Monday, January 12, 2009

ಮಹಾಅಸತ್ಯಂ: ಬೊಗಳೂರಿಗೊಂದು ಗರಿ!

(ಬೊಗಳೂರು ಅಸತ್ಯಾನ್ವೇಷಣೆ ಬ್ಯುರೋದಿಂದ)
ಬೊಗಳೂರು, ಜ.12- ಬೊಗಳೂರು ಬ್ಯುರೋದ ಮುಖ್ಯ ಪ್ರಧಾನ ಪ್ರಮುಖ ಹಿರಿಯ ಸಹಾಯಕ ಸಹ ಕಿರಿಯ ಟ್ರೈನೀ ಅಪ್ರೆಂಟಿಸ್ ಸಂಪಾದಕರ ಹೆಸರು ರಾಜಾರೋಷವಾಗಿ ಜಗತ್ತಿನಾದ್ಯಂತ ಕೇಳಿಬರುತ್ತಿದ್ದು, ಇದು ಸಂತಾಪಕರ ಹೆಸರು ಹೈಜಾಕ್ ಮಾಡುವ ಪ್ರಯತ್ನ ಎಂದು ತಿಳಿದುಬಂದಿದೆ.

ಆದರೆ "ಸತ್ಯ ಹೇಳಿದವ ಸತ್ತ" ಮತ್ತು "ಸತ್ಯ ವಾಕ್ಯವ ನೆಚ್ಚಿ ನಡೆದರೆ ಮೆಚ್ಚನಾ ಪರಮಾತ್ಮನು" ಎಂಬ ಧ್ಯೇಯವಾಕ್ಯಗಳನ್ನು ಹೊಂದಿರುವ ಬೊಗಳೆ ರಗಳೆ ಬ್ಯುರೋದ ಮಾನ ಕಾಪಾಡಲು ಸತ್ಯಂ ಕಂಪ್ಯೂಟರ್ಸ್ ಒಡೆಯ, ಈಗ ಶೇರುದಾರರ ಬಾಯಲ್ಲಿ "ರಾಮ ರಾಮಾ" ಹೇಳಿಸುತ್ತಿರುವ ರಾಮ ಲಿಂಗಾ ರಾಜು ತೀವ್ರ ಪ್ರಯತ್ನ ಮಾಡಿದ್ದರು ಎಂಬ ಅಂಶವನ್ನು ಕೂಡ ಈ ಏಳು ಸಾವಿರ ಕೋಟಿ ರೂ. ಹಗರಣದ ನೂರಾರು ಹಗರಣಗಳೆಡೆಯಲ್ಲಿ ಮಿನಿ ಹಗರಣವೊಂದನ್ನು ಬೊಗಳೂರು ಬ್ಯುರೋ ಪತ್ತೆ ಹಚ್ಚಿ ಇಲ್ಲಿ ಪ್ರಕಟಿಸುತ್ತಿದೆ.

ಯಾಕೆಂದರೆ, ಶೇರುದಾರರಿಗೆ ರಾಮರಾಮಾ ಎಂದು ಹೇಳಿಸಿದ, ನಂಬಿದವರಿಗೆಲ್ಲಾ ರಾಮಜಪ ಮಾಡುತ್ತಿರುವಂತೆ ಮಾಡಿದ ರಾಜು, ಸತ್ಯ ಹೇಳಿದ್ದನ್ನೇ ಮಾಧ್ಯಮಗಳೆಲ್ಲಾ ಮಹಾ ಅಸತ್ಯಂ ಎಂದೆಲ್ಲಾ ಬಿಂಬಿಸತೊಡಗಿವೆ. ಈಗ ಸತ್ಯ ಹೇಳಿರುವ ಆತ, 7000 ಕೋಟಿ ರೂಪಾಯಿ ಹಗರಣ ಎಸಗಿದ್ದಾನೆ ಎಂದು ಆರೋಪಿಸಲಾಗುತ್ತಿದೆ. ಆತನ ಮೇಲೆ ಕೇಸು ಜಡಿದು, ಜನರ ವಿಶ್ವಾಸಕ್ಕೆ, ನಂಬಿಕೆಗೆ, ದೇಶದ ಪ್ರತಿಷ್ಠೆಗೆ ಕೊಡಲಿಯೇಟು ನೀಡಿರುವುದರಿಂದ ದೇಶದ ಕಠಿಣಾತಿಕಠಿಣ ಕಾಯ್ದೆಯಡಿ, ಮಾನವ ಜೀವಿತಾವಧಿಯಲ್ಲಿ ಕೊಲೆಗಾರನಿಗೆ, ಕಳ್ಳನಿಗೆ, ಸುಲಿಗೆಕೋರ, ದಗಾಕೋರ, ವಂಚಕ, ಅಪಹರಣಕಾರ, ನರಮೇಧಾವಿಗಳಿಗೆ (ನರಮೇಧ ಮಾಡಿದವರು), ಭಯೋತ್ಪಾದಕರಿಗೆ ಸಿಗದಂತಹ ಶಿಕ್ಷೆ 7 ಎಂಬ ಅತ್ಯಂತ ಸುದೀರ್ಘ ವರ್ಷಗಳ ಭರ್ಜರಿ ಕಠಿಣ ಶಿಕ್ಷೆ ವಿಧಿಸಲು ತೀರ್ಮಾನ ಮಾಡಿರುವುದು ಕೇವಲ ಆತ ಸತ್ಯ ನುಡಿದ ಎಂಬ ಏಕ ಮಾತ್ರ ಕಾರಣಕ್ಕೇ ಅಲ್ಲವೇ?

ಹೀಗಾಗಿ ಬೊಗಳೂರಿನ ಧ್ಯೇಯವಾಕ್ಯವನ್ನು ಎತ್ತಿ ತೋರಿಸುವಂತೆ ಮಾಡಿದ, ಅಸತ್ಯ ಎಂಬ ಹೆಸರನ್ನು ಜಗದ್ವಿಖ್ಯಾತಿಗೊಳಿಸಿದ ಅಸತ್ಯಂ ರಾಜುವಿಗೆ ಬೊಗಳೂರು ಬ್ಯುರೋ ಕ್ಯಾಕರಿಸಿ ಅಭಿನಂದನೆಗಳನ್ನು ಹೇಳುತ್ತದಾದರೂ, ಅಸತ್ಯ ಅನ್ವೇಷಿ ಎಂಬ ಹೆಸರನ್ನು ಹೈಜಾಕ್ ಮಾಡದಿರುವಂತೆ ಮುನ್ನೆಚ್ಚರಿಕೆಯೊಂದಿಗೆ ಸೂಕ್ತ ಭದ್ರತಾ ಕ್ರಮಗಳನ್ನೂ ಕೈಗೊಳ್ಳಲಾಗುತ್ತದೆ ಎಂಬುದಾಗಿ ಸಂತಾಪಕರು ಸ್ಪಷ್ಟಪಡಿಸಿದ್ದಾರೆ.

ಬಹುಶಃ ಇದೇ ಕಾರಣಕ್ಕಾಗಿ ಪಾತಕಿಸ್ತಾನವೂ ಆಗಾಗ್ಗೆ ಸತ್ಯವಾಕ್ಯವನ್ನು ನೆಚ್ಚಿಕೊಳ್ಳಲು ಹಿಂದೇಟು ಹಾಕುತ್ತಾ, ಸತ್ಯ ಹೇಳಿದವನಿಗಾದ ಗತಿಯೇ ನಮಗೂ ಆಗಬಹುದೇ ಎಂಬುದಾಗಿ ಯೋಚಿಸಿ ಬೇ-ಸತ್ತು ತಿಪ್ಪರಲಾಗಗಳನ್ನು ಹೊಡೆಯುತ್ತಿದೆ ಎಂಬ ಕುರಿತಾಗಿಯೂ ತನಿಖೆ ಮುಂದುವರಿದಿದೆ.

6 comments:

 1. ರಾಮ "ನಾಮ"ಮು...ಜನ್ಮ(ನ) ರ(ಭ)ಕ್ಷಕ ಮಂ(ತಂ)ತ್ರಂ....ಅಂತ ತ್ಯಾಗರಾಜರ ಕೀರ್ತನೆ ಇದೆ. ಈಗ ಇದನ್ನು ಹಾ(ಪಾ)ಡುವುದು ಸೂಕ್ತ ಅನಿಸುತ್ತಿದೆ.

  ReplyDelete
 2. ಅನ್ವೇಷಿ,
  ನಿಮಗೆ ತುಂಬಾ tough competition ಇದೆ ಕಣ್ರೀ!

  ReplyDelete
 3. ಎಲ್ಲಾ ಐ.ಟಿ. ಕಂಪೆನಿಗಳು ಒಂದೊಂದಾಗಿ ಮುಚ್ಚಿ ಹೋಗುವ ಕಾಲ ಸನ್ನಿಹಿತವಾಗಿದೆ. ಇನ್ಫೋಸಿಸ್ ನಾರಾಯಣಮೂರ್ತಿ ಕೂಡಾ (ಕನ್ನಡ ವಿರೋಧಿ, ದೇಶವಿರೋಧಿ) ಸದ್ಯದಲ್ಲೇ ಗೇಟ್‌ಪಾಸ್ ನೀಡಲಿದ್ದಾನೆ ತನ್ನ ಕಂಪೆನಿಗೆ. ಏಕೆಂದರೆ ಇವರಿಗೆ ದೇಶದ ಬಗ್ಗೆ, ರಾಜ್ಯದ ಬಗ್ಗೆ, ಮಾತೃ ಭಾಷೆಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ, ಇಂತಹ ಮಾತೃ ದ್ರೋಹಿಗಳಿಗೆ ಧಿಕ್ಕಾರವಿರಲಿ.
  "ರಾಮ ನಾಮ ಪಾಯಸಕ್ಕೆ....ವಿಠಲ ನಾಮ (ಮೂರು ನಾಮ) ಸಕ್ಕರೆ..." ಎಂದು ಈ ಐ.ಟಿ ಮಂದಿ ಕನ್ನಡಿಗರಿಗೆ ಮೂರುನಾಮ ಬಳಿಯಲು ಕಾಯುತ್ತಿದ್ದಾರೆ

  ReplyDelete
 4. ಲಕ್ಷ್ಮಿ ಅವರೆ,
  ಉದ್ದ ನಾಮಮು, ಅಡ್ಡಡ್ಡ ನಾಮಮು ಎಲ್ಲಾ ಹೇಳಿಕೊಡಿ... ಹಾಡ್ತಾ ಕೂರೋದೇ ಅಸತ್ಯಪ್ರಿಯರ ಪಾಡು.

  ReplyDelete
 5. ಸುನಾಥರೆ,
  ಹೀಗೇ ಮಾಡಿದ್ರೆ ನಾವು ಕೂಡ... ನಮ್ಮ ಅಸತ್ಯದ ಶೇರು ಬೆಲೆ ಏರಿಸಿ... ನಾಳೇನೇ ಬಂದ್ ಮಾಡಿಬಿಡ್ತೀವಿ...

  ReplyDelete
 6. ಗುರುಗಳೆ,
  ನಾವೆಲ್ಲಾ ಒಂದು ಕೆಲಸ ಮಾಡ್ಬೇಕಾಗಿದೆ... ಎಲ್ಲರಿಂದಲೂ ನಾಮ ಹಾಕಿಸಿಕೊಳ್ಳಬೇಕು... ಆ ಮೇಲೆ ಆ ನಾಮಗಳನ್ನೆಲ್ಲಾ ಒಟ್ಟು ಸೇರಿಸಿ ವಿದೇಶಕ್ಕೆ ಮಾರಿಬಿಡ್ಬೇಕು.. ಇದೇ ಒಂದು ಔಟ್ ಸೋರ್ಸಿಂಗ್ ಬಿಜಿನೆಸ್ ಆಗಬಹುದು...

  ReplyDelete

ನಿಮ್ಮ ಸಲಹೆ/ಅಭಿಪ್ರಾಯ ತಿಳಿಸಿ..

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...