Wednesday, February 25, 2009

ಅಲ್ಲಲ್ಲಿ ಸ್ಲಮ್, ರಾಷ್ಟ್ರೀಯ ಪ್ರಾಣಿ ಡಾಗ್!

(ಬೊಗಳೂರು ಸ್ಲಮ್ಮು ಶೋಧನಾ ಬ್ಯುರೋದಿಂದ)
ಬೊಗಳೂರು, ಫೆ.25- ಸ್ಲಮ್ಮುಗೋಸ್ಕರ' ಪ್ರಶಸ್ತಿ ಲಭಿಸಿರುವುದರಿಂದ ಉತ್ತೇಜಿತವಾಗಿರುವ ಬೊಗಳೂರು ಸರಕಾರ, ಗಲ್ಲಿ ಗಲ್ಲಿಗಳಲ್ಲಿ ಸ್ಲಮ್ಮುಗಳನ್ನು ಸ್ಥಾಪಿಸಲು ಆದೇಶ ಹೊರಡಿಸಿದೆ. ಆದರೆ, ಯಥಾ ಪ್ರಕಾರ ಗೊಂದಲಪುರದಲ್ಲಿರುವ ಕೇಂದ್ರ ಸಚಿವರು, ಆದರೆ, ಗಲ್ಲಿ ಗಲ್ಲಿಗಳಲ್ಲಿ ಸ್ಲಮ್ಮು ಸ್ಥಾಪಿಸಬೇಕೋ ಅಥವಾ ಸ್ಲಮ್ಮು ಸ್ಲಮ್ಮುಗಳಲ್ಲಿ ಗಲ್ಲಿ ಸ್ಥಾಪಿಸಬೇಕೋ ಎಂಬುದಿನ್ನೂ ನಿರ್ಧಾರವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದರ ಜೊತೆಗೆ ಎಲ್ಲ ಕಡೆಗಳಿಂದಲೂ ಅದು ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿರುವುದರಿಂದ ಜಾರಕಾರಣಿಗಳಿಗೆ ಪ್ರೇರಕ ಶಕ್ತಿಯಾಗಿರುವ ಡಾಗನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿಸಬೇಕೆಂಬ ಕೂಗು ಗಟ್ಟಿಯಾಗಿ ಕೇಳಿಬರತೊಡಗಿದೆ ಎಂಬುದನ್ನು ಬೊ.ರ.ಬ್ಯುರೋ ಮಾತ್ರವೇ ಪತ್ತೆ ಹಚ್ಚಿ ಪ್ರಕಟಿಸಿದೆ.

ಇದಲ್ಲದೆ, ಸದ್ಯದಲ್ಲೇ ಚುನಾವಣೆಗಳು ನಡೆಯಲಿರುವುದರಿಂದ ಎಲ್ಲ ಸ್ಲಮ್ಮುಗಳಲ್ಲಿ ಮನುಷ್ಯರ ಜೊತೆಗಿರುವ ಡಾಗುಗಳಿಗೂ ಮತದಾನದ ಹಕ್ಕು ಕೊಡಿಸಲಾಗುತ್ತದೆ. ಡಾಗುಗಳ ಜನಸಂಖ್ಯೆ ವೃದ್ಧಿಗೆ ಉತ್ತೇಜನ ದೊರಕಿಸಲಾಗುತ್ತದೆ. ಅವುಗಳ ಬಾಯಿ ಮುಚ್ಚಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಆಗ ಬಾಲ ಅಲ್ಲಾಡಿಸಲು ಜಾಗವಿಲ್ಲ ಎಂದು ಕೂಗಾಡಿದವರು, ಈಗ ಬಾಲ ಅಲ್ಲಾಡಿಸಲು ಡಾಗು ಇಲ್ಲ ಎಂದು ಹೇಳುವಂತೆ ಮಾಡಿಸುತ್ತೇವೆ ಎಂದು ಸಚಿವರು ಪಣ ತೊಟ್ಟಿದ್ದಾರೆ.

"ಸ್ಲಮ್ಮುಡಾಗು ಸ್ವೀಪ್ಸ್ ಆಸ್ಕರ್" ಎಂದೇ ಹೆಚ್ಚಿನ ತಾಣಗಳು ತಲೆ ಬರಹ ಕೊಟ್ಟಿರುವುದರಿಂದ ಉತ್ತೇಜಿತರಾಗಿರುವ ಸಚಿವರು, ಸ್ಲಮ್ಮು ಡಾಗುಗಳು ಸ್ವೀಪ್ ಮಾಡುವುದರಲ್ಲಿ ಈಗಾಗಲೇ ಪಳಗಿದ ಕೈ ಎಂಬುದನ್ನು ಮನಗಂಡಿದ್ದಾರೆ. ಆಸ್ಕರನ್ನೇ ಸ್ವೀಪ್ ಮಾಡಿರುವ ಅವುಗಳು ಅಲ್ಪ ಸ್ವಲ್ಪ ಕಸವನ್ನು ಸ್ವೀಪ್ ಮಾಡಲಾರವೇ? ಹೀಗಾಗಿ ಪಟ್ಟಣ ಪ್ರದೇಶಗಳಲ್ಲಿ ರಸ್ತೆ, ಬೀದಿ ಸ್ವೀಪ್ ಮಾಡಲು ಸ್ವೀಪರ್‌ಗಳನ್ನೆಲ್ಲಾ ಕಿತ್ತು ಹಾಕಿ, ಸ್ಲಮ್ಮು ಡಾಗುಗಳನ್ನೇ ನೇಮಿಸುವ ಇರಾದೆಯಲ್ಲಿದ್ದಾರೆ.

ಇದಲ್ಲದೆ, PM, President congratulates Slumdog, Everybody is hailing Slumdog, Rejoice/wishes galore for Slumdog ಮುಂತಾದ ತಲೆಬರಹಗಳು ಕಣ್ಣು ಕುಕ್ಕಿದ್ದು ಮತ್ತು ಸ್ವೀಪರ್ ಕೆಲಸಗಳಿಗೆ ಸ್ಲಮ್ಮು ಡಾಗುಗಳ ನೇಮಕಕ್ಕೆ ತೀವ್ರ ಪ್ರತಿರೋಧ ಎದುರಾಗಿದ್ದು ಬೊಗಳೂರಿನ ಸ್ಲಮ್ಮು ಮಂಕಿಗಳಿಂದ. ಇಷ್ಟು ವರ್ಷದಿಂದ ನಾವು ಇಷ್ಟೆಲ್ಲಾ ಹಾರಾಡುತ್ತಾ, ಕೂಗಾಡುತ್ತಾ, ಬೊಗಳಾಡುತ್ತಾ ಇದ್ದರೂ, ನಮ್ಮನ್ನು ಯಾರೂ ಗುರುತಿಸಿಲ್ಲ, ಸ್ಲಮ್ಮು ಡಾಗುಗಳನ್ನು ಮಾತ್ರವೇ ಗುರುತಿಸಲಾಗಿದೆ ಎಂದು ಮಂಕಿ ಸಮುದಾಯ ರೊಚ್ಚಿಗೆದ್ದಿದೆ. ಹೀಗಾಗಿ ನಮಗೂ ಆಸ್ಕರು ದೊರಕಿಸಬೇಕು, ಇಲ್ಲವಾದಲ್ಲಿ ಕನಿಷ್ಠ ಪಕ್ಷ ಕೇಂದ್ರ ಸಚಿವ ಆಸ್ಕರು ಫೆರ್ನಾಂಡಿಸ್ ಕೈಯಲ್ಲಾದರೂ ಪ್ರಶಸ್ತಿ ಕೊಡಿಸಬೇಕು ಎಂದು ದುಂಬಾಲು ಬಿದ್ದು, ಬೊಗಳೂರು ಬೊಗಳೆ ಬ್ಯುರೋದೆದುರು ಪ್ರತಿಭಟನೆ ಮಾಡುತ್ತಾ ಪ್ರದರ್ಶನವನ್ನೂ ಮಾಡತೊಡಗಿವೆ. ಸ್ಲಮ್ಮು ಡಾಂಕಿಗಳು ಕೂಡ ಇದಕ್ಕೆ ತಮ್ಮ ಅಮೂಲ್ಯವಾದ ಗಾರ್ದಭ ಧ್ವನಿಗೂಡಿಸಿವೆ.

ಈ ಮಧ್ಯೆ, ಜೈ ಹೋ ಎಂಬ ಹಾಡನ್ನೇ ರಾಷ್ಟ್ರಗೀತೆಯಾಗಿ ಮಾಡಬೇಕು ಎಂಬ ಕೂಗು ಕೂಡ ಕೇಳಿಬರತೊಡಗಿದೆ. ಇದಕ್ಕೆ ಕಾರಣವೆಂದರೆ, ಶೀಘ್ರದಲ್ಲೇ ಚುನಾವಣೆ ಬರಲಿವೆ. ತಾವು ಐದು ವರ್ಷ ಸಂಸತ್ತಿನಲ್ಲಿ ಗಲಾಟೆ, ಗದ್ದಲ ಮಾಡುತ್ತಾ ತೆರಿಗೆದಾರರ ಹಣವನ್ನು ಆರಾಮವಾಗಿ ನುಂಗುತ್ತಾ ಕಾಲ ಕಳೆದಿರುವುದೆಲ್ಲಾ ಈ ಟಿವಿಗಳ ಹಾವಳಿಯಿಂದ ಜಗಜ್ಜಾಹೀರಾಗಿದೆ, ಮತದಾರರೂ ರೊಚ್ಚಿಗೆದ್ದು ಪಾಠ ಕಲಿಸಲು ಸಿದ್ಧರಾಗುತ್ತಿದ್ದಾರೆ. ಟಿವಿ ಚಾನೆಲ್ಲುಗಳೆಲ್ಲವೂ ತಮ್ಮ ಬಂಡವಾಳ ಬಯಲು ಮಾಡಿವೆ. ಇದರಿಂದಾಗಿ ಚುನಾವಣೆಗೆ ಮುನ್ನ ಜೈ ಹೋ ಜೈ ಹೋ ಎಂದು ಹಾಡುತ್ತಾ ಆರಿಸಿ ಕಳುಹಿಸಿದ ಜನರು ಈ ಬಾರಿ ನಮ್ಮ ನಾಯಕನಿಗೆ... ಜೈಲ್ ಹೋ ಜೈಲ್ ಹೋ ಎಂದು ಹಾಡುವ ಆತಂಕವಿದೆ.

ಈ ಸಂಕಷ್ಟಮಯ ಪರಿಸ್ಥಿತಿಯನ್ನು ಮನಗಂಡು, ಜೈ ಹೋವನ್ನು ರಾಷ್ಟ್ರಗೀತೆಯಾಗಿಸಬಹುದು, ತಪ್ಪು ತಪ್ಪಾಗಿ ಜೈಲ್ ಹೋ ಎಂದರೆ ಅವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬಹುದು ಎಂಬುದು ಈ ಜಾರಕಾರಣಿಗಳ ಹುನ್ನಾರ ಎಂಬುದನ್ನು ಪತ್ತೆ ಹಚ್ಚಲಾಗಿದೆ.

ಅಲ್ಲಲ್ಲಿ ಕೇಳಿ ಬಂದ ಮತ್ತಷ್ಟು ಹೇಳಿಕೆಗಳನ್ನು ಹೆಕ್ಕಿಕೊಳ್ಳಲಾಗಿದ್ದು, ಅವುಗಳನ್ನು ಪಟ್ಟಿ ಇಂತಿದೆ:

* ಮತ್ತೆ ಮತ್ತೆ ಸ್ಲಂ ಫಿಲ್ಮ್ ಮಾಡುತ್ತೇನೆ: ನಿರ್ದೇಶಕ ಡ್ಯಾನಿ boil.

* ಸ್ಲಮ್ಮಿನಲ್ಲಿರುವ Hot dog ಗಳನ್ನು ರಾಷ್ಟ್ರೀಯ ಖಾದ್ಯ ಎಂದು ಘೋಷಿಸಬೇಕು : ಕೂಲ್ ಡಾಗ್

* ನಮಗೂ ಸ್ಲಮ್ಮಿನ ಸ್ಥಾನ-ಮಾನ ನೀಡಬೇಕು: ಸ್ಲಂ ಕ್ಯಾಟ್

* ಸ್ಲಮ್ಮು ಡಾಗನ್ನು ನಮಗೊಪ್ಪಿಸಿ, ನಾವೇ ತನಿಖೆ ಮಾಡುತ್ತೇವೆ: ಪಾತಕಿಸ್ತಾನದ ಗೊಂದಲಭರಿತ ಸರಕಾರ

* ಸ್ಲಂ ಡಾಗ್‌ಗೆ ಆಸ್ಕರ್ ಪ್ರಶಸ್ತಿ ಬಂದಿದ್ದು ಯುಪಿಎ ಸಾಧನೆ: ಚುನಾವಣೆಗೆ ಸಜ್ಜಾದ ರಾಜಕಾರಣಿ

* ಮುಂದಿನ ಚುನಾವಣೆಗೆ ಸ್ಲಂ ಡಾಗನ್ನೇ ಪಕ್ಷದ ಚಿಹ್ನೆಯಾಗಿಸುತ್ತೇವೆ: ಬೂಮ್‌ಗಾರಪ್ಪ.

ಈ ಮಧ್ಯೆ, ಬಡ ಬೊಗಳೇಗೌಡರು ವಿಶೇಷ ಪತ್ರಿಕಾಗೋಷ್ಠಿಯೊಂದನ್ನು ನಡೆಸಲು ದುಡ್ಡಿಲ್ಲದ ಕಾರಣ, ಬೊ.ರ. ಕಚೇರಿಗೆ ಹೊಕ್ಕು ಹೇಳಿಕೆಯೊಂದನ್ನು ನೀಡಿದ್ದಾರೆ. ಅದೆಂದರೆ, ಆಸ್ಕರ್ ಸಿಗಬೇಕಾಗಿರುವುದು ಸ್ಲಂ ಡಾಗಿಗೆ ಅಲ್ಲ, ದೇಶದ ಮೂಲೆ ಮೂಲೆಯನ್ನೂ ಸ್ಲಮ್ ಮಾಡಿರುವ ನಮ್ಮ ಜಾರಕಾರಣಿಗಳಿಗೆ!

Monday, February 23, 2009

ಬಜೆಟ್: ಕ್ಷಿಪ್ರ ಕಲ್ಯಾಣ, ಅಡ್ಡಮಾರ್ಗ ನಿರ್ಮಾಣ ಯೋಜನೆ!

(ಬೊಗಳೂರು ಆರ್ಥಿಕ ಅಧಿಕಪ್ರಸಂಗ ಬ್ಯುರೋದಿಂದ)
ಬೊಗಳೂರಿನಲ್ಲಿ ಅಪ್ಪಿತಪ್ಪಿ ಬಜೆಟ್ ಮಂಡನೆಯಾಗಿದ್ದು, ಬೊಗಳೂರು ಸರಕಾರದ ಅಮುಖ್ಯಮಂತ್ರಿಗಳು ಈ ಬಜೆಟ್ ಮಂಡಿಸಿ ಸಾರ್ವಜನಿಕರಿಂದ ಸೈಸೈ ಗಿಟ್ಟಿಸಿಕೊಂಡಿದ್ದಾರೆ. ಕ್ಷಿಪ್ರ ಕಲ್ಯಾಣ ಯೋಜನೆ, ಅಡ್ಡದಾರಿಗಳ ನಿರ್ಮಾಣ ಯೋಜನೆ, ರೋಸಿಹೋಗುವಂತೆ ಚಿತ್ರೀಕರಣ ಮಾಡುವ ಕ್ಯಾಮರಾ ಯೋಜನೆ... ಇತ್ಯಾದಿಗಳು ಈ ಬಾರಿಯ ಮುಂಗಡ ಪತ್ರದ ಅಮುಖ್ಯಾಂಶಗಳು.

ಬಜೆಟ್ ವಿವರಗಳು ಈ ರೀತಿ ಇವೆ:

* ಪ್ರತಿ ತಾಲೂಕು ಕೇಂದ್ರಗಳಲ್ಲಿ ಬಿಳಿಯಾನೆಗಳನ್ನು ಸಾಕಲು 100 ಕೋಟಿ ರೂ.

* ಪ್ರತಿ ಜಿಲ್ಲಾ ಕೇಂದ್ರಗಳ ಗಲ್ಲಿ ಗಲ್ಲಿಗಳಲ್ಲಿ ಕಡ್ಡಾಯ ಪಬ್ ಸ್ಥಾಪನೆಗೆ 106 ಕೋಟಿ ರೂ.

* ಪಿಂಕ್ ಚಡ್ಡಿ ತಯಾರಿಕಾ ಘಟಕಗಳಿಗೆ ಉತ್ತೇಜನ ನೀಡಲು ಏಳೆಂಟು ಕೋಟಿ ರೂ.

* ಲೋಕಸಭಾ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಕೊಳೆತ ಮೊಟ್ಟೆ, ಕಲ್ಲು, ಚಪ್ಪಲಿ ಇತ್ಯಾದಿಗಳ ಬೆಲೆ ಕೈಗೆ ಎಟುಕದಷ್ಟು ಮೇಲಕ್ಕೆ ಏರಿಸಲು ನಿರ್ಧಾರ

* ರೈಲು ಬಿಡುವ ಮಂತ್ರಿ ಮಹೋದಯರಿಗೆ ವಿಶೇಷ ಪಿಂಚಣಿ ಯೋಜನೆ. (ಇದು ಕೂಡ ಚುನಾವಣೆಯನ್ನು ಗುರಿಯಾಗಿರಿಸಿ ಎಂಬುದು ಪ್ರತಿಪಕ್ಷಗಳ ಆರೋಪ).

* ಮದ್ರಾಸ್ ಹೈಕೋರ್ಟಿನಲ್ಲಿ ಹೊಡೆದಾಡಿ, ಪೊಲೀಸರಿಗೆ ಕಾನೂನು ತಿಳಿಹೇಳುವ ವಕೀಲರನ್ನು ಕರ್ನಾಟಕಕ್ಕೆ ಕರೆತರುವ ಯೋಜನೆ

* ಪುತ್ರಕರ್ತರಿಗೆ ಮತ್ತು ಪುತ್ರಿಕರ್ತರಿಗೆ ವಿಶೇಷ ಬ್ರೇಕಿಂಗ್ ನ್ಯೂಸ್ ನೀಡಲು ವ್ಯವಸ್ಥೆ, ಪದೇ ಪದೇ ತೋರಿಸುವಂತಾಗಲು ವೀಡಿಯೋ ಕ್ಯಾಮರಾ ಉಚಿತ.

* ವಿಧಾನಸೌಧದ ಸುತ್ತ ಮುತ್ತ ರಾಜಕೀಯ ಪಕ್ಷಗಳಿಗೆ ಪರಸ್ಪರ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, ಕೆಸರಿನ ಬೆಲೆಯನ್ನು ಅತ್ಯಂತ ಅಗ್ಗಗೊಳಿಸಲಾಗುತ್ತದೆ. ಇದರಿಂದ ಕೆಸರೆರಚಾಟ ಸುಲಭ.

* ತಮ್ಮ ತಮ್ಮ ಮನೆಯೊಳಗೆ ಕುಳಿತೇ ಗಣಿಗಾರಿಕೆ ಮಾಡುವವರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರತಿ ಮನೆಗೂ ಒಂದೊಂದು ಕ್ರಶರ್‌ಗಳು

* ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ಮದ್ಯಪಾನ, ಸುರಾಪಾನ ಕೇಂದ್ರಗಳು ತೀವ್ರವಾಗಿ ನಲುಗುತ್ತಿರುವ ಕಾರಣ, ಅವುಗಳ ಪುನಶ್ಚೇತನಕ್ಕೆ ಹೊಸದಾದ 'ರೇಣುಕಾ ಯೋಜನೆ' ಘೋಷಿಸಲಾಗಿದ್ದು, ಇದರ ಅನುಸಾರ ಎಲ್ಲರೂ ಕಡ್ಡಾಯವಾಗಿ ಪಬ್‌ಗಳಿಗೆ, ಮದ್ಯ ಕೇಂದ್ರಗಳಿಗೆ ಹೋಗಿ ಕುಡಿದು ಕುಣಿದು ಕುಪ್ಪಳಿಸಬೇಕಾಗುತ್ತದೆ.

* ಆರ್ಥಿಕ ಬಿಕ್ಕಟ್ಟಿನ ಬಿಸಿಯು ವೈದ್ಯ ಸಮುದಾಯವನ್ನೂ ತಟ್ಟಿದೆ. ಇತರ ಉತ್ಪಾದನಾ ವಲಯದಲ್ಲಿ ಗ್ರಾಹಕರನ್ನು ಉಳಿಸಿಕೊಳ್ಳುವ ಮಾದರಿಯಲ್ಲೇ, ರೋಗಿಗಳನ್ನು ಆಸ್ಪತ್ರೆಯಲ್ಲೇ (ವೈದ್ಯರ ಗ್ರಾಹಕರು) ಉಳಿಸಿಕೊಳ್ಳುವ ನಿಟ್ಟಿನಲ್ಲಿ ವೈದ್ಯರಿಗೆ ವಿಶೇಷ ಯೋಜನೆ - "ಸದಾ ರಕ್ಷಾ" ಜಾರಿ

* ರಾಜ್ಯದ ಪ್ರಮುಖ ನಗರಗಳು ಸಿಕ್ಕಾಪಟ್ಟೆ ಬೆಳೆಯುತ್ತಾ, ವಿದೇಶೀ ಸಂಸ್ಕೃತಿ ಹೆಚ್ಚಾಗುತ್ತಿದೆ. ಜೊತೆಗೆ ಜನಜಂಗುಳಿ, ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಇದಕ್ಕಾಗಿ, ಯುವಜನಾಂಗ ಬೇಗನೇ 'ಗಮ್ಯ'ಸ್ಥಾನ ತಲುಪುವಂತಾಗಲು ಅಲ್ಲಲ್ಲಿ ಅಡ್ಡದಾರಿಗಳ ನಿರ್ಮಾಣ. ಅಡ್ಡ ವರ್ತುಲ ರಸ್ತೆ, ಅಡ್ಡ ಫ್ಲೈಓವರ್, ವಾಮ ಮಾರ್ಗ ಇತ್ಯಾದಿಗಳನ್ನೆಲಾ ನಿರ್ಮಿಸಲು ಕೋಟಿ ಕೋಟಿ ಯೋಜನೆ.

* ಶ್ರೀರಾಮ ಸೇನೆ ಕೈಯಿಂದ ಹೆಣ್ಣು ಮಕ್ಕಳು ಪೆಟ್ಟು ತಿನ್ನದಂತಾಗಲು ಅವರ ಕಲ್ಯಾಣಕ್ಕೆ "ಚೌಧುರಿ ಯೋಜನೆ" ಜಾರಿ.

* ಪ್ರೇಮಕೂಪದಲ್ಲಿ ಬಿದ್ದ ಯುವ ಜನತೆಯ ಕಲ್ಯಾಣಕ್ಕಾಗಿ 'ಶ್ರೀರಾಮಸೇನಾ ಕ್ಷಿಪ್ರ ಕಲ್ಯಾಣ ಯೋಜನೆ' ನಿಧಿ ಘೋಷಣೆ.

* ಮಣ್ಣಿನ ಮಕ್ಕಳಿಗೆ ವಿಶೇಷವಾದ ಕುಟುಂಬ ಯೋಜನೆ "ಆಪರೇಶನ್ ವಿಮಲ" ಜಾರಿ!

ಇವಿಷ್ಟು ಯೋಜನೆಗಳನ್ನು ಜಾರಿಮಾಡಲಾಗಿದ್ದು, ಉಳಿದ ಯೋಜನೆಗಳು ಅವಶ್ಯಕತೆಯಿದ್ದಾಗಲೆಲ್ಲಾ ಹೊರಬೀಳಲಿದೆ ಎಂದು ಬೊಗಳೂರು ಅಮುಖ್ಯಮಂತ್ರಿಗಳು ಪುತ್ರಿ-ಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

Friday, February 20, 2009

ಬೊಗಳೂರು ಬಜೆಟ್ ಬರಲಿದೆ!!!

ಬೊಗಳೂರಿನ ಉದ್ಧಾರಕ್ಕಾಗಿ, ಯುವಜನತೆಯ ಕಲ್ಯಾಣಕ್ಕಾಗಿ, ಅಲ್ಪಸಂಖ್ಯಾತರ ಓಲೈಕೆಗಾಗಿ, ಪಬ್ಬೋದ್ಧಾರಕ್ಕೆ,ಯುವಜನತೆ ದಾರಿ ತಪ್ಪುವಂತಾಗಲು, ಬೊಗಳೂರು ಅಮುಖ್ಯಮಂತ್ರಿಗಳು ಸದನದಲ್ಲಿ ನಿದ್ದೆಹೋಗುವ ಮುನ್ನ ಮಂಡಿಸಿದ ಬಜೆಟ್‌ನಲ್ಲಿ ಏನಿದೆ ಏನಿಲ್ಲ... ಎಲ್ಲ ತಿಳಿಯುವ ಕುತೂಹಲವಿದ್ದರೆ,

ಶೀಘ್ರವೇ ಬೇಯುತ್ತಿದೆ ರೈಲ್ವೇ ಇಲಾಖೆ ಇಲ್ಲದಿದ್ದರೂ "ರೈಲು ಬಜೆಟ್"!

ಇದು ಬೊ.ರ. ಓದುಗರಿಗೆ ಇನ್ನಿಲ್ಲದ ಕೊಡುಗೆ...

ನೆನಪಿಡಿ: ಇದು ಉಚಿತವಾಗಿ ಓದುವ ಚಂದಾದಾರರಿಗೆ ಮಾತ್ರ ಲಭ್ಯ.

ನಿಮ್ಮ ಪ್ರತಿಗಳನ್ನು ಇಂದೇ ಕಾದಿರಿಸಬೇಡಿ. ಕಾದಿರಿಸದಿರಲು ಮರೆತು ನಿರಾಶರಾಗಿ!!!

Wednesday, February 18, 2009

ಭಾರತ-ಬ್ರಿಟನ್ ಸಂಸ್(ವಿ)ಕೃತಿ ವಿನಿಮಯ ವಿರೋಧ-ಆಭಾಸ!

(ಬೊಗಳೂರು ವಿಕೃತಿ ರಕ್ಷಣಾ ಬ್ಯುರೋದಿಂದ)
ಬೊಗಳೂರು, ಫೆ.18- ಬ್ರಿಟಿಷರ ನಾಡಿನಲ್ಲಿ ಸಣ್ಣ ಪ್ರಾಯದಲ್ಲೇ ಅಪ್ಪಂದಿರಾಗುವ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಅಲ್ಲಿ ಸಂಸ್ಕೃತಿ ರಕ್ಷಕರಿಲ್ಲದಿರುವುದೇ ಪ್ರಧಾನ ಕಾರಣ ಎಂದು ಕಂಡುಕೊಂಡಿರುವ ಮಕ್ಕಳ ಕಲ್ಯಾಣ ಮಾಡಿಸುವ ಸಚಿವೆ ರೇಣೂ ಕಾ ಚೌದ್ರಿ ಅವರು, ಅಲ್ಲಿಗೆ ಇತ್ತೀಚೆಗಷ್ಟೇ ಪಿಂಕ್ ಚಡ್ಡಿಗಳ ಮಹಾಪೂರ ಪಡೆದುಕೊಂಡ ಶ್ರೀರಾಮಸೇನೆಯನ್ನು ಕಳುಹಿಸಿಕೊಡಲು ನಿರ್ಧರಿಸಿದ್ದಾರೆ.

ಮುಮೋದ್ ಪ್ರತಾಲಿಕ್ ಅವರಿಗೆ ಲಂಡನ್‌ನಿಂದ ಕರೆಯೊಂದು ಬಂದಿದೆ ಎಂದು ಮೂಲಗಳು ವರದ್ದಿಸಿದ್ದರಿಂದ ಚಕಿತಗೊಂಡು ಕುಪಿತಗೊಂಡ ಬೊ.ರ.ಬ್ಯುರೋ ಈ ಬಗ್ಗೆ ಅನ್ವೇಷಣೆಗೆ ಹೊರಟಿತ್ತು. ನಮ್ಮಲ್ಲಿಂದ ನೈತಿಕತೆಗಳನ್ನೆಲ್ಲಾ ಅವರು ಭಾರತ ಬಿಟ್ಟು ಹೋದಾಗಲೇ ಕೊಂಡೊಯ್ದಿದ್ದರು. ಈಗ ಅಲ್ಲಿಯೂ ನೈತಿಕತೆ ಮುಗಿದುಹೋಗಿದೆ ಅಂತ ಅನ್ನಿಸುತ್ತದೆ. ಅದು ಅರ್ಧಪತನಕ್ಕಿಳಿದಿದೆಯೇ ಅಥವಾ ಪೂರ್ತಿಪತನವಾಗಿದೆಯೇ ಎಂಬುದನ್ನು ತಿಳಿಯಲೆಂದು ಅಲ್ಲಿಗೆ ಹೋದಾಗ ಇಲ್ಲಿ ಪ್ರಕಟವಾಗಿರುವ ವರದಿಯೇ ಪ್ರತಾಲಿಕ್ ಅವಶ್ಯಕತೆ ಹೆಚ್ಚಾಗಿ ಕಾಣಿಸಲು ಕಾರಣವೆಂದು ಪತ್ತೆಯಾಗಿದೆ.

ಇತ್ತೀಚೆಗೆ ಪಬ್ ಭರೋ ಮಾಡಿ, ಹೋಗಿ, ಕುಣಿಯಿರಿ, ಕುಡಿಯಿರಿ, ಕುಪ್ಪಳಿಸಿರಿ ಎಂದೆಲ್ಲಾ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಕಲ್ಯಾಣ ಮಾಡಿಸುವ ಕೇಂದ್ರದ ಸಚಿವೆ ರೇಣೂ ಕಾ ಚೌಧ್ರಿ ಅವರು ಹೇಳಿಕೆ ನೀಡಿದ್ದರಿಂದಾಗಿಯೇ, ಬ್ರಿಟಿಷರ ನಾಡಿನಲ್ಲಿ ಈ ರಾದ್ಧಾಂತಗಳಾಗುತ್ತಿವೆಯೇ ಎಂಬ ಪ್ರಶ್ನೆ ಬೊಗಳೂರನ್ನು ಕಾಡಿದ್ದು ಸಹಜ. ಹೀಗಾಗಿ, ಅವರು ಹೇಳಿದ್ದು ನಿಮಗಲ್ಲ ಎಂದು ಬ್ರಿಟಿಷರಿಗೆ ಫ್ಯಾಕ್ಸ್ ಮೂಲಕ ಸಂದೇಶ ರವಾನಿಸಲಾಗಿದೆ.

ಅಂತೆಯೇ ಅಲ್ಲಿನ ವ್ಯಾಲೆಂಟೈನ್ಸ್ ಡೇಯನ್ನು ಭಾರತದಲ್ಲೂ ಭರ್ಜರಿಯಾಗಿ ಆಚರಿಸಲಾಗುತ್ತಿದೆ. ಅಲ್ಲಿನ ಸಂಸ್ಕೃತಿಯು ಭಾರತಕ್ಕೂ ವ್ಯಾಪಿಸಬಹುದೇ  ಎಂದು ಶ್ರೀರಾಮನ ಸೇನೆಯು ಬೊಗಳೂರು ಬ್ಯುರೋದೆದುರು ಮಾತ್ರ ತನ್ನ ಆತಂಕವನ್ನು ಹೊರಗೆಡಹಿದೆ.

ಒಂದು ಕಾಲದಲ್ಲಿ ಬ್ರಿಟಿಷರು ನಮ್ಮನ್ನಾಳಿದ್ದರೂ, ಇದೀಗ ಉಭಯ ದೇಶಗಳ ಮಧ್ಯೆ ಸೌಹಾರ್ದಯುತ ಸಂಬಂಧವಿದೆ. "ಸಾಂಸ್ಕೃತಿಕ" ಬಂಧದ ಬೆಸುಗೆ ಮತ್ತಷ್ಟು ಬಲವಾಗಿದೆ. ಹೀಗಾಗಿ ಸಾಂಸ್ಕೃತಿಕತೆ ವಿನಿಮಯ ಕಾರ್ಯಕ್ರಮಗಳಡಿಯಲ್ಲಿ ಎರಡೂ ದೇಶಗಳ ಈ ವಿಪರೀತ ಸಂಸ್ಕೃತಿಗಳು ವಿನಿಮಯವಾದರೆ ಎಂಬ ಭೀತಿ ಮೂಡಿರುವುದರಿಂದ ಈ ಬಗ್ಗೆ ಕ್ರಮ ಕೈಗೊಳ್ಳಲು ಮುಮೋದ್ ಪ್ರತಾಲಿಕ್ ಮತ್ತು ರೇಣುಕಾಚೌ ಧುರಿಯವರನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಗುಪ್ತದಳದ ಮೂಲಗಳು ಉಸುರಿವೆ.

ಆದರೆ, ಇಲ್ಲಿನ ಮಾಧ್ಯಮಗಳನ್ನು ಅಲ್ಲಿಗೂ ಕಳಿಸುತ್ತಾರೆ, ಪದೇ ಪದೇ ತೋರಿಸಿದ್ದನ್ನೇ ತೋರಿಸುತ್ತಾ ಕಾಲ ಕಳೆಯಲು ನಿರ್ಧರಿಸಲಾಗಿದೆ ಎಂಬೆಲ್ಲಾ ಸಂಗತಿಗಳೂ ಗುಸುಗುಸು ಸರಿದಾಡುತ್ತಿರುವುದರಿಂದ ಬೊಗಳೆ ರಗಳೆ ಈ ಬಗ್ಗೆ ಬಾಯಿ ಮುಚ್ಚಿ ಕೂರಲು ನಿರ್ಧರಿಸಿದೆ.

Wednesday, February 11, 2009

ಟೀವಿ ನೋಡಿ ದಾಖಲೆ: ಧಾರಾವಾಹಿ ಸಂಘ ಚಕಮಕಿ

[ಬೊಗಳೂರು ಧಾರಾ(ಖಾರ)ವಾಹಿ ಬ್ಯುರೋದಿಂದ]
ಬೊಗಳೂರು, ಫೆ.11- ನಿರಂತರವಾಗಿ 72 ಗಂಟೆ ಟೀವಿ ನೋಡಿ ವಿಶ್ವದಾಖಲೆ ಸ್ಥಾಪಿಸಿದ ಸುದ್ದಿ ಇಲ್ಲಿ ಪ್ರಕಟವಾಗುತ್ತಿರುವಂತೆಯೇ, ಟಿವಿ ಧಾರಾವಾಹಿ ನಿರ್ಮಾಪಕರು ಇದೀಗ ಕೋರ್ಟು ಮೆಟ್ಟಲು ಹತ್ತಲೂ ಹಿಂಜರಿಯುವುದಿಲ್ಲ ಎಂದು ಘೋಷಿಸಿಬಿಟ್ಟಿದ್ದಾರೆ.

ಇದೇಕೆ ಈ ಟಿವಿ ನಿರ್ಮಾಪಕರು ಈ ರೀತಿ ಹೊಡೆದಾಡುತ್ತಿದ್ದಾರಲ್ಲ ಎಂದು ಅನ್ವೇಷಿಸಲು ಹೊರಟಾಗ ಏನು ಮಾಡಿದರೂ ಯಾರಿಗೂ ಗೊತ್ತಾಗಲಾರದ ಸಂಗತಿಗಳೆಲ್ಲವೂ ಬಯಲಿಗೆ ಬಂದವು.

ನೆವರ್ ಎಂಡಿಂಗು ಸೀರಿಯಲ್ಲುಗಳನ್ನು ನಿರ್ಮಿಸುವ ನಮಗೆ ಇದು ಅತಿದೊಡ್ಡ ಆಘಾತಕಾರಿ ಸುದ್ದಿ. ನಮ್ಮ ಸೀರಿಯಲ್ಲು ಕೇವಲ 72 ಗಂಟೆ ಮಾತ್ರದಲ್ಲೇ ಮುಗೀತಾ ಎಂಬುದು ತನಿಖೆಗೆ ಒಳಪಡಬೇಕಾದ ಸಂಗತಿ ಎಂದು ಚೂಯಿಂಗ್ ಗಂ ನಿರ್ಮಾಪಕರ ಒಕ್ಕೂಟದ ಅದಕ್ಷರು ಹೇಳಿಕೆ ನೀಡಿದ್ದಾರೆ.

ಹುಟ್ಟಿದಾಗಿನಿಂದ ನಮ್ಮ ಸೀರಿಯಲ್ಲುಗಳನ್ನು ನೋಡುತ್ತಿರುವ ಹೌಸ್‌ನಲ್ಲೇ ಇರುವ ವೈಫ್‌ಗಳಿಗೆ ಇಂಥದ್ದೊಂದು ಶ್ರೇಯಸ್ಸು ಸಲ್ಲಬೇಕಿತ್ತು. ಈ ಹೌಸುವೈಫುಗಳಿಗೆ ನಮ್ಮ ಸೀರಿಯಲ್ಲುಗಳಿಂದ ಎಷ್ಟೊಂದು ಉಪಕಾರವಾಗುತ್ತಿತ್ತು ಎಂದರೆ, ಅವರ ಮನೆಗೆ ನಾಲ್ಕು ದಿನ ಕಾರ್ಪೊರೇಶನ್ ನೀರು ಬಾರದಿದ್ದರೂ, ಮನೆ ಸುಸೂತ್ರವಾಗಿ ನಡೆಯುತ್ತಿತ್ತು. ಯಾಕೆಂದರೆ, ನಮ್ಮ ಸೀರಿಯಲ್ಲು ನೋಡುತ್ತಾ ಪಾತ್ರೆ ತೊಳೆಯುವ ಸಿಂಕ್ ಮುಂದೆ ನಿಂತುಕೊಂಡು ಬಿಟ್ಟರೆ, ಪಾತ್ರೆ ತೊಳೆಯಲು ಬೇಕಾದಷ್ಟು ನೀರು ತಮ್ಮ ತಮ್ಮ ಕಣ್ಣುಗಳಿಂದಲೇ ಬರುವಂತಾಗುತ್ತಿತ್ತು ಎಂದು ಕ್ಯೋಂಕೀ ಬಹು ಭೀ ಸಾಂಸ್ ಲೇತೀ ಥೀ ಸೀರಿಯಲ್‌ನ ಮಹಾನ್ ನಿರ್ಮಾಪಕರು, ನಿರ್ದೇಶಕರ ಸಂಘವೊಂದು ತಿಳಿಸಿದೆ.

ಕನ್ನಡ ಸೀರಿಯಲ್ಲುಗಳ ಕಣ್-ನೀರು-ಮಾಪಕರ ಸಂಘದ ಪ್ರಕಾರ, ಬಹುಶಃ ದಾಖಲಾರ್ಹ (ಮೆಂಟಲ್ ಆಸ್ಪತ್ರೆಯಲ್ಲಿಯೋ ಅಥವಾ ಗಿನ್ನೆಸ್ ದಾಖಲೆ ಪುಸ್ತಕದಲ್ಲೊ ಇನ್ನೂ ಗೊತ್ತಾಗಿಲ್ಲ) ವ್ಯಕ್ತಿಯು ತಮ್ಮ ಸೀರಿಯಲ್ಲುಗಳನ್ನೆಲ್ಲಾದರೂ ನೋಡುತ್ತಿದ್ದರೆ ಮತ್ತಷ್ಟು ದೊಡ್ಡ, ಸುದೀರ್ಘ ದಾಖಲೆ ಮಾಡುತ್ತಿದ್ದ. ಒಂದರೆಕ್ಷಣ ಕಣ್ಣು ಟೀವಿಯಿಂದ ತೆಗೆಯದಂತೆ ಮಾಡುವ ನಮ್ಮ ಸೀರಿಯಲ್ಲುಗಳಂತೂ, ಎಳೆದಾಟದಲ್ಲಿ ಬೇರಾವುದೇ ಭಾಷೆಗಳ ಸೀರಿಯಲ್ಲುಗಳನ್ನು ಮೀರಿಸುತ್ತವೆ. ಎಳೆದು ಎಳೆದು ಆಡುವ ಈ ಸೀರಿಯಲ್ಲುಗಳನ್ನು ಯಾವುದರಿಂದ ತಯಾರಿಸಲಾಗುತ್ತದೆ ಎಂದು ಬೇರೆ ಭಾಷೆಗಳ ನಿರ್ಮಾಪಕರು ನಮ್ಮನ್ನು ಕೇಳತೊಡಗಿದ್ದಾರೆ.

ಧಾರಾವಾಹಿಗಳೇಕೆ ಧಾರಾಕಾರವಾಗಿ ಕಣ್ಣೀರಧಾರೆ ಸುರಿಯುವಂತಿರುತ್ತವೆ ಎಂಬ ಕೊಂಕು, ಅಪ್ರಸ್ತುತ, ಶುದ್ಧ ಬೆಪ್ಪುತಕ್ಕಡಿ ಪ್ರಶ್ನೆಯೊಂದನ್ನು ಎಸೆಯಲಾಯಿತು. ಅದಕ್ಕೆ ಅವರದ್ದು ಒಂದೇ ಉತ್ತರ: "ಅಲ್ಲಾ,,, ಹಾಗೆ ಮಾಡದೇ ಇದ್ದರೆ ಅದನ್ನು ಯಾರಾದರೂ 'ಧಾರಾ'ವಾಹಿ ಅಂತಾರೆಯೇ?!!!"

ಇಷ್ಟೆಲ್ಲದರ ಮಧ್ಯೆ, ಹತ್ತು ಹಲವು ಧಾರಾವಾಹಿ ಮಂಡಳಿಗಳನ್ನು ಸಂಪರ್ಕಿಸಲಾಗಿ, ಟೀವಿ ನೋಡುತ್ತಲೇ ಕಳೆದ ಆ ಭೂಪ ತಮ್ಮ ಧಾರಾವಾಹಿಯನ್ನು ನೋಡಿದ್ದು ಎಂದು ಕೊಂಡು, ಎಲ್ಲ ಭಾಷೆಗಳ ಧಾರಾವಾಹಿ ನಿರ್ಮಾಪಕರು ಪರಸ್ಪರರಿಗೆ ಚೂಯಿಂಗ್ ಗಮ್ ಎಸೆಯುತ್ತಾ ಕಚ್ಚಾಡುತ್ತಿದ್ದರು ಎಂಬುದೇ ತಗಾದೆಗೆ ಕಾರಣವಾದ ಸುದ್ದಿ ಎಂದು ತಿಳಿಯಿತು. ಏಕ ಎಂದರೆ ಸಹಸ್ರ ಕಂತು ಎಂದೇ ತಿಳಿದುಕೊಂಡಿರುವ ಏಕ ತಾಕ ಪೂರ್ ಕನ್ನಡ ನೆಲದಲ್ಲೇ ಸಕಲ ರೀತಿಯಲ್ಲೂ ಜಲೋತ್ಪತ್ತಿ ಮಾಡುತ್ತಿರುವುದರಿಂದ ಅವರಿಗೇ ಈ ಶ್ರೇಯಸ್ಸು ಸಲ್ಲಬೇಕು ಎಂಬ ವಾದ ಮಂಡಿಸಲಾಯಿತು.

ಆದರೆ, ಇದಕ್ಕೆ ತಕರಾರು ತೆಗೆದಿರುವ ಧಾರಾವಾಹಿ ಸಂಗೀತ ನೀರ್-ದೇಶಕರು, ನಾವು ಕೊಟ್ಟ ಝಾಂ... ಧೂಂ... ಬ್ಲಾಂ... ಎಂಬಿತ್ಯಾದಿ ಮ್ಯೂಸಿಕ್ ಸ್ಟ್ರೋಕ್‌ಗಳಿಂದಲೇ ಆ ವ್ಯಕ್ತಿ ಹೃದಯಾಘಾತವಾಗಿ 72 ಗಂಟೆಗಳ ಕಾಲ ಎಚ್ಚರ ತಪ್ಪಿ ಬಿದ್ದಿದ್ದ. ಅದನ್ನೇ ದಾಖಲೆ ಎಂದು ಗುರುತಿಸಿರುವುದಾಗಿ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತ ವಾದ-ವಿವಾದದ ಸರಣಿಯು ಒಂದೇ ದಿನದಲ್ಲಿ 125ನೇ ಕಂತಿಗೆ ಮುಂದುವರಿಯುತ್ತಿದೆ...

Monday, February 09, 2009

ಮದ್ವೆ ಆಗೋಣ ಬಾ ಆಂದೋಲನ!

(ಬೊಗಳೂರು ಪ್ರೇಮಿಗಳ ಬ್ಯುರೋದಿಂದ)
ಬೊಗಳೂರು, ಫೆ.9- ಡೇಟಿಂಗ್ ಮಾಡ್ತಾ ಇದ್ರೆ ಮದ್ವೆ ಮಾಡಿಸ್ತೀವಿ ಎಂಬ ಶ್ರೀರಾಮನ ಸೇನೆಯ ಅಮೂಲ್ಯ ಆಹ್ವಾನವನ್ನು ಒಳಗಿಂದೊಳಗೆ ಸ್ವಾಗತಿಸಿರುವ ಯುವ ಜೋಡಿಗಳು, ಆದರೆ ಪ್ರತಿಭಟನೆಗೂ ತಯಾರಿ ನಡೆಸಿವೆ ಎಂಬ ವಿಶೇಷ X-Looseವ್ ಸುದ್ದಿಯನ್ನು ಬೊಗಳೂರು ಬ್ಯುರೋ ಬಹಿರಂಗಪಡಿಸಿದೆ.

ಏನಾದ್ರೂ ಮಾಡಿ ಈ ಬಾರಿ ಡೇಟಿಂಗ್ ಮಾಡಿಯೇ ಸಿದ್ಧ ಎಂದು ಪಣ ತೊಟ್ಟಿರುವ ಕೆಲವರು ಈಗಾಗಲೇ ಎಂ.ಜಿ.ರೋಡ್‌ನಲ್ಲಿ ನಾಲ್ಕು ಕಾಲು ಊರುವಷ್ಟು ಸ್ಥಳವನ್ನು ಬುಕ್ ಮಾಡಿಸಿಕೊಂಡಿರುವುದಾಗಿ ನಮ್ಮ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು ವರದ್ದಿಸಿದ್ದಾರೆ.

ಈ ರೀತಿ ನಾಲ್ಕು ಕಾಲೂರುವ ಜಾಗ ಬುಕ್ ಮಾಡಿಸಿಕೊಂಡವರಲ್ಲಿ ಪ್ರೇಮ ವಿರಹಿಗಳದ್ದೇ ಪಾತ್ರ ಹೆಚ್ಚಿದೆ ಎಂಬುದನ್ನು ಅಂಕಿ-ಶಂಕೆಗಳು ಸ್ಪಷ್ಟಪಡಿಸಿವೆ. ತಮ್ಮ ಪ್ರಿಯಕರನಿಂದ ತಿರಸ್ಕೃತಗೊಂಡವರು, ಪ್ರಿಯತಮೆಯಿಂದ no ಅನ್ನಿಸಿಕೊಂಡವರು ಎಲ್ಲರೂ ಇಲ್ಲಿ ಜಾಗ ಬುಕ್ ಮಾಡಿಸಿಕೊಂಡಿದ್ದು, ಅಲ್ಲಿಗೆ ತಮ್ಮನ್ನು ತಿರಸ್ಕರಿಸಿದವರು ಬಂದ ತಕ್ಷಣ ಅಪ್ಪಿಕೊಂಡು ಪ್ರೀತಿಯ ಮಳೆ ಸುರಿಸುವುದು ಅವರ ಸನ್ನಾಹ. ತಕ್ಷಣವೇ ಆಗಮಿಸುವ ರಾಮ ಸೈನಿಕರು ಮದುವೆ ಮಾಡಿಸಿಬಿಟ್ರೆ ಜೀವನ ಧನ್ಯವಾಗಿಬಿಡುತ್ತದೆ, ನಾ ಮೆಚ್ಚಿದವರನ್ನು ಸಂಗಾತಿಯಾಗಿ ಪಡೆದೆವೆಂಬ ಧನ್ಯತಾ ಭಾವವೂ ಮೂಡುತ್ತದೆ ಎಂಬುದು ಅವರ ದೂರಾಲೋಚನೆ.

ಒಟ್ಟಿನಲ್ಲಿ ಪ್ರೇಮದ ದಿನಾಚರಣೆಯು ದ್ವೇಷವನ್ನು ಮರೆತು ಪ್ರೇಮಿಗಳಾಗುವ ದಿನವನ್ನಾಗಿ ಮಾಡಿಸಲು ವಿರಹಿಗಳೆಲ್ಲರೂ ನಿರ್ಧರಿಸಿದ್ದಾರೆ. ಅಂದ್ರೆ ತಮಗೆ ಕೈಕೊಟ್ಟ ಹುಡುಗಿಗೆ ಪ್ರೇಮದ ಒಂದು ಪಾಠ ಕಲಿಸಲು ಮತ್ತು ಕಾಲು ಕೊಟ್ಟು ಓಡಿಹೋಗುವ ಹುಡುಗನಿಗೆ ಒಳ್ಳೆಯ ಬುದ್ಧಿಯನ್ನು ಕಲಿಸುವುದಕ್ಕಾಗಿ ಈ ಅಮೂಲ್ಯ ಅವಕಾಶವನ್ನು 'ಸರಿಯಾಗಿ' ಬಳಸಿಕೊಳ್ಳಲು ನಿರ್ಧರಿಸಿದ್ದಾರೆ. ಅಂದರೆ, ಇದರಿಂದ ಭಾರತೀಯ ಸಂಸ್ಕೃತಿಯನ್ನು ರಕ್ಷಿಸಿದಂತಾಗುತ್ತದೆ ಎಂಬುದು ಅವರ ಬಲವಾದ ನಂಬಿಕೆ!

ಈ ಮಧ್ಯೆ, ರಸ್ತೆಗಳಲ್ಲಿ ಭಿಕ್ಷೆ ಬೇಡುವವರನ್ನು ಈ "ಮದ್ವೆ ಮಾಡಿಸುವ" ಪ್ರಕ್ರಿಯೆಯಿಂದ ಹೊರಗಿರಿಸಬೇಕು ಎಂದು ಫಸ್ಟ್ ಲವ್ ಹುಡುಕಾಟದಲ್ಲಿರುವ ಪ್ರೇಮಿಗಳ ಸಂಘದವರು ಮನವಿ ಮಾಡಿದ್ದಾರೆ. ಯಾಕೆಂದರೆ, ಭಿಕ್ಷುಕರು ಯಾವಾಗ್ಲೂ ಮೈಮೇಲೆ ಬಿದ್ದೇ ಭಿಕ್ಷೆ ಎತ್ತುತ್ತಿರುತ್ತಾರೆ. ಅವರನ್ನು ತಪ್ಪಾಗಿ ತಿಳಿದುಕೊಂಡು ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ಎಂಬ ಆತಂಕ ಅವರದು. ಇದರೊಂದಿಗೆ, ಪ್ರಾಣಿದಯಾ ಸಂಘಗಳವರು ಕೂಡ ಬೀದಿಗಿಳಿದಿದ್ದು, ಈ ಪ್ರಕ್ರಿಯೆಯಿಂದ ಬೆಕ್ಕು, ನಾಯಿ ಮುಂತಾದ ಮನುಷ್ಯ ಹೆಚ್ಚಾಗಿ ನೆಚ್ಚಿಕೊಳ್ಳುವ ಪ್ರಾಣಿಗಳನ್ನೂ ಹೊರಗಿರಿಸಬೇಕು ಎಂದು ತೀವ್ರವಾಗಿ ಒತ್ತಾಯಿಸತೊಡಗಿದ್ದಾರೆ!

ಆದರೆ, ಸೈನಿಕರಿಗೆ ಮತ್ತೊಂದು ತಲೆಬಿಸಿ ಆರಂಭವಾಗಿದೆ. ಅವರು ಕುಂಕುಮಭಾಗ್ಯ ನೀಡುತ್ತಾರಾದರೂ, ಭಾರತೀಯ ಸಂಪ್ರದಾಯ ಪ್ರಕಾರವೇ ಗಟ್ಟಿಯಾದ ಚಿನ್ನದ ಮಂಗಳಸೂತ್ರವನ್ನೇ ನೀಡಬೇಕು, ನೀವು ಕೊಡುವ ತಾಳಿ ತೀರಾ ಚಿಕ್ಕದು ಎಂದು ಪ್ರೇಮಿಗಳು ಇದೀಗಾಗಲೇ ಒತ್ತಾಯಿಸಲಾರಂಭಿಸಿದ್ದಾರೆ. ಹಾಗಿದ್ದರೆ ಮಾತ್ರ ನಾವು ಬೀದಿ ಬೀದಿಗಳಲ್ಲಿ ಪ್ರೇಮ ಪ್ರದರ್ಶನ ಮಾಡ್ತೀವಿ, ಇಲ್ಲಾಂದ್ರೆ ನಿಮ್ಮ ಮದ್ವೆ ಯೋಜನೆ ಫೇಲ್ ಆಗಿಸಲು ನಾವು ಬೀದಿಗಿಳಿಯೋದೇ ಇಲ್ಲ ಎಂದೂ ಬೆದರಿಸಿದ್ದಾರೆ.

ಅಂತೆಯೇ, ವರದಕ್ಷಿಣೆ ಕೊಡುವುದು, ತೆಗೆದುಕೊಳ್ಳೋದು ಭಾರತೀಯ ಸಂಸ್ಕೃತಿಯಲ್ಲಿ ತಲೆತಲಾಂತರದಿಂದಲೂ ಇದೆ ಎಂದು ಕೂಡ ಹೇಳಿರುವ ಜೋಡಿಗಳು, ತಮಗೆ ವರದಕ್ಷಿಣೆಯನ್ನು ಮತ್ತು ಅದಕ್ಕೆ ಸರಿಸಾಟಿಯಾಗಿ ವಧು ದಕ್ಷಿಣೆಯನ್ನೂ (ಮೈನಸ್xಮೈನಸ್ = ಪ್ಲಸ್ ಎಂಬ ಸೂತ್ರಕ್ಕನುಗುಣವಾಗಿ) ನೀಡಬೇಕು ಎಂಬುದು ಮತ್ತೊಂದು ಪಂಗಡದ ಒತ್ತಾಯ.

ಇಷ್ಟೆಲ್ಲದರ ಮಧ್ಯೆ, ಮಕ್ಕಳಿಗೆ ಮದುವೆ ಮಾಡಲು ಹೆಣಗಾಡುತ್ತಿರುವ ಹೆತ್ತವರು, ತಮ್ಮ ಮಕ್ಕಳನ್ನು ಫೆಬ್ರವರಿ 14ರಂದು ಬೆಂಗಳೂರಿಗೆ ಓಡಿಸಲು ಸಂಚು ಹೂಡುತ್ತಿದ್ದಾರೆ ಎಂದೂ ಹೆಸರು ಹೇಳಲಿಚ್ಛಿಸದ ಮೂಲಗಳ ತಂದೆ ತಾಯಂದಿರು ತಿಳಿಸಿದ್ದಾರೆ.

Wednesday, February 04, 2009

ಪ್ರಾಣಿ ಹಕ್ಕು ಆಯೋಗ ರಚನೆಗೆ ಕೇಂದ್ರ ನಿರ್ಧಾರ!

(ಬೊಗಳೂರು ಅಮಾನವೀಯ-ಆಯೋಗ ಬ್ಯುರೋದಿಂದ)
ಬೊಗಳೂರು, ಫೆ.4- ಉಗ್ರಗಾಮಿಗಳು ಮಾನವ ಹಕ್ಕುಗಳಿಗೆ ಅರ್ಹರಲ್ಲ, ಅವರಿಗೆ ಪ್ರಾಣಿಗಳ ಹಕ್ಕುಗಳನ್ನೇ ಅಳವಡಿಸಬೇಕು ಎಂದು ನ್ಯಾಯಾಧೀಶರೇ ಹೇಳಿರುವುದರಿಂದ ತಕ್ಷಣವೇ ಕಾರ್ಯೋನ್ಮುಖವಾದ ಕೇಂದ್ರ ಸರಕಾರವು, ಪ್ರಾಣಿಗಳ ಹಕ್ಕು ಆಯೋಗ ರಚನೆಗೆ ನಿರ್ಧರಿಸಿದೆ.

ಈಗಾಗಲೇ ಈ ಪ್ರಸ್ತಾಪಿತ ಪ್ರಾಣಿಗಳ ಹಕ್ಕುಗಳ ಆಯೋಗಕ್ಕೆ ಖ್ಯಾತ ಪ್ರಾಣಿ ಹಕ್ಕುಗಳ ಅಥವಾ ಪ್ರಾಣಿ ಹಕ್ಕುಗಳ ಖ್ಯಾತ ಹೋರಾಟಗಾರ್ತಿ ಮೇನಕಾ ಗಾಂಧಿಯವರನ್ನು ಮುಖ್ಯಸ್ಥೆಯನ್ನಾಗಿ ಮಾಡಲು ಸರಕಾರ ನಿರ್ಧರಿಸಿದೆ. ಅದೇ ರೀತಿ, ಪ್ರಾಣಿಗಳ ಹಕ್ಕುಗಳ ಆಯೋಗದ ಕರ್ನಾಟಕದ ಅಧ್ಯಕ್ಷರನ್ನಾಗಿ ಮಾಜಿ ಶಾಸಕ, ಈಗಾಗಲೇ ಕತ್ತೆಗಳನ್ನು, ನಾಯಿಗಳನ್ು ವಿಧಾನಸೌಧದೆದುರು ನಿಲ್ಲಿಸಿ ಮಾನಹರಣ ಮಾಡಿ ಖ್ಯಾತರಾಗಿರುವ 'ಹೋರಾಟಗಾರ' ವಟವಟಾಳ್ ಗಾನರಾಜ್ ಅವರನ್ನು ನೇಮಿಸಲು ತೀರ್ಮಾನಿಸಲಾಗಿದೆ.

ಈ ಆಯೋಗಕ್ಕೆ ಆಯುಕ್ತರನ್ನಾಗಿ ಕೇಂದ್ರದ ಸಂಪತ್ತಿನ ಮೂಲ ಸಚಿವ ದುರ್ಜನ ಸಿಂಗರ ಹೆಸರನ್ನು ಆಲೂ ಪ್ರಸಾದ ದಾನವರು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಾಣಿಗಳ ಹಕ್ಕುಗಳ ಆಯೋಗ ರಚಿಸಿರುವ ಕೇಂದ್ರದ ಕ್ರಮವನ್ನು ಮಾಜಿ ಕೇಂದ್ರದ ಮತ್ತು ಕೇಂದ್ರದ ಮಾಜಿ ಸಚಿವ ಜನರಧನ ಜೂಜಾರಿ ಅವರು ಸ್ವಾಗತಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಮತ್ತು ಅವ್ಯವಸ್ಥೆ ತೀರಾ ಕೆಟ್ಟು ಹೋಗುತ್ತಿದೆ. ನಮ್ಮ ಅಲ್ಪ ಸಂಖ್ಯಾತರಿಗೆ ರಕ್ಷಣೆಯೇ ಇಲ್ಲ. ಇತ್ತೀಚೆಗೆ ನಡೆದ ಪಬ್ ದಾಳಿಯಲ್ಲಿಯೂ ಅಲ್ಪಸಂಖ್ಯಾತರು ಬಲಿಪಶುವಾಗಿದ್ದಾರೆಯೇ ಎಂಬುದರ ಬಗ್ಗೆ ನಮ್ಮ ಪಕ್ಷವು ತೀವ್ರವಾಗಿ ತನಿಖೆ ನಡೆಸುತ್ತಿದ್ದು, ಸೂಕ್ತ ಸಾಕ್ಷ್ಯಾಧಾರಗಳು ದೊರೆತ ತಕ್ಷಣವೇ ಅದನ್ನು ಸಮರ್ಪಕವಾಗಿ ಮಾಧ್ಯಮಗಳಲ್ಲಿ ಬಿಂಬಿಸಲಾಗುತ್ತದೆ ಎಂದು ತಿಳಿಸಿರುವ ಅವರು, ಹೇಗಿದ್ದರೂ ಚುನಾವಣೆ ಸಮೀಪಿಸುತ್ತಿದೆ. ಪ್ರಾಣಿಗಳ ಹಕ್ಕುಗಳ ಆಯೋಗವನ್ನು ಸಮರ್ಥವಾಗಿ ಬಳಸಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ, ಈ ಬಗ್ಗೆ ಚಕಾರವೆತ್ತಿರುವ ತಮಿಳುಕಾಡು ಮುಖ್ಯಮಂತ್ರಿ ಇದನ್ನು ಕರ್ನಾಟಕದಲ್ಲಿ ಮಾತ್ರವೇ ಚುನಾವಣೆಗೆ ಬಳಸಿಕೊಳ್ಳದೆ, ತಮಿಳುಕಾಡಿಗೂ ಇದರಲ್ಲಿ ಪಾಲು ಬೇಕು ಎಂದು ಒತ್ತಾಯಿಸಿದ್ದಾರೆ. ಶ್ರೀಲಂಕಾದಲ್ಲಿಯೂ ತಮಿಳು ಉಗ್ರರು ಸಾಯುತ್ತಿದ್ದಾರೆ. ಅವರ ಪ್ರಾಣಗಳು ಮತ್ತು ಪ್ರಾಣಿಗಳ ಹಕ್ಕು ಉಲ್ಲಂಘನೆಯಾಗುತ್ತಿದೆ. ಇದರ ತಡೆಗೂ ಈ ಆಯೋಗವನ್ನು ನಾವು ಕೂಡ ಹರಿದುಹಂಚಿಕೊಂಡು ಸಮರ್ಪಕವಾಗಿ ಬಳಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಈ ನಡುವೆ, ಉಗ್ರರು ಮಾನವರಲ್ಲ ಎಂದು ಹೇಳಿರುವ ಜನರ ವಿರುದ್ಧ ಕಾಂgueಸ್ ಧ್ವನಿ ಎತ್ತಲು ನಿರ್ಧರಿಸಿದೆ. ಉಗ್ರಗಾಮಿಗಳು, ಭಯೋತ್ಪಾದಕರು ಪ್ರಾಣಿಗಳಾಗಿದ್ದರೆ ಮುಂಬಯಿಯಲ್ಲಿ ನಡೆದಂತೆ ಯೋಜಿತ ದಾಳಿ ನಡೆಸಲು ಅವರಿಗೆ ಬರುತ್ತಿತ್ತೇ? ಮನುಷ್ಯರಿಗೆ ಮಾತ್ರವೇ ಈ ರೀತಿಯ ಬುದ್ಧಿ ಬರುವುದಲ್ಲವೇ? ಪ್ರಾಣಿಗಳಿಗೇನಾದರೂ ಈ ರೀತಿ ತಲೆ ಉಪಯೋಗಿಸುವುದು ತಿಳಿಯುತ್ತದೆಯೇ ಎಂದು ಕಾಂgueಸ್ ವಕ್ತಾರ, ಕಫೀಲ್ ಸೈಬಲ್, ಅವರಿಗೆ ಮೀಸಲಾತಿಯನ್ನೇ ನೀಡಬೇಕು. ನ್ಯಾಯದಾನ ವ್ಯವಸ್ಥೆಯಲ್ಲಿ ವಿಶೇಷವಾಗಿ ಮೀಸಲಾತಿ ಬೇಕಾಗಿದೆ. ಇಲ್ಲವಾದಲ್ಲಿ ನಮ್ಮ ದೇಶದ ಬ್ಯಾಂಕುಗಳಿಗೆ ತೀವ್ರ ತೊಂದರೆಯಿದೆ ಎಂದು ಹೇಳಿಕೆ ನೀಡಿದ್ದಾರೆ.

ಆದರೆ, ಯಾವ ಬ್ಯಾಂಕು ಎಂದು ಕೇಳಿದಾಗ ಅವರು, ಓಟು ಬ್ಯಾಂಕ್ ಎಂದು ಉತ್ತರ ನೀಡಿ ತತ್ತರಿಸಿದ್ದಾರೆ.

ಅಂತೆಯೇ, ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಬಳಸಿ ಮಾನವರನ್ನು ಕೊಲ್ಲುವವರು ಮಾನವರಲ್ಲ ಎಂಬ ವಾಕ್ಯವನ್ನು ತನಿಖೆಗೊಳಪಡಿಸಿದಾಗ, ಇದಕ್ಕೆ 'ಹೌದು' ಎನ್ನಬೇಕೆನಿಸುತ್ತದೆ. ಯಾಕೆಂದರೆ, ಮಾನವರಿಗೆ ಕೈಕಾಲುಗಳಿವೆ. ಅವರಿಗೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳೇಕೆ ಬೇಕು. ಹಸ್ತಚಾಲಿತ ಶಸ್ತ್ರಾಸ್ತ್ರಗಳು ಮಾತ್ರವೇ ಸಾಕಲ್ಲವೇ ಎಂಬ ಪ್ರಶ್ನೆಯು ಪ್ರಶ್ನೆಗೆ ಉತ್ತರವಾಗಿ ದೊರೆತಿರುವುದನ್ನು ಬೊಗಳೂರು ಬ್ಯುರೋ ಕೂಲಂಕಷವಾಗಿ ಪತ್ತೆ ಹಚ್ಚಿದೆ.

Monday, February 02, 2009

ನಿದ್ರೇವೇಗೌಡರು ನಿಧಾನಿಯಾಗಿದ್ದೇಕೆ?: ಸಂಶೋಧನೆ

(ಬೊಗಳೂರು ದಾರಿತಪ್ಪಿದ ವಿಶ್ಲೇಷಣೆ ಬ್ಯುರೋದಿಂದ)
ಬೊಗಳೂರು, ಫೆ.2- ನಿಧಾನಿಯಾಗುವುದಕ್ಕೂ ಮುಂಚಿನಿಂದಲೂ ಮಾಜಿ ನಿಧಾನಿ ಎಂದು ಕರೆಸಿಕೊಳ್ಳುತ್ತಿದ್ದವರೆನ್ನಲಾಗುತ್ತಿರುವ ನಿದ್ರೇವೇಗೌಡರು ಪ್ರಧಾನಿಯಾಗಿದ್ದೇಕೆ ಎಂಬುದನ್ನು ಬೊಗಳೂರು ಬ್ಯುರೋ ತನ್ನ ವಿಶೇಷ ಚಾಣಾಕ್ಷ ಮತ್ತು ಚಾಣಕ್ಯರೂಪಿ ಏಕಸದಸ್ಯ ವರದ್ದಿಗಾರರ ಮಂಡಳಿಯ ಮೂಲಕ ಪತ್ತೆ ಹಚ್ಚಿಸಿದೆ.

ಮಾಡಲು ಬೇರೆ ಕೆಲಸವಿಲ್ಲದ್ದರಿಂದಲೇ ಪ್ರಧಾನಿಯಾಗಬೇಕಾಯಿತು ಎಂದು ಅವರು ಇಲ್ಲಿ ಉವಾಚಿಸಿರುವುದು ಹಲವರು ಹುಬ್ಬುಗಳು (ತಲೆಗಿಂತಲೂ) ಮೇಲೇರಲು ಕಾರಣವಾಗಿದ್ದರೂ, ಅದರೊಳಗಿನ ಸತ್ಯಾಂಶವನ್ನು ಯಾರು ಕೂಡ ನಿರಾಕರಿಸಲು ಅಸಾಧ್ಯವಾಗಿದೆ ಎಂದು ನಮ್ಮ ಸಂಚೋದನಾ ಬ್ಯುರೋ ಕಂಡುಕೊಂಡಿದೆ.

ಜೂನಿಯರ್ ಎಂಜಿನಿಯರ್ ಆಗಲು ಯಾರ್ಯಾರದೋ ಕೈಕಾಲು ಹಿಡಿದು ಇನ್‌ಫ್ಲುಯೆನ್ಸ್ ಮಾಡಿಸಿದ್ದು ಅವರೊಳಗೊಬ್ಬ ಧೀಮಂತ ರಾಜಕಾರಣಿಯಿದ್ದಾನೆ ಎಂಬುದರ ಸೂಚನೆಯಾಗಿತ್ತು ಎಂದು ಬೊ.ರ. ಬ್ಯುರೋ ವಿಶ್ಲೇಷಿಸಿದೆ.

ಆದರೆ ಅವರ ಬಾಯಿಯಿಂದ ಉದುರಿದ ಕೆಲವು ಸತ್ಯಗಳನ್ನು ಯಾರಿಗೂ ಕೂಡ ಅರಗಿಸಿಕೊಳ್ಳಲಾಗುತ್ತಿಲ್ಲ. ಪಂಚೆಯನ್ನೇ ಉಲ್ಟಾಪಲ್ಟಾ ಉಡುತ್ತಿದ್ದ ಅವರು ರಾಜಕೀಯದಲ್ಲೂ ಉಲ್ಟಾಪಲ್ಟಾ ಸೂತ್ರವನ್ನೇ ಅನುಸರಿಸಿದ್ದರಲ್ಲಿ ಯಾವುದೇ ತಪ್ಪಿಲ್ಲ. ಒಂದು ಕಾಲದಲ್ಲಿ ಅಂತಹ ಸ್ಥಿತಿಯಲ್ಲಿದ್ದ ಅವರು ಈಗಲೂ ಅದನ್ನು ಅನುಸರಿಸಿಕೊಂಡು ಹೋಗುತ್ತಿರುವುದು ಅವರೊಳಗೊಬ್ಬ ಧೀಮಂತ ನಾಯಕನಿದ್ದಾನೆ ಎಂಬುದರ ಸಂಕೇತ ಎಂದು ಬೊಗಳೂರಿನ ಸೊಂಪಾದಕರುಗಳ ಬ್ಯುರೋ ತನ್ನ ಸೊಂಪಾದ-ವಿಷಾದಕೀಯದಲ್ಲಿ ಬರೆದಿದೆ.

ಮರಕ್ಕೆ ವಯಸ್ಸಾದರೂ ಮರ್ಕಟ ಅಲ್ಲಲ್ಲ... ಹುಳಿ ಮುಪ್ಪೇ ಎಂದು ಸ್ವತಃ ಅವರೇ ಪ್ರಶ್ನಿಸಿಕೊಂಡಿರುವುದು ಅವರೊಳಗಿನ ಛಲದ ಸೂಚನೆ. 
ಮತ್ತೆ ದಾರಿತಪ್ಪಿದ ಮಗನನ್ನು... ಅಲ್ಲಲ್ಲ... ದಾರಿ ತಪ್ಪಿದ ವ್ಯವಸ್ಥೆಯನ್ನು ಸರಿಪಡಿಸಲು ಯಾವ ರಾಜಕಾರಣಿಯಿಂದಲೂ ಸಾಧ್ಯವಿಲ್ಲ, ಸಾಧ್ಯವಿದ್ದದ್ದೇ ಆದರೆ, ಅವರ ಕಾಲಿಗೆ ಬಿದ್ದು ನಮಸ್ಕರಿಸುತ್ತೇನೆ ಎಂದು ಅವರು ಯಾವುದೇ ಎಗ್ಗಿಲ್ಲದೆ ನುಡಿದಿರುವುದು, ತಾಕತ್ತಿದ್ದರೆ ತಮ್ಮ ದಾರಿ ತಪ್ಪಿದ ಮಗ... ಅಲ್ಲಲ್ಲ... ವ್ಯವಸ್ಥೆಯನ್ನು ಸರಿಪಡಿಸಿ ಎಂದು ವಿರೋಧಪಕ್ಷಗಳಿಗೆ ನೀಡಿದ ಸವಾಲು ಎಂದೂ ಪರಿಗಣಿಸಲಾಗಿದೆ.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...