ಬೊಗಳೆ ರಗಳೆ

header ads

Drink and Drive ತರಬೇತಿ ಶಾಲೆ!

(ಬೊಗಳೂರು ಕುಡುಕರ ಬ್ಯುರೋದಿಂದ)
ಬೊಗಳೂರು, ಏ.6- ಕುಡಿದು ವಾಹನ ಚಲಾಯಿಸಲು ತರಬೇತಿ ನೀಡುತ್ತಿರುವ ತಮ್ಮ ಸಂಘದ ಸದಸ್ಯನನ್ನು ಬಂಧಿಸಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಕುಡುಕ ಚಾಲಕರ ಸಂಘವು ಮತ್ತು ಬಾಲಕರ ಸಂಘವು, ಇದಕ್ಕೆ ಮಾನ್ಯತೆ ನೀಡಿ ಹೊಸದೊಂದು ಸುಗ್ರೀವನ ಆಜ್ಞೆ ಜಾರಿಗೊಳಿಸಬೇಕೆಂದು ಆಗ್ರಹಿಸಿದೆ.

ಕುಡಿದು ವಾಹನ ಚಲಾಯಿಸುವುದು ತಮ್ಮ ಆಜನ್ಮ ಸಿದ್ಧ ಹಕ್ಕು ಎಂದಿರುವ ಸಂಘದ ಅಧ್ಯಕ್ಷ ಶ್ರೀಮಾನ್ ಕುಡಿ ಕುಮಾರ್ ಅವರು, ನಿರ್ಜೀವ ವಾಹನಗಳಿಗಾದರೆ ಪೆಟ್ರೋಲ್ ಕುಡಿಸಬೇಕಾಗುತ್ತದೆ, ಜೀವವಿರುವ ಮಾನವರಾಗಿರುವ ನಮಗೇಕಿಲ್ಲ ಎಂದು ಪ್ರಶ್ನಿಸಿದ್ದಾರೆ.

ಈ ವಾಹನ ಡ್ರೈವಿಂಗ್ ಸ್ಕೂಲ್ ತೆರೆದದ್ದೇ ಈ ದೇಶದಲ್ಲಿ ಅಪಘಾತ ಕಡಿಮೆ ಮಾಡಲು ಎಂದು ಸಮರ್ಥಿಸಿಕೊಂಡಿರುವ ಕುಡಿ ಕುಮಾರ್, ಕುಡಿದು ವಾಹನವನ್ನು ಚಲಾಯಿಸುವುದು ಹೇಗೆ ಎಂದು ಅಲ್ಲಿ ಎಲ್ಲರಿಗೂ ಹೇಳಿಕೊಡುತ್ತಿದ್ದುದಾಗಿ ಸ್ಪಷ್ಟಪಡಿಸಿದ್ದಾರೆ.

ಜೀವವಿರುವ ನಮಗೆ ಕುಡಿಯಬಾರದು ಎಂದು ಹೇಳುವುದು ಮಾನವ ಹಕ್ಕುಗಳ ಉಲ್ಲಂಘನೆ ಎಂದಿರುವ ಅವರು, ತಾವೇನೂ ತಮ್ಮ ಮನರಂಜನೆಗಾಗಿಯೋ ಅಥವಾ ಹಾಳಾಗಿ ಕೆಟ್ಟು ಕೆರ ಹಿಡಿದ ಮನಸ್ಸು ಸರಿಪಡಿಸುವುದಕ್ಕಾಗಿಯೋ ಕುಡಿಯುತ್ತಿರಲಿಲ್ಲ. ಕುಡಿದು ಹೇಗೆ ವಾಹನ ಚಲಾಯಿಸಬಹುದು ಎಂದೆಲ್ಲಾ ಪ್ರಯೋಗ ಮಾಡಿ, ಅದನ್ನು ಬೇರೆಯವರಿಗೆ ಕಲಿಸಿಕೊಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಅದೇ ಹಳೇ ಕಾಲದ ಸ್ಲೋಗನ್ ಬಿಟ್ಟು, ಸ್ತ್ರೀಯರೆಲ್ಲರೂ 'ಕೊಡು ತಾಯೆ ವರವ, ಕುಡುಕನಾಗಿಹ ಗಂಡನ' ಅಂತ ಹೊಸ ಸ್ಲೋಗನ್ ಜೊತೆಗೆ ಪ್ರಾರ್ಥಿಸುವಂತೆ ಮಾಡುತ್ತೇವೆ, ಇದು ಒಬಾಮ ಹೇಳಿರುವಂತೆ 'We can Change' ಎಂಬ ಉದ್ದೇಶ ಹೊಂದಿದೆ ಎಂದು ತಿಳಿಸಿರುವ ಅವರು, ಕುಡಿದು ವಾಹನ ಚಲಾಯಿಸಿದರಷ್ಟೇ "ಗಮ್ಯ" ಸ್ಥಾನವನ್ನು ಬೇಗನೇ ತಲುಪಬಹುದು ಎಂದು ಹೇಳಿದ್ದಾರೆ!

ಆ ಗಮ್ಯ ಸ್ಥಾನ ಯಾವುದು ಎಂಬುದನ್ನು ವಿಶ್ಲೇಷಣೆ ಮಾಡಲು ಹೋಗದಂತೆ ಪುತ್ರಕರ್ತರಿಗೆ ಮನವಿ ಮಾಡಿಕೊಂಡಿರುವ ಅವರು, ಕುಡಿದ ತಕ್ಷಣ ಗಾಡಿಯು ಎಷ್ಟು ವೇಗದಲ್ಲಿದೆ, ಗಂಟೆಗೆ ನೂರು ಕಿ.ಮೀ. ದಾಟಿತೇ ಎಂಬುದು ತಿಳಿಯುವುದಿಲ್ಲ. 40-50 ಕಿ.ಮೀ. ವೇಗದಲ್ಲೇ ಇದೆ ಎಂಬ ಭಾವನೆ ಇರುತ್ತದೆ. ಹೀಗಾಗಿ ಧೈರ್ಯದಿಂದ ಬೇಗ ಬೇಗನೇ ಸೇರಿಕೊಳ್ಳಬೇಕಾದೆಡೆ ಸೇರಿಕೊಳ್ಳಬಹುದು ಎಂದು ಸ್ಪಷ್ಟನೆ ನೀಡಿದ್ದಾರೆ.

ಕುಡಿದು ವಾಹನ ಚಾಲನೆ ಮಾಡಬೇಡಿ ಎಂದು ಅಲ್ಲಲ್ಲಿ Bored ತಗುಲಿಸಿ ಎಚ್ಚರಿಸ್ತಾರಲ್ಲಾ ಅಂತ ಪ್ರಶ್ನಿಸಿದಾಗ, ಇದು ಜನರಲ್ಲಿ ಭಯ ಹುಟ್ಟಿಸುವ ಪ್ರಯತ್ನ. ಆದರೂ ನಾವು ಅದನ್ನು ಅಕ್ಷರಶಃ ಪಾಲಿಸುತ್ತಿದ್ದೇವೆ. ಕುಡಿಯುವ ಮೊದಲೇ ವಾಹನ ಚಾಲನೆಯಲ್ಲಿರಿಸಿಕೊಳ್ಳುತ್ತೇವೆ, ಆ ಬಳಿಕವಷ್ಟೇ ಅದರಲ್ಲಿ ಕೂರುತ್ತೇವೆ ಎಂದು ಸ್ಪಷ್ಟಪಡಿಸಿದರು ಕುಡಿ ಕುಮಾರ್.

ಕುಡಿದು ವಾಹನ ಓಡಿಸಿದರೆ ಸಾಯುತ್ತಾರೆ ಅಂತೆಲ್ಲಾ ಹೆದರಿಸುವುದು ಮೂರ್ಖತನದ ಪರಮಾವಧಿ. ಕುಡಿದು ಚಲಾಯಿಸಿದ್ರೆ ಏನೂ ಆಗೋದಿಲ್ಲ. ಏನಾದ್ರೂ ಅಪಘಾತ ಆದ್ರೆ ಮಾತ್ರ ತೊಂದರೆಯಾಗೋದು ಹೊರತು, ಕುಡಿದದ್ದರಿಂದ ಏನೂ ಆಗಲಾರದು ಎಂದು ಒತ್ತಿ ಒತ್ತಿ ಹೇಳಿದ ಅವರು, ಪುತ್ರಿಕಾಗೋಷ್ಠಿ ಮುಗಿಸಿ ಪಕ್ಕದ ಬಾರ್‌ಗೆ ಓಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

13 ಕಾಮೆಂಟ್‌ಗಳು

  1. Drink and Kill ಅನ್ನೋ ತರಬೇತಿ ಶಾಲೆ ಬಂದ್ರುನು ಆಶ್ಚರ್ಯ ಇಲ್ಲ ಬಿಡಿ. ಮಾನವನಿಗೆ ಬೆಲೆ ಎಲ್ಲಿದೆ ಈಗ,

    ಪ್ರತ್ಯುತ್ತರಅಳಿಸಿ
  2. ಕುಡುಕರು ಅಪಘಾತ ಮಾಡೋದಿಲ್ವಂತೆ. ಹಾದಿಯಲ್ಲಿ ಓಡಾಡುವರು, ಹೆದರಿ ತಾವಾಗೇ ವಾಹನಕ್ಕೆ ಬಂದು ಢಿಕ್ಕಿ ಹೊಡೆದು ಘಾಸಿಗೊಳುವರಂತೆ - ನನ್ನ ಸ್ನೇಹಿತನೊಬ್ಬ ದಿನಪೂರ್ತಿ ಕುಡಿದಿರ್ತಾನೆ, ಅವನು ಹೇಳಿದ್ದು. ತಾನು ಯಾರಿಗೂ ತೊಂದರೆ ಮಾಡೋಲ್ಲ, ಎಲ್ಲರೂ ತನಗೆ ತೊಂದರೆ ಮಾಡ್ತಾರೆ, ತೊಂದರೆಗೆ ಸಿಲುಕಿಕೊಳ್ತಾರೆ, ನಮ್ಮ ಮೇಲೆ ಅಲ್ಲ ಸಲ್ಲದ ಆರೋಪ ಹೊರಿಸ್ತಾರೆ ಅಂತ ಹೇಳ್ತಿದ್ದ.

    ಪ್ರತ್ಯುತ್ತರಅಳಿಸಿ
  3. ಕನಿಷ್ಠ ಒಂದು quarter ದ್ರವ್ಯವನ್ನು ಒಳಗಿಳಿಸಿ,೧೦೦ ಕಿಲೋಮೀಟರ speedನಲ್ಲಿ ಗಾಡಿ ಚಲಾಯಿಸುವ ತಾಕತ್ತಿದ್ದವರಿಗೆ ಮಾತ್ರ Driving License (to kill) ನೀಡಬೇಕು.
    ಸಲ್ಮಾನ ಖಾನನನ್ನು ಈ ಸ್ಕೂಲಿನ principal ಮಾಡಬೇಕು.
    ಈ ಸ್ಕೂಲಿನ ಘೋಷಣೆ ಹೀಗಿರಬೇಕು:
    ಕುಡಿಯೋಣ ಬಾರಾ ಕುಡಿಯೋಣ ಬಾ
    ಕುಡಿದು ಗಾಡಿಯನು ಹೊಡೆಯೋಣ ಬಾ

    ಪ್ರತ್ಯುತ್ತರಅಳಿಸಿ
  4. edakke nanna sumporna benbala edhe.

    namma vyapara hechhisalu anukula madi kotta nimage 2 kali bottlegallanu udugoreyagi nidalu trimanisalagidhe.

    ಪ್ರತ್ಯುತ್ತರಅಳಿಸಿ
  5. ಸರ್,

    ಓದಿ ನಗು ಬಂತು...ಕೊನೆಗೆ ನೀವೇಳಿದಂತೆ ಮುಂದೊಂದು ದಿನ ಈ ಕಾನೂನು ಬಂದರೂ ಬರಬಹುದು ಅನ್ನಿಸುತು..

    ಪ್ರತ್ಯುತ್ತರಅಳಿಸಿ
  6. ಸಾಗರದಾಚೆಯಿಂದ ಇಂಚರಿಸುವವರೆ,
    ಮಾನಕ್ಕೂ ಬೆಲೆ ಇಲ್ಲ, ಮಾನವನಿಗೂ ಇಲ್ಲ, ಮಾವನಿಗೂ ಇಲ್ಲ ಬೆಲೆ. ಏನಿದ್ದರೂ ಹಣಕ್ಕೆ ಮತ್ತು ಓಟಿಗೆ ಮಾತ್ರ ಬೆಲೆ ಈಗ!

    ಪ್ರತ್ಯುತ್ತರಅಳಿಸಿ
  7. ತಿರುಕರೆ ಅಥವಾ ಕುರುಕುರೆ?,
    ನಿಮ್ಮ ಈ ಸಂಚೋದನೆಯಿಂದ ಹೆದರುವವರನ್ನು ನಿಷೇಧಿಸಲು ಕೇಂದ್ರದ ಸರಕಾರವು ಚಿಂತನೆ ನಡೆಸುತ್ತಿದೆ. ನೀವೇನೂ ಹೆದರಬೇಕಾಗಿಲ್ಲ...

    ಪ್ರತ್ಯುತ್ತರಅಳಿಸಿ
  8. ಸುನಾಥರೆ,
    ಸಲ್ಲುಮಾನಖಾನನನ್ನು ಪ್ರಿನ್ಸಿಪಾಲ ಮಾಡಿದರೆ ಐಶ್, ಕ್ಯಾಟ್ರಿನಾ, ಕರೀನಾ, ಇತ್ಯಾದಿ ಸುಂದರಿಯರೆಲ್ಲಾ ಸೌಂದರ್ಯ ಕಳೆದುಕೊಳ್ಳಬಹುದು. ಮಾದಕತೆ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದು ಅಪಘಾತವೂ ಕಡಿಮೆಯಾಗಬಹುದೆಂಬ ವಾದವೂ ಇದೆ.

    ಮತ್ತೆ, ಕ್ವಾರ್ಟರಿಗೆ 100 ಕಿ.ಮೀ. ಓಡಿಸುವ ನಿಮ್ಮ ಸಲಹೆಯನ್ನು ನ್ಯಾನೋ ಕಾರು ತಯಾರಕರಿಗೆ ಕಳುಹಿಸಲಾಗಿದೆ...

    ಪ್ರತ್ಯುತ್ತರಅಳಿಸಿ
  9. ವಿಜಯ ಮಲ್ಯ ಹೆಸರಿನ ಅನಿಮೋಸ ಅವರೆ,

    ಆ ಖಾಲಿ ಬಾಟಲಿಯಲ್ಲಿ ಏನಾದರೂ ಇರಲಿ ಎಂದು ಬೊಗಳೂರು ಸದಸ್ಯರು ಕೇಳಿ-"ಕೊಲ್ಲು"ತ್ತಿದ್ದಾರೆ.
    ಆದರೆ ನೀವು ಹೇಳಿದ್ದು ಕಳಿ* ಬಾಟಲ್ಲೋ ಅಥವಾ ಖಾಲಿ ಬಾಟಲ್ಲೋ ಎಂಬುದಿನ್ನೂ ಶಂಕೆಯಿದೆ.

    *ಕಳಿ ಅಂದರೆ ಹೆಂಡ

    ಪ್ರತ್ಯುತ್ತರಅಳಿಸಿ
  10. ಶಿವು ಅವರೆ,

    ಕಾನೂನು ಕಡ್ಡಾಯ ಮಾಡಲು ಜಾರಕಾರಣಿಗಳು ಬದ್ಧ. ಅದನ್ನು ಮುರಿಯಲು ಕುಡುಕರು ಸಿದ್ಧ.

    ಪ್ರತ್ಯುತ್ತರಅಳಿಸಿ
  11. ಇದು ತುಂಬಾ ಅನ್ಯಾಯ ಕಣ್ರಿ .. ಸರಕಾರ ಕಡು ಬಡವರಿಗೆ ಅಂಥಾ ೨ ರೊಪಾಯಿಗೆ ೧.ಕೆ.ಜಿ ಅಕ್ಕಿ ಕೊಡ್ತಾರೆ ..ಅದೆ ಕಡು-ಕುಡುಕರಿಗೆ ೨ರೊಪಾಯಿಗೆ ಒಂದು ಕ್ವಾಟ್ರ್ ಬಾಟಲ್ ಕೊಡೊ ವ್ಯವಸ್ತೆನಾ ಮಾಡಿ ಅಂಥಾ ನಮ್ಮ ಕುಡುಕರ ಸಂಘದ ಅದ್ಯಕ್ಷರು ನಮ್ಮ ಸನ್ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ಮಾಡಿ ಕೊಡ ಬೆಕೆಂದು ನಾನು ಕಳ-ಕಳಿ ಇಂದ ಕೇಳಿಕೊಳ್ಳುತ್ತೆನೆ..

    ಪ್ರತ್ಯುತ್ತರಅಳಿಸಿ
  12. ಅನಾನಿಮಸರೇ,
    ನಿಮ್ಮ ಕಳ್ಳ-ಕಳ್ಳಿ ನಮಗೂ ಬಂದು ತಲುಪಿದೆ ಎಂದಿದ್ದಾರೆ ಮುಖ್ಯ ಕಂತ್ರಿಗಳು. ಹೀಗಾಗಿ ಖಂಡಿತಾ ಕಳ್ಳು ಕೊಡಿಸುತ್ತಾರೆ, ಕಡಿಮೆ ದರದಲ್ಲಿ!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D