Thursday, April 30, 2009

Election Flash: ಪ್ರಧಾನಿ ಅಭ್ಯರ್ಥಿ ಕ್ವಟ್ರೋಚಿ!

(ಬೊಗಳೂರು ಫ್ಲ್ಯಾಶ್ ಬ್ಯುರೋದಿಂದ)
ಬೊಗಳೂರು, ಏ.30- ಕಳೆದ ಹಲವಾರು ದಿನಗಳಿಂದ ತಲೆಮರೆಸಿಕೊಂಡು ಗಡಿಬಿಡಿಯಲ್ಲಿದ್ದ ಬೊಗಳೂರು ಬ್ಯುರೋ, ದಿಢೀರನೇ ಎಚ್ಚೆತ್ತುಕೊಂಡು ಒಂದು ಸುದ್ದಿಯನ್ನು ಹೆಕ್ಕಿ ತಂದಿದೆ. ಅದರ ಪ್ರಕಾರ, ಬೊಗಳೂರು ದೇಶದ ಪ್ರಧಾನಿ ಪದವಿಗೆ ಅತೀ ಹೆಚ್ಚು ಅಭ್ಯರ್ಥಿಗಳಿರುವುದರಿಂದಾಗಿ, ಕ್ವಟ್ರೋಚಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಲಾಗುತ್ತಿದೆ.

ಇದರ ಅಂಗವಾಗಿ, ಕ್ವಟ್ರೋಚಿಗೆ ಮೊದಲು ಭಾರತೀಯ ಪೌರತ್ವವನ್ನು ನೀಡಲಾಗುತ್ತದೆ. ಆ ಬಳಿಕ ನಿಧಾನವಾಗಿ ರಾಜ್ಯಸಭೆಯೋ, ಅಥವಾ ನಾಮನಿರ್ದೇಶಿತ ಪ್ರಧಾನಿಯಾಗಿಯೋ ನೇಮಿಸಲು ನಿರ್ಧರಿಸಲಾಗುತ್ತಿದೆ ಎಂದು ಏನೂ ಬಲ್ಲದ ಮೂಲಗಳು ತಿಳಿಸಿವೆ.

ಜಾಗತಿಕ ಹಣಕಾಸು ಬಿಕ್ಕಟ್ಟಿನಿಂದಾಗಿ, ಇಟಲಿ ಉದ್ಯಮಿಯು ದೇಶಕ್ಕೆ ಮಹದುಪಕಾರ ಮಾಡಿದ್ದು, ಸಾಕಷ್ಟು ಹಣವನ್ನೂ ಗಳಿಸಿದ್ದಾರೆ. ಹೀಗಾಗಿ ದೇಶದ ಹಣಕಾಸು ಬಿಕ್ಕಟ್ಟು ಕೂಡ ಸುಲಭವಾಗಿ ನಿವಾರಣೆಯಾಗಬಹುದು. ಶತ್ರುಗಳು ಬಂದರೆ ಬೋಫೋರ್ಸ್ ತುಪಾಕಿ ಸಿಡಿಸಲೂ ಅವರಿಗೆ ಗೊತ್ತಿದೆ ಎಂದಿರುವ ಕೇಂದ್ರವು, ಇದೀಗ ಸಾಕಷ್ಟು ಸಂಖ್ಯೆಯಲ್ಲಿ "ನಾನು ಪ್ರಧಾನಿಯಾಗುತ್ತೇನೆ, ನಾನಾಗುತ್ತೇನೆ" ಎನ್ನುತ್ತಿರುವವರ ಬಾಯಿ ಮುಚ್ಚಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ.

ಅಮೆರಿಕ, ಬ್ರಿಟನ್ ಮುಂತಾದ ದೇಶಗಳು ಭಾರತಕ್ಕೇ ಔಟ್ ಸೋರ್ಸಿಂಗ್ ಮಾಡುತ್ತಿದ್ದಾವೆ, ಹೀಗಾಗಿ ನಾವು ಕೂಡ ನಮ್ಮ ಪ್ರಧಾನಿ ಪದವಿಯನ್ನು ಔಟ್ ಸೋರ್ಸಿಂಗ್ ಮಾಡಿ ಇನ್ ಸೋರ್ಸಿಂಗ್ ನಿರ್ವಹಿಸಿಕೊಳ್ಳಬಾರದು ಎಂದು ಬೊಗಳೂರು ಪಕ್ಷದ ಮುಖ್ಯಸ್ಥರು ಪ್ರಶ್ನಿಸಿದ್ದಾರೆ.

ಇಂದಿನ ಜಾರಕಾರಣದ ಪರಿಸ್ಥಿತಿಯಿಂದಾಗಿ ಜನತೆ "ಬ್ರಿಟಿಷರೇ ಭಾರತಕ್ಕೆ ಮರಳಿ ಬನ್ನಿ" ಎಂಬಿತ್ಯಾದಿ ಕೂಗೆಬ್ಬಿಸುತ್ತಿದ್ದಾರೆ. ನಮ್ಮನ್ನು, ನಮ್ಮ ಜನರನ್ನು ಶತ್ರುಗಳು, ಭಯೋತ್ಪಾದಕರ ಕೈಯಿಂದ ರಕ್ಷಿಸಿಕೊಳ್ಳಲು, ವಿದೇಶೀಯರ ಕೈಗೆ ಅಧಿಕಾರ ಸೂತ್ರ ಕೊಟ್ಟರೆ ಒಳಿತು ಎಂದು ಬೊಗಳೂರು ಮೈತ್ರಿಕೂಟ ಸರಕಾರಕ್ಕೆ ಮನವರಿಕೆಯಾಗಿರುವುದಾಗಿ ಮೂಲಗಳು ತಿಳಿಸಿವೆ.

Wednesday, April 22, 2009

ಬೊಗಳೆ: ಕಣ್ಣೀರ ಧಾರಾವಾಹಿಗಳಿಗೆ ನೀರಿನ ಬಿಕ್ಕಟ್ಟು!

(ಬೊಗಳೂರು ಕುಮಾರಧಾರಾವಾಹಿ ಬ್ಯುರೋದಿಂದ)
ಬೊಗಳೂರು, ಏ.23- ಕನ್ನಡದ ಮತ್ತು ಬಹುಭಾಷಾ ಧಾರಾವಾಹಿ ನಿರ್ದೇಶಕರೆಲ್ಲರೂ ಇದೀಗ ಕಂಗಾಲಾಗಿ ತಮ್ಮ ತಮ್ಮ ತಲೆ ಮೇಲೆಯೇ ಕಲ್ಲು ಹೊತ್ತುಕೊಂಡು ಕುಳಿತಿದ್ದಾರೆ ಎಂಬ ವರದ್ದಿ ಕೇಳಿ ಗಡಬಡಿಸಿ ಎದ್ದು ಕುಳಿತಾಗ ದೊರೆತ ಸುದ್ದಿ ಇದು.

ಕಣ್ಣೀರ ಧಾರಾ ವಾಹಿಯನ್ನು ಎತ್ತ ಕಡೆ ಹರಿಯಬೇಕೆಂದು ನಿರ್ದೇಶಿಸುವವರಿಗೆಲ್ಲ ದೊಡ್ಡ ಅಡೆತಡೆಯಾಗಿದ್ದೆಂದರೆ, ತಮ್ಮ ಧಾರಾಪ್ರವಾಹಿಗಳ ಮೂಲಾಧಾರವಾಗಿರುವ ನೀರಿನ ಕೊರತೆ. ಕಣ್ಣೀರು ಹರಿಯಬೇಕಿದ್ದರೆ ನೀರು ಅತ್ಯಗತ್ಯ ಎಂದು ಸಂಶೋಧಿಸಿಕೊಂಡಿರುವ ಅವರು, ಇದೀಗ ನದಿಗಳೆಲ್ಲವೂ ಬತ್ತಿ ಹೋಗಲಿದೆ, ಇನ್ನು ಮುಂದೆ ಕಣ್ಣೀರು ಮೂಡಿಸುವುದು ಹೇಗೆಂಬ ಚಿಂತೆಯಲ್ಲಿ ಕೈತೊಳೆಯತೊಡಗಿದ್ದಾರೆ ಎಂದು ನಮ್ಮ ಸಂ-ಚೋದನಾಗಾರರು ಪತ್ತೆ ಹಚ್ಚಿಬಿಟ್ಟಿದ್ದಾರೆ.

ದೊಡ್ಡ ದೊಡ್ಡ ಚೂಯಿಂಗ್ ಗಮ್ ಕಂಪನಿಗಳಲ್ಲಿ ತಮಗಿದ್ದ ದೊಡ್ಡ ದೊಡ್ಡ ಹುದ್ದೆಗಳನ್ನೆಲ್ಲಾ ಎಡಗಾಲಿನಿಂದ ತುಳಿದು, ಅಲ್ಲಿನ ಅನುಭವದ ಧಾರೆಯನ್ನು ಕಣ್ಣೀರ ಧಾರಾವಾಹಿ ನಿರ್ಮಾಣಕ್ಕೆ ಸುರಿದ ತಮಗೆ ಈಗ ನೀರಿನ ಕೊರತೆಯಿಂದಾಗಿ ತೀವ್ರ ಸಂಕಷ್ಟ ಎದುರಾಗಿದೆ. ಮನರಂಜನೆಗಾಗಿ ಟೀವಿ ಮುಂದೆ ಕುಳಿತವರ ಮನ ಕೆಡಿಸುವ, ಮನೆಕೆಡಿಸುವ ಹೃದಯ ವಿ-ದ್ರಾವಕವಾಗಿಸುವ, ಮನಸ್ಸು ತೋಯಿಸುವ ಕಾರ್ಯಗಳನ್ನೆಲ್ಲಾ ಇನ್ನು ಮುಂದೆ ಮಾಡುವುದಾದರೂ ಹೇಗೆ ಎಂಬುದು ಅವರ ಚಿಂತೆಗೆ-ಚಿತೆಗೆ ಪ್ರಧಾನ ಕಾರಣವೆಂದು ನಮ್ಮ ವ-ರದ್ದಿಗಾರರು ಪತ್ತೆ ಹಚ್ಚಿಬಿಟ್ಟಿದ್ದಾರೆ.

ಧಾರಾವಾಹಿಗಳಿಗೆಲ್ಲ ಹೆಸರು ಸಿಗದೆ, ಕಣ್ಣೀರು-1, ಕಣ್ಣೀರು-2, ಒಂದೊಂದು ಮನೆಯೊಡೆದು ಐದಾರು ಬಾಗಿಲು, ದಾಂಪತ್ಯ ಕಲಹ, ಬಹುಪತ್ನಿತ್ವ, ಬಹುಪತಿತ್ವ, ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ, ಹೆಂಡತಿಯಿಂದ ಗಂಡನಿಗೆ ಕಪಾಳಮೋಕ್ಷ, ವಿವಾಹಿತರ ಪ್ರೇಮ ಪ್ರಸಂಗ, ಬೈಯುವುದು ಹೇಗೆ, ಮನೆಯೊಳಗೆ ಕಲಹ ಮಾಡುವಾಗ ಯಾವ ಯಾವ ವಿಧಾನವನ್ನು ಅನುಸರಿಸಬೇಕು, ಗಂಡ-ಹೆಂಡತಿ ಯಾವ ರೀತಿ ಜಗಳ ಮಾಡಬೇಕು, ಗಂಡ ಹೇಗೆ ನಾಪತ್ತೆಯಾಗಬೇಕು, ಹೆಂಡತಿ ಹೇಗೆ ತವರಿಗೆ  ಓಡಿಹೋಗಬೇಕು, ಮಗು ಹೇಗೆ ಒಂಟಿತನ ಅನುಭವಿಸಬೇಕು, ಅಜ್ಜ-ಅಜ್ಜಿಯರು, ಅತ್ತೆ-ಸೊಸೆಯರ ಸಂಬಂಧ ಹೇಗಿರಬೇಕು ಎಂಬಿತ್ಯಾದಿ ದುರ್-ಬೋಧನೆಗಳನ್ನೇ ನೀಡುತ್ತಿದ್ದ ಕುಮಾರಧಾರಾವಾಹಿಗಳು, ನೇತ್ರಾವತಿ ಧಾರಾವಾಹಿಗಳು, ಕಾವೇರಿ ಧಾರಾವಾಹಿಗಳು ಒಟ್ಟಿನಲ್ಲಿ ನೀರಿನ ಕೊರತೆಯಿಂದ ಒಂದಷ್ಟು ಹೊಡೆತ ಅನುಭವಿಸುವುದು ಖಚಿತ ಎಂದು ನಮ್ಮ ವಿಶ್ಲೇಷ್ಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಧಾರಾವಾಹಿಗಳನ್ನು ನೋಡಿದವರಿಗೆ, ಮನರಂಜನೆಗಾಗಿ ಟೀವಿ ಮುಂದೆ ಕುಳಿತಿದ್ದೇವೆ ಎಂಬುದು ಮರೆತೇಹೋಗುತ್ತದೆ, ಮನೋವೇದನೆಯೇ ಹೆಚ್ಚಾಗಿರುತ್ತದೆ. ಹೀಗಾಗಿ ಅವರಿಗೆ ಕರವಸ್ತ್ರಗಳನ್ನೂ ಉಚಿತವಾಗಿ ನೀಡುವ ತಯಾರಿ ಮಾಡುತ್ತಿದ್ದ ತಮಗೆ, ನೀರಿನ ಕೊರತೆ ಕಾಡುತ್ತಿರುವುದು ನಿಜಕ್ಕೂ ಶಾಕ್ ಎಂದು ಅನೇಕ(ಕಂತು)ತಾ ಕಪೂರ್ ಅವರು ಬೊಗಳೆ ರಗಳೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

Thursday, April 16, 2009

ದಿಕ್ಕೆಟ್ಟ ಕೊಟೊಮೊಟ್ಟೆ; ಎಲ್ಲೆಲ್ಲೂ shoe-show !

(ಬೊಗಳೂರು ಚುನಾವಣಾ ಬ್ಯುರೋದಿಂದ)
ಚುನಾವಣೆ ಘೋಷಣೆಯಾಗಿ ಅದಾಗಲೇ ಮತದಾನ ಪ್ರಕ್ರಿಯೆ ಆರಂಭವಾದರೂ, ಈ ಬಾರಿ ತಮಗೆ ಯಾವುದೇ ವ್ಯಾಪಾರ ಏಕಿಲ್ಲ ಎಂದು ಚಿಂತೆ ಮಾಡುತ್ತಿದ್ದ ಕೊಟೊಮೊಟ್ಟೆಮಾಸಂ (ಕೊಳೆತ ಟೊಮೆಟೊ ಮೊಟ್ಟೆ ಮಾರಾಟಗಾರರ ಸಂಘ), ಇದಕ್ಕೆ ಕಾರಣವನ್ನೂ ಕೊನೆಗೂ ಕಂಡು ಕೊಂಡಿದೆ.

ಇದಕ್ಕೆಲ್ಲಾ ಕಾರಣ ಜಾಗತಿಕ ಆರ್ಥಿಕ ಹಿಂಸರಿತ ಎಂದೇ ನಾವು ತಿಳಿದುಕೊಂಡಿದ್ದೆವು. ಆದರೆ ಇದೀಗ ಕಾರಣವೇನೆಂಬುದು ಕೊನೆಗೂ ಪತ್ತೆಯಾಗಿಬಿಟ್ಟಿತು ಎಂದು 'ಕೊಟೊಮೊಟ್ಟೆ' ಅಧ್ಯಕ್ಷ ಕಳಿತ ಕುಮಾರ್ ಹೇಳಿದ್ದಾರೆ. ಎಲ್ಲದಕ್ಕೂಕಾರಣ ಹೊಚ್ಚ ಹೊಸ ಚಪ್ಪಲಿ ಎಸೆತ. ಪ್ರಕರಣ. ಆದರೆ ಆ ಚಪ್ಪಲಿ ಹೊಚ್ಚ ಹೊಸತೇ ಅಥವಾ ಕಡಿದು ತುಂಡಾಗುವ ಹಂತ ತಲುಪಿದ್ದೇ ಎಂಬ ಬಗ್ಗೆ ಸಂಚೋದನೆ ನಡೆಯುತ್ತಿದೆ.

ಅದಿರಲಿ, ನಮ್ಮ ವ್ಯಾಪಾರ ತಗ್ಗಲು ಜಾಗತಿಕ ಬಿಕ್ಕಟ್ಟು ಅಲ್ಲ, ದೇಶೀಯ ಇಕ್ಕಟ್ಟೇ ಕಾರಣ. ದೇಶದಲ್ಲಿ ಶೂ-ಚಪ್ಪಲಿಗೆ ಬೇಡಿಕೆ ಹೆಚ್ಚಾಗುವಂತೆ ಈ ರಾಜಕಾರಣಿಗಳೇ ಮಾಡಿದ್ದು. ಇದುವರೆಗೆ ಕೊಳೆತ ಟೊಮೆಟೋ ಅಥವಾ ಕೊಳೆತ ಮೊಟ್ಟೆಗಳಷ್ಟೇ ಜನರಿಗೆ ತಮ್ಮ ಆಕ್ರೋಶ ವ್ಯಕ್ತಪಡಿಸಲು ಸಾಕಾಗುತ್ತಿತ್ತು. ಇದೀಗ ಅವುಗಳಿಗೆಲ್ಲಾ ಈ ರಾಜಕಾರಣಿಗಳು immunity ಬೆಳೆಸಿಕೊಂಡಿದ್ದಾರೆ ಎಂಬುದನ್ನು ಅರಿತು, ಮತ್ತಷ್ಟು ತೀವ್ರ ಆಕ್ರೋಶದ ಸಂಕೇತವಾಗಿ ಪಾದರಕ್ಷೆಗಳನ್ನು ಬಳಸಲು ಆರಂಭಿಸಿದ್ದಾರೆ ಎಂದು ಕೊಟೊಮೊಟ್ಟೆ ಸಂಘವು ಪತ್ತೇದಾರಿಕೆ ನಡೆಸಿ ಕಂಡುಕೊಂಡಿದೆ.

ಇದರ ಹಿಂದೆ ರಾಜಕಾರಣಿಗಳ ಭರ್ಜರಿ ಕೈವಾಡವಿದೆ. ಅವರು ಮಾಡಿದ್ದುಣ್ಣೋ ಮಹಾರಾಯ ಎಂಬ ಗಾದೆ ಮಾತಿಗೆ ಬೆಲೆ ಕೊಡುವಂತಹ ಕಾರ್ಯಗಳನ್ನು ಮಾಡುತ್ತಿದ್ದಾರೆ. ತಮ್ಮ ಗತ ವೈಭವದ ಸಾಧನೆಗಳ ಮೂಲಕ ಮತದಾರರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಚಪ್ಪಲಿ-ಶೂ ಮಾರಾಟ ಹೆಚ್ಚುವಂತೆ ಮಾಡಿದ್ದಾರೆ. ಮಾತ್ರವಲ್ಲ ಇದರಿಂದಾಗಿ ರಾಜಕಾರಣಿಗಳ ಶೂ-ಚಪ್ಪಲಿಗಳ ಸಂಗ್ರಹಣೆಯೂ ಹೆಚ್ಚಾಗಲಿದೆ ಎಂದು ನಾಪತ್ತೇದಾರಿಕೆಯಲ್ಲಿ ಕಂಡುಕೊಳ್ಳಲಾಗಿದೆ.

ಈ ಮಧ್ಯೆ, ಮುಂದಿನ ಜನ್ಮದಲ್ಲಾದರೂ, ಅಲ್ಲಲ್ಲ ಮುಂದಿನ ಚುನಾವಣೆಯಲ್ಲಾದರೂ ಜನತೆ ಕೊಳೆತ ಮೊಟ್ಟೆ, ಕೊಳೆತ ಟೊಮೆಟೋ ಬಳಸಲು ಪ್ರೇರೇಪಣೆ, ಉತ್ತೇಜನ ನೀಡಲಾಗುತ್ತದೆ. ಈ ಬಾರಿಯೂ ಸಾಕಷ್ಟು ಪ್ರಯತ್ನ ಪಡಲಾಗುತ್ತದೆ ಎಂದು ಕಳಿತ್ ಕುಮಾರ್ ಹೇಳಿದ್ದಾರೆ.

ಈ ಮಧ್ಯೆ, ಮೂರ್ನಾಲ್ಕನೇ ರಂಗಕ್ಕೆ ಚುನಾವಣಾ ಚಿಹ್ನೆಯಾಗಿ ಪಾದರಕ್ಷೆ (ಶೂ ಮತ್ತು ಚಪ್ಪಲಿಗಳ ಚಿತ್ರಗಳ ಮಿಶ್ರಣ)ಯ ಭಿಕ್ಷೆ ನೀಡಬೇಕು ಎಂದು ಅದರೊಳಗಿರುವ ಪಕ್ಷಗಳಿಗಿಂತ ಹೆಚ್ಚು ಸಂಖ್ಯೆಯಲ್ಲಿರುವ ಪ್ರಧಾನಿ ಅಭ್ಯರ್ಥಿಗಳು ಚುಚ್ಚುವಾನಣಾ ಆಯೋಗಕ್ಕೆ ಕೋರಿಕೆ ಸಲ್ಲಿಸಿದ್ದಾರೆ.

Thursday, April 09, 2009

Divorce ನಿಂದ ಮಕ್ಕಳಿಗೆ ಹಾನಿಯಂತೆ!

(ಬೊಗಳೂರು ಬಾಲ್ಯ ವಿವಾದ ಬ್ಯುರೋದಿಂದ)
ಬೊಗಳೂರು, ಏ.9- ವಿಚ್ಛೇದನವಾಗುವುದು ಮಕ್ಕಳ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಇಲ್ಲಿ ವರದಿಯಾಗಿರುವುದರಿಂದ ಬೊಗಳೂರು ಬಾಲ-ಕರುಗಳ ಸಂಘದ ಸದಸ್ಯರೆಲ್ಲರೂ ವಿಚ್ಛೇದನೆ ನೀಡದಿರಲು ನಿರ್ಧರಿಸಿದ್ದಾರೆ.

ವಿಚ್ಛೇದನವು ಮಕ್ಕಳಿಗೆ ಮಾರಕ ಎಂದು ವರದಿ ಮಾಡಲಾಗಿದೆ. ಇದರಲ್ಲಿ ಬೊಗಳೂರು ಬ್ಯುರೋದ ಕೈವಾಡವಿಲ್ಲ ಎಂದು ಈ ಬಾಲ-ಕರುಗಳ ಸಂಘಕ್ಕೆ ಮನವರಿಕೆ ಮಾಡಲಾಯಿತಾದರೂ, ಈ ವರದ್ದಿಯು ತಮ್ಮ ಒಳಿತಿಗೇ ಆಗಿರುವುದರಿಂದ ಆ ಕುರಿತು ತನಿಖೆ ಮಾಡದಿರಲು ನಿರ್ಧರಿಸಿದ್ದಾರವರು.

ಈ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಸಭೆ ನಡೆಸಿದ ಬಾಲ-ಕರುಗಳ ಮಕ್ಕಳ ಸಂಘವು, ಈ ವಿಚ್ಛೇದನೆ ಏನು ಎಂಬುದರ ಕುರಿತು ಮೊತ್ತ ಮೊದಲು ತನಿಖೆ ನಡೆಸಲು ತೀರ್ಮಾನಿಸಿತಾದರೂ, ಸಭೆಯ ಮಧ್ಯದಿಂದ ನನಗೊತ್ತಿದೆ ನನಗೊತ್ತಿದೆ ಎಂಬ ಕೆಲವು ಶಬ್ದಗಳು ಅಂದರೆ ಅಕ್ಷರಶಃ ತೊದಲು ನುಡಿಗಳು ಕೇಳಿಬಂದವು ಎಂದು ನಮ್ಮ ವರದ್ದಿಗಾರರು ತಿಳಿಸಿದ್ದಾರೆ.

ಅವರಲ್ಲೊಬ್ಬ ಎದ್ದು ನಿಂತು, ಬೋರ್ಡಿನಲ್ಲಿ ಅದು ಬರೇ ವಿಚ್ಛೇದನ ಅಲ್ಲ, ವಿವಾದ ವಿಚ್ಛೇದನ ಎಂದು ಬರೆದು ತೋರಿಸಿದನೆನ್ನಲಾಗಿದೆ. ಅಲ್ಲ, ಅಲ್ಲ ಅದು ವಿವಾ'ಹ' ಆಗಿರಬಹುದು ಎಂದು ಮತ್ತೆ ಕೆಲವರು ತಮ್ಮ ವಾದವನ್ನು ಕುಣಿಕುಣಿದಾಡುತ್ತಲೇ ಮಂಡಿಸುತ್ತಿದ್ದುದು ಕಂಡುಬಂದಿತ್ತು.

ಕೊಟ್ಟ ಕೊನೆಗೆ, ಅದು ನಿಜವಾಗಿ ಏನು ಅಂತ ಸರಿಯಾಗಿ ತಿಳಿದುಕೊಳ್ಳುವಷ್ಟು ತಾವು ಶಾಲೆಗೆ ಹೋಗಿ ಅಕ್ಷರಗಳನ್ನು, ಮಾತ್ರೆಗಳನ್ನು, ಶಬ್ದಗಳನ್ನು ಕಲಿತಿಲ್ಲವಾದುದರಿಂದ, ಈ ಕುರಿತು ಅಂತಿಮ ತೀರ್ಮಾನವನ್ನು ದೊಡ್ಡವಾರದ ಬಳಿಕ ತೆಗೆದುಕೊಳ್ಳುವುದಾಗಿಯೂ, ಅದುವರೆಗೆ ವಿಚ್ಛೇದನ ಎಂಬುದು ಎಲ್ಲಿಯಾದರೂ ಕಂಡುಬಂದರೆ, ಅದಕ್ಕೆ ನಕಾರ ಸೂಚಿಸಲೂ ನಿರ್ಣಯಿಸಲಾಯಿತು.

Tuesday, April 07, 2009

Cut: ಕತ್ತರಿಸುವ ಉದ್ಯೋಗಕ್ಕೆ ಹೆಚ್ಚಿದ ಬೇಡಿಕೆ

(ಬೊಗಳೂರು ನಿರುದ್ಯೋಗ ಬ್ಯುರೋದಿಂದ)
ಬೊಗಳೂರು, ಏ.7- ಪ್ರತಿವರ್ಷ ಚುನಾವಣೆಗಳು ಬರಬೇಕು, ಪ್ರತಿ ಕ್ಷಣವೂ ಚುನಾವಣೆಗಳಿದ್ದರಂತೂ ಮತ್ತಷ್ಟು ಚೆನ್ನ ಎಂದು ಬೊಗಳೂರಿನ ಮಂದಿ ಹಾರೈಸತೊಡಗಿದ್ದಾರೆ. ಮದ್ಯದ ಹೊಳೆ, ಉಡುಗೊರೆಗಳ ಪ್ರವಾಹ ಇತ್ಯಾದಿಗಳೆಲ್ಲಾ ಇದ್ದದ್ದೇ. ಇದರೊಂದಿಗೆ ರುಚಿ ರುಚಿಯಾದ ಚಿಕನ್-ಮಟನ್ ಬಿರಿಯಾನಿಗೆ ಸಮನಾದ ಆಹಾರವೂ ಸಿಗುತ್ತದೆ ಎಂಬುದು ಬೊಗಳೂರು ಮತದಾರರ ಈ ಹರ್ಷಕ್ಕೆ ಕಾರಣ.

ಇಷ್ಟು ಮಾತ್ರವೇ ಅಲ್ಲ, ಇದೀಗ ಅಲ್ಲಲ್ಲಿ ಕಸಾಯಿ ಖಾನೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಇದರೊಂದಿಗೆ ಮಚ್ಚು, ಕತ್ತಿ ತಯಾರಿಕಾ ಕಾರ್ಖಾನೆಗಳೂ ಹೆಚ್ಚಾಗತೊಡಗಿದ್ದು, ಇಡೀ ಜಗತ್ತೇ ಆರ್ಥಿಕ ಹಿಂಜರಿತದಲ್ಲಿ ತತ್ತರಿಸುತ್ತಿದ್ದರೆ, ಬೊಗಳೂರು ಮಾತ್ರ ಸಖತ್ ಉದ್ಯೋಗ, ಸಖತ್ ಸಂಪಾದನೆ, ಸಖತ್ ಕೈಗಾರಿಕಾ ಪ್ರಗತಿ ಇತ್ಯಾದಿಗಳೊಂದಿಗೆ ಸಮೃದ್ಧವಾಗುವ ಸೂಚನೆಗಳು ಕಾಣಿಸುತ್ತಿವೆ.

ಇದಕ್ಕೆ ಪ್ರಧಾನ ಕಾರಣವೆಂದರೆ ಚುನಾವಣೆ ಘೋಷಣೆಯಾಗತೊಡಗಿದಂತೆಯೇ ಜಾರಕಾರಣಿಗಳು ಕೊಚ್ಚುವ ಉದ್ಯೋಗ ಆರಂಭಿಸಿದ್ದು!

ಹಿಂದೂಗಳ ಮೇಲೆ ಕೈಮಾಡಿದವರ ಕೈ ಕತ್ತರಿಸಲಾಗುತ್ತದೆ ಎಂದು ಗಾಂಧೀ ಕುಟುಂಬದ ಕುಡಿ ತರುಣ ಗಾಂಧಿ ಹೊತ್ತಿಸಿದ ಕಿಡಿಯಿಂದ ಹಿಡಿದು, ಹಿಂದುತ್ವ ಹೇಳುವವರ ಮೇಲೆ ಕೈ ಕತ್ತರಿಸಬೇಕು ಎಂದು ನಮ್ಮ ಕಾಕಾ ಗೋಡು ತಿಮ್ಮಪ್ಪನವರು ಕೂಡ ಧ್ವನಿ ಎತ್ತಿದ್ದಾರೆ. ಆಮೇಲೆ ರೇಣುಕಾರಾಚಾರ್ಯ ಕೂಡ ತಲೆ ಕತ್ತರಿಸಬೇಕು ಎಂದಿದ್ದಾರೆ. ಇದಕ್ಕೆ ಹೊಸಾ ಸೇರ್ಪಡೆ ಆಂಧ್ರಪ್ರದೇಶದಲ್ಲಿ ರಾಜ್ಯ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಹೇಳಿಕೆ. ನಾನು ಕೂಡ ಅಲ್ಪಸಂಖ್ಯಾತರನ್ನು ನೋಯಿಸಿದವರ ಕೈ ಕತ್ತರಿಸುವ ಉದ್ಯಮ ಸ್ಥಾಪಿಸುವುದಾಗಿ ಆತನೂ ಹೇಳಿದ್ದಾರೆ.

ಹೀಗೆ ಎಲ್ಲೆಲ್ಲೂ ಕತ್ತರಿಸುವ ಕಾರ್ಯದ ಬಗ್ಗೆ ಮಾತುಗಳೇ ಕೇಳಿಬರುತ್ತಿದೆ. ಇದಕ್ಕೆಲ್ಲಾ ಮೂಲಭೂತ ಕಾರಣ ಕನ್ನಡ ಚಿತ್ರರಂಗದ ಮಚ್ಚು-ಲಾಂಗುಗಳುಳ್ಳ ಸಾಂಗುಗಳೇ ಆಗಿದ್ದು, ಹೊಡಿಮಗ, ಕಡಿಮಗ ಬಡಿಮಗ ಇತ್ಯಾದಿ ಶಬ್ದಗಳು ಕೂಡ ಜಾರಕಾರಣಿಗಳ ಬಾಯಲ್ಲಿ ನಲಿನಲಿದಾಡುತ್ತಲೇ ಇವೆ.

ಇನ್ನೇನಿದ್ದರೂ ಕೊಚ್ಚುವ ಉದ್ಯೋಗಕ್ಕೇ ಹೆಚ್ಚಿನ ಬೆಲೆ ಎಂದು ತಿಳಿದುಕೊಂಡು ಬೊಗಳೂರಿನ ಜನತೆಯೆಲ್ಲಾ ತಮ್ಮ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಯಾರ ಬಾಯಿಂದ ಯಾವಾಗ 'ಕತ್ತರಿಸುತ್ತೇವೆ' ಎಂಬ ಮತ್ತು ಅದಕ್ಕೆ ತೀರಾ ಹತ್ತಿರವಾದ ಕಡಿ, ಬಡಿ, ಕೊಲ್ಲು, ಕೊಚ್ಚು ಇತ್ಯಾದಿ ಶಬ್ದಗಳು ಕೇಳಿ ಬಂದ ತಕ್ಷಣ ಅವರಲ್ಲಿ ಅಪಾಯಿಂಟ್ಮೆಂಟ್ ತಗೊಂಡು ಎಷ್ಟು ಮಚ್ಚು ಎಷ್ಟು ಲಾಂಗು ಎಂಬಿತ್ಯಾದಿ ಆರ್ಡರ್ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.

ಆದರೆ ಇಷ್ಟೆಲ್ಲದವರ ನಡುವೆ ಮಚ್ಚು-ಲಾಂಗು ತಯಾರಿಕಾ ಕಂಪನಿಗಳಿಗೆ ತೀವ್ರವಾಗಿ ಗೊಂದಲ ಮೂಡಿಸಿದ ಸಂಗತಿಯೆಂದರೆ, ಹೆಚ್ಚಿನವರು ಕೈ ಕತ್ತರಿಸುತ್ತೇನೆ, ತಲೆ ಕತ್ತರಿಸುತ್ತೇನೆ ಎಂದು ಘೋಷಿಸಿದ್ದರೂ, ಬೇರೆ ಯಾವ್ಯಾವುದನ್ನೆಲ್ಲಾ ಕತ್ತರಿಸಲು ಅವರು ಸ್ಕೆಚ್ ಹಾಕಿಕೊಂಡಿದ್ದಾರೆ ಎಂಬುದು ನಿಖರವಾಗದಿರುವುದು. ಮತ್ತು ಕತ್ತರಿ ಪ್ರಯೋಗ ಮಾಡಿ ಸಂಪಾದಿಸಿದ್ದನ್ನು ಏನು ಮಾಡುತ್ತಾರೆ, ಉಪ್ಪಿನಕಾಯಿ ಹಾಕುತ್ತಾರಾ, ಹಾಕಿದ್ರೆ ಯಾರಿಗೆ ಬಡಿಸುತ್ತಾರೆ, ಇತ್ಯಾದಿ... ಹೀಗಾಗಿ ಇವುಗಳ ಸಂಶೋಧನೆಗಾಗಿ ಬೊಗಳೂರು ಓದುಗರ ಸಹಾಯ ಯಾಚಿಸಿದ್ದಾರೆ ಎಂದು ತಿಳಿದುಬಂದಿದೆ.

ಇಷ್ಟೇ ಆದರೆ, ಬೊಗಳೂರು ಬಡ ದೇಶ ಎಂದುಕೊಳ್ಳಬಹುದಿತ್ತು. ಆದರೆ ಇಷ್ಟೆಲ್ಲಾ ಕೈಗಾರಿಕಾ ಪ್ರಗತಿಯೊಂದಿಗೆ ರಸ್ತೆ ರಿಪೇರಿ ಉದ್ಯೋಗಿಗಳು ಕೂಡ ಹೊಸ ಆಶಾವಾದ ಬೆಳೆಸಿಕೊಂಡಿದ್ದಾರೆ. ಇದಕ್ಕೆ ಕಾರಣವೆಂದರೆ ಆಲೂ ಪ್ರಸಾದರು ತರುಣನನ್ನು ಕ್ರಶರ್ ಅಡಿಗೆ ಹಾಕುತ್ತಿದ್ದೆ ಎಂದು ಹೇಳಿರುವುದು. ಹೀಗಾಗಿ ರೋಡ್ ರೋಲರ್‌ಗಳಿಗೆ, ಕ್ರಶರ್‌ಗಳಿಗೆ ಕೂಡ ಹೆಚ್ಚಿನ ಬೇಡಿಕೆ ಇದೆ ಎಂದು ತಿಳಿದುಬಂದಿದ್ದು, ಇವುಗಳನ್ನು ತಯಾರಿಸುವ ಕಾರ್ಖಾನೆಗಳನ್ನೂ ತೆರೆಯಲಾಗುತ್ತದೆ.

ಹೀಗಾಗಿ ಎಲ್ಲೆಲ್ಲೂ ಉದ್ಯೋಗ, ರೋಲ್ ಕಾಲರ್‌ಗಳೆಲ್ಲಾ ರೋಡ್ ರೋಲರ್ ಉದ್ಯಮಕ್ಕೆ, ಮಚ್ಚು-ಲಾಂಗು ಹಿಡಿದು ತಿರುಗುತ್ತಿರುವವರೆಲ್ಲರೂ ಕಸಾಯಿಖಾನೆ ಉದ್ಯೋಗಕ್ಕೆ, ಅಪಾಪೋಲಿಗಳಂತೆ ಅಡ್ಡಾಡುತ್ತಿರುವವರೆಲ್ಲರೂ ಮಚ್ಚು-ಕತ್ತಿ-ಲಾಂಗು ತಯಾರಿಕಾ ಉದ್ಯೋಗಕ್ಕೆ ಕೈಹಚ್ಚಿದ್ದು, ಇಂಥ ಚುನಾವಣೆಗಳು ಪದೇ ಪದೇ ಬರಲಿ ಎಂದು ಕುಣಿಕುಣಿದಾಡುತ್ತಿದ್ದಾರೆ ಎಂದು ಎಲ್ಲಿಯೂ ಮೂಗು ತೂರಿಸದ ಬೊಗಳೂರು ಬ್ಯುರೋದ ಸಮಸ್ತ ಸಿಬ್ಬಂದಿಗಳಲ್ಲೊಬ್ಬರು ವರದ್ದಿ ತಂದುಹಾಕಿದ್ದಾರೆ.

ಆದರೂ, ಇಷ್ಟೆಲ್ಲಾ ಕತ್ತರಿಸಿದರೆ, ಅದನ್ನು ರಾಶಿ ಹಾಕುವುದೆಲ್ಲಿ ಎಂಬುದು ಕೂಡ ಬೊಗಳೂರು ಮಂದಿಗೆ ಇನ್ನೂ ಅರ್ಥವಾಗದ ಸಂಗತಿ. ಚುನಾವಣೆಗಳ ಬಳಿಕ ಎಲ್ಲೆಲ್ಲೂ ಕೈಗಳು, ಕಾಲುಗಳು, ತಲೆಗಳು, ಕಿವಿಗಳು, ಮೂಗುಗಳು ದೊರೆಯಬಹುದು ಎಂದು ಭವಿಷ್ಯ ನುಡಿಯಲಾಗುತ್ತಿದೆ.

ಚುಚ್ಚುವನಾಣೆ ಆಯೋಗ ಪ್ರತಿಕ್ರಿಯೆ:
ಚುನಾವಣಾ ಭಾಷಣದಲ್ಲಿ ಈ ರೀತಿ ಹೇಳಿರುವುದರಿಂದ ಚುನಾವಣಾ ಆಯೋಗವು ಪ್ರತಿಕ್ರಿಯಿಸಿದ್ದು, ನಾವು ಈ ಬಗ್ಗೆ ಈಗ ಯಾವುದೇ ಕ್ರಮ ಕೈಗೊಳ್ಳುವುದು ಅಸಾಧ್ಯ. ಏನಿದ್ದರೂ ಕತ್ತರಿಸಿ ತಂದು ತೋರಿಸಿ... ನಮಗೆ ಪ್ರೂಫ್ ಬೇಕು ಪ್ರೂಫ್... ಎಂದು ತಿಳಿಸಿದೆ.

Monday, April 06, 2009

Drink and Drive ತರಬೇತಿ ಶಾಲೆ!

(ಬೊಗಳೂರು ಕುಡುಕರ ಬ್ಯುರೋದಿಂದ)
ಬೊಗಳೂರು, ಏ.6- ಕುಡಿದು ವಾಹನ ಚಲಾಯಿಸಲು ತರಬೇತಿ ನೀಡುತ್ತಿರುವ ತಮ್ಮ ಸಂಘದ ಸದಸ್ಯನನ್ನು ಬಂಧಿಸಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಕುಡುಕ ಚಾಲಕರ ಸಂಘವು ಮತ್ತು ಬಾಲಕರ ಸಂಘವು, ಇದಕ್ಕೆ ಮಾನ್ಯತೆ ನೀಡಿ ಹೊಸದೊಂದು ಸುಗ್ರೀವನ ಆಜ್ಞೆ ಜಾರಿಗೊಳಿಸಬೇಕೆಂದು ಆಗ್ರಹಿಸಿದೆ.

ಕುಡಿದು ವಾಹನ ಚಲಾಯಿಸುವುದು ತಮ್ಮ ಆಜನ್ಮ ಸಿದ್ಧ ಹಕ್ಕು ಎಂದಿರುವ ಸಂಘದ ಅಧ್ಯಕ್ಷ ಶ್ರೀಮಾನ್ ಕುಡಿ ಕುಮಾರ್ ಅವರು, ನಿರ್ಜೀವ ವಾಹನಗಳಿಗಾದರೆ ಪೆಟ್ರೋಲ್ ಕುಡಿಸಬೇಕಾಗುತ್ತದೆ, ಜೀವವಿರುವ ಮಾನವರಾಗಿರುವ ನಮಗೇಕಿಲ್ಲ ಎಂದು ಪ್ರಶ್ನಿಸಿದ್ದಾರೆ.

ಈ ವಾಹನ ಡ್ರೈವಿಂಗ್ ಸ್ಕೂಲ್ ತೆರೆದದ್ದೇ ಈ ದೇಶದಲ್ಲಿ ಅಪಘಾತ ಕಡಿಮೆ ಮಾಡಲು ಎಂದು ಸಮರ್ಥಿಸಿಕೊಂಡಿರುವ ಕುಡಿ ಕುಮಾರ್, ಕುಡಿದು ವಾಹನವನ್ನು ಚಲಾಯಿಸುವುದು ಹೇಗೆ ಎಂದು ಅಲ್ಲಿ ಎಲ್ಲರಿಗೂ ಹೇಳಿಕೊಡುತ್ತಿದ್ದುದಾಗಿ ಸ್ಪಷ್ಟಪಡಿಸಿದ್ದಾರೆ.

ಜೀವವಿರುವ ನಮಗೆ ಕುಡಿಯಬಾರದು ಎಂದು ಹೇಳುವುದು ಮಾನವ ಹಕ್ಕುಗಳ ಉಲ್ಲಂಘನೆ ಎಂದಿರುವ ಅವರು, ತಾವೇನೂ ತಮ್ಮ ಮನರಂಜನೆಗಾಗಿಯೋ ಅಥವಾ ಹಾಳಾಗಿ ಕೆಟ್ಟು ಕೆರ ಹಿಡಿದ ಮನಸ್ಸು ಸರಿಪಡಿಸುವುದಕ್ಕಾಗಿಯೋ ಕುಡಿಯುತ್ತಿರಲಿಲ್ಲ. ಕುಡಿದು ಹೇಗೆ ವಾಹನ ಚಲಾಯಿಸಬಹುದು ಎಂದೆಲ್ಲಾ ಪ್ರಯೋಗ ಮಾಡಿ, ಅದನ್ನು ಬೇರೆಯವರಿಗೆ ಕಲಿಸಿಕೊಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಅದೇ ಹಳೇ ಕಾಲದ ಸ್ಲೋಗನ್ ಬಿಟ್ಟು, ಸ್ತ್ರೀಯರೆಲ್ಲರೂ 'ಕೊಡು ತಾಯೆ ವರವ, ಕುಡುಕನಾಗಿಹ ಗಂಡನ' ಅಂತ ಹೊಸ ಸ್ಲೋಗನ್ ಜೊತೆಗೆ ಪ್ರಾರ್ಥಿಸುವಂತೆ ಮಾಡುತ್ತೇವೆ, ಇದು ಒಬಾಮ ಹೇಳಿರುವಂತೆ 'We can Change' ಎಂಬ ಉದ್ದೇಶ ಹೊಂದಿದೆ ಎಂದು ತಿಳಿಸಿರುವ ಅವರು, ಕುಡಿದು ವಾಹನ ಚಲಾಯಿಸಿದರಷ್ಟೇ "ಗಮ್ಯ" ಸ್ಥಾನವನ್ನು ಬೇಗನೇ ತಲುಪಬಹುದು ಎಂದು ಹೇಳಿದ್ದಾರೆ!

ಆ ಗಮ್ಯ ಸ್ಥಾನ ಯಾವುದು ಎಂಬುದನ್ನು ವಿಶ್ಲೇಷಣೆ ಮಾಡಲು ಹೋಗದಂತೆ ಪುತ್ರಕರ್ತರಿಗೆ ಮನವಿ ಮಾಡಿಕೊಂಡಿರುವ ಅವರು, ಕುಡಿದ ತಕ್ಷಣ ಗಾಡಿಯು ಎಷ್ಟು ವೇಗದಲ್ಲಿದೆ, ಗಂಟೆಗೆ ನೂರು ಕಿ.ಮೀ. ದಾಟಿತೇ ಎಂಬುದು ತಿಳಿಯುವುದಿಲ್ಲ. 40-50 ಕಿ.ಮೀ. ವೇಗದಲ್ಲೇ ಇದೆ ಎಂಬ ಭಾವನೆ ಇರುತ್ತದೆ. ಹೀಗಾಗಿ ಧೈರ್ಯದಿಂದ ಬೇಗ ಬೇಗನೇ ಸೇರಿಕೊಳ್ಳಬೇಕಾದೆಡೆ ಸೇರಿಕೊಳ್ಳಬಹುದು ಎಂದು ಸ್ಪಷ್ಟನೆ ನೀಡಿದ್ದಾರೆ.

ಕುಡಿದು ವಾಹನ ಚಾಲನೆ ಮಾಡಬೇಡಿ ಎಂದು ಅಲ್ಲಲ್ಲಿ Bored ತಗುಲಿಸಿ ಎಚ್ಚರಿಸ್ತಾರಲ್ಲಾ ಅಂತ ಪ್ರಶ್ನಿಸಿದಾಗ, ಇದು ಜನರಲ್ಲಿ ಭಯ ಹುಟ್ಟಿಸುವ ಪ್ರಯತ್ನ. ಆದರೂ ನಾವು ಅದನ್ನು ಅಕ್ಷರಶಃ ಪಾಲಿಸುತ್ತಿದ್ದೇವೆ. ಕುಡಿಯುವ ಮೊದಲೇ ವಾಹನ ಚಾಲನೆಯಲ್ಲಿರಿಸಿಕೊಳ್ಳುತ್ತೇವೆ, ಆ ಬಳಿಕವಷ್ಟೇ ಅದರಲ್ಲಿ ಕೂರುತ್ತೇವೆ ಎಂದು ಸ್ಪಷ್ಟಪಡಿಸಿದರು ಕುಡಿ ಕುಮಾರ್.

ಕುಡಿದು ವಾಹನ ಓಡಿಸಿದರೆ ಸಾಯುತ್ತಾರೆ ಅಂತೆಲ್ಲಾ ಹೆದರಿಸುವುದು ಮೂರ್ಖತನದ ಪರಮಾವಧಿ. ಕುಡಿದು ಚಲಾಯಿಸಿದ್ರೆ ಏನೂ ಆಗೋದಿಲ್ಲ. ಏನಾದ್ರೂ ಅಪಘಾತ ಆದ್ರೆ ಮಾತ್ರ ತೊಂದರೆಯಾಗೋದು ಹೊರತು, ಕುಡಿದದ್ದರಿಂದ ಏನೂ ಆಗಲಾರದು ಎಂದು ಒತ್ತಿ ಒತ್ತಿ ಹೇಳಿದ ಅವರು, ಪುತ್ರಿಕಾಗೋಷ್ಠಿ ಮುಗಿಸಿ ಪಕ್ಕದ ಬಾರ್‌ಗೆ ಓಡಿದರು.

Thursday, April 02, 2009

ಚುಚ್ಚುವಾಣೆ ಆಯೋಗಕ್ಕೆ commissionರು ಬೇಕಾಗಿದ್ದಾರೆ!

(ಬೊಗಳೂರು ಚುಚ್ಚುವ ಆಣೆ ಬ್ಯುರೋದಿಂದ)
ಬೊಗಳೂರು, ಏ.2- ಕೇಂದ್ರೀಯ ಚುಚ್ಚುವಾನಣೆ ಯೋಗಾಯೋಗದಲ್ಲಿ ಮುಖ್ಯ ಆಯೋಗಿ ನಿವೃತ್ತಿ ನಂತರ, ಇತ್ತೀಚೆಗಷ್ಟೇ ಕಿರಿಕಿರಿ ಅನುಭವಿಸಿದ ಮತ್ತೊಬ್ಬ ಆಯೋಗಿ ಬಡ್ತಿ ಹೊಂದಿರುವುದರಿಂದ ಅಲ್ಲಿ ಒಂದು ಸ್ಥಾನ ತೆರವಾಗಿದೆ. ಈ ಖಾಲಿ ಖಾಲಿ ಹುದ್ದೆಗೆ ಅರ್ಜಿಗಳನ್ನು ಬೊಗಳೆ ಮೂಲಕ ಆಹ್ವಾನಿಸಲಾಗಿದೆ. [ಇದಕ್ಕಾಗಿ ಯಾವುದೇ ರೀತಿಯಲ್ಲಿಯೂ ಹಣ ಪಡೆದಿಲ್ಲ ಮತ್ತು ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಲ್ಲ ಎಂದು ಬೊಗಳೂರು ಸೊಂಪಾದ-ಕರುಗಳು ಸ್ಪಷ್ಟಪಡಿಸಿದ್ದಾರೆ.]

ಅರ್ಜಿ ಸಲ್ಲಿಸುವವರಿಗೆ ಹಲವಾರು ಅನ್‌ಅರ್ಹತೆಗಳಿರಬೇಕಾಗಿದ್ದು ಅವುಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ. ಇದು ಚುಚ್ಚುನಾವಣಾ ಆಯೋಗವು ನೀಡದಿರುವ ಜಾಹೀರಾತು ಆಗಿದ್ದು, ಬೊಗಳೆ ರಗಳೆಗೆ ಕಾಸು ನೀಡದೆ ಯಾರು ಕೂಡ ಇದನ್ನು ಓದುವಂತಿಲ್ಲ. ಹಾಗೊಂದು ವೇಳೆ ಓದಿದ್ದೇ ಆದರೆ, ಅವರು ಅರ್ಜಿ ಸಲ್ಲಿಸಲು ಅರ್ಹರಾಗುವುದಿಲ್ಲ.
  • ಚುಚ್ಚುನಾವಣಾ ಯೋಗಾಯೋಗದಲ್ಲಿ ಖಾಲಿ ಬಿದ್ದಿರುವ ಸ್ಥಾನ ತುಂಬಲು ಇರಬೇಕಾದ ಅರ್ಹತೆಗಳು:
  • ಸಾಕಷ್ಟು CD ಗಳನ್ನು ನೋಡಿ ಅಭ್ಯಾಸ ಇರಬೇಕು. ನಕಲಿ ಸೀಡಿಗಳನ್ನು ನೋಡಿ ಅಭ್ಯಾಸವಿರುವವರಿಗೆ ಆದ್ಯತೆ. ಚುನಾವಣಾ ಸಮಯವಾಗಿರುವುದರಿಂದ ನಿಮಿಷಕ್ಕೊಂದು ಸಿಡಿಗಳನ್ನು ನೋಡುವ ತುಡಿತ ಹೊಂದಿರಬೇಕು.
  • "ಕೈ ಕತ್ತರಿಸುತ್ತೇನೆ" ಎಂದರೆ ಎನ್ಎಸ್ಎ ಹೇರುವಂತೆ ಸರಕಾರಕ್ಕೆ ಸಲಹೆ ಮಾಡುವಂತಿರಬೇಕು. ಆದರೆ ಇದಕ್ಕೆ * ಷರತ್ತುಗಳು ಅನ್ವಯ! ಒಂದು ವರ್ಗಕ್ಕೆ ಮಾತ್ರ ಸೀಮಿತ. ಮತ್ತು ಟಿವಿ ಮಾಧ್ಯಮಗಳಲ್ಲಿ ಪದೇಪದೇ ಯಾವುದನ್ನು ಮಾತ್ರ ಬಿತ್ತರಿಸಿ ಬಿತ್ತರಿಸಿ ದೇಶಾದ್ಯಂತ ಬಿಸಿಬಿಸಿ ಚರ್ಚೆ, ಆಕ್ರೋಶ ಮೂಡಿಸಬೇಕು. ಎಷ್ಟನ್ನು ಮಾತ್ರ ಕತ್ತರಿಸಿ ತೋರಿಸಬೇಕೆಂಬ ನಿರ್ಣಯ ಮಾಡುವ ಜಾಣ್ಮೆ ಇರಬೇಕು.
  • ನೋಟು ಕಂಡ ತಕ್ಷಣ ಕಣ್ಣುಗಳು ಚುರುಕಾಗಬೇಕು. ಅದರಲ್ಲಿಯೂ 'ಕೈ' ಮೂಲಕ ನೋಟುಗಳು ಬಂದರೆ ಅತೀ ಹೆಚ್ಚು ಜಾಗೃತರಾಗಿ ಅದರ ಸತ್ಯಾಸತ್ಯತೆ ಪರಿಶೀಲಿಸಿದ ಬಳಿಕವಷ್ಟೇ ಮುಂದುವರಿಯಬೇಕು.
  • ಕೈಯಲ್ಲಲ್ಲದೆ, ಸೂಟುಕೇಸಿನಲ್ಲಿ, ಸೈಕಲ್ ಮೇಲೆ, ತಾವರೆ ಹೂವಿನೊಳಗೆ ಮುಂತಾದವುಗಳಲ್ಲಿ ನೋಟು ಕಂಡರಂತೂ ಕೆಂಡಾಮಂಡಲವಾಗಿ ದಿಢೀರ್ ಕೇಸು ಜಡಿಯುವ ಸಾಮರ್ಥ್ಯವಿರಬೇಕು.
  • ಒಂದೇ ಕುಟುಂಬದ ಕುಡಿಯಾದರೂ, ಅದು ಕೈಜಾರಿ ಹೋಗಿದೆ ಎಂದು ತಿಳಿದ ಬಳಿಕ, ಆಡಳಿತಾರೂಢರು ಹೇಳುವಂತೆ ಕೇಳುವಂತಹ ಮನಸ್ಥಿತಿ ಹೊಂದಿರಬೇಕು.
  • ಒಂದು ವರ್ಗದ ಪರವಾಗಿ ಧ್ವನಿಯೆತ್ತಿದರೆ ಮಾತ್ರವೇ ಅದನ್ನು ಕೋಮುವಾದ, ಕೋಮು ಉದ್ವಿಗ್ನತೆ ಸೃಷ್ಟಿಸುವ ಪ್ರಯತ್ನ ಎಂದು ಪರಿಗಣಿಸಬೇಕು. ಬೇರೆ ವರ್ಗದವರು ಏನು ಮಾಡಿದರೂ, ಏನೇ ಹೇಳಿದರೂ ಅದನ್ನು ಜಾತ್ಯತೀತತೆ ಎಂದೇ ಪರಿಗಣಿಸುವ ಮನೋ'ನಿಗ್ರಹ' ಅಲ್ಲಿರಬೇಕು.

Wednesday, April 01, 2009

Anveshi.net: ಬೊಗಳೆ ರಗಳೆ ಮತಾಂತರ!

(ಬೊಗಳೂರು ಸೊಂಪಾದಕರ ಡೆಸ್ಕಿನಿಂದ)
ಚುನಾವಣೆಗಳು ಬಂದಿವೆ. ಹೀಗಾಗಿ ತೀರಾ ಹಿಂದುಳಿದ ಬೊಗಳೂರು ಕೂಡ ಬದಲಾಗಿದೆ. ಇದರ ಹಿಂದೆ ಜಾರಕಾರಣಿಗಳ ಕೃಪಾಕಟಾಕ್ಷವಿದೆ ಎಂದು ಸಾರಿ ಸಾರಿ ಹೇಳುವವರಿಗೂ, ಮತ್ತು ಬೊಗಳೂರಿನ ಬೊಗಳೆ ರಗಳೆಯ ಹುಟ್ಟಿದ ಹಬ್ಬ ಕೂಡ ಏಪ್ರಿಲ್ 1ರಂದು ಅಲ್ಲ ಎಂದು ಎಷ್ಟೇ ಹೇಳಿದರೂ ಕೇಳದ ಓದುಗ ವರ್ಗಕ್ಕೂ ಈ ಸೊಂಪಾದಕೀಯವೊಂದು ಸ್ಪಷ್ಟನೆ ಅಥವಾ ತಪ್ಪೊಪ್ಪಿಗೆ ಅಂದುಕೊಂಡರೂ ತಪ್ಪಲ್ಲ.

ಅದೊಂದು ದಿನ ನಮಗೆ ಏನೆಂದೇ ಗೊತ್ತಿರದಿದ್ದ ಅಂತರಜಾಲ ಲೋಕದಲ್ಲಿ ಹೀಗೇ ಸುತ್ತಾಡುತ್ತಿದ್ದಾಗ ಕೆಲವೊಂದು ಕನ್ನಡ ಅಕ್ಷರಗಳು ಕೂಡ ಈ ಜಾಲದಲ್ಲಿ ಅಲ್ಲಲ್ಲಿ ನಕ್ಷತ್ರಗಳಂತೆ ಗೋಚರಿಸತೊಡಗಿದ್ದವು. ಅದೇನು ಈ ರೀತಿ ಹೊಳೆಯುತ್ತಿದೆಯಲ್ಲ ಅಂತ ಅದರ ಬೆನ್ನು ಬಿದ್ದಾಗ ದೊರೆತದ್ದು ಬ್ಲಾಗು ಸ್ಪಾಟೆಂಬ ಬ್ಲಾಗರು ತಾಣ. ಹೇಗೆ ಏನು ಅಂತ ಗೊತ್ತಿಲ್ಲದೆಯೇ, ಜಿಮೇಲ್ ಅಕೌಂಟ್ ತೆರೆದು, ಬ್ಲಾಗರ್‌ಗೆ ಬಂದು, ಅದು ನೀಡಿದ ಸೂಚನೆಗಳನ್ನೆಲ್ಲಾ ಅನುಸರಿಸಿ, "ಬೊಗಳೆ ರಗಳೆ" ತಾಣವೊಂದನ್ನು ಸೃಷ್ಟಿಸಿದಾಗ ಸಾಕು ಬೇಕಾಗಿತ್ತು.

ಇದರಲ್ಲೇನು ಹಾಕೋದು ಎಂದು ಗೊತ್ತಿಲ್ಲದೆ, ಪರದಾಡುತ್ತಿದ್ದಾಗ, "ನಮ್ಮ ಮನೆಯ ಕಸ ಗುಡಿಸಿದೆ, ನಿನ್ನೆ ಊಟ ಮಾಡಲಿಲ್ಲ, ರಾತ್ರಿ ಆಫೀಸಿಂದ ಬಂದಾಗ ತಡವಾಗಿತ್ತು, ಇವತ್ತು ಆಫೀಸಿಗೆ ಹೋಗೋವಾಗ ತಡವಾಗುತ್ತದೆ ಮತ್ತು ಟ್ರಾಫಿಕ್ ಜಾಮ್ ಸಿಗುತ್ತದೆಯಾದ್ದರಿಂದ ಬ್ರೆಡ್ ಮಾತ್ರ ಹಿಡಿದುಕೊಂಡು ಹೋದರೆ ದಾರಿಯಲ್ಲಿ ತಿನ್ನುತ್ತಾ ಸಮಯದ ಸದುಪಯೋಗ ಮಾಡಿಕೊಳ್ಳಬಹುದು" ಅಂತೆಲ್ಲಾ ಬರೆದರೆ, ಇದರಲ್ಲಿ ಏನು ವಿಶೇಷ? ಎಂದು ಯೋಚಿಸಿದಾಗ ಹೊಳೆದದ್ದು- "ಎಲ್ಲರೂ ಸತ್ಯ ಹೇಳುತ್ತಾರೆ, ಅದು ಎಲ್ಲರಿಗೂ ಗೊತ್ತಿದೆ. ಅಸತ್ಯದ ಬಗ್ಗೆ ಯಾರು ಕೂಡ ತಲೆ ಕೆಡಿಸಿಕೊಂಡಿಲ್ಲವಲ್ಲ" ಎಂಬುದು.

ಹೌದು. 2006ರ ಮೂರ್ಖರ ದಿನದಂದೇ ಈ ಬೊಗಳೆ ಬ್ಲಾಗು ಕಣ್ತೆರೆದದ್ದು. ಆದ್ರೆ ಹೇಗೆ ಮುಂದುವರಿಯುವುದು ಎಂದೆಲ್ಲಾ ಗೊತ್ತಾಗದೆ ನಾಲ್ಕೈದು ದಿನ ಒದ್ದಾಡಿ, ಮೊದಲ ಪೋಸ್ಟ್ ಮಾಡಿದಾಗ ಏಪ್ರಿಲ್ 4 ಆಗಿತ್ತು. ಹೀಗಾಗಿ ಅಧಿಕೃತ ಜನ್ಮದಿನ ಏಪ್ರಿಲ್ 1 ಆಗಿದ್ದರೂ, ನೆಟ್ಟೋದುಗರು ಮತ್ತು ಇಲ್ಲಿಗೆ ಬಂದು ಇಣುಕಿದ ತಕ್ಷಣ ಬ್ಲಾಗು ಬಿಟ್ಟೋಡುಗರಾಗುವವರ ತೀವ್ರ ಕೆಂಗಣ್ಣಿನಿಂದ ಪಾರಾಗಲು ಏಪ್ರಿಲ್ 4 ನಮ್ಮ ಬೊಗಳೂರು ಸ್ಥಾಪನಾ ದಿನಾಚರಣೆ ಎಂದೆಲ್ಲಾ ಸುಳ್ಳುಹೇಳಬೇಕಾಯಿತು.

ಆ ಬಳಿಕ ಒದೆಗಳು ಒಂದೊಂದಾಗಿ ಬೀಳುತ್ತಾ, ನಮ್ಮ ಒದೆಯ ಕೌಂಟರು ಹತ್ತು ಸಾವಿರ ದಾಟಿದಾಗ ನಮ್ಮ ಜಗತ್ತಿನಲ್ಲಿ ಕೋಟಿಗೆ ಸಾಟಿಯಿಲ್ಲದ ಓದುಗರೆಲ್ಲಾ ಬಂದು ಧಮಕಿ ಹಾಕಿ ಹೋದಾಗ, ಏನೇ ಬರಲಿ, ಬೊಗಳೆ ಮುಂದುವರಿಸಬೇಕು ಅಂತ ಪಣತೊಟ್ಟಿದ್ದಾಯ್ತು. ಹಾಗಾಗಿ ಒಂದು ವರ್ಷದ ಮಗುವಿಗೆ 25 ಸಾವಿರ ಒದೆಗಳು ಸಿಕ್ಕಿದ್ದನ್ನೂ ಇಲ್ಲಿ ಉಲ್ಲೇಖಿಸಿದ್ದೆವು.

ಇದೆಲ್ಲ ಯಾಕೆ ಹೇಳಬೇಕಾಯಿತೆಂದರೆ, ಇಂದು ಬೊಗಳೂರಿನ ಹುಟ್ಟು ಹಬ್ಬ. ಇಷ್ಟರವರೆಗೆ ಬೊಗಳೆಯ ರಗಳೆಯನ್ನು ಸಹಿಸಿಕೊಂಡು, ಇನ್ನೂ ಬೊಗಳೆಗೆ ಮರಳಿ ಭೇಟಿ ನೀಡುವ ಧೈರ್ಯತೋರಿದವರಿಗೆಲ್ಲರಿಗೂ ನಾಲ್ಕನೇ ವರ್ಷಕ್ಕೆ ಕುಂಟುತ್ತಾ ಸಾಗುತ್ತಿರುವ ಈ ಏಕಸದಸ್ಯ ಬೊಗಳೂರು ಬ್ಯುರೋದಲ್ಲಿರುವ ಸಮಸ್ತರು ಧನ್ಯವಾದ ಹೇಳತೊಡಗಿದ್ದಾರೆ.

ಎಮ್ಮೆ ತರುವ ವಿಷಯವೆಂದರೆ, ನಮ್ಮದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನರನ್ನು ಕಂಗೆಡಿಸುತ್ತಿರುವ ಪತ್ರಿಕೆ! ಬಾಯಿಗೆ ಬಂದದ್ದನ್ನು ಬೊಗಳುತ್ತಲೇ, ತೋಚಿದ್ದನ್ನು ಗೀಚುತ್ತಾ, ಪ್ರಾಣಿ, ಪಕ್ಷಿಗಳ ಸಂರಕ್ಷಣೆಗಾಗಿ ಹೋರಾಡುತ್ತಿರುವ ಈ ಬೊಗಳೆ ರಗಳೆ ಬ್ಯುರೋ, ತಮ್ಮ ಊರಿನಲ್ಲಿ ಮುರಿದು ಲಟಾರಿಯಾಗತೊಡಗಿದ ಕೀಬೋರ್ಡನ್ನು ಎತ್ತಿ ಎತ್ತಿ ಕುಕ್ಕಿ ಕುಕ್ಕಿ ಎಲ್ಲರಿಗೂ ಕೈಬಾಯಿ ಬಿಟ್ಟು ಧನ್ಯವಾದ ಹೇಳುತ್ತಿದೆ.

ಇದೀಗ, 525ಕ್ಕೂ ಹೆಚ್ಚು ಬೊಗಳೆಗಳಿಗೆ ಅರುವತ್ತೆಂಟುವರೆ ಸಾವಿರ ಒದೆತಗಳು (ಇದರಲ್ಲಿ ನನಗೆ ನಾನೇ ಒದ್ದುಕೊಂಡದ್ದೆಷ್ಟೋ!), ಮತ್ತೊಂದಷ್ಟು ಮಂದಿಯ ಹೊಗಳಿಗೆ, ತೆಗಳಿಗೆ, ಹೀಗಳಿಕೆಗಳು.... ಇವುಗಳ ಮೂಲಕವಾಗಿ ಆರಂಭಿಕ ದಿನಗಳಿಂದಲೂ ಈ ಬೊಗಳೂರು ಬ್ಯುರೋವು ಈ ಹಂತಕ್ಕೆ ಇಳಿಯುವಲ್ಲಿ ಬಂದು ತಲುಪುವಲ್ಲಿ ಪ್ರೋತ್ಸಾಹಿಸುತ್ತಿರುವವರಿಗೆಲ್ಲರಿಗೂ ನಮೋ ನಮಃ.

ನಾಲ್ಕನೇ ವರ್ಷದ ಹುಟ್ಟುಹಬ್ಬಕ್ಕೆ ಟ್ರೀಟ್ ಕೇಳ್ತೀರಾ ಅಂತ ಗೊತ್ತಿತ್ತು. ಹೀಗಾಗಿ ಅದಕ್ಕೊಂದು ಕೊಡುಗೆ. ಯುಆರ್ಎಲ್‌ನಲ್ಲಿ blog ಎಂಬ ನಾಲ್ಕಕ್ಷರ ಬಂದ ತಕ್ಷಣ ನಿಮ್ಮ ನಿಮ್ಮ ಕಚೇರಿಯಲ್ಲಿ ಅದನ್ನು (ಹೆಚ್ಚಿನವರ ಕಚೇರಿಗಳಲ್ಲಿ) ಬ್ಲಾಕ್ ಮಾಡಲಾಗಿದೆ ಎಂಬುದು ಗೊತ್ತಿದೆ. ಇನ್ನು ನಮ್ಮ ಬೊಗಳೂರು ಬ್ಯುರೋ ಬೊಗಳೆರಗಳೆ ಡಾಟ್ ಬ್ಲಾಗ್‌ಸ್ಪಾಟ್ ಎಂಬುದು ಬ್ಲಾಕ್‌ಸ್ಪಾಟ್ ಆಗದಂತಿರಲು www.anveshi.net ಎಂಬ ತಾಣಕ್ಕೆ ಮತಾಂತರಗೊಂಡಿರುತ್ತದೆ. ಆ ಮೇಲೆ, ಇನ್ನು ಮುಂದೆ ಯಾರು ಕೂಡ "ಮಂಗ ಮುಸುಡಿನವ ಬಂದ" ಎಂದುಕೊಳ್ಳದಂತೆಯೂ ಅವ್ಯವಸ್ಥೆ ಮಾಡಿಕೊಂಡಿದ್ದೇವೆ!

ನೀವೆಲ್ಲರೂ ಕೂಡ ಬ್ಲಾಗ್ತಾ ಇರಿ, ನಮ್ಮಂತವರನ್ನು ಬ್ಲಾಗಿಸ್ತಾ ಇರಿ...

(ಮನವಿ: ಏಪ್ರಿಲ್ 1ರಂದು ನಮ್ಮನ್ನು ಎಲ್ಲರೂ ಮೂರ್ಖರಾಗಿಸುತ್ತಿದ್ದಾರೆ ಚಿಂತೆ ಬೇಕಿಲ್ಲ. ಇದು ಬೊಗಳೂರಿನ ವಿಶೇಷ. ಹೀಗಾಗಿ anveshi.net ಅಂತ ತಾಣಗಳಲ್ಲಿ ಬೊಗಳೂರಿನ ಲಿಂಕ್ ಬದಲಾಯಿಸಿಕೊಳ್ಳ್ಳುವಂತೆ ಸಹಬ್ಲಾಗಿಗರಲ್ಲಿ ಕೋರಿಕೆ.)
-ಸೊಂಪಾದಕರು

(ದಯವಿಟ್ಟು ನೆನಪಿಡಿ: IE-8 ಯಾರೆಲ್ಲಾ install ಮಾಡಿಕೊಂಡಿದ್ದಾರೋ... ಅದು ಕೆಲವು ವೆಬ್ ಸೈಟುಗಳನ್ನು ತೆರೆಯಲು ಹಿಂದೇಟು ಹಾಕುತ್ತಿದ್ದು, ಅದೇ ರೀತಿ ಬೊಗಳೆ ರಗಳೆಯೂ ಅದರ ಕಪ್ಪು ಪಟ್ಟಿಗೆ ಸೇರಿಕೊಂಡುಬಿಟ್ಟಿದೆ. ಆದುದರಿಂದ, IE-8ಕ್ಕಿಂತ ಹಿಂದಿನ versions, ಫೈರ್‌ಫಾಕ್ಸ್ ಅಥವಾ ಗೂಗಲ್ ಕ್ರೋಮ್‌ನಲ್ಲಿ ಮಾತ್ರ ಬೊಗಳೆಗೆ ಅನುಮತಿ ಇದೆ!)

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...