Monday, June 29, 2009

(Afzal) ಗುರು ಹತ್ಯೆ ಮಹಾ ಪಾಪ!

(ಬೊಗಳೂರು ಓಟ್ ಬ್ಯಾಂಕ್ Repeat telecast ಬ್ಯುರೋದಿಂದ)
ಬೊಗಳೂರು, ಜೂ.29- ಗುರು ಹತ್ಯೆ ಮಹಾಪಾಪ ಎಂದು ಅರಿತುಕೊಂಡಿರುವ ಕೇಂದ್ರ ಸರಕಾರವು ಅದೇ ಹೆಸರುಳ್ಳ ವ್ಯಕ್ತಿಗಳನ್ನು ಕೊಲ್ಲದಿರಲು ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಈ ಬಗ್ಗೆ ಹಿಂದಿನ ವರದಿಗಳನ್ನು ಕೆದಕಿದಾಗ, ಮೂರು ವರ್ಷದ ಹಿಂದೆಯೇ ಬೊಗಳೂರು ಬ್ಯುರೋ, ಗುರು ಹತ್ಯೆಯ ಮಾಡದಂತೆ ಜಾಗೃತಿ ಮೂಡಿಸಿತ್ತೆಂಬ ಅಂಶ ಜಾಗೃತವಾಗಿ ಈ ವರದಿಯನ್ನು ಮತ್ತೆ ನೀಡಲಾಗುತ್ತಿದೆ. ಇದಕ್ಕೆ ಕಾರಣವೆಂದರೆ, ಸಚಿವಗಿರಿಯಲ್ಲಿದ್ದಾಗಲೂ ಇಲ್ಲದಿದ್ದಾಗಲೂ ಕಾನೂನು ಮಾತನಾಡುತ್ತಿದ್ದ ಮತ್ತು ಮಾತನಾಡುತ್ತಿರುವ ಕಾನೂನು ಸಚಿವರ ಈ ಹೇಳಿಕೆ.

ಭಾರತದ ಪರಮೋನ್ನತ ಅಧಿಕಾರ ಕೇಂದ್ರವಾದ ಸಂಸತ್ತಿನ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಜೈಶ್ ಎ ಮಹಮ್ಮದ್ ಉಗ್ರಗಾಮಿ ಮತ್ತು ಭಯೋತ್ಪಾದಕರ ಗುರುವೇ ಆಗಿಬಿಟ್ಟಿರುವ ಮಹಮದ್ ಅಫ್ಜಲ್ ಗುರುವಿಗೆ ಗಲ್ಲು ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ದೇಶದ ಸರ್ವೋನ್ನತ ನ್ಯಾಯಾಲಯವು ಆದೇಶ ನೀಡಿದ್ದರೂ, ಈ ಬಗ್ಗೆ ದಯಾಭಿಕ್ಷೆ ದೊರಕಿಸಲು ಯತ್ನಿಸುತ್ತಿರುವುದೇಕೆ ಎಂಬುದಾಗಿ ಮಾಡಲು ಬೇರೇನೂ ಕೆಲಸವಿಲ್ಲದ ಕಾರಣದಿಂದಾಗಿ ಬೊಗಳೆ ರಗಳೆ ಬ್ಯುರೋ ನಮ್ಮನ್ನಾಳುವ ಕೇಂದ್ರದ ವಕ್ತಾರನನ್ನು ಹಿಡಿದು ಪ್ರಶ್ನಿಸಿತು.

ಈ ಪ್ರಶ್ನೆಗೆ ಬಂದ ಉತ್ತರಗಳು ಯಾವುದೇ ಭಯೋತ್ಪಾದನೆಗೆ ಕಡಿಮೆಯಾಗಿರಲಿಲ್ಲವಾದ ಕಾರಣ, ರಾಜಕೀಯದಲ್ಲಿ ಇದೆಲ್ಲಾ ಮಾಮೂಲಿ ಎಂದುಕೊಂಡು ಸುಮ್ಮನಾಗಬೇಕಾಯಿತು.

ನೀವೇಕೆ ಗುರುವಿಗೆ ತಿರುಮಂತ್ರ ಹಾಕುವ ಬದಲು, ನೇಣಿನಿಂದ ರಕ್ಷಿಸಲು ಯತ್ನಿಸುತ್ತಿದ್ದೀರಿ ಎಂದು ಪ್ರಶ್ನಿಸಿದಾಗ, ಅಂಥ ಮರಳುಗಾಡಿನ ಮುಸ್ಲಿಂ ರಾಷ್ಟ್ರಗಳಲ್ಲೇ ಕೊಂದವನಿಗೆ ಕೊಲೆಯೇ ಶಿಕ್ಷೆ ಎಂಬುದಿದೆ. ಮತ್ತು ತಪ್ಪು ಮಾಡಿದರೆ ಮಾತ್ರವೇ ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಈತ ಇಲ್ಲಿ ಯಾರನ್ನೂ ಕೊಂದಿಲ್ಲ. ಸಂಸತ್ ಭವನವನ್ನೇ ಸ್ಫೋಟಿಸಲು ಯತ್ನಿಸಿದ್ದು ಮಾತ್ರ. ಸ್ಫೋಟವಾಗಿದೆಯೇ? ನಾವೆಲ್ಲಾ ಇನ್ನೂ ಬದುಕುಳಿದಿಲ್ಲವೇ? ಹಾಗಾಗಿ ಈತ ತಪ್ಪು ಮಾಡಿದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂಬ ಉತ್ತರ ಬಂತು.

ಮತ್ತೆ, ಅನಾದಿ ಕಾಲದಿಂದ ನಮ್ಮ ವೇದ ಶಾಸ್ತ್ರ ಪುರಾಣಗಳಲ್ಲೇ ಗುರು ಹತ್ಯೆ ಮಹಾಪಾಪ ಎಂದು ಹೇಳಲಾಗಿದೆ. ಈ ಅಫ್ಜಲ್ ಗುರು ಕೂಡ ಸಾಕಷ್ಟು ಮಂದಿಗೆ ಬಂದೂಕು ಹಿಡಿಯುವುದು ಹೇಗೆ, ಬಾಂಬ್ ಸ್ಫೋಟಿಸುವುದು, ಭಯವನ್ನು ಉತ್ಪಾದಿಸುವುದು ಹೇಗೆ ಎಂಬಿತ್ಯಾದಿ ವಿಷಯಗಳ ಕುರಿತು ಶಿಕ್ಷಣ ನೀಡಿದ್ದಾನೆ. ಇಂಥ ಮಹಾನ್ ಗುರುವಿಗೆ ಶಿಕ್ಷಕರ ದಿನಾಚರಣೆಯಂದು ರಾಷ್ಟ್ರಪತಿ ಪುರಸ್ಕಾರ ನೀಡುವುದು ಬಿಟ್ಟು, ಇಲ್ಲವೇ ದ್ರೋಣಾಚಾರ್ಯ ಪ್ರಶಸ್ತಿ ಕೊಡುವುದು ಬಿಟ್ಟು, ಗಲ್ಲು ಶಿಕ್ಷೆ ನೀಡಲು ಹೊರಟಿದ್ದಾರಲ್ಲಾ... ಇವರಿಗೆ ಯಾರಾದರೂ ಹೇಳೋರು ಕೇಳೋರು ಇಲ್ಲವೇ ಎಂದು ನಮ್ಮನ್ನೇ ಪುನರಪಿ ಪ್ರಶ್ನಿಸಲಾಯಿತು.

ಇನ್ನು, ಆತ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದಾನೆ. ಈ ಸಮುದಾಯವೇ ನಮ್ಮನ್ನು ಇಂದು ಈ ಸ್ಥಾನದಲ್ಲಿ ಕುಳ್ಳಿರಿಸಿರುವುದು. ಅವರ ಕಲ್ಯಾಣಕ್ಕಾಗಿ ಹಲವಾರು ಕ್ರಮಗಳನ್ನು ನಾವು ಮತ್ತು ನಮ್ಮ ಪಕ್ಷ ಕೈಗೊಂಡಿದ್ದಕ್ಕಾಗಿಯೇ ಇಂದು ಅಧಿಕಾರಕ್ಕೇರಿದ್ದೇವೆ. ಅವರಿಗೆ ಕಲ್ಯಾಣ ಮಾಡಿಸುವುದು ಬಿಟ್ಟು ಅವರನ್ನೇ ಕೊಂದು ಹಾಕಿಬಿಟ್ಟರೆ, ನಮಗೆ ಓಟು ಹಾಕುವವರಾದರೂ ಯಾರು? ನಾವು ಮತ್ತೊಮ್ಮೆ ಅಧಿಕಾರದ ಕುರ್ಚಿಗೆ "ಗ್ರಹಣ" ಮಾಡುವುದಾದರೂ ಹೇಗೆ ಎಂದು ಈ ವಕ್ತಾರರು ವರಾತ ತೆಗೆದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನಮ್ಮ ನೆರೆರಾಷ್ಟ್ರ ಪಾಕಿಸ್ತಾನವನ್ನು ಬೆಂಬಲಿಸುವವರೇ ಹೆಚ್ಚಾಗಿದ್ದಾರೆ. ನೆರೆಕರೆಯವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲು ಸಕಲ ಕ್ರಮಗಳನ್ನು ಕೈಗೊಳ್ಳುವವರೇ ಇರುವುದರಿಂದ ಆ ಸಮುದಾಯದ ಮಂದಿಗೆ ನಾವು ಪ್ರೋತ್ಸಾಹ ನೀಡಬೇಕು. ಅವರ ಓಟಿನ ಬ್ಯಾಂಕ್ ಠೇವಣಿಯನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಅಲ್ಲಿನ ಮುಖ್ಯಮಂತ್ರಿಯಾಗಿದ್ದ ಗುಲಾಮನ ಬೀಜಾದ್ ಅವರೇ ಹಿಂದೊಮ್ಮೆ ಗುರುವಿಗೆ ಕ್ಷಮೆ ನೀಡುವಂತೆ ಹೇಳಿರುವುದರಿಂದ ಮುಖ್ಯಮಂತ್ರಿ ಮಾತಿಗಾದರೂ ಬೆಲೆ ಕೊಡಬೇಡವೇ ಎಂದು ಈ ವಕ್ತಾರ ಘೊಳ್ಳನೆ ನಕ್ಕಿದ್ದಾನೆ.

ಅಲ್ಲಿಗೆ ಬೊಗಳೆ-ರಗಳೆ ಬ್ಯುರೋದ ಬಾಯಿ ಬಂದ್! ಬಾಯಿಯಿಂದ ಒಂದು ಶಬ್ದ ಉದುರಿದ್ದರೆ ಮತ್ತೆ ಕೇಳಿ!!!!!

Wednesday, June 24, 2009

ಒಂದೇಟಿಗೆ 2 ಹಕ್ಕಿ: ವಸತಿ, ಸಂಚಾರ ಸಮಸ್ಯೆ ಪರಿಹಾರ!

(ಬೊಗಳೂರು ಸಂಚೋದನಾ ಬ್ಯುರೋದಿಂದ)
ಬೊಗಳೂರು, ಜೂ.25- ಬೊಗಳೂರಿನ ಟ್ರಾಫಿಕ್ ಸಮಸ್ಯೆಗಳಿಗೆಲ್ಲಾ ಬೊಗಳೂರು ಬ್ಯುರೋಗಿಂತಲೂ ಮುಂಚಿತವಾಗಿ ಪರಿಹಾರ ಕಂಡುಹುಡುಕಿದ ವಿಷಯವನ್ನು ಇಲ್ಲಿ ಓದಿ ಬೆಚ್ಚಿ ಬೆದರಿ ಕಂಗಾಲಾದ ಬೊ.ರ. ಬ್ಯುರೋ, ತನ್ನ ಏಕಸದಸ್ಯ ಬ್ಯುರೋದ ಎಲ್ಲ ವರದಿಗಾರರ ತಂಡಗಳನ್ನು ಅತ್ತ ಕಡೆ ಅಟ್ಟಿದ ಪರಿಣಾಮ ಈ ವರದ್ದಿ.

ಕಾರು ತಯಾರಿಕಾ ಕಂಪನಿಯ ಅಂಗಣಕ್ಕೇ ನೇರವಾಗಿ ಬೊಗಳೂರು ಬ್ಯುರೋ ಬಂದು ಬಿದ್ದ ಹಿನ್ನೆಲೆಯಲ್ಲಿ ಈ ಕಾರಿನ ಸಾಧ್ಯಾಸಾಧ್ಯತೆಗಳ ಕುರಿತಾಗಿ ವಿಶ್ಲೇಷಣೆ ನಡೆಸಲಾಯಿತು.

ಅವರಿವರು ಅಚಾನಕ್ ಆಗಿ ಬಾಯಿಬಿಟ್ಟದ್ದನ್ನೇ ವಿಶೇಷ ಸಂದರ್ಶನ ಎಂದು ಪರಿಗಣಿಸಿ, ಅವರ ಮಾತುಗಳನ್ನು ಬರೆದಿಟ್ಟುಕೊಂಡು ಎಕ್ಸ್-loosಇವ್ ಸಂದರ್ಶನ ಎಂದು ಇಲ್ಲಿ ಪ್ರಕಟಿಸಲಾಗಿದೆ.

ಬೆಂಗಳೂರಿನ ಸಂಚಾರವೀರ: ಫುಟ್‌ಪಾತಿನಲ್ಲಿ ನಡೆದುಹೋಗುತ್ತಿದ್ದರೆ ಯಾವುದೇ ನಟಿಯರ ಹೃದಯದಲ್ಲಿ ಸಲ್ಲದೇ ಇರುವ ಸಲ್ಲುಮಾನಖಾನನಂತವರಿಂದ ತಪ್ಪಿಸಿಕೊಳ್ಳಲು ಇದುವರೆಗೆ ಹೆಣಗಾಡುತ್ತಿದ್ದೆವು. ಇನ್ನು ಮುಂದೆ ಮೇಲಿನಿಂದಲೂ ಏನಾದರೂ ಉದುರುತ್ತದೆಯೋ ಎಂದು ಎಚ್ಚರಿಕೆ ವಹಿಸಿ ನಡೆಯಬೇಕು.

ರಸ್ತೆ Cum-ಟ್ರ್ಯಾಕ್ಟರ್ (ರಸ್ತೆಗಳನ್ನು ಟ್ರ್ಯಾಕ್ಟರ್ ಓಡಿಸುವಂತೆ ಮಾತ್ರವೇ ನಿರ್ಮಿಸುವಾತ): ಛೆ ಛೆ, ಇನ್ನು ಮುಂದೆ ಹಾರುವ ಕಾರುಗಳಿಗೆ ರಸ್ತೆ ನಿರ್ಮಿಸುವಂತಿಲ್ಲವಲ್ಲಾ... ನಿರ್ಮಿಸಿದರೂ, ಅದರಲ್ಲಿ ಗುಳಿ-ಗುಂಡಿ ಇರುವಂತೆ ನೋಡಿಕೊಳ್ಳುವಂತಿಲ್ಲವಲ್ಲಾ... ನಮ್ಮ ಜೇಬು ತುಂಬಿಸಿಕೊಳ್ಳಲು ಮಾಡುವುದಾದರೂ ಏನನ್ನು?

ದುರ್‌ವಾಣಿ ಕೇಬಲ್ ಅಗೆತದಾರ: ಅಯ್ಯಯ್ಯೋ, ಇನ್ನು ರಸ್ತೆಯೆಲ್ಲಾ ಅಗೆದು ಹಾಕುವುದು ಎಲ್ಲಿ? ಬಾನೆತ್ತರದಲ್ಲಿ ಅಗೆದರೂ ಜನರಿಗೆ ಬೇಸಗೆಯಲ್ಲಿ ಧೂಳು, ಮಳೆಗಾಲದಲ್ಲಿ ಕೆಸರು ತಿನ್ನಿಸುವುದಾದರೂ ಹೇಗೆ? ಅವರ ಮನೆಗಳಿಗೆ ಉಚಿತವಾಗಿ ಕೆಂಬಣ್ಣ ಹಚ್ಚುವುದಾದರೂ ಹೇಗೆ? ಅವರ ಮೂಗು, ಕಿವಿಗಳನ್ನು ಬ್ಲಾಕ್ ಆಗಿಸುವಂತೆ ಮಾಡಿ, ಆಸ್ತಮಾ ಇತ್ಯಾದಿಗಳಿಂದ ನರಳುವಂತೆ ಮಾಡಿ, ನೊಣ ಹೊಡೆಯುತ್ತಿದ್ದ ವೈದ್ಯ ಸಮುದಾಯಕ್ಕೆ ನಾವು ಸಹಕಾರ ನೀಡುತ್ತಿದ್ದೆವು. ಇನ್ನು ಮುಂದೆ ಅವರ ಕೆಲಸ ಖೋತಾ. ಮನೆಯಿಂದ ಹೊರಗೆ ಕಾಲಿಟ್ಟ ತಕ್ಷಣ ಬಟ್ಟೆಗಳು ಬಣ್ಣ ಕಳೆದುಕೊಳ್ಳುವಂತೆ ಮಾಡಿ, ಸಾಬೂನು ಕಂಪನಿಗಳಿಗೆ ಉಪಕಾರ ಮಾಡುತ್ತಿದ್ದೆವು. ಇನ್ನು ನಮ್ಮ ಉಪಕಾರ ಪಡೆದುಕೊಳ್ಳುವವರಾದರೂ ಯಾರು?

ಶಾಕ್ ಅಬ್ಸಾರ್ಬರ್ ಕಂಪನಿಯೊಡೆಯ: ನಮ್ಮೆಲ್ಲಾ ಬ್ಯುಸಿನೆಸ್ ಇನ್ನು ಗೋತಾ. ಹೊಂಡಾ-ಗುಂಡಿ ರಸ್ತೆಗಳಿದ್ದ ಕಾರಣದಿಂದಾಗಿ ಇದುವರೆಗೆ ಪ್ರತಿಯೊಂದು ವಾಹನಿಗರು ವರ್ಷಕ್ಕೆ ಕನಿಷ್ಠ ಒಂದುಬಾರಿಯಾದರೂ ಶಾಕ್ ಅಬ್ಸಾರ್ಬರ್‌ಗಳನ್ನು ಬದಲಿಸುತ್ತಿದ್ದರು. ಇನ್ನು ಮುಂದೆ ಖಂಡಿತಾ ಅವರು ಇತ್ತ ಕಡೆ ತಲೆ ಹಾಕಲಾರರು. ನಮಗಿನ್ನು ರೆಸೆಶನ್ನೇ ಗತಿ.

ಬೊಗಳೂರಿನ ಬೊಗಳೂರಿಗರು: ಈಗ ಲಕ್ಷ ಲಕ್ಷ ಲಕ್ಷ್ಯವೇ ಅಲ್ಲದ ಕಾರಣ, ಕೋಟಿ ಕೋಟಿಗೆ ಮಾತ್ರವೇ ಒಂದೆರಡ್ರೂಪಾಯಿ ಬೆಲೆ ಇರೋದ್ರಿಂದ ಈ ಕಾರೇ ಸೂಕ್ತ. ಇರಲು ಮನೆ ಇಲ್ಲದಿದ್ದರೂ ಕಾರು ಕೊಂಡರೆ, ಅದರಲ್ಲೇ ಓಡಾಡುತ್ತಿರಬಹುದು. ಕಾರಿನಲ್ಲಿ ಓಡಾಡಿ ಓಡಾಡಿ ಸುಸ್ತಾಗುವಾಗ, ಆಕಾಶದಲ್ಲೇ ಕಾರು ನಿಲ್ಲಿಸಿ ಮಲಗಬಹುದು. ಭಾರತದಲ್ಲಿದ್ದುಕೊಂಡೇ, ವಿದೇಶದಲ್ಲಿ ಉದ್ಯೋಗ ಮಾಡುತ್ತಾ, ಬೆಳಗ್ಗೆ ಭಾರತದಿಂದ ಹೊರಟು, ಅಮೆರಿಕಕ್ಕೆ ಉದ್ಯೋಗಕ್ಕೆ ಕಾರಿನಲ್ಲಿ ಪ್ರಯಾಣಿಸಿ ರಾತ್ರಿಯೂಟಕ್ಕೆ ಮರಳಬಹುದು. ವಿದೇಶದಲ್ಲಿರುವವರೆಲ್ಲರೂ ಇನ್ನು ಮುಂದೆ ಎನ್ನಾರೈಗಳು ಎಂದು ಕರೆಸಿಕೊಳ್ಳಬೇಕಿಲ್ಲ. ಮನೆಯಿಲ್ಲದಿದ್ದರೂ, ವಾಹನ ಮಾತ್ರವೇ ಇರುವವರನ್ನು "ನಾನ್ ರೆಸಿಡೆನ್ಸ್ ಇಂಡಿಯನ್ಸ್" ಅಂತ ಕರೆಯಬಹುದು.

Monday, June 22, 2009

ಬೊಗಳೂರು ಸಮುದ್ರದಲ್ಲಿ ರಸ್ತೆ ತಡೆ ಪ್ರತಿಭಟನೆ

(ಬೊಗಳೂರು ಪ್ರತಿ'ಘ'ಟನಾ ಬ್ಯುರೋದಿಂದ)
ಬೊಗಳೂರು, ಜೂ22- ಮುಂಬೈ ದಾಳಿಯಲ್ಲಿ ಕೈವಾಡ ಜಗಜ್ಜಾಹೀರಾದರೂ, ನೀವು ಒಮ್ಮೆಗೆ ಒಂದೇ ಸೂಟುಕೇಸಿನಲ್ಲಿ ತುಂಬಿ ಸಾಕ್ಷ್ಯಗಳನ್ನು ಕೊಡಬೇಕಿತ್ತು ಅಂತ ನೆವನ ಹೇಳುತ್ತಿರುವ ಪಾತಕಿಸ್ತಾನ ಮತ್ತು "ಇಲ್ಲ, ಇಲ್ಲ, ನಾವು ಸಾಕ್ಷ್ಯ ಕೊಡುತ್ತಲೇ ಇದ್ದೇವೆ, ನೀವು ಕೇಳಿದಾಗಲೆಲ್ಲಾ ಕೊಡ್ತೀವಿ, ಎಷ್ಟು ನಿಧಾನವಾಗಿ ಆದ್ರೂ ಪರವಾಗಿಲ್ಲ, ಆದರೆ ಕನಿಷ್ಠ ನಾಲ್ಕೈದು ವರ್ಷದೊಳಗಾದರೂ ಉಗ್ರಗಾಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು" ಎಂಬ ಧೋರಣೆ ತಳೆದಿರುವ ಬೊಗಳೂರು ಸರಕಾರದ ವಿರುದ್ಧ ತೀವ್ರ ಪ್ರತಿಭಟನೆ ಮಾಡಲು ಕೊನೆಗೂ ಎಚ್ಚೆತ್ತುಕೊಂಡ ಬೊ.ರ. ಜನತೆ ನಿರ್ಧರಿಸಿದ್ದಾರೆ.

ಎಲ್ಲರೂ ಕತ್ತೆ ಮೇಲೆ, ಎತ್ತಿನ ಬಂಡಿ ಇಟ್ಟು, ಜಾಗಟೆ ಬಾರಿಸಿ, ರಸ್ತೆ ತಡೆ, ರೈಲು ತಡೆ, ಧರಣಿ ಎಂಬಿತ್ಯಾದಿ ಸಕಲ ಮಾರ್ಗಗಳ ಮೂಲಕ ಪ್ರತಿಭಟನೆ ನಡೆಸಿಯಾಗಿದೆ. ಮುಂಬೈ ದಾಳಿಗೆ ಬಲಿಯಾದವರ ಕುಟುಂಬದವರ ರೋದನವಿನ್ನೂ ಸರಕಾರಕ್ಕೆ ಕೇಳಿಸಿಲ್ಲ. ಈ ಕಾರಣಕ್ಕೆ ಈ ಬಾರಿ ಸರಕಾರದ ಗಮನ ಸೆಳೆದೇ ಸಿದ್ಧ ಎಂದು ಪಣ ತೊಟ್ಟಿರುವ ಬೊಗಳೂರು ಜನತೆ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಹೇಗೆ ಎಂದು ಯೋಚಿಸಿ ಯೋಚಿಸಿ ಅರಬ್ಬೀ ಕಡಲಿನ ನೀರೆಲ್ಲಾ ಖಾಲಿಯಾಗುವ ಹಂತ ತಲುಪಿದಾಗ, ಸರಕಾರದಲ್ಲಿರುವವರಷ್ಟೇ ದಪ್ಪ ಮಂಡೆಯ ಬೊಗಳೂರು ಮಂದಿಯ ಮಂಡೆಯೊಳಗೂ ಒಂದು ನಕ್ಷತ್ರ ಹೊಳೆದಿದ್ದು, ಅವರೆಲ್ಲರೂ "ಹೀಗೆ ಮಾಡಿದರೆ ಹೇಗೆ" ಎನ್ನುತ್ತಾ ಏಕ ಸದಸ್ಯ ಬ್ಯುರೋದಲ್ಲಿರುವ ಎಲ್ಲರನ್ನೂ ತರಾಟೆಗೆ ತೆಗೆದುಕೊಂಡವರಂತೆ ಬೊ.ರ. ಕಚೇರಿಗೆ ಧಾವಿಸಿ ಬಂದರು.

ಬೊ.ರ. ಕಚೇರಿಯಲ್ಲಿದ್ದ ಏಕಸದಸ್ಯರಲ್ಲಿ ಎಲ್ಲರೂ ಒಂದೊಂದಾಗಿ ಎದ್ದು ನಿಂತು "ಹೇಗೆ" ಎಂದು ಸಮುದ್ರದ ಅಲೆಅಲೆಗಳು ಬಂದಂತೆ ಕೇಳುತ್ತಾ ಹೋದರು.

ಮುಂಬೈ ದಾಳಿಕೋರರೆಲ್ಲ ಅರಬ್ಬೀ ಸಮುದ್ರದ ಮೂಲಕವೇ ಒಂದು ದೋಣಿಯಲ್ಲಿ ಬಂದಿದ್ದಲ್ಲವೇ? ಅದಕ್ಕೆ ಈ ಬಾರಿ ನಾವು ಸಮುದ್ರದಲ್ಲಿ ರಸ್ತೆ ತಡೆ ಮಾಡಬೇಕೆಂದಿದ್ದೇವೆ. ಸಮುದ್ರದ ನೀರು ಒಂದಿಷ್ಟೂ ಕದಲದಂತೆ ಮಾಡುತ್ತೇವೆ. ಸಮುದ್ರದಲ್ಲಿ ಜಲಚರಗಳ ಓಡಾಟವನ್ನು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ತಡೆದು, ಸಮುದ್ರತಡೆ ಮಾಡುವ ಮೂಲಕ ನಮ್ಮ ಪ್ರತಿಭಟನೆ ಸಲ್ಲಿಸುತ್ತೇವೆ ಎಂದ ಅವರು, ಅರಬ್ಬೀ ಸಮುದ್ರದಲ್ಲಿ ರಾಸ್ತಾ ರೋಕೋ ಮಾಡುವ ಈ ಪ್ರಯತ್ನಕ್ಕೆ ಬೊಗಳೂರು ಶುಭ ಹಾರೈಸದಿದ್ದರೆ ಮಟಾಷ್ ಎಂದು ಎಚ್ಚರಿಕೆ ನೀಡಿದ ಅವರು ಹೊರಟೇ ಹೋದರು.

Friday, June 19, 2009

ಪ್ರಾಣಿಗಳಿಗೂ ಲ್ಯಾಪುಟಾಪು, ಮೊಬೈಲ್!

(ಬೊಗಳೂರು ಪ್ರಾಣಿಗಳ ಬ್ಯುರೋದಿಂದ)
ಬೊಗಳೂರು, ಜೂ.19- ಎಷ್ಟೇ ಅವಕಾಶಗಳು ದೊರೆತರೂ ಮುಂಬೈಗೆ ಹೋಗದಿರಲು ಬೊಗಳೆ ರಗಳೆ ಬ್ಯುರೋ ನಿರ್ಧರಿಸಿದೆ. ಇದಕ್ಕೆ ಪ್ರಮುಖ ಕಾರಣವೊಂದು ಪತ್ತೆಯಾಗಿದೆ.

ಅಲ್ಲಿರುವ ಮೃಗಾಲಯವನ್ನು ಆಧುನೀಕರಿಸಲು ಸರಕಾರವು ಯೋಜನೆ ಹಾಕಿಕೊಳ್ಳುವುದರಿಂದಾಗಿ, ಅಲ್ಲಿ ಮತ್ತಷ್ಟು ಹೊಸ ಹೊಸಾ ಪ್ರಾಣಿಗಳನ್ನು ಸೇರಿಸಿಕೊಳ್ಳುವ ಸಾಧ್ಯತೆಗಳಿರುವುದರಿಂದಾಗಿಯೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬೊ.ರ. ಬ್ಯುರೋ ಸಂತಾಪಕರು ತಿಳಿಸಿದ್ದಾರೆ.

ಆದರೆ, ವೇಷ ಮರೆಸಿಕೊಂಡು ಅಲ್ಲಿಗೆ ಹೋಗಿಯೇ ತೀರುವುದಾಗಿಯೂ ಇದೇ ಸಂದರ್ಭದಲ್ಲಿ ಅವರು ಘೋಷಿಸಿಬಿಟ್ಟಿದ್ದಾರೆ. ಯಾಕೆಂದರೆ, ಮೃಗಗಳ ಆಲಯವನ್ನು 433 ಕೋಟಿ ರೂಪಾಯಿ ಹಣ ಪಡೆದು ಆಧುನೀಕರಿಸಲಾಗುತ್ತಿದೆ. ಕಾಡು ಬೆಟ್ಟ ಗುಡ್ಡಗಳಿಗೆ 433 ಕೋಟಿ ರೂಪಾಯಿಯಲ್ಲಿ ಏನು ಮಾಡಬಹುದು ಎಂಬ ಶಂಕೆಯೊಂದು ದಿಢೀರ್ ಹುಟ್ಟಿಕೊಂಡಿದ್ದೇ ಈ ಅವಾಂತರಕ್ಕೆ ಕಾರಣ.

ಬಹುಶಃ ಪ್ರಾಣಿಗಳಿಗೆಲ್ಲಾ ಲ್ಯಾಪ್‌ಟಾಪ್ ಕೊಡಬಹುದೇ? ಎಂಬ ಪ್ರಶ್ನೆ ಹುಟ್ಟಿಕೊಂಡ ನಡುವೆಯೇ, ಅವುಗಳಿಗೂ ಒಂದೊಂದು ಇ-ಮೇಲ್ ಅಕೌಂಟ್ ತೆರೆದು, ಓರ್ಕುಟ್ ಹಾಗೂ ಗೂಗಲ್ ಟಾಕ್ ವ್ಯವಸ್ಥೆ ಮಾಡಿಕೊಟ್ಟು, ಬೊಗಳೂರು ಬ್ಯುರೋದೊಂದಿಗೆ ಸಂಪರ್ಕಕ್ಕೆ ಹಾದಿ ಮಾಡಿಕೊಡಬಹುದೇ ಎಂಬಿತ್ಯಾದಿ ಪ್ರಶ್ನೆಗಳೆಲ್ಲವೂ ಇತ್ತೀಚೆಗೆ ಹುಟ್ಟಿಕೊಂಡಿರುವುದಾಗಿ ಪತ್ತೆಯಾಗಿದೆ.

ನಾವು ಕಾಲಕ್ಕೆ ತಕ್ಕಂತೆ ಕೋಲ ಕಟ್ಟಿಕೊಂಡು ಆಧುನೀಕರಣಗೊಂಡರೆ ಮಾತ್ರವೇ ಭಾರತವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತಿ ಸಾಧಿಸಲು ಸಾಧ್ಯ ಎಂದು ಮಾನವ ಸಮುದಾಯ ಹೇಳುತ್ತಲೇ ಬಂದಿದೆ. ಇದು ಪ್ರಾಣಿಗಳಿಗೂ ಅನ್ವಯವಾಗಬೇಕು ಎಂದು ಬೊಗಳೂರು ಬ್ಯುರೋದ ನೂರಾರು ವರ್ಷಗಳ ಹೋರಾಟದ ಫಲವಿದು ಎಂಬ ಅಪರೂಪದ ಸಂಚೋದನೆಯೊಂದನ್ನೂ ಇದೇ ಸಂದರ್ಭ ಬೊಗಳೂರು ಸಂತಾಪಕರು ಹೊರಗೆಡಹಿದ್ದಾರೆ.

ಈ ಹಿಂದೆ ಪ್ರಾಣಿಗಳ ಕೈಗೆ ಪೇಜರ್ ಕೊಡುವ ಬಗ್ಗೆ ಸರಕಾರ ಯೋಜನೆ ರೂಪಿಸಿತ್ತು. ಆದರೆ ಮೊಬೈಲ್ ಫೋನುಗಳ ಹಾವಳಿ ಜೋರಾದ ಬಳಿಕ ಪೇಜರುಗಳೆಲ್ಲ ಮೂಲೆಗೆ ಸೇರಿದವು. ಮತ್ತು ಅದಾಗಲೇ ಪ್ರಾಣಿಗಳ ಸಮುದಾಯವು ನಂಗೂ ಒಂದು ಮೊಬೈಲ್ ಕೊಡಿಸಪ್ಪ ಎಂದು ಹಠ ಮಾಡತೊಡಗಿದ್ದವು.

ಮತ್ತು ಇದೀಗ, ಭಿಕ್ಷುಕರು ಕೂಡ, ತಮ್ಮ ಕೈಯಲ್ಲಿದ್ದ ಮೊಬೈಲ್ ಫೋನಿನಲ್ಲೇ ಪಕ್ಕದ ಬೀದಿಗೆ ಫೋನಾಯಿಸಿ, ಮಗಾ, ಅಲ್ಲಿ ಯಾಪಾರ ಚೆನ್ನಾಗಿ ನಡೀತೈತಾ, ತುಂಬಾ ರಶ್ ಇದೆಯಾ, ನಿಂಗೆ ಯಾಪಾರ ಮಾಡಕ್ಕಾಗ್ದಿದ್ರೆ, ನಾನೂ ಅಲ್ಲೇ ಬತ್ತೀನಿ ಅಂತ ವಿಚಾರಿಸಿ ಬೀದಿ ಬೀದಿಯಲ್ಲಿ ಡ್ಯೂಟಿಗೆ ಹಾಜರಾಗುವ ಘಟನೆಗಳು ಕೂಡ ಹೆಚ್ಚಾಗುತೈತೆ.

ಈ ಎಲ್ಲ ಹಿನ್ನೆಲೆಯಲ್ಲಿ, ಮೊಬೈಲ್ ಕೊಡಿಸುವ ಯೋಜನೆ ಜಾರಿಗೆ ಬರುವಾಗ, ಅದು ಕೂಡ ಔಟ್-ಡೇಟೆಡ್ ಆಗಿ, ಪುಟ್ಟ ಪುಟ್ಟ ಲ್ಯಾಪುಟಾಪುಗಳು, ಐಫೋನುಗಳು, ಕಪ್ಪು-ಬೆರಿಗಳೆಲ್ಲಾ ಮೇಳೈಸುವುದರಿಂದಾಗಿ, ಈಗಲೇ ಲ್ಯಾಪುಟಾಪು ನೀಡುವ ಯೋಜನೆಯನ್ನು ಔಟ್‌ಡೇಟ್ ಆಗುವ ಸಾಕಷ್ಟು ಮುಂಚೆಯೇ ಘೋಷಿಸುವ ತೀರ್ಮಾನ ಮಾಡಲಾಗಿದೆ ಎಂದು ಪ್ರಾಣಿಗಳ ಸಂಘದ ಅಧ್ಯಕ್ಷರು ಪತ್ರಿಕಾ ಪ್ರಕಟ್ಟಪ್ಪಣೆಯಲ್ಲಿ ತಿಳಿಸಿದ್ದಾರೆ.

Tuesday, June 16, 2009

ಸೋಲಿಗೆ ಜಾಹೀರಾತು ಒತ್ತಡ ಕಾರಣ: ಧೋನಿ ಸಮರ್ಥನೆ

(ಬೊಗಳೆ ಸಂದರ್ಶನ ಬ್ಯುರೋದಿಂದ)
ಬೊಗಳೆ ರಗಳೆ ಬ್ಯುರೋದ ಏಕಸದಸ್ಯ ಆಯೋಗದ ಸಮಸ್ತ ಸದಸ್ಯರು, ವಿಶ್ವಕಪ್ ಟಿಕ್ ಟ್ವೆಂಟಿ ಕೂಟದಿಂದ ಇಂದ್ರನನ್ನೇ ಗೆದ್ದಂತಿದ್ದ ಸಿಂಹೇಂದ್ರ ಮಂಗ್ ಧೋನಿ ಬಳಗ ದಿಢೀರ್ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಟೀಮಿಂಡಿಯಾ ನಾಯಕನನ್ನು ಸಂಪರ್ಕಿಸಲು ಯತ್ನಿಸಿ ಏರ್‌ಸೆಲ್ ಮೊಬೈಲ್ ಮೂಲಕ ಫೇಸ್‌ಬುಕ್‌ನಲ್ಲಿ ಜಾಲಾಡಿದರೂ ಧೋನಿ ಸಿಗಲಿಲ್ಲ.

ಓರಿಯಂಟ್ ಪಿಎಸ್‌ಪಿಒ ಫ್ಯಾನ್ ಹಾಕಿಕೊಳ್ಳುತ್ತಾ ತನ್ನ ಮತ್ತು ಟೀಂ ಇಂಡಿಯಾದ ಫ್ಯಾನ್‌ಗಳ ಆಕ್ರೋಶದ ಬಿಸಿಯನ್ನು ತಂಪಗಾಗಿಸಿಕೊಳ್ಳುವ ಪ್ರಯತ್ನದಲ್ಲಿದ್ದ ಧೋನಿ, ಕೊನೆಗೂ ಒಂದು ಕೋಕೋ ಕೋಲಾ ಶಾಪದಲ್ಲಿ ಸೆರೆ ಸಿಕ್ಕರು. ಅವರನ್ನು ಹಿಡಿದೆತ್ತಿ ಸಂದರ್ಶಿಸಲಾಯಿತು.

ನೀವು ಯಾಕೆ ಸೋತಿರಿ?
ಛೆ, ನಾವು ಸೋತಿಲ್ಲ, ನಾವು ಮೂರು ರನ್ ಕಡಿಮೆ ಬಿತ್ತಷ್ಟೆ. ಅವರು ಗೆದ್ದರು. ನಾವೂ ಗೆಲ್ಲುತ್ತಿದ್ದೆವು. ಆದರೆ ಕೇವಲ 3 ರನ್ ಅಂತರದ ಗೆಲುವಾಗಿರುವುದರಿಂದ ಅವರು ನಿಜವಾಗಿ ಗೆದ್ದಿಲ್ಲ. ಗೆದ್ದವರು ನಾವೆ.

ಛೆ, ಹಾಗೆಲ್ಲಾ ಬಡಬಡಿಸದಿರಿ. ಈಗ ಸೋಲಿಗೆ ಕಾರಣ ಏನೂಂತ ಹೇಳ್ತೀರಾ...

ಹೇಳ್ತೀನಿ ಹೇಳ್ತೀನಿ. ಸೋತ ತಕ್ಷಣ ನೀವು ಹೀಗೆ ಕೇಳಿದ್ರೆ ಉತ್ತರಿಸೋದು ಕಷ್ಟವಾಗುತ್ತೆ. ನಮಗೆ ಕೂಡ ಸ್ವಲ್ಪ ಸುಧಾರಿಸೋದಿಕ್ಕೆ ಸಮಯಾವಕಾಶ ಕೊಡಬೇಕಲ್ವ. ತಕ್ಷಣ ಉತ್ತರಿಸೋಕೆ ನಾವು ಪ್ರಿಪೇರ್ ಆಗಿರೋದಿಲ್ಲ. ಸೋ, ಒಂದೈದು ನಿಮಿಷ ಕೊಡಿ. ಅಷ್ಟ್ರೊಳ್ಗೆ ಒಂದು add ಶೂಟಿಂಗ್ ಮುಗ್ಸಿ, ಯೋಚಿಸಿ ಹೇಳ್ತೀನಿ.

ಕಳೆದ ಬಾರಿ ಗೆದ್ದವರು, ಈ ಬಾರಿ ಸೂಪರ್ 8ರಲ್ಲಿ ಸೋತಿರುವ ಬಗ್ಗೆ ಏನನ್ನಿಸುತ್ತದೆ?

ಕಳೆದ ಬಾರಿ ಅದೃಷ್ಟ ಇತ್ತು. ಮಳೆಯಿಂದ ಒಂದು ಪಂದ್ಯ ರದ್ದಾಗದೇ ಹೋಗಿದ್ದರೆ ಕಳೆದ ಬಾರಿಯೂ ಕಪ್ ನಮ್ಮದಾಗಿರುತ್ತಿರಲಿಲ್ಲ. ಈ ಬಾರಿ ಆ ಅದೃಷ್ಟ ಎಲ್ಲೋ ತಲೆಮರೆಸಿಕೊಂಡಿತ್ತು. ಮುಂದಿನ ಬಾರಿ ಹೇಗಾದರೂ ಮಾಡಿ ಅದೃಷ್ಟವನ್ನು ಮೊದಲೇ ಹಿಡಿದು ಭದ್ರವಾಗಿಟ್ಟುಕೊಳ್ಳುತ್ತೇವೆ. ಅದೇನೂ ದೂರವಿಲ್ಲ ಅಲ್ವಾ.

ಈಗ ಹೇಳಿ, ಸೋಲಲು ಕಾರಣವೇನು?
ಒತ್ತಡ ಕಾರಣ, ಇಷ್ಟೆಲ್ಲ ಜಾಹೀರಾತುಗಳಿರುವಾಗ, ಅವುಗಳ ಮಧ್ಯೆ ಮಧ್ಯೆ ಕ್ರಿಕೆಟ್ ಕೂಡ ಆಡಬೇಕು. ಅದಲ್ಲದೆ, ಸಿನಿಮಾದವ್ರು ಕೂಡ ಬೆನ್ನಹಿಂದೆ ಬರ್ತಾ ಇದ್ದಾರೆ. ಇಷ್ಟೆಲ್ಲಾ ಒತ್ತಡದ ನಡುವೆ ನಾವು ಸೂಪರ್8 ತಲುಪಿದ್ದೇ ದೊಡ್ಡ ದುರಂ... ಅಲ್ಲಲ್ಲ ಸಂಗತಿ... ಮತ್ತೆ ನಮ್ಮಲ್ಲಿ ಚಚ್ಚಿಂಗ್ ಚೆಂಡುಲ್ಕರ್, ಸ್ಫೋಟೇಂದ್ರ ಸೇವಾಗ್ ಮುಂತಾದವರಿರಲಿಲ್ಲ ಎಂಬ ಕಾರಣವೂ ಈಗೀಗ ಹೊಳೆಯುತ್ತಿದೆ.

ನಾವು ಸೋತಿದ್ದಕ್ಕೆ ಮತ್ತೊಂದು ದೊಡ್ಡ ಕಾರಣವೂ ಇದೆ. ಕಳೆದ ಬಾರಿ ಹೇಗೋ ಗೆದ್ದು ಕಪ್ಪನ್ನು ಎರಡು ವರ್ಷ ನಮ್ಮಲ್ಲಿ ಉಳಿಸಿಕೊಂಡೆವು. ಈ ಬಾರಿ ಕಪ್ ಗೆದ್ರೆ ಅದನ್ನು ಕೇವಲ 9 ತಿಂಗಳ ಕಾಲ ಮಾತ್ರವೇ ನಮ್ಮ ಬಳಿ ಉಳಿಸಿಕೊಳ್ಳಬಹುದು. ಹೀಗಾಗಿ ನಮಗೆ ಈ ಕಡಿಮೆ ಅವಧಿಯ ಕಪ್ಪು ಬೇಡ ಅಂತ ನಿರ್ಧರಿಸಿದೆವು.

ಈಗೇನು ಯೋಚಿಸ್ತಾ ಇದ್ದೀರಿ?
ಏನಿಲ್ಲ, ರವೀಂದ್ರ ಜಡೇಜಾರನ್ನು ಮೇಲಿನ ಕ್ರಮಾಂಕಕ್ಕೆ ಬಡ್ತಿ ನೀಡಿ ಕಳಿಸಿದ್ದು ಏನಾದ್ರೂ ತಪ್ಪಾಗಿರಬಹುದೇ? ನಾನು ಕೊನೆಗೆ ಬಂದಿದ್ದರೆ ಚೆನ್ನಾಗಿತ್ತೇ? ಅಂತೆಲ್ಲಾ ಆಲೋಚನೆ ಆಗ್ತಾ ಇದೆ. ಆದ್ರೆ ಅದಕ್ಕೂ ಹೆಚ್ಚಾಗಿ, ನಾನು ರೂಪದರ್ಶಿಯಾಗಿರುವ ಕೋಕೋ ಕೋಲಾ, ಪಿಎಸ್ಪೀಓ ಮತ್ತು ಏರ್ಸೆಲ್‌ಗಳ ಗತಿಯೇನು? ಅವರು ನನ್ನನ್ನು ಉಳಿಸಿಕೊಳ್ಳುತ್ತಾರಾ? ನನಗೆ ಗೇಟ್ ಪಾಸ್ ಕೊಡ್ತಾರಾ ಅನ್ನೋದೇ ಚಿಂತೆಯಾಗಿಬಿಟ್ಟಿದೆ.

ಬಿದ್ದವರಿಗೆ ಆಳಿಗೊಂದರಂತೆ ಕಲ್ಲು ಎಂಬ ಮಾತು ನಿಮಗೆ ಹೇಗೆ ಅನ್ವಯವಾಗುತ್ತದೆ?
ಭಾರತ ದೇಶ ಭಾವನೆಗಳಿಂದ ತುಂಬಿದ ದೇಶ. ಯಾವ ಭಾವನೆ ಎಲ್ಲಿ ಹೇಗೆ ವ್ಯಕ್ತವಾಗಬೇಕು ಎಂದು ಜನರಿಗೆ ಗೊತ್ತಾಗೋದಿಲ್ಲ. ಬಾಯಿಗೆ ಬಂದಂತೆ ಆಡೋದು ನಮ್ಮ ಕೆಲಸ, ಮನ ಬಂದಂತೆ ತೆಗಳುವುದು ಮತ್ತು ಹೊಗಳುವುದು ಅವರಿಗೆ ಬಿಟ್ಟ ವಿಷಯ. ಬಿದ್ದಾಗ ಒದ್ದು ಬಿಡುವುದು, ಎದ್ದಾಗ ಹೊದ್ದು ಮಲಗುವುದು, ಇಲ್ಲಾ ಅಟ್ಟಕ್ಕೇರಿಸುವುದು ನಮ್ಮ ಜಾಯಮಾನ.

ಆದ್ರೆ ಒಂದು ಮಾತ್ರ ನೆನಪಿಡಿ. ಇದುವರೆಗೆ ಟಿ-ಟ್ವೆಂಟಿ ವಿಶ್ವ ಕಪ್ ಪಂದ್ಯಗಳನ್ನು, ಅದರಲ್ಲಿಯೂ ಭಾರತ ಇರೋ ಪಂದ್ಯಗಳನ್ನು ನಮ್ಮ ಭಾರತೀಯರು ಭಾರೀ ಟೆನ್ಷನ್‌ನಿಂದ, ಉದ್ವಿಗ್ನರಾಗಿ, ಉದ್ವೇಗಗೊಂಡು, ಉಸಿರು ಬಿಗಿಹಿಡಿಯುವುದೇ ಮುಂತಾಗಿ ಸರ್ಕಸ್ ಮಾಡುತ್ತಾ ನೋಡುತ್ತಿದ್ದರು. ಅವರಿಗೀಗ ಈ ಎಲ್ಲ ಯಾವುದೇ ತಾಪತ್ರಯಗಳಿಲ್ಲದೆ ಆಟ ನೋಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ. ಸ್ಟ್ರೆಸ್ ಎಂಬುದು ಅತಿ ದೊಡ್ಡ ಕಿಲ್ಲರ್ ಎಂದು ನಮಗೆ ಯಾರೋ ಹೇಳಿರುವುದರಿಂದ, ನಾವು ಭಾರತೀಯರಿಗೋಸ್ಕರ ಏನಾದ್ರೂ ಮಾಡಬೇಕೆಂದು ಯಾವತ್ತೋ ಆಲೋಚಿಸಿದ್ದೆವು. ಅದೀಗ ಕೈಗೂಡಿದೆ. ಎಲ್ಲ ಭಾರತೀಯರೂ ಶಾಂತರಾಗಿ ಇನ್ನು ಕ್ರಿಕೆಟ್ ಮ್ಯಾಚ್ ನೋಡಬಹುದು ಎಂದು ಬೊಗಳೆ ರಗಳೆ ಮೂಲಕ ನಾವು ಸಂದೇಶ ನೀಡುತ್ತಿದ್ದೇವೆ.

Monday, June 15, 2009

ತಿರುಪ್ತಿ ತಿಮ್ಮಪ್ಪನಿಗೇ ಟೋಪಿ!

(ಬೊಗಳೂರು ಜನ-ತಾ ಬ್ಯುರೋದಿಂದ)
ಬೊಗಳೂರು, ಜೂ.14- ನನ್ನೆಲ್ಲಾ 'ಸ್ವಕಾರ್ಯ, ಸು-ಕಾರ್ಯ ಮತ್ತು 'ಕು' ಅಲ್ಲದ ಸಲ್ಲದ ಕಾರ್ಯಗಳಿಗೆ ತಿರುಪತಿ ತಿಮ್ಮಪ್ಪನ ಆಶೀರ್ವಾದವೇ ಕಾರಣ. ಅದಕ್ಕಾಗಿ 45 ಕೋಟಿ ರೂಪಾಯಿಯ ಟೋಪಿ ಹಾಕಿದ್ದೇನೆ' ಎಂಬ ಹೇಳಿಕೆ ನೀಡಿರುವ ಬಿಜೆಪಿಗೆ ಜನ-ತಾ ಜನಾರ್ದನ ಗಣಿರೆಡ್ಡಿ ವಿರುದ್ಧ ಬೊಗಳೂರಿನ ಆಸ್ತಿವಂತರೆಲ್ಲರೂ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಈ ಮೂಲಕ, ಕಮಲನಿಗೆ ಆಪರೇಶನ್ ಮಾಡುವುದಕ್ಕೆಂದು ತೆಗೆದಿಟ್ಟ ಹಣವನ್ನು ವ್ಯಯಿಸಲಾಗಿದೆ. ಇತರ ಪಕ್ಷಗಳ ಗಣಿಯನ್ನು ಬಗೆಬಗೆದು ಅಲ್ಲಿಂದ ನಾಯಕರೆಂಬ ಅದಿರುಗಳನ್ನು ಲಾರಿಗಟ್ಟಲೆ ತಂದು ಬಿಜೆಪಿ ಪಾಳಯದೊಳಗೆ ಸುರಿದದ್ದಕ್ಕೆಲ್ಲಾ ಈ ತಿರುಪ್ತಿ ತಿಮ್ಮಪ್ಪನ ಆಶೀರ್ವಾದ ಇದೆ ಎಂದೆಲ್ಲಾ ಸುಳ್ಳು ಸುದ್ದಿ ಹಬ್ಬಿಸಿ, ದೇವರ ಮೇಲೆ ಭಾರದ ಕಲ್ಲು ಹಾಕುವ, ಮರ್ಯಾದೆ ತೆಗೆಯುವ ಪ್ರಯತ್ನದ ವಿರುದ್ಧ ಈ ಆಸ್ತಿವಂತರು ಅಂದರೆ (ಗಣಿವಂತರು ಅಲ್ಲ) ಆಸ್ತಿಕ ಸಮುದಾಯದವರು ಸೆಟೆದು ನಿಂತಿದ್ದಾರೆ ಎಂದು ನಂಬಬಾರದ ಮೂಲಗಳು ತಿಳಿಸಿವೆ.

ಅಷ್ಟು ಮಾತ್ರವೇ ಅಲ್ಲ, ಬಳ್ಳಾರಿಯಲ್ಲಿ ತಮ್ಮ ಮೂಲಕ ನಡೆಯುತ್ತಿರುವ ಎಲ್ಲ ಅಕ್ರಮಗಳಿಗೆ ತಿರುಪ್ತಿ ತಿಮ್ಮಪ್ಪನೇ ಕಾರಣ ಎಂದು ಪರೋಕ್ಷವಾಗಿ ಹೇಳಿಕೆ ನೀಡಿರುವುದು ಈ ಸಂಘದ ಸದಸ್ಯರ ಅಸಮಾಧಾನ ಹೆಚ್ಚಳಕ್ಕೆ ಕಾರಣವಾಗಿದೆ.

ಅವರದ್ದೇ ಗಣಿಕ್ಷೇತ್ರವಾಗಿರುವ ಬಳ್ಳಾರಿಯಲ್ಲಿ ಬಡತನದಿಂದ ನರಳುತ್ತಿರುವ ಪ್ರತಿಯೊಬ್ಬರಿಗೂ ತಲಾ ಹತ್ತತ್ತು ಸಾವಿರ ರೂಪಾಯಿ ಕೊಟ್ಟರೂ ಐದಾರು ಸಾವಿರ ಬಡವರು ಒಂದು ವರ್ಷ ಬದುಕಬಹುದಾಗಿತ್ತು. ಅಥವಾ ಅಲ್ಲಿನ ಅದಿರು ಲಾರಿಗಳಿಂದಾಗಿ ಹಾಳಾದ ರಸ್ತೆ ಅಭಿವೃದ್ಧಿಗೆ ವ್ಯಯಿಸಿದ್ದರೆ ಜನರೇ ಜನಾರ್ದನನಿಗೆ ಹರಸುತ್ತಿದ್ದರು ಎಂಬ ಕ್ಷುಲ್ಲಕ ಜ್ಞಾನವೂ ಇಲ್ಲದೆ ಗಣಿಯ ಹಣವನ್ನು ತಿರುಪತಿಯಲ್ಲಿ ಸುರಿದುಬಂದಿದ್ದು ಎಲ್ಲರ ಕಣ್ಣುಗಳ ಮೇಲಿರುವ ಹುಬ್ಬುಗಳು ಮತ್ತಷ್ಟು ಮೇಲೆ ಮೇಲೆ ಹೋಗಲು ಕಾರಣವಾಗಿದೆ.

Friday, June 12, 2009

ಗಡಿ ಭದ್ರತೆಗೆ ಬೀದಿ ನಾಯಿ: ಶ್ವಾನ ಸಂಘ ಹರ್ಷ

(ಬೊಗಳೂರು ಶ್ವಾನಪ್ರಿಯ ಬ್ಯುರೋದಿಂದ)
ಬೊಗಳೂರು, ಜೂ. 12- ಬೀದಿ ನಾಯಿಗಳೂ ಕಾಲ ಬಂದಿರುವುದರಿಂದ, ಇತ್ತೀಚೆಗೆ ಎಲ್ಲ ಬೀದಿ ನಾಯಿಗಳು ಸೈನ್ಯ ಸೇರಲು ಅರ್ಜಿ ಸಲ್ಲಿಸಿವೆ. ಇದಕ್ಕೆ ಪ್ರಧಾನ ಕಾರಣವೆಂದರೆ, ಬೀದಿ ನಾಯಿಗಳಿಗೂ ಸಾಕಷ್ಟು ತಿಂದುಣ್ಣಲು ದೊರೆಯುತ್ತದೆ, ಕುಡಿಯಲು ಬಿಯರ್ ದೊರೆಯುತ್ತದೆ ಎಂಬುದೇ ಆಗಿದೆ.

ಶ್ವಾನಗಳಿಗೆ ಬಿಯರ್ ಕೊಟ್ಟರೆ ಏನು ಪ್ರಯೋಜನ ಎಂದು ಊರಿಡೀ ಸುತ್ತಾಡಿದರೂ ಸಿಗಲೊಲ್ಲದ, ಕೊನೆಗೂ ಸಿಕ್ಕ ಒಂದು ಬೀದಿ ನಾಯಿಯನ್ನು ಮತ್ತು ಅದರ ಏಕಸದಸ್ಯ ಸಂಘದ ಅಧ್ಯಕ್ಷೆಯನ್ನು ಕೇಳಲಾಯಿತು.

ಉತ್ತರ ಮುಗುಮ್ಮಾಗಿತ್ತು. ನೀವು ಹೀಗೆಲ್ಲಾ ಕೇಳಿ ನಮಗೆ ಸಿಗೋ ಬಿಯರ್ ಕೂಡ ಇಲ್ಲದಂತೆ ಮಾಡಬೇಡಿ ಎಂಬ ಮನವಿಯೊಂದಿಗೇ ಮಾತಿಗೆ ಆರಂಭಿಸಿದ ಶ್ವಾನ ಕು'ಮರಿ', ಗಡಿಯಾಚೆಗಿಂದ ಸಾಕಷ್ಟು ಬಾಂಬ್‌ಗಳು ಇತ್ತ ಬರುತ್ತವೆ. ಅವುಗಳಲ್ಲಿ ಜಿಹಾದಿ ಮಾನವ ಬಾಂಬುಗಳೂ ಸೇರಿರುತ್ತವೆ. ಈ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಲು ನಮ್ಮನ್ನು ಬಳಸಲಾಗುತ್ತದೆ ಎಂದು ಶ್ವಾನ ಕು(ನ್ನಿ)'ಮರಿ' ಹೇಳಿದಳು.

ಅದು ಹೇಗೆ, ಎಂದು ಗೊತ್ತಿದ್ದರೂ ಗೊತ್ತಿಲ್ಲದಂತೆ ಬೊಗಳೂರು ಪ್ರತಿನಿಧಿಗಳು ಕೇಳಿದರು.

ಅದಕ್ಕೆ ಬಂದ ಉತ್ತರ ಹೀಗಿತ್ತು: ಬೀದಿಬೀದಿಗಳಲ್ಲಿ ಸುತ್ತಾಡುತ್ತಾ, ಲೈಟುಕಂಬ, ಟೆಲಿಫೋನ್ ಕಂಬಗಳನ್ನು ಕಂಡಾಗ ಒಂದು ಕಾಲೆತ್ತುತ್ತಾ, ಈ ಕಂಬಗಳು ಬುಡದಿಂದಲೇ ಮುರಿಯುವಷ್ಟರ ಮಟ್ಟಿಗೆ ನಮ್ಮ ಚಾಕಚಕ್ಯತೆ ಪ್ರದರ್ಶಿಸುತ್ತಿದ್ದೆವು. ಈ ಕಾರಣಕ್ಕೆ ನಮ್ಮ ಬೀದಿ ನಾಯಿಗಳ ಸಂಘವನ್ನೇ ಆರಿಸಿ, ನಮ್ಮನ್ನೇ ಸೇನೆಗೆ ಸೇರಿಸಿಕೊಳ್ಳಲಾಗಿದೆ ಎಂದು ಆಕೆ ವಿವರಿಸಿದಳು.

"ಇಷ್ಟು ಪ್ರಬಲವಾಗಿರುವ ಯೂರಿನಾಸ್ತ್ರ ಬಳಸಿ, ಯಾವುದೇ ತೆರನಾದ ಬಾಂಬ್‌ಗಳನ್ನೂ ನಿಷ್ಕ್ರಿಯಗೊಳಿಸುವ ಸಾಮರ್ಥ್ಯ ನಮ್ಮ ರಕ್ತದಲ್ಲೇ ಇದೆ. ರಕ್ತದಲ್ಲಿದ್ದ ಅದು ಶೋಧನೆಗೊಂಡು, ಒಂದು ಕಾಲೆತ್ತಿದಾಗ ಹೊರಗೆ ಬರುತ್ತದೆ. ಈ ಯೂರಿನಾಸ್ತ್ರ ಬಿದ್ದ ತಕ್ಷಣ ಯಾವುದೇ ಬಾಂಬ್ ಕೂಡ ಗಪ್‌ಚುಪ್" ಎಂದು ಉತ್ತರಿಸುತ್ತಾ, ಬಾಲವೆತ್ತಿ, ಡೊಂಕಾದ ಬಾಲವನ್ನು ಸರಿಪಡಿಸಿಕೊಳ್ಳಲು ಹೆಣಗಾಡುತ್ತಾ ಶ್ವಾನ ಕು-ಮರಿ ಅಲ್ಲಿಂದ ಒಂದು ಕಾಲುಕಿತ್ತಿತು.

ನಮ್ಮ ಪ್ರತಿನಿಧಿಗಳು ಕುಮಾರಣ್ಣನಂತೆ ಮುಖಕ್ಕೆ ಕರವಸ್ತ್ರ ಮುಚ್ಚಿಕೊಂಡು ಅಲ್ಲಿಂದ ಕಾಲುಕಿತ್ತರು.

Wednesday, June 10, 2009

ಡೊನೇಶನ್: ಶಿಕ್ಷಣ ಸಂಸ್ಥೆಗಳಿಗೆ ಕಳೆದ ಜನ್ಮದ ನೆನಪು!

(ಬೊಗಳೂರು ಶೈ-ಕ್ಷಣಿಕ ಬ್ಯುರೋದಿಂದ)
ಬೊಗಳೂರು, ಜೂ.10- ಕ್ಯಾಪಿಟೇಶನ್ ಶುಲ್ಕ, ಡೊನೇಶನ್, ಸುಲಿಗೆ ಇತ್ಯಾದಿ ಪದಗಳನ್ನು ಭಾರತೀಯ ಡಿಕ್ಷ-ನರಿಯಿಂದ ಕಿತ್ತು ಹಾಕಬೇಕು ಎಂದು ಅಖಿಲ ಭಾರತ (ಜಕೈಎ*) ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಸರಕಾರಿ ಕ್ಯಾಪಿಟೇಶನ್-ರಹಿತ) ಕೇಂದ್ರದ ಸರಕಾರವನ್ನು ಒತ್ತಾಯಿಸಿರುವುದಾಗಿ ಇಲ್ಲಿ ವರದ್ದಿಯಾಗಿದೆ.

ಆದರೆ ಕೇಂದ್ರದಲ್ಲಿ ಮಾಹಿತಿ ಮತ್ತು ಅಪಪ್ರಚಾರ ಖಾತೆ ಸಚಿವರಾಗಿ ಆಯ್ಕೆಯಾಗಿರುವ ಜಗದ್ರಾಕ್ಷಸನ್ ಅವರದ್ದೇ ಕೈವಾಡವಿದೆ ಎಂಬ ಬಗ್ಗೆ ಮಾಹಿತಿ ಮತ್ತು ಪ್ರಚಾರವಾಗಿರುವುದು ಎಲ್ಲರ ಹುಬ್ಬುಗಳನ್ನು ತಲೆಯಿಂದ ಎರಡಿಂಚು ಮೇಲಕ್ಕೇರಿಸಿದೆ. ಹೀಗಾಗಿ ಅಭಾ(ಜಕೈಎ)ಶಿಸಂ ಒಕ್ಕೂಟ(ಸರಕಾರಿ ಕ್ಯಾಪಿಟೇಶನ್ ರಹಿತ) ಈ ಕ್ರಮ ಕೈಗೊಂಡಿರುವುದಾಗಿ ಬೊಗಳೆ ರಗಳೆಯ ಅನ್ವೇಷಣಾ ರದ್ದಿಗಾರರು ಪತ್ತೆ ಹಚ್ಚಿದ್ದಾರೆ.

ಮೂಲಗಳ ಪ್ರಕಾರ, ಧಾವಂತದಿಂದ ದಂತ ವೈದ್ಯರಾದ ಬಳಿಕ ಹಲ್ಲು ಕೀಳುವಷ್ಟೇ ಸಲೀಸಾಗಿ ಪೋಷಕರಿಂದ ಹಣವನ್ನೂ ಕೀಳಲಾಗುತ್ತದೆ. ಅಂತೆಯೇ ಕೋಟಿ ಕೋಟಿ ಹಣ ಕೊಟ್ಟು ಶಸ್ತ್ರಕ್ರಿಯೆ ಮಾಡಲು ಕಲಿತ ವೈದ್ಯರಲ್ಲಿ ಹೆಚ್ಚಿನವರು ತಮ್ಮ ತಮ್ಮ ಸಂಸ್ಥೆಗಳ ಒಡೆಯರ ಸಲಹೆ ಮೇರೆಗೆ ಶಸ್ತ್ರಕ್ರಿಯೆಗೆ ಬಳಸುವ ಎಲ್ಲಾ ಉಪಕರಣಗಳನ್ನು ಉಪಯೋಗಿಸಿ ಚಿಕಿತ್ಸೆಗೆ ಬಂದ ರೋಗಿಗಳ ಜೇಬಿನ ಮೇಲೆ ಪ್ರಯೋಗ ಮಾಡಿ, ತಾವು ಸಮರ್ಥ ಶಸ್ತ್ರಜ್ಞರು ಎಂದು ಟೆಸ್ಟ್ ಮಾಡಿಕೊಳ್ಳುತ್ತಾರೆ. ಜೇಬು ಕುಯ್ದ ಬಳಿಕವಷ್ಟೇ ಅವರು ಹೊಟ್ಟೆ, ಕಿಡ್ನಿ, ಮೆದುಳು, ಪಿತ್ತಕೋಶ ಇತ್ಯಾದಿಗಳನ್ನು ಕುಯ್ಯಲಾರಂಭಿಸುತ್ತಾರೆ.

ಇಂತಿರಲು, ಜಗದ್ರಾಕ್ಷಸರ ಸಂಖ್ಯೆಯೂ ಹೆಚ್ಚಾಗತೊಡಗಿದೆ. ಹೋದ ಜನ್ಮದಲ್ಲಿ ತಿಗಣೆಗಳಾಗಿದ್ದ ಮತ್ತು ಸೊಳ್ಳೆಗಳಾಗಿದ್ದವರೆಲ್ಲರೂ ಈ ಜನ್ಮದಲ್ಲಿ ಶಾಲಾ-ಕಾಲೇಜುಗಳನ್ನು ತೆರೆದು ಹಳೆಯ ಜನ್ಮದ ಹೀರುವ ಬುದ್ಧಿಯನ್ನು ಅತ್ಯಂತ ಚಾಣಾಕ್ಷತೆಯಿಂದ, ಅದ್ಭುತವಾಗಿ, ಸುಂದರವಾಗಿ ಪ್ರದರ್ಶಿಸುತ್ತಿದ್ದಾರೆ. ಕಳೆದ ಜನ್ಮದ ಬುದ್ಧಿಯು ನೆನಪಿರುವುದರಿಂದ ಅವರು ಯಾವ ನೆನಪಿನ ಔಷಧಿ ತೆಗೆದುಕೊಳ್ಳುತ್ತಿದ್ದಾರೆ ಮತ್ತು ತೆಗೆದುಕೊಂಡಿದ್ದಾರೆ ಎಂಬ ಬಗ್ಗೆ ಸಂಚೋದನೆಗಳು ಬೊಗಳೂರು ಬ್ಯುರೋದಲ್ಲಿ ನಡೆಯುತ್ತಲೇ ಇದೆ.

ಈ ಹೋದ ಜನ್ಮದ ಜ್ಞಾಪಕಶಕ್ತಿಯ ಪ್ರಭಾವವು ಹೊತ್ತಿನ ತುತ್ತಿಗೆ ಪರದಾಡುತ್ತಾ, ಉನ್ನತ ವ್ಯಾಸಂಗಕ್ಕೆ ತೆರಳಲು ಸಜ್ಜಾಗಿರುವ ಮತ್ತು ಅದಕ್ಕಿಂತಲೂ ಉನ್ನತವಾದ ಎಲ್‌ಕೆಜಿ, ಯುಕೆಜಿ ಸೇರಲು ಸಜ್ಜಾಗಿರುವ ಜನರ ಮೇಲೂ ಆಗಿದೆ. ಕಲಿಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಕಾರಣಕ್ಕೆ, ಈ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿಂದಾಗಿ ಉಂಟಾಗಿರುವ ನಷ್ಟವನ್ನು ಭರಿಸಲು, ಕಲಿಯಲು ಬಂದವರ ಮೇಲೆಯೇ ಬಾರದಿರುವವರ ಶುಲ್ಕವನ್ನೂ ಹೇರಿ ಹೀರಿ ಬಿಡಲಾಗುತ್ತದೆ ಎಂದು ಅಭಾ(ಜಕೈಎ)ಶಿಸಂ ಒಕ್ಕೂಟ(ಸರಕಾರಿ ಕ್ಯಾಪಿಟೇಶನ್ ರಹಿತ)ದ ಪದಧಿಕ್ಕಾರಿಗಳು ಹೇಳಿದ್ದಾರೆ.

(* ಜಕೈಎ = ಜನಸಾಮಾನ್ಯರ ಕೈಗೆ ಎಟುಕದ)

Friday, June 05, 2009

ಏಡ್ಸ್ ಪರೀಕ್ಷೆಯ Resultಗೆ ತಡೆಗೆ ಕಾರಣ ಪತ್ತೆ

(ಬೊಗಳೂರು ಏಡ್ಸ್ ಸಂಚೋದನಾ ಬ್ಯುರೋದಿಂದ)
ಬೊಗಳೂರು, ಜೂ.5- ಇದೀಗ ಎಲ್ಲೆಲ್ಲೂ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿ, ಶಾಲೆಗಳು ಮತ್ತು ಕಾಲ್ಏಜುಗಳು ಆರಂಭವಾಗುವ ಸಮಯವಾಗಿರುವುದರಿಂದಾಗಿ, ಕಾಲ್‌ಏಜಿಗೆ ಬಂದವರೆಲ್ಲರೂ (ತಲುಪಿದವರೆಲ್ಲರೂ) ಕಡ್ಡಾಯವಾಗಿ ಏಡ್ಸ್ ಪರೀಕ್ಷೆಗೂ ಹಾಜರಾಗಬೇಕೆಂಬ ಹೊಸ ನಿಯಮವನ್ನು ಬೊಗಳೂರು ಸರಕಾರ ಕಳೆದ ಶಿಕ್ಷಾ ವರ್ಷದಿಂದ ಜಾರಿಗೊಳಿಸಿದ್ದು, ಪ್ರಥಮ ಫಲಿತಾಂಶವನ್ನು ತಡೆ ಹಿಡಿಯಲಾಗಿದೆ.

ಏಡ್ಸ್ ಪರೀಕ್ಷೆಯಲ್ಲಿ ಫಲಿತಾಂಶ ತಡೆ ಹಿಡಿದಿರುವುದು ಕಾಲ್ಏಜು ಮೆಟ್ಟಿಲೇರಿರುವ ವಿದ್ಯಾರ್ಥಿ-ವಿದ್ಯಾರ್ಥಿನಿ ಸಮುದಾಯದಲ್ಲಿ ತೀವ್ರ ಗೊಂದಲ, ಆತಂಕ, ಕುತೂಹಲಗಳಿಗೆ ಕಾರಣವಾಗಿದೆ. ನಾವು ಪಾಸಾಗುತ್ತೇವೆಯೋ ಇಲ್ಲವೋ ಎಂಬ ಆತಂಕವೇ ಹಲವರನ್ನು ಆತ್ಮಹತ್ಯೆಯ ಕುರಿತು ಚಿಂತೆ ಮಾಡುವಂತೆ ಪ್ರೇರೇಪಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ಇಷ್ಟಕ್ಕೂ ಏಡ್ಸ್ ಪರೀಕ್ಷಾ ಫಲಿತಾಂಶ ತಡೆ ಹಿಡಿದದ್ದೇಕೆ ಎಂದು ಅನಾರೋಗ್ಯ ಸಚಿವಾಲಯದ ಉನ್ನತ ಅಧಿಕಾರಿಗಳನ್ನು (ದೂರದಿಂದಲೇ) ಸಂಪರ್ಕಿಸಿ, ಸ್ಪಷ್ಟೀಕರಣ ಕೇಳಲಾಯಿತು.

ಅದಕ್ಕೆ ಅವರು ನೀಡಿದ ಉತ್ತರ: ಏಡ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವವರ ಸಂಖ್ಯೆಯು ಪರೀಕ್ಷೆಗೆ ಹಾಜರಾದವರ ಸಂಖ್ಯೆಯನ್ನೂ ಮೀರಿದೆ! ಮತ್ತು ಇದರ ಹಿಂದೆ ಸಾಕಷ್ಟು 'ಅಕ್ರಮ'ಗಳು ನಡೆದಿರುವ ಸಾಧ್ಯತೆ ಇದೆ!!!

ಪರೀಕ್ಷೆಯಲ್ಲಿ ಅಕ್ರಮವೋ, ಫಲಿತಾಂಶದಲ್ಲಿ ಅಕ್ರಮವೋ ಅಥವಾ ಪರೀಕ್ಷೆಗೆ ಹಾಜರಾದವರು ಮಾಡಿರುವ ಅಕ್ರಮಗಳೋ ಎಂದು ವಿವರಿಸಲು ಈ ಅಧಿಕ್ಕಾರಿ ಅಲ್ಲಿರಲೇ ಇಲ್ಲ.

Wednesday, June 03, 2009

ಕಿರಿ-ಸಚಿವರ ಹಳ್ಳಿ-ದಿಲ್ಲಿ ಸಮಾನತೆ ಮಂತ್ರ!

(ಬೊಗಳೂರು Someದರ್ಶನ ಬ್ಯುರೋದಿಂದ)
ಬೊಗಳೂರು, ಜೂ.3- ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ನೆಗೆದು ಏರಿರುವ (ಕಾಂಗ್ರೆಸ್ ಅಧ್ಯಕ್ಷೆಯ) ಉಪ (UPA) ಸರಕಾರದಲ್ಲಿ, ಹಳೆಯ ದೇಹಗಳೆಲ್ಲ ಮರೆಗೆ ಸರಿದು, ಹೊಸ ದೇಹಗಳು, ಯುವ ಮುಖಗಳು ಕಾಣಿಸಿಕೊಳ್ಳುತ್ತಿರುವುದರಿಂದ ದೇಶಾದ್ಯಂತ ಭರವಸೆಯ ಆಶಾಕಿರಣವನ್ನು ಮೂಡಿಸಿದೆ. ಈ ಕುರಿತು ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವೆ, ಅತ್ಯಂತ ಕಿರಿ-ಕಿರಿಯ ಹುಡುಗಿ ಅಗಾಥಾ ಕ್ರಿಸ್ಟೀ ಅವರನ್ನು ಬೊಗಳೂರು ರದ್ದಿಗಾರರ ತಂಡ ಮಾತನಾಡಿಸಿತು.

ಈ ಸಂದರ್ಭ ಸ್ವಯಂಚಾಲಿತವಾಗಿ ಏರ್ಪಟ್ಟ ಸಂದರ್ಶನ ಸಂದರ್ಭದಲ್ಲಿ ಹಲವಾರು ವಿಷಯಗಳು ಮತ್ತು ಅವುಗಳಿಗೆ Someಗತಿಗಳು ಬಯಲಿಗೆ ಬಿದ್ದವು. ಸಂದರ್ಶನದ ಅಪೂರ್ಣಪಾಠ ಈ ಕೆಳಗಿದೆ.

* ಅಗಾಥಾ ಕ್ರಿಸ್ಟೀ ಅವರೆ, ನಿಮ್ಮಪ್ಪ, ಸೋನಿಯಾರ ಪಿಎ ಆಗಲೊಪ್ಪದ ಸಂಗಮಾ ಅವರು ಸದನದಲ್ಲಿ ಸ್ಪೀಕರ್ ಇಲ್ಲದೆಯೇ ಗದ್ದಲ ನಿಯಂತ್ರಿಸುತ್ತಿದ್ದಾಗ ನೀವೆಲ್ಲಿದ್ದಿರಿ?
ಅಗಾಥ: ಆಘಾತಕ್ಕೊಳಗಾದಂತೆ ಕಂಡುಬಂದ ಅಗಾಥ ಆ ಬಳಿಕ ಸಾವರಿಸಿಕೊಂಡು, "ನಾನು ಹಳ್ಳಿಯಲ್ಲಿದ್ದೆ. ದಿಲ್ಲಿ ತುಂಬಾ ದೂರವಾಗಿರುವುದರಿಂದ ದಿಲ್ಲಿಗೆ ಬರುವುದು ತಡವಾಯಿತು. ಇಲ್ಲದಿದ್ದಲ್ಲಿ, ಐದಾರು ವರ್ಷಗಳ ಹಿಂದೆಯೇ ಸಂಸತ್ತಿಗೆ ತಲುಪುತ್ತಿದ್ದೆ. ಆಗ ಅನುಭವಿ ರಾಜಕಾರಣಿಯೂ ಆಗಿರುತ್ತಿದ್ದೆ. ಹೀಗಾಗಿ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ನನಗೆ ಅನುಭವ ಸಾಲದು. ಆದರೂ ಬಾಯಿಗೆ ಬಂದಂತೆ ಮಾತನಾಡುವುದನ್ನು ತಡೆಯಲು ಗರಿಷ್ಠ ಪ್ರಯತ್ನ ಮಾಡುತ್ತೇನೆ".

* ನಿಮಗೆ ಗ್ರಾಮಗಳನ್ನು ಅಭಿವೃದ್ಧಿಗೊಳಿಸುವ ಎಕೌಂಟ್‌ನ್ನು ತೆರೆದುಕೊಟ್ಟಿದ್ದಾರೆ. ಇದು ಯಾವ ಬ್ಯಾಂಕಿನಲ್ಲಿ? ಸ್ವಿಸ್ ಬ್ಯಾಂಕೋ, ನಬಾರ್ಡ್ ಬ್ಯಾಂಕೋ ಅಥವಾ ವಿಶ್ವ ಬ್ಯಾಂಕೋ?
ಅಗಾಥ: ನಮ್ಮದು ಗ್ರಾಮಕ್ಕೆ ಸಂಬಂಧಿಸಿದ ಖಾತೆಯಾಗಿರುವುದರಿಂದ ಯಾವುದೋ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಇರಬಹುದೆಂಬ ಆಮ ಶಂಕೆ ನನಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ.

* ನೀವಿರುವ ಹಳ್ಳಿಯಿಂದ ದಿಲ್ಲಿಗೆ ದೂರವಾದ ಕಾರಣದಿಂದಾಗಿ ಹಳ್ಳಿಯವರು ದಿಲ್ಲಿಯವರ ದರ್ಬಾರಿನಿಂದ, ಐಷಾರಾಮದಿಂದ, ಉನ್ನತ ಜೀವನ ಮಟ್ಟದಿಂದ ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಏನು ಕ್ರಮ ಕೈಗೊಳ್ಳುತ್ತೀರಿ?
ಅಗಾಥ: ಅದಕ್ಕೆಲ್ಲಾ ನನ್ನ ಬಳಿ ಅಸ್ತ್ರವಿದೆ. ಅಪ್ಪ ಇರುವಾಗಿನಿಂದಲೂ ಅವರಿಗೆ ನನಗೊಂದು ದಿಲ್ಲಿ ತಂದುಕೊಡಪ್ಪಾ ಎಂದು ಸಣ್ಣದಿರುವಾಗಿಂದಲೂ ಕೇಳುತ್ತಿದ್ದೆ. ಆದರೆ ಅಪ್ಪ ತಂದುಕೊಟ್ಟಿರಲಿಲ್ಲ. ಈಗ ನಾನು ದೊಡ್ಡವಳಾಗಿದ್ದೇನೆ. ಹೀಗಾಗಿ ದಿಲ್ಲಿಯನ್ನು ಹಳ್ಳಿಗೆ ತರಲಾಗುವುದಿಲ್ಲ ಎಂದು ಗೊತ್ತಾಗಿದೆ. ಅದಕ್ಕೋಸ್ಕರ...

* ಅದಕ್ಕೋಸ್ಕರ...? ಹೇಳಿ... ಹೇಳಿ... ಬೇಗ ಹೇಳಿ...
ಅಗಾಥ: ಅದಕ್ಕೋಸ್ಕರವೇ, ನಾವು ಹಳ್ಳಿಗಳನ್ನು ದಿಲ್ಲಿಗೆ ಸಮೀಪ ತರಲು ಯೋಜನೆ ರೂಪಿಸಿದ್ದೇವೆ. ದಿಲ್ಲಿಯ ಸುತ್ತಮುತ್ತ ಹಳ್ಳಿಗಳ ಸಂಖ್ಯೆಯನ್ನು ಸಾಕಷ್ಟು ಹೆಚ್ಚಿಸಿದಲ್ಲಿ, ಹಳ್ಳಿ-ದಿಲ್ಲಿ ಅಂತರ ಕುಗ್ಗುತ್ತದೆ, ಹಳ್ಳಿಗರು ಮತ್ತು ದಿಲ್ಲಿಗರು ಚೆನ್ನಾಗಿ ಮಿಕ್ಸ್ ಆಗಿ, ಚರ್ವಿತ ಚರ್ವಣ ಆಗಿ, ಬೆರೆತು, ಎಲ್ಲ ಕಡೆ ಸಮತೋಲನ ಏರ್ಪಡುತ್ತದೆ.

* ಹಾಗಾದ್ರೆ ನಿಮಗೆ ದೊsssssಡ್ಡ ನಮಸ್ಕಾರ.
ಅಗಾಥ: ನಮ್‌ಸ್ಕಾರ

(ಏನೋ ಮಾಡಲು ಹೋಗಿ ಏನ್ಏನೋ ಆದ ಪರಿಣಾಮವಾಗಿ, ಕನ್ನಡ ಬ್ಲಾಗೋತ್ತಮರೆಲ್ಲರೂ ನಾಪತ್ತೆಯಾಗಿಬಿಟ್ಟಿದ್ದಾರೆ. ಅವರನ್ನೆಲ್ಲಾ ಶೀಘ್ರದಲ್ಲೇ ಕೊಂಡಿ ಹಾಕಿ ಎಳೆದು ತರಲಾಗುತ್ತದೆ. ಕ್ಷಮೆ ಮತ್ತು ತಾಳ್ಮೆಯೇ ಮನುಷ್ಯರಿಗೆ ಅತ್ಯಂತ ಮುಖ್ಯ ಎಂದು ನಮ್ಮಜ್ಜ ಹೇಳಿರುವುದರಿಂದ, ಅದುವರೆಗೆ ಕ್ಷಮೆ ಇರಲಿ ಮತ್ತು ತಾಳ್ಮೆಯೂ ಇರಲಿ. -ಸೊಂಪಾದ ಕರು)

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...