ಬೊಗಳೆ ರಗಳೆ

header ads

ಸುಶಿಕ್ಷಿತರು Poli-tricksಗೆ: ಜಾರಕಾರಣಿಗಳಲ್ಲಿ ತಳಮಳ!

(ಬೊಗಳೂರು ಜಾರಕಾರಣ ಬ್ಯುರೋದಿಂದ)
ಬೊಗಳೂರು, ಮೇ 5- ತೀವ್ರ ಆತಂಕಕಾರಿ ಸಂಗತಿಯೊಂದು ಇತ್ತೀಚೆಗೆ ಘಟಿಸುತ್ತಿದ್ದು, ಸುಶಿಕ್ಷಿತರು, ಯುವಕರು, ಉತ್ಸಾಹಿಗಳೆಲ್ಲ ರಾಜಕೀಯ ಸೇರುತ್ತಿದ್ದಾರೆ ಎಂದು ಇಲ್ಲಿ ವರದ್ದಿಯಾಗಿದೆ. ಸಚ್ಚಾರಿತ್ರ್ಯವಂತರು ಕೂಡ ರಾಜಕೀಯಕ್ಕೆ ಧುಮುಕುತ್ತಿರುವುದು ರಾಜಕೀಯ ಕ್ಷೇತ್ರವನ್ನೇ ಕಳಂಕಿಸುವ ಪ್ರಯತ್ನ ಎಂದು ಬೊಗಳೂರು ಬ್ಯುರೋದ ಸಂತಾಪಕರು ವಿಶ್ಲೇಷಿಸಿದ್ದಾರೆ.

ಇದುವರೆಗೆ ಕಳ್ಳರಿಗೆ, ಸುಳ್ಳರಿಗೆ, ಭ್ರಷ್ಟರಿಗೆ, ಕ್ರಿಮಿನಲ್ಲುಗಳಿಗೆ, ಅನಕ್ಷರಸ್ಥರಿಗೆ ಮತ್ತು ಉದ್ಯೋಗ-ಹೀನರಿಗೆ (ಅಂದರೆ ಅಚ್ಚ ಕನ್ನಡದಲ್ಲಿ ಹೇಳಬಹುದಾದರೆ ಕೆಲಸ ಇಲ್ಲದವರಿಗೆ) ಮತ್ತು ಮುಳುಗುತ್ತಿದ್ದ ಎಲ್ಲರಿಗೂ ಹುಲ್ಲುಕಡ್ಡಿಯ ಆಸರೆಯಾಗುತ್ತಿದ್ದ ಈ ರಾಜಕೀಯ ಕ್ಷೇತ್ರಕ್ಕೆ ಇದೀಗ ಸಮರ್ಥರು ಕೂಡ ನುಸುಳುತ್ತಿರುವುದು, ಅಕ್ರಮ ಮತ್ತು ಅನ್ಯಾಯ. ಹೀಗಾದರೆ ನಮ್ಮಂಥ ವಯೋವೃದ್ಧರು, ಜ್ಞಾನ-ವೃದ್ಧರು ಮತ್ತು ಅನುಭವ-ವೃದ್ಧರು ಮಾಡುವುದಾದರೂ ಏನನ್ನು ಎಂದು ಜಾರಕಾರಣಿಗಳ ಸಂಘದ ಅಧ್ಯಕ್ಷ, 99.99ರ ಹರೆಯದ ಜರಾಸಂಧ ಕುಮಾರ್ ಅವರು ಕಿಡಿ ಕಾರಿದ್ದಾರೆ.

ನ್ಯಾಯಾಂಗದ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಜಾರಕಾರಣ ಎಂಬುದೊಂದು ಅತ್ಯಮೂಲ್ಯ ಮತ್ತು ಅತ್ಯಂತ ಸುರಕ್ಷಿತ ಉದ್ಯೋಗವಾಗಿತ್ತು. ಇದೀಗ ಉತ್ಸಾಹಿ ತರುಣರು, ಸ್ವಂತ ಅಭಿವೃದ್ಧಿ ಬಿಟ್ಟು ದೇಶದ ಅಭಿವೃದ್ಧಿ ಬಗ್ಗೆ ಸೊಲ್ಲೆತ್ತುವವರೆಲ್ಲಾ ಈ ಜಾರಕಾರಣಕ್ಕೆ ಬಂದು ರಾಡಿ ಮಾಡಿ ಹೋಗುತ್ತಾರೆ. ಇದು ನಮ್ಮಂಥವರ ಸಮುದಾಯದಲ್ಲಿ ನಿರುದ್ಯೋಗ ಸಮಸ್ಯೆ ಸೃಷ್ಟಿಸುತ್ತದೆ. ಈ Recession ಅವಧಿಯಲ್ಲಿಯೂ ಈ ರೀತಿ ಮಾಡುತ್ತಿರುವುದು ಮಹಾನ್ಯಾಯ (ಮಹಾ+ನ್ಯಾಯ ಅಲ್ಲ) ಎಂದು ಜರಾಸಂಧ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಅನಾರೋಗ್ಯ ಪೀಡಿತರಾದವರಿಗೆ ಕೂಡ ಜಾರಕಾರಣ ರಂಗವು ಅತ್ಯುತ್ತಮ ನಿರಾಶ್ರಿತ ತಾಣವಾಗಿತ್ತು. ಒಮ್ಮೆ ಜಾರಕಾರಣಕ್ಕೆ ಸೇರಿಬಿಟ್ಟರೆ, ಜೀವನಪರ್ಯಂತ ಆಸ್ಪತ್ರೆಯಲ್ಲಿ ಮಲಗುತ್ತಾ, ಚಿಕಿತ್ಸೆ ವೆಚ್ಚವನ್ನು ಸರಕಾರದಿಂದ ಭರಿಸಿಕೊಳ್ಳುತ್ತಾ ಸುಖವಾಗಿರಬಹುದಾಗಿತ್ತು. ಇನ್ನು ಮುಂದೆ ನಮ್ಮಂಥ ರೋಗಗ್ರಸ್ಥ ದೇಹಗಳಿಗೆ ನೆಲೆಯಾದರೂ ಎಲ್ಲಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಜಾರಕಾರಣ ಎಂಬುದು ಭ್ರಷ್ಟರಿಗೆ, ದುಷ್ಟರಿಗೆ, ಕೆಲಸಕ್ಕೆ ಬಾರದವರಿಗೆ, ಕುತಂತ್ರಿಗಳಿಗೆ, ಧನಪಿಶಾಚಿಗಳಿಗೆ, ಅಧಿಕಾರಮದವೇರಿದವರಿಗೆ, ಮತ್ತು ಚಮಚಾಗಳಿಗಷ್ಟೇ ಸೀಮಿತ ಎಂದು ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ಕಷ್ಟ ಪಟ್ಟು ಬೆವರು ಸುರಿಸಿ ಅಂಥದ್ದೊಂದು ಅಸ್ತಿತ್ವ ಕ್ರಿಯೇಟ್ ಮಾಡಿದ್ದೇವೆ. ಇದೀಗ ಶಿಷ್ಟರು, ಸಚ್ಚಾರಿತ್ರ್ಯವಂತರು ಇಲ್ಲಿಗೆ ಪ್ರವೇಶಿಸಿ ನಮ್ಮ ಶ್ರಮವನ್ನೆಲ್ಲ ಹಾಳು ಮಾಡುತ್ತಿದ್ದಾರೆ ಎಂದು ಕಿಡಿ ಕಾರಿರುವ ಈ ಸಂಘದ ಸದಸ್ಯರು, ಅಧ್ಯಕ್ಷರು ಮತ್ತು ಸರ್ವರೂ ಆಗಿರುವ ರಾವಣ್, ಜರಾಸಂಧ್, ಕೀಚಕ್ ಮತ್ತು ಯಮ್ ಅವರು, ಚುನಾವಣೆ ಫಲಿತಾಂಶ ಬರಲಿ, ಜಾರಕಾರಣ ಪ್ರವೇಶಕ್ಕೆ ಮಾನದಂಡ ರೂಪಿಸುವ ಕಾಯ್ದೆ ಜಾರಿಗೆ ತರುತ್ತೇವೆ ಎಂದು ಆತ್ಮವಿಶ್ವಾಸದಿಂದ ಹೇಳಿಕೊಂಡಿದ್ದಾರೆ.

ಜಾರಕಾರಣಕ್ಕೆ ಮಾನದಂಡಗಳೇನು ಅಥವಾ ಇಲ್ಲವಾದರೆ ದಂಡವಾಗುವ ಮಾನಗಳೇನು ಎಂದು ತಬ್ಬಿಬ್ಬಾಗಿ ಪ್ರಶ್ನಿಸಿದ ಬೊಗಳೂರು ರದ್ದಿಗಾರರಿಗೆ ಉತ್ತರಿಸಿದ ರಾ. ಜ. ಕೀ. ಮತ್ತು ಯ.ರು, ಈ ಕೆಳಗಿನ ಪಟ್ಟಿ ನೀಡಿದರು.
ಜಾರಕಾರಣಿಗಿರುವ ಅರ್ಹತೆಗಳು:
* ಗರಿಷ್ಠ ವಿದ್ಯಾಭ್ಯಾಸ ಅಂಗನವಾಡಿ (ಅಥವಾ ಪ್ರಿ-ಕೆಜಿ)
* ಗುಳುಂಕರಿಸುವುದರಲ್ಲಿ ಪರಿಣತಿ
* ವಿರೋಧಿಸಿದ ಯಾರನ್ನೇ ಆಗಲಿ ಮಟ್ಟ ಹಾಕುವ ಚಾಣಾಕ್ಷ ತಂತ್ರ
* ಕನಿಷ್ಠ ನಾಲ್ಕು ಕ್ರಿಮಿನಲ್ ಕೇಸು, ಅವುಗಳಲ್ಲೊಂದು ಕೊಲೆ ಕೇಸು ಕಡ್ಡಾಯ
* ಸ್ವಿಸ್ ಬ್ಯಾಂಕಿನಲ್ಲಿ ಒಂದು ಖಾತೆ
* ದೇಶದಲ್ಲಿ ಏನೇ ಘಟನೆಯಾದರೂ, ಅದನ್ನು ಕೋಮು ದೃಷ್ಟಿಯಲ್ಲಿ ನೋಡುವ ಕಲೆ ರಕ್ತಗತವಾಗಿರಬೇಕು ಇಲ್ಲವಾದರೆ ರಕ್ತಸಿಕ್ತವಾಗಿಯಾದರೂ ಕರಗತ ಮಾಡಿಕೊಂಡರೆ ಸಾಕಾಗುತ್ತದೆ.
* ಒಂದು ಗುಂಪಿನಲ್ಲಿದ್ದಾಗ, ಅಲ್ಪಸಂಖ್ಯಾತರೇ ಈ ದೇಶದ ಆಸ್ತಿ ಎನ್ನುವ 'ಜಾತ್ಯತೀತ'ನಂತೆಯೂ, ಮತ್ತೊಂದು ಗುಂಪಿನಲ್ಲಿದ್ದಾಗ, ನಾವೆಲ್ಲಾ ಭಾರತೀಯರೇ, ಅಲ್ಪಸಂಖ್ಯಾತರಿಗೆ ಮಾತ್ರ ವಿಶೇಷ ಸವಲತ್ತೇಕೆ ಎಂದು ಪ್ರಶ್ನಿಸುವ 'ಕೋಮುವಾದಿ'ಯಂತೆಯೂ ಯಾವಾಗ ಬೇಕಾದರೆ ಆಗ, ಬಣ್ಣ ಬದಲಿಸುವ ಕಲೆ (ಕಪ್ಪು ಕಲೆಯಾದರೂ ಪರವಾಗಿಲ್ಲ) ಸಿದ್ಧಿಸಿರಬೇಕು.
* ದೇಶದ ಒಳಿತು-ಕೆಡುಕುಗಳ ಮೊದಲು, ತಮ್ಮ ದೇಹದ ಒಳಿತಿನ ಬಗ್ಗೆ, ಜೇಬು, ಸೂಟುಕೇಸುಗಳೆಲ್ಲವೂ ತುಂಬಿಸುವುದು ಹೇಗೆ, ಅದನ್ನು ದಷ್ಟಪುಷ್ಟವಾಗಿಸುವುದು ಹೇಗೆ ಎಂಬ ಬಗ್ಗೆ ಅನುಕ್ಷಣವೂ ಚಿಂತಿಸುತ್ತಿರಬೇಕು.
* ಓಟಿಗಾಗಿ ಏನೇ ಕೆಡುಕನ್ನಾದರೂ ಮಾಡಲೂ ಸಿದ್ಧವಾಗಿರಬೇಕು. ರಸ್ತೆ, ನೀರು, ಮೂಲಸೌಕರ್ಯ ಇತ್ಯಾದಿಗಳನ್ನು ಕೊಡಿಸಿದರೆ, ಜನ ಮತ್ತೊಮ್ಮೆ ಓಟು ಹಾಕುವುದಿಲ್ಲ. ಯಾಕೆಂದರೆ ಅವರು ಸಂತೃಪ್ತರಾಗಿರುತ್ತಾರೆ. ಹೆಚ್ಚೇನೂ ಕೇಳಲು ಹೋಗುವುದಿಲ್ಲ. ಆದ್ರೆ ಹಣ-ಹೆಂಡ ಕೊಟ್ಟರೆ ತಕ್ಷಣ ಓಟು ಬೀಳುತ್ತದೆ. ಅದು ದಿಢೀರ್ ಮತಗಳಿಕೆಯ ವಿಧಾನ ಎಂಬುದನ್ನು ಮನವರಿಕೆ ಮಾಡಿಕೊಂಡಿರಬೇಕು.

ಇನ್ನಷ್ಟು ದಂಡಮಾನಗಳನ್ನು ಓದುಗರು ಕೂಡ ಸೇರಿಸಬಹುದಾಗಿದೆ ಎಂದು ರಾ.ಜ.ಕೀ.ಯ. ಮುಖಂಡರು ಕರೆ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಸುಶಿಕ್ಷಿತರಿಗೆ, ವಿದ್ಯಾವಂತರಿಗೆ ಹಾಗೂ ಸಚ್ಚಾರಿತ್ರ್ಯವುಳ್ಳವರಿಗೆ ವೋಟು ಹಾಕುವಷ್ಟು ದಡ್ಡರಲ್ಲ ನಮ್ಮ ಮತದಾರರು.
    ರಾಜಕೀಯ ಸೇರಲು ಬೇಕಾಗುವ ಮಾನ(ವಿಲ್ಲದ) ದಂಡಕ್ಕೆ ಆನುವಂಶಿಕತೆಯನ್ನೂ ಸೇರಿಸಿಕೊಳ್ಳಬೇಕು ಎಂದು ನನ್ನ ಪ್ರಾರ್ಥನೆ.

    ಪ್ರತ್ಯುತ್ತರಅಳಿಸಿ
  2. ಪ್ರತಿಯೊಬ್ಬ ಜರಾಕಾರಿಣಿಗೂ ಮೇಡಮ್ ಒಬ್ಬರು ಹೈಕಮಾಂಡ್ ನೀಡುವ ಸ್ಥಿತಿಯಲ್ಲಿರಬೇಕು. ಇಬ್ಬರಿದ್ದರೆ ಅತ್ಯುತ್ತಮ.

    ಪ್ರತಿಯೊಂದು ಭಾಷಣವನ್ನು ಕಿರುಚಿ ಕಿರುಚಿ, ಪ್ರತಿಕ್ರಿಯೆಯನ್ನು ತಿರುಚಿ ತಿರುಚಿ ಹೇಳುವ ಮತ್ತು ಕೇಳುವ ವಿಶಿಷ್ಟ ಕಲೆಯನ್ನು ಕರಗತ...ಅಲ್ಲಲ್ಲ ಜಿಹ್ವಾಗತ ಮಾಡಿಕೊಂಡಿರಬೇಕು.

    ಅನ್ವೇಷಿಯವರೇ ಇದೆಲ್ಲಾ ಮರೆತಿದ್ದಿರಿ ನೀವು ದಂಡ ಮಾನಗಳಲ್ಲಿ ಸೇರಿಸೋದಕ್ಕೆ..ಅದಕ್ಕೆ ನಮ್ಮ ಅಳಿಲು..ಅಲ್ಲಲ್ಲ ಅಳಲು...ಛೆ ಅದೂ ಅಲ್ಲ..ಮರಳು ಸೇವೆ.

    ಪ್ರತ್ಯುತ್ತರಅಳಿಸಿ
  3. ಯುವಕರು, ಸಚ್ಚಾರಿತ್ರ್ಯವಂತರೂ, ಒಳ್ಳೆಯವರು ರಾಜಕೀಯಕ್ಕೆ ಬಂದರೆ ಒಳ್ಳೆಯದೇ ಅಲ್ಲವೇ....ತಮ್ಮ ಸ್ಥಾನಕ್ಕೆಲ್ಲಿ ಕುತ್ತು ಬರುತ್ತೋ ಅನ್ನುವ ರಾಜಕಾರಣಿಗಳ ಬಗ್ಗೆ ಲೇಖನ ತುಂಬಾ ವಿಡಂಬನಾತ್ಮಕವಾಗಿದೆ...

    ಧನ್ಯವಾದಗಳು..

    ಪ್ರತ್ಯುತ್ತರಅಳಿಸಿ
  4. ಸುನಾಥರೆ,
    ನಿಮ್ಮ ಸಲಹೆಯನ್ನು ಯಾರೋ ನೀವು ಹೇಳುವ ಮುನ್ನವೇ ಕದ್ದು ಚಾಲ್ತಿಗೆ ತಂದಿದ್ದಾರೆ.

    ಪ್ರತ್ಯುತ್ತರಅಳಿಸಿ
  5. ಲಕ್ಷ್ಮೀಸ್,
    ನಿಮ್ಮೆಲ್ಲ ಅರಳಮುರಳು ಸೇವೆಗಳನ್ನು ಜ್ವರ-ಕಾರಣಿಗಳಿಗೆ ತಲುಪಿಸಲಾಗಿದೆ. ನಿಮ್ಮ ಒಂದು ಕಣ್ಣಿನಿಂದ ಇದನ್ನೆಲ್ಲ ನೋಡಿದ್ದು ಅವರಿಗೆ ಅಚ್ಚರಿ ತಂದಿದೆಯಂತೆ....

    ಪ್ರತ್ಯುತ್ತರಅಳಿಸಿ
  6. ಶಿವು ಅವರೆ,
    ನಮ್ಮ ರದ್ದಿಗಾರರು ತಂದು ಗುಡ್ಡೆ ಹಾಕಿದ್ದು ಸತ್ಯ. ಇದು ವಿಡಂಬನೆಯಲ್ಲ, ಯಾರಾದರೂ ಈ ನೀತಿಗಳನ್ನು ಅನುಸರಿಸದಿದ್ದರೆ ಮಾತ್ರವೇ ಅದು ರಾಜಕೀಯದ ವಿಡಂಬನೆಯಾಗುತ್ತದೆ ಎಂಬುದು ನಮಗೆ ತಿಳಿದಿದೆ.

    ಬರ್ತಾ ಇರಿ, ಓದ್ತಾ ಇರಿ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D