Monday, May 25, 2009

ಕರುಣಾ'ಜನಕ' ದಿಲ್ಲಿಯಲ್ಲಿ: ಬಿಕೋ ಎಂದ ತಮಿಳುಕಾಡು

(ಬೊಗಳೂರು ಕುರುಡುನಾಡು ಬ್ಯುರೋದಿಂದ)
ಬೊಗಳೂರು, ಮೇ 25- ತಮಿಳುಕಾಡಿನ ಪ್ರಥಮ ಕುಟುಂಬವು ತನ್ನೆಲ್ಲಾ ಶಕ್ತಿ-ಸಾಮರ್ಥ್ಯ-ಜನಬಲ-ಕುಟುಂಬ ಬಲಗಳನ್ನೆಲ್ಲವನ್ನೂ ದೆಹಲಿಗೆ ವರ್ಗಾಯಿಸಿರುವ ಕಾರಣದಿಂದಾಗಿ ತಮಿಳುಕಾಡು ಬಿಕೋ ಎನ್ನುತ್ತಿದ್ದ ಘಟನೆಯೊಂದು ಯಾರಿಗೂ ತಿಳಿಯದಂತೆ ಘಟಿಸಿದ್ದು, ಅದನ್ನು ಬೊಗಳೂರು ವರದ್ದಿಗಾರರು ಪತ್ತೆ ಹಚ್ಚಿರುವುದಾಗಿ ಅನ್ಯ ಪತ್ರಿಕೆಗಳಲ್ಲಿ ವರದ್ದಿಯಾಗಿದೆ.

ದೇಶದ ಪ್ರಥಮ ರಾಜಕೀಯ ಕುಟುಂಬದ ಸಾನಿಯಾ ಗಾಂಧಿ ಮತ್ತವರ ಮಕ್ಕಳು ಕೇಂದ್ರದಲ್ಲಿ ಅಧಿಕಾರ ಚಲಾಯಿಸುತ್ತಿದ್ದಾರೆ. ಹೀಗಾಗಿ ತಮಿಳುಕಾಡಿಗೆ ಸೀಮಿತವಾಗಿದ್ದ ನಮ್ಮ ಕುಟುಂಬವೂ ಕೇಂದ್ರದಲ್ಲಿ ಹೆಚ್ಚು ಅಧಿಕಾರ ಚಲಾಯಿಸಬೇಕಾಗುತ್ತದೆ. ಯಾಕೆಂದರೆ, ಅವರ ಕುಟುಂಬದಲ್ಲ ಸದ್ಯಕ್ಕೆ ಮೂವರು ಪ್ಲಸ್ 2 (ಮನೇಕಾ-ವರುಣ್) ಮಾತ್ರ ಇದ್ದಾರೆ. ನಮ್ಮ ಕುಟುಂಬದ ಸದಸ್ಯ ಬಲ ಅದಕ್ಕಿಂತ ದೊಡ್ಡದು ಎಂಬುದು ಕರುಣಾಕಿಡಿ ವಾದವಾಗಿತ್ತು.

ಈಗಷ್ಟೇ ಚುನಾವಣೆಗೆ ನಿಂತ ಎರಡನೇ ಹೆಂಡತಿಯ ಒಬ್ಬ ಮಗನಿಗೆ ಕೇಂದ್ರದಲ್ಲಿ ಗೃಹಸಚಿವ ಪಟ್ಟ ಕೊಟ್ಟರೂ ಸಾಕು. ಸಾಧ್ಯವೇ ಇಲ್ಲದಿದ್ದರೆ, ಅಳಗಿರಿ ರಂಗನಿಗೆ ಶಿಕ್ಷಣ ಖಾತೆಯನ್ನು ಒಪ್ಪಿಸಬೇಕು. ಯಾಕೆಂದರೆ ಆತನಿಗೆ ಇಂಗ್ಲಿಷ್ ಅಥವಾ ಹಿಂದಿ ಬರುವುದಿಲ್ಲ. ತಮಿಳು ಮಾತ್ರ ಬರುವುದರಿಂದ ಇಡೀ ರಾಷ್ಟ್ರದಲ್ಲಿ ತಮಿಳು ಕಡ್ಡಾಯ ಮಾಡಿ, ಇಡೀ ದೇಶದ ಜನತೆ ಕೇಂದ್ರ ಮಂತ್ರಿಗಳೊಂದಿಗೆ ತಮಿಳಿನಲ್ಲಿ ಬೆರೆಯುವಂತಾಗಬಹುದು, ಸಮುದಾಯ ಸಾಮರಸ್ಯ ಇದರಿಂದ ಸಾಧ್ಯವಾಗುತ್ತದೆ ಎಂದು ಅವರು ಅಪ-ವಾದಿಸಿರುವುದನ್ನು ಬೊಗಳೂರು ಅನ್ವೇಷಣಾ ಬ್ಯುರೋದವರು ಪತ್ತೆ ಹಚ್ಚಿದ್ದಾರೆ.

ಮೂರನೇ ಹೆಂಡತಿಯ ಒಬ್ಬ ಮಗ ಈಗ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದರೂ, ಕೇಂದ್ರದಲ್ಲಿಯೂ ಆತನಿಗೆ ಪಾಲು ನೀಡಬೇಕು ಎಂದು ನಾವು ಯುಪಿಎ ಸರಕಾರದ ಒಡತಿಯನ್ನು ಒತ್ತಾಯಿಸಿರುವುದಾಗಿ ಕುರುಣಾನಿಧಿ ಬೊಗಳೂರಿಗೆ ತಿಳಿಸಿದ್ದಾರೆ.

ಇನ್ನು, ಸೋದರ ಸಂಬಂಧಿಗಳಾದ ನಿರ್ದಯನಿಧಿ ಮಾರನ್‌ಗೆ, ಕಳೆದ ಸರಕಾರದಲ್ಲಿ ಸಚಿವರಾಗಿ ತಮ್ಮ ತಮ್ಮ ಕುಟುಂಬದವರಿಗೆ ಸಾಕಷ್ಟು 'ಗಳಿಕೆ'ಗೆ ಕಾರಣವಾಗಿದ್ದ ಟಿ.ಆರ್.ಬೋಲು ಮತ್ತು ಧೀ...ರಜರಿಗೂ ಒಂದೊಂದು ಸಂಪುಟ ಕೊಡಬೇಕು. ಸಾಧ್ಯವಾದರೆ, ನನಗೂ ಒಂದು ಸ್ಥಾನವನ್ನು ಡೆಲ್ಲಿಯ ತಮಿಳುಭವನದಲ್ಲಿ ನೀಡಬೇಕು. ಯಾಕೆಂದರೆ ಕೇಂದ್ರ ರಾಜಕಾರಣದ ಪ್ರಥಮ ಕುಟುಂಬದ ಒಡತಿ ಯಾವ ರೀತಿ ಯಾವುದೇ ಖಾತೆ ಇಲ್ಲದೆ ಕೇಂದ್ರದ ಎಲ್ಲ ಸವಲತ್ತು ಪಡೆಯುತ್ತಿದ್ದಾರೋ, ಅದೇ ರೀತಿ ನನಗೂ ಒಂದು ವ್ಯವಸ್ಥೆಯಾಗಬೇಕು. ಯಾಕೆಂದರೆ ನನ್ನ ಕುಟುಂಬ ಸದಸ್ಯರ ಸಂಖ್ಯೆ ಅವರಿಗಿಂತ ಹೆಚ್ಚಲ್ಲವೇ ಎಂದು ಪ್ರಶ್ನಿಸಿರುವುದಾಗಿಯೂ ತಿಳಿಸಿದ್ದಾರೆ.

ತಾವು ಕಪ್ಪು ಕನ್ನಡಕ ಹಾಕಿಕೊಂಡಿರುವ ಮೇಲ್ ಆಗಿರುವುದರಿಂದಾಗಿಯೇ ಬಹುಶಃ ಬೊಗಳೆ ರಗಳೆ ಸೇರಿದಂತೆ ದೇಶದ ಅಂತಾರಾಷ್ಟ್ರೀಯ ಖ್ಯಾತಿಯ ಮಾಧ್ಯಮಗಳೆಲ್ಲ ನಮ್ಮನ್ನು 'ಬ್ಲ್ಯಾಕ್ ಮೇಲ್' ಅಂತ ಇಂಗ್ಲಿಷಿನಲ್ಲಿ ಕರೆಯುತ್ತಿವೆ ಎಂದು ಸಂತಸದಿಂದ ತಮಿಳಿನಲ್ಲಿಯೇ ನುಡಿದ ಕುರುಣಾನಿಧಿ, ಓಹ್, ಮೊದಲ ಹೆಂಡತಿಯ ಮಗಳು ಕಾಣೆಮೋಳಿಯನ್ನು ಮರೆತೇಬಿಟ್ಟೆನಲ್ಲ, ಆಕೆಗೆ ಮಕ್ಕಳಿಗೆ ಕಲ್ಯಾಣ ಮಾಡಿಸುವ ಖಾತೆ ನೀಡಬೇಕು ಎಂದೂ ಒತ್ತಾಯಿಸಿರುವುದಾಗಿ ನೆನಪಿಸಿಕೊಂಡರು.

Saturday, May 23, 2009

ಪಿಎಂ ಹುದ್ದೆ ಕೇಳಿಲ್ಲ: ಕರುಣಾ ಬ್ಯಾನರ್ಜಿ, ಮಮತಾ ನಿಧಿ ಸ್ಪಷ್ಟನೆ

(ಬೊಗಳೂರು ಸರಕಾರ ರಚನಾ ಬ್ಯುರೋದಿಂದ)
ಬೊಗಳೂರು, ಮೇ 23- ಕಳೆದ ಬಾರಿಗಿಂತ ಈ ಬಾರಿ ಎರಡು ಸಂಸದರ ಬಲವು ಹೆಚ್ಚು ಸಿಕ್ಕಿದ್ದರಿಂದಾಗಿ ತಾವು ಪ್ರಧಾನಿ ಹುದ್ದೆ ಡಿಎಂಕೆಗೆ ನೀಡಬೇಕೆಂದು ಒತ್ತಾಯಿಸಿದ್ದಲ್ಲ ಎಂದು ಕರುಣಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದರೆ, ಎಡವನ್ನು ಬುಡ ಸಮೇತ ಕೀಳುವುದಕ್ಕಾಗಿ ನಾನು ಅತ್ಯಧಿಕ ಹೋರಾಟ ಮಾಡಿರುವುದರಿಂದ ಬಂಗಾಳ ಸರಕಾರವನ್ನು ತಡ ಮಾಡದೆ ಎಸೆಯಬೇಕು ಎಂದು ನಾನು ಕೂಡ ಗಟ್ಟಿಯಾಗಿ ಒತ್ತಾಯಿಸುವುದಿಲ್ಲ ಎಂದು ಮಮತಾನಿಧಿ ಘೋಷಿಸಿದ್ದಾರೆ.

ಎಲ್ಟಿಟಿಇ ನಾಯಕ ಪಿರಹಾಗರನ್ (ತಮಿಳಿನಲ್ಲಿ ಉಚ್ಚರಿಸುವುದು ಹೀಗೆ) ಹತ್ಯೆಯಾದ ನಿಗೂಢತೆಯಿಂದಾಗಿ ಡಿಎಂಕೆ ಅದನ್ನೆಲ್ಲಾ ಮರೆತು ಡೆಲ್ಲಿಯಲ್ಲಿ ವೀಲ್‌ಚೇರ್ ರಾಜಕೀಯದಲ್ಲಿ ನಿರತವಾಗಿತ್ತು. ಹೀಗಾಗಿ ಪ್ರಧಾನ ಮಂತ್ರಿ ಪದವಿಗೆ ಚೌಕಾಶಿ ಮಾಡಲು ಪುರುಸೊತ್ತು ಸಿಗಲಿಲ್ಲ ಎಂದೂ ಪತ್ತೆ ಹಚ್ಚಲಾಗಿದೆ.

(ಸೂಚನೆ: ತಮಿಳುಕಾಡಿನ ಪಕ್ಷವು ಡೆಲ್ಲಿಯಲ್ಲಿ ದರ್ಬಾರು ನಡೆಸಲು ಹೋದ ಕುರಿತಾದ ಸಮಗ್ರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಒಂದಷ್ಟು ವಿವರಗಳು ಸೋಮವಾರ ಪ್ರಕಟವಾಗಲಿದೆ. ನಿರೀಕ್ಷಿಸಬೇಡಿ, ನಿರೀಕ್ಷಿಸಿ ನಿರಾಶರಾಗಬೇಡಿ!!!)

Tuesday, May 19, 2009

Election FLASH: ಮಿತ್ರರಲ್ಲ, ಶತ್ರುಗಳೂ ಅಲ್ಲ

(ಬೊಗಳೂರು ಫ್ಲ್ಯಾಶ್ ನ್ಯೂಸ್ ಬ್ಯುರೋದಿಂದ)
* ದೇಶಾದ್ಯಂತ ಕಳ್ಳರ ಕಾಟ ಜಾಸ್ತಿಯಾಗಿದೆ. ಇದಕ್ಕೆ ಕಾರಣವೆಂದರೆ ಎಲ್ಲ ರಾಜಕೀಯ ಪಕ್ಷಗಳು ತಮ್ಮ ತಮ್ಮ ಹಿಂಬಾಗಿಲನ್ನು ಮುಕ್ತವಾಗಿ ತೆರೆದಿಟ್ಟಿರುವುದು.

* ಆಕ್ಸ್‌ಫರ್ಡ್ ಡಿಕ್ಷ'ನರಿ'ಯಿಂದ ಗುಳ್ಳೆ ನರಿ, ಅವಕಾಶವಾದಿ ಮುಂತಾದ ಅಮೂಲ್ಯ ಪದಗಳನ್ನು ತತ್ಕಾಲಕ್ಕೆ ತಡೆಹಿಡಿಯಲಾಗಿದೆ.

* ಡಿಕ್ಷ-ನರಿಯಿಂದ ವಿಶೇಷವಾಗಿ 'ಶತ್ರು, ವೈರಿ' ಎಂಬಿತ್ಯಾದಿ ಪದಗಳನ್ನು ಸರಕಾರ ಸ್ಥಾಪನೆಯಾಗುವವರೆಗೂ ತಡೆಹಿಡಿಯಲು ನಿರ್ಣಯ ಕೈಗೊಳ್ಳಲಾಗಿದೆ.

* 'ಕೋಮುವಾದಿ, ಜಾತ್ಯತೀತ' ಎಂಬ ವಿರುದ್ಧಾರ್ಥಕ ಪದಗಳನ್ನು ಬಳಸದಿರಲು ಮತ್ತು ಬಳಸಿದರೂ ಅದಕ್ಕೆ ತಮ್ಮದೇ ಆದ ವ್ಯಾಖ್ಯಾನವನ್ನು ಉಲ್ಲೇಖಿಸಲು ನಿರ್ಣಯ ಕೈಗೊಳ್ಳಲಾಗಿದೆ.

* ಹೆಚ್ಚು ಹೆಚ್ಚು 'ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ' ಎಂಬ ವಾಕ್ಯಸಮೂಹವನ್ನೇ ಬಳಸಲು ಗಂಭೀರ ಕ್ರಮ ಕೈಗೊಳ್ಳಲಾಗುತ್ತಿದ್ದು, 'ರಾಜಕೀಯದಲ್ಲಿ ಯಾರೂ ಮಿತ್ರರಲ್ಲ' ಎಂಬ ವಾಕ್ಯಸಮೂಹವನ್ನು ಸದ್ಯಕ್ಕೆ ತೆರೆಯ ಮರೆಯಲ್ಲಿ ಮತ್ತು ಮರೆಯ ತೆರೆಯಲ್ಲಿ ಇರಿಸಲು ನಿರ್ಣಯ ಸ್ವೀಕರಿಸಲಾಗಿದೆ.

* ಪಕ್ಷದ ತತ್ವಗಳು, ಪಕ್ಷದ ಸಿದ್ಧಾಂತಗಳು ಇವೆಲ್ಲವನ್ನೂ ಕಸದ ಬುಟ್ಟಿಗೆ ಹಾಕಲು ಸರ್ವಪಕ್ಷಗಳ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು, ಅದು ತೀರಾ ಹಗುರವಾಗಿರುವುದರಿಂದ ಗಾಳಿಯಲ್ಲಿ ತೂರುವುದಕ್ಕೂ ಸಿದ್ಧತೆಗಳನ್ನು ಮಾಡಲಾಗಿದೆ.

* ಜಾತ್ಯತೀತ ವಿವಾಹಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಶತ್ರುಗಳಾಗಿದ್ದವರನ್ನು, ಕೈಕೊಟ್ಟು ಓಡಿ ಹೋದ ಪ್ರೇಮಿಗಳನ್ನು, ಮುನಿಸಿಕೊಂಡು ವಿಚ್ಛೇದನ ನೀಡಿದವರನ್ನು ಮರಳಿ ರಾಜ ಮರ್ಯಾದೆಯಿಂದ ಕರೆತಂದು ಕ್ಷಮೆ ಯಾಚಿಸುವ ಅಥವಾ ಕ್ಷಮೆ ಕೇಳುವಂತೆ ಮಾಡುವ ಪ್ರಕ್ರಿಯೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

* ಏನೇ ಹೇಳದಿದ್ದರೂ ನಾನು ಕ್ಷಮೆ ಯಾಚಿಸುತ್ತೇನೆ ಎಂದು ನಾಚಿಕೆ, ಮಾನ ಮತ್ತು ಮರ್ಯಾದೆಗಳೆಂಬ ರಾಜಕೀಯ ವಿರೋಧಿ-ಗುಣಗಳನ್ನು ಪಕ್ಕದ ರೀಸೈಕಲ್ ಬಿನ್‌ಗೆ ಹಾಕಲು ನಿರ್ಧರಿಸಲಾಗಿದೆ.

Wednesday, May 13, 2009

Recessionನಿಂದ ಪಾರಾಗಲು Horse Tradingಗೆ ಚಾಲನೆ

(ಬೊಗಳೂರು ಪಿತ್ತ ಇಲಾಖೆ ಬ್ಯುರೋದಿಂದ)
[ಈಗಾಗಲೇ ಅಪ್ಪನಿಗೆ ಗೊತ್ತಿಲ್ಲದಂತೆ ಮಗ ಕುಮಾರ, ದಿಲ್ಲಿ ಮೇಡಂ ಮನೆಗೆ ಎಸಿ ಕಾರಿನಲ್ಲಿ ಬೆವರುತ್ತಾ ಗುಪ್ತವಾಗಿ ನುಗ್ಗಿ ಬಂದಿರುವುದನ್ನು ಇಲ್ಲಿ ಪ್ರಕಟಿಸಲಾಗಿರುವುದರಿಂದ ಈ ವಿಶೇಷ ವರದ್ದಿ.]
ಬೊಗಳೂರು, ಮೇ. 13- ಜಾಗತಿಕವಾಗಿ ಆರ್ಥಿಕ ಸ್ಥಿತಿ ಹದಗೆಟ್ಟಿರುವುದರಿಂದ ಈಗಷ್ಟೇ ಎಚ್ಚೆತ್ತುಕೊಂಡಿರುವ ಬೊಗಳೂರು ಕೇಂದ್ರ ಸರಕಾರವು, ಕುದುರೆಗಳ ರಕ್ಷಣೆ, ಸಾಕಣೆ, ಅಭಿವೃದ್ಧಿ, ಇತ್ಯಾದಿಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಜನತೆಗೆ ಮನವಿ ಮಾಡಿಕೊಂಡಿದೆ.

ಇದೇನಪ್ಪಾ, ಕುದುರೆ ಸಾಕುವುದಕ್ಕೂ ಜಾಗತಿಕ ಆರ್ಥಿಕ ಸ್ಥಿತಿಗೂ ಎತ್ತಣಿಂದೆತ್ತಣ ಸಂಬಂಧ ಎಂದೆಲ್ಲಾ ಬಡಬಡಿಸುತ್ತಿರುವವರಿಗೆ ಸ್ಪಷ್ಟನೆ ನೀಡುವುದಕ್ಕಾಗಿಯೇ ರದ್ದಿಗೋಷ್ಠಿಯಲ್ಲಿ ಮಾತನಾಡಿದ ಬೊಗಳೂರು ಪಿತ್ತ ಸಚಿವರು, ಈಗಷ್ಟೇ ಚುನಾವಣೆಗಳು ಮುಗಿಯುವ ಹಂತದಲ್ಲಿದೆ. ಇದುವರೆಗೆ ನಾವು ಕತ್ತೆಗಳು ಎಂದು ತಿಳಿದುಕೊಂಡ ಮತದಾರರನ್ನು ಮನಬಂದಂತೆ ಓಲೈಸುವಲ್ಲಿ ಯಶಸ್ವಿಯಾಗಿದ್ದೇವೆ. ಆದರೆ ಮತದಾರರು ಈ ಓಲೈಕೆಯ ಅಮಲಿನಲ್ಲಿ ಮತ ನೀಡಿರುವುದರಿಂದಾಗಿ ಅತಂತ್ರ ಸಂಸತ್ತು ನಿರ್ಮಾಣವಾಗಿ ನಮಗೆ ದೊರೆಯುವ ಸಂಪತ್ತು ಕೂಡ ಅತಂತ್ರವಾಗುವ ಸಾಧ್ಯತೆಯಿದೆ ಎಂದು ವಿವರಣೆ ನೀಡಿದರು.

ತಕ್ಷಣವೇ ಮಧ್ಯೆ ಬಾಯಿ ಹಾಕಿದ ಬೊಗಳೂರು ವರದ್ದಿಗಾರರು, ಕುದುರೆ ಬಗ್ಗೆ ಹೇಳಿ, ಹಯೋದ್ಯಮದ ಬಗ್ಗೆ ಹೇಳಿ ಎಂದು ಬೊಬ್ಬಿರಿದರು.

ಸಾವರಿಸಿಕೊಂಡ ಪಿತ್ತಸಚಿವರು (ಅವರ ಹೆಸರು ಏನೆಂದು ಮರೆತುಹೋಗಿದೆ, ಅಥವಾ ಪಿತ್ತ ಸಚಿವರು ಎಂಬೊಂದು ಹುದ್ದೆ ಇದೆಯೇ ಇಲ್ಲವೇ ಎಂಬುದೂ ತಿಳಿದಿಲ್ಲ), ಸಂಬಂಧ ಇದೆ ಕಣ್ರೀ, ಬಾಯ್ಮುಚ್ಚಿ ಎಂದು ಧೈರ್ಯವಾಗಿಯೇ ದಬಾಯಿಸಿದರು. ಅವರ ಧೈರ್ಯಕ್ಕೆ ಕಾರಣವೆಂದರೆ, ಈಗಾಗಲೇ ನಮ್ಮ ವರದ್ದಿಗಾರರ ಓಟು ಚಲಾವಣೆಯಾಗಿದೆ ಎಂಬ ಒಣಧೈರ್ಯ.

ನಾಲಿಗೆ ಮತ್ತಷ್ಟು ಉದ್ದ ಚಾಚಿದ ಅವರು, ಮತದಾರರ ಕರ್ತವ್ಯ ನಿಭಾಯಿಸಿ ಆಗಿದೆ. ಇನ್ನು ಅವರಿಂದ ನಮಗೆ ಬರಬೇಕಾದ್ದು ಅಥವಾ ಆಗಬೇಕಾದ್ದು ಏನೂ ಇಲ್ಲ. ಆದರೆ ಅವರು ಯಾರನ್ನು ಆರಿಸಿ ಕಳುಹಿಸಿದ್ದಾರೋ ಅವರಲ್ಲಿ ನಮಗೆ ಕೆಲಸವಿದೆ. ಹೀಗಾಗಿ ಕುದುರೆ ವ್ಯಾಪಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ ಎಂದು ಹೇಳಿದರು.

ಹೇಗೂ ಅತಂತ್ರ ಸಂಸತ್ತು ಸೃಷ್ಟಿಯಾಗುವುದರಿಂದ ಮಾರುಕಟ್ಟೆಯಲ್ಲಿ ಸಾಕಷ್ಟು ಕುದುರೆಗಳು ಮಾರಾಟಕ್ಕೆ ಲಭ್ಯವಿವೆ. ಲಕ್ಷ ಲಕ್ಷ ತೆತ್ತು ಖರೀದಿಸಬಹುದಾದರೂ, ಈಗ ಲಕ್ಷ ಎಂಬುದು ಲಕ್ಷ್ಯವೇ ಅಲ್ಲ. ಹೀಗಾಗಿ ಕೋಟಿ ಕೋಟಿಯ ನೋಟುಗಳೇ ಬೇಕಾಗುತ್ತವೆ ಎಂಬುದು ನಮ್ಮ ಅರಿವಿಗೆ ಬಂದಿದೆ. ಆದರೆ ಈಗ ಭಾರೀ ಭವಿಷ್ಯವಿರುವ, ಭರವಸೆಯ recession ಸಂದರ್ಭದಲ್ಲಿ ಏಕೈಕ ಆಶಾಕಿರಣವಾಗಿರುವ ಈ Horse Trading ನಲ್ಲಿ ಹಾಕಿದ ಬಂಡವಾಳವನ್ನು ಅಧಿಕಾರಕ್ಕೇರಿದ ಎರಡೇ ದಿನಗಳಲ್ಲಿ ವಾಪಸ್ ಪಡೆಯಬಹುದಾದಷ್ಟು ಲಾಭದಾಯಕ ಉದ್ಯಮವಿದು ಎಂದು ಅವರು ಸ್ಪಷ್ಟಪಡಿಸಿದರು.

ಇದು ಸ್ಪರ್ಧಾತ್ಮಕ ಯುಗವಾಗಿರುವುದರಿಂದ ನಮಗೆ ಸಮರ್ಥ ಕುದುರೆ ದೊರೆಯದಿದ್ದರೆ ಕುದುರೆ-ಕತ್ತೆ ಮಿಶ್ರತಳಿಗಳಾದ ಹೇಸರಗತ್ತೆಗಳು ಕೂಡ ಆಗುತ್ತವೆ ಎಂದೂ ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಕುರಿಗಳನ್ನು ನಾವು ಹಣ-ಹೆಂಡ ಕೊಟ್ಟು ಖರೀದಿಸಿಯಾಗಿದೆ. ಅವುಗಳು ತಕ್ಕಮಟ್ಟಿಗಷ್ಟೇ ಲಾಭ ತಂದಿತ್ತಿವೆ. ಇನ್ನು ಮುಂದೆ ನಮಗೆ ಕುದುರೆ ವ್ಯಾಪಾರವೇ ಏಕೈಕ ಆಶಾವಾದ ಎಂದೂ ಅವರು ಹೇಳಿದರು.

Monday, May 11, 2009

sterilization: ಸರಕಾರದ ಬೆಂಬಲ, ಶ್ವಾನಗಳ ಆಕ್ರೋಶ!

(ಬೊಗಳೂರು ಸ್ಟೆರ್ಲೈಸೇಶನ್ ಬ್ಯುರೋದಿಂದ)
ಬೊಗಳೂರು, ಮೇ 11- ಜನಸಂಖ್ಯಾ ನಿಯಂತ್ರಣಕ್ಕೆ ಸಂತಾನಹರಣ ಶಸ್ತ್ರಚಿಕಿತ್ಸೆ ಕಡ್ಡಾಯ ಅಥವಾ ಬಲವಂತ ಮಾಡುವ ವಿವಾದವನ್ನು ಮತ್ತಷ್ಟು ತಣ್ಣಗಾಗಿಸುವ ನಿಟ್ಟಿನಲ್ಲಿ ರದ್ದಿಗೋಷ್ಠಿ ಕರೆದಿರುವ ಬೊಗಳೂರು ನಿಧಾನಮಂತ್ರಿ ಕಾರ್ಯ'ಲಯ'ವು, ಇದಕ್ಕೆ ತಮ್ಮ ಬೆಂಬಲವಿದೆ ಎಂದು ಘೋಷಿಸಿದ್ದಾರೆ.

ಆದರೆ ಇದು ಸಾಮಾಜಿಕವಾಗಿ ತೀರಾ ತುಳಿಯಲ್ಪಟ್ಟವರು, ಹಿಂದುಳಿದವರು, ಎಲ್ಲವೂ ಆಗಿರುವ ಕಡಿಮೆ ಸಂಖ್ಯೆಯಲ್ಲಿರುವವರಿಗೆ ಕಡ್ಡಾಯವಾಗಬಾರದು. ಯಾಕೆಂದರೆ ಅವರು ಕೂಡ ಬಹುಸಂಖ್ಯಾತರಾಗಿ, ಈ ದೇಶದ ಎಲ್ಲ ಆಸ್ತಿಗಳಿಗೆ ಸಮಾನ ಹಕ್ಕುದಾರರಾಗಬೇಕಾದ ಅಗತ್ಯವಿದೆ. ಬಹುಸಂಖ್ಯೆಯಲ್ಲಿರುವವರೊಂದಿಗೆ ಅವರ ಸಂಖ್ಯೆಯೂ ಸರಿ ಸಮಾನವಾದರೆ ಸಾಮಾಜಿಕ ತಾರತಮ್ಯ ನೀಗುತ್ತದೆ, ಸಮಾನತೆಯ ಮಹಾನ್ ಕನಸು ನನಸಾಗುತ್ತದೆ. ಹೀಗಾಗಿ ಬಹುಸಂಖ್ಯಾತರಿಗೆ ಮಾತ್ರವೇ ಇದನ್ನು ಅನ್ವಯಿಸಬೇಕಾಗುತ್ತದೆ ಎಂದು ನಿಧಾನಮಂತ್ರಿಗಳು ಅತ್ತು ಕರೆದು ಹೇಳಿದ್ದಾರೆ.

ಈ ಮಧ್ಯೆ, ಬಾಲ ಅಲ್ಲಾಡಿಸಲು ಜಾಗ ಇಲ್ಲ ಎಂದೆಲ್ಲಾ ವರದ್ದಿ ಮಾಡಿ, ತಮ್ಮನ್ನೂ ಸಂತಾನಹರಣ ಶಸ್ತ್ರಚಿಕಿತ್ಸಾ ಆಂದೋಲನದ ಭಾಗವಾಗಿಸಲು ಹೆಣಗಾಡುತ್ತಿರುವ ಬೊಗಳೂರು ಬ್ಯುರೋ ವಿರುದ್ಧ ಶ್ವಾನ ಸಮುದಾಯ ಆಕ್ರೋಶ ವ್ಯಕ್ತಪಡಿಸಿರುವುದಾಗಿ ನಮ್ಮ ಸ್ಟಿಂಗ್ ಆಪರೇಶನ್ ಬ್ಯುರೋ ವರದಿ ಮಾಡಿದೆ.

ಮಾತ್ರವಲ್ಲದೆ, ಇತ್ತೀಚೆಗೆ ಚುನಾವಣೆ ಸಂದರ್ಭದಲ್ಲಿ ಜಾರಕಾರಣಿಗಳ ಬಾಯಲ್ಲಿ ಕಾಲು ಕತ್ತರಿಸಬೇಕು, ತಲೆ ಕತ್ತರಿಸಬೇಕು, ಕೈ ಕತ್ತರಿಸಬೇಕು, ನಾಲಿಗೆ ಕಡಿಯಬೇಕು ಎಂಬಿತ್ಯಾದಿ ಹೇಳಿಕೆಗಳೂ ವ್ಯಕ್ತವಾಗಿರುವುದರಿಂದ ಈ ಸಂತಾನಹರಣ ಶಸ್ತ್ರಚಿಕಿತ್ಸೆಗೂ ಕತ್ತರಿಪ್ರಯೋಗಕ್ಕೂ ಏನಾದರೂ ಸಂಬಂಧವಿದೆಯೇ ಎಂದೂ ಶ್ವಾನ ಸಮುದಾಯದವರು ಆತಂಕ ವ್ಯಕ್ತಪಡಿಸಿರುವುದಾಗಿ ಅದರ ಮುಖ್ಯಸ್ಥ ಬೊಗ್ರ ಕುಮಾರ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Thursday, May 07, 2009

ಬಾಲ ಅಪರಾಧಿಗಳ ವಯೋಮಿತಿ ಏರಿಸಲು ಆಗ್ರಹ

(ಬೊಗಳೂರು ಜುವಿನೈಲ್ ಬ್ಯುರೋದಿಂದ)
ಬೊಗಳೂರು, ಮೇ 6- ಸುಪ್ರೀಂಕೋರ್ಟೇ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ನೂರಾರು ಜನರ ಸಾವಿಗೆ ಕಾರಣವಾದ ಉಗ್ರಗಾಮಿ ಕಸಬ್‌ಗೆ ಕೂಡ ವಯಸ್ಸಿನಲ್ಲಿ ರಿಯಾಯಿತಿ ನೀಡಬೇಕು ಎಂದು ಬೊಗಳೂರು ಸರಕಾರ ಒತ್ತಾಯಿಸಿದೆ. ಇದಕ್ಕೆ ಕಾರಣವೆಂದರೆ, ಬಾಲಾಪರಾಧಿಯಾದರೆ ಶಿಕ್ಷೆಯ ಪ್ರಮಾಣವೂ ಕಡಿಮೆ, ಜನರು ಹೆಚ್ಚು ಕಷ್ಟಪಡಬೇಕಾಗಿಲ್ಲ ಎಂಬ ಕಳಕಳಿಯೇ ಆಗಿದೆ ಎಂದು ಅದು ಸ್ಪಷ್ಟಪಡಿಸಿದೆ.

ದಿಢೀರ್ ರದ್ದಿಗೋಷ್ಠಿಯಲ್ಲಿ ಮಾತನಾಡಿದ ಬೊಗಳೂರು ನಿಧಾನಮಂತ್ರಿಗಳು, ಅಲ್ಪಸಂಖ್ಯಾತ ಸಮುದಾಯದವರು ಯಾವತ್ತೂ ಈ ದೇಶದ ಆಸ್ತಿಯ ಮೊದಲ ವಾರಸುದಾರರು, ಅವರಿಗೆ ಎಲ್ಲದರಲ್ಲಿಯೂ ರಿಯಾಯಿತಿ ನೀಡುವಂತೆ, ವಯಸ್ಸಿನಲ್ಲಿಯೂ ರಿಯಾಯಿತಿ ನೀಡಲೇಬೇಕು ಎಂದು ಒತ್ತಾಯಿಸಿದರು. ಇಲ್ಲವಾದಲ್ಲಿ, ಜುವಿನೈಲ್‌ಗಳ ವಯೋಮಿತಿ ಏರಿಸಲು ಆಗ್ರಹಿಸಲಾಗುವುದು ಎಂದೂ ಅವರು ಸ್ಪಷ್ಟಪಡಿಸಿದರು.

ಈ ಮಧ್ಯೆ, ಎಲ್ಲ ಜೈಲು ಹಕ್ಕಿಗಳು ಕೂಡ, ನಮ್ಮನ್ನೂ ಕೂಡ ಬಾಲಾಪರಾಧಿಗಳು ಎಂದು ಪರಿಗಣಿಸಬೇಕು. ಇದರಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ನಮಗೆ ಮೀಸಲಾತಿಯನ್ನೂ ಕಲ್ಪಿಸಬೇಕು ಎಂದು ಒತ್ತಾಯಿಸತೊಡಗಿರುವುದಾಗಿ ಎಲ್ಲಿಯೂ ವರದಿಯಾಗಿಲ್ಲ.

ಹಕ್ಕಿಗಳೆಲ್ಲವೂ ಇತ್ತಿತ್ತಲಾಗಿ, ಕಾಡಿ ಬೇಡಿ ಬೇಡಿಯ ಬಂಧ ಕಳಚಿಕೊಂಡು, ರಾಜಕೀಯ ಕ್ಷೇತ್ರದಲ್ಲಿ ಮಿಂಚುತ್ತಿವೆ. ಕೆಲವರು ಜೈಲಿನೊಳಗಿದ್ದುಕೊಂಡೇ ಚುನಾವಣೆಗೂ ಸ್ಪರ್ಧಿಸುತ್ತಿದ್ದಾರೆ. ಕಷ್ಟ ಪಟ್ಟು ಕೊಲೆ, ಸುಲಿಗೆ, ಅಪಹರಣ ಇತ್ಯಾದಿಗಳಲ್ಲಿ ತೊಡಗಿದವರಿಗೆ ರಾಜಕೀಯ ಕ್ಷೇತ್ರದಲ್ಲಿ 'ಸೇವೆ' ಸಲ್ಲಿಸಲು ಮುಂದಕ್ಕೆ ಕಷ್ಟವಾಗಬಾರದು. ಇದಕ್ಕಾಗಿ ಅವರನ್ನೂ ಜುವಿನೈಲ್ ಅಂತ ಪರಿಗಣಿಸಿ, ಅವರ ವಯೋಮಿತಿಯನ್ನೂ ತಗ್ಗಿಸಬೇಕು ಎಂದು ಅಖಿಲ ಭಾರತ ಮೂರನೇ ಕ್ಲಾಸ್ ಪಕ್ಷದ ಅಧ್ಯಕ್ಷರು ಒತ್ತಾಯಿಸಿದ್ದಾರೆ.

ಅಷ್ಟು ಮಾತ್ರವಲ್ಲ, ಓಟು ಹಾಕುವ ವಯೋಮಿತಿಯನ್ನೂ ಇಳಿಸಬೇಕು. ಈ ರೀತಿ ಜುವಿನೈಲ್ ವರ್ಗಕ್ಕೆ ಸೇರಿದವರಿಗೂ ಮತದಾನದ ಹಕ್ಕು ದೊರಕಿಸಬೇಕು ಎಂದೂ ಅವರು ಆಗ್ರಹಿಸಲು ನಿರ್ಧರಿಸಲು ಯೋಚಿಸಲು ಚಿಂತಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ.

Tuesday, May 05, 2009

ಸುಶಿಕ್ಷಿತರು Poli-tricksಗೆ: ಜಾರಕಾರಣಿಗಳಲ್ಲಿ ತಳಮಳ!

(ಬೊಗಳೂರು ಜಾರಕಾರಣ ಬ್ಯುರೋದಿಂದ)
ಬೊಗಳೂರು, ಮೇ 5- ತೀವ್ರ ಆತಂಕಕಾರಿ ಸಂಗತಿಯೊಂದು ಇತ್ತೀಚೆಗೆ ಘಟಿಸುತ್ತಿದ್ದು, ಸುಶಿಕ್ಷಿತರು, ಯುವಕರು, ಉತ್ಸಾಹಿಗಳೆಲ್ಲ ರಾಜಕೀಯ ಸೇರುತ್ತಿದ್ದಾರೆ ಎಂದು ಇಲ್ಲಿ ವರದ್ದಿಯಾಗಿದೆ. ಸಚ್ಚಾರಿತ್ರ್ಯವಂತರು ಕೂಡ ರಾಜಕೀಯಕ್ಕೆ ಧುಮುಕುತ್ತಿರುವುದು ರಾಜಕೀಯ ಕ್ಷೇತ್ರವನ್ನೇ ಕಳಂಕಿಸುವ ಪ್ರಯತ್ನ ಎಂದು ಬೊಗಳೂರು ಬ್ಯುರೋದ ಸಂತಾಪಕರು ವಿಶ್ಲೇಷಿಸಿದ್ದಾರೆ.

ಇದುವರೆಗೆ ಕಳ್ಳರಿಗೆ, ಸುಳ್ಳರಿಗೆ, ಭ್ರಷ್ಟರಿಗೆ, ಕ್ರಿಮಿನಲ್ಲುಗಳಿಗೆ, ಅನಕ್ಷರಸ್ಥರಿಗೆ ಮತ್ತು ಉದ್ಯೋಗ-ಹೀನರಿಗೆ (ಅಂದರೆ ಅಚ್ಚ ಕನ್ನಡದಲ್ಲಿ ಹೇಳಬಹುದಾದರೆ ಕೆಲಸ ಇಲ್ಲದವರಿಗೆ) ಮತ್ತು ಮುಳುಗುತ್ತಿದ್ದ ಎಲ್ಲರಿಗೂ ಹುಲ್ಲುಕಡ್ಡಿಯ ಆಸರೆಯಾಗುತ್ತಿದ್ದ ಈ ರಾಜಕೀಯ ಕ್ಷೇತ್ರಕ್ಕೆ ಇದೀಗ ಸಮರ್ಥರು ಕೂಡ ನುಸುಳುತ್ತಿರುವುದು, ಅಕ್ರಮ ಮತ್ತು ಅನ್ಯಾಯ. ಹೀಗಾದರೆ ನಮ್ಮಂಥ ವಯೋವೃದ್ಧರು, ಜ್ಞಾನ-ವೃದ್ಧರು ಮತ್ತು ಅನುಭವ-ವೃದ್ಧರು ಮಾಡುವುದಾದರೂ ಏನನ್ನು ಎಂದು ಜಾರಕಾರಣಿಗಳ ಸಂಘದ ಅಧ್ಯಕ್ಷ, 99.99ರ ಹರೆಯದ ಜರಾಸಂಧ ಕುಮಾರ್ ಅವರು ಕಿಡಿ ಕಾರಿದ್ದಾರೆ.

ನ್ಯಾಯಾಂಗದ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಜಾರಕಾರಣ ಎಂಬುದೊಂದು ಅತ್ಯಮೂಲ್ಯ ಮತ್ತು ಅತ್ಯಂತ ಸುರಕ್ಷಿತ ಉದ್ಯೋಗವಾಗಿತ್ತು. ಇದೀಗ ಉತ್ಸಾಹಿ ತರುಣರು, ಸ್ವಂತ ಅಭಿವೃದ್ಧಿ ಬಿಟ್ಟು ದೇಶದ ಅಭಿವೃದ್ಧಿ ಬಗ್ಗೆ ಸೊಲ್ಲೆತ್ತುವವರೆಲ್ಲಾ ಈ ಜಾರಕಾರಣಕ್ಕೆ ಬಂದು ರಾಡಿ ಮಾಡಿ ಹೋಗುತ್ತಾರೆ. ಇದು ನಮ್ಮಂಥವರ ಸಮುದಾಯದಲ್ಲಿ ನಿರುದ್ಯೋಗ ಸಮಸ್ಯೆ ಸೃಷ್ಟಿಸುತ್ತದೆ. ಈ Recession ಅವಧಿಯಲ್ಲಿಯೂ ಈ ರೀತಿ ಮಾಡುತ್ತಿರುವುದು ಮಹಾನ್ಯಾಯ (ಮಹಾ+ನ್ಯಾಯ ಅಲ್ಲ) ಎಂದು ಜರಾಸಂಧ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಅನಾರೋಗ್ಯ ಪೀಡಿತರಾದವರಿಗೆ ಕೂಡ ಜಾರಕಾರಣ ರಂಗವು ಅತ್ಯುತ್ತಮ ನಿರಾಶ್ರಿತ ತಾಣವಾಗಿತ್ತು. ಒಮ್ಮೆ ಜಾರಕಾರಣಕ್ಕೆ ಸೇರಿಬಿಟ್ಟರೆ, ಜೀವನಪರ್ಯಂತ ಆಸ್ಪತ್ರೆಯಲ್ಲಿ ಮಲಗುತ್ತಾ, ಚಿಕಿತ್ಸೆ ವೆಚ್ಚವನ್ನು ಸರಕಾರದಿಂದ ಭರಿಸಿಕೊಳ್ಳುತ್ತಾ ಸುಖವಾಗಿರಬಹುದಾಗಿತ್ತು. ಇನ್ನು ಮುಂದೆ ನಮ್ಮಂಥ ರೋಗಗ್ರಸ್ಥ ದೇಹಗಳಿಗೆ ನೆಲೆಯಾದರೂ ಎಲ್ಲಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಜಾರಕಾರಣ ಎಂಬುದು ಭ್ರಷ್ಟರಿಗೆ, ದುಷ್ಟರಿಗೆ, ಕೆಲಸಕ್ಕೆ ಬಾರದವರಿಗೆ, ಕುತಂತ್ರಿಗಳಿಗೆ, ಧನಪಿಶಾಚಿಗಳಿಗೆ, ಅಧಿಕಾರಮದವೇರಿದವರಿಗೆ, ಮತ್ತು ಚಮಚಾಗಳಿಗಷ್ಟೇ ಸೀಮಿತ ಎಂದು ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ಕಷ್ಟ ಪಟ್ಟು ಬೆವರು ಸುರಿಸಿ ಅಂಥದ್ದೊಂದು ಅಸ್ತಿತ್ವ ಕ್ರಿಯೇಟ್ ಮಾಡಿದ್ದೇವೆ. ಇದೀಗ ಶಿಷ್ಟರು, ಸಚ್ಚಾರಿತ್ರ್ಯವಂತರು ಇಲ್ಲಿಗೆ ಪ್ರವೇಶಿಸಿ ನಮ್ಮ ಶ್ರಮವನ್ನೆಲ್ಲ ಹಾಳು ಮಾಡುತ್ತಿದ್ದಾರೆ ಎಂದು ಕಿಡಿ ಕಾರಿರುವ ಈ ಸಂಘದ ಸದಸ್ಯರು, ಅಧ್ಯಕ್ಷರು ಮತ್ತು ಸರ್ವರೂ ಆಗಿರುವ ರಾವಣ್, ಜರಾಸಂಧ್, ಕೀಚಕ್ ಮತ್ತು ಯಮ್ ಅವರು, ಚುನಾವಣೆ ಫಲಿತಾಂಶ ಬರಲಿ, ಜಾರಕಾರಣ ಪ್ರವೇಶಕ್ಕೆ ಮಾನದಂಡ ರೂಪಿಸುವ ಕಾಯ್ದೆ ಜಾರಿಗೆ ತರುತ್ತೇವೆ ಎಂದು ಆತ್ಮವಿಶ್ವಾಸದಿಂದ ಹೇಳಿಕೊಂಡಿದ್ದಾರೆ.

ಜಾರಕಾರಣಕ್ಕೆ ಮಾನದಂಡಗಳೇನು ಅಥವಾ ಇಲ್ಲವಾದರೆ ದಂಡವಾಗುವ ಮಾನಗಳೇನು ಎಂದು ತಬ್ಬಿಬ್ಬಾಗಿ ಪ್ರಶ್ನಿಸಿದ ಬೊಗಳೂರು ರದ್ದಿಗಾರರಿಗೆ ಉತ್ತರಿಸಿದ ರಾ. ಜ. ಕೀ. ಮತ್ತು ಯ.ರು, ಈ ಕೆಳಗಿನ ಪಟ್ಟಿ ನೀಡಿದರು.
ಜಾರಕಾರಣಿಗಿರುವ ಅರ್ಹತೆಗಳು:
* ಗರಿಷ್ಠ ವಿದ್ಯಾಭ್ಯಾಸ ಅಂಗನವಾಡಿ (ಅಥವಾ ಪ್ರಿ-ಕೆಜಿ)
* ಗುಳುಂಕರಿಸುವುದರಲ್ಲಿ ಪರಿಣತಿ
* ವಿರೋಧಿಸಿದ ಯಾರನ್ನೇ ಆಗಲಿ ಮಟ್ಟ ಹಾಕುವ ಚಾಣಾಕ್ಷ ತಂತ್ರ
* ಕನಿಷ್ಠ ನಾಲ್ಕು ಕ್ರಿಮಿನಲ್ ಕೇಸು, ಅವುಗಳಲ್ಲೊಂದು ಕೊಲೆ ಕೇಸು ಕಡ್ಡಾಯ
* ಸ್ವಿಸ್ ಬ್ಯಾಂಕಿನಲ್ಲಿ ಒಂದು ಖಾತೆ
* ದೇಶದಲ್ಲಿ ಏನೇ ಘಟನೆಯಾದರೂ, ಅದನ್ನು ಕೋಮು ದೃಷ್ಟಿಯಲ್ಲಿ ನೋಡುವ ಕಲೆ ರಕ್ತಗತವಾಗಿರಬೇಕು ಇಲ್ಲವಾದರೆ ರಕ್ತಸಿಕ್ತವಾಗಿಯಾದರೂ ಕರಗತ ಮಾಡಿಕೊಂಡರೆ ಸಾಕಾಗುತ್ತದೆ.
* ಒಂದು ಗುಂಪಿನಲ್ಲಿದ್ದಾಗ, ಅಲ್ಪಸಂಖ್ಯಾತರೇ ಈ ದೇಶದ ಆಸ್ತಿ ಎನ್ನುವ 'ಜಾತ್ಯತೀತ'ನಂತೆಯೂ, ಮತ್ತೊಂದು ಗುಂಪಿನಲ್ಲಿದ್ದಾಗ, ನಾವೆಲ್ಲಾ ಭಾರತೀಯರೇ, ಅಲ್ಪಸಂಖ್ಯಾತರಿಗೆ ಮಾತ್ರ ವಿಶೇಷ ಸವಲತ್ತೇಕೆ ಎಂದು ಪ್ರಶ್ನಿಸುವ 'ಕೋಮುವಾದಿ'ಯಂತೆಯೂ ಯಾವಾಗ ಬೇಕಾದರೆ ಆಗ, ಬಣ್ಣ ಬದಲಿಸುವ ಕಲೆ (ಕಪ್ಪು ಕಲೆಯಾದರೂ ಪರವಾಗಿಲ್ಲ) ಸಿದ್ಧಿಸಿರಬೇಕು.
* ದೇಶದ ಒಳಿತು-ಕೆಡುಕುಗಳ ಮೊದಲು, ತಮ್ಮ ದೇಹದ ಒಳಿತಿನ ಬಗ್ಗೆ, ಜೇಬು, ಸೂಟುಕೇಸುಗಳೆಲ್ಲವೂ ತುಂಬಿಸುವುದು ಹೇಗೆ, ಅದನ್ನು ದಷ್ಟಪುಷ್ಟವಾಗಿಸುವುದು ಹೇಗೆ ಎಂಬ ಬಗ್ಗೆ ಅನುಕ್ಷಣವೂ ಚಿಂತಿಸುತ್ತಿರಬೇಕು.
* ಓಟಿಗಾಗಿ ಏನೇ ಕೆಡುಕನ್ನಾದರೂ ಮಾಡಲೂ ಸಿದ್ಧವಾಗಿರಬೇಕು. ರಸ್ತೆ, ನೀರು, ಮೂಲಸೌಕರ್ಯ ಇತ್ಯಾದಿಗಳನ್ನು ಕೊಡಿಸಿದರೆ, ಜನ ಮತ್ತೊಮ್ಮೆ ಓಟು ಹಾಕುವುದಿಲ್ಲ. ಯಾಕೆಂದರೆ ಅವರು ಸಂತೃಪ್ತರಾಗಿರುತ್ತಾರೆ. ಹೆಚ್ಚೇನೂ ಕೇಳಲು ಹೋಗುವುದಿಲ್ಲ. ಆದ್ರೆ ಹಣ-ಹೆಂಡ ಕೊಟ್ಟರೆ ತಕ್ಷಣ ಓಟು ಬೀಳುತ್ತದೆ. ಅದು ದಿಢೀರ್ ಮತಗಳಿಕೆಯ ವಿಧಾನ ಎಂಬುದನ್ನು ಮನವರಿಕೆ ಮಾಡಿಕೊಂಡಿರಬೇಕು.

ಇನ್ನಷ್ಟು ದಂಡಮಾನಗಳನ್ನು ಓದುಗರು ಕೂಡ ಸೇರಿಸಬಹುದಾಗಿದೆ ಎಂದು ರಾ.ಜ.ಕೀ.ಯ. ಮುಖಂಡರು ಕರೆ ನೀಡಿದ್ದಾರೆ.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...