Tuesday, March 31, 2009

Break: ಬೊಗಳೋದುಗರಿಗೆ ಆಘಾತಕಾರಿ ಸುದ್ದಿ!

ಜಗತ್ತಿನಾದ್ಯಂತ ಅಂತರಜಾಲ ಲೋಕದಲ್ಲಿ ನಕ್ಷತ್ರಗಳಂತೆ ಹೊಳೆಯುತ್ತಿರುವ (ಕೆಲವು ಮಿಂಚಿ ಮರೆಯಾಗಿವೆ) ಕನ್ನಡ ಬ್ಲಾಗುಗಳ ಒಡೆಯರು ಮತ್ತು ಅವರನ್ನು ಪ್ರೋತ್ಸಾಹಿಸುತ್ತಲೇ ಇರುವ ಬ್ಲಾಗೋದುಗರಿಗೆ ಏಪ್ರಿಲ್ 1ರ ಮೂರ್ಖರ ದಿನದಂದು ಪರಮಾಘಾತಕಾರಿ ವ-ರದ್ದಿಯೊಂದು ಕಾದಿದೆ. ನಿಮ್ಮ ಪ್ರತಿಗಳನ್ನು ಬ್ಲ್ಯಾಕಿನಲ್ಲಿ ದುಪ್ಪಟ್ಟು, ನೂರ್ಪಟ್ಟು ಹಣಕೊಟ್ಟು ಈಗಲೇ ಕಾಯ್ದಿರಿಸಿಕೊಳ್ಳಿ. ಪ್ರತಿಗಳು ಸಿಕ್ಕದವರು ಕೂಡ ನಿರಾಶರಾಗಬೇಕಿಲ್ಲ. ಅವರಿಗೆಲ್ಲ ಉಚಿತವಾಗಿ ನೀಡಲಾಗುತ್ತದೆ. ಯಾಕೆಂದರೆ ಇದು ಮತಾಂತರಕ್ಕೆ ಸಂಬಂಧಿಸಿದ ವಿಷಯ!

ಪ್ರತಿಗಳನ್ನು ನಿಮ್ಮ ಮನೆ ಬಾಗಿಲಿಗೇ ತಲುಪಿಸಲಾಗುತ್ತದೆ. ಅದು ತಲುಪದಿದ್ದರೆ (ತಲುಪುವುದಿಲ್ಲ ಅಂತ ಶೇ.100ರಷ್ಟು ಗ್ಯಾರಂಟಿ ಇದ್ದವರು) ನಮ್ಮ ಮನೆ ಬಾಗಿಲಿಗೆ ಬಂದರಾಯಿತು...

ಏಪ್ರಿಲ್ 1ರ ನಿರೀಕ್ಷೆಯಲ್ಲಿ...
- ಸೊಂಪಾದಕರು
ಮತ್ತು ಬೊಗಳೆ ರಗಳೆ ಏಕಸದಸ್ಯ ಬ್ಯುರೋದ ಸರ್ವ ಪದ-ಧಿಕ್ಕಾರಿಗಳು ಮತ್ತು ಸದಸ್ಯರು

Monday, March 30, 2009

Vote ಹಕ್ಕು ಕಿತ್ತುಕೊಂಡಿದ್ದಕ್ಕೆ ನಕಲಿ ಮತದಾರರ ಆಕ್ರೋಶ

(ಬೊಗಳೂರು ನಕಲಿ ಮತದಾರ ಬ್ಯುರೋದಿಂದ)
ಬೊಗಳೂರು, ಮಾ.30- ದೇಶದಲ್ಲಿ ಚುನಾವಣೆಯ ಕಾವು ಏರತೊಡಗಿ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿ ಬಿಡುಡೆಗೆ ತಡವರಿಸುತ್ತಿರುವಂತೆಯೇ, ಚುನಾವಣಾ ಆಯೋಗವು ಅಕ್ರಮ ಮತದಾರರು, ನಕಲಿ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿರುವ ಅಕ್ರಮ ಮತದಾರರು, ನಕಲಿ ಮತದಾರರ ಸಂಘವೊಂದನ್ನು ಕಟ್ಟಿಕೊಂಡು, ತಮಗೂ ಮತದಾನದ ಹಕ್ಕು ನೀಡಬೇಕೆಂದು ಒತ್ತಾಯಿಸತೊಡಗಿದ್ದಾರೆ.

ಇಷ್ಟಕ್ಕೆಲ್ಲಾ ಪ್ರಧಾನ ಕಾರಣವಾಗಿರುವುದೆಂದರೆ, ದೇಶದ ಜನಸಂಖ್ಯೆ 100 ಕೋಟಿ ದಾಟಿ, ಹೆಚ್ಚಿನ ಮಕ್ಕಳು ಬಲು ಬೇಗನೇ ಮತದಾನಕ್ಕೆ ಪ್ರಾಪ್ತ ವಯಸ್ಕರಾಗುತ್ತಿದ್ದರೂ, ತಮಿಳುಕಾಡಿನಲ್ಲಿ ಮತದಾರರ ಸಂಖ್ಯೆಯಲ್ಲಿ ಭಾರಿ ಇಳಿಮುಖವಾಗಿದೆ. ಅಂದರೆ ಈ ಬಾರಿ 53 ಲಕ್ಷ ಮತದಾರರು ಪಟ್ಟಿಯಿಂದ ಹೊರಕ್ಕೆಸೆಯಲ್ಪಟ್ಟಿದ್ದಾರೆ ಎಂಬುದು ನಕಲಿ ಮತದಾರರ ಆರೋಪ.

53 ಲಕ್ಷ ನಕಲಿ ಮತದಾರರು ಇದೀಗ ನಿರುದ್ಯೋಗಿಗಳಾಗಿದ್ದು, ಓಟು ಹಾಕಲು ಇದುವರೆಗೆ ಹಣವಾದರೂ ಸಿಗುತ್ತಿತ್ತು. ಈ ಆರ್ಥಿಕ ಹಿಂಜರಿತದ ಸ್ಥಿತಿಯಲ್ಲಿ ಇನ್ನುಮುಂದೆ ಜೀವನ ನಡೆಸುವುದೇ ದುಸ್ತರವಾಗಿದೆ ಎಂದಿರುವ ನಕಲಿ ಮತದಾರರ ಸಂಘದ ಅಧ್ಯಕ್ಷ ನಕಲೇಶ್ ಅವರು, ಈ ಬಗ್ಗೆ ಸುಪ್ರೀಂಕೋರ್ಟಿನ ಮೊರೆ ಹೋಗುವುದಾಗಿ ಹೇಳಿದ್ದಾರೆ.

ತಾವು ಕೂಡ ಈ ದೇಶದಲ್ಲೇ ಹುಟ್ಟಿದವರು. ತಲೆ ತಲಾಂತರದಿಂದಲೂ ತಮಗೆ ಮತ ಚಲಾಯಿಸುವುದೇ ಉದ್ಯೋಗವಾಗಿತ್ತು. ವಾಸ್ತವವಾಗಿ ನಾವು ಹುಟ್ಟುವ ಮೊದಲೇ ಮತ ಚಲಾಯಿಸಲು ಆರಂಭಿಸಿದ್ದೆವು ಎಂದಿರುವ ಅವರು, ಇದೀಗ ತಮ್ಮ ಜನ್ಮಜಾತ ಹಕ್ಕನ್ನು ಕಿತ್ತುಕೊಳ್ಳಲಾಗಿದೆ ಎಂದು ಅಲವತ್ತುಕೊಂಡಿದ್ದಾರೆ.

ನಮ್ಮ ಸಮುದಾಯದಲ್ಲಿ, ಇನ್ನೂ ಹುಟ್ಟದವರು, ಈಗಾಗಲೇ ಜಾರಕಾರಣಿಗಳ ಭರವಸೆಯ ಮಹಾಪೂರದಲ್ಲಿ ಕೊಚ್ಚಿಹೋಗಿ ಪರಲೋಕಕ್ಕೆ ಯಾತ್ರೆ ಬೆಳೆಸಿದವರು, ಕಳ್ಳರು, ಸುಳ್ಳರು, ಮಳ್ಳರು, ಅಧಮರು, ಅತ್ಯಾಚಾರಿಗಳು, ಕ್ರಿಮಿನಲ್‌ಗಳು... ಹೀಗೆ ವಿವಿಧ ಪಂಗಡಗಳಿವೆ. ಅಸಲಿ ಮತದಾರರಿಗಿಂತ ನಮ್ಮ ಸಂಖ್ಯೆ ಕಡಿಮೆ ಇದೆ (ಕೆಲವು ಏರಿಯಾಗಳನ್ನು ಹೊರತುಪಡಿಸಿ). ಹೀಗಾಗಿ ನಮ್ಮನ್ನು ಕೂಡ ಅಲ್ಪಸಂಖ್ಯಾತರು ಎಂದು ಪರಿಗಣಿಸಿ ನಮಗೂ ಮೀಸಲಾತಿ ಕಲ್ಪಿಸುವಂತೆ ಅಲ್ಪಸಂಖ್ಯಾತರ ರಕ್ಷಣೆ ಮಾಡುವ ಏಕೈಕ ಪಕ್ಷವಾಗಿರುವ ಕಾಂಗ್ರೆಸ್‌ನ ಮೊರೆ ಹೋಗುವುದಾಗಿ ನಕಲೇಶ್ ಸ್ಪಷ್ಟಪಡಿಸಿದ್ದಾರೆ.

ಇದಲ್ಲದೆ, ವರ್ಷ ವರ್ಷ ಮತದಾರರ ಸಂಖ್ಯೆ ಹೆಚ್ಚಾಗುತ್ತಿರಬೇಕು. ಆದರೆ ಈ ಬಾರಿ ಮತದಾರರ ಸಂಖ್ಯೆ 53 ಲಕ್ಷದಷ್ಟು ಕಡಿಮೆಯಾಗುವುದೆಂದರೆ ಅದು ಪ್ರಜಾಪ್ರಭುತ್ವಕ್ಕೇ ಕಳಂಕ ಎಂದೂ ಅವರು ಎತ್ತಿ ಎತ್ತಿ ತೋರಿಸಿದ್ದಾರೆ.

Wednesday, March 25, 2009

Nano: ನ್ಯಾನೋ ತಂದ ನಾನಾ ಸವಾಲುಗಳು

(ಬೊಗಳೂರು ನಾನಲ್ಲ ಬ್ಯುರೋದಿಂದ)
ಬೊಗಳೂರು, ಮಾ.25- ಲಕ್ಷ ರೂ. ಕಾರು ಬಂದಿರುವುದರಿಂದಾಗಿ ದ್ವಿಚಕ್ರ ಸವಾರರು ಮತ್ತು ಹಳೆಯ ಕಾರು ಓಡಿಸುತ್ತಿರುವವರೆಲ್ಲರೂ ಇದೀಗ ತಮ್ಮ ತಮ್ಮ ವಾಹನಗಳಿಗೆ ಟಾಟಾ ಹೇಳಿ, ನ್ಯಾನೋದ ಸೌಂದರ್ಯಕ್ಕೆ ಮರುಳಾಗಿದ್ದಾರೆ. ಈ ಲಕ್ಷ ರೂ. ಕಾರು ಯಾವ ರೀತಿ ಭಾರತೀಯ ಮತದಾರರ ಮೇಲೆ, ಆಕಾಂಕ್ಷಿಗಳ ಮೇಲೆ ಪ್ರಭಾವ ಬೀರಿದೆ ಎಂಬುದಕ್ಕಾಗಿ ಬೊ.ರ. ಬ್ಯುರೋ ಒಂದು ಸುತ್ತುನೋಟ ಹರಿಸಿದಾಗ, ಹಲವು ಹೇಳಬಾರದ ಸಂಗತಿಗಳು ಪತ್ತೆಯಾದವು.

ಈ ಕಾರಣದಿಂದಾಗಿ, ಎರಡನೇ ಕೈಯ (ಸೆಕೆಂಡ್ ಹ್ಯಾಂಡ್) ಮಾರುಕಟ್ಟೆಯಲ್ಲಿ ತೀವ್ರ ಏರುಪೇರಾಗಿದೆ ಎಂದು ತಿಳಿದುಬಂದಿದೆ. ಹೊಸ ವಾಹನ ಖರೀದಿಸಿದ ತಕ್ಷಣ ಅದನ್ನು ಸೆಕೆಂಡ್ ಹ್ಯಾಂಡ್ ಎಂದು ಮಾರಾಟ ಮಾಡುವ ಶೋಕಿಲಾಲರ ಸಂಖ್ಯೆಯೂ ಹೆಚ್ಚಿರುವುದರಿಂದ, ಎರಡನೇ ಹಸ್ತದ ಮಾರುಕಟ್ಟೆ ದಿಕ್ಕೆಟ್ಟಿದೆ.

ಹೀಗಾಗಿ, ಸೆಕೆಂಡ್ ಹ್ಯಾಂಡ್ ವಾಹನಗಳ ದರ ಏರಿಸಬೇಕು ಮತ್ತು ನ್ಯಾನೋ ಸೆಕೆಂಡ್ ಹ್ಯಾಂಡ್ ಕಾರುಗಳ ದರವನ್ನು ಕೇವಲ ಕೈಬೆರಳೆಣಿಕೆಯಷ್ಟು ರೂಪಾಯಿಗೆ ಏರಿಸಬೇಕು ಮುಂತಾದ ಬೇಡಿಕೆಗಳೊಂದಿಗೆ, ಮಾರುಕಟ್ಟೆ ಮಂದಿ ಪ್ರತಿಭಟನೆ ನಡೆಸಲು ಸಜ್ಜಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮತಸಮರದಲ್ಲಿಯೂ ನ್ಯಾನೋದ ನಾನಾ ಪ್ರಭಾವ
ಹೆಣ್ಣು ಮಕ್ಕಳಿಗೆ ಮೊಬೈಲ್ ಕೊಡುತ್ತೇನೆ ಎಂದು ಆಡ್ವಾಣಿ ಈಗಾಗಲೇ ಘೋಷಿಸಿರುವ ಹಿನ್ನೆಲೆಯಲ್ಲಿ, ಅದರ ಜೊತೆಗೆ ನ್ಯಾನೋ ಕೂಡ ಕೊಟ್ಟರೆ ಮಾತ್ರವೇ ಓಟು ಎಂದು ಮತದಾರರು ಪಟ್ಟು ಹಿಡಿದಿರುವುದಾಗಿ ವರದಿಯಾಗಿದೆ.

ಈ ಬೇಡಿಕೆಗಳು ಬಂದಿರುವ ಹಿನ್ನೆಲೆಯಲ್ಲಿ, ಓಟಿಗೆ ನಿಲ್ಲುವವರು ಕಂಗಾಲಾಗಿದ್ದು, ಟಾಟಾದ ನ್ಯಾನೋಗೆ ಹಿಡಿಶಾಪ ಹಾಕುತ್ತಿದ್ದಾರೆಂದು ಮೂಲಗಳು ಹೇಳಿಲ್ಲ. ಆದರೆ, ಚುನಾವಣಾ ಪ್ರಚಾರ ಭಾಷಣಗಳಲ್ಲಿ ಮಾತ್ರ, ದೇಶದ ಜನತೆಗೆ ತಿಂದುಂಡು ಸುಖವಾಗಿರಲು ಏರುತ್ತಿರುವ ಆಹಾರದ ಬೆಲೆಗಳು ಬಿಡದಿದ್ದರೂ, 'ಆಸ್ಕರ್ ತಂದುಕೊಟ್ಟದ್ದು ನಾವು, ಟ್ವೆಂಟಿ-20 ವಿಶ್ವಕಪ್ ತಂದಿದ್ದು ಕೊಟ್ಟದ್ದು ನಾವು' ಎಂಬಿತ್ಯಾದಿ ಬೊಗಳೆ ಬಿಡುತ್ತಿದ್ದವರು ಇದೀಗ "ದೇಶಕ್ಕೆ ನ್ಯಾನೋ ಕೊಟ್ಟದ್ದು ನಾವು" ಎಂದು ಸದ್ದಿಲ್ಲದೆ ಪ್ರಚಾರ ಮಾಡತೊಡಗಿದ್ದಾರೆ.

ಸದ್ದಿಲ್ಲದ ಪ್ರಚಾರ ಯಾಕೆಂದರೆ, ಜೋರಾಗಿ ಪ್ರಚಾರ ಮಾಡಿದರೆ, ನಿಮ್ಮ ಚುನಾವಣಾ ಪ್ರಣಾಳಿಕೆಯೊಳಗೆ "ಬಡವರಿಗೆ ಉಚಿತವಾಗಿ ನ್ಯಾನೋ ನೀಡಿ" ಎಂಬ ಅಂಶವನ್ನೂ ಸೇರಿಸಿಬಿಡಿ ಎಂಬ ಕೂಗು ಹೆಚ್ಚು ಜೋರಾಗಿ ಕೇಳಿದರೆ ಎಂಬ ಭೀತಿ!

ಜನ ಸಾಮಾನ್ಯರ ಕನಸಿನಲ್ಲಿಯೂ ನ್ಯಾನೋ
ಇತ್ತಕಡೆ, ಇದು ಜನ ಸಾಮಾನ್ಯರ ಕಾರು ಎಂದು ರತನ್ ಟಾಟಾ ಘೋಷಿಸಿದಂದಿನಿಂದ ನಿದ್ದೆ ಮಾಡದೆ, ಹಗಲಲ್ಲೂ, ರಾತ್ರಿಯಲ್ಲೂ ನ್ಯಾನೋ ನ್ಯಾನೋ ಕಾರುಗಳ ಮಹಾಪೂರವನ್ನೇ ಕನಸಿನಲ್ಲಿ ಕಾಣುತ್ತಿದ್ದ ಮಂದಿಗೆ ದಿಢೀರ್ ಅಜ್ಞಾನೋದಯವಾಗಿದೆ. ಒಂದು ಲಕ್ಷ ಅಂತ ಹೇಳಿದ್ದರೂ, ಆ ಟ್ಯಾಕ್ಸ್, ಈ ಟ್ಯಾಕ್ಸ್ ಅಂತ ಒಂದಿಪ್ಪತ್ತು ಮೂವತ್ತು ಸಾವಿರ ಹೆಚ್ಚೇ ಕೊಡಬೇಕಾಗುತ್ತದೆ. ಅದರ ಜೊತೆಗೆ, ಕಾರಿಗೂ ಪೆಟ್ರೋಲ್ ಸುರಿಯಬೇಕು, ತಾವು ಬದುಕಬೇಕಾದರೆ ಊಟವನ್ನೂ ಮಾಡಬೇಕು ಎಂಬಂತಾಗಿರುವುದರಿಂದ, ಕಾರು ನಿಲ್ಲಿಸಲು ಒಂದಷ್ಟು ಜಾಗ ಮಾತ್ರ ಉಳಿಸಿಕೊಂಡು, ಮನೆ ಮಠ ಮಾರಿದ ಹಲವಾರು ಮಂದಿ, ನ್ಯಾನೋದತ್ತ ಚಿತ್ತ ನೆಟ್ಟಿದ್ದಾರೆ ಎಂದು ದುರ್ಉದ್ದೇಶಪೂರಕವಾಗಿ ವರದಿ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ, ತಾವೂ ನ್ಯಾನೋ ಕೊಳ್ಳಲಿರುವುದರಿಂದ ಅಥವಾ ತಮಗೆ ಸಿಗಲಿರುವುದರಿಂದ, ಅದು ಸಣ್ಣ ಕಾರು. ಹೀಗಾಗಿ ಅದಕ್ಕೆ ಪಾರ್ಕಿಂಗ್ ಶುಲ್ಕದಲ್ಲಿಯೂ ಡಿಸ್ಕೌಂಟ್ ನೀಡಬೇಕು ಎಂದು ಭಾವೀ ನ್ಯಾನೋ ಒಡೆಯರು ಆಗ್ರಹಿಸಲು ನಿರ್ಧರಿಸಿದ್ದಾರೆ.

ರಾಜಕಾರಣಿಗಳು ಹೇಗೂ ತಾವು ಇರೋ ಸ್ಲಮ್ಮುಗಳಲ್ಲಿರುವ ಪೈಪ್‌ಗಳ ಬಾಗಿಲಿಗೆ ಬಂದು, ಮನೆ ಕೊಡುತ್ತೇವೆ, ನಿವೇಶನ ಕೊಡುತ್ತೇವೆ ಎಂದೆಲ್ಲಾ ಹೇಳುತ್ತಾರೆ. ಈ ಬಾರಿ ನಿವೇಶನ ಬೇಡ, ನ್ಯಾನೋ ಕಾರು ನಿಲ್ಲಿಸಲು ಮಾತ್ರ ಪಾರ್ಕಿಂಗ್ ಸ್ಥಳ ಕೊಟ್ಟರೆ ಸಾಕು. ಅದರೊಳಗೇ ಸುಖವಾಗಿರುತ್ತೇವೆ ಎಂದು ಅಖಿಲ ಭಾರತ ಪೈಪು ನಿವಾಸಿಗಳ ಸಂಘವು ಆಗ್ರಹಿಸಲಾರಂಭಿಸಿದೆ.

ಇವೆಲ್ಲದರ ಮಧ್ಯೆ, ಟ್ರಾಫಿಕ್ಕೂ ಕಿರಿಕ್ಕೂ ಅನುಭವಿಸುತ್ತಿರುವ ಸಿಟಿ ಮಂದಿ, ನ್ಯಾನೋ ಕಾರಿಗೆ ಪ್ರತ್ಯೇಕ ಮಾರ್ಗ ನಿರ್ಮಿಸಬೇಕು, ಸಣ್ಣದಾಗಿರುವುದರಿಂದ ಫುಟ್ ಪಾತ್ ಮೇಲೂ ಅದಕ್ಕೆ ಮಾರ್ಗ ಮಾಡಬಹುದು ಎಂಬ ಸಲಹೆ ನೀಡಿದ್ದಾರೆ.

ಇಷ್ಟೇಯಾ ಎಂದು ಆಲೋಚಿಸುತ್ತಿರುವಾಗ, ಮತ್ತೊಂದು ಸುದ್ದಿ ಬಂದಿದೆ. ನ್ಯಾನೋ ಬಿಡುಗಡೆ ಮಾಡಿದ್ದೇ ಚುನಾವಣೆ ಲಾಭಕ್ಕೋಸ್ಕರ ಎಂದು ಇಲ್ಲಿ ವರದಿಯಾಗಿದ್ದು, ಇದು ಒಂದು ಧರ್ಮೀಯರ ಭಾವನೆಗಳನ್ನು ಕೆರಳಿಸುವುದರಿಂದ ಅದನ್ನು ನಿಷೇಧಿಸಬೇಕು ಎಂಬ ಒತ್ತಾಯವೂ ಶೀಘ್ರದಲ್ಲೇ ಕೇಳಿಬರುವ ಸಾಧ್ಯತೆಗಳಿವೆ.

Monday, March 23, 2009

ಭಗ್ನಹೃದಯಿಗಳ ವರದಾನ - fake ಹೃದಯ!

(ಬೊಗಳೂರು ಒಡೆದ ಹೃದಯ ಬ್ಯುರೋದಿಂದ)
ಬೊಗಳೂರು, ಮಾ.23- ಇತ್ತೀಚಿನ ದಿನಗಳಲ್ಲಿ ಹೃದಯದ ತುಡಿತ ಹೆಚ್ಚಾಗುವುದು ಇದರಿಂದಾಗಿ ಹೃದಯದ ಬಡಿತವೂ ಹೆಚ್ಚಾಗಿ ಹೃದಯ ಒಡೆದು ಹೋಗುವ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಯಾವಾಗಲೂ 'ಇದು ಹೃದಯ ಹೃದಯಗಳಾ ವಿಷಯ' ಎಂದು ತೇಲುತ್ತಿರುವವರಿಗೆ ಹೊಸದಾದ ಸುದ್ದಿಯನ್ನು ಬೊಗಳೂರು ಬ್ಯುರೋ ತಂದುಕೊಡುತ್ತಿದೆ.

ಪ್ರೇಮಿ ಕೈಕೊಟ್ಟನೇ? ಪ್ರೇಯಸಿ ಓಡಿಹೋದಳೇ? ಹೃದಯ ಒಡೆದು ಚೂರು ಚೂರಾಯಿತೇ? ಇನ್ನೇನೂ ಹೆದರಬೇಕಾಗಿಲ್ಲ. ಲಕ್ಷ ರೂಪಾಯಿ ಕೊಟ್ಟರೆ ಹೊಚ್ಚಹೊಸ ಹೃದಯವನ್ನೇ ಜೇಬಿಗೆ (ಜೇಬಿನ ಹಿಂಭಾಗದಲ್ಲಿ) ಒಳಗಿಳಿಸಿಕೊಳ್ಳಬಹುದು!

ಇಂಥದ್ದೊಂದು ಸಂಚೋದನೆ ಮಾಡಿರುವ ಖರಗ್‌ಪುರದ ಐಐಟಿ ವಿಜ್ಞಾನಿಗಳು, "ಲಕ್ಷ ರೂ. ಕೊಂಡರೆ ನ್ಯಾನೋ ಕಾರು ಕೊಡುತ್ತೇವೆ" ಎಂಬ ಭರವಸೆ ನೀಡಿರುವ ಟಾಟಾದವರಿಂದ, ಸೂಕ್ತ ಕಾಲದಲ್ಲಿ ಕಾರು ಲಭಿಸದೆ ನಿರಾಶರಾದ ಕಾರು ಪ್ರೇಮಿಗಳಿಗೂ "ಲಕ್ಷ ರೂ.ನಲ್ಲಿ ಹೊಸ ಹೃದಯವನ್ನೇ ಕೊಡುತ್ತೇವೆ" ಎಂದು ಹೇಳತೊಡಗಿದ್ದಾರೆ.

ಬೇರೆಯವರು ನಿಮ್ಮ ಜೀವನಕ್ಕೆ ಕೈಕೊಟ್ಟು ಟಾಟಾ ಮಾಡಿ ಹೋದರೆ ಚಿಂತಿಸಬೇಡಿ. ಅಷ್ಟೇ ವೆಚ್ಚದಲ್ಲಿ ನಾವು ಹೃದಯ ಕೊಡಲು ಸಿದ್ಧ ಎಂದು ಈ ವಿಜ್ಞಾನಿಗಳು ಘೋಷಣೆ ಹೊರಡಿಸಿರುವುದು ವಿಶ್ವಾದ್ಯಂತ ಕಾಲೇಜು ಪರಿಸರಗಳಲ್ಲಿ ವಿಶೇಷವಾಗಿ ಭಾರೀ ಪ್ರಭಾವ ಬೀರಿದೆ.

ಆದರೆ ಇದರ ಋಣಾತ್ಮಕ ಪರಿಣಾಮವೊಂದು ಕೂಡ ವ್ಯಕ್ತವಾಗತೊಡಗಿರುವುದು ವಿಜ್ಞಾನಿಗಳಿಗೆ ಬಿಡಿ, ಬೊಗಳೆರಗಳೆ ಬ್ಯುರೋದಲ್ಲಿರುವಂತಹ ಅಜ್ಞಾನಿಗಳಿಗೂ ಆತಂಕಕ್ಕೆ ಕಾರಣವಾಗಿದೆ. ಹೃದಯ ಒಡೆದು ಛಿದ್ರಛಿದ್ರವಾದರೂ ಪರವಾಗಿಲ್ಲ, ಸಾಕಷ್ಟು ಬಾರಿ ಚೂರು ಚೂರಾಗಿಸಿಕೊಳ್ಳಲು ಸಿದ್ಧ, ಹೇಗಿದ್ದರೂ ಲಕ್ಷ ರೂಪಾಯಿ ಹೃದಯವಿದೆಯಲ್ಲ ಎಂದು ಯುವಜನತೆಯೇನಾದರೂ ಮುಂದಡಿಯಿಟ್ಟರೆ... ಎಂಬುದೇ ಆತಂಕಕ್ಕೆ ಕಾರಣ.

ಇತ್ತೀಚಿನ ದಿನಗಳಲ್ಲಿ 'ನಿನ್ನದು ಅದೆಂಥ ಕಲ್ಲು ಹೃದಯ, ನನ್ನ ಭಾವನೆಗಳನ್ನೇ ಅರ್ಥ ಮಾಡಿಕೊಳ್ಳುತ್ತಿಲ್ಲ' ಎಂದು ಸಿಡಿಮಿಡಿಗುಟ್ಟುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೀಗಾಗಿ ಕಲ್ಲು ಹೃದಯಿ ಅಂತ ಕರೆಸಿಕೊಳ್ಳುವ ಬದಲು ಮತ್ತು ಭಗ್ನ ಹೃದಯಿಯಾಗುವುದನ್ನು ತಪ್ಪಿಸಿಕೊಳ್ಳಲು, ಈ ತಂತ್ರಜ್ಞಾನಹೃದಯಿಯಾಗುವುದು ಲೇಸು ಎಂದು ಯುವಜನಾಂಗ ನಿರ್ಧರಿಸಿರುವುದಾಗಿ ಅಖಿಲ ಭಾರತ ಭಗ್ನ ಪ್ರೇಮಿಗಳ ಸಂಘ, ಅಖಿಲ ಭಾರತ ಭಗ್ನ ಹೃದಯಿಗಳ ಒಕ್ಕೂಟ ಮತ್ತು ಅಖಿಲ ಭಾರತ ಚಿರ ವಿರಹಿಗಳ ಸಂಘದ ಪದಧಿಕ್ಕಾರಿಗಳು ಬೊಗಳೂರಿಗೆ ಮುತ್ತಿಗೆ ಹಾಕಿ ಸಂದರ್ಶನ ನೀಡಿ ಹೇಳಿಕೆ ನೀಡಿದ್ದಾರೆ.

ಈ ಕೃತಕ ಹೃದಯ ಸೃಷ್ಟಿಯಾಗಿದ್ದು ಐಐಟಿ ಕ್ಯಾಂಪಸ್ಸಿನಲ್ಲೇ ಆಗಿರುವುದರಿಂದ, ಖರಗ್‌ಪುರದ ಕಾಲೇಜಿನಲ್ಲಿ ಮೌಲ್ಯಯುತವಾದ ಸಾಕಷ್ಟು ಪ್ರೇಮ ಕಥಾನಕಗಳು ಘಟಿಸಿದ್ದಿರಬಹುದು ಮತ್ತು ಅದರ ಅವಶೇಷಗಳು, ಪಳೆಯುಳಿಕೆಗಳು ಕೂಡ ದೊರಕಿದ್ದಿರಬಹುದು ಎಂದು ಊಹಿಸಲಾಗಿದೆ.

ಆದರೆ, ಈ ಹೃದಯ ಸಂಚೋದನೆಯ ಹಿಂದೆ ಕೂಡ ಸಾಕಷ್ಟು ನೋವಿನ ಕಥೆಗಳಿವೆ ಎಂದು ಸ್ವತಃ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.

Thursday, March 19, 2009

ಆರ್ಥಿಕ ಕುಸಿತಕ್ಕೆ ಕಾರಣ ಪತ್ತೆ - ಕತ್ತೆ!

(ಬೊಗಳೂರು Unಅರ್ಥ ವ್ಯವಸ್ಥೆ ಬ್ಯುರೋದಿಂದ)
ಬೊಗಳೂರು, ಮಾ.19- ಜಾಗತಿಕ ಆರ್ಥಿಕ ಬಿಕ್ಕಟ್ಟಿಗೆ ಬೊಗಳೆ ರಗಳೆ ಕಾರಣ ಪತ್ತೆ ಹಚ್ಚಿದೆ. ಅಂದರೆ ಬೊಗಳೆ ರಗಳೆಯೇ ಕಾರಣ ಎಂದು ಓದುಗರು unಅರ್ಥ ಮಾಡಿಕೊಳ್ಳಬೇಕಿಲ್ಲ. ಕಾರಣವನ್ನು ಮಾತ್ರವೇ ಬೊಗಳೆ ರಗಳೆ ಶೋಧಿಸಿದ್ದು ಎಂದು ಅರ್ಥೈಸಿಕೊಳ್ಳಬೇಕು ಮತ್ತು ಇದರಲ್ಲಿ ನಮ್ಮ ತಾಣದ ಹೆಡ್ಡರ್‌ನಲ್ಲಿ ಲಾಂಛನವಿದೆ ಎಂಬ ಕಾರಣಕ್ಕೆ ಯಾರೂ ಶಂಕೆಪಡಬೇಕಿಲ್ಲ ಎಂದು ದಯನೀಯವಾಗಿ ಎಚ್ಚರಿಸಲಾಗುತ್ತಿದೆ.

ವಿಷಯ ಇಲ್ಲಿದೆ. ನಮ್ಮನ್ನು ಕತ್ತೆಗಳು, ಗೊಡ್ಡುಗಳು, ಕೆಲಸಕ್ಕೆ ಬಾರದವರು ಎಂಬಿತ್ಯಾದಿಯಾಗಿ ಟೀಕಿಸುತ್ತಾ ಕಾಲ ಕಳೆಯುತ್ತಿರುವವರಿಗೆ ಪಾಠ ಕಲಿಸಲು ನಿರ್ಧರಿಸಿದ್ದ ಗಾರ್ದಭ ಸಂಘವು, ಈ ಬಗ್ಗೆ ಸಂಚು ನಡೆಸಿದ್ದೇ, ಈಗಿನ ಜಾಗತಿಕ ಅರ್ಥವ್ಯವಸ್ಥೆಯ ಅನರ್ಥಕ್ಕೆ ಕಾರಣ.

ಕತ್ತೆಗಳು ಕೂಡ ಈಗ ಶ್ರಮವಹಿಸಿ ದುಡಿಯತೊಡಗಿವೆ. ಹಿಂದಿನಿಂದಲೂ ಅವುಗಳು ದುಡಿಯುತ್ತಿದ್ದರೂ ಈಗೀಗ ಹೆಚ್ಚು ಹೆಚ್ಚು ದುಡಿಯಲಾರಂಭಿಸಿವೆ ಅಥವಾ ದುಡಿಯುವ ಅನಿವಾರ್ಯತೆ ಸೃಷ್ಟಿಯಾಗಿದೆ. ಹೀಗಾಗಿ ಗಾರ್ದಭ ಸಮಾಜವು ಔದ್ಯೋಗಿಕ ಕ್ಷೇತ್ರದಲ್ಲಿ ತನ್ನನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡ ಪರಿಣಾಮ, ಮಾನವ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಾರಂಭಿಸಿದ್ದಾರೆ. ಹೀಗಾಗಿ ದೇಶದಲ್ಲಿ ನಿರುದ್ಯೋಗ ಪ್ರಮಾಣದಲ್ಲಿ (ಗಮನಿಸಿ ಮಾನವರಿಗೆ ಮಾತ್ರ!) ಗಣನೀಯ ಏರಿಕೆಯಾಗುವಲ್ಲಿಯೂ ಈ ಕತ್ತೆಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ನಮ್ಮ Someಚೋದಕರು ಅಭಿಪ್ರಾಯ ಪಟ್ಟಿದ್ದಾರೆ.

ಈ ಸಮಸ್ಯೆ ಅಥವಾ ಧನಾತ್ಮಕ ಬೆಳವಣಿಗೆಯ ಇನ್ನೊಂದು ಆಯಾಮವೂ ಇದೆ. ಚುನಾವಣೆಗಳು ಕಾಲಬುಡದಲ್ಲೇ ಇವೆ. (ಚುನಾವಣೆಗಳು ಇಲ್ಲದಿದ್ದರೂ, ಚುನಾವಣೆಗೆ ನಿಂತವರು ಕಾಲ ಬುಡದಲ್ಲಿ ಬಿದ್ದಿರುತ್ತಾರೆ ಎಂದು ನಾವು ಹೇಳುವುದಿಲ್ಲ). ಓಟು ಕೇಳಲು, ನೋಟು ಹಂಚಲು, ಹೆಂಡ-ಸಾರಾಯಿ ವ್ಯವಸ್ಥೆ ಮಾಡಲು... ಇತ್ಯಾದಿ ಚುನಾವಣಾ ಪ್ರಚಾರ ಕಾರ್ಯಗಳಿಗೆ ಮಾನವ ಜನಾಂಗದ ಜನರ ಕೊರತೆಯಿದೆ. ಹೀಗಾಗಿ ಅವರ ಉದ್ಯೋಗ ಬಿಡಿಸಿ, ಅವರನ್ನು ಈ ಕಾರ್ಯಗಳಿಗೆ ಬಳಸಿಕೊಳ್ಳಲು ವಿವಿಧ ಅರಾಜಕ ಪಕ್ಷಗಳು ದಾಪುಗಾಲಿಟ್ಟು ಕೆಲಸ ಮಾಡಿವೆ. ಈ ಕಾರಣಕ್ಕೆ, ಉದ್ಯೋಗಿಗಳ ಕೊರತೆಯಿಂದಾಗಿ ಉದ್ಯೋಗದಾತರೆಲ್ಲರೂ ಗಾರ್ದಭ ಸಮಾಜದ ಮೊರೆ ಹೋಗಿದ್ದರು.

ಈ ರೀತಿ ಮೊರೆ ಹೋದ ಪ್ರಮಾಣ ಹೆಚ್ಚಾಗಿದ್ದರ ಪರಿಣಾಮವೇ, ದಿಢೀರ್ ಆರ್ಥಿಕ ಕುಸಿತ ಎಂದು ಬೊಗಳೂರಿನ ಏಕಸದಸ್ಯ ಸಂಚೋದನಾ ಬ್ಯುರೋದ ಸರ್ವರೂ ಕತ್ತೆ ಕಾರಣ ಪತ್ತೆ ಹಚ್ಚಿದ್ದಾರೆ.

ಪೂರಕ ಓದಿಗೆ:
ಮಾನವಶಕ್ತಿ ಕೊರತೆ ಬಗ್ಗೆ ಹಿಂದೆಯೇ ಬೊಗಳೆ ನುಡಿದಿದ್ದ ನಮ್ಮ ಪತ್ರಿಕೆ
ಕತ್ತೆಗಳಿಗಾಗಿ ಚುನಾವಣಾ ಪ್ರಣಾಳಿಕೆ
ಅಲ್ಲಲ್ಲಿ ಸ್ಲಮ್, ರಾಷ್ಟ್ರೀಯ ಪ್ರಾಣಿ ಡಾಗ್

Wednesday, March 18, 2009

ಸೊಳ್ಳೆಗಳಿಗೂ ಭಯೋತ್ಪಾದಕರ ಕಾಟ!

(ಬೊಗಳೂರು ಸೊಳ್ಳೆ ದಯಾ ಬ್ಯುರೋದಿಂದ)
ಬೊಗಳೂರು, ಮಾ.18- ಸಂಗೀತಸುಧೆ ಹರಿಸುವ ಮೂಲಕ ನಿದ್ದೆಗೆಡಿಸುವ ಸಾಮರ್ಥ್ಯವುಳ್ಳ ಏಕೈಕ ಸೊಳ್ಳೆಯೊಂದನ್ನು ಕೊಲ್ಲಲು ಲೇಸರ್ ಗನ್ ಸಂಶೋಧಿಸಿರುವ ಅಜ್ಞಾನಿಗಳ ವಿರುದ್ಧ ಸಿಡಿದೆದ್ದಿರುವ ಅನಾಫಿಲಿಸ್ ದಯಾ ಸಂಘವು, ಇದು ಭಯೋತ್ಪಾದನೆಯ ಪರಮಾವಧಿ ಎಂದು ಬಣ್ಣಿಸಿದೆ.

ಯಃಕಶ್ಚಿತ್ ಆಗಿದ್ದ ನಮ್ಮನ್ನು ನಿರ್ನಾಮ ಮಾಡಲು ಮಾನವನೆಂಬ ಬಡಪಾಯಿ ಜೀವಿ ಇಷ್ಟೊಂದು ಒದ್ದಾಡುತ್ತಾ ಇರುವ ಬಗ್ಗೆ ಇದುವರೆಗೆ ಗಹಗಹಿಸಿ ನಗುತ್ತಿದ್ದ ಇದೇ ಸೊಳ್ಳೆಗಳು, ಇದೀಗ ಗಹಗಹಿಸಿ ಅಳಲಾರಂಭಿಸಿರುವುದು ಸಂಶೋಧಕರಿಗೆ ಸೊಳ್ಳೆ ಚುಚ್ಚಿದ ಅನುಭವವಾಗಿದೆ.

ಜಾಗತಿಕ ಭಯೋತ್ಪಾದಕ ಮತ್ತು ಎಲ್ಲರಿಂದಲೂ ಹೊ(ಹೀ)ಗಳಿಸಿಕೊಳ್ಳುತ್ತಿರುವ ಒಸಾಮಾ ಬಿನ್ ಲಾಡೆನ್‌ನನ್ನೇ ಕೊಲ್ಲಲಾಗದ ಇವರು ಯಃಕಶ್ಚಿತ್ ಸೊಳ್ಳೆಯನ್ನು ಕೊಲ್ಲಲು ಕ್ಷಿಪಣಿ ತಂತ್ರಜ್ಞಾನವನ್ನು ಕಂಡುಹುಡುಕಿರುವುದು ಮಾನವರ ಅಜ್ಞಾನ ಮತ್ತು ಹತಾಶೆಯ ಪರಾಕಾಷ್ಠೆ ಎಂದು ಅನಾಫಿಲಿಸ್ ಸಂಘದ ಸದಸ್ಯರೆಲ್ಲರೂ ತಮ್ಮ ತಮ್ಮಲ್ಲೇ ಗುಂಯ್‌ಗುಡುತ್ತಾ ಹರ್ಷಚಿತ್ತರಾಗಿ, ಮುಸಿ ಮುಸಿ ನಗುತ್ತಾ ವಿಶ್ಲೇಷಿಸುತ್ತಿದ್ದಾರೆ.

ಇದು ಸೊಳ್ಳೆ ಹಕ್ಕುಗಳ ಉಲ್ಲಂಘನೆ, ತುಳಿತ, ದೌರ್ಜನ್ಯ, ಅನ್ಯಾಯ, ಸ್ವಜನ ಪಕ್ಷಪಾತತನ ಇತ್ಯಾದಿತ್ಯಾದಿಯಾಗಿದೆ. ಅದರಲ್ಲೂ ಒಂದು ವರ್ಗದ (ಮಲೇರಿಯಾ, ಡೆಂಗ್ ಇತ್ಯಾದಿ ರೋಗ ಹರಡುವ) ಸೊಳ್ಳೆಗಳನ್ನು ಮಾತ್ರವೇ ಕೊಲ್ಲುವ ಮೂಲಕ, ಕೋಮುವಾದವನ್ನು ಅನುಸರಿಸಲಾಗುತ್ತದೆ ಎಂದು ಆರೋಪಿಸಲಾಗಿದೆ.

ಆದರೆ, ವಿಮಾನದಲ್ಲಿ ಹೋಗಿ ಸೊಳ್ಳೆಗಳನ್ನು ಕೊಲ್ಲುವುದು ಶ್ರೀಮಂತರನ್ನು, ಹಣವಂತರನ್ನು ಓಲೈಸುವ ತಂತ್ರ ಎಂದು ಕೂಡ ಇದೇ ಸಂಘದ ಪದಧಿಕ್ಕಾರಿಗಳು ಆರೋಪಿಸುತ್ತಾರೆ.

ಪ್ರಾಣಿಗಳಲ್ಲೇ ತಾನು ಮೇಲು, ತನಗೆ ಮಾತ್ರ ತಲೆಯಲ್ಲಿಯೇ ಮೆದುಳು ಇರುವುದು ಎಂದೆಲ್ಲಾ ಎದೆತಟ್ಟಿಕೊಳ್ಳುತ್ತಿದ್ದ ಮಾನವ ಜೀವಿಗೆ ಸೊಳ್ಳೆಗಳ ಪರಾಕ್ರಮದ ಬಗ್ಗೆ, ಅವುಗಳ ಸಾಮರ್ಥ್ಯದ ಬಗ್ಗೆ ಸಂಪೂರ್ಣ ಅರಿವಿಗೆ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿರುವ ಈ ಪದಧಿಕ್ಕಾರಿಗಳು, ಒಂದು ಸೊಳ್ಳೆ ಇಡೀ ರಾತ್ರಿಯ ನಿದ್ದೆಗೆಡಿಸಬಲ್ಲುದು ಎಂಬ ವಾಸ್ತವಾಂಶವನ್ನು ಈಗಲಾದರೂ ಅರಿತುಕೊಂಡರಲ್ಲ ಎಂದು ಸಮಾಧಾನಪಟ್ಟುಕೊಂಡಿದೆ.

ಅದಕ್ಕೇ "ಏಕ್ ಮಚ್ಛರ್ ನೇ ಆದ್ಮೀ ಕೋ ಹಿಜಡಾ ಬನಾ ದೇತಾ ಹೈ" ಎಂದು ಈ ಹಿಂದೆ ಪ್ರಚಾರ ಮಾಡುತ್ತಿದ್ದ ನಾನಾ ಪಾಟೇಕರ್ ಅವರನ್ನು ಸನ್ಮಾನಿಸಲು ನಿರ್ಧರಿಸಿರುವ ಸಂಘವು, ತಮ್ಮ ರಕ್ತ ಹೀರುವ ಕಲೆಯನ್ನು ಇಂದಿನ ರಜಾಕಾರಣಿಗಳು ಮತ್ತು ಮಜಾಕಾರಣಿಗಳು ಅನುಸರಿಸುತ್ತಿರುವುದರ ಬಗ್ಗೆ ಮತ್ತೊಮ್ಮೆ ಎದೆತಟ್ಟಿಕೊಂಡು, ಬೆನ್ನು ತಟ್ಟಿಕೊಂಡು ಶ್ಲಾಘಿಸಿಕೊಂಡಿವೆ. ಎರಡೂ ಕಡೆ ತಟ್ಟಿಕೊಂಡಾಗ ಉಬ್ಬಿದ ಗುಳ್ಳೆಗಳಂತಿದ್ದ ಒಂದು ಸೊಳ್ಳೆ ಒಡೆದು ಹೋದಾಗ ಅಲ್ಲಿ ರಕ್ತದೋಕುಳಿಯೇ ಹರಿಯಿತು ಎಂದು ನಮ್ಮ ವರದ್ದಿಗಾರರು ತಿಳಿಸಿದ್ದಾರೆ.

ಆದರೆ, ಈ ಹೀರುವ ತಂತ್ರಜ್ಞಾನವನ್ನು ನಾವೇ ರಜಾಕಾರಣಿಗಳಿಂದ ಕಲಿತದ್ದೋ ಅಥವಾ ರಜಾಕಾರಣಿಗಳು ನಮ್ಮಿಂದ ಕಲಿತದ್ದೋ ಎಂಬ ಬಗ್ಗೆ ಹಾಗೂ ಹೀರೋ ಪೆನ್‌ನಲ್ಲಿ ಶಾಯಿ ಹೀರುವ ತಂತ್ರದ ಬಗೆಗೆ ಕೂಡ ಅನಾಫಿಲಿಸ್ ಸಂಘವು ಸಂಶೋಧನೆ ಆರಂಭಿಸಿದೆ ಎಂದು ಮೂಲಗಳು ತಿಳಿಸಿಲ್ಲ.

Monday, March 16, 2009

ವ್ಯಾಪಾರದ ಸುದ್ದಿಯೇ ಬೇಡವೆಂದ ವಾಷಿಂಗ್ಟನ್ ಪೋಸ್ಟ್

(ಬೊಗಳೂರು ಅ-ವ್ಯವಹಾರ ಬ್ಯುರೋದಿಂದ)
ಬೊಗಳೂರು, ಮಾ.16- ಸಾಫ್ಟ್‌ವೇರ್ ತುಡಿತ ಹೆಚ್ಚಾದಾಗುತ್ತಿರುವಾಗಲೇ ಆರ್ಥಿಕ ಹೊಡೆತ, ಹಣಕಾಸು ಬಡಿತದಿಂದಾಗಿ ಕೆಲಸ ಕಳೆದುಕೊಂಡವರು, ಸಾಲರಿ ಕುಗ್ಗಿಸಿಕೊಂಡು ವರಿ ಮಾಡಿಕೊಂಡವರು ಬೇಸರ ಕಳೆಯಲು ಕುಡಿತವನ್ನೂ ಹೆಚ್ಚಾಗಿಸಿಕೊಂಡ ಪರಿಣಾಮವಿದು. ಅಮೆರಿಕದಲ್ಲಿ ಬೊಗಳೆ ರಗಳೆಗೆ ತೀವ್ರವಾಗಿ ಸ್ಪರ್ಧೆ ಒಡ್ಡುತ್ತಿರುವ ಪತ್ರಿಕೆ ವಾಷಿಂಗ್ಟನ್ ಪೋಸ್ಟ್, ಇವೆಲ್ಲವುಗಳ ವ್ಯವಹಾರವೇ ಬೇಡ ಎಂದು ತನ್ನ ಪತ್ರಿಕೆಯಲ್ಲಿ ವ್ಯವಹಾರಕ್ಕೆ ಸಂಬಂಧಿಸಿದ ಪುಟವನ್ನೇ ಮುಚ್ಚಲು ನಿರ್ಧರಿಸಿದೆ ಎಂದು ಇಲ್ಲಿ ವರದಿಯಾಗಿದೆ.

ಇದನ್ನು ಸ್ವತಃ ಬುಷಿಂಗ್ಟನ್ ಪೋಸ್ಟ್ ಸೊಂಪಾದಕರು ಫೋನ್ ಮಾಡಿ ಬೊ.ರ. ಬ್ಯುರೋಗೆ ಸುದ್ದಿ ತಿಳಿಸಿ, ಹರ್ಷ ಪಡುವಂತೆ ಸೂಚಿಸಿದ್ದಾರೆ.

ಹಾಗಂತ ನಮ್ಮ ಪ್ರತಿಸ್ಪರ್ಧಿ ಅಂತ ನಾವು ಬೆನ್ನುತಟ್ಟಿ ಹೇಳುತ್ತಿರುವ ವಾಷಿಂಗ್ಟನ್ ಪೋಸ್ಟ್ ತನ್ನ ವ್ಯವಹಾರವನ್ನು ಕೊನೆಗೊಳಿಸಿದೆ ಎಂದ ಮಾತ್ರಕ್ಕೆ, ಬೊಗಳೆ ರಗಳೆಯಲ್ಲಿಯೂ ಅ-ವ್ಯವಹಾರ ಮುಚ್ಚಲಾಗುತ್ತದೆ, ಅಥವಾ ಬೊ.ರ.ವನ್ನೇ ಮುಚ್ಚಲಾಗುತ್ತದೆ ಎಂದು ಓದುಗರು ತಿಳಿದುಕೊಳ್ಳಬೇಕಾಗಿಲ್ಲ. ಯಾಕೆಂದರೆ, ಅಂತ ಕೀಳು ಮಟ್ಟಕ್ಕೆ ಇಳಿಯುವಷ್ಟು ದೊಡ್ಡ ಸಂಸ್ಥೆ ನಮ್ಮದಲ್ಲ ಎಂದು ಬೊ.ರ. ಸಂಪಾದಕರು ಸ್ಪಷ್ಟಪಡಿಸಿದ್ದಾರೆ.

Thursday, March 12, 2009

ತರಕಾರಿ ಸೇವಿಸುವವರ ಮೇಲೆ ಇನ್‌ಕಂ ಟ್ಯಾಕ್ಸ್ ದಾಳಿ!

(ಬೊಗಳೂರು ಆದಾಯ ತೆರಿಗೆ ಮೂಲ ಬ್ಯುರೋದಿಂದ)
ಬೊಗಳೂರು, ಮಾ. 12- ಅಮೆರಿಕದ ಆರ್ಥಿಕ ಹಿಂಜರಿತದ ಬಿಸಿ ಭಾರತದ ಬಡ ಬೊ.ರ.ಗೌಡನ ಮನೆಗೂ ತಟ್ಟಿದ್ದು, ಬಡವರೆಲ್ಲವರ ಮನೆಗೆ ಇತ್ತೀಚೆಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಲಾರಂಭಿಸಿದ್ದಾರೆ.

ಬಡ ಬೊ.ರ.ಗೌಡನ ಮನೆಗೇ ಯಾಕೆ ದಾಳಿ ಮಾಡಲಾಗುತ್ತದೆ ಎಂಬ ಬಗ್ಗೆ ಸಂಚೋದನೆಗೆ ಹೊರಟ ಬೊ.ರ.ಬ್ಯುರೋದ ಮಂದಿಗೆ ಈ ದಾಳಿಯ ಹಿಂದಿನ ಗೂಢಾರ್ಥ, ನಿಗೂಢಾರ್ಥ, ಅಪಾರ್ಥಗಳೆಲ್ಲವೂ ಲಭಿಸಿದವು.

ಬೊ.ರ.ಗೌಡರು ಮಣ್ಣಿನ ಮಕ್ಕಳಾಗಿದ್ದು, ತಮ್ಮ ಅಲ್ಪಸ್ವಲ್ಪ ಜಮೀನಿನಲ್ಲಿ ತರಕಾರಿ ಬೆಳೆಯುತ್ತಾರೆ. ಹೀಗಾಗಿ ಬೆಳೆದ ಬೆಳೆಯನ್ನು ತಿಂದುಣ್ಣುತ್ತಾರೆ. ಅಸಲಿಗೆ ಆದಾಯ ತೆರಿಗೆ ಅಧಿಕಾರಿಗಳ ಕೆಂಗಣ್ಣಿಗೆ ಬಿದ್ದದ್ದು ಇದೇ ತರಕಾರಿ!

ಸರಕಾರವು ತರಕಾರಿ ಬೆಲೆಯನ್ನು ಯಾರ ಕೈಗೂ ಎಟುಕದಂತೆ ಮೇಲೇರಿಸಿಬಿಟ್ಟಿದೆ. ಇದು ತರಕಾರಿಗಳನ್ನೆಲ್ಲ ಮುಂದಿನ ಪೀಳಿಗೆಗೂ ಉಳಿಸುವ ಯೋಜನೆ. ನಾವೇ ಎಲ್ಲ ತಿಂದುಂಡು ಖಾಲಿ ಮಾಡಿದರೆ, ಮುಂದೆ ಲೋಕಸಭೆ ಚುನಾವಣೆ ನಡೆದು ಆರಿಸಿಬರುವವರಿಗೆ ತಿಂದುಣ್ಣಲು ಏನು ಉಳಿಯುತ್ತದೆ ಎಂದೆಲ್ಲಾ ಕಾರಣಕ್ಕೆ ಈ ರೀತಿ ಬೆಲೆಗಳನ್ನು ಯಾರ ಕೈಗೂ ಎಟುಕದಷ್ಟು ಎತ್ತರಕ್ಕೇರಿಸಿಬಿಟ್ಟಿತು. ಆದರೂ ಈ ಬಡ ಬೊ.ರ. ಗೌಡರು ಆರಾಮವಾಗಿ ತಿಂದುಣ್ಣುತ್ತಾರಲ್ಲ ಎಂದು ಅವರು ಐಟಿ ಅಧಿಕಾರಿಗಳನ್ನು ಛೂಬಿಟ್ಟಿದ್ದಾರೆ ಎಂದು ಮೂಲಗಳು ವರದ್ದಿ ಮಾಡಿವೆ.

ಇದೀಗ, ಇವರು ತರಕಾರಿ ಸೇವಿಸುತ್ತಿದ್ದರೆ ಖಂಡಿತವಾಗಿಯೂ ಭಾರೀ ಆದಾಯವೇ ಇರಬೇಕು ಎಂದು ಭಾವಿಸಿದ ಇನ್‌ಕಂ ಟ್ಯಾಕ್ಸ್ ಇಲಾಖೆ ಅ-ಧಿಕ್ಕಾರಿಗಳು ಆದಾಯದ ಮೂಲಕ್ಕಿಂತ ಹೆಚ್ಚು ಸಂಪತ್ತು ಹೊಂದಿದ್ದಾರೆ ಎಂದು ಬಡ ಬೊ.ರ.ಗೌಡರುಗಳ ಮೇಲೆಲ್ಲಾ ಕೇಸು ಜಡಿಯಲಾಗಿದೆ.

Monday, March 09, 2009

ಚುನಾವಣೆ: 'ಬ್ರೇಕಿಂಗ್' ನ್ಯೂಸ್ ಪ್ರಮಾಣ ಏರಿಕೆ!

(ಬೊಗಳೂರು ಬ್ರೇಕಿಂಗ್ ಬ್ಯುರೋದಿಂದ)

ಬೊಗಳೂರು, ಮಾ.9- ಇದು ನಿಜವಾದ ಬ್ರೇಕಿಂಗ್ ನ್ಯೂಸ್! ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ರಜಾಕಾರಣಿಗಳಿಂದ ಒಡಗೂಡಿದ ಮಜಾಕೀಯ ಪಕ್ಷಗಳು ಹೇಗಾದರೂ ಮಾಡಿ ಒಂದೆರಡು ಸೀಟು ಗಿಟ್ಟಿಸಿಕೊಳ್ಳಬೇಕೆಂಬ ಕಸರತ್ತಿನಲ್ಲಿ ಇದ್ದ ಮೈತ್ರಿಯನ್ನು ಮುರಿದುಕೊಂಡು ಹೊಸ ಮೈತ್ರಿ ಬೆಸೆದುಕೊಂಡೋ, ಅಥವಾ ಚಿರ ವಿರಹಿಯಂತೆಯೋ ಮುಂದುವರಿಯಲು ಸಿದ್ಧವಾಗಿದ್ದಾರೆ.

ಒರಿಸ್ಸಾದಲ್ಲಿಯೂ ಬ್ರೇಕಿಂಗ್ ನ್ಯೂಸ್, ತತ್ತರ ಪ್ರದೇಶದಲ್ಲಂತೂ ಆಗಾಗ್ಗೆ ಬ್ರೇಕ್ ಆಗುತ್ತಲೇ ಇರುವ ನ್ಯೂಸ್, ಇನ್ನೊಂದೆಡೆ ಮಹಾರಾಷ್ಟ್ರದಲ್ಲಿಯೂ ತೇಪೆ ಹಚ್ಚಲು ಪ್ರಯತ್ನಿಸಲಾಗುತ್ತಿರುವ ಬ್ರೇಕಿಂಗ್ ನ್ಯೂಸ್ ಕೇಳಿಬರುತ್ತಿದೆ.

ಈ ಬ್ರೇಕಿಂಗ್ ಸುದ್ದಿಗಳಿಂದಾಗಿ ಒಂದೊಂದು ಸರಕಾರವೇ ಬ್ರೇಕ್ ಆಗತೊಡಗಿರುವುದರಿಂದ, ಇದಕ್ಕೆಲ್ಲಾ ಸುದ್ದಿ ಚಾನೆಲ್‌ಗಳು ಮತ್ತು ಸುದ್ದಿ ಚಾನೆಲ್, ಪತ್ರಿಕೆ, ಆನ್‌ಲೈನ್ ಮಾಧ್ಯಮ ಎಂದೆಲ್ಲಾ ಬೊಗಳೆ ಬಿಟ್ಟುಕೊಳ್ಳುತ್ತಿರುವ ಬೊಗಳೂರು ಬ್ಯುರೋ ಕೂಡ ಆಗಾಗ್ಗೆ Breaking news ಹಾಗೂ Barking news ನೀಡುತ್ತಿರುವುದೇ ಕಾರಣ ಎಂಬ ಎದುರಾಳಿಗಳ ಸಂಶೋಧನೆಯೊಂದು ಏಕದಸದಸ್ಯ ಬೊಗಳೆ ಬ್ಯುರೋದ ಸಮಸ್ತ ಸಿಬ್ಬಂದಿಗಳು ಗಹಗಹಿಸಿ ಅಳುವುದಕ್ಕೆ ಮತ್ತು ಬಿಕ್ಕಿ ಬಿಕ್ಕಿ ನಗುವುದಕ್ಕೆ ಕಾರಣವಾಗಿದೆ.
ಈ ಬ್ರೇಕಿಂಗ್ ನ್ಯೂಸ್‌ಗಳೆಲ್ಲಾ ಬ್ರೇಕ್ ಫೇಲ್ ಆದ ಗಾಡಿಗಳಿಗಿಂತಲೂ ಹೆಚ್ಚು ವೇಗದಲ್ಲಿ ಕಡಿದಾದ, ತಿರುವು ಮುರುವುಗಳುಳ್ಳ ಚುನಾವಣಾ ರಸ್ತೆಯಲ್ಲಿ ಧಾವಿಸುತ್ತಿರುವ ಮಧ್ಯೆ, ಬ್ರೇಕ್ ಹಾಕುವ ಸುದ್ದಿಯೊಂದು ಅಪರೂಪವಾಗಿ ಬಂದಿದೆ. ದಾಂಪತ್ಯ ಬ್ರೇಕಿಂಗ್ ಆಗುವ ಸಂಗತಿಗೆ ನ್ಯಾಯಾಲಯವು ಬ್ರೇಕ್ ಹಾಕಿದೆ.

ಇಷ್ಟೇ ಆದರೆ ಸುಮ್ಮನಿರಬಹುದಿತ್ತು. ಇತ್ತೀಚೆಗೆ ಸ್ಲಮ್ಮು ಡಾಗು ಕೂಡ ರೆಕಾರ್ಡ್ ಬ್ರೇಕ್ ಮಾಡಿ ಆಸ್ಕರ್ ತಂದಿದೆ. ಅದರೊಂದಿಗೆ ನಿನ್ನೆಯಷ್ಟೇ ಸಿಡಿಲಮರಿ ಸಚಿನ್ ತೆಂಡುಲ್ಕರ್ ಸಹಿತ ಟೀಂ ಇಂಡಿಯಾ ಕೂಡ ಸಾಕಷ್ಟು ರೆಕಾರ್ಡ್ ಬ್ರೇಕ್ ಮಾಡಿವೆ.

ಈ ಎಲ್ಲ ಕಾರಣಗಳಿಗಾಗಿ ಶೀಘ್ರದಲ್ಲೇ ಬೊಗಳೂರು ಬ್ಯುರೋದಿಂದ ಎಲ್ಲ ಸುದ್ದಿ ಚಾನೆಲ್ಲುಗಳಿಗೆ, ಪತ್ರಿಕೆಗಳಿಗೆ ಬ್ರೇಕಿಂಗ್ ನ್ಯೂಸ್ ಪೂರೈಸಬಲ್ಲ ವಿಶಿಷ್ಟ ಚಾನೆಲ್ ಅಥವಾ ಏಜೆನ್ಸಿಯೊಂದನ್ನು ಆರಂಭಿಸಲು ನಿರ್ಧರಿಸಲಾಗಿದೆ. ಆದರೆ ಇಲ್ಲಿ ಯಾವುದೇ ಬಾಟಲಿ ಬ್ರೇಕಿಂಗ್ ಅಥವಾ ತಲೆ ಬ್ರೇಕಿಂಗ್ ನ್ಯೂಸ್ ಇರಲಾರದು ಎಂದು ಶಂಕಿಸಲಾಗುತ್ತಿದೆ.

Thursday, March 05, 2009

ಚುನಾವಣೆ ಘೋಷಣೆ: ಹಸಿವಿನ ಪ್ರಮಾಣ ಹೆಚ್ಚಳ!

(ಬೊಗಳೂರು ಹಸಿವು ಬ್ಯುರೋದಿಂದ)
ಬೊಗಳೂರು, ಮಾ.5- ಅನಾರೋಗ್ಯ ಇದ್ದರೂ ಚುನಾವಣೆ ಘೋಷಣೆಯಾಗುವ ಮುನ್ನವೇ ಬೊಗಳೆ ರಗಳೆ ಬ್ಯುರೋ ಹಣ ಮಾಡಲು ಹೋಗಿ ನಾಪತ್ತೆಯಾಗಿದೆ ಎಂಬ ವದಂತಿಗಳಿಂದ ಕಂಗೆಟ್ಟ ನಮ್ಮ ಏಕಸದಸ್ಯ ಬ್ಯುರೋದ ಸಮಸ್ತ ಸದಸ್ಯರು, ದಿಢೀರ್ ಆಗಿ ಮರಳಿ ಬಂದಿದ್ದು, ಅವರು ನಾಪತ್ತೆಯಾಗಲು ಬಡತನದಲ್ಲಿಯೂ ಭಾರತ ನಂಬರ್ 1 ಆಗಿರುವುದು ಎಂದು ಇಲ್ಲಿ ಪತ್ತೆಯಾಗಿದೆ.

ಅಪೌಷ್ಠಿಕತೆಯಿದ್ದವರಿಗೆ ಹಸಿವು ಇದ್ದೇ ಇರುತ್ತದೆ ಎಂಬ ಅನ್‌ಕಾಮನ್ ಸೆನ್ಸ್ ಉಪಯೋಗಿಸಿದ ಬೊ.ರ. ಸದಸ್ಯರು, ಈ ಬಗ್ಗೆ ಮತ್ತಷ್ಟು ಡೀಪ್ ಫ್ರೈ ತನಿಖೆ ನಡೆಸಿದಾಗ ಹಲವಾರು ಅಂಶಗಳೂ ಪತ್ತೆಯಾದವು.

ಇತ್ತೀಚೆಗಂತೂ ಹಸಿವು ತೀರಾ ತೀರಾ ಹೆಚ್ಚಾಗಿರುವುದಕ್ಕೂ ವಿಶ್ವಸಂಸ್ಥೆ ಈ ವರದಿ ಪ್ರಕಟಿಸಿರುವುದಕ್ಕೂ ಸಂಬಂಧವಿದೆಯೇ ಎಂದು ಇಲ್ಲದ ಸಂಬಂಧವನ್ನು ಸೃಷ್ಟಿಸಿ ತನಿಖೆ ಮಾಡಲಾಗಿ, 'ಹೌದು' ಎಂಬ ಉತ್ತರ ಅದೆಲ್ಲಿಂದಲೋ ಹೊಳೆದಿದೆ.

ಹೌದು. ಭಾರತದಲ್ಲಿ ಚುನಾವಣೆ ಘೋಷಣೆಯಾಗಿರುವಂತೆಯೇ ಈ ಹಸಿವಿನ ಪ್ರಮಾಣವೂ ಹೆಚ್ಚಿದೆ. ಜಾರಕಾರಣಿಗಳಿಗೆ ಓಟಿನ ಹಸಿವು ಎಂಬ ಅಮೂಲ್ಯವಾದ, ವಿಶಿಷ್ಟವಾದ ಹಸಿವು ಹೆಚ್ಚಾಗಿದ್ದು, ಇದರ ಮೂಲವನ್ನೂ ಕೆದಕಲಾಯಿತು. ಆಗ ಸಿಕ್ಕಿದ್ದು ಅವರ ಅಧಿಕಾರದ ಹಸಿವು!

ಮೊನ್ನೆ ಮೊನ್ನೆವರೆಗೆ ದೇಶದ ಪರಮೋಚ್ಚ ನೀತಿ ನಿರೂಪಣಾ ಸಂಸ್ಥೆಯೆಂಬ Someಸತ್ತಿನಲ್ಲಿ ಸಮಸ್ತ ಮಾನವನ್ನೂ ಹರಾಜಿಗೆ ಹಾಕಿ, ಕೂಗಾಡುತ್ತಲೇ ಕಾಲ ಕಳೆದು ಅಧಿಕಾರವನ್ನು ಸಂಪೂರ್ಣವಾಗಿ ಅನುಭವಿಸುತ್ತಿದ್ದ ಮಂದಿ ಇದೀಗ ಬೀದಿಗೆ ಬಿದ್ದಿದ್ದಾರೆ. ಜನರಿಗೆ ಸದುಪಯೋಗವಾಗುವ ಏನೋ ಒಂದೆರಡು ಕೆಲಸ ಮಾಡುವುದು ಬಿಟ್ಟು ಹೊಲಸು ರಾಜಕೀಯವನ್ನೇ ಪರಸ್ಪರರ ವಿರುದ್ಧ ಎರಚಾಡುತ್ತಾ, ಅಮೂಲ್ಯ ಸಮಯದ ಸದುಪಯೋಗ ಮಾಡಿಕೊಂಡಿದ್ದಾರೆ. ಹೀಗಾಗಿ ಮಜಾಕಾರಣಿಗಳು ಎಂಬ ಬಿರುದನ್ನೂ ಬೊಗಳೂರು ಬ್ಯುರೋದಿಂದಲೇ ಗಿಟ್ಟಿಸಿಕೊಂಡಿದ್ದಾರೆ. ಈಗ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಅವರ ಎರಡೂ ಕೈಗಳು ತಾನಾಗಿಯೇ ಜೋಡಣೆಯಾಗುವ ಹಂತಕ್ಕೆ ತಲುಪುತ್ತಿವೆ. ಇದು ಹಸಿವಿನ ಪ್ರಭಾವ ಎಂದು ಕಂಡುಕೊಳ್ಳಲಾಗಿದೆ.

ಹೀಗೆಯೇ ತನಿಖೆ ಮುಂದುವರಿಸಲಾಗಿ, ಜಾರಕಾರಣಿಗಳ ಓಟಿನ ಹಸಿವನ್ನು ಉತ್ತೇಜಿಸುವ ಕಾರಣವನ್ನೂ ಪತ್ತೆ ಹಚ್ಚಲಾದಾಗ, ಸಿಕ್ಕಿದ್ದು ಮತದಾರರ ನೋಟಿನ ಹಸಿವು! "ಸ್ಲಮ್.."ಗೆ ಆಸ್ಕರ್ ಸಿಕ್ಕಿದ್ದರಿಂದಾಗಿ ಇದಕ್ಕೆಲ್ಲ ಗಲ್ಲಿಗಲ್ಲಿಯನ್ನೇ ಸ್ಲಮ್ಮು ಮಾಡಲು ಹೊರಟ ರಜಾಕಾರಣಿಗಳ (ಯಾಕೆಂದರೆ "ಭಯಂಕರ" ರಾಜಕಾರಣಿಗಳು ಮುಷ್ಕರ, ಬಂದ್ ಇತ್ಯಾದಿ ಮಾಡುತ್ತಾ ರಜೆಗೆ ಕಾರಣಿಗಳಾಗುತ್ತಾರೆ!) ಕೃಪೆಯಿಂದಾಗಿ ಮತ್ತು ಅವರ ಸಿಕ್ಕಿದ್ದೆಲ್ಲಾ ಕಬಳಿಸುವ ನೀತಿಗಳಿಂದಾಗಿ ವಿಟಮಿನ್ M ಕೊರತೆಯಿಂದ ಬಳಲುವ ಬಡ ಪ್ರಜೆಗಳು, ಹಸಿವು, ಬಡತನದಿಂದ ತತ್ತರಿಸುತ್ತಿದ್ದಾರೆ ಎಂಬುದೂ ಈ ಸಂದರ್ಭ ಪತ್ತೆಯಾಗಿದೆ.

ರಜಾಕಾರಣಿಗಳ ಬಳಿಕ ತನಿಖೆಯನ್ನು ನಿಜವಾದ ಮನುಷ್ಯರ ಮೇಲೂ ಮುಂದುವರಿಸಲಾಯಿತು. ಇಲ್ಲಿಯೂ ಕೆಲವರಿಗೆ ಜ್ಞಾನದ ಹಸಿವು ಹೆಚ್ಚಾಗುತ್ತಿದೆ. ತಂತ್ರಜ್ಞಾನದ ಹಸಿವು ಹೆಚ್ಚಾಗಿ ಇಡೀ ಬೊಗಳೆ ಲೋಕವೇ ವಿಜೃಂಭಿಸತೊಡಗಿದೆ. ಇನ್ನು ಕೆಲವು ಬೊಗಳೂರು ಮಂದಿಯಲ್ಲಿ ಅಜ್ಞಾನದ ಹಸಿವು ಕೂಡ ಹೆಚ್ಚಾದ ಪರಿಣಾಮ ಇಂಥ ವ-ರದ್ದಿಗಳು ಪ್ರಕಟವಾಗುತ್ತಿವೆ ಎಂಬ ವಿಷಯವೂ ಪಕ್ಕದಲ್ಲೇ ಪತ್ತೆಯಾಗಿ ಬಂದು ಬಿದ್ದ ಪರಿಣಾಮವಾಗಿ, ಇದು ಬುಡಕ್ಕೇ ಬಂತಲ್ಲಪ್ಪ ಎಂದುಕೊಂಡ ಬೊ.ರ. ಬ್ಯುರೋ ತನಿಖೆಯನ್ನು ಅರ್ಧಕ್ಕೇ ನಿಲ್ಲಿಸಿ ಅರ್ಧಂಬರ್ಧ ವರದ್ದಿ ಒಪ್ಪಿಸಿತು.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...