Thursday, July 30, 2009

ಜಂಟಿ ಹೇಳಿಕೆಯಲ್ಲಿ 'ಬಲೂಚಿ' ಸೇರಿಸಲು ಕಾರಣ!

(ಬೊಗಳೂರು ಸ್ಪಷ್ಟನೆ, ನಿರಾಕರಣೆ, ತಪ್ಪೊಪ್ಪಿಗೆ, ಹೇಳಿಕೆ ಹಿಂತೆಗೆ ಬ್ಯುರೋದಿಂದ)
ಬೊಗಳೂರು, ಜು.30- ಭಾರತ ಮತ್ತು ಪಾತಕಿಸ್ತಾನ ಈಜಿಪ್ಟಿನಲ್ಲಿ ಹೊರಡಿಸಿದ ಜಂಟಿ ಹೇಳಿಕೆಯಲ್ಲಿ ಬಲೂಚಿಸ್ತಾನದ ಹೆಸರು ಸೇರಿಕೊಂಡಿರುವುದು ಮತ್ತು ಎಲ್ಲ ಸಮಸ್ಯೆಗಳಿಗೆ ಮಾತುಕತೆಯೊಂದೇ ಪರಿಹಾರ ಎಂದು ನಿಧಾನಮಂತ್ರಿಗಳು ಒಪ್ಪಿಕೊಂಡು ಬಂದು ಬ್ಲಂಡರ್ ಮಾಡಿರುವುದು ಜಾಗತಿಕ ತಾಪಮಾನವನ್ನು ಮತ್ತು ಭಾರತದ ಮಾನವನ್ನು ಕಂಗೆಡಿಸುತ್ತಿರುವ ಹಿನ್ನೆಲೆಯಲ್ಲಿ, ನಿಧಾನಮಂತ್ರಿಗಳನ್ನು ಅವಸರವಸರವಾಗಿ ಸಂದರ್ಶನ ನಡೆಸಲಾಯಿತು. ಸಂದೇಶದ ತುಣುಕುಗಳು ಈ ಕೆಳಗೆ ಬಿದ್ದಿವೆ. ಅವುಗಳನ್ನು ಹೆಕ್ಕಿಕೊಂಡು ಓದಲು ಪಾಕಿಸ್ತಾನದ ಅಧ್ಯಕ್ಷ ಆಸಿಫಾಲಿ ಜರ್ದಾ ಒಡೆಯರು ನಿರ್ದೇಶಿಸಿದ್ದಾರೆ.

* ನಮಸ್ಕಾರ ನಿಧಾನಿಗಳೇ, ನೀವೇಕೆ ಬಲೂಚಿಸ್ತಾನವನ್ನು ಜಂಟಿ ಹೇಳಿಕೆಯಲ್ಲಿ ಸೇರಿಸಿದ್ದೀರಿ?
ನಿಧಾನಿ: ಬಲೂಚಿಸ್ತಾನವು ಪಾತಕಿಸ್ತಾನದ ಅತಿದೊಡ್ಡ ಪ್ರಾಂತ್ಯ. ಆದರೆ ಪುಟ್ಟ ಪ್ರಾಂತ್ಯವಾದ ಕಾಶ್ಮೀರ ಭಾಗಕ್ಕೆ ಸಿಗುವಷ್ಟು ಪ್ರಚಾರ ಅದಕ್ಕೆ ಸಿಗುತ್ತಿಲ್ಲ. ಬಲೂಚಿಯಲ್ಲಿ ಕೂಡ ಸಾಕಷ್ಟು ಉಗ್ರಗಾಮಿಗಳಿದ್ದಾರೆ, ಪ್ರತ್ಯೇಕತಾವಾದಿಗಳಿದ್ದಾರೆ. ಈಗ ನಮ್ಮಲ್ಲೇ ಈಶಾನ್ಯ ರಾಜ್ಯಗಳಲ್ಲೂ ಇಂಥವರು ಇಲ್ಲವೇ? ಅವರೆಲ್ಲರೂ ಪ್ರಸಿದ್ಧಿ ಪಡೆದರುವಾಗ, ಬಲೂಚಿಸ್ತಾನ ಮಾತ್ರ ಯಾವುದೇ ಉಲ್ಲೇಖಗಳಿಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಏನೂ ಸದ್ದು ಮಾಡುತ್ತಿರಲಿಲ್ಲ. ಅದಕ್ಕಾಗಿಯೇ ಅದನ್ನು ಸೇರಿಸಿದ್ದು.

* ಹೌದೇ? ಬಲೂಚಿಸ್ತಾನದಲ್ಲಿ ನಿಜವಾಗಿ ನಡೆಯುತ್ತಿರುವುದೇನು?
ಅದು ನಂಗೂ ಗೊತ್ತಿಲ್ಲ, ನನ್ನ ಎದುರಿಗೆ ಕೂತ ಯೂಸುಫ್ ರಾಜಾ ಗಿಲಿಗಿಲಾನಿ ಅವರು ತುಂಬಾ ಸಲ ಬಲೂಚಿಸ್ತಾನ, ಬಲೂಚಿಸ್ತಾನ ಅಂತ ಹೇಳ್ತಾನೇ ಇದ್ದರು. ನಂಗೆ ಅದೇನೂ ಅರ್ಥವಾಗ್ತಾ ಇರ್ಲಿಲ್ಲ. ಬಹುಶಃ ಬಲೂಚಿಸ್ತಾನ ಅಂದ್ರೆ ಅವರಿಗೆ ಪಂಚಪ್ರಾಣ ಇರ್ಬೇಕು, ಅದ್ಕೇ ಅವರು ಹೀಗಾಡ್ತಾರೆ ಅಂದ್ಕೊಂಡು, ಪಾಕಿಸ್ತಾನೀಯರಿಗೆ, ಆ ಮೂಲಕ ಭಾರತದಲ್ಲಿರುವ ಪಾಕಿಸ್ತಾನೀಯರಿಗೆ ಒಂದಷ್ಟು ನೆಮ್ಮದಿ ಸಿಗಲಿ ಎಂಬ ಕಾರಣಕ್ಕೆ ಜಂಟಿ ಹೇಳಿಕೆಯಲ್ಲಿ ಅದನ್ನು ಸೇರಿಸಿಬಿಟ್ಟೆ.

* ಮತ್ತೆ, ಮೊನ್ನೆ ಮೊನ್ನೆವರೆಗೂ ಉಗ್ರಗಾಮಿಗಳೊಂದಿಗೆ ಮಾತುಕತೆ ಇಲ್ಲ ಎನ್ನುತ್ತಿದ್ದವರು, ಈಗ ಮಾತುಕತೆಯೊಂದೇ ಪರಿಹಾರ ಎಂದು ಬಂಬಡಾ ಬಜಾಯಿಸುವ ಮೂಲಕ ತಿಪ್ಪರಲಾಗ ಹಾಕಲು ಕಾರಣವೇನು?

ತಿಪ್ಪರಲಾಗ ಹಾಕಿಕೊಟ್ಟಲು ನಮಗೆ ಪಾಕಿಸ್ತಾನವೇ ಹೇಳಿಕೊಟ್ಟದ್ದು. ಅದನ್ನು ನಾವು ಚೆನ್ನಾಗಿಯೇ ಕಲಿತುಕೊಂಡೆವು. ಹೀಗಾಗಿ, ಭಾರತದಲ್ಲಿರುವ ಎಲ್ಲ ಮೊಬೈಲ್ ಕಂಪನಿಗಳು ಕೂಡ, ಹೆಚ್ಚು ಹೆಚ್ಚು ಮಾತನಾಡಿದರೆ ಹೆಚ್ಚು ಉಳಿತಾಯ, ಹೆಚ್ಚು ಲಾಭ ಅಂತೆಲ್ಲಾ ಜಾಹೀರಾತು ಕೊಡುತ್ತಿವೆಯಲ್ಲ. ಅದನ್ನು ಪ್ರಯೋಗ ಮಾಡಿ ನೋಡೋಣ ಎಂದುಕೊಂಡೇ ನಾವು ಭಾರತ-ಪಾಕ್ ನಡುವೆಯೂ ಹೆಚ್ಚು ಹೆಚ್ಚು ಮಾತನಾಡಬೇಕು ಎಂದು ಒಪ್ಪಿಬಿಟ್ಟೆ. ಇದರಿಂದ ಮೊಬೈಲ್ ಕಂಪನಿಗಳಿಗೂ ಲಾಭವಾಗುತ್ತದೆ. ದೇಶದ ಆರ್ಥಿಕತೆ ಸುಧಾರಣೆಯಾಗುತ್ತದೆ.

* ಬೊಗಳೆ ರಗಳೆ ಓದುಗರಿಗಾಗಿ ಈ ಬಗ್ಗೆ ಇನ್ನೂ ಏನಾದರೂ ಹೇಳಬೇಕೆಂದು ನೀವು ಇಚ್ಛಿಸಿದ್ದೀರಾ?
ಹೌದು, ಬೊಗಳೆ ರಗಳೆಯೇ ಮೊದಲು ನಮ್ಮನ್ನು ಈ ಬಗ್ಗೆ ಮಾತನಾಡಿಸಿದ್ದು. ಹೀಗಾಗಿ ಅದರ ಓದುಗರಿಗೆಲ್ಲರೂ ಶ್ರೀಮಂತರಾಗಿರಬೇಕು ಎಂಬ ಉದ್ದೇಶದಿಂದಾಗಿ, ನಾವು ಅಕ್ಕಿ-ಬೇಳೆ-ತರಕಾರಿ ಬೆಲೆಗಳನ್ನು ಗಗನಕ್ಕೇರಿಸಿ, ಅವರು ಹೆಚ್ಚು ಹಣ ಕೊಟ್ಟು ಖರೀದಿಸುವಂತೆ ವ್ಯವಸ್ಥೆ ಮಾಡಿದ್ದೇವೆ. ಹೀಗಾಗಿ, ತರಕಾರಿ-ಅಕ್ಕಿ-ಬೇಳೆ ತಿನ್ನುವವರೆಲ್ಲರೂ ಶ್ರೀಮಂತರು ಎಂದು ನಾವು ತಿಳಿದುಕೊಂಡು, ನಮ್ಮ ದೇಶವೂ ಸಮೃದ್ಧವಾಗಿದೆ ಎಂದು ತಿಳಿದುಕೊಳ್ಳುತ್ತೇವೆ. ಈ ಬಗ್ಗೆ ಶೀಘ್ರವೇ ನಮ್ಮ ಸಾಧನೆಗಳ ಕುರಿತ ಒಂದು ಪುಸ್ತಕ ಹೊರತರಲಿದ್ದೇವೆ. ಧನ್ಯವಾದ.

Tuesday, July 28, 2009

ಮುಮೋದ್ ಪ್ರತಾಲಿಕ್ ಪದೇ ಪದೇ ಸೆರೆಗೆ ಕಾರಣ!

(ಬೊಗಳೂರು ಪಿಂಕ್ ಸಂಚೋದನಾ ಬ್ಯುರೋದಿಂದ)
ಬೊಗಳೂರು, ಜು.28- ಯಾವುದೇ ಗಲಭೆ ನಡೆದರೂ, ಹೋದಲ್ಲೆಲ್ಲಾ ಹಿಂಬಾಲಿಸಿಕೊಂಡು ಹೋಗಿ ಮುಮೋದ್ ಪ್ರತಾಲಿಕ್ ಎಂಬ ಸೈನಿಕನನ್ನು ಬಂಧಿಸುವುದು ಏಕೆ ಎಂಬ ಬಗ್ಗೆ ಬೊಗಳೂರು ಬ್ಯುರೋ ಸಂಚೋದನೆ ನಡೆಸಿದಾಗ ಯಾರಿಗೂ ಗೊತ್ತಿಲ್ಲದ, ಗೊತ್ತಿರಲಾರದ ಮತ್ತು ಗೊತ್ತಿರಬೇಡದ ಸಂಗತಿಗಳೆಲ್ಲವೂ ದೊರಕಿದವು.

ನಾನು ಕ್ಯಾತಮಾರನಹಳ್ಳಿಯಲ್ಲಿ ಕ್ಯಾಕರಿಸಿ ಉಗುಳಲು ಹೋಗಿಲ್ಲ, ಸುಮ್ಮನೇ ತನ್ನ ಹೆಸರಿಗೆ ಲಿಂಕ್ ಕೊಡಲಾಗಿದೆ ಎಂದು ಮುಮೋದ್ ಪ್ರತಾಲಿಕ್ ಹೇಳಿರುವುದರಿಂದಾಗಿ ಈ ಸಂಚೋದನೆ ಮಾಡಲಾಯಿತು.

ಇದರ ಮೂಲವೆಲ್ಲವೂ ಮಂಗಳೂರಿನಲ್ಲಿ ನಡೆದ ಪಬ್ ದಾಳಿಯಲ್ಲಿದೆ. ಇಲ್ಲಿ ಕುಡಿದು ತೂರಾಡುತ್ತಿದ್ದವರಿಗೆ ಬಡಿದ ಪರಿಣಾಮ ಅದನ್ನು ರಾಷ್ಟ್ರಮಟ್ಟದ ಹೆಡ್ ಬ್ರೇಕಿಂಗ್ (=ತಲೆ ಒಡೆಯುವ ಹೆಡ್‌ಲೈನ್) ನ್ಯೂಸ್ ಆಗಿ ಮಾಡಲಾಗಿತ್ತು. ಆ ಬಳಿಕ ಅಲ್ಲಲ್ಲಿ ಪ್ರತಿಭಟನೆ, ಸಮಾವೇಶ ನಡೆದು, ಕೆಲವರಂತೂ ತಲೆಬಿಸಿಯಿಂದಾಗಿ ಪಬ್ ಭರೋ ಚಳವಳಿಯನ್ನೂ ಮಾಡಿದ್ದರು. ಆ ಮೇಲೆ, ಮಾವನ ಹಕ್ಕುಗಳ ಉಲ್ಲಂಘನೆಯ ಆರೋಪ, ತಾಲಿಬಾನ್ ಇತ್ಯಾದಿ ಕೇಳಿಬಂದಿತ್ತು.

ಕೊಟ್ಟಕೊನೆಗೆ ಮಾವನ ಹಕ್ಕುಗಳ ಉಲ್ಲಂಘನೆ ಸುದ್ದಿ ಜೋರಾಗಿಯೇ ಬಲ ಪಡೆದು ರೇಣುಕಾಚಉದುರಿ ಅವರು ಹೇಳಿಕೆಯೊಂದನ್ನು ಕೊಟ್ಟದ್ದೇ ತಡ, ಪಿಂಕ್ ಕಾಚಗಳು ನೆಟ್ಟಿನಲ್ಲೆಲ್ಲಾ ಹರಿದಾಡಿದವು. ಮುಮೋದ್ ಪ್ರತಾಲಿಕ್ ಮನೆಗೆ ಎಷ್ಟೋ ಸಾವಿರ ಪಿಂಕ್ ಕಾಚಗಳು ತಲುಪಿದವು ಎಂದು ತಿಳಿದುಬಂದಿದೆ.

ಆದರೆ, ಈ ಚಡ್ಡಿಗಳನ್ನು ಅವರೇನು ಮಾಡಿದರು? ಎಂಬ ಬಗ್ಗೆ ಸಂಚೋದಿಸಲಾಗಿ, ಅವುಗಳೆಲ್ಲವನ್ನೂ ರಾಜ್ಯಾದ್ಯಂತ ಬಡಬಗ್ಗರಿಗೆ ವಿತರಿಸಲಾಗಿದೆ. ರಾಜ್ಯದ ಮೂಲೆ ಮೂಲೆಯಲ್ಲಿಯೂ ಪ್ರತಾಲಿಕ್ ಅವರ ಹೆಸರು ಹೇಳಿಕೊಂಡು ಸಾಕಷ್ಟು ಮಂದಿ ಪಿಂಕ್ ಚಡ್ಡಿ ಧರಿಸಿಕೊಂಡಿದ್ದಾರೆ. ಹೀಗಾಗಿ, ಅವರೆಲ್ಲರ ಮೇಲೂ ಪಿಂಕ್ ಚಡ್ಡಿಯೂ, ಆ ಮೂಲಕ ಮುಮೋದ್ ಪ್ರತಾಲಿಕ್ ಅವರೂ ಪ್ರಭಾವ ಬೀರಿದರೆಂದಾಯಿತು. ಅಂದರೆ ಪಿಂಕ್ ಚಡ್ಡಿ ಇರುವೆಡೆ ಮುಮೋದ್ ಪ್ರತಾಲಿಕ್ ಕೈವಾಡ ಇದೆ ಎಂಬುದನ್ನು ಗಟ್ಟಿ ಮಾಡಿಕೊಂಡ ಕಾರಣಕ್ಕೆ ಪೊಲೀಸರು, ಎಲ್ಲೇ ಏನೇ ನಡೆದರೂ ಮುಮೋದ್ ಪ್ರತಾಲಿಕ್ ಕೈವಾಡವಿದೆ ಎಂದು ಪಿಂಕ್ ಚಡ್ಡಿಯ ಸಾಕ್ಷ್ಯಾಧಾರ ಸಮೇತ ಬಂಧಿಸಿ ಜೈಲಿಗಟ್ಟುತ್ತಿದ್ದಾರೆ ಎಂದು ನಮ್ಮ ಬಾತ್ಮೀದಾರರು ರದ್ದಿ ಮಾಡಿದ್ದಾರೆ.

Wednesday, July 22, 2009

ತಮಿಳುಕಾಡು ಮುಖ್ಯ ಮಂ. ರಾಮಾಯಣ ವಿರೋಧಿಸೋದೇಕೆ?

(ಬೊಗಳೂರು ತಮಿಳುಕಾಡು ಸಂಚೋದನಾ ಬ್ಯುರೋದಿಂದ)
ಬೊಗಳೂರು, ಜು.22- ಹುಣ್ಣಿಮೆ ಅಮಾವಾಸ್ಯೆ (ಈ ಬಾರಿ ವಿಶೇಷವಾಗಿ ಸೂರ್ಯಗ್ರಹಣ ಹತ್ತಿರವಾಗುತ್ತಿರುವಂತೆಯೇ) ಬರುತ್ತಿರುವಂತೆಯೇ ರಾಮ ಇಲ್ಲ, ರಾಮಾಯಣ ಇಲ್ಲ ಎನ್ನುತ್ತಲೇ, ರಾಮಾಯಣವನ್ನು ಟೀಕಿಸುವುದು ನನ್ನ ಆಜನ್ಮ ಸಿದ್ಧ ಹಕ್ಕು ಎಂದು ನುಡಿದ ತಮಿಳುಕಾಡಿನ ಕಪ್ಪು ಕನ್ನಡಕಧಾರಿ ಮುಖ್ಯಮಂತ್ರಿಗಳನ್ನು ಬೊಗಳೆ ರಗಳೆ ಮಾತನಾಡಿಸುವ ಗೋಜಿಗೆ ಹೋದಾಗ ಕೆಲವೊಂದು ಅಮೂಲ್ಯ ಸಂಗತಿಗಳು ಪತ್ತೆಯಾದವು.

ಇತ್ತೀಚೆಗಷ್ಟೇ ರಾಮ ಯಾವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ್ದು ಎಂದು ಪ್ರಶ್ನಿಸಿ ಅಭಿಮಾನಿಗಳ ವ್ಯಾಕ್‌ಥೂಗಳಿಗೆ ಈಡಾಗಿರುವ ತಮಿಳುಕಾಡಿನೊಡಿನ ಮುಖ್ಯ ಮಂ.ಗಳು, ಈ ಬಗ್ಗೆ ಸ್ಪಷ್ಟನೆ ನೀಡಿದರು.

ವ್ಯಾಕ್‌ಥೂವಲಿ (ಇದು actually ಎಂಬ ಇಂಗ್ಲಿಶ್ ಪದವನ್ನು ತಮಿಳಿನಲ್ಲಿಯೇ ಉಚ್ಚರಿಸಿದ್ದು ಎಂದು ಅವರು ಆ ಬಳಿಕ ಬೊಗಳೆ ರಗಳೆ ಕಿವಿಯಲ್ಲಿ ಪಿಸುಗುಟ್ಟಿದ್ದರು) ನಾನು ಏನು ಹೇಳಿದ್ದೆಂದರೆ, ಭಾರತದಿಂದ ಲಂಕೆಗೆ ಸಮುದ್ರದಲ್ಲಿ ಅಷ್ಟು ದೊಡ್ಡ ಸೇತುವೆ ಕಟ್ಟಿರಬೇಕಿದ್ದರೆ, ಶ್ರೀರಾಮ ಯಾವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ್ದಿರಬಹುದು? ಎಂದು ನಾನು ಪ್ರಶ್ನಿಸಿದ್ದೆ. ಅದು ಗೊತ್ತಾದರೆ, ಆ ಕಾಲೇಜನ್ನು ತಮ್ಮ ನಾಲ್ಕಾರು ಹೆಂಡಿರ ಮಕ್ಕಳ ವಶಕ್ಕೆ ಕೊಡಿಸಿಬಿಟ್ಟಲ್ಲಿ ಹೋಗುವ ಮೊದಲು ಜನ್ಮ ಸಾರ್ಥಕ ಮಾಡಿಕೊಂಡೇ ಹೋಗುವೆ ಎಂದು ಅವರು ತತ್ತರಿಸುತ್ತಾ ಉತ್ತರಿಸಿದರು.

ಹಾಗಿದ್ದರೆ, ರಾಮಾಯಣವನ್ನು ಟೀಕಿಸುವೆ, ರಾಮನನ್ನು ಟೀಕಿಸುವೆ ಎಂಬ ಹೇಳಿಕೆ ನೀಡಿದ್ದೇಕೆ ಎಂದು ಪ್ರಶ್ನಿಸಿದಾಗ, ನೀವು ಯಾರಿಗೂ ಹೇಳದಿದ್ದರೆ ಮಾತ್ರ ಈ ಸಂಗತಿ ಬಾಯಿ ಬಿಡುತ್ತೇನೆ. ಈಗಾಗಲೇ ಕೆಟ್ಟದ್ದನ್ನು ನೋಡಬಾರದು ಎಂದು ಕಪ್ಪು ಗಾಜು ಧರಿಸಿದ್ದೇನೆ. ಆದರೂ ನೀವು ಅದು ಹೇಗೆ ನಮ್ಮ ಕಣ್ಣಿಗೆ ಕಾಣುತ್ತಿದ್ದೀರಿ ಅಂತಲೇ ಗೊತ್ತಾಗುತ್ತಿಲ್ಲ ಎಂದು ಬೊಗಳೆ ಸದಸ್ಯರೆದುರು (ಕಪ್ಪುಕನ್ನಡಕದ)ಒಳಗಣ್ಣು ಬಿಡುತ್ತಾ ನುಡಿದ ಅವರು, ಮಾತು ಮುಂದುವರಿಸಿ ಚಿದಂಬರ ರಹಸ್ಯವೊಂದನ್ನು ಬಿಚ್ಚಿಟ್ಟರು.

ಅದೆಂದರೆ, ಶ್ರೀರಾಮ ಏಕಪತ್ನೀ ವ್ರತಸ್ಥ. ಅದಕ್ಕೇ ನನಗೆ ಮತ್ತು ಅವನಿಗೆ ಸರಿಹೋಗುವುದಿಲ್ಲ. ನನಗೀಗಾಗಲೇ ಬಹುಪತ್ನಿಯರೂ, ಬಹುಪುತ್ರರೂ ಇದ್ದಾರೆ. ಹೀಗಾಗಿ ರಾಮನನ್ನು ವಿರೋಧಿಸದೆ ವಿಧಿಯಿಲ್ಲ. ರಾಮನ ಆದರ್ಶ ಪಾಲಿಸಲು ಯಾರಾದರೂ ಒತ್ತಡ ಹೇರಿಯಾರೆಂಬ ಆತಂಕ ಇನ್ನೂ ಕಾಡುತ್ತಿದೆ ಎಂದುಸುರಿದರು.

ಯಾರಿಗೂ ಹೇಳಬೇಡಿ ಎಂದು ಬೊಗಳೆ ರಗಳೆಗೆ ಕಪ್ಪೆಚ್ಚರಿಕೆ ನೀಡಿರುವುದರಿಂದ, ನಾವು ಕೂಡ ಇದನ್ನು ಪ್ರಕಟಿಸಲು ಇಚ್ಛಿಸುವುದಿಲ್ಲ ಎಂದು ಈ ಮೂಲಕ ಹೇಳುತ್ತಿದ್ದೇವೆ.

ಹಾಗಿದ್ದರೆ ಅವರು ಸೂರ್ಯಗ್ರಹಣ ಹತ್ತಿರವಾಗುತ್ತಿರುವಾಗ ಇಂತಹ ಹೇಳಿಕೆಗಳನ್ನು ನೀಡುತ್ತಿರುವುದೇಕೆ ಎಂದು ಕೇಳಲಾಯಿತು. ಇದಕ್ಕೆ ಪ್ರಧಾನ ಕಾರಣ ಅವರ ಪಕ್ಷದ ಚಿಹ್ನೆ ಉದಯಿಸುವ ಸೂರ್ಯ!

Monday, July 20, 2009

ಜಾಗತಿಕ ಉಷ್ಣತೆ: ಕಾರಣ, ಪರಿಹಾರ ಮತ್ತು ಆತಂಕ!!!

(ಬೊಗಳೂರು ತಾಪಮಾನಾಪಮಾನ ಬ್ಯುರೋದಿಂದ)
ಬೊಗಳೂರು, ಜು.20- ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣ ಪತ್ತೆ ಹಚ್ಚಲಾಗುತ್ತಿರುವಾಗಲೇ ವಿಷಯ ಎಲ್ಲ ಗೊತ್ತಾಗಿಬಿಟ್ಟಿದೆ. ಇದಕ್ಕೆಲ್ಲಾ ಕಾರಣ ಬಾಲಿವುಡ್ ನಟೀಮಣಿಯರು!!

ಬಾಲಿವುಡ್ ನಟೀಮಣಿಯರು ಉಡುತ್ತಿರುವ ಬಟ್ಟೆಯ ಪ್ರಮಾಣ ಕಡಿಮೆಯಾಗುತ್ತಿರುವುದರಿಂದಲೇ ಜಾಗತಿಕವಾಗಿ ತಾಪಮಾನ ಹೆಚ್ಚಾಗುತ್ತಿದೆ ಎಂಬುದನ್ನು ಬೊಗಳೂರು ಬ್ಯುರೋ ಕಂಡುಕೊಳ್ಳಲು ಹೊರಟಿತ್ತು. ಇದೀಗ ಮೋಸ್ಟ್ ಗೂಗಲ್ಡ್ ಸೆಕ್ಸೀ ನಟಿ ಕತ್ರಿನಾ ಕೈಫ್ "ಬಟ್ಟೆಗೂ ಕತ್ರೀನಾ?" ಎಂದು ಹುಬ್ಬೇರಿಸುವಷ್ಟರ ಮಟ್ಟಿಗೆ ಮೆರೆದಾಡಿದರೂ, ಜಾಗತಿಕ ತಾಪಮಾನದ ಬಗ್ಗೆ ಇಲ್ಲಿ ಕಳವಳ ವ್ಯಕ್ತಪಡಿಸಿರುವುದು ಬಾಲಿವುಡ್ ಪ್ರಿಯರ ಕಳವಳಕ್ಕೂ ಕಾರಣವಾಗಿದೆ.

ಮೂರು ವರ್ಷಗಳ ಹಿಂದೆಯೇ ತಾಪಮಾನ ಹೆಚ್ಚಳಕ್ಕೆ ಮತ್ತೊಂದು ಕಾರಣವನ್ನೂ ಬೊಗಳೆ ರಗಳೆ ಇಲ್ಲಿ ಪತ್ತೆ ಮಾಡಿತ್ತು.

ಇದೀಗ ಕಿಲರಿ ಹ್ಲಿಂಟನ್ ಅವರು ಕೂಡ ಜಾಗತಿಕ ತಾಪಮಾನಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದು ಬೊಂಬಾಯಿಯೊಂದಿಗೆ ಮುಂಬಯಿಗೆ ಬಂದು, ಬಾಲಿವುಡ್ ನಟೀಮಣಿಯರಿರುವ ತಾಣದಲ್ಲೇ ಹೇಳಿರುವುದರ ಹಿಂದಿನ ಮರ್ಮವೇನು ಎಂಬ ಬಗ್ಗೆ ಸಂಚೋದನೆ ನಡೆಯುತ್ತಿದೆ.

ಇತ್ತೀಚೆಗೆ ನಟೀಮಣಿಯರು ಪುಟ್ಟ ಬೆಂಕಿ ಪೆಟ್ಟಿಗೆಯೊಳಗೆ ಮಡಚಿ ಇರಿಸಬಹುದಾದಷ್ಟು ಭಾರೀ ಗಾತ್ರದ ಉಡುಗೆ ತೊಡುವ, ಅಥವಾ ಆ ಉಡುಗೆಯನ್ನು ದೇಹಕ್ಕೆ "ಸ್ಯಾಂಪಲ್' ಆಗಿ ತೋರಿಸುವ ಪ್ರವೃತ್ತಿ ಹೆಚ್ಚಿಸುತ್ತಾ ಪ್ರಸಿದ್ಧಿ ಪಡೆಯಲು ಹರಸಾಹಸ ಮಾಡುತ್ತಿರುವುದರಿಂದ, ದೇಹದ ಮತ್ತು ದೇಶದ ತಾಪಮಾನ ಹೆಚ್ಚಾಗುತ್ತಿದೆ ಎಂದು ತಿಳಿದುಬಂದಿದೆ.

ಇದೀಗ ತಾಪಮಾನ ತಗ್ಗಿಸಲು ಎಲ್ಲರೂ ಹರ ಸಾಹಸ ಮಾಡುತ್ತಿರುವದರಿಂದ ದೇಶದೆಲ್ಲೆಡೆ ಕಳವಳವೂ ಬಿಸಿಬಿಸಿಯಾಗಿ ಏರತೊಡಗಿದೆ. ರೆ ಕತ್ರಿನಾ ಸೇರಿದಂತೆ ಬಾಲಿವುಡ್ ನಟೀಮಣಿಯರೇನಾದರೂ ಜಾಗತಿಕ ತಾಪಮಾನ ಕಡಿಮೆ ಮಾಡಲು ಪಣ ತೊಟ್ಟರೆ ಎಂಬ ಆತಂಕವೇ ಇದಕ್ಕೆ ಕಾರಣ ಎಂದು ಸಂಚೋದಿಸಲಾಗಿದೆ.

Saturday, July 18, 2009

ಜಾಗತಿಕ ತಾಪಮಾನ ಏರಲು ಕಾರಣ, ಪರಿಹಾರದ ಭೀತಿ!!?

ಹೆಚ್ಚುತ್ತಿರುವ ಜಾಗತಿಕ ತಾಪಮಾನಕ್ಕೆ ಪರಿಹಾರ ಕಂಡು ಹುಡುಕಿದರೆ ಭೀತಿ ಯಾಕೆ???

ಬೊಗಳೆ ರಗಳೆಯ ಮುಂದಿನ ಸಂಚಿಕೆ ನಿರೀಕ್ಷಿಸಿ...

ಪ್ರತಿಗಳನ್ನು ಕಾದಿರಿಸಿ, ಬಾರದೇ ಇದ್ದರೆ ಪ್ರತಿಗಳನ್ನು ಸುಡುವ ಕಾರ್ಯಕ್ರಮ ಮಾತ್ರ ಇಟ್ಟುಕೊಳ್ಳದಿರಿ...

ಈ ಅವಕಾಶವನ್ನು ಇನ್ನೆಂದಿಗೂ ಕಳೆದುಕೊಳ್ಳಲಾರಿರಿ ನೀವು. ನಿರೀಕ್ಷಿಸುತ್ತಿರಿ.

Thursday, July 16, 2009

ಎಂಪಿಗಳು ಎಮ್ಮೆಗಳಾಗಲು ಒಪ್ಪಲಿಲ್ಲವೇಕೆ?

(ಬೊಗಳೂರು ಎಮ್ಮೆ ಪ್ರತಿಭಟನಾ ಬ್ಯುರೋದಿಂದ)
ಬೊಗಳೂರು, ಜು.16- ಎಂಎ ಪದವಿ ಕೊಡುತ್ತೇವೆಂದರೂ ಕೈಗೆ ಸಿಗದಂತೆ ಓಡಿ ಪರಾರಿಯಾಗಿರುವ ಎಂಪಿಗಳ ಬಗ್ಗೆ ಬೊಗಳೂರಿನಲ್ಲಿ ತೀವ್ರ ಉತ್ಸಾಹದ ನುಡಿಗಳು, ಪ್ರಶಂಸೆ ಭರಿತ ಆಕ್ರೋಶದ ನುಡಿಗಳು, ಹಗೆನುಡಿಗಳು ಮತ್ತಿತರ ನುಡಿಗಳು ಕೇಳಿಬರುತ್ತಿವೆ.

ಇದಕ್ಕೆಲ್ಲಾ ಕಾರಣವಾದದ್ದು ಹೈಕದ ಹೈಕಳು ನಡೆಸಿದ ಪ್ರತಿಭಟನೆ. ಅದನ್ನು ಪ್ರತಿಭಟನೆ ಎಂದು ಕರೆಯಬಾರದು, ಪ್ರಶಂಸಾಘಟನೆ ಎಂದು ಕರೆಯಬೇಕೆಂಬ ಬೊಗಳೋದುಗರ ಒತ್ತಾಯದಿಂದಾಗಿ ಕೆಲವುಕಾಲ ಇಂಟರ್ನೆಟ್‌ನಲ್ಲಿ ಟ್ರಾಫಿಕ್ ಜಾಮ್ ಆದ ವರದಿಗಳು ಒಂದೆಡೆಯಿಂದ ಬರುತ್ತಿರುವಂತೆಯೇ ಅದನ್ನು ಬಿಟ್ಟು, ರಾಜ್ಯದ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಮೌನವೇ ಮೂರ್ತಿವೆತ್ತಂತೆ ಕುಳಿತುಕೊಳ್ಳುವ 28 ಮಂದಿ ಸಂಸದರಿಗೆ ಎಂಎ ಪ್ರದಾನಮಾಡುವ ಬಗ್ಗೆ ಬಿಸಿಬಿಸಿ ಸಿದ್ಧತೆ ನಡೆಸಿರುವುದನ್ನು ವರದಿ ಮಾಡಲು ತೀರ್ಮಾನಿಸಲಾಗಿದೆ.

ಅಲ್ಲಿ ನಡೆದ ಪ್ರಶಂಸಾಘಟನೆಯಲ್ಲಿ, ಆ 28 ಮಂದಿಯಲ್ಲಿ ಉಳಿದದ್ದು ಕೇವಲ ಒಂದು ಎಮ್ಮೆ ಮಾತ್ರ. ಅದು ಕೂಡ ಸಂಸತ್ತಿನಲ್ಲಿ ಸಂಸದರು ಕಣ್ಣಿನ ಭಾರವನ್ನು ಅಳೆದು ಅಳೆದು ತೂಗಿ ತೂಗಿ ತೂಕಡಿಸುತ್ತಾ ಕುಳಿತಿದ್ದ ಮಾದರಿಯಲ್ಲೇ, ಅಥವಾ ಎಂದಿನ ಅಭ್ಯಾಸ ಬಲದಂತೆ ಅಂದು ಕೂಡ ಇದ್ದುದರಿಂದಾಗಿ ಆ ಒಂದು ಎಮ್ಮೆಗೆ ಓಡಲಾಗಿರಲಿಲ್ಲ. ಕೊನೆಗೆ ಎಲ್ಲ ಅತ್ಯುತ್ತಮ ಎಂಎ ಪ್ರಶಸ್ತಿಗಳನ್ನು ಇದ್ದ ಎಮ್ಮೆಯ ಕೊರಳಿಗೇ ಕಟ್ಟಲಾಯಿತು.

ರೈಲ್ವೇ ಬಜೆಟಿನಲ್ಲಾಗಲೀ, ಮುಖ್ಯ ಬಜೆಟಿನಲ್ಲಾಗಲೀ, ಅದರ ಆಚೀಚೆಯಾಗಲೀ, ಕರ್ನಾಟಕಕ್ಕೆ ಯಾವಾಗಲೂ ಕೇಂದ್ರ ಸರಕಾರದಿಂದ ಅನ್ಯಾಯವಾಗುತ್ತಿದೆ. ಇದೆಲ್ಲಾ "ಮಾಮೂಲು, ಇದ್ದದ್ದೇ, ಕಳೆದ ಐವತ್ತು ವರ್ಷಗಳಿಂದ ಹೀಗೇ ನಡೆದುಕೊಂಡುಬರುತ್ತಿದೆ. ಈ ಒಂದು ವರ್ಷ ಮುಂದುವರಿದರೆ ಆಕಾಶ ಕಳಚಿಬೀಳುವುದಿಲ್ಲ" ಎಂದುಕೊಂಡಿದ್ದ 28 ಮಂದಿ ಸಂಸದರು, ಸಂಸತ್ತಿನಲ್ಲಿ ಕುಳಿತು ಎಲ್ಲವನ್ನೂ ಅಳೆದು ತೂಗಿ ನೋಡುವುದರಲ್ಲೇ ಕಾಲ ಕಳೆಯುತ್ತಿದ್ದರು ಎಂದು ನಮ್ಮ ರಹಸ್ಯ ವರದ್ದಿಗಾರರು ಯಾವಾಗಲೂ ವರದ್ದಿ ತಂದೊಪ್ಪಿಸುತ್ತಿರುತ್ತಾರೆ.

ಈ ಸಂಸದರನ್ನೂ ಈ ಪ್ರಶಂಸಾಘಟನಾ ಸ್ಥಳಕ್ಕೆ ಕರೆದಾಗ ಅವರು ಬಂದರೂ, 27 ಮಂದಿ ಚೆಲ್ಲಾಪಿಲ್ಲಿಯಾಗಿ ಓಡಿ ಹೋಗಿದ್ದೇಕೆ ಎಂಬ ಬಗ್ಗೆ ಬೊಗಳೆ ರಗಳೆ ಬ್ಯುರೋ ತೀವ್ರ ತನಿಖೆ ನಡೆಸಿತು. ಇದಕ್ಕೆ ಕಾರಣವೆಂದರೆ, ಪ್ರಜಾಪ್ರತಿನಿಧಿಗಳ ವೇತನ ಹೆಚ್ಚಳದ ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಸಂಸತ್ತಿನಲ್ಲಿ ತೀವ್ರ ಚರ್ಚೆಯಾಗುತ್ತಿತ್ತು ಮತ್ತು ಅದು ಅವಿರೋಧವಾಗಿ ಮಂಡನೆಯಾಗಿ, ಅವಿರೋಧವಾಗಿಯೇ ಸ್ವೀಕಾರವಾಗುವಂತೆ, ಅವಿರೋಧವಾಗಿಯೇ ಅನುಮೋದನೆ ದೊರೆಯುವಂತೆ ನೋಡಿಕೊಳ್ಳಬೇಕಾಗಿತ್ತು. ಯಾಕೆಂದರೆ ಇದು ಅತಿಗಂಭೀರವಾದ, ದೇಶವನ್ನೇ ಗಡಗಡನೆ ನಡುಗಿಸಬಹುದಾದ ಗಂಡಾಂತರ ತರಬಲ್ಲಂತಹ ತೀವ್ರ ಗಂಡಾಂತರಕಾರಿಯೂ ಹೆಂಡಾಂತರಕಾರಿಯೂ ಆಗಿರುವ ಚರ್ಚೆಯಾಗಿತ್ತು.

ಹೀಗಾಗಿ ಸಂಸತ್ತಿನಲ್ಲಿ ತಾವಿರುವುದು ಕಡ್ಡಾಯ ಎಂಬುದು ಅರಿವಿಗೆ ಬಂದ ತಕ್ಷಣವೇ ಅವರೆಲ್ಲರೂ ಚೆಲ್ಲಾಪಿಲ್ಲಿಯಾಗಿ ಓಡಿದ್ದರು. ಆದರೆ ಒಬ್ಬರಿಗೆ ಮಾತ್ರ ಹಗಲು ರಾತ್ರಿ ದುಡಿದು, ಮುದ್ದೆ ತಿಂದು ಕಣ್ಣುಗಳಲ್ಲೆಲ್ಲಾ ಮಣಭಾರವಾದ ಏನೋ ವಸ್ತುಗಳು ತಗುಲಿಸಿದಂತಾಗಿದ್ದ ಪರಿಣಾಮ ಏಳಲಾಗಿರಲಿಲ್ಲ ಎಂಬುದನ್ನು ಪತ್ತೆ ಹಚ್ಚಲಾಗಿದೆ.

Tuesday, July 14, 2009

ತಲೆ ಹೋಗೋ ಸಂಚೋದನೆ: ಜನನಪೂರ್ವ ಫಲವತ್ತತೆ ಪರೀಕ್ಷೆ

(ಬೊಗಳೂರು ಫರ್ಟಿಲೈಸರ್ ಬ್ಯುರೋದಿಂದ)
ಬೊಗಳೂರು, ಜು.14- ಕಾಲ ಬದಲಾಗಿದೆ ಎಂದು ತಿಳಿದುಬಂದಿದೆ. ಅದು ಬೊಗಳೂರು ಬ್ಯುರೋಗೆ ಈಗಷ್ಟೇ ಜ್ಞಾನೋದಯವಾಗಿದ್ದೇ ಅಥವಾ ಮೊದಲೇ ಈ ಕುರಿತ ಅಜ್ಞಾನ ಇತ್ತೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಈ ತನಿಖೆಯ ನಡುವೆ, ಗರ್ಭಿಣಿಯರಿಗೂ ಮದುವೆಯಾಗುವ ಹಕ್ಕುಗಳನ್ನು ನೀಡಬೇಕು ಎಂದು ಒತ್ತಾಯಿಸಿದ ಘಟನೆಯೊಂದು ಇಲ್ಲಿ ಪ್ರಕಟವಾಗಿದ್ದನ್ನು ಕೇಳಿದ ಬೊಗಳೂರು ಬ್ಯುರೋ, ಈ ಸಮಸ್ಯೆಗೆ ಪರಿಹಾರವೇನೆಂಬುದನ್ನು ಆಲೋಚಿಸತೊಡಗಿತು.

ದೊಡ್ಡವರಾದ ಬಳಿಕ ಬ್ರಹ್ಮಚರ್ಯ ಪರೀಕ್ಷೆ, ಕನ್ಯತ್ವ ಪರೀಕ್ಷೆ ಮುಂತಾದವೆಲ್ಲ ಮಾಡಿಸಿದರೆ, ಅವು ಮಾನವ ಹಕ್ಕುಗಳ ಉಲ್ಲಂಘನೆ ಎಂಬ ಟೀಕೆ, ಆಕ್ರೋಶ, ಸಿಡಿಮಿಡಿ, ಆರೋಪ ಕೇಳಿಬರುವ ಹಿನ್ನೆಲೆಯಲ್ಲಿ, ಹುಟ್ಟುವ ಮೊದಲೇ ಇಂಥ ಪರೀಕ್ಷೆಗಳನ್ನು ನಡೆಸಬೇಕು ಎಂಬ ಊರು ಲಗಾಡಿ ತೆಗೆಯುವ ಉಪಾಯವೊಂದು ಬೊಗಳೂರು ಬ್ಯುರೋ ಸಿಬ್ಬಂದಿಗೆ ಹೊಳೆದಿದೆ.

ಬರ್ತ್ ಸರ್ಟಿಫಿಕೆಟ್ ಜೊತೆಗೇ ಈ ಕುರಿತ Fertiಸಿಕೆಟ್ ಕೂಡ ಲಗತ್ತಿಸಿ ನೀಡುವ ಯೋಜನೆಯನ್ನು ಶೀಘ್ರವೇ ಸರಕಾರಗಳು ಸಿದ್ಧಪಡಿಸಬೇಕು ಎಂದು ಬೊಗಳೂರು ಮಂದಿ ಒತ್ತಾಯಿಸತೊಡಗಿದ್ದಾರೆ.

ಆದರೆ, ಕನ್ಯಾ ಪರೀಕ್ಷೆ, ವಧು ಪರೀಕ್ಷೆ ಎಂಬಿತ್ಯಾದಿಗಳು ಇದುವರೆಗೆ ಮದುವೆಗೆ ಮುನ್ನ ನಡೆಯುತ್ತಿದ್ದವು. ಈಗ ಮದುವೆ ಮಂಟಪದಲ್ಲೇ ಕನ್ಯಾ ಪರೀಕ್ಷೆ, ವರ ಪರೀಕ್ಷೆ, ವಧು ಪರೀಕ್ಷೆಗಳನ್ನೆಲ್ಲಾ ನಡೆಸುವ ಸಂಪ್ರದಾಯದಿಂದಾಗಿಯೇ ಇದು ಕಾಲ ಬದಲಾಗಿದೆ ಎಂಬ ಅಂಶವೊಂದು ಬೊಗಳೂರು ಮಂದಿಯ ಇಲ್ಲದ ತಲೆಯೊಳಗೆ ಧುತ್ತನೇ ಗೋಚರವಾಗಿತ್ತು ಎಂದು ಮೂಲಗಳು ವರದಿ ಮಾಡಿವೆ.

Friday, July 10, 2009

ಕೆಲವ್ರು ಮಾತ್ರ ಸೋಂಬೇರಿಗಳು: ಮು.ಮಂ. ಹೇಳಿಕೆಗೆ ಆಕ್ರೋಶ

(ಬೊಗಳೂರು ಸೋಂಬೇರಿ ಬ್ಯುರೋದಿಂದ)
ಬೊಗಳೂರು, ಜು. 10- ಕೆಲವರನ್ನು ಮಾತ್ರ ಸೋಂಬೇರಿಗಳು ಎಂದು ಕರೆದಿರುವ ಮುಖ್ಮಂತ್ರಿಗಳ ವಿರುದ್ಧ ಉಳಿದ ಸಚಿವರು ಕ್ಯಾತೆ ತೆಗೆದಿದ್ದಾರೆ.

ಕಳೆದೊಂದು ವರ್ಷದಿಂದ ಆಪರೇಶನ್‌ನಲ್ಲೇ ಮುಳುಗಿ, ಸಚಿವಾಲಯಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳತ್ತ ತಲೆ ಹಾಕದಿರುವ ನಮ್ಮೆಲ್ಲರಿಗೂ ಸೋಂಬೇರಿ ಬಿರುದು ದಯಪಾಲಿಸಬೇಕಿತ್ತು. ಹೀಗೇ ಮಾಡದೆ ಮುಖ್ಯಮಂತ್ರಿಗಳು ಸ್ವಜನಪಕ್ಷ-ವಾತ ಮೆರೆದಿದ್ದಾರೆ ಎಂದು ಸಾವಿರಾರು ಮಂದಿ ಸಚಿವರು ವಿಧಾನಸೌಧದ ಮುಂದೆ ಧರಣಿ ಕೂರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಸತ್ತಿನಲ್ಲಿ ಇತ್ತೀಚೆಗೆ ರೈಲ್ವೇ ಬಜೆಟಿನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಅದೆಲ್ಲಾ ಮಾಮೂಲಿ ಇದ್ದದ್ದೇ. ಕನ್ನಡಿಗರು ಕ್ಷಮಯಾಧರಿತ್ರಿಗಳು ಆಗಿರುವುದರಿಂದ ಅವರ ತಾಳ್ಮೆಗಾಗಿಯೇ ಬೂಕರ್, ನೊಬೆಲ್ ಪ್ರಶಸ್ತಿ ಎಲ್ಲಾ ಕೊಡಬೇಕಾಗಿತ್ತು.

ಕೇಂದ್ರದಲ್ಲಿ ರಾಜ್ಯದಿಂದ ನಾಲ್ಕು ಮಂದಿ ಮಂತ್ರಿಗಳಿದ್ದರೂ ಗಪ್ ಚುಪ್ಪೆನ್ನದೆ ನಿಂತಿದ್ದು ಅವರ ಸೋಂಬೇರಿತನಕ್ಕೆ ಸಾಕ್ಷಿಯಲ್ಲವೇ ಎಂದು ಸಾಕ್ಷ್ಯಾಧಾರ ಸಹಿತ ಈ ಸಚಿವರ ಗಡಣ ಕೇಳಿದೆ.

ಅಷ್ಟು ಮಾತ್ರವಲ್ಲ, ಅಷ್ಟು ಪ್ರಮಾಣದಲ್ಲಿ ಅನ್ಯಾಯವಾಗಿದ್ದರೂ ಕೂಡ, ರಾಜ್ಯದ ಸಂಸದರು, ಸಚಿವರ ಗಡಣ, ಮುಖ್ಯಮಂತ್ರಿಗಳು, ಹಿಂಬಾಲಕರು, ಬೆಂಬಾಲಕರು ಎಲ್ಲರೂ ಸುಮ್ಮನಿರುವುದು ಅವರವರ ಸೋಂಬೇರಿತನದ ಪ್ರತಿಭೆಗೆ ಸಾಕ್ಷಿ. ಹೀಗೆಲ್ಲಾ ಇರುವಾಗ, ಕೆಲವರಿಗೆ ಮಾತ್ರವೇ ಸೋಂಬೇರಿತನ ಪಟ್ಟ ಕೊಡುವುದು ಅನ್ಯಾಯ. ಇದರ ಬಗ್ಗೆ ನಾವಂತೂ ನಾಲ್ಕೈದು ವರ್ಷಗಳ ಬಳಿಕ ಖಂಡಿತಾ ಸಿಡಿದೇಳುತ್ತೇವೆ ಎಂದು ಅವರು 'ಈಗ ಪ್ರತಿಭಟನೆ ಮಾಡಲು ಉದಾಸೀನ' ಎನ್ನುತ್ತಾ ನುಡಿದರು.

ಹೇಗೂ ಬಹುತೇಕರು ಆಲಸಿಗಳಾಗಿದ್ದಾರೆ. ಈ ಆಲಸ್ಯ ನಿವಾರಣೆ ಹೇಗೆ ಎಂಬ ಬಗ್ಗೆ ಸಚಿವರು, ಶಾಸಕರ ಗಡಣವೆಲ್ಲವನ್ನೂ ವಿದೇಶಕ್ಕೆ ಕಳುಹಿಸಿ ಅಧ್ಯಯನ ಮಾಡಿಕೊಂಡು ಬರುವಂತೆ ವ್ಯವಸ್ಥೆ ಮಾಡಬೇಕು ಎಂದು ಹೇಳಿರುವ ಅವರು, ಆದರೆ ವಿದೇಶಕ್ಕೆ ಹೋದವರು ಆಲಸ್ಯ ನಿವಾರಣೆ ಬಗ್ಗೆ ಅಧ್ಯಯನ ಮಾಡುತ್ತಾರೋ ಅಥವಾ ಈ ಸಚಿವ-ಶಾಸಕರ ಗಡಣವೇ ವಿದೇಶೀಯರಿಂದ ಅಧ್ಯಯನಕ್ಕೀಡಾಗುತ್ತದೆಯೋ ಎಂಬುದನ್ನು ಮಾತ್ರ ಜಪ್ಪಯ್ಯ ಎಂದರೂ ಸ್ಪಷ್ಟಪಡಿಸಲಿಲ್ಲ.

Tuesday, July 07, 2009

ಬೊಗಳೆ Budget: ಐಷಾರಾಮಕ್ಕೆ, ಬೆಲೆ ಏರಿಕೆಗೆ ಒತ್ತು

(ಬೊಗಳೂರು ಹಿಂಗಡ ಪತ್ರ ಬ್ಯುರೋದಿಂದ)
ಬೊಗಳೂರು, ಜು.7- ಕೇಂದ್ರದಲ್ಲಿ ಕಳೆದ ಬಾರಿ ಪೀಚಿ ದಂಬರಂ ಅವರು ಮಂಡಿಸಿದ ರೀತಿಯಲ್ಲಿ ಮತ್ತು ಈ ಬಾರಿ ಒಣಬ್ ಮುಖರ್ಜಿ ಅವರು ಮಂಡಿಸಿದ ರೀತಿಯಲ್ಲಿ ಬೊಗಳೂರಿನಲ್ಲಿಯೂ ಮುಂ-ಕಡ ಪತ್ರವನ್ನು ಜನತೆಗೆ ಮಂಕುಬೂದಿ ಎರಚುವುದಕ್ಕಾಗಿಯೇ ಮಂಡಿಸಲಾಯಿತು. ಪಿತ್ತ ಸಚಿವರು ಅದನ್ನು ಮಂಡಿಸುತ್ತಿದ್ದಾಗ ಕೆಳಗೆ ಬಿದ್ದ ಅಂಶಗಳನ್ನೆಲ್ಲಾ ಹೆಕ್ಕಿ ಹೆಕ್ಕಿ ಮುಖ್ಯಾಂಶಗಳನ್ನಾಗಿ ಪರಿವರ್ತಿಸಿ ಬೊಗಳೋದುಗರಿಗಾಗಿ ಇಲ್ಲಿ ನೀಡಲಾಗಿದೆ:

* ರಜಾಕಾರಣಿಗಳಿಗೆ ಮಜಾ ಕಾರಣಗಳಿಗಾಗಿ ನೀಡುವ ದೇಣಿಗೆಗೆ ಶೇ.200 ತೆರಿಗೆ-ಮುಕ್ತ ಸೌಲಭ್ಯ

* ಕಾರು ಬೈಕಿಲ್ಲದೆ ರಸ್ತೆಗಳಲ್ಲಿ ಓಡಾಡುವವರಿಗೆ ಉಚಿತ ಪಾದಯಾತ್ರೆ ಸೌಲಭ್ಯ

* ದೇಹವನ್ನು ಆರಾಮವಾಗಿ ಚಾಚಲು ಸರಿಯಾಗಿ ಜಾಗ ಮತ್ತು ಮನೆ ಇಲ್ಲದವರು, ಕಾರಿನಲ್ಲೇ ಜೀವನ ಸವೆಸುತ್ತಾ, ಆನಂದ ಅನುಭವಿಸುವಂತಾಗಲು ಕಾರು ಮತ್ತು ಲಾರಿಗಳ ಮೇಲಿನ ಸಂಕ ರದ್ದು.

* ರಜಾಕಾರಣಿಗಳು ಸಂಸತ್ತಿನಲ್ಲಿ ಐದು ವರ್ಷಗಳ ಕಾಲ ಮಾಡುವ ಮಜಾಗಳನ್ನು ನೋಡಿ ಆನಂದಿಸಲು ಸೆಟ್ ಟಾಪ್ ಬಾಕ್ಸ್, ಟೀವಿ ಮತ್ತು ಅದಕ್ಕೆ ಬೇಕಾದ ರಿಮೋಟು ಕಂಟ್ರೋಲರುಗಳನ್ನು ಚೀಪು ಮಾಡುವುದು.

* ರೈತರು ಬೆಳೆದ ಬೆಳೆಗಳಿಗೆ ಮಧ್ಯವರ್ತಿಗಳೇ ಸಾಕಷ್ಟು ನುಂಗಿ ನೀರು ಕುಡಿಯುತ್ತಿರುವ ಕಾರಣ, ಅವರ ಮೇಲೆ ಕ್ರಮ ಕೈಗೊಳ್ಳುವುದು ಸರಕಾರಕ್ಕೆ ಅಸಾಧ್ಯ ಸಂಗತಿಯಾಗಿರುವುದರಿಂದ ರೈತರಿಗೆ ಕೀಟ ನಾಶಕಗಳನ್ನು ಕಡಿಮೆ ದರದಲ್ಲಿ ಅಥವಾ ಉಚಿತವಾಗಿ ಪೂರೈಸುವ ಯೋಜನೆ.

* ಹೊಟ್ಟೆ ತುಂಬುವುದಕ್ಕಾಗಿ ಮತ್ತು ಒಂದಷ್ಟು ಹಸಿವು ನೀಗಿಸಿಕೊಳ್ಳಲು ಬಿಸ್ಕತ್ತು, ಶರಬತ್ತು ಇತ್ಯಾದಿ ತಿಂದು ಕುಡಿದು ತೇಗೋಣವೆಂದು ಅಂದುಕೊಂಡವರಿಗೆ ಅದನ್ನು ಕೈಗೆಟುಕದಂತೆ ಮಾಡುವ ಮೂಲಕ ಅವರು ಇದುವರೆಗೆ ಕಣ್ಣೆತ್ತಿಯೂ ನೋಡಲಾಗದಂತಹ ಪಿಜ್ಜಾ, ಬರ್ಗರು ಇತ್ಯಾದಿಗಳ ಮೇಲಿನ ವಿದೇಶೀ ಆಮದು ಸುಂಕ ರದ್ದು.

* ಪ್ರೆಶರ್ ಕುಕರ್ ಹೆಚ್ಚು ಪ್ರೆಶರ್ ನೀಡುವುದರಿಂದ ಅದರೊಳಗಿರುವ ಪ್ರೆಶರನ್ನು ಜನರ ತಲೆಯೊಳಗೂ ವರ್ಗಾಯಿಸುವಂತಾಗಲು ಪ್ರೆಶರ್ ಕುಕರ್ ಬೆಲೆಗಳನ್ನು ಅದರ ಹೊಗೆ ಏರುವಷ್ಟು ಎತ್ತರಕ್ಕೆ ಏರಿಸುವುದು.

* ಬಡ ವರ್ಗದವರು ತಿನ್ನಲು ಉಣ್ಣಲು ಏನಿಲ್ಲದಿದ್ದರೂ ಒಂದಲ್ಲ ಒಂದು ದಿನ ಕಂಪ್ಯೂಟರು ಮುಟ್ಟಬೇಕು ಎಂಬ ಕನಸು ಕಂಡಿರುತ್ತಾರೆ. ಅಂಥವರಿಗೆ ಎಲ್‌ಸಿಡಿ ಕಂಪ್ಯೂಟರುಗಳ ಬೆಲೆಯನ್ನು ಒಂದೆರಡು ರೂಪಾಯಿ ಇಳಿಸುವುದು.

* ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ ಹಳ್ಳಿಯಲ್ಲಿಯೂ ಸೌಂದರ್ಯ ಸಾಧನಗಳ ಬಳಕೆ ಹೆಚ್ಚಾಗುತ್ತಿದ್ದು, ಈ ಸಾಂಕ್ರಾಮಿಕ ರೋಗವನ್ನು ತಡೆಯುವ ನಿಟ್ಟಿನಲ್ಲಿ ಅವುಗಳು ಜನ ಸಾಮಾನ್ಯರ ಕೈಗೆಟುಕದಂತೆ ಮೇಲೆ ಇರಿಸುವ ನಿಟ್ಟಿನಲ್ಲಿ ಅವುಗಳ ಮೇಲೆ ಶೇ.11 ಸೌಂದರ್ಯ ತೆರಿಗೆ ಹಾಗೂ ಶೇ. 12 ಮನರಂಜನಾ ತೆರಿಗೆ.

* ಭಿಕ್ಷುಕರೆಲ್ಲರೂ ತಮ್ಮ ಉದ್ಯಮವನ್ನು ಮತ್ತಷ್ಟು ಬಲ ಪಡಿಸಿ, ಸದಾ ಸಂಪರ್ಕದಲ್ಲಿರುವಂತಾಗಲು ಮೊಬೈಲ್ ಫೋನುಗಳ ಮೇಲಿನ ಸೀಮೆಯಿಲ್ಲದ ಸುಂಕ ರದ್ದು.

* ಪ್ರತಿ ವರ್ಷ ಕೋಟಿ ಕೋಟಿ ಉದ್ಯೋಗ ಸ್ಥಾಪನೆ. ಅವುಗಳ ದಾಖಲೆ ಬರೆದಿಡಲು, ಅವುಗಳನ್ನು "ಇದೆ, ಅಸ್ತಿತ್ವದಲ್ಲಿದೆ" ಎಂದು ದಾಖಲೆಯಲ್ಲಿ ತೋರಿಸಿ ಕೇಳಿದಾಗಲೆಲ್ಲಾ ಅದರ ಬಗ್ಗೆ ವರದಿ ಒಪ್ಪಿಸಲು ಒಬ್ಬ ರಾಜಕೀಯ ನಿಷ್ಠನನ್ನು ನೇಮಿಸುವ ಮೂಲಕ ದೇಶದ ನೂರು ಕೋಟಿ ಮಂದಿಯಲ್ಲಿ ಕನಿಷ್ಠ ಒಬ್ಬನಿಗೆ "ಉದ್ಯೋಗ ಸೃಷ್ಟಿ" ಯೋಜನೆ.

* ಮನೆಗಳಲ್ಲಿ ಟಾಯ್ಲೆಟ್ ಇಲ್ಲದವರಿಗೆ ಅನುಕೂಲವಾಗುವಂತೆ ಕಡಿಮೆ ದರದಲ್ಲಿ ಅದರಲ್ಲಿಯೂ ವಿಶೇಷವಾಗಿ ಪಟ್ಟಣ ಪ್ರದೇಶಗಳ ಚರಂಡಿ ಬದಿಯಲ್ಲಿ ದಿಢೀರ್ ಶೌಚಾಲಯ ಸ್ಥಾಪಿಸುವ ಬಡ ವರ್ಗದವರ, ಬೀದಿ ವಾಸಿಗಳ ಯೋಜನೆಗೆ ಮತ್ತಷ್ಟು ಕುಮ್ಮಕ್ಕು ನೀಡುವುದು.

* ಬಡತನ ರೇಖೆಯಲ್ಲಿರುವವರು ಅದಕ್ಕಿಂತಲೂ ಕೆಳಗೆ ಹೋಗಲು ಅನುಕೂಲವಾಗುವಂತೆ ಅವರಿಗೆ ಟಿವಿ, ಕಂಪ್ಯೂಟರು, ಲ್ಯಾಪಿಗೊಂದು ಟಾಪು, ಮೊಬೈಲ್, ಕಾರು ಇತ್ಯಾದಿಗಳನ್ನು ಕೊಳ್ಳುವುದಕ್ಕಾಗಿ ಕಡಿಮೆ ದರದ ಬಡ್ಡಿ ಇರುವ ಸಾಲಸೋಲ ಯೋಜನೆ.

* ಜವಾಹರ ರೋಜ್ಗಾರ್, ಇಂದಿರಾ ಆವಾಸ್, ರಾಜೀವ್ ಸಡಕ್, ಸೋನಿಯಾ ಮಾಂಗಲ್ಯಭಾಗ್ಯ, ರಾಹುಲ್ ವಸತಿ, ಪ್ರಿಯಾಂಕ ಯುವಜನ... ಇತ್ಯಾದಿ ಯೋಜನೆಗಳನ್ನು ಹುಡುಕಿ ಹುಡುಕಿ, ಪತ್ತೆ ಹಚ್ಚಿ ಸ್ಥಾಪಿಸುವುದು. ಪಕ್ಷದ ನಿಷ್ಠರಿಗೆಲ್ಲಾ ಈ ಗಾಂಧಿಗಳ ಹೆಸರಿನಲ್ಲಿ ಪ್ರಶಸ್ತಿ ನೀಡಿ, ಒರಿಜಿನಲ್ ಗಾಂಧಿಯನ್ನು ಮರೆಯುವಂತೆ ಮಾಡುವುದು ಅಥವಾ "ನಮ್ಮ ರಾಷ್ಟ್ರಪಿತ ಯಾರು" ಎಂದು ಕೇಳಿದಾಗ ಈ ಗಾಂಧಿಗಳಲ್ಲಿ ಯಾರ ಹೆಸರು ಹೇಳುವುದು ಎಂಬುದರ ಬಗ್ಗೆ ಗೊಂದಲ ಮೂಡಿಸುವ ನಾಮಕರಣ ಯೋಜನೆಗಳ ಜಾರಿ.

* ವಿದ್ಯುತ್ ಇಲ್ಲದಿದ್ದರೂ ಮನೆ ಮನೆಗಳಲ್ಲಿ ಬಲ್ಬು ಇರಬೇಕೆಂಬ ಉದ್ದೇಶದಿಂದ ಪ್ರಿಯಾಂಕ ಮಕ್ಕಳಾದ ರೈಹಾನ್ ಹಾಗೂ ಮಿರಾಯಾ ಹೆಸರಿನಲ್ಲಿ ಜ್ಯೋತಿ ಯೋಜನೆ.

* ತಿಂದು ಸಾಯಲು ಅಗತ್ಯವಿರುವ ಅಕ್ಕಿ, ಬೇಳೆ, ತರಕಾರಿ ಬೆಲೆಗಳನ್ನು ಗಗನದಿಂದ ಕೆಳಗೆ ಇಳಿಸಲು ಶೀಘ್ರವೇ ಏಣಿ ಸ್ಥಾಪನೆ ಯೋಜನೆಯನ್ನು ಘೋಷಿಸಲಾಗುತ್ತದೆ. ಈ ನೂರಾರು ಕೋಟಿ ರೂ.ಗಳ ಯೋಜನೆಗೆ ಹತ್ತಾರು ವರ್ಷಗಳೇ ತಗುಲುವುದರಿಂದ ಜನರು ಅಂಜದೆ, ಅಳುಕದೆ, ಭಯಭೀತರಾಗದೆ, ಆತ್ಮಹತ್ಯೆಗೆ ಮೊರೆ ಹೋಗದೆ ಏಳೆಂಟು ವರ್ಷ ಹಸಿವು ತಡೆದುಕೊಳ್ಳುವಂತಾಗಲು ಉಚಿತ ಕೊಳಚೆ ನೀರು ಪೂರೈಕೆ ಯೋಜನೆ.

* ಸಂಸತ್ಸದಸ್ಯರು ಐಷಾರಾಮಿ ಜೀವನ ನಡೆಸುವಂತಾಗಲು ಮತ್ತು ವಯೋವೃದ್ಧ ರಾಜಕಾರಣಿಗಳು, ಏಳಲಾಗದವರು ರಾಜಭವನದಲ್ಲಿ ವಿಶ್ರಾಂತ ಜೀವನ ನಡೆಸುವಂತಾಗಲು, ಅವರ ವೇತನವನ್ನು ಸೊನ್ನೆ ಕಂಡುಹುಡುಕಿದ ಭಾರತೀಯರೂ ಕಂಡುಹುಡುಕಲಾಗದಷ್ಟು ದೊಡ್ಡದಾದ ಮೊತ್ತದಷ್ಟಕ್ಕೆ ಏರಿಸುವುದು.

Wednesday, July 01, 2009

ಕಂಬಗಳಿಗೆ ರಾಜೀವ್ ಹೆಸರಿಲ್ಲ: ಬೊಗಳೂರು ಆಕ್ರೋಶ!

(ಬೊಗಳೂರು ನಾಮಕರಣ ಬ್ಯುರೋದಿಂದ)
ಬೊಗಳೂರು, ಜು.1- ಬೊಗಳೂರಿನ ಪಕ್ಕದೂರಾದ ಮುಂಬೈಯಲ್ಲಿ ಸಮುದ್ರಕ್ಕೆ ಸೇತುವೆ ಕಟ್ಟಿದ ಬಗ್ಗೆ ತಿಳಿದು ಬಂದ ತಕ್ಷಣ ಅಲ್ಲಿಗೆ ಓಡಿ ಹೋಗಿ ಅಲ್ಲೇನಾದರೂ ಕಪಿ ಸೈನ್ಯವನ್ನು ನೋಡಲು ಸಿಗಬಹುದೇ? ಸಂದರ್ಶಿಸಲುಬಹುದೇ? ಎಂಬಿತ್ಯಾದಿ ಲೆಕ್ಕಾಚಾರಗಳೊಂದಿಗೆ ಬೊಗಳೂರು ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳೆಲ್ಲ ಒಂದೊಂದು ಫಿಂಗ್ ಕಿಸ್ಸರ್ ವಿಮಾನವೇರಿ ಮುಂಬೈಗೆ ಧಾವಿಸಿದಾಗ ಅತಿ ದೊಡ್ಡ ಪ್ರಮಾದವೊಂದನ್ನು ಪತ್ತೆ ಹಚ್ಚಲಾಯಿತು.

ಅಲ್ಲಿರುವ ಐದೂವರೆ ಕಿಲೋಮೀಟರ್ ಉದ್ದದ ಸಮುದ್ರ ಮೇಲಿನ ಸೇತುವೆಯ (ಇದು ಶ್ರೀರಾಮ ಕಟ್ಟಿಸಿದ ಸೇತುವೆ ಇರಬಹುದೆಂಬ ಶಂಕೆ ನಿವಾರಣೆಯಾಯಿತು) ಉದ್ದಕ್ಕೂ ಹಾಕಲಾಗಿರುವ ಸಾವಿರಾರು ಕಂಬಗಳಲ್ಲಿ ರಾಜೀವ್ ಗಾಂಧಿಯ ಹೆಸರಿಲ್ಲದಿರುವುದು ಈ ದೇಶ ಕಂಡ ಅತಿ ದೊಡ್ಡ ದುರಂತ ಎಂಬುದನ್ನು ಪತ್ತೆ ಹಚ್ಚಲಾಯಿತು.

ಈ ಸೇತುವೆಯನ್ನು ರಾಜೀವ್ ಗಾಂಧಿ ಸೇತುವೆ ಅಂತ ಹೆಸರಿಸಿದ್ದಾರೆ. ದೇಶದ ಪ್ರತಿಯೊಂದು ಮೂಲೆ ಮೂಲೆಯಲ್ಲಿ, ಗಲ್ಲಿ ಗಲ್ಲಿಯಲ್ಲಿ ರಾಜೀವ್ ಗಾಂಧಿ ರಸ್ತೆ, ಇಂದಿರಾ ಗಾಂಧಿ ಆವಾಸ ಯೋಜನೆ, ಇಂದಿರಾ ಗಾಂಧಿ ಕುಡಿಯುವ ನೀರಿನ ಯೋಜನೆ, ರಾಜೀವ್ ಗಾಂಧಿ ಸ್ಟೇಡಿಯಂ, ರಾಜೀವ್ ವಿಶ್ವವಿದ್ಯಾನಿಲಯ, ರಾಜೀವ್ ಅದು, ಇಂದಿರಾ ಇದು ಎಂಬಿತ್ಯಾದಿ ಗಾಂಧಿ ಕುಟುಂಬದ ಸಮಸ್ತರ ಹೆಸರುಗಳು ಅಲ್ಲಲ್ಲಿರುತ್ತವೆ. ಹೀಗಿರುವಾಗ ಈ ಸೇತುವೆಯ ಮೂಲೆ ಮೂಲೆಯಲ್ಲಿ, ಕಂಬ ಕಂಬಕ್ಕೆ ರಾಜೀವ್ ಗಾಂಧಿ ಹೆಸರಿಲ್ಲವೇಕೆ ಎಂಬುದು ಬೊಗಳೂರಿನ ಸಮಸ್ತ ತೆರಿಗೆದಾರರನ್ನು ತೀವ್ರವಾಗಿ ಕಾಡಿದ ಪ್ರಶ್ನೆ.

ದೇಶಕ್ಕೆ ಈ ಗಾಂಧಿ ಕುಟುಂಬಕ್ಕಿಂತ ಅತ್ಯಂತ ಕಿರಿದಾದ ಸೇವೆಗಳನ್ನು ಸಲ್ಲಿಸಿದ್ದ ಲಾಲ್ ಬಹಾದೂರ್ ಶಾಸ್ತ್ರಿ, ವಲ್ಲಭಭಾಯಿ ಪಟೇಲ್, ಸುಭಾಶ್ ಚಂದ್ರ ಬೋಸ್ ಹೆಸರುಗಳು ಕೂಡ ಇಡೀ ದೇಶದಲ್ಲಿ ಒಂದೆರಡು ಕಡೆಯಾದರೂ ಗೋಚರಿಸುತ್ತಿರುತ್ತದೆ. ಆದರೆ ಇಷ್ಟು ಕಿಲೋಮೀಟರ್ ಉದ್ದದ ಸೇತುವೆಯ ಕಂಬ ಕಂಬಗಳಲ್ಲಿ ಎಲ್ಲಿಯೂ ಕೂಡ ರಾಜೀವ್ ಗಾಂಧಿ ಹೆಸರಿಲ್ಲದ್ದು ತೀರಾ ದೊಡ್ಡ ದುರಂತ ಎಂದು ಬಣ್ಣಿಸಲಾಗಿದೆ.

ಈ ಬಗ್ಗೆ ಹಲವಾರು ಶಂಕೆಗಳನ್ನು ಎತ್ತಿದಾಗ ಒಂದು ಶಂಕೆಯು ಧುತ್ತನೇ ಮೇಲೆದ್ದು ಬಂತು. ಬಹುಶಃ ಈ ಕಂಬ ಕಂಬಗಳಲ್ಲಿ ರಾಜೀವ್ ಗಾಂಧಿ ಬದಲು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೆಸರು ಇರಿಸಲು ಬಲುದೊಡ್ಡ ಸಂಚೊಂದು ರೂಪಿಸಲ್ಪಟ್ಟಿದೆ ಎಂದು ಪತ್ತೆ ಹಚ್ಚಲಾಗಿದ್ದು, ಪ್ರಿಯಾಂಕಾ ಗಾಂಧಿ ಅಲ್ಲ ವಾದ್ರಾ, ಮತ್ತು ಅವರ ಮಕ್ಕಳಾದ ರೈಹಾನ್ ಹಾಗೂ ಮಿರಾಯಾ ಅವರ ಹೆಸರುಗಳನ್ನೂ ಆ 8 ಲೇನ್‌ಗಳಿಗೆ ಇರಿಸಲು ನಿರ್ಧರಿಸಲಾಗಿದೆ ಎಂದು ನಂಬಲು ತೀರಾ ಅನರ್ಹವಾದ ಮೂಲಗಳು ತಿಳಿಸಿವೆ.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...