಾ ಬಡಿಸಿರಿ ಅಂತ ಹೇಳುತ್ತಾರೆಯೋ, ಅದನ್ನು ಕೇಳಿಸಿಕೊಂಡು, ಯಾರೇ ಕುಡಿಸಿರಿ ಎಂದರೂ ಕುಡಿಯದೆ, ಬೊಗಳೆ ಬ್ಯುರೋಗೆ ಹೊಡೆಸಿರಿ ಎಂದು ಹೇಳದಂತೆ ಮಾಡಲು ಮುನ್ನೆಚ್ಚರಿಕೆ ವಹಿಸುತ್ತಾ ಮುನ್ನುಗ್ಗಲಾಗುತ್ತದೆ. ಶಾಸ್ತ್ರೀಯವಾಗಿ ಏನಾದರೂ ಚೆನ್ನುಡಿ, ಹೊನ್ನುಡಿ, ನಲ್ನುಡಿ, ಮೆಲ್ನುಡಿ, ಮೇಲ್ನುಡಿಗಳು ಸಿಕ್ಕಿದರೆ ಎತ್ತಿಕೊಂಡು ಬೊಗಳೆಯಲ್ಲೂ ಪ್ರಕಟಿಸಲಾಗುತ್ತದೆ.

ಅಲ್ಲೀವರೆಗೆ ಯಾರು ಕೂಡ ಖುಷಿಯಿಂದ ನಲಿದಾಡದಂತೆ ಸೊಂಪಾದಕರು ವರಾತವಾಚಕರ ಮೂಲಕ ಸುದ್ದಿ ಪ್ರಕಟಿಸಿದ್ದಾರೆ.

-ಸಂ

Tuesday, November 25, 2008

ಶಾಸ್ತ್ರೀಯ ಭಾಷೆ ಅಲ್ಲ: ಮತ್ತೊಂದು ಹೋರಾಟ ಸಿದ್ಧತೆ

(ಬೊಗಳೂರು ಆಶಾಸ್ತ್ರಿಯ ಬ್ಯುರೋದಿಂದ)
ಬೊಗಳೂರು, ನ.25- ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಎಂಬ ಸ್ಥಾನ-ಮಾನ ಸಿಕ್ಕಿದೆ, ಬೊಗಳೆಯು ಅಶಾಸ್ತ್ರೀಯ ಭಾಷೆ ಬಳಸುತ್ತಿದೆ ಎಂಬ ಕೂಗೆಲ್ಲಾ ಹಳೆಯದಾಗಿದ್ದು, ನವೆಂಬರ್ ಮುಗಿಯುವುದರೊಳಗೆ ಮತ್ತೊಂದು ಕನ್ನಡ ಹೋರಾಟಕ್ಕೆ ವೇದಿಕೆ ಸಜ್ಜಾಗುತ್ತಿದೆ.

ಚೆನ್ನುಡಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಲಭಿಸಲು ಬೊಗಳೆಯೂ ಸೇರಿದಂತೆ ಹಲವಾರು ಕನ್ನಡ ಓರಾಟಗಾರರು ಕೋಟ್ಯಂತರ ವರ್ಷಗಳಿಂದಲೇ ಹೋರಾಟ ಮಾಡುತ್ತಾ ಬಂದಿದ್ದುದು ಈಗ ಇತಿಹಾಸ... ಅಲ್ಲಲ್ಲ... ಪ್ರಾಚೀನ ಶಾಸನಗಳಲ್ಲಿ ಕಂಡುಬರಬಹುದಾದ ಪುರಾತನ ಇತಿಹಾಸ. ಅಥವಾ ಅದಕ್ಕಿಂತಲೂ ಹಳೆಯದಾಗಿರುವ ಪೌರಾಣಿಕ ಸಂಗತಿಯಾಗಿದ್ದಿರಬಹುದು. ಈ ಬಗ್ಗೆ ಪ್ರತ್ಯೇಕ ಸಂಚೋದನೆಗೆ ಅಜ್ಞರನ್ನು ಅಟ್ಟಲಾಗುತ್ತದೆ.

ಇದೀಗ ವಿಷಯಕ್ಕೆ ಬರೋಣ. ಕನ್ನಡ ಶಾಸ್ತ್ರೀಯ ಭಾಷೆ ಎಂದು ಕರೆದರೆ ಉಳಿದ ಭಾಷೆಗಳು ಅಶಾಸ್ತ್ರೀಯ ಎಂದಾಗಿ ಅವುಗಳ ಮಾನ ಹೋಗುವ ಸಾಧ್ಯತೆಗಳಿವೆ. ಒಂದಷ್ಟು ದೀರ್ಘ ತೆಗೆದು ಬಳಸಿದರೆ, ಅದು ಯಾವ ಶಾಸ್ತ್ರಿಯ ಭಾಷೆ, ರವಿ ಶಾಸ್ತ್ರಿಯದೋ ಅಥವಾ ವಿನಿವಿಂಕ್ ಶಾಸ್ತ್ರಿಯದೋ ಎಂಬ ಸಂದೇಹಗಳು ಏಳುವುದು ಸಹಜ. ಸೋ... ಅದನ್ನು ಅಭಿಜಾತ ಭಾಷೆ ಎಂದು ಕರೆದರೆ ಉತ್ತಮ ಎಂಬೋ ಸಲಹೆಯೂ ಕೇಳಿ ಬರುತ್ತಿದೆ. ಮತ್ತೊಂದು ವಾದ 'ಪಳಮೈ' ಭಾಷೆ ಎಂದು ಕರೆಯಬಹುದು ಅಂತ.

ಶಾಸ್ತ್ರಕ್ಕಷ್ಟೇ ಸೀಮಿತವಾಗಬಹುದಾದ ಶಾಸ್ತ್ರೀಯ ಭಾಷೆಯ ಹೆಸರು ಬದಲಾಯಿಸುವುದೆಂದರೆ, ಎರಡು ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿ, ಅಧಿಕೃತವಾಗಿ ಹೆಸರು ಬದಲಾಯಿಸೋವಷ್ಟು ಇದು ಸುಲಭವಲ್ಲ ಎಂಬುದನ್ನು ಬೊಗಳೆ ರಗಳೆ ಬ್ಯುರೋ ಯಾರಿಗೂ ಗೊತ್ತಾಗದಂತೆ ಪತ್ತೆ ಹಚ್ಚಿಬಿಟ್ಟಿದೆ. ಅದೇಕೆ ಎಂದು ಶಾಸ್ತ್ರಿಯ ಓದುಗರು ಪ್ರಶ್ನಿಸಬಹುದು. ಅದಕ್ಕೆ ಉತ್ತರವನ್ನು ಕೂಡ ಕಂಡುಕೊಳ್ಳಲಾಗಿದೆ. ಅದೆಂದರೆ:

"ಇದುವರೆಗೆ ಬೊಗಳೆ ರಗಳೆ ಸಹಿತ ಹಲವಾರು ಮಂದಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನ ದೊರೆಯಬೇಕು ಅಂತ ಕೋಟ್ಯಂತರ, ಲಕ್ಷಾಂತರ ವರ್ಷಗಳಿಂದ ಹೋರಾಟ ಮಾಡಿದ್ದರು. ಇದೀಗ ಅದನ್ನು ಅಭಿಜಾತವೋ, ಪಾರಂಪರಿಕವೋ, ಚೆನ್ನುಡಿಯೋ, ಪಳಮೈ ಭಾಷೆಯೋ.. ಇತ್ಯಾದಿತ್ಯಾದಿಯಾಗಿ ಹೆಸರು ಬದಲಾಯಿಸಬೇಕಿದ್ದರೆ, ಶುರುವಿನಿಂದಲೇ ಹೋರಾಟ ಶುರು ಹಚ್ಚಿಕೊಳ್ಳಬೇಕು. ಈ ಹೆಸರು ಕೊಡಬೇಕಿದ್ದರೆ ನೀವು ಹೋರಾಟ ಆರಂಭಿಸಿ, ಹಲವಾರು ವರ್ಷಗಳ ಬಳಿಕವೇ ನಾವು ಈ ಸ್ಥಾನ-ಮಾನ ನೀಡುತ್ತೇವೆ ಎಂದು ಕೇಂದ್ರವು ಸ್ಪಷ್ಟಪಡಿಸಿದೆ. ಹೀಗಾಗಿ ಇದುವರೆಗೆ ಕೋಟ್ಯಂತರ ವರ್ಷಗಳಿಂದ ನಾವು ಮಾಡಿದ ಹೋರಾಟ ವ್ಯರ್ಥವಾಯಿತು. ಇನ್ಯಾವಾಗ ನಮ್ಮದು ನಿಜಗನ್ನಡವಾಗುವುದು? ಎಂಬ ಚಿಂತೆ ಇಲ್ಲಿ ಆರಂಭವಾಗಿದೆ"!!!

ಈ ನಡುವೆ, ಬೊಗಳೆ ಭಾಷೆಗೆ 'ಅಶಾಸ್ತ್ರಿಯ' ಬದಲಾಗಿ, ಹಳಸಲು ಭಾಷೆ ಅಂತ ಅಚ್ಚಗನ್ನಡದಲ್ಲೇ ಪ್ರಯೋಗಿಸಬಹುದು ಎಂದು ನಮ್ಮ ಶತಕೋಟಿ ಭಾರತೀಯರಲ್ಲೊಬ್ಬ ಓದುಗರು ಸವಿನಯವಾಗಿ ಜಾಡಿಸಿದ್ದಾರೆ.

ಅದು ಒತ್ತಟ್ಟಿಗಿರಲಿ. ನಮ್ಮೆಲ್ಲರ ಓರಾಟಕ್ಕೆ ಶರಣಾಗಿ ಕೇಂದ್ರವು 'ಕ್ಲಾಸಿಕಲ್ ಲ್ಯಾಂಗ್ವೇಜ್' ಅಂತ ಹೇಳಿದ್ದರೂ, ಅದು ಕನ್ನಡಕ್ಕಾಗುವಾಗ ಯಾವ ರೀತಿ ಆಗಬೇಕು, ಸಂಸ್ಕೃತ, ಇಂಗ್ಲಿಷ್ ಹೊರತಾಗಿ ಅಚ್ಚಕನ್ನಡದಲ್ಲೇ ಅದಕ್ಕೊಂದು ಚೆಂದದ ನಾಮವಿಶೇಷಣ ಇಡಬಾರದೇಕೆ ಎಂದು ಬೊಗಳೆ ರಗಳೆ ಬ್ಯುರೋ ಅಪ್ಪಿ ತಪ್ಪಿ ಪ್ರಾಮಾಣಿಕವಾಗಿ ಪ್ರಶ್ನಿಸುತ್ತಿದೆ.

Saturday, November 22, 2008

ಚಂದಾದಾರರಿಗೆ ಉಚಿತ: ವಾರೆಕೋರೆ!

ಉದ್ದೇಶಪೂರ್ವಕವಾಗಿ ಏಪ್ರಿಲ್ 1ರಂದೇ (1960) ಹುಟ್ಟಿ ದಿ ಟೈಮ್ಸ್ ಆಫ್ ಡೆಕ್ಕನ್, ಮುಂಗಾರು ಮತ್ತು ಕೊನೆಗೆ ದಿ ವೀಕ್‌ನಲ್ಲಿ ವಾರೆಕೋರೆ ಚಿತ್ರಕಾರರಾಗಿ ಹೆಸರು ಮಾಡಿದ್ದ ಪ್ರಕಾಶ್ ಶೆಟ್ಟಿ ಅವರು, ಗಂಭೀರವಾಗಿ ಒಂದು ದುಸ್ಸಾಹಸಕ್ಕೆ ಇಳಿದಿದ್ದಾರೆ ಎಂದರೆ ನಂಬಲೇಬೇಕು. ಹೌದು. ಅವರು ವಾರೆಕೋರೆ ಎಂಬೊಂದು ಪತ್ರಿಕೆಯನ್ನೇ ಆರಂಭಿಸಿಬಿಟ್ಟಿದ್ದಾರೆ.

ಇದು ಚಂದಾದಾರರಿಗೆ ಉಚಿತವಂತೆ! ಇವುಗಳನ್ನು ಓದಿದ ಬಳಿಕ ನಿಮ್ಮ ಬಾಯೊಳಗಿರುವ 32 ಹಲ್ಲುಗಳಲ್ಲಿ ಒಂದೆರಡು ನಾಪತ್ತೆಯಾದರೆ ನಾವು ಜವಾಬ್ದಾರರಲ್ಲ.

ಮತ್ತು ಮನೆಯಲ್ಲಿರೋ ಪುಟಾಣಿಗಳು ಅತ್ತುಬಿಟ್ಟರೆ ಅವರ ಸಮಾಧಾನಕ್ಕೆ ನೀವು ಬುಗ್ಗೆ(ಪುಗ್ಗ)ಗಳನ್ನು ಇಲ್ಲಿಂದಲೇ ತರಿಸಿಕೊಳ್ಳಬಹುದು... ಅದೇ... ನಗೆ ಬುಗ್ಗೆಗಳನ್ನು!

ಹೆಚ್ಚಿನ ಮಾಹಿತಿ ಬೇಕಿದ್ದರೆ ಇಲ್ಲಿ ಪಿನ್ ಚುಚ್ಚಿ....
ನೀವೂ ಓದಿ, ನಿಮ್ಮವರಿಗೂ ಓದಿಸಿ... ತಿಳಿಸಿ...

Thursday, November 20, 2008

ವರ್ಲ್ಡ್ ವೈಡ್ ಪಬ್ ಸ್ಥಾಪನೆಗೆ ಚಿಂತನೆ

(ಬೊಗಳೂರು WWW ಬ್ಯುರೋದಿಂದ)
ಬೊಗಳೂರು, ನ.20- ಕುಡಿತದಿಂದಾಗುವ ಸತ್ಪರಿಣಾಮಗಳನ್ನು ದನಗಳಿಗೆ ಮತ್ತು ಜನಗಳಿಗೆ ತಿಳಿಯಪಡಿಸುವ ನಿಟ್ಟಿನಲ್ಲಿ ಬೊಗಳೂರಿನಲ್ಲಿ ಹೊಸ ಸಂಚೋದನೆಯೊಂದು ನಡೆಯುತ್ತಿದ್ದು, ಇದಕ್ಕೆ ವರ್ಲ್ಡ್ ವೈಡ್ ಪಬ್ ಎಂದು ನಾಮಕರಣ ಮಾಡಲಾಗಿದೆ.

ಕಾಸ್ಮೋಪಾಲಿಟನ್ ನಗರಗಳಲ್ಲಿ ಮಾತ್ರವಲ್ಲದೆ ಇತ್ತೀಚೆಗೆ ಕಾಸ್ಮೋಪಾಲಿಟನ್ ಹಳ್ಳಿಗಳಲ್ಲಿಯೂ ಪಬ್ ಸಂಸ್ಕೃತಿ ಮೇರೆ ಮೀರುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬೊಗಳೂರಿನ ನಿಧಾನಮಂತ್ರಿಗಳು ಪುತ್ರೀ ಕಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಮುಂಬಯಿಯಲ್ಲಿ ನಂಗಾನಾಚ್ ಪಾರ್ಟಿಯಲ್ಲಿ ನೂರಾರು ಮಂದಿ ಸಿಕ್ಕಿಬಿದ್ದದ್ದು ಕಳಪೆ ಮಾದಕ ದ್ರವ್ಯ ಸೇವಿಸಿದ್ದರಿಂದಾಗಿ. ನೈಜವಾದ ಮಾದಕ ದ್ರವ್ಯ ಸೇವಿಸಿದ್ದಿದ್ದರೆ ಅವರು ಸಿಕ್ಕಿಬೀಳುವ ಬದಲು (ಚರಂಡಿಯಲ್ಲಿ) ಬಿದ್ದು ಸಿಕ್ಕುತ್ತಿದ್ದರು ಎಂಬುದನ್ನು ಬೊಗಳೂರಿನ ಸಂಚೋದನಾ ಮಂಡಳಿ ಕಂಡುಕೊಂಡಿದೆ.

ಏನೇ ಆದರೂ, ಇದೀಗ ಸಿಕ್ಕಿಬಿದ್ದಾಗಿದೆ. ಆದರೆ ಸಿಕ್ಕಿದ್ದು ಪೊಲೀಸರ ಕೈಗಾದರೂ, ಬಿದ್ದಿದ್ದು ಜೈಲಿನಲ್ಲಿ ಆಗಿರುವುದರಿಂದ ಇನ್ನು ಆರು ತಿಂಗಳ ಕಾಲ, ಕಾಲೇಜಿಗೆ ಹೋಗಬೇಕಿಲ್ಲ, ಜೈಲಿನೊಳಗೇ ಆರಾಮವಾಗಿ ಕಾಲ ಕಳೆಯಬಹುದು.

ಎಲ್ಲ ಬೇಸರ ಮರೆಸುವ, ಎಲ್ಲ ದುಃಖ ಒರೆಸುವ ಮತ್ತು ಯುಪಿಎ ಸರಕಾರದ ಬೆಲೆ ಏರಿಕೆ ನೀತಿಗಳನ್ನೆಲ್ಲಾ ಕ್ಷಮಿಸಿಬಿಡಬಹುದಾದ ತಾಕತ್ತು ನೀಡುವ ಈ ದ್ರವ್ಯಗಳನ್ನು ಅಂತಾರಾಷ್ಟ್ರೀಯ ಮತ್ತು ಅಂತರ್ಜಾಲೀಯ ಮಟ್ಟದಲ್ಲಿ ಆಂದೋಲನವೇ ನಡೆಯಬೇಕಿದೆ, ವಿಶ್ವದೆಲ್ಲೆಡೆ ವರ್ಲ್ಡ್ ವೈಡ್ ಆಗಿ ಪಬ್‌ಗಳನ್ನು ಸ್ಥಾಪಿಸಬೇಕಿದೆ ಎಂದು ಯುಪಿಎ ಸರಕಾರದ ವ್ಯಾಕ್‌ತಾರರು ಬೊಗಳೂರು ಬ್ಯುರೋಗೆ ತಿಳಿಸಿದ್ದಾರೆ.

Monday, November 17, 2008

ಆ ಚಿತ್ರ ಚಂದಿರನ ಊರಿದ್ದಲ್ಲ, ನಮ್ಮೂರ ರಸ್ತೆಗಳದು!

(ಬೊಗಳೂರು ಪರಲೋಕ ಯಾತ್ರೆ ಬ್ಯುರೋದಿಂದ)
ಬೊಗಳೂರು, ನ.17- "ತಿಂಗಳ"ನ ಅಂಗಳಕ್ಕೆ ಕಳುಹಿಸಿದ ಮಾನವರಹಿತ ನೌಕೆಯಲ್ಲಿ ಭಾರೀ ಒಳಸಂಚೊಂದು ನಡೆದಿದೆ ಎಂಬುದನ್ನು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ.

ಮಾನವರಹಿತ ಅಥವಾ ಅಮಾನವೀಯ ಚಂದ್ರನೌಕೆಯನ್ನು ಮೊನ್ನೆ ಮೊನ್ನೆ ತಿಂಗಳನ ಅಂಗಳಕ್ಕೆ ಕಳುಹಿಸಿದೆ ಎಂಬುದು ನಿಜವಾದ ಅಸತ್ಯವಾದರೂ, ಇದಕ್ಕೆ ಮೊದಲೇ ಮಾನವಸಹಿತ ಚಂದ್ರನೌಕೆಗಳನ್ನು ಯಾರೋ ಹಾರಿಬಿಟ್ಟಿದ್ದರು ಎಂಬುದು ಕೂಡ ಇದೇ ಸಂದರ್ಭದಲ್ಲಿ ಬಯಲಾಗಿದೆ.

ಪರಲೋಕ ಯಾತ್ರೆಗಾಗಿ ಪ್ರತಿಯೊಂದು ಯೋಜನೆಗಳಲ್ಲಿಯೂ ದುಡ್ಡು ಒಟ್ಟುಗೂಡಿಸುವ ಜಾರಕಾರಣಿಗಳ ಪ್ರಯತ್ನದ ಫಲವಿದು ಎಂದು ಬೊ.ರ. ಬ್ಯುರೋ ವರದ್ದಿ ತಂದುಹಾಕಿದೆ.

ಇಷ್ಟೆಲ್ಲಾ ಭೂಮಿಯ ಬಯಲಿಗೆ ಬೀಳಲು ಕಾರಣ ಇಷ್ಟೆ. ಮೊನ್ನೆ ಮೊನ್ನೆ ಚಂದ್ರಯಾನ ನೌಕೆಯು ಚಂದಿರನ ಮೇಲ್ಮೈ ಅಂತ ಕೆಲವೊಂದು ಚಿತ್ರಗಳನ್ನು ಚಂದ್ರಲೋಕದಿಂದ ಭೂಲೋಕಕ್ಕೆ ರವಾನಿಸಿತ್ತು. ಅದು ಕೂಡ ಒಂದೇ ಎರಡೆ? ಸಾವಿರಗಟ್ಟಲೆ! ಈ ಚಿತ್ರಗಳನ್ನು ಬೊಗಳೆ ಬ್ಯುರೋದ ಮಂದಿ ತಮ್ಮದೇ ಆದ ಪ್ರಯೋಗ-ಲಯದಲ್ಲಿ ಕೂಲಂಕಷವಾಗಿ ತಪಾಸಣೆಗೆ ಒಳಪಡಿಸಿದರು.

ಆಗ ತಿಳಿದುಬಂದಿದ್ದೇನೆಂದರೆ, ಚಂದ್ರಲೋಕದಲ್ಲಿ ಕೂಡ ಈಗಾಗಲೇ ಭೂಲೋಕದಲ್ಲಿರುವಂತೆ "ಅಭಿವೃದ್ಧಿ" ಯೋಜನೆಗಳು ನಡೆಯುತ್ತಿವೆ. ಯೋಜನೆ ಎಂದ ತಕ್ಷಣ "ಗುಳುಂ" ಎಂಬ ಸದ್ದೇ ನೆನಪಾಗುವ ನಮ್ಮ ಜಾರಕಾರಣಿಗಳು ಹೇಗಾದರೂ ಮಾಡಿ ಅಲ್ಲಿಗೆ ತಲುಪಬೇಕು ಎಂದು ಶತಪಥ ಪ್ರಯತ್ನ ಕೈಗೊಂಡರು. ಅದರ ಫಲವಾಗಿ, ಅವರು ಅದಾಗಲೇ ಮಾವನಲೋಕದಿಂದ ಪರಲೋಕಕ್ಕೆ ದಿಢೀರ್ ಧಾವಿಸಿದರು. ಅದಕ್ಕಾಗಿಯೇ ಅವರು ಪರಲೋಕಯಾನ-೧ ಎಂಬ ನೌಕೆಯನ್ನು ಕಳುಹಿಸಿದ್ದು, ಇದಕ್ಕೆ ಈ ಹೆಸರಿಡಲು ಸಾಕಷ್ಟು ಮಂಡೆ ಖರ್ಚು ಮಾಡಿದ್ದಾರೆಂಬುದೂ ತಿಳಿದುಬಂದಿದೆ.

ಅಲ್ಲಿ ಅವರ ಕಣ್ಣಿಗೆ ಮೊದಲು ಕಂಡದ್ದು ಚಂದ್ರ ಲೋಕದ ರಸ್ತೆಗಳು. ಹೀಗಾಗಿ ಅಲ್ಲಿನ ರಸ್ತೆಗಳನ್ನು ಕೂಡ ಭೂಲೋಕದ ರಸ್ತೆಗಳಂತೆಯೇ ಅರೆಬರೆ, ಹೊಂಡಭರಿತವಾಗಿ ಮಾಡಿಸಿದರೆ, ಗುಳುಂಕರಿಸಿದಷ್ಟೂ ದುಡ್ಡು ಸರಕಾರದಿಂದ ಬಿಡುಗಡೆಯಾಗುತ್ತಲೇ ಇರುತ್ತದೆ ಎಂದು ತೀರ್ಮಾನ ಮಾಡಿದ್ದೇ ತಡ, ಗುಳುಂ ಕಾಮಗಾರಿ ಆರಂಭಿಸಿ ಬಿಟ್ಟಿದ್ದರು.

ಭೂಲೋಕದಲ್ಲಿರುವ ರಸ್ತೆಗಳು ನಿತ್ಯ ಪ್ರಯಾಣಿಕರನ್ನು ಪರಲೋಕ ಯಾತ್ರೆಗೆ ಕಳುಹಿಸುತ್ತಿರುವಂತಿರುತ್ತದೆ. ಇದೇ ಕಾರಣಕ್ಕೆ ತಾವು ಹೋದ ನೌಕೆಗೆ ಪರಲೋಕಯಾನ-೧ ಎಂಬ ಹೆಸರಿಟ್ಟಿದ್ದರು ಎಂಬುದು ಸಾಬೀತಾಗಿಬಿಟ್ಟಿದೆ.

ಇದೀಗ ಮಾನವರಹಿತವಾಗಿ ಹೋಗಿರುವ ಚಂದ್ರಯಾನ-೧ ನೌಕೆಯು, ಏನೂ ಅರಿಯದ ಮುಗ್ಧನಂತೆ ಅಲ್ಲಿನ ನೆಲದ ಫೋಟೋ ಅಂತ ಅಲ್ಲಿನ ರಸ್ತೆಗಳ ಫೋಟೋ ಕಳುಹಿಸಿದೆ. ಅದನ್ನು ಬೊ.ರ. ಬ್ಯುರೋದ ಅಜ್ಞಾನಿಗಳೆಲ್ಲರೂ "ಚಂದ್ರನ ಕುಳಿಗಳು ಚಂದ್ರನ ಕುಳಿಗಳು" ಎಂದೆಲ್ಲಾ ಅನರ್ಥೈಸಿ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಈ ಮಧ್ಯೆ, ಈ ಚಿತ್ರಗಳು ಚಂದ್ರನಿಂದ ಬಂದಿದ್ದಲ್ಲ, ನಮ್ಮೂರಿನ ರಸ್ತೆಗಳ ಚಿತ್ರವನ್ನು ಯಾರೋ ಕುಹಕಿಗಳು ವಿಜ್ಞಾನಿಗಳಿಗೆ ಕಳುಹಿಸಿದ್ದಾರೆ ಎಂದೆಲ್ಲಾ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಬೊ.ರ. ಬ್ಯುರೋಕ್ಕೇ ಇದರ ತನಿಖೆಯನ್ನೂ ಒಪ್ಪಿಸಲಾಗಿ, ಅದರ ತನಿಖೆ ಮುಂದುವರಿಸಲಾದಾಗ, ಅದು ಆರೋಪ ಎಂಬುದು ಸಾಬೀತಾಯಿತು.

Thursday, November 13, 2008

ಕಾಳ ಸಂತೆಯಲ್ಲಿ ಟಿಕೆಟ್: ಉತ್ಪಾದನೆ ಎಲ್ಲಿಂದ?

(ಬೊಗಳೂರು ಕಾಳಸಂತೆ ಬ್ಯುರೋದಿಂದ)
ಬೊಗಳೂರು, ನ.12- ಕಾಳ ಸಂತೆಯಲ್ಲಿ ಕಾಂಗ್ರೆಸ್ ಟಿಕೆಟ್ ಮಾರಾಟ ಮಾಡುತ್ತಿದ್ದ ಬಗ್ಗೆ ಸುದ್ದಿ ಪ್ರಕಟವಾದ ತಕ್ಷಣ ಅಸತ್ಯಾನ್ವೇಷಣೆಯಲ್ಲಿ ಪಳಗಿರುವ ಬೊ.ರ. ಬ್ಯುರೋಗೆ ಕಾಂguess ಹೈಫೈಕಮಾಂಡ್‌ನಿಂದ ಕರೆ ಬಂದಿದ್ದು, ಇದರ ತನಿಖೆ ನಡೆಸಲಾಯಿತು.

ಹೌದು. ಟಿಕೆಟುಗಳು ಮಾರಾಟವಾಗುತ್ತಿದ್ದುದಂತೂ ಸುಸ್ಪಷ್ಟವಾಗಿಯೇ ಗೋಚರಿಸಿತ್ತು. ರಸ್ತೆ ಬದಿ ಅಲ್ಲಲ್ಲಿ ಟಿಕೆಟುಗಳು ಬಿದ್ದಿದ್ದು, ಯಾರಾದರೂ ಬಿದ್ದವರಿದ್ದರೆ, ಮತ್ತು ಅವರು ಎದ್ದವರಾಗಿದ್ದರೆ ಅವರಿಗೆ ಅದು ಸಿಗುತ್ತಿತ್ತು. ಈ ಕಾರಣಕ್ಕಾಗಿ ಇದು ನನಗೆ 'ಬಿದ್ದು ಸಿಕ್ಕಿದ್ದು' ಎಂದು ಅವರು ಹೇಳಿಕೊಂಡು ಬರುತ್ತಿದ್ದರು.

ಆದರೆ ಎಲ್ಲಿ ಬೀಳಬೇಕು ಎಂದು ಯಾರು ಕೂಡ ಹೇಳದಿದ್ದರೂ, ಬೊ.ರ. ಮಾತ್ರವೇ ಅದನ್ನು ಪತ್ತೆ ಹಚ್ಚಿದೆ. ಬೀಳೋದು ಮೇಲಿನವರ ಕಾಲಿನಡಿ ಎಂಬ ಅಮೂಲ್ಯ ಅಸತ್ಯವೊಂದು ಈ ಸಂದರ್ಭದಲ್ಲಿ ಬಯಲಾಗಿದೆ.

ಈ ಮಧ್ಯೆ, ಮತ್ತಷ್ಟು ತೀವ್ರವಾಗಿ, ತೀಕ್ಷ್ಣವಾಗಿ ತಪಾಸಣೆ ಮಾಡಿ, ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ವಿದ್ಯಮಾನಗಳಿಗೆ ಹೋಲಿಕೆ ಮಾಡಿದಾಗ, ಆಪರೇಶನ್ ಕಮಲ ಎಂಬ ಶಬ್ದವೊಂದು ಎಲ್ಲಿಂದಲೋ ತನಿಖೆಯ ಹಾದಿಯಲ್ಲಿ ಬಂದು ಬಿತ್ತು. ಈ ಆಪರೇಶನ್ ಕಮಲದ ದಳದ ಅಡಿಯಲ್ಲಿ ಅಪ್ಪಚ್ಚಿಯಾದ ಕೈಗಳು, ತಮ್ಮ ಕೈಬೆರಳುಗಳ ನಡುವಿದ್ದ ಟಿಕೆಟನ್ನು ಅಲ್ಲಿಯೇ ಉದುರಿಸಿ ಹೋಗಿದ್ದವು. ಆ ಟಿಕೆಟುಗಳನ್ನೇ ಕಾಳಸಂತೆಕೋರರು ಎತ್ತಿಕೊಂಡು ತಮಗಿಷ್ಟದವರಿಗೆ ಕೊಟ್ಟಿದ್ದರು.

ಮ್ಯಾಗಿ ನೂಡಲ್ಸ್ ತಿನ್ನುತ್ತಾ ಮಾರ್ಗದಲ್ಲಿ ಎಷ್ಟೆಲ್ಲಾ ರೇಟಿಗೆ ಈ ಟಿಕೆಟು ಮಾರಾಟವಾಗುತ್ತಿತ್ತು ಎಂದು ಅಚ್ಚರಿಯಿಂದ ಕೇಳಬೇಕಾಗಿರಲಿಲ್ಲ. ಇದು ಪಕ್ಷದೊಳಗಿದ್ದವರಿಗೆ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಹೀಗಾಗಿ ಇದೊಂದು ಹೊಸ ಶೋಧ ಅಥವಾ ಸಂಶೋಧನೆ ಅಥವಾ ಅನ್ವೇಷಣೆಯ ಕಾರ್ಯ ಅಲ್ಲ, ತಮ್ಮ ಬೆನ್ನು ತಟ್ಟಿಕೊಳ್ಳಬೇಕಿಲ್ಲ, ತಾವಾಗಿಯೇ ಪಕ್ಷದಿಂದ ಒದೆಸಿಕೊಳ್ಳಬೇಕಾಗಿರಲಿಲ್ಲ ಎಂದು ಬೊ.ರ. ಬ್ಯುರೋಗೆ ಸೆಡ್ಡುಹೊಡೆಯುತ್ತಾರೆಂಬ ಭೀತಿಯಿಂದಾಗಿಯೇ ಬೊ.ರ. ವರದ್ದಿಗಾರರು ಕಾಂguess ಹೈಕಳಮಾಂಡಿಗೆ ವರದ್ದಿ ಒಪ್ಪಿಸಿದ್ದಾರೆ.

ಆದರೆ ಟಿಕೆಟ್ ಹಂಚೋಣ ಪ್ರಕ್ರಿಯೆಯ ಸಂದರ್ಭದಲ್ಲಿ, ದೇಶದ ಪ್ರತಿಯೊಂದು ಅಂಶದಲ್ಲೂ ವೋಟೇ ಕಾಣಸಿಗುತ್ತಿರುವುದರಿಂದ ಇಲ್ಲಿ ಕಡಿಮೆ ಸಂಖ್ಯಾತರಿಗೆ ಒಂದಿಷ್ಟು ಮೀಸಲು, ತುಳಿತಕ್ಕೊಳಗಾದವರಿಗೆ ಒಂದಷ್ಟು ಮೀಸಲು ಎಂದೆಲ್ಲಾ ರಗಳೆಯನ್ನು ಯಾರೂ ತೆಗೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂಬುದನ್ನು ದುರಾಚಾರ ಸಮಿತಿ ವರದಿಯೊಂದು ನಮ್ಮಿಂದ ಮೊದಲೇ ಕಂಡುಕೊಂಡಿದೆ.

Monday, November 10, 2008

ಕಾವೇರಿ ಬೇಡ, ಹೊಗೇನಕಲ್ಲೂ ಬೇಡ: ತಮಿಳರು!

(ಬೊಗಳೂರು ತಮಿಳುಕಾಡು ಬ್ಯುರೋದಿಂದ)
ಬೊಗಳೂರು, ನ.10- ನಮಗೆ ಹೊಗೇನಕಲ್ ಬೇಡ, ಕಾವೇರಿ ನೀರು ಕೂಡ ಬೇಡ ಎಂದು ತಮಿಳುಕಾಡು ಮಂದಿ ವರಾತ ತೆಗೆದಿದ್ದಾರೆ.

ಇದರ ಹಿಂದಿನ ಅಸತ್ಯ ಶೋಧನೆಯಲ್ಲಿ ಹೊರಟಾಗ ಬೊಗಳೆ ಬ್ಯುರೋದ ಮಂದಿಗೆ ಹಲವಾರು ಎಡರು ಮತ್ತು ತೊಡರುಗಳು ಎದುರಾದವು.

ಅವುಗಳಲ್ಲಿ ಪ್ರಮುಖವಾದ ವಾದವೆಂದರೆ ಬೊಗಳೂರು ಬ್ಯುರೋ ಇರುವುದೇ ತಮಿಳುಕಾಡಿನ ಮಧ್ಯೆ. ಹೀಗಾಗಿ ಇದರ ಹಿಂದೆ ಬೊಗಳೆ ಬ್ಯುರೋದ್ದೇ ಏನಾದರೂ ಸಂಚು ಇರಬಹುದು ಎಂಬ ಗಂಭೀರ ಶ್ಲಾಘನೆಭರಿತ ಆರೋಪ. ಇದನ್ನು ಥತ್ ಎಂದು ಕೊಡವಿಕೊಂಡು ಮುಂದುವರಿಯಲಾಯಿತು.

ಅಸತ್ಯಾನ್ವೇಷಣೆ ಸಂದರ್ಭ ದೊರೆತ ಬಲುದೊಡ್ಡ ವಿಚಾರವೆಂದರೆ, ತಮಿಳುಕಾಡಿನ ಮಂದಿಯೆಲ್ಲರೂ ಇದೀಗ ಬೊಗಳೂರು ತೊರೆದು ಕನ್ನಡದ ರಾಜಧಾನಿಯಾಗಿರುವ ಬೆಂಗಳೂರು ಎಂಬ ಮಹಾನಗರಿ ಸೇರಿಕೊಳ್ಳತೊಡಗಿದ್ದಾರೆ. ಅವರೆಲ್ಲರೂ ಕುಡಿಯುವುದು ಕಾವೇರಿ ನೀರನ್ನೇ! ಹೀಗಾಗಿ ಕಾವೇರಿ ನೀರನ್ನು ತಮಿಳುನಾಡಿಗೆ ಕಳುಹಿಸಿದರೆ ಇಲ್ಲಿದ್ದುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ಕೂಡ ನೀರು ಇರಲಾರದು ಎಂಬ ಭಯಾತಂಕ. ಹೀಗಾಗಿ ಅವರು ಹೊಗೇನಕಲ್ಲಿನಲ್ಲಿ ಹೊಗೆ ಏಳದಂತೆ ಮಾಡಲು ಕಟ್ಟೆಚ್ಚರ ವಹಿಸುತ್ತಿದ್ದಾರೆ ಎಂಬುದನ್ನು ತನಿಖೆಯ ಮೂಲಕ ಕಂಡುಕೊಳ್ಳಲಾಗಿದೆ.

ಹಿಂದೊಂದು ಸಲ ತಮಿಳುಕಾಡಿನ ಜಗಮಗಿಸುವ ಸಿನಿಮಾ ರಂಗದ ಮಂದಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ, ತಮಿಳು ನಿರ್ಮಾಪಕನೊಬ್ಬ ವೀರಾವೇಶದ ಭೀಷಣ ಭಾಷಣ ಮಾಡಿ, "ನನಗೆ ಹೊಗೇನಕಲ್ ಎಂದ್ರೆ ತುಂಬಾ ಇಷ್ಟ, ಅದು ನಮಗೆ ಬೇಕು, ಹಾಗೆಯೇ ಬೆಂಗಳೂರು ಅಂದ್ರೂ ತುಂಬಾನೇ ಇಷ್ಟ. ಅದು ಕೂಡ ನಮಗೇ ಸೇರಬೇಕು' ಎಂದೆಲ್ಲಾ ಭೀಕರವಾಗಿ ಕಿರುಚಾಡಿದ್ದು ನೆನಪಿರಬಹುದು. ಇಲ್ಲದಿದ್ದರೂ ಅದನ್ನು ನೆನಪಿಸಿಕೊಳ್ಳಲು ಕೋರಿಕೊಳ್ಳಲಾಗುತ್ತಿದೆ.

ಈ ಕಾರಣಕ್ಕಾಗಿಯೇ ತಮಿಳರು ಸೂ.... ಸಾ... ಎಂದು ಉಸಿರು ಬಿಡದೆ ಇದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗಿದೆ. ಆದರೆ ಬೆಂಗಳೂರಿನಲ್ಲಿ ತಮಿಳರು ಜಾಸ್ತಿಯಾಗುತ್ತಿರುವುದಕ್ಕೂ, ಬೊಗಳೆ ಬ್ಯುರೋ ಎರಡು ವರ್ಷದ ಹಿಂದೆ ಇಲ್ಲಿ ಪ್ರಕಟಿಸಿದ ವರದಿಗೂ ಯಾವುದೇ ರೀತಿಯಲ್ಲೂ, ಲವಲೇಶವೂ, ಎಳ್ಳು ಕಾಳಿನಷ್ಟೂ ಸಂಬಂಧವಿಲ್ಲ ಎಂದು ಬಲವಾಗಿ, ಭರ್ಜರಿಯಾಗಿ, ಕೀಬೋರ್ಡ್ ಎತ್ತಿ ಎತ್ತಿ, ಕುಕ್ಕಿ ಕುಕ್ಕಿ ಸ್ಪಷ್ಟಪಡಿಸಲಾಗುತ್ತಿದೆ.

Monday, November 03, 2008

ಬೊಗಳೆಗೂ ಅಶಾಸ್ತ್ರೀಯ ಮಾನ!

(ಬೊಗಳೂರು ಶಾಸ್ತ್ರಿಯ ಬ್ಯುರೋದಿಂದ)
ಬೊಗಳೂರು, ನ.೩- ನಮ್ಮ ಚೆನ್ನುಡಿಗೆ ಕ್ಲಾಸಿಕಲ್ ಎಂಬ ಸ್ಟೇಟಸ್ ದೊರಕಿದ್ದೇ ತಡ, ಅದರ ವಿರುದ್ಧದ ಭಾಷೆಯಾಗಿರುವ ಬೊಗಳೆಗೂ ಅದೇ ಸ-ಮಾನ-ತೆಗೆ, ಅಶಾಸ್ತ್ರೀಯ ಮಾನ ನೀಡಬೇಕೆಂದು ಒಂದೇ ಕೊರಳಲ್ಲಿ ಆಗ್ರಹಿಸಲಾಗುತ್ತಿದೆ.

ಆದರೆ, ಬೊಗಳೆಗೆ ಯಾವ ಶಾಸ್ತ್ರಿಯ ಮಾನವನ್ನು ಕೊಡಬೇಕು ಎಂಬುದು ಕೇಂದ್ರದಲ್ಲಿರುವ ಭಾಷಾ ವಿಧ್ವಂಸಕರಿಗೆ ತಲೆನೋವಿನ ಸಂಗತಿಯಾಗಿಬಿಟ್ಟಿದೆ. ಈಗಾಗಲೇ ವಿನಿವಿಂಕ್ ಶಾಸ್ತ್ರಿ, ಬೇಡರ ಕಣ್ಣಪ್ಪದ ಶಾಸ್ತ್ರಿ ಎಲ್ಲರೂ ಇದ್ದಾರೆ. ಕೆಲವು ವರ್ಷಗಳ ಹಿಂದೆ ಬಸವನಹುಳು ಎಂದು ಖ್ಯಾತಿ ಪಡೆದಿದ್ದ ರವಿ ಶಾಸ್ತ್ರಿಯ ಹೆಸರೂ ಬಂದು ನುಸುಳಿಹೋಗಿದೆ. ಇವುಗಳೆಲ್ಲಾ ಗೊಂದಲ ಹೆಚ್ಚಿಸಲು ಕಾರಣವಾಗಿದೆ.

ಈ ಚರ್ಚೆ ನಡೆಯುತ್ತಿರುವಾಗಲೇ, ಅವುಗಳನ್ನೆಲ್ಲಾ ಪಕ್ಕಕ್ಕೆ ತಳ್ಳಿದ ಬೊ.ರ. ವ-ರದ್ದಿ ಬ್ಯುರೋ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿಸುವಲ್ಲಿ ಕಾರಣವಾಗದೇ ಇರುವ ಅಂದರೆ ಅದಕ್ಕೆ ಅಡ್ಡಿಯಾಗಿರುವ ಬಹುಮುಖ್ಯ ಅಂಶಗಳ ಬಗ್ಗೆ ಸಂಚೋದನೆ ಮಾಡಿತು.

ದ್ರಾವಿಡಭಾಷಾ ಐವರು ಮಕ್ಕಳಲ್ಲಿ ಹಿರಿಯಣ್ಣ ಎಂಬ ಸ್ಥಾನ ಕಿತ್ತುಕೊಂಡಿರುವ ತಮಿಳರಿಗೆ ಶಾಸ್ತ್ರಿಯ ಮಾನ ಬಂದದ್ದು ಹೇಗೆ? ಎಂಬುದನ್ನು ವಿಶ್ಲೇಷಿಸಲಾಗಿ, "ಸೇತು ಸಮುದ್ರವೇ ಇಲ್ಲ, ಅದನ್ನು ಶ್ರೀರಾಮನು ಕಟ್ಟಿಸಿಯೇ ಇರಲಿಲ್ಲ, ಇದ್ದಿದ್ದರೆ, ಆ ಸೇತುವೆಯನ್ನು ಕಟ್ಟಿದ ರಾಮ ಯಾವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ್ದು" ಎಂಬಲ್ಲಿಂದ, ಸೇತುವೆಯನ್ನು ರಾಮನೇ ನಾಶಪಡಿಸಿದ ಎಂಬಿತ್ಯಾದಿಯಾಗಿ ಬಾಯಿಗೆ ಬಂದಂತೆ ಹೇಳುತ್ತಾ, ಬೊ.ರ. ಬ್ಯುರೋಕ್ಕೇ ಸೆಡ್ಡು ಹೊಡೆದು ನಿಂತಿದ್ದವರಿರುವ ನಾಡಿನಲ್ಲಿ ಭಾಷೆಗಾಗಿ ಏನಾದರೂ "ಸಿಗುತ್ತದೆ" ಎಂಬ ಸುದ್ದಿ ಬಂದಾಗ ಬಾಲ ಮಡಚಿರುವುದು ಹೊರಬಿದ್ದಿದೆ.

ತಮಗೆ ಶಾಸ್ತ್ರಿಯನ್ನು ಕೊಡಬೇಕು ಎಂದು ಕೇಳುವಾಗ, ತಮಿಳರು ಮುಂದಿಟ್ಟಿರುವ ವಾದಗಳಲ್ಲಿ, 2004ರಲ್ಲಿ ಯುಪಿಎ ಅಧಿಕಾರಕ್ಕೆ ಬರುವಾಗ, ಯುಪಿಎಗೆ ಬೆಂಬಲ ಕೊಡಬೇಕಿದ್ದರೆ ಶಾಸ್ತ್ರಿಯನ್ನು ನಮಗೊಪ್ಪಿಸಬೇಕೆಂದು ಷರತ್ತು ವಿಧಿಸಿದ್ದರು. ಅದರ ಹೊರತಾಗಿ ಬೊಗಳೆ ರಗಳೆ ಬ್ಯುರೋದ ಗಮನ ಸೆಳೆದದ್ದು ಮತ್ತೊಂದು ವಾದ. ರಾಮಾಯಣ ಘಟಿಸಿದ ಕಾಲಕ್ಕಿಂತ ಹಿಂದೆಯೇ ಕಂಬನು "ಕಂಬ ರಾಮಾಯಣ" ಬರೆದಿದ್ದಿರಬಹುದು ಎಂಬುದಾಗಿಯೂ ತಮಿಳರು ಕೇಂದ್ರದೆದುರು ವಾದಮಂಡಿಸಿದ್ದಿರಬಹುದು ಎಂಬ ವಿ-ವಾದ! ಆದುದರಿಂದ ತಮಿಳು ಅತ್ಯಂತ ಪ್ರಾಚೀನ ಭಾಷೆ, ಆ ಕಾರಣಕ್ಕೆ ನಮಗೆ ಶಾಸ್ತ್ರಿಯ ಮಾನ ಬೇಕು ಎಂಬುದು ಅವರ ಅಪ-ವಾದವಾಗಿತ್ತು. ಅದಕ್ಕಾಗಿಯೇ ಅವರು, ಮೊನ್ನೆ ಮೊನ್ನೆಯಷ್ಟೇ ನಮಗೆ ತಿಳಿದುಬಂದ ಕನ್ನಡಕ್ಕೇಕೆ ಶಾಸ್ತ್ರಿ ಬೇಕು ಎಂದು ತಕರಾರೆತ್ತಿ ಅವರು ಮದ್ರಾಸು ಹೈಕೋರ್ಟಿನಲ್ಲಿ ತಕರಾರನ್ನೂ ಎತ್ತಿದ್ದಾರೆ.

ಅದಿರಲಿ... ಬೊಗಳೆಗೂ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕೀತು ಎಂದು ಬೊಗಳೂರಿನೆಲ್ಲೆಡೆ ಆತಂಕದ, ಭೀತಿಯ ಕರಾಳ ಛಾಯೆ ಆವರಿಸಿದ್ದು, ಈ ಛಾಯೆ ಎಷ್ಟು ಕಪ್ಪಗಿದೆಯೆಂದರೆ, ಬೊಗಳೂರು ಏಕಸದಸ್ಯ ಬ್ಯುರೋದಲ್ಲಿರುವ ಸಮಸ್ತ ಸಿಬ್ಬಂದಿಗೆ ಪರಸ್ಪರರ ಮುಖ ಕಾಣಿಸದಷ್ಟು! ಇದಕ್ಕೆ ಕಾರಣವೆಂದರೆ, ರಾಜ್ಯೋತ್ಸವ ಪ್ರಶಸ್ತಿಯ ಎರಡನೇ ಕಂತು ಈಗಾಗಲೇ ಬಿಡುಗಡೆಯಾಗಿದೆ, ಉಳಿದ ಏಳೆಂಟು ಕಂತುಗಳು ಕೂಡ ಒಂದೊಂದಾಗಿ ಬಯಲಿಗೆ ಬೀಳಲಿದ್ದು, ಇದರಲ್ಲಿ ಬೊಗಳೂರು ಕೂಡ ಸೇರಬಹುದೇ ಎಂಬ ಭಯಾತಂಕ.

ಹೀಗಾಗಿ, ಬೊಗಳೂರಿನ ಓದುಗರು ವದಂತಿಗೆ ಕಿವಿಗೊಡದಂತೆ, ನಿಮ್ಮ ಮನೆಯಂಗಳದಲ್ಲೇ ಸ್ಫೋಟ ಸಂಭವಿಸಿದರೂ, ಕೇಂದ್ರ ಸರಕಾರವು ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂಬ ಭರವಸೆಯಲ್ಲಿ ಶಾಂತಚಿತ್ತದಲ್ಲಿ ಇರಬೇಕೂಂತ ಕೋರಲಾಗುತ್ತಿದೆ.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...