Friday, January 30, 2009

ಇಡ್ಲಿ ತಿಂದ ಅಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹ

(ಬೊಗಳೂರು ಬ್ರೇಕ್‌ಫಾಸ್ಟ್ ಬ್ರೇಕಿಂಗ್ ನ್ಯೂಸ್ ಬ್ಯುರೋದಿಂದ)
ಬೊಗಳೂರು, ಜ.30- ರಾಜ್ಯದ ಅಮುಖ್ಯಮಂತ್ರಿಗಳು ಬೆಳಗ್ಗಿನ ಉಪಾಹಾರಕ್ಕೆ ಇಡ್ಲಿ ವಡೆ ತಿನ್ನುತ್ತಾರೆ ಎಂದು ವರದ್ದಿಯಾಗಿರುವುದು ತನಿಖೆಗೆ ಅರ್ಹ ಎಂದು ಬೊಗಳೂರು ಓದುಗರೆಲ್ಲರೂ ಪ್ರತಿಭಟನೆ ಮಾಡಿರುವುದರಿಂದ ಒತ್ತಡಕ್ಕೆ ಮಣಿದ ನಮ್ಮ ಅನ್ವೇಷಣಾ ಬ್ಯುರೋ, ರದ್ದಿಗಾರರನ್ನು ಅಟ್ಟಾಡಿಸಿ ಕಳುಹಿಸಿತು.

ಅಟ್ಟಾಡಿಸಿದ ಭರದಲ್ಲಿ ನಮ್ಮ ವರದ್ದಿಗಾರರು ಪಬ್ಬಿಗೆ ಹೋದರೋ ಅಥವಾ ಕಾಫೀ ಬಾರಿಗೆ ತೆರಳಿದರೋ ಎಂಬುದನ್ನು ಪತ್ತೆ ಹಚ್ಚಲು ಏಕಸದಸ್ಯ ಬ್ಯುರೋದ ಮತ್ತೊಂದು ಬಣವನ್ನು ಕೂಡ ಅಟ್ಟಲಾಯಿತು.

ಒಟ್ಟಿನಲ್ಲಿ ಪಬ್ಬಿನಲ್ಲಿ ಮತ್ತು ಬಾರಿನಲ್ಲಿ (ಕಾಫೀ ಬಾರ್ ಸ್ವಾಮೀ) ಅಮುಖ್ಯಮಂತ್ರಿಗಳು ಬಂದಿದ್ದರೆಂಬುದು ಸ್ಪಷ್ಟವಾಗಿತ್ತು. ಹೀಗಾಗಿ ಹಲವಾರು ನಾಯಕ-ನಾಯಕಿ ಮಣಿಗಳನ್ನು ತನಿಖೆಗೆ ಒಳಪಡಿಸಲಾಗಿ ಹತ್ತು ಹಲವು ಧ್ವನಿಗಳು ಏಕಕಾಲಕ್ಕೆ ಮೂಡಿಬಂದವು.

ಈ ಧ್ವನಿಗಳನ್ನು ಈ ರೀತಿ ಪಟ್ಟಿ ಮಾಡಲಾಗಿದೆ:

ಕಲ್ಲಿಕಾರ್ಜುನ ಮರ್ಗೆ: ಅಮುಖ್ಯಮಂತ್ರಿಗಳು ಇಡ್ಲಿವಡೆಯನ್ನು ಮಾತ್ರ ತಿಂದಿದ್ದು ಸರ್ವಥಾ ತಪ್ಪು. ಅವರು ಇಡ್ಲಿವಡೆ ಮಾಡುವವರನ್ನು ಪೋಷಿಸುತ್ತಿದ್ದಾರೆ, ಅವರಿಗೆ ರಕ್ಷಣೆ ನೀಡುತ್ತಿದ್ದಾರೆ. ಇದರಿಂದಾಗಿ ಅಲ್ಪಸಂಖ್ಯೆಯಲ್ಲಿರುವ ಚಪಾತಿ-ಗಸಿಗೆ ಅನ್ಯಾಯ ಎಸಗಲಾಗಿದೆ. ರಾಜ್ಯದಲ್ಲಿ ಅವುಗಳಿಗೆ ಉಳಿಗಾಲವಿಲ್ಲದಂತಾಗಿದೆ. ಅವುಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ನಮಗೆ ರಕ್ಷಣೆ ಇಲ್ಲದಂತಾಗಿದೆ. ಹೀಗಾಗಿ ಅಮುಖ್ಯಮಂತ್ರಿಗಳು ಕೂಡಲೇ ರಾಜೀನಾಮೆ ಬಿಸಾಕಬೇಕು.

ವ್ಯಗ್ರಪ್ಪ: ಇಡ್ಲಿ ವಡೆ ತಿನ್ನುವ ಮೊದಲು ಅಮುಖ್ಯಮಂತ್ರಿಗಳು ಸದನದ ಒಪ್ಪಿಗೆ ಪಡೆಯಬೇಕಿತ್ತು. ಅವರು ಏಕಾಏಕಿಯಾಗಿ ಈ ರೀತಿ ಏಕಪಕ್ಷೀಯ ನಿರ್ಣಯ ತೆಗೆದುಕೊಂಡು, ವಿರೋಧ ಪಕ್ಷಗಳನ್ನು ಇದ್ದೂ ಇಲ್ಲದಂತೆ ಮಾಡಿದ್ದಾರೆ. ಇದು ವಿರೋಧಿಗಳನ್ನು ಮಟ್ಟ ಹಾಕುವ ಪ್ರಯತ್ನ ಮತ್ತು ಸರಕಾರದ ಸ್ವೇಚ್ಛಾಚಾರ, ದುರಾಡಳಿತ ಹಾಗೂ ಸರ್ವಾಧಿಕಾರಿ ಧೋರಣೆಯ ಪ್ರತೀಕ. ಸರಕಾರವನ್ನು ತಕ್ಷಣವೇ ವಿಸರ್ಜಿಸಬೇಕು.

ನಿದ್ರೇವೇಗೌಡ: ಇದು ಅಮುಖ್ಯಮಂತ್ರಿಗಳ ಕೋಮುವಾದಿತನವನ್ನು ತೋರಿಸುತ್ತದೆ. ಅವರು ಇಡ್ಲಿಯನ್ನು, ಅದು ಕೂಡ ಬ್ರಾಹ್ಮಣರ ಕಾಫಿ ಬಾರಿನಲ್ಲಿ ಸೇವಿಸಿದ್ದೇಕೆ? ಬೇರಾವುದೇ ಹೋಟೆಲುಗಳಿಗೆ ಹೋಗಬಹುದಿತ್ತಲ್ಲ? ಅವರು ಇಡ್ಲಿ ಜೊತೆ ಚಟ್ನಿಯನ್ನೂ ತಿಂದದ್ದು ಅವರೊಬ್ಬ ಪಕ್ಕಾ ಕೋಮುವಾದಿ, ಜಾತಿವಾದಿ ಎಂಬುದನ್ನು ಬಿಂಬಿಸುತ್ತದೆ. ಚಟ್ನಿ ಬದಲು, ಸಾಂಬಾರು ಇರಲಿಲ್ಲವೇ? ತುಪ್ಪ ಇರಲಿಲ್ಲವೇ? ಉಪ್ಪಿನಕಾಯಿ ಇರಲಿಲ್ಲವೇ? ಅವೆಲ್ಲವನ್ನೂ ಬಿಟ್ಟು ಅವರು ಚಟ್ನಿಯನ್ನು ಮಾತ್ರ ಸೇವಿಸಿದ್ದು ಅವರ ಸ್ವಜನ ಪಕ್ಷಪಾತತನದ ಪ್ರತೀಕ. ವಜಾಗೊಳಿಸಿ.

ಕೇಡಿಶಿ: ಅವರು ಒಂದೆರಡು ಇಡ್ಲಿಯನ್ನು ಮಾತ್ರವೇ ತಿನ್ನಬಹುದಿತ್ತು. ಇಡೀ ರಾಜ್ಯವೇ ಹಸಿವಿನಿಂದ ತತ್ತರಿಸುತ್ತಿರುವಾಗ ಅಷ್ಟೊಂದು ಇಡ್ಲಿವಡೆಯನ್ನು ಕಬಳಿಸಿದ್ದು ಮುಖ್ಯಮಂತ್ರಿಯ ಸಂಸ್ಕೃತಿಗೇ ಅಪಮಾನ. ಅಷ್ಟೊಂದು ತಿಂದಿದ್ದೀರಿ. ತಕ್ಷಣವೇ ವಿಸರ್ಜಿಸಿ.... ಸರಕಾರವನ್ನು!

ಮುದ್ದೆರಾಮಯ್ಯ: ನಮ್ಮ ಹಿಂದಿನ ಬಾಸ್ ತಿಂದ ಹಾಗೆ ಬರೇ ಮುದ್ದೆ ತಿನ್ನಬಹುದಿತ್ತು. ಇದೀಗ ರಾಜ್ಯಾದ್ಯಂತ ಅಕ್ಕಿಯ ಕೊರತೆಯೂ ಇದೆ. ತೆಂಗಿನ ಕಾಯಿ ಕೂಡ ಸಕಾಲಕ್ಕೆ ಸಿಗುತ್ತಿಲ್ಲ. ಹೀಗಿರುವಾಗ ಅಮುಖ್ಯಮಂತ್ರಿಗಳು ಇಡ್ಲಿ-ಚಟ್ನಿಯನ್ನು ತಿಂದಿದ್ದು ತಪ್ಪು. ತಿಂದರೆ ತಿನ್ನಲಿ, ಒಂದಷ್ಟು ಮಾಫಿ ಮಾಡಬಹುದು. ಆದ್ರೆ, ಅವರು ಅದನ್ನು ಸವಿದೂ ಬಿಟ್ಟರಲ್ಲ... ಈ ರೀತಿ ಸವಿದು ತಿನ್ನೋದು ಆ ಹುದ್ದೆಯ ಘನತೆಗೆ ತಕ್ಕುದಾದುದಲ್ಲ.

ರೊಯ್ಯಣ್ಣ: ತಕ್ಷಣವೇ ಸದನ ಕರೆದು ಈ ಬಗ್ಗೆ ತುರ್ತು ಚರ್ಚೆಯಾಗಲಿ. ನಾನು ಎದ್ದು ನಿಲ್ಲುತ್ತೇನೆ. ನನ್ನನ್ನು ಹಿಡಿದೆಳೆಯಲು ಪಕ್ಕದಲ್ಲಿ ಹೇಗಿದ್ದರೂ ತಮ್ಮ ಇರುತ್ತಾನಲ್ಲ...

ಭಾಶೋಕ ರಂದ್ಲಾಜೆ: ನೀವು ಒಬ್ರೇ ತಿಂದ್ರಲ್ಲ ಇಡ್ಲಿ.. ಇರಿ... ನೋಡ್ಕೋತೀನಿ ನಿಮ್ಮನ್ನ!

ಗೋನಿಯಾ ಸಾಂಧಿ: ಕರ್ನಾಟಕದಲ್ಲಿ ಏನಾಗ್ತಾ ಇದೆ? ಮಾನವನ ಹಕ್ಕುಗಳಿಗೆ ಬೆಲೆಯೇ ಇಲ್ಲ. ಒಂದು ಇಡ್ಲಿಯ ಮೇಲೆ ದಾಳಿ ನಡೆಸುವುದೆಂದರೇನು? ನಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆ ಎತ್ತೋದಾದ್ರೂ ಹೇಗೆ? ತಿಂದವರು ಕಕ್ಕಲೇ ಬೇಕು. ತಕ್ಷಣವೇ ವಿಸರ್ಜಿಸಿ.

ಬೊಗಳೇಶ್: ಅರೆ, ಅಷ್ಟೇನಾ? ಇಡ್ಲಿ ವಡೆ ಚಟ್ನಿ ಮಾತ್ರ ತಿಂದಿದ್ದಾ? ಅದೆಷ್ಟೋ ಮಂದಿ ನಮ್ಮ ಮತಗಳನ್ನು ನುಂಗಿ ನೀರು ಕುಡಿದವ್ರೆ.... ಅವ್ರಿಗೆಲ್ಲಾ ವ್ಯಾಕ್ ಥೂ ಅಂತ ಉಗೀರಿ.

ವಟವಟಾಳ್: ಇಡ್ಲಿ ಚಟ್ನಿಯನ್ನು ತಮಿಳುಕಾಡಿನವರು ಪೇಟೆಂಟ್ ಮಾಡಿಸಿಕೊಳ್ಳೋ ಮೊದ್ಲು ನಾವು ಅದನ್ನು ಒಳಗೆ ಹಾಕಿಕೊಳ್ಳಬೇಕು. ತಕ್ಷಣವೇ ಇಡ್ಲಿ-ವಡೆಯನ್ನು ರಾಜ್ಯ ಪ್ರಧಾನ ತಿಂಡಿಯಾಗಿ ಘೋಷಿಸಬೇಕು. ಇಲ್ಲವಾದರೆ ಟಾಂ ಟಾಂ, ತಾಳ, ಚೆಂಡೆ, ಡೋಲು, ಕತ್ತೆ, ಜಾಗಟೆ, ನಾಯಿ, ಬೆಕ್ಕು, ಕುರಿ ಎಲ್ಲವನ್ನೂ ಕರೆಸಿ ನಿಧಾನಸೌಧದ ಎದುರು ಧರಣಿಶಾಯಿಯಾಗುತ್ತೇವೆ.

ಪ್ರರ್ತೂರು ವಕಾಶ್ (ಸ್ವತಂತ್ರ): ಯೆಡ್ಡಿಯಟ್ಸ್ ನಮಗೆ ಅವಮಾನ ಮಾಡಿದ್ದಾರೆ. ವಿದ್ಯಾರ್ಥಿಭವನದ ಮಸಾಲೆ ದೋಸೆಗೆ ಎಸ್ಸೆಮ್ಮಸ್ ಕೃಷ್ಣ ಕಾಲದಲ್ಲಿ ಒಳ್ಳೆಯ ಬೇಡಿಕೆ ಇತ್ತು. ಈಗ ನಮ್ಮನ್ನು ಮೂಲೆಗುಂಪು ಮಾಡಲಾಗುತ್ತಿದೆ. ಇದು ಜಾತಿ ರಾಜಕೀಯ. ನಾವು ಬೆಂಬಲ ಹಿಂತೆಗೆತಕ್ಕೆ ಪ್ರಯತ್ನಿಸುತ್ತೇವೆ.

ಪರಾರ್ಧನ ಜೂಜಾರಿ: ಇದು ಅಧಿಕಾರದ ದುರುಪಯೋಗ. ಇದು ಖಂಡನೀಯ. ಇದು ಮಾನವ ಕುಲಕ್ಕೇ ಅವಮಾನ. ಇದರ ಬಗ್ಗೆ ನಮ್ಮ ಮೇಡೆ ದಿಲ್ಲಿಯಲ್ಲಿ ದೊಡ್ಡ ಸಭೆ ಕರೆದು ಕೂಡಲೇ ಚರ್ಚಿಸಬೇಕು. ರಾಜ್ಯ ಸರಕಾರ ವಜಾಗೊಳಿಸಲು ಆಗ್ರಹಿಸಬೇಕು.

ವೀಡಿಎಸ್: ಇದು ಕಮಲಳ ಆಪರೇಶನ್ ಪ್ರಭಾವವೂ ಇರಬಹುದು. ಬೇರೆಯವರ ತಟ್ಟೆಯಿಂದ ಇಡ್ಲಿ ಗುಳುಂಕರಿಸಿದ್ದಾರೆ ಅಂತ ಯಾರ್ಯಾರೋ ಏನೇನೋ ಹೇಳ್ತಾರೆ. ನಾವು ಹಾಗೆಲ್ಲ ತಲೆಕೆಡಿಸಿಕೊಳ್ಳಲ್ಲ. ನಾವೆಲ್ಲರೂ ಚೆನ್ನಾಗಿದ್ದೀವಿ.

ಮಣ್ಣಿನ ಮಕ್ಕಳ ಸಂಘ: ಯಪ್ಪಾ... ಇಡ್ಲಿಯೂರಪ್ಪ ಅವರು ಇಡ್ಲಿ ತಿಂದು ತಿಂದು ಖಾಲಿ ಮಾಡಿಬಿಟ್ರೆ ಮಣ್ಣಿನ ಮಕ್ಕಳಾದ ನಮ್ ಗತಿಯೇನು? ನಮಗೆ ಇಡ್ಲಿ ಉಳಿಯುತ್ತದೋ ಇಲ್ಲವೋ? ನಮಗೆ ಬಿಡಿ, ನಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ, ಮರಿ ಮಕ್ಕಳಿಗೆಲ್ಲಾ ಏನ್ ಮಾಡೋದು?

ಅಮುಖ್ಯಮಂತ್ರಿಗಳ ಸ್ಪಷ್ಟನೆ: ನಾವು ಈಗಷ್ಟೇ ಅಧಿಕಾರಕ್ಕೆ ಬಂದಿದ್ದೇವೆ. ಎಲ್ಲರನ್ನೂ ಸರಿದೂಗಿಸಿಕೊಳ್ಳುವ ಪ್ರಯತ್ನದಲ್ಲಿದ್ದೇವೆ. ಇನ್ನು ಮುಂದೆ ಇಡ್ಲಿ-ವಡೆ ಸೇವಿಸುವ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ಪೊಲೀಸರಿಗೆ ಎಲ್ಲ ಅಧಿಕಾರವನ್ನೂ ಕೊಟ್ಟಿದ್ದೇವೆ.

ಗಮಾರಸ್ವಾಮಿ: ಅಪ್ಪಂಗೆ ಹೇಳ್ತೀನಿ!

Thursday, January 29, 2009

ಮಾವನ ಹಕ್ಕುಗಳನ್ನು ಉಲ್ಲಂಘಿಸಿದ್ದೇಕೆ?

(ಬೊಗಳೂರು ಮಾವನ ಬ್ಯುರೋದಿಂದ)
ಬೊಗಳೂರು, ಜ.29- ಮಂಗನೂರಿನಲ್ಲಿ ಮಾವನ ಹಕ್ಕುಗಳನ್ನು ಹಾರಿ ಉಲ್ಲಂಘಿಸಿದ್ದಾರೆ (ಅಂದರೆ ಸಮುದ್ರ ಲಂಕೆಗೆ ಹಾರಿದಂತೆ ಸಾಗರ ಉಲ್ಲಂಘನೆ ಮಾಡಿದ್ದಾರೆ) ಎಂದು ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಬೊಗಳೂರು ಬ್ಯುರೋ ಪರಮಗಂಭೀರವಾದ ತನಿಖೆಗೆ ಸಿದ್ಧವಾಯಿತು.

ಪಬ್ಬಿಗೆ ತಮ್ಮ ಭಾವೀ ಸೊಸೆಯರನ್ನು ಕಳುಹಿಸುತ್ತಿರುವ ಮಾವನವರ ಹಕ್ಕುಗಳನ್ನೇ ಏಕೆ ಉಲ್ಲಂಘಿಸಬೇಕು ಎಂದು ಹಲವರಲ್ಲಿ ಪ್ರಶ್ನೆ ಕೇಳಿ ತನಿಖೆ ಶುರು ಹಚ್ಚಿಕೊಳ್ಳಲಾಯಿತು. ಹಲವರ ಔದಾಸೀನ್ಯಭರಿತ ಪ್ರತಿಕ್ರಿಯೆಗಳು ಮನ ಮುಟ್ಟಿ ತಟ್ಟಿ ಬಡಿದೆಚ್ಚರಿಸಿ, ಸಂಸ್ಕೃತಿಯನ್ನು ಅಟ್ಟುವಂತಿತ್ತು.

ಪಬ್ಬಿಗೆ ಹೋಗೋದು ಭಾರತೀಯ ಸಂಸ್ಕೃತಿ ಅಲ್ಲ, ಅಲ್ಲಲ್ಲ... ಭಾರತೀಯ ವಿಕೃತಿ ಅಲ್ಲ, ಹೌದು (!) ಅಂತಲೂ ಒಪ್ಪಿಕೊಳ್ಳೋಣ. ಆದ್ರೆ ದನಕ್ಕೆ ಅಲ್ಲಲ್ಲ ಬೆಕ್ಕಿಗೆ ಬಡಿದ ಹಾಗೆ ಎಳೆದಾಡಿ ಬಡಿಯೋದು? ಮಾವನ ಹಕ್ಕುಗಳು ಬಿಡಿ, ಪ್ರಾಣಿಗಳ ಹಕ್ಕು ಕೂಡ ಉಲ್ಲಂಘನೆಯಾದಂತೆಯೇ ಅಲ್ಲವೇ? - ಬೊಗಳೂರಿನ ಬೊಗಳೇಶ್ ಪ್ರಶ್ನೆ.

ಪಬ್ಬಿನಲ್ಲಿ ಕುಡಿಯುವುದು ಭಾರತೀಯ ವಿಕೃತಿ ಅಲ್ಲ ಅಂತಾದರೆ, ಮಹಿಳೆಯರು ಮಾತ್ರವೇ ಅಲ್ಲ, ಪುರುಷರು ಕೂಡ ಕುಡಿದು ನರ್ತಿಸುತ್ತಾರೆ. ಅವರಿಗೇಕೆ ಈ ವಿಕೃತಿ ಅನ್ವಯವಾಗುವುದಿಲ್ಲ? ಮಹಿಳೆಯರಿಗೆ ಮಾತ್ರವೇ ಬಡಿದದ್ದೇಕೆ? ಇದು ಮಹಿಳಾ ಹಕ್ಕುಗಳ ಉಲ್ಲಂಘನೆ ಎಂದು ಹೇಳಲಾಗುವ ಕಾರಣ, ಮತ್ತು ಬಡಿದದ್ದು ಸ್ತ್ರೀಯರಿಗೇ ಆಗಿರೋ ಕಾರಣ, ಅದು ಮಾವನ ಹಕ್ಕು ಉಲ್ಲಂಘನೆ ಆಗಲು ಸಾಧ್ಯವಿಲ್ಲ. ಅದನ್ನು ಅತ್ತೆಯ ಹಕ್ಕಿನ ಉಲ್ಲಂಘನೆ ಎಂದು ಕರೆಯಬೇಕು ಎಂದು ಆಗ್ರಹಿಸುತ್ತೇವೆ. - ಬೊಗಳಿನಿ ಉವಾಚ.

ಯುವ ಜನರು ಕುಲಗೆಟ್ಟು ಹೋಗುತ್ತಿದ್ದಾರೆ. ಯಾವಾಗಲೂ ಪಬ್ಬಿನಲ್ಲೇ ಇರುತ್ತಾರೆ. ಅಲ್ಲಿ, ತಮ್ಮ ಮಾವನ ಹಕ್ಕುಗಳನ್ನೆಲ್ಲಾ ಉಲ್ಲಂಘಿಸಿ, ಮಾವನ ಮನೆ ಸೇರ್ಕೋಂಡು ಕಂಬಿಗಳೆಷ್ಟಿವೆ ಎಂದು ಎಣಿಸುತ್ತಾ ಕೂರುತ್ತಾರೆ. ಅಷ್ಟೊಳ್ಳೆ ಭವ್ಯ ಭವಿಷ್ಯವಿರೋ ಯುವ ಜನತೆಯನ್ನು ಕೇವಲ ಕಂಬಿಗಳನ್ನು ಎಣಿಸಲು ಹಚ್ಚುವುದು ಅವರ ಮಾವನ ಹಕ್ಕುಗಳ ಉಲ್ಲಂಘನೆಯಲ್ಲವೇ? ಠಾಣೆಯಲ್ಲಿರೋ ಮಾವನೂ ಅವರನ್ನೆಲ್ಲಾ ಚೆನ್ನಾಗಿಯೇ ನಡೆಸಿಕೊಳ್ಳುತ್ತಾರಾದರೂ, ಅದನ್ನು "ಮಾವನೇ ಮಾವನ ಹಕ್ಕುಗಳನ್ನು ಉಲ್ಲಂಘಿಸುವುದು" ಎಂದು ಕರೆಯಲಾಗುತ್ತದೆಯೇ? - ಪಿಕ್‌ಪಾಕೆಟ್ ಪ್ರವೀಣನ ಮಿಲಿಯನ್ ಡಾಲರು ಪ್ರಶ್ನೆ.

ಇದೀಗ ಪಬ್ಬಿನಲ್ಲಿದ್ದವರ ಮಾವನ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ಒಪ್ಪಿಕೊಳ್ಳೋಣ. ಆದರೆ ಅವರಿಗೆ ಇದಕ್ಕಾಗಿ ಹಣ ಕೊಟ್ಟು ಕಳುಹಿಸೋ ಮಾವನ ಬಗ್ಗೆ ನೀವೇನಂತೀರಿ? - ಭಾವಿ ಅಳಿಯನ ಪ್ರಶ್ನೆ

ಇದಕ್ಕೆಲ್ಲಾ ಸರಕಾರವೇ ಕಾರಣ. ನಮ್ಮ ಗೃಹ ಸಚಿವರನ್ನು ಬಂಧಿಸಿ ಜೈಲಿಗಟ್ಟಬೇಕು. ಅವರು ಕೂಡ ಅವರ ಮಾವನ ಹಕ್ಕುಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಸರಕಾರವು ಹಿಟ್ಲರ್‌ನಂತೆ ವರ್ತಿಸುತ್ತಿದೆ. ಸೈನಿಕರನ್ನು ಬೆಳೆಸುತ್ತಿರುವುದೇ ಸರಕಾರ - ವಿರೋಧ ಪಕ್ಷದ (ಅ)ಮಾಯಕ.

ಕೊನೆಯಲ್ಲಿ ಸಿಕ್ಕಿದವರು (ಹೆಸರು ಮರೆತು ಹೋಗಿದೆ) ನೀಡಿದ ಅಭಿಪ್ರಾಯ: ವರದಕ್ಷಿಣೆ ತಗೊಂಡು ಮಾವನ ಎಲ್ಲ ಹಕ್ಕುಗಳ, ಕರ್ತವ್ಯಗಳ ಉಲ್ಲಂಘನೆ ನಡೆಯುತ್ತಲೇ ಇದೆ. ಅವರ ಮೇಲೇಕೆ ದಾಳಿ ಮಾಡಿ ಬಡಿಯೋದಿಲ್ಲ?

Wednesday, January 28, 2009

ತತ್ತರ ಕರ್‌ನಾಟಕದಲ್ಲಿ ನಾಟಕ

(ಬೊಗಳೂರು ತತ್ತರ ಕರ್ನಾಟಕ ಅಭಿವೃದ್ಧಿ ಬ್ಯುರೋದಿಂದ)
ಬೊಗಳೂರು, ಜ.27- ಬೊಗಳೂರು ಕರ್ನಾಟಕದ ಅರಾಜಕಧಾನಿಯಿಂದ ಬಹಳ ದೂರವಿರುವುದರಿಂದ ಆ ಭಾಗದಲ್ಲಿ ಭಾಷೆ ಬೇರೆ, ಅಲ್ಲಿ ಅಭಿವೃದ್ಧಿಯೂ ಆಗುತ್ತಿಲ್ಲ ಎಂಬ ಉದ್ದೇಶದಿಂದ ತತ್ತರ ಕರ್ನಾಟಕದಲ್ಲಿ ಏನಾದರೂ ಒಂದು ಮಾಡಬೇಕು ಎಂಬ ಸದುದ್ದೇಶದಿಂದ "ಆಶ್ವಾ"ಸಕರೆಲ್ಲರೂ ಇತ್ತೀಚೆಗೆ ಬೊಗಳೂರಿನಲ್ಲಿ ಅವಿಧಾನಮಂಡಲದ ವಿಶೇಷ ಅಧಿ"ವೇಷ"ನದಲ್ಲಿ ಭಾಗವಹಿಸಿದರು ಎಂದು ಇಲ್ಲಿ ವರದಿಯಾಗಿದೆ.

ಆದರೆ ರಾಜಧಾನಿಯಲ್ಲಿರುವ ವಿಧಾನ ಮಂಡಲವು ಎಲ್ಲ ರೀತಿಯಲ್ಲಿಯೂ--- ಪರಿಸರಮಾಲಿನ್ಯ, ವಾಕ್‌ಮಾಲಿನ್ಯ,ಮಾನಸಿಕ-ಮಾಲಿನ್ಯ--- ಇತ್ಯಾದಿಗಳಿಲ್ಲದೆ ಸಕಲ ರೀತಿಯಲ್ಲಿಯೂ ಅಮೋಘವಾಗಿ, ಅಪರೂಪವಾಗಿ, ಅನ್ಯಾದೃಶವಾಗಿ, ಅನ್ಯತ್ರ ಅಲಭ್ಯವಿದ್ದಂತೆ ಕ್ಲೀeeeeeeeನ್ ಆಗಿತ್ತು ಎಂಬುದನ್ನು ಯಾರಿಗೂ ತಿಳಿಯದಂತೆ ಬೊಗಳೂರು ಬ್ಯುರೋ ಪತ್ತೆ ಹಚ್ಚಿರುವುದು ಮಾತ್ರ ಅಸತ್ಯವಲ್ಲ ಎಂದು ವರದಿಯಾಗಿದೆ.

ಈಗ ತತ್ತರ ಕರ್ನಾಟಕದಲ್ಲಿ ನಡೆದ ಅಧಿವೇಶನದಲ್ಲಿ ವರದಿಯಾಗಿರದ ಸಂಗತಿಗಳು ನಮ್ಮ ಬೊಗಳೂರು ಬ್ಯುರೋದ ಮಂದಿಗೆ ಅನಾಯಾಸವಾಗಿ ಸಿಕ್ಕಿದ್ದು, ಅದನ್ನು ಹೆಕ್ಕಿ ಹೆಕ್ಕಿ ಇಲ್ಲಿ ಮಂಡಿಸಲಾಗಿದೆ.

ಸಹೋದರರ ಸವಾಲ್
ಆಡಳಿತ ಪಕ್ಷದ ಸದಸ್ಯರ ಪ್ರತಿಯೊಂದು ವಾಕ್ಯಕ್ಕೂ ಎದ್ದು ನಿಲ್ಲುವ ರೇವ್ ಅಣ್ಣನನ್ನು ಆಗಾಗ್ಗೆ ಅಂಗಿ ಹಿಡಿದು ಎಳೆದು ಕೂರಿಸುವ ಪ್ರಯತ್ನದಲ್ಲಿರುವ ರೇವ್ ತಮ್ಮ. ಅವರ ಈ ಕ್ರಿಯೆ-ಪ್ರಕ್ರಿಯೆಯನ್ನು ನೋಡೋದೇ ಜನರಿಗೆ ಒಂದು ಮಜಾ.

ಅಂತೆಯೇ ರೇವ್ ತಮ್ಮ ಎದ್ದು ನಿಂತಾಗ, ಕೈಹಿಡಿದು, "ಏಯ್ ತಮ್ಮಾ, ಸುಮ್ನೆ ಕೂರೋ... ಹಾಗೆಲ್ಲಾ ಮಾತಾಡ್ಬುಟ್ರೆ ಅಷ್ಟೆ. ಅಪ್ಪಂಗ್ ಹೇಳಿಬೀಡ್ತೀನಿ... ಅಪ್ಪ ಸರೀಗೆ ಬಯ್ತಾರೆ ನೋಡು" ಅಂತ ರೇವ್ ಅಣ್ಣ ಉವಾಚ.

ಆಗ ಮತ್ತೆ ರೇವ್ ತಮ್ಮ ಉವಾಚ: ಸುಮ್ನಿರಣ್ಣ, ನನ್ನ ಮರ್ವಾದೆ ತಗೀಬೇಡ, ಸ್ವಲ್ಪಾದ್ರೂ ಮಾತಾಡ್ತೀನಿ. ನನ್ ಹೆಂಡ್ತಿ ಈಗಷ್ಟೇ ವಿಧಾನಸಭೆ ಪ್ರವೇಶಿಸಿದ್ದಾಳೆ, ಅವಳೆದುರು ನನ್ನ ಮರ್ಯಾದೆ ಹೋಗುತ್ತೆ. ಅದನ್ನು ಸ್ವಲ್ಪಾದ್ರೂ ಉಳ್ಸಿಕೊಳ್ತೀನಣ್ಣ...!

ಇದಕ್ಕೆ ಮುನ್ನ, ಹಲವು ಅಶ್ವಾಸಕರು ಹೊಸದಾಗಿ ವಿಧಾನಮಂಡಲಕ್ಕೆ ಬಂದಿದ್ದರು. ಕೆಲವರು ತೂಕ ದೇಹದವರು ಮತ್ತು ಕೆಲವರ ದೇಹವೇ ಭಾರ. ಅವರಲ್ಲಿ ಕೆಲವರಿಗಂತೂ ಎದುರಿನ ಬಾಗಿಲು ಸಣ್ಣದಾಗಿತ್ತು. ಆ ಕಾರಣಕ್ಕೆ ಹಿಂಬಾಗಿಲಿನಿಂದಲೇ ವಿಧಾನ ಮಂಡಲಕ್ಕೆ ಪ್ರವೇಶಿಸಿದ್ದರು. ಇದಕ್ಕೆ ಅತಿಯಾದ ಕಿಸೆಯ ಭಾರವೂ ಪೂರಕವಾಗಿತ್ತು ಎಂಬುದು ಅಲ್ಲಲ್ಲಿ ಕೇಳಿಬರುತ್ತಿದ್ದ ಮಾತು.

ಗಣಿ-ಖನಿ-ಖೇಣಿ ಧೂಳಿನ ನಡುವೆ ಕೆಲವರಿಗೆ ಸದನದಲ್ಲಿ ಭಾಷೆಯ ಬಗ್ಗೆ ಪಕ್ಕದ ಮರಾಠೀ ನಾಡಿನಿಂದ, ಕನ್ನಡ ನಾಡಿನೊಳಗಿರುವ ರಾಜ್ಯದ್ರೋಹಿಗಳಿಂದ ಕಿರಿಕ್ಕು ಬರುತ್ತಿದೆ ಎಂಬುದು ಅದು ಹೇಗೋ ಅಲ್ಪ ಸ್ವಲ್ಪ ಹೊಳೆದಿತ್ತು. ಈ ಕಾರಣಕ್ಕೇ ಇರಬಹುದು ಎಂದು ಅಂದಾಜಿಸಲಾಗುತ್ತಿರುವ ವಿಚಾರ ಮುಂದೆ ಓದಿ: ರಾಜ್ಯದ ಒಂದಿಂಚು ನೆಲವನ್ನು ನಾವು ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ. ಯಾಕೆಂದರೆ ನಮಗೇ ಅದು ಬೇಕು--- ಗಣಿಗಾರಿಕೆಗೆ ಎಂಬ ಇಸ್ಟೇಟುಮೆಂಟು ಸರಕಾರದಿಂದ ಬಂದಿತ್ತಂತೆ.

ಅದಲ್ಲದೆ, ಬಹುತೇಕ ಆಶ್ವಾಸಕರ ಬಾಯಲ್ಲಿ ಗುನುಗುತ್ತಿದ್ದ ಘೋಷ'ವ್ಯಾಕ್'ಯವೆಂದರೆ, ಗಡಿ ಒತ್ತುವರಿಗೆ ಬಿಡೆವು, ಗಣಿ ಒತ್ತುವರಿಗೆ ಸೈಎಂಬೆವು!

Sunday, January 25, 2009

ಬಾರ್ಕಿಂಗ್ ನ್ಯೂಸ್: ಆಪರೇಶನ್ ನಿಧಾನಿ !

(ಬೊಗಳೂರು ನ್ಯೂಸ್ ಬ್ರೇಕ್ ಮಾಡೋ ಬ್ಯುರೋದಿಂದ)
ಬೊಗಳೂರು, ಜ.25- ನಮ್ಮ ಬೊಗಳೂರಿನ ನಿಧಾನಿಯವರು ತಮ್ಮ ಹೃದಯವನ್ನು ರಿಪೇರಿ ಮಾಡಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಬೊಗಳೂರು ಟಿವಿ ಚಾನೆಲ್‌ಗೆ ಫೀಡ್ ಮಾಡಲಾಗಿರುವ

ಬ್ರೇ"ಸಿಂಗ್" ನ್ಯೂಸ್ :
ಬ್ರೇಕಿಂಗ್ ನ್ಯೂಸ್: ನಿಧಾನಿಯವರ ಬ್ರೇಕಿಂಗ್ ಹೆಲ್ತ್ ಬುಲೆಟಿನ್!
ಫ್ಲಾಶ್ ನ್ಯೂಸ್: ನಿಧಾನಿಯವರು ಈಗಷ್ಟೇ ಎಐಐಎಂಎಸ್‌ಗೆ ತಮ್ಮ ಒಂದು ಕಾಲು ಇಟ್ಟರು
ಅವರು ಬಂದದ್ದು ಕಾರಿನಲ್ಲಿ!
ಅವರ ಸುತ್ತಮುತ್ತ ಭಾರಿ ಭದ್ರತೆ!
ಈಗಷ್ಟೇ ಅವರ ಸಹಾಯಕನ ಹೇಳಿಕೆ!
ನಿಧಾನಿಯವರು ತಮ್ಮ ಎರಡೂ ಕಾಲುಗಳನ್ನು ಆಸ್ಪತ್ರೆಯೊಳಗೆ ಇಟ್ಟರು
ಇದೇ ಸಂದರ್ಭದಲ್ಲಿ ಒಂದು ದೊಡ್ಡ ನಿಟ್ಟುಸಿರು ಕೂಡ ಅವರ ಮೂಗಿನಿಂದ ಹೊರಬಿತ್ತು
ಆಸ್ಪತ್ರೆಗೆ ಸೇರುವಾಗ ಅವರ ಮುಖ ಎಂದಿನಂತೆ ನಿರ್ಭಾವುಕವಾಗಿತ್ತು
ಅವರ ಎರಡೂ ಕಣ್ಣುಗಳು ಅತ್ತಿತ್ತ ಸುಳಿದಾಡುತ್ತಿದ್ದವು

ಬಾರ್ಕಿಂಗ್ ನ್ಯೂಸ್: ನಿಧಾನಿ ಈಗಷ್ಟೇ ಆಪರೇಶನ್ ಥಿಯೇಟರಿಗೆ ಹೊಕ್ಕರು
ಅವರನ್ನು ಅಲ್ಲಿ ಮಲಗಿಸಲಾಯಿತು
ದೇಶಾದ್ಯಂತ ಪೂಜೆ, ಹೋಮ, ಹವನ, ಪ್ರಾರ್ಥನೆ, ಭಜನೆ!
ಆದರೆ ಆಪರೇಶನ್ ಥಿಯೇಟರ್ ಬದಲಾಗಿ ಸಿನಿಮಾ ಥಿಯೇಟರಿಗೆ ಅವರನ್ನು ಕರೆದೊಯ್ಯಲಾಗಿತ್ತು!
ಈಗಷ್ಟೇ ಅವರು ಮತ್ತೆ ಆಪರೇಶನ್ ಥಿಯೇಟರಿಗೆ ಮರಳಿದ್ದಾರೆ.
ಅವರನ್ನು ಮತ್ತೆ ಮಲಗಿಸಲಾಯಿತು. ಅವರಿಗೆ ಅರಿವಳಿಕೆ ಕೊಡಲು ವಿದೇಶದಿಂದ ಒಬ್ಬ ತಜ್ಞರನ್ನು ತರಿಸಿಕೊಳ್ಳಲಾಗಿದೆ.
ಅವರಿರುವ ಕೊಠಡಿಯನ್ನು ಕಸಗುಡಿಸಿ, ಕ್ಲೀನ್ ಮಾಡುವುದಕ್ಕಾಗಿಯೇ ಅಮೆರಿಕದಿಂದ ತಜ್ಞ ಕಸಗುಡಿಸುವವರನ್ನೂ ತರಿಸಿಕೊಳ್ಳಲಾಗಿದೆ.

ನ್ಯೂಸ್ ಬ್ರೇಕ್: ನಿಧಾನಿ ಅವರ ಆಪರೇಶನ್‌ಗೆ ಏಳೆಂಟು ಗಂಟೆ ತಗುಲುವ ಸಾಧ್ಯತೆ
ಆಪರೇಶನ್ ಥಿಯೇಟರಿನಲ್ಲಿ ನಿಧಾನಿಯವರು ಅಮೋಘ ಎರಡನೇ ಗಂಟೆಗೆ ಪಾದಾರ್ಪಣೆ
ಥಿಯೇಟರಿನೊಳಗೆ ಶಸ್ತ್ರಾಸ್ತ್ರಗಳ ಕೊರತೆ ಇಲ್ಲವಾಗಿತ್ತು!
ಆಸ್ಪತ್ರೆ ವೈದ್ಯರು ಹೇಳುವಂತೆ, ಇದೊಂದು ನಾರ್ಮಲ್ ಸರ್ಜರಿಯಾದರೂ, ಅದನ್ನು ಬೈಪಾಸ್ ಮಾಡಬೇಕಾಗುತ್ತದೆ

ನ್ಯೂಸ್ ಅಪ್‌ಡೇಟ್: ನಿಧಾನಿಯವರ ನಿಧಾನವೇ ಪ್ರಧಾನವಾಗಿರುವ ಸರ್ಜರಿ ಅಮೋಘ ಎರಡನೇ ಗಂಟೆ ಮುಗಿಸಿ ಮೂರನೇ ಗಂಟೆಗೆ ಪಾದಾರ್ಪಣೆ.
ಅವರಿಗೇನೂ ಆಗಿಲ್ಲ!
ಅವರು ಉಸಿರಾಡುತ್ತಿದ್ದಾರೆಯೇ ಎಂಬುದು ಇನ್ನೂ ಅರಿವಿಗೆ ಬಂದಿಲ್ಲ.... ಯಾಕೆಂದರೆ ಅರಿವಳಿಕೆ ನೀಡಲಾಗಿದೆ.
ಕೆಲವೇ ಕ್ಷಣಗಳಲ್ಲಿ ನಮ್ಮ ವರದ್ದಿಗಾರರು ಅಲ್ಲಿಗೆ ತಲುಪಿ, ಅದನ್ನು ಕನ್ಫರ್ಮ್ ಮಾಡಿಕೊಳ್ಳಲಿದ್ದಾರೆ.

ನ್ಯೂಸ್ ಫ್ಲ್ಯಾಶ್: ನಿಧಾನಿಯವರಿಗೇನೂ ಅಪಾಯವಿಲ್ಲ. ಆದರೂ ಅವರನ್ನು ಆಸ್ಪತ್ರೆಗೆ ಸೇರಿಸಿರುವುದು ಹಲವರ ಹುಬ್ಬೇರಿಸಿದೆ.
ಆಪರೇಶನ್‌ಗೋಸ್ಕರ ಥಿಯೇಟರಿನೊಳದೆ ಕೊಂಡೊಯ್ದದ್ದು ನಿಜವಾದರೂ, ಅವರು ಅದುವರೆಗೂ ಚೆನ್ನಾಗಿಯೇ ಮಾತಾಡುತ್ತಾ ಇದ್ರು.
ಅಷ್ಟು ಸಣ್ಣ ರಕ್ತ ನಾಳದೊಳಗೆ ತಡೆಯೊಂದು ಹೇಗೆ ಸಿಲುಕಿಕೊಂಡಿತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತದೆ.
ರಕ್ತನಾಳದೊಳಗೆ ದೊಡ್ಡ ಬಂಡೆಕಲ್ಲು ತಂದು ಹಾಕಿರುವುದರಲ್ಲಿ ಪಾಕಿಸ್ತಾನದ ಕೈವಾಡ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಬ್ರೇಕಿಂಗ್ ನ್ಯೂಸ್: ಆಪರೇಶನ್ ನಿಧಾನಿ!
ಮಹತ್ವದ ಸುಳಿವು ಪತ್ತೆ!
ನಿಧಾನಿಯವರ ರಕ್ತನಾಳಕ್ಕೆ ಅಡ್ಡಿ ಪಡಿಸಿದ್ದು ಬಂಡೆಕಲ್ಲು ಅಲ್ಲ!
ರಕ್ತನಾಳ ಅಡ್ಡಿ ಪಡಿಸಿದ್ದು ಗಡ್ಡದ ಕೂದಲು!
ಈ ಕೂದಲು ಲಫಡಾನಿಸ್ತಾನದಿಂದ ಬಂದಿರುವ ನಿರೀಕ್ಷೆ!
ಲಫಡಾನಿಸ್ತಾನದಲ್ಲಿ ಗಡ್ಡ ಬೋಳಿಸಿದರೆ ಸಾಯಿಸುವ ಶಿಕ್ಷೆ!
ಬೇತಾಳೀ ಬಾನ್‌ಗಳ ವಿಶಿಷ್ಟ ಕ್ರಮವಿದು!
ಪಾತಕಿಸ್ತಾನದ ಮೂಲಕ ಈ ಗಡ್ಡದ ಕೂದಲು ಬಂದಿರುವ ಸಾಧ್ಯತೆ.
ತನಿಖೆ ಪ್ರಗತಿಯಲ್ಲಿ, ಮಹತ್ವದ ಸುಳಿವು ಪತ್ತೆ

(ಬ್ರೇಕಿಂಗ್ ನ್ಯೂಸ್ ಸತತ ಫ್ಲ್ಯಾಶ್ ಆಗುತ್ತಿರುತ್ತದೆ)

ಸ್ಫೋಟಕ ಸುದ್ದಿ: ನಿಧಾನಿಯವರ ಶಸ್ತ್ರಕ್ರಿಯೆಯ ಶಾಸ್ತ್ರ ಪೂರ್ಣ!
ಸತತ ಎಂಟು ಗಂಟೆಗಳ ಅವಿರತ ಸಾಧನೆ!
ಇಂಥ ಶಸ್ತ್ರಕ್ರಿಯೆ ಬೇರಾರಿಗೂ ನಡೆದಿಲ್ಲ!
ವೈದ್ಯ ಲೋಕದ ಚರಿತ್ರೆಯಲ್ಲೇ ಹೊಸದೊಂದು ವಿಕ್ರಮ!
ಸಾವು ಗೆದ್ದು ಬಂದ ನಿಧಾನಿ! ದೇಶಾದ್ಯಂತ ಕುತೂಹಲ, ಸಂಭ್ರಮ, ಸಡಗರ!
ಆದ್ರೆ ಅಫ್ಘಾನಿಸ್ತಾನ, ಪಾಕಿಸ್ತಾನದಲ್ಲಿ ವಿಭ್ರಮೆ, ದಿಗ್ಭ್ರಮೆಯಾಗಿರುವ ಸಾಧ್ಯತೆ!

ನ್ಯೂಸ್ ಫ್ಲ್ಯಾಶ್: ನಿಧಾನಿ ಮನೆಗೆ!
ಆಸ್ಪತ್ರೆಯಿಂದ ಹೊರಬಿದ್ದ ನಿಧಾನಿ...
ತಮ್ಮದೇ ಮನೆಗೆ ತೆರಳಲಿರುವ ನಿಧಾನಿ!
ಪೂರ್ಣಕುಂಭ ಸ್ವಾಗತಕ್ಕೆ ಸಿದ್ಧತೆ
ಆಸ್ಪತ್ರೆಯಿಂದ ಒಂದು ಕಾಲು ಹೊರಗಿಟ್ಟಕೂಡಲೇ ಪೂರ್ಣಕುಂಭದ ಸುರಿಮಳೆ!
ಪಟಾಕಿ ಹಚ್ಚಿ ಸಡಗರ, ನಗರದಲ್ಲಿ ದಿವಾಳಿಯ ವಾತಾವರಣ!

ಬಾರ್ಕ್ ನ್ಯೂಸ್ continues....
ಆಸ್ಪತ್ರೆಯಿಂದ ಹೊರಬಿದ್ದ ಬಳಿಕ ಮೊದಲ ಬಾರಿ ಕಚೇರಿಗೆ ಭೇಟಿ ನೀಡಿದ ನಿಧಾನಿ!
ಎದೆ ಭಾಗದಲ್ಲಾದ ಗಾಯದ ಬಗ್ಗೆ ಸುದ್ದಿ ಚಾನೆಲ್‌ಗಳಿಗೆ ಗಂಭೀರ ಚಿಂತೆಯ ಸಂಗತಿ
ಎದೆಭಾಗದಲ್ಲೇ ಗಾಯವಾಗಿದ್ದೇಕೆ? ಹೃದಯದ ಶಸ್ತ್ರಕ್ರಿಯೆಗೆ ಆ ಭಾಗದಲ್ಲೇಕೆ ವೈದ್ಯರು ಕತ್ತರಿಸಿದ್ದು? ಉತ್ತರ ಸಿಗದ ಪ್ರಶ್ನೆಗಳು!
ಮುಂದಿನ ಬ್ರೇಕಿಂಗ್ ನ್ಯೂಸ್‌ಗಾಗಿ, ನಿರಂತರ ಕಾಯ್ತಾ ಇರಿ... ಬೊಗಳೆ ನ್ಯೂಸ್!

Friday, January 23, 2009

ಬ್ಲಾಸ್ಟಿಂಗ್ ನ್ಯೂಸ್: ತಾಲಿಬಾನಿಗಳಿಗೇಕೆ ಗಡ್ಡ?

(ಬೊಗಳೂರು ತಡವಾಗಿ ಬ್ರೇಕ್ ಆದ ಸುದ್ದಿ ಬ್ಯುರೋದಿಂದ)
ಬೊಗಳೂರು, ಜ.23- ಲಫಡಾನಿಸ್ತಾದಲ್ಲಿ ಗಡ್ಡ ಬೋಳಿಸಬಾರದು ಎಂದು ಬೇತಾಳೀಬಾನ್‌ಗಳು ಆದೇಶ ಹೊರಡಿಸಿರುವ ಹಿಂದಿನ ಉದ್ದೇಶವನ್ನು ಬೊಗಳೂರಿನ ಬ್ಯುರೋ ಇದೀಗ ಬಂದ ಸುದ್ದಿ ಪ್ರಕಾರ ಪತ್ತೆ ಹಚ್ಚಿದೆ. ಗಡ್ಡವನ್ನು ಎಳೆದವನಿಗೆ ಮಿಠಾಯಿ ಎಂಬುದು ಕೂಡ ಒಂದು ಕಾರಣವಾಗಿದ್ದರೂ, ಪ್ರಧಾನ ಕಾರಣ ಬೇರೆಯೇ ಇತ್ತು. ಅದನ್ನು ಇಲ್ಲಿ ನಿಧಾನವಾಗಿ, ಮತ್ತು ಶೀಘ್ರವೇ ಬ್ರೇಕಿಂಗ್ ನ್ಯೂಸ್ ವಿಭಾಗದಲ್ಲಿ ಪ್ರಕಟಿಸಲು ನಿರ್ಧರಿಸಲಾಗಿದೆ.

ಪ್ರಧಾನ ಕಾರಣವನ್ನು ಬ್ರೇಕ್ ಆಗುವ ನ್ಯೂಸ್ ಎಂದು ತಿಳಿದುಕೊಂಡು ಈ ರೀತಿ ಓದಬಹುದು:
ಬಾರ್ಕಿಂಗ್ ನ್ಯೂಸ್: ಅಫ್ಘಾನಿಸ್ತಾನದಲ್ಲಿ ಗಡ್ಡ ಎಳೆಯುವುದು ನಿಷೇಧ
ಬಾರ್ಕಿಂಗ್ ನ್ಯೂಸ್: ಗಡ್ಡ ಬೋಳಿಸಿದರೆ ಭೀಕರ ದಂಡ, ಗಡ್ಡ ಎಳೆದರೆ ಮಿಠಾಯಿ

ಇವಿಷ್ಟು ಬೆಳಗ್ಗಿನಿಂದ ಸಂಜೆಯವರೆಗೂ ಬಾರ್ಕ್ ಆಗುತ್ತಲೇ ಇರುತ್ತಾ, ಆ ಬಳಿಕ ನಿಧಾನವಾಗಿ ಬರುವ ಮುಖ್ಯ ಸುದ್ದಿಯ ಸಾರಾಂಶವೆಂದರೆ, ಅಲ್ಲಿ ಯಾಕೆ ಗಡ್ಡ ಬೋಳಿಸಬಾರದು ಎಂದು ಆದೇಶ ನೀಡಲಾಗಿದೆ ಎಂಬುದು. ಅದನ್ನು ಮತ್ತೆ ಮತ್ತೆ ಸಂಶೋಧಿಸಿದಾಗ ದೊರೆತ ಏಕೈಕ ಫಲಿತಾಂಶವೆಂದರೆ, ಗಡ್ಡ ಬೋಳಿಸಿದರೆ, ಅದರೊಳಗೆ ಬಾಂಬುಗಳನ್ನು ಅಡಗಿಸಿಟ್ಟುಕೊಂಡು ಅಲ್ಲಲ್ಲಿ ದಾಳಿ ಮಾಡುವುದಾದರೂ ಹೇಗೆ? ಹೀಗಾಗಿ ಗಡ್ಡ ಬಂದ ತಕ್ಷಣವೇ ಪೊದೆಯಂತೆ ಅದನ್ನು ಉಳಿಸಿಕೊಂಡು ಬಾಂಬುಗಳನ್ನು ನೇತು ಹಾಕಿಕೊಳ್ಳಲು ಸುಲಭವಾಗುತ್ತದೆ.

Thursday, January 22, 2009

ಬೊಗಳೂರು ರಾಷ್ಟ್ರಪತಿ ಒಸಾಮ ಪದ"ಗ್ರಹಣ"

(ಬೊಗಳೂರು ಜೀವಂತ (ಲೈವ್) ಕವರೇಜ್ ಬ್ಯುರೋದಿಂದ)
ಬೊಗಳೂರು, ಜ.22- ಬೊಗಳೂರಿನ ನೂರಾ ಎಂಟನೇ ಅಧ್ಯಕ್ಷರಾಗಿ ಪರಾಕ್ ಒಸಾಮ ಬಿನ್ ಅವರು ಅದ್ದೂರಿ ಸಮಾರಂಭದ ಮಧ್ಯೆ ಪದವಿಗೆ ಗ್ರಹಣ ಮಾಡಿಬಿಟ್ಟರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಭಯೋತ್ಪಾದನೆಯು ದೇಶ-ವಿದೇಶದಲ್ಲಿ ತೀವ್ರ ನಿಂದನೆಗೀಡಾಗುತ್ತಿದೆ. ಇದನ್ನು ತಡೆಯಲು ಪಣ ತೊಡುವುದಾಗಿ ಸಾರಿದರು.

ಇತ್ತೀಚೆಗೆ 'ಧರ್ಮ ಎಂದರೆ ಭಯೋತ್ಪಾದನೆ ಅಲ್ಲ, ಧರ್ಮ ಎಂದಿಗೂ ಭಯೋತ್ಪಾದಕತೆಯನ್ನು ಬೋಧಿಸುವುದಿಲ್ಲ' ಎಂಬ ಕುರಿತಾಗಿ ಜನರು ಎಚ್ಚೆತ್ತುಕೊಳ್ಳತೊಡಗಿದ್ದಾರೆ. ಇದೇ ರೀತಿಯಾಗಿ ಜನರಲ್ಲೂ ತಪ್ಪು ಕಲ್ಪನೆ ಮೂಡಿಸುವ ಪ್ರಯತ್ನವನ್ನು ಭಾರತದಲ್ಲಿ ಕೆಲಸವಿಲ್ಲದವರು ಮಾಡತೊಡಗಿದ್ದಾರೆ. ಇದು ಹೀಗಾಗಬಾರದು, ಅವರೆಂದಿಗೂ ಎಚ್ಚೆತ್ತುಕೊಳ್ಳಬಾರದು, ಅವರನ್ನು ಮಲಗಿಸುತ್ತಲೇ ಇರಬೇಕು ಎಂದು ಅವರು ಬೊಗಳೂರಿಗೆ ನೀಡದ ನಿಷೇಧಾತ್ಮಕ ಇಂಟರ್ವ್ಯೂನಲ್ಲಿ ತಿಳಿಸಿದರು.

ಇಡೀ ಜಗತ್ತೇ ಆರ್ಥಿಕ ಕುಸಿತದಿಂದ ಕಂಗೆಟ್ಟಿದ್ದರೂ, ಸಣ್ಣಪುಟ್ಟ ಸಮಸ್ಯೆಗಳನ್ನು ಹೊರತುಪಡಿಸಿದರೆ ಭಾರತದ ಆರ್ಥಿಕತೆ ಗಟ್ಟಿಯಾಗಿ ನಿಂತಿದೆ. ಇದು ಕೂಡ ತಪ್ಪು. ಇಡೀ ಜಗತ್ತೇ ಕಂಗೆಟ್ಟಿರುವಾಗ ಅದಕ್ಕೇನೂ ಆಗಿಲ್ಲವೆಂದರೆ, ನಮ್ಮ ಭಯೋತ್ಪಾದನೆಯ ಉದ್ದೇಶಕ್ಕೇ ಕೊಡಲಿಯೇಟು ಬಿದ್ದ ಹಾಗೆ. ಹೀಗಾಗಿ ನಾವು ನವೆಂಬರ್ 26, ಡಿಸೆಂಬರ್ 26ರಂದು ದಾಳಿ ಆಯ್ತು. ಮುಂದೆ ಜನವರಿ 26ಕ್ಕೂ ಏನಾದ್ರೂ ಮಾಡಲಿದ್ದೇವೆ ಎಂಬುದನ್ನು ಜನ ಸಾಮಾನ್ಯ, ದಾರಿಹೋಕನೂ ಅರಿತುಕೊಂಡಿದ್ದಾನೆ. ಆದರೆ ಈ ಬಗ್ಗೆ ಭಾರತದ ಆಡಳಿತಾರೂಢರು ಅರಿತುಕೊಳ್ಳದಂತೆ ಮಾಡುವುದು ನಮ್ಮ ಪ್ರಧಾನ ಉದ್ದೇಶ, ನಾವದರಲ್ಲಿ ಖಂಡಿತ ಯಶಸ್ವಿಯಾಗುತ್ತೇವೆ ಎಂಬ ಆಣಿಮುತ್ತುಗಳು ಬೊಗಳೂರಿಗೆ ನೀಡದಿರುವ ಕೀರ್ತಿಶೇಷ Some ದರ್ಶನದಲ್ಲಿ ಒಸಾಮನ ಬಾಯಿಂದ ಉದುರಿದೆ.

ಈ ಪದಗ್ರಹಣ ಸಮಾರಂಭವು ಪೂರ್ಣ (ಖಗ್ರಾಸ) ಸೂರ್ಯ ಗ್ರಹಣಕ್ಕಿಂತಲೂ ಹೆಚ್ಚು ಅಪ್ರಕಾಶಮಾನವಾಗಿತ್ತು. ದೇಶ-ವಿದೇಶಗಳಿಂದ ಬಂದಿದ್ದ ಮಿಲಿಯಾಂತರ ಶವಪೆಟ್ಟಿಗೆಗಳ ಮಧ್ಯೆ ಒಸಾಮ ಕಂಗೊಳಿಸುತ್ತಿದ್ದು, "ಮಾಡಿದ್ದೇ ಧರ್ಮ, ಅದುವೇ ನಮ್ಮ ಕರ್ಮ" ಎಂಬ ಘೋಷಾವಾಕ್ಯವೂ ಮೊಳಗುತ್ತಿತ್ತು. ಲಕ್ಷಾಂತರ ದೇಶ-ವಿದೇಶದ ಉಗ್ರಗಾಮಿಗಳ ಮಾರ್ಗಗಳೆಲ್ಲವೂ ಬೊಗಳೂರಿಗೇ converge ಆಗಿದ್ದವು. All roads leading to Bogalooru! ಎಲ್ಲಿ ನೋಡಿದರಲ್ಲಿ ಜನರ ಕೈಯಲ್ಲಿ ಬಂದೂಕು, ತುಪಾಕಿ, ಬಾಂಬು, ಗ್ರೆನೇಡುಗಳೇ ವಿಜೃಂಭಿಸುತ್ತಿದ್ದವು. ಒಸಾಮ ಗ್ರಹಣದ ಸಂದರ್ಭದಲ್ಲಿ ನಡೆದ ಪೆರೇಡ್‌ಗೋಸ್ಕರ ವಿಶೇಷವಾಗಿ ರಚಿಸಲಾಗಿದ್ದ ಮಾರ್ಗವನ್ನು ಸಂಪೂರ್ಣವಾಗಿ ಉಂಡೆ ಬಾಂಬುಗಳಿಂದಲೇ ಅಲಂಕರಿಸಲಾಗಿತ್ತು.

ಆ ಬಳಿಕ, ಭಾರತದಲ್ಲಿ, ಅಮೆರಿಕದಲ್ಲಿ ಆಗುತ್ತಿರುವ ದಾಳಿಗಳಿಗೆ ಜಿಹಾದ್ ಅನ್ನು ದೂರಲಾಗುತ್ತಿದೆ. ಇವರಿಗೆ ಜಿಹಾದ್‌ನ ಅರ್ಥ ಕೂಡ ಅರಿವಿಗೆ ಬರುತ್ತಿದೆ. ಹಾಗಾಗದಂತೆ ತಡೆಯಬೇಕಾಗಿದೆ. ನಾವು ಮಾಡುತ್ತಿರುವುದೇ ಜಿಹಾದ್ ಎಂದು ಮನದಟ್ಟು ಮಾಡಿಸಬೇಕಾಗಿದೆ ಎಂದು ಒಸಾಮ ಎಲ್ಲರೆದುರು ಕಾಣಿಸಿಕೊಂಡು, ವಿಶೇಷ ಪತ್ರಿಕಾಗೋಷ್ಠಿ ಕರೆದು ಒದರಿದರು. ನಾವು ಭಯೋತ್ಪಾದನೆಯನ್ನು ಬಿಟ್ಟರೆ ದೇವರಿಗೆ ತೊಂದರೆ ಕೊಟ್ಟಂತೆ. ಯಾಕೆಂದರೆ ಭಯೋತ್ಪಾದನೆಯನ್ನು ನಾವು ಭೂಲೋಕದಿಂದ ಬಿಟ್ಟ ತಕ್ಷಣವೇ ಅದು ದೇವರ ಲೋಕವನ್ನು ಬಾಧಿಸತೊಡಗುತ್ತದೆ. ಹಾಗಾಗಲು ಬಿಡಬಾರದು ಎಂದವರು ಭೀಕರ ಪತ್ರಿಕಾಗೋಷ್ಠಿಯಲ್ಲಿ ಸಾರಿರುವುದಾಗಿ ನಮ್ಮ ವರದ್ದಿಗಾರರು ತಿಳಿಸಿದ್ದಾರೆ.

Tuesday, January 20, 2009

ನೆಟ್ ಸಂಚಾರ ನಿಯಮ ಉಲ್ಲಂಘನೆಗೆ ದಂಡ

(ಬೊಗಳೂರು ಉಂಡಾಡಿ ಗುಂಡ ಬ್ಯುರೋದಿಂದ)
ಬೊಗಳೂರು, ಜ.20- ಇಂಟರ್ನೆಟ್‌ನಲ್ಲಿ ಉಂಡಾಡಿ ಗುಂಡರ ಹಾಗೆ ಸಂಚಾರ ಮಾಡುತ್ತಿರುವವರ ಮೇಲೆ ದಂಡ ಶುಲ್ಕ ವಿಧಿಸಲು ನಿರ್ಧರಿಸಲಾಗಿದೆ ಎಂದು ಇಲ್ಲಿ ವರದಿಯಾಗಿರುವುದನ್ನು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ..

ಬೆಂಗಳೂರಿನ ಸಂಚಾರಿ ಪೊಲೀಸರನ್ನು ಇಂಟರ್ನೆಟ್‌ನಲ್ಲಿಯೂ ಸಂಚರಿಸುವಂತೆ ಹೆಚ್ಚುವರಿ ಕೆಲಸವನ್ನು ಒಪ್ಪಿಸಲಾಗಿದೆ. ಇದಕ್ಕೆ ಲೇ-ಆಫ್ ವ್ಯವಸ್ಥೆಗಳೇ ಕಾರಣ ಎಂದೂ ಪತ್ತೆ ಹಚ್ಚಲಾಗಿದೆ. ಸಂಚಾರಿ ಪೊಲೀಸರು ಹೇಗೂ ಚಾಲಕರಿಂದ ಹಣ ಪಡೆದು ರಶೀದಿ ಕೊಡದೆ ಗುಳುಂಕರಿಸುತ್ತಿರುವುದು ನಮ್ಮ ಡೀಫಾಲ್ಟ್ ವ್ಯವಸ್ಥೆಯಾಗಿಹೋಗಿದೆ. ಇಂಟರ್ನೆಟ್ಟಿನಲ್ಲಿ ಬರುವವರಿಗೇನೂ ರಶೀದಿ ಕೊಡುವ ಅಗತ್ಯವಿಲ್ಲ. ಇದರಿಂದ ಕಾಗದದ ಉಳಿತಾಯವಾಯಿತು, ಪರಿಸರವೂ ಉಳಿತಾಯವಾದಂತೆ ಎಂದು ಅ ವ್ಯವಸ್ಥೆಯನ್ನು ಉದ್ಘಾಟಿಸಿದ ಉದ್ಘಾಟಕರು ಬೊಗಳೂರು ಬ್ಯುರೋಗೆ ಬಂದು ತಾವಾಗಿಯೇ ಹೇಳಿಹೋಗಿದ್ದಾರೆ.

ಬೆಂಗಳೂರಿನ ಅಡ್ಡ ರಸ್ತೆಗಳಲ್ಲಿ ಕೈಚಾಚಿ, ಕೆಲವೆಡೆ ಕಾಲುಗಳನ್ನೂ ಚಾಚಿ ಉದ್ದಕ್ಕೆ ನಿಂತಿರುವ ಸಂಚಾರಿ ಪೊಲೀಸರು, "ಏಯ್ ಲೈಸೆನ್ಸ್ ತಗಿ" ಅಂತ ಕೂಗುವ ಬದಲು, "ಏಯ್, ಪರ್ಸ್ ತೆಗಿ" ಎಂದು ಕೂಗುವ ಅಭ್ಯಾಸ ಮಾಡಿಕೊಂಡಿರುವುದು ಯಾರಿಗೂ ತಿಳಿಯದ ವಿಷಯವೇನಲ್ಲ ಎಂಬುದನ್ನೂ ನಮ್ಮ ಬ್ರೋಕಿಂಗ್ ನ್ಯೂಸ್ ಬ್ಯುರೋದ ವರದ್ದಿಗಾರರು ಪತ್ತೆ ಹಚ್ಚಿದ್ದಾರೆ.

ಆದರೆ, ಇಂಟರ್ನೆಟ್ಟಿನಲ್ಲಿ ಸಂಚಾರ ಮಾಡುವವರಿಗೂ ದಂಡ ಶುಲ್ಕ ಪಾವತಿಸುವ ವ್ಯವಸ್ಥೆ ಮಾಡಿರುವುದೇಕೆ ಎಂದು ಕೇಳಿದಾಗ, ಏನಿಲ್ಲಪ್ಪ, ಇತ್ತೀಚೆಗೆ ಕನ್ನಡದಲ್ಲಿಯೂ ಬ್ಲಾಗ್ ಪ್ರಪಂಚ ಬೆಳಗ್ತಾ ಇದೆ. ಅಲ್ಲಿಯೂ ಸಂಚಾರ ದಟ್ಟಣೆ ಹೆಚ್ಚಾಗತೊಡಗಿದೆ. ಅವುಗಳನ್ನೆಲ್ಲಾ ನಿಭಾಯಿಸೋದು ಕಷ್ಟವೇ ಆದ್ರೂ, ಕೆಲವೊಮ್ಮೆ, ಬ್ಲಾಗಿಗರು ಅಪ್ಪಿ ತಪ್ಪಿ ಬೇರೊಬ್ಬ ಬ್ಲಾಗಿಗರ ತಾಣಕ್ಕೆ ಡಿಕ್ಕಿ ಹೊಡೆದು, ಅವರ ಕಾಲೆಳೆದು ಬೀಳಿಸೋ ಪ್ರಸಂಗಗಳು ಕೂಡ ನಿಧಾನವಾಗಿ ಹೆಚ್ಚಾಗುತ್ತಿವೆ ಎಂಬ ಕಾರಣ ನೀಡಿದರು.

ಇಂಥದ್ದನ್ನು ತಪ್ಪಿಸುವ ಸಲುವಾಗಿ, ಅನವಶ್ಯವಾಗಿ ಬ್ಲಾಗು ಲೋಕದಲ್ಲಿ ಅಡ್ಡಾಡುತ್ತಾ ಕಾಲಹರಣವನ್ನೂ, ಕಾಲು ಹರಣವನ್ನೂ ಮಾಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಲು ಈ ಇಂಟರ್ನೆಟ್ ಸಂಚಾರ ದಂಡ ಶುಲ್ಕ ವ್ಯವಸ್ಥೆ ಎಂದು ತಿಳಿಸಿದರು.

Monday, January 19, 2009

ಭಾರತವು ಪಾಕನ್ನು ಓಡಿಹೋಗಲು ಬಿಡುವುದಿಲ್ಲವಂತೆ!

(ಬೊಗಳೂರು ಭಾಷಾವಾಂತರ ಬ್ಯುರೋದಿಂದ)
ಬೊಗಳೂರು, ಜ.19- ವಿದೇಶೀ ಸಚಿವ ಪ್ರಣಬ್ ಮುಖರ್ಜಿ ಅವರು ಗುರುವಾರ ಹೇಳಿದ್ದೇನೆಂದರೆ, ಮುಂಬಯಿ ದಾಳಿಗಳಿಗೆ ಕಾರಣರಾದವರ ಬಗ್ಗೆ ನಟನೆಯನ್ನು ಮಾಡದ ಹೊರತು, ಪಾಕಿಸ್ತಾನ ದೇಶವು ಓಡಿ ಹೋಗಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ. ಓಡಿ ಓಡಿ ಎಲ್ಲಾದರೂ ದೂರ ಹೋಗಿ ಅಮೆರಿಕವನ್ನು ತಲುಪಿದರೆ ಎಂಬ ಆತಂಕ ಇದಕ್ಕೆ ಕಾರಣವೆಂದು ಶಂಕಿಸಲಾಗಿದೆ.
ನಮ್ಮ ಬ್ಯುರೋದ ಅತ್ಯಂತ ಹಿರಿಯರೂ, ಅತ್ಯಂತ ಕಿರಿಯರೂ ಆಗಿರುವ ಪ್ರಧಾನ ಮುಖ್ಯ ಟ್ರೈನೀ ಉಪ ಸಂಪಾದಕರು ಈ ಕುರಿತು ಮಾಡಿರುವ ಭಾಷಾವಾಂತರದ ಪೂರ್ಣಪಾಠವನ್ನು ಈ ಕೆಳಗೆ ನೀಡಲಾಗಿದೆ:

This time India will not let Pak get away: Pranab
ನಮ್ಮಿಂದ ತೆಗೆದುಕೊಂಡು ಓಡಿಹೋಗಲು ಪಾಕನ್ನು ಬಿಡೆವು: ಪ್ರಮಾದ್!

NEW DELHI: Foreign minister Pranab Mukherjee on Thursday made it plain that India would not let Pakistan get away without acting against those responsible for the Mumbai attacks, and dismissed as unconvincing and unacceptable Islamabad's response so far.
ನ್ಯೂಡೆಲ್ಲಿ: ವಿದೇಶೀ ಸಚಿವ ಪ್ರಮಾದ್ ಮುಖರ್ಜಿ ಅವರು ಗುರುವಾರ ಪ್ಲೈನ್ ದೋಸೆ ಮಾಡಿ ಹೇಳಿದ್ದೇನೆಂದರೆ, ಮುಂಬಯಿ ದಾಳಿಗಳಿಗೆ ಕಾರಣರಾದವರ ಬಗ್ಗೆ ನಟನೆಯನ್ನು ಮಾಡದ ಹೊರತು, ಪಾಕಿಸ್ತಾನ ದೇಶವು ಓಡಿ ಹೋಗಲು ಬಿಡುವುದಿಲ್ಲ, ಮತ್ತು ಇಸ್ಲಾಮಾಬಾದ್ ಇದುವರೆಗೆ ನೀಡಿರುವ ನಿರಾಕರಣೆ ಹೇಳಿಕೆಗಳ ಪ್ರತಿಕ್ರಿಯೆಯನ್ನು ಡಿಸ್‌ಮಿಸ್ ಮಾಡಿದ್ದಾರಲ್ಲದೆ, ಇದು ಸಾಕಾಗುವುದಿಲ್ಲ, ಇದು ಸ್ವೀಕಾರಯೋಗ್ಯವಲ್ಲ ಎಂದು ಹೇಳಿದ್ದಾರೆ.

In an exclusive interview to TOI, he said that India needs to see concrete action and that a mere window dressing would just not do. ಟಾಯ್‌ಗೆ ನೀಡಿರುವ ವಿಚಿತ್ರ ಸಂದರ್ಶನದಲ್ಲಿ ಅವರು, ಭಾರತಕ್ಕೆ ಕಾಂಕ್ರೀಟ್‌ನಲ್ಲಿರುವ ನಟನೆ ಬೇಕಾಗಿದೆ. ಕೇವಲ ಕಿಟಕಿಯಲ್ಲಿ ಡ್ರೆಸ್ಸಿಂಗ್ ಮಾಡುವುದನ್ನು ಇಣುಕಿ ನೋಡಿದರೆ ಸಾಕಾಗುವುದಿಲ್ಲ ಎಂದರು.

"Pakistan's response has to be one which can convince us that Pakistan is ready to tackle this (terrorism) seriously. We don't want a repetition of what happened after the Parliament attack (when Pakistan gave commitments which it did not fulfil)," said the minister who is seen as leading the country's response to the Mumbai attacks.
"ಪಾಕಿಸ್ತಾನವು ಇದನ್ನು (ಇದು ಎಂದರೆ ಭಯೋತ್ಪಾದನೆಯನ್ನು) ಮತ್ತಷ್ಟು ಸರಿಪಡಿಸಲು ಸಿದ್ಧವಿದೆ ಎಂಬಂತಹ ಪ್ರತಿಕ್ರಿಯೆ ನೀಡಿದರೆ ನಾವು ಸುಮ್ಮನಿರುತ್ತೇವೆ. ಸಂಸತ್ತಿನೊಳಗೆ ಆಗಾಗ್ಗೆ (ಪ್ರತಿಪಕ್ಷಗಳಿಂದ) ನಡೆಯುತ್ತಿರುವ ದಾಳಿಗಳಂಥದ್ದೇ ದಾಳಿಗಳು ಪುನರಾವರ್ತನೆಯಾಗುವುದು ನಮಗೆ ಬೇಡ (ಪಾಕಿಸ್ತಾನವು ಸಾಕಷ್ಟು ಕಮಿಟೆಡ್ ದಾಳಿಗಳನ್ನು ನೀಡಿತ್ತು, ಆದರೆ ಅದು ಭರ್ತಿಯಾಗಿಲ್ಲ ಅಂದರೆ ಸಾಕಾಗಿಲ್ಲ)" ಎಂದು ವಿದೇಶದ ಸಚಿವರು - ಯಾರನ್ನು ಮುಂಬಯಿ ದಾಳಿಗೆ ಕಾರಣರಾದವರಿಗಾಗಿ ಸ್ಪಂದಿಸುತ್ತಿರುವ ದೇಶದ ಪ್ರಮುಖ ನಾಯಕ ಎಂದು ಕಣ್ಣಲ್ಲಿ ಕಣ್ಣಿಟ್ಟು ನೋಡಲಾಗುತ್ತಿದೆ- ಹೇಳಿದರು.

The Congress stalwart dismissed as unconvincing Pakistan's reported action of shutting down five Jamaat-ud-Dawa camps and detaining 120-odd terrorists belonging to Lashkar-e-Taiba and other groups, and insisted that India needs proof.
ಐದು ಜಮಾತ್ ಉದ್ ದಾವಾ ಶಿಬಿರಗಳನ್ನು ಕಂಟ್ರೋಲ್ ಆಲ್ಟ್ ಡಿಲೀಟ್ ಮಾಡಿದೆ, 120ಕ್ಕೂ ವಿಷಮವಾದ ಲಷ್ಕರ್ ಇ ತೋಯ್ಬಾ ಮತ್ತಿತರ ಸಮೂಹದ ಉಗ್ರರನ್ನು ಬಂಧನ ಮಾಡಿದೆ ಎಂದು ವರದಿಯಾದ ಪಾಕಿಸ್ತಾನದ ನಟನೆಯನ್ನು ಸಾಕಾಗುವುದಿಲ್ಲ ಎಂದು ಡಿಸ್‌ಮಿಸ್ ಮಾಡಿರುವ ಕಾಂಗ್ರೆಸ್ ಬೆದರುಬೊಂಬೆ, ಇನ್ನಷ್ಟು ನಟನೆ ಮಾಡಬೇಕು, ಅದಕ್ಕೆ ಪ್ರೂಫ್ ಬೇಕು ಎಂದು ಒತ್ತಿ ಒತ್ತಿ ಹೇಳಿದರು.

He made no bones of his scepticism of the latest claims from Pakistan, pointing out that such "bans" tended to be half-baked. "If an organisation is banned, all practices must be banned," said the veteran minister.
ಪಾಕಿಸ್ತಾನ ಇತ್ತೀಚೆಗಷ್ಟೇ ಹೇಳಿಕೊಳ್ಳುತ್ತಿರುವ ಈ ಅರೆಬೆಂದ "ನಿಷೇಧ"ದ ಬೋನ್‌ಗಳು ತಿನ್ನಲು ರುಚಿಯಾಗಿರುವುದಿಲ್ಲ. ಒಂದು ಆರ್ಗನೈಸರನ್ನು ನಿಷೇಧಿಸಿದರೆ, ಅದರ ಎಲ್ಲಾ ಅಭ್ಯಾಸಪಂದ್ಯಗಳನ್ನು ನಿಷೇಧಿಸಬೇಕು ಎಂದು ಅಜ್ಜ ಸಚಿವರು ಹೇಳಿದರು.

He also brushed aside the alibi given by many quarters that Islamabad was unable to act against terrorist groups because of multiple power centres.
ಇಸ್ಲಾಮಾಬಾದಿನಲ್ಲಿ ನೂರಾರು ವಿದ್ಯುತ್ ಕೇಂದ್ರಗಳಿರುವುದರಿಂದ ಭಯೋತ್ಪಾದಕ ಸಂಘಟನೆಗಳ ವಿರುದ್ಧ ನಟನೆ ಮಾಡಲು ಕಷ್ಟ ಎಂದು ಯಾರೋ ನೀಡಿದ ಕ್ವಾರ್ಟರ್ ಬಾಟಲನ್ನು ಹಲ್ಲು ಬ್ರಷ್ ಮಾಡಲು ಅವರು ಬದಿಗಿಟ್ಟರು.

Asking for verifiable action against the 26/11 terrorists, he said India would not accept mock trials by Pakistan.
26/11 ಸಂಚುಕೋರರನ್ನು ಗುರುತಿಸಿ ಪತ್ತೆ ಹಚ್ಚುವ ನಟನೆ ಬೇಕು ಎಂದ ಅವರು, ಪಾಕಿಸ್ತಾನದ ಅಣಕ ಅಭ್ಯಾಸಗಳನ್ನು ಸ್ವೀಕರಿಸುವುದಿಲ್ಲ ಎಂದು ನುಡಿದರು.

Mukherjee said that he had been amazed by the manner in which even foolproof evidence presented to Pakistan was dismissed in no time at all.
ನಾವು ಮೂರ್ಖರಂತೆ ಪಾಕಿಸ್ತಾನಕ್ಕೆ ನೀಡಿದ ಸಾಕ್ಷಿಯನ್ನು ಯಾವುದೇ ಸಮಯದಲ್ಲಿಯೂ ಡಿಸ್ಮಿಸ್ ಮಾಡದ ಪಾಕಿಸ್ತಾನದ ರೀತಿಯಿಂದ ತನಗೆ ತೀವ್ರ ಅಚ್ಚರಿಯಾಗಿದೆ ಎಂದು ಮುಖರ್ಜಿ ಹೇಳಿದರು.

Thursday, January 15, 2009

ಅಸತ್ಯಂ ರಾಜುವಿನ ಹೊಸ ಉದ್ಯಮ!

(ಬೊಗಳೂರು ಅಸತ್ಯ ಬ್ಯುರೋದಿಂದ)
ಬೊಗಳೂರು, ಜ.14- ಸತ್ಯಂರಾಜು ಸತ್ಯ ಬಿಚ್ಚಿಟ್ಟು ಆರಾಮವಾಗಿರುವುದೇಕೆ ಎಂಬ ಅಂಶವನ್ನು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ. ಅವರು ಬೊಗಳೂರಿನೆಲ್ಲೆಡೆ ತಮ್ಮ ಅಸಂಖ್ಯ ಉದ್ದಿಮೆಗಳ ಸಾಲಿಗೆ ಮತ್ತೊಂದು ಹೊಸ ಉದ್ದಿಮೆ ಸ್ಥಾಪಿಸಿದ್ದಾರೆ. ಇದಕ್ಕೆ ಭಾರೀ ಕೈವಾಡ ಕೋರರು, ಒಳಸಂಚುಕೋರರು ಬೆಂಬಲ ನೀಡಿದ್ದು, ಈಗಾಗಲೇ ಶೇರುದಾರರ ಹಣ ಗುಳುಂ ಮಾಡಿರುವ ಸತ್ಯಂರಾಜು ಅನುಭವಕ್ಕೆ ಪ್ರಾಶಸ್ತ್ಯ ನೀಡಿ, ಕಳ್ಳಸಾಗಣಿಕಾದಾರರು ಅವರನ್ನು ಉದ್ಯೋಗಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಐಟಿ ಬಿಟಿ ಎಂಬ ಸುಡುಗಾಡು, ಮಣ್ಣು-ಮಸಿ ಕೆಲಸಕ್ಕಿಂತ ಈ ದಂಧೆಯೇ ಭಾರೀ ವರಮಾನ ತರುತ್ತಿದೆ ಎಂಬ ನಿರ್ಧಾರಕ್ಕೆ ಅಸತ್ಯಲಿಂಗರಾಜು ಬಂದಿದ್ದೇ ಈ ಹೊಸ ಉದ್ಯೋಗದತ್ತ ಅವರು ಆಕರ್ಷಿತರಾಗಲು ಕಾರಣ.

ಐಟಿ-ಬಿಟಿಯಲ್ಲಿ ವಿದೇಶಗಳು ಬಿಸಾಕುವ ಔಟ್‌ಸೋರ್ಸಿಂಗ್ ಅನ್ನು ಇನ್‌ಸೋರ್ಸಿಂಗ್ ಮಾಡಿಕೊಳ್ಳುತ್ತಾ, ಅವುಗಳ ಕೆಲಸ ಮಾಡಿಸಿಕೊಡುತ್ತಾ, ನಮ್ಮದು ಬಲು ದೊಡ್ಡ ತಂತ್ರಜ್ಞಾನ ಕ್ರಾಂತಿಯ ಸಂಸ್ಥೆ ಎಂದು ಬೊಗಳೆ ಬಿಡುತ್ತಾ, ಶೇರು ಬೆಲೆ ಏರುವಂತೆ ನೋಡಿಕೊಳ್ಳುವುದು, ಈ ಜಾಗತಿಕ ಹಣಕಾಸು ಬಿಕ್ಕಟ್ಟಿನ ದಿನಗಳಲ್ಲೂ ಅದನ್ನೇ ಕಾಯ್ದುಕೊಳ್ಳುವುದು ತೀರಾ ಕಷ್ಟದ ಕೆಲಸ. ಐಟಿಯಲ್ಲಾದರೆ, ವಿದೇಶೀಯರು ಕೊಟ್ಟ ಕೆಲಸ ಮಾಡಿಕೊಡಬೇಕು, ಅದಕ್ಕಾಗಿ ತಂತ್ರಜ್ಞರಿಗೆ ಅಷ್ಟಿಷ್ಟು ಸುರಿಯಬೇಕು. ಇಲ್ಲಿ ಕೇವಲ ಹತ್ತಾರು ಗ್ರಾಂ ಮಾತ್ರೆ ನುಂಗಿದರಾಯಿತು. ಮತ್ತು ಈಗ ನುಂಗಿದಂತೆ ಸಾವಿರಾರು ಕೋಟಿ ರೂಪಾಯಿಗಳನ್ನೇನೂ ನುಂಗಬೇಕಿಲ್ಲ, ಒಂದೆರಡ್ಮೂರು ಮಾತ್ರೆಗಳನ್ನು ಮಾತ್ರ ನುಂಗಿಬಿಟ್ಟರಾಯಿತು ಎಂಬುದು ಅಸತ್ಯಂರಾಜು ಅವರು ಬೊಗಳೆ ರಗಳೆಗೆ ನೀಡಿರುವ ಸ್ಪಷ್ಟನೆ.

ಇದುವರೆಗೆ ತಿರುಪತಿ ನಾಮವನ್ನೇ ತಮ್ಮ ಲೋಗೋ ಆಗಿ ಮಾಡಿಕೊಂಡಿದ್ದ ಅಸತ್ಯಂ ರಾಜು ಈಗ ಮಾತ್ರೆಯ ರೂಪದಲ್ಲಿ ಲೋಗೋ ತಯಾರಿಸುತ್ತಿದ್ದಾರೆ. ಈಗಾಗಲೇ ಶೇರುದಾರರ ಹಣವನ್ನು ಮನಬಂದಂತೆ, ಯಾವಾಗ ಬೇಕಾದರಾವಾಗ, ಮತ್ತು ಚಿಟಿಕೆ ಹೊಡೆಯುವಷ್ಟರಲ್ಲಿ ನುಂಗಿ ಅನುಭವವಿರುವುದರಿಂದ, ಕಳ್ಳಸಾಗಾಟದಾರರು ಕೂಡ ಈ ಸತ್ಯಂರಾಜುವನ್ನೇ ತಮಗೆ ಸಮರ್ಥ ಎಂದು ಆರಿಸಿಕೊಂಡಿದ್ದಾರೆ. ಮಾತ್ರವಲ್ಲ, ಸತ್ಯಂರಾಜುವಿಗೆ "ಶ್ರೇಷ್ಠ ನುಂಗಣ್ಣ" ಪ್ರಶಸ್ತಿ ನೀಡಿ ತಿಲಾಂಜಲಿ ನೀಡಲಾಗುತ್ತದೆ ಎಂದೂ ತಿಳಿದುಬಂದಿದೆ. ಸತ್ಯಂನ ಸಿಇಒ ಆಗಿದ್ದ ಅವರನ್ನು ತಮ್ಮ ಕಂಪನಿಯ ಸಿಸಿಒ ಆಗಿ ನೇಮಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಕಳ್ಳಸಾಗಣಿಕಾ ಸಂಘದ ಉಪಾಧ್ಯಕ್ಷರು ತಿಳಿಸಿದ್ದಾರೆ.

ಸಿಸಿಒ ಎಂದರೇನು ಎಂದು ಕೇಳಿದಾಗ, ಅವರು ಆ ಮೂರಕ್ಷರವನ್ನು ವಿಸ್ತರಿಸಿದ್ದು ಹೀಗೆ: ಚೀಪ್ (cheap) ಚೀಟಿಂಗ್ ಆಫೀಸರ್.

Monday, January 12, 2009

ಮಹಾಅಸತ್ಯಂ: ಬೊಗಳೂರಿಗೊಂದು ಗರಿ!

(ಬೊಗಳೂರು ಅಸತ್ಯಾನ್ವೇಷಣೆ ಬ್ಯುರೋದಿಂದ)
ಬೊಗಳೂರು, ಜ.12- ಬೊಗಳೂರು ಬ್ಯುರೋದ ಮುಖ್ಯ ಪ್ರಧಾನ ಪ್ರಮುಖ ಹಿರಿಯ ಸಹಾಯಕ ಸಹ ಕಿರಿಯ ಟ್ರೈನೀ ಅಪ್ರೆಂಟಿಸ್ ಸಂಪಾದಕರ ಹೆಸರು ರಾಜಾರೋಷವಾಗಿ ಜಗತ್ತಿನಾದ್ಯಂತ ಕೇಳಿಬರುತ್ತಿದ್ದು, ಇದು ಸಂತಾಪಕರ ಹೆಸರು ಹೈಜಾಕ್ ಮಾಡುವ ಪ್ರಯತ್ನ ಎಂದು ತಿಳಿದುಬಂದಿದೆ.

ಆದರೆ "ಸತ್ಯ ಹೇಳಿದವ ಸತ್ತ" ಮತ್ತು "ಸತ್ಯ ವಾಕ್ಯವ ನೆಚ್ಚಿ ನಡೆದರೆ ಮೆಚ್ಚನಾ ಪರಮಾತ್ಮನು" ಎಂಬ ಧ್ಯೇಯವಾಕ್ಯಗಳನ್ನು ಹೊಂದಿರುವ ಬೊಗಳೆ ರಗಳೆ ಬ್ಯುರೋದ ಮಾನ ಕಾಪಾಡಲು ಸತ್ಯಂ ಕಂಪ್ಯೂಟರ್ಸ್ ಒಡೆಯ, ಈಗ ಶೇರುದಾರರ ಬಾಯಲ್ಲಿ "ರಾಮ ರಾಮಾ" ಹೇಳಿಸುತ್ತಿರುವ ರಾಮ ಲಿಂಗಾ ರಾಜು ತೀವ್ರ ಪ್ರಯತ್ನ ಮಾಡಿದ್ದರು ಎಂಬ ಅಂಶವನ್ನು ಕೂಡ ಈ ಏಳು ಸಾವಿರ ಕೋಟಿ ರೂ. ಹಗರಣದ ನೂರಾರು ಹಗರಣಗಳೆಡೆಯಲ್ಲಿ ಮಿನಿ ಹಗರಣವೊಂದನ್ನು ಬೊಗಳೂರು ಬ್ಯುರೋ ಪತ್ತೆ ಹಚ್ಚಿ ಇಲ್ಲಿ ಪ್ರಕಟಿಸುತ್ತಿದೆ.

ಯಾಕೆಂದರೆ, ಶೇರುದಾರರಿಗೆ ರಾಮರಾಮಾ ಎಂದು ಹೇಳಿಸಿದ, ನಂಬಿದವರಿಗೆಲ್ಲಾ ರಾಮಜಪ ಮಾಡುತ್ತಿರುವಂತೆ ಮಾಡಿದ ರಾಜು, ಸತ್ಯ ಹೇಳಿದ್ದನ್ನೇ ಮಾಧ್ಯಮಗಳೆಲ್ಲಾ ಮಹಾ ಅಸತ್ಯಂ ಎಂದೆಲ್ಲಾ ಬಿಂಬಿಸತೊಡಗಿವೆ. ಈಗ ಸತ್ಯ ಹೇಳಿರುವ ಆತ, 7000 ಕೋಟಿ ರೂಪಾಯಿ ಹಗರಣ ಎಸಗಿದ್ದಾನೆ ಎಂದು ಆರೋಪಿಸಲಾಗುತ್ತಿದೆ. ಆತನ ಮೇಲೆ ಕೇಸು ಜಡಿದು, ಜನರ ವಿಶ್ವಾಸಕ್ಕೆ, ನಂಬಿಕೆಗೆ, ದೇಶದ ಪ್ರತಿಷ್ಠೆಗೆ ಕೊಡಲಿಯೇಟು ನೀಡಿರುವುದರಿಂದ ದೇಶದ ಕಠಿಣಾತಿಕಠಿಣ ಕಾಯ್ದೆಯಡಿ, ಮಾನವ ಜೀವಿತಾವಧಿಯಲ್ಲಿ ಕೊಲೆಗಾರನಿಗೆ, ಕಳ್ಳನಿಗೆ, ಸುಲಿಗೆಕೋರ, ದಗಾಕೋರ, ವಂಚಕ, ಅಪಹರಣಕಾರ, ನರಮೇಧಾವಿಗಳಿಗೆ (ನರಮೇಧ ಮಾಡಿದವರು), ಭಯೋತ್ಪಾದಕರಿಗೆ ಸಿಗದಂತಹ ಶಿಕ್ಷೆ 7 ಎಂಬ ಅತ್ಯಂತ ಸುದೀರ್ಘ ವರ್ಷಗಳ ಭರ್ಜರಿ ಕಠಿಣ ಶಿಕ್ಷೆ ವಿಧಿಸಲು ತೀರ್ಮಾನ ಮಾಡಿರುವುದು ಕೇವಲ ಆತ ಸತ್ಯ ನುಡಿದ ಎಂಬ ಏಕ ಮಾತ್ರ ಕಾರಣಕ್ಕೇ ಅಲ್ಲವೇ?

ಹೀಗಾಗಿ ಬೊಗಳೂರಿನ ಧ್ಯೇಯವಾಕ್ಯವನ್ನು ಎತ್ತಿ ತೋರಿಸುವಂತೆ ಮಾಡಿದ, ಅಸತ್ಯ ಎಂಬ ಹೆಸರನ್ನು ಜಗದ್ವಿಖ್ಯಾತಿಗೊಳಿಸಿದ ಅಸತ್ಯಂ ರಾಜುವಿಗೆ ಬೊಗಳೂರು ಬ್ಯುರೋ ಕ್ಯಾಕರಿಸಿ ಅಭಿನಂದನೆಗಳನ್ನು ಹೇಳುತ್ತದಾದರೂ, ಅಸತ್ಯ ಅನ್ವೇಷಿ ಎಂಬ ಹೆಸರನ್ನು ಹೈಜಾಕ್ ಮಾಡದಿರುವಂತೆ ಮುನ್ನೆಚ್ಚರಿಕೆಯೊಂದಿಗೆ ಸೂಕ್ತ ಭದ್ರತಾ ಕ್ರಮಗಳನ್ನೂ ಕೈಗೊಳ್ಳಲಾಗುತ್ತದೆ ಎಂಬುದಾಗಿ ಸಂತಾಪಕರು ಸ್ಪಷ್ಟಪಡಿಸಿದ್ದಾರೆ.

ಬಹುಶಃ ಇದೇ ಕಾರಣಕ್ಕಾಗಿ ಪಾತಕಿಸ್ತಾನವೂ ಆಗಾಗ್ಗೆ ಸತ್ಯವಾಕ್ಯವನ್ನು ನೆಚ್ಚಿಕೊಳ್ಳಲು ಹಿಂದೇಟು ಹಾಕುತ್ತಾ, ಸತ್ಯ ಹೇಳಿದವನಿಗಾದ ಗತಿಯೇ ನಮಗೂ ಆಗಬಹುದೇ ಎಂಬುದಾಗಿ ಯೋಚಿಸಿ ಬೇ-ಸತ್ತು ತಿಪ್ಪರಲಾಗಗಳನ್ನು ಹೊಡೆಯುತ್ತಿದೆ ಎಂಬ ಕುರಿತಾಗಿಯೂ ತನಿಖೆ ಮುಂದುವರಿದಿದೆ.

Friday, January 09, 2009

ಅಮೆರಿಕದಲ್ಲಿ "ಪ್ರಥಮ ಶ್ವಾನ"ಕ್ಕಾಗಿ ಶೋಧ

(ಬೊಗಳೂರು ಶ್ವಾನಾನ್ವೇಷಣಾ ಬ್ಯುರೋದಿಂದ)
ಬೊಗಳೂರು, ಜ.9- ಮುಬಾರಕ್ ಒಬಾಮ ಅಮೆರಿಕದ ಬಿಳಿ ಭವನಕ್ಕೆ ಕಪ್ಪು ಅಧ್ಯಕ್ಷನಾಗಿ ಆಯ್ಕೆಯಾದ ಬಳಿಕ ಅವರ ಪ್ರಾಣಿ ಸಂಗ್ರಹ ಲಾಯದ ಮಂತ್ರಿ ಮಂಡಲವನ್ನು ಪುನಾರಚನೆ ಮಾಡುವ ಸುದ್ದಿ ಕೇಳಿದ ಬೊಗಳೆ ರಗಳೆ ಏಕಸದಸ್ಯ ಬ್ಯುರೋದ ಅಧ್ಯಕ್ಷರೂ ಸೇರಿದಂತೆ ಸಮಸ್ತ ಸಿಬ್ಬಂದಿಗಳು ತಲೆಮರೆಸಿಕೊಂಡಿರುವುದಾಗಿ ನಮ್ಮ ವಿರೋಧಿ ಪತ್ರಿಕೆಗಳವರು ವರದ್ದಿ ಮಾಡಿದ್ದಾರೆ.

ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದವರಿಗೆಲ್ಲರಿಗೂ ಎಲ್ಲಕ್ಕಿಂತ ಮುಖ್ಯವಾಗುವುದು ತಮ್ಮ ಮನೆಯ ಪ್ರಧಾನ ನಾಯಿ ಯಾರಾಗಬೇಕೆಂಬುದು. ಆದರೆ ಅದು ದೊಡ್ಡಣ್ಣ ಎಂದು ಕರೆಸಿಕೊಳ್ಳುವ ದೇಶವಾಗಿರುವುದರಿಂದ ಅದನ್ನು ನಾಯಿ ಅಂತ ಕರೆಯದೆ ಶ್ವಾನ ಅಂತ ಕರೆದರೆ ಉತ್ತಮ ಎಂದು ಮುಬಾರಕ್ ಒಬಾಮ ಗುಪ್ತ ಸಂದೇಶವೊಂದರಲ್ಲಿ ಆಣತಿ ನೀಡಿದ್ದಾರೆ.

ನಾಯಿ ಎಂದ ತಕ್ಷಣ ಅವರಿಗೆ ನೆನಪಾಗಿದ್ದು ಮಾತ್ರ ಬೊಗಳೆ ರಗಳೆ ಬ್ಯುರೋದ ಸಂಪಾದಕರು ಎಂಬುದು ಎಲ್ಲರಿಗೂ ಅಚ್ಚರಿ ತರುವ ವಿಷಯವಾಗಿದೆ ಎಂಬುದು ಕೂಡ ಅಷ್ಟೇ ಅಸತ್ಯ. ಬೊಗಳೂರಿನ ಮಂಗಕ್ಕೂ ನಾಯಿಗೂ ಎತ್ತಣ ಸಂಬಂಧವಯ್ಯ ಎಂದು ಓದುಗರೆಲ್ಲರೂ ಹುಬ್ಬೇರಿಸುತ್ತಿರಲಾಗಿ, ಮಂಗಗಳನ್ನು ಮತಾಂತರಗೊಳಿಸಿ ನಾಯಿಗಳಾಗಿ ಪರಿವರ್ತಿಸುವ ಜಾಲವೊಂದು ತೀವ್ರವಾಗಿ ಸಕ್ರಿಯವಾಗಿದೆ ಎಂಬುದು ಕೇಳಿದ್ದೇ ತಡ, ಬೊಗಳೂರು ಮಂದಿ ಪರಾರಿ!

ಇಡೀ ಭಾರತವನ್ನೇ ಜಗತ್ತಿಗಿಂತಲೂ ಹೆಚ್ಚು ಕಾಡುತ್ತಿರುವ ಜಾಗತಿಕ ಹಣಕಾಸು ಬಿಕ್ಕಟ್ಟಿಗಿಂತಲೂ ಒಬಾಮರಿಗೆ ನಾಯಿಯ ಆಯ್ಕೆಯೇ ಬಲುದೊಡ್ಡ ಬಿಕ್ಕಟ್ಟಾಗಿ ಪರಿಣಮಿಸಿದ್ದು, ನಾಯಿ ಮರಿಗಳ ಬೆಲೆಯೂ ಹೆಚ್ಚಾಗಿದೆ. ಹೀಗಾಗಿ ಬೀದಿಯಲ್ಲಿರೋ ನಾಯಿಗಳನ್ನೇ ಬಳಸಿಕೊಳ್ಳಬಹುದು.

ಮಂಗವನ್ನೇ ನಾಯಿಯಾಗಿಸಿ ಮತಾಂತರಗೊಳಿಸಬೇಕೇ ಅಥವಾ ನಾಯಿಗಳನ್ನೇ ಅದು ನಾಯಿಯಲ್ಲ, ಮಂಗ ಎಂದೇ ತಿಳಿದುಕೊಂಡು ಹಾಗೇ ಉಳಿಸಿಕೊಳ್ಳಬೇಕೇ, ಅಥವಾ ಮಂಗ-ನಾಯಿಗಳೆರಡರ ಮಿಶ್ರ ತಳಿಯನ್ನೇ "ದೇಶದ ಪ್ರಥಮ ಶ್ವಾನಪ್ರಜೆ"ಯಾಗಿ ನೇಮಿಸಿಕೊಳ್ಳಬೇಕೇ ಎಂಬಿತ್ಯಾದಿಯೆಲ್ಲಾ ಚರ್ಚೆಯಿನ್ನೂ ನಡೆಯುತ್ತಿದ್ದು, ಈ ಚರ್ಚೆಗೆ ಮಂಗಗಳ ಹಾಡಲು ತೀರ್ಮಾನಿಸಲಾಗಿದೆ.

Wednesday, January 07, 2009

ಭಾರತ-ಪಾಕ್ ಗಡಿಯಲ್ಲಿ ಭಾರೀ ಸರಕು ಸಾಗಾಟ!

(ಬೊಗಳೂರು ತನಿಖಾ ವರದ್ದಿ ಬ್ಯುರೋದಿಂದ)
ಬೊಗಳೂರು, ಜ.7- 2008 ಮುಗಿಯತೊಡಗಿದಾಗಲೇ ಭಾರತ ಮತ್ತು ಪಾತಕಿಸ್ತಾನ ನಡುವಿನ ಬಾಂಧವ್ಯವು ದಿಢೀರ್ ಆಗಿ ಸೆನ್ಸೆಕ್ಸ್‌ನಂತೆ ಮೇಲಕ್ಕೆ ಹೋಗಿ, ಉಭಯ ದೇಶಗಳ ಗಡಿಯಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗುತ್ತಿರುವ ಲಕ್ಷಣಗಳು ಗೋಚರಿಸತೊಡಗಿದ್ದವು. ಹೀಗಾಗಿ ಗಡಿಭಾಗದಲ್ಲಿ ಭಾರೀ ಸರಕುಗಳನ್ನು ಹೊತ್ತ ಟ್ರಕ್ಕುಗಳು ಅತ್ತಿಂದ ಇತ್ತ, ಇತ್ತಲಿಂದ ಅತ್ತ ಚಲಿಸುತ್ತಿರುವುದನ್ನು ಬೊಗಳೂರು ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ.

ಇದರ ಹಿಂದೆ ಏನೋ ಇದೆ ಎಂದು ಸಂಚೋದನೆಗೆ ಹೊರಟಾಗ ಚೋದ್ಯ ಸಂಗತಿಯೊಂದು ಬಲವಾಗಿ ಬಯಲಾಗಿದೆ. ಗಡಿಭಾಗದಲ್ಲಿ ಸಂಚೋದನೆ ಮಾಡುತ್ತಿದ್ದಾಗ, ಭಾರತದ ಕಡೆಯಿಂದ ಲೋಡುಗಟ್ಟಲೆ ಟ್ರಕ್ಕುಗಳು ಹೋಗುತ್ತಿದ್ದರೆ, ಅದಕ್ಕಿಂತಲೂ ಹೆಚ್ಚು ಟ್ರಕ್ಕುಗಳು ಭಾರೀ ತೂಕದ ಸರಕು ಹೊತ್ತು ಭಾರತದತ್ತ ಬರುತ್ತಿದ್ದವು. ಇದರಲ್ಲಿ ಉಗ್ರಗಾಮಿಗಳು, ಅವುಗಳ ಬಾಂಬುಗಳು, ಎ.ಕೆ.47 ಎಲ್ಲ ಇದ್ದಿರಬಹುದೆಂಬ ಸಂಶಯವು ಎಲ್ಲರಿಗೂ ಕಾಡಿದಂತೆ ಬೊಗಳೂರು ಸಿಬ್ಬಂದಿಗೂ ಕಾಡಿತ್ತು.

Sooooo, ಕಣ್ಣಿಗೆ ಎಣ್ಣೆ ಹಾಕಿಕೊಂಡು, ಕೆಲವೊಮ್ಮೆ ಗೊತ್ತಾಗದಂತೆ ಹೊಟ್ಟೆಗೂ ಎಣ್ಣೆ ಹಾಕಿಕೊಂಡು ಕಾದು ಕುಳಿತು ಏನಾಗುತ್ತದೆ, ಟ್ರಕ್ಕುಗಳಲ್ಲಿ ಸಾಗುತ್ತಿರುವುದೇನು ಎಂದು ಪತ್ತೆ ಹಚ್ಚಲು ಶುರುವಾಯಿತು. ಭಾರತದಿಂದ ಅತ್ತ ಕಡೆ ಹೋಗುತ್ತಿರುವುದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅತ್ತ ಕಡೆಯಿಂದ ಬರುತ್ತಿರುವ ಸರಕಾರದರೂ ಏನು ಎಂದು ಚೋದಿಸಿದಾಗ ಬಯಲಾದ ಅಂಶವು ಬೊಗಳೂರಿನ ಸಮಸ್ತ ಓದುಗರನ್ನು ಪೇಚಿನಲ್ಲಿ ಸಿಲುಕಿಸಿದೆಯಾದರೂ ಅದು ಮಾಮೂಲಿ ಎಂಬಂತಹ ಮುಖಭಾವ ಪ್ರದರ್ಶಿಸಿದ್ದು ತಿಳಿಯಿತು.

ಹಾಗಿದ್ದರೆ ಅಂಥದ್ದೇನಿತ್ತು ಆ ಟ್ರಕ್ಕುಗಳಲ್ಲಿ?

ಹೌದು...
ಭಾರತದಿಂದ ಹೋಗುತ್ತಿರುವ ಟ್ರಕ್ಕುಗಳಲ್ಲಿ ಇದ್ದದ್ದು : ಮುಂಬಯಿ ದಾಳಿಯಲ್ಲಿ ಪಾತಕಿಸ್ತಾನಿ ಉಗ್ರರ ಕೈವಾಡವಿರುವ ಕುರಿತಾದ ಸಾಕ್ಷ್ಯಾಧಾರಗಳ ಮೂಟೆಗಳು.

ಅದಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಪಾತಕಿಸ್ತಾನದಿಂದ ಬರುತ್ತಿದ್ದುದೇನು?: ಇಲ್ಲ, ಇಲ್ಲ, ಗೊತ್ತಿಲ್ಲ, ಹಾಗೆ ಹೇಳೇ ಇಲ್ಲ, ಉಗ್ರರೇ ಅಲ್ಲ, ನಾವಲ್ಲ, ಅವರಲ್ಲ ಎಂಬಿತ್ಯಾದಿ ಅಲ್ಲಗಳೇ ಇರುತ್ತಿರುವ ನಿರಾಕರಣೆಯ ಹೇಳಿಕೆಗಳ ರಾಶಿ ರಾಶಿ ಮೂಟೆ!!!

Tuesday, January 06, 2009

ಬೊಗಳೆ: ಚೇಂಜ್ಡ್ ನ್ಯೂ ಇಯರ್ ರೆಸೊಲ್ಯುಷನ್

(ಸಂತಾಪಕೀಯ)
2009 ಬಂದು ಆಗಲೇ ಒಂದು ವಾರವೇ ಆದರೂ ಬೊಗಳೂರಿನಲ್ಲಿ ಏನೂ ಸುದ್ದಿ ಕೇಳುತ್ತಿಲ್ಲ. ಗ್ಲೋಬಲ್ ಕ್ರೈಸಿಸ್‌ನಿಂದಾಗಿ ಬೊಗಳೂರು ಗೊಟಕ್ ಅಂದಿದೆ, ಬೊಗಳೂರು ಏಕ ಸದಸ್ಯ ಬ್ಯುರೋದ ಎಲ್ಲಾ ಸಿಬ್ಬಂದಿಗಳಿಗೂ ಗಂಟು-ಮೂಟೆ ಕಟ್ಟುವಂತೆ ಹೇಳಲಾಗಿದೆ ಅಂತೆಲ್ಲಾ ಸತ್ಯ ಪ್ರಚಾರ ಮಾಡುತ್ತಿರುವುದಕ್ಕೆ ಬೊಗಳೂರು ಸಂತಾಪಕರು, ಓದುಗರು, ಪ್ರೂಫು ರೀಡರು, ಬೆರಳಚ್ಚುಕೋರ, ಕರಡಚ್ಚುತಜ್ಞ, ಕಾರ್ಯಮರೆತ ಮುಖ್ಯ ಸಂಪಾದಕರು, ಉಪ ಸಂಪಾದಕರು, ಕಿರಿಯ ಉಪ ಸಂಪಾದಕರು, ಕಿರಿಕಿರಿಯ ಉಪ ಉಪ ಸಂಪಾದಕರೂ ಆಗಿರುವ ಟ್ರೈನೀ ಕಿರಿಯ ಕಿರು ಸಂಪಾದಕರು ಈ ಮೂಲಕ ಸ್ಪಷ್ಟನೆ ನೀಡುತ್ತಿದ್ದಾರೆ.

ಹೊಸ ವರ್ಷ ಆಗಮಿಸುತ್ತಿರುವಾಗಲೇ, ಈ ವರ್ಷ ಏನೂ ಬರೆಯಬಾರದೆಂದು ತೀರ್ಮಾನಿಸಲಾಗಿತ್ತಾದರೂ, ಆ ಬಳಿಕ ನಿರ್ಧಾರ ಚೇಂಜ್ ಮಾಡಲಾಯಿತು. ಏನಾದರೂ ಹೊಸಾ ರೆಸೊಲ್ಯುಷನ್ ಕೈಗೊಳ್ಳಬೇಕೆಂದು ಹಪಹಪಿಸಿ, ಲೆಕ್ಕಾಚಾರ ಹಾಕಿ, ಕೂಡಿಸಿ, ಕಳೆದು, ಅಳೆದು ತೂಗಿ ನಿರ್ಣಯವೊಂದು ಕೊನೆಗೂ ಹೊಳೆಯುವಲ್ಲಿ ಮತ್ತು ಅದನ್ನು ಅನುಷ್ಠಾನಗೊಳಿಸುವಲ್ಲಿ ಬೊಗಳೂರಿನ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳೆಲ್ಲಾ ಸೇರಿ ಯಶಸ್ವಿಯಾಗಲು ಇಷ್ಟು ಸಮಯ ತಗುಲಿತು ಎಂದು ಸ್ಪಷ್ಟಪಡಿಸಲಾಗುತ್ತಿದೆ.

ಇಷ್ಟೊಂದು ತೂಕದ, ತೂಕಡಿಸದ ಮತ್ತು ಪೊಳ್ಳು ಪೊಳ್ಳಾಗಿ ಯೋಚಿಸುತ್ತಾ ಕೈಗೊಂಡ ನಿರ್ಣಯ ಕೈಗೊಳ್ಳಲು ಇಷ್ಟು ಸಮಯ ಬೇಕಾಗಿದೆ. ಹೀಗಾಗಿ ಬೊಗಳೂರೋದುಗರಿಗೆ ಮುಖ ತೋರಿಸಲಾಗಲಿಲ್ಲ ಎಂದು ಸಂತಾಪಕರು ಸಂತಸ ವ್ಯಕ್ತಪಡಿಸಿದ್ದಾರೆ.

ಹಾಗಿದ್ದರೆ ಅಂಥ ಉದಾತ್ತ ನಿರ್ಣಯ ಏನು ಕೈಗೊಳ್ಳಲಾಗಿದೆ ಎಂದು ಕೇಳುವ ಮತ್ತು ಕೇಳದಿರುವ ಓದುಗರಿಗಾಗಿ ಉತ್ತರ ಇಲ್ಲಿದೆ. ಬೊಗಳೂರು ಬ್ಯುರೋ ತಲೆ ಕೆರೆದು ಕೆರೆದೂ ಕೆರೆದೂ ಕೈಯಲ್ಲಿ ತಗೊಂಡ ರೆಸೊಲ್ಯುಷನ್: ಯಾವುದೇ ರೀತಿಯ ರೆಸೊಲ್ಯುಷನ್ ಕೈಗೊಳ್ಳಬಾರದು!

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...