ಬೊಗಳೆ ರಗಳೆ

header ads

ಕಂಬಗಳಿಗೆ ರಾಜೀವ್ ಹೆಸರಿಲ್ಲ: ಬೊಗಳೂರು ಆಕ್ರೋಶ!

(ಬೊಗಳೂರು ನಾಮಕರಣ ಬ್ಯುರೋದಿಂದ)
ಬೊಗಳೂರು, ಜು.1- ಬೊಗಳೂರಿನ ಪಕ್ಕದೂರಾದ ಮುಂಬೈಯಲ್ಲಿ ಸಮುದ್ರಕ್ಕೆ ಸೇತುವೆ ಕಟ್ಟಿದ ಬಗ್ಗೆ ತಿಳಿದು ಬಂದ ತಕ್ಷಣ ಅಲ್ಲಿಗೆ ಓಡಿ ಹೋಗಿ ಅಲ್ಲೇನಾದರೂ ಕಪಿ ಸೈನ್ಯವನ್ನು ನೋಡಲು ಸಿಗಬಹುದೇ? ಸಂದರ್ಶಿಸಲುಬಹುದೇ? ಎಂಬಿತ್ಯಾದಿ ಲೆಕ್ಕಾಚಾರಗಳೊಂದಿಗೆ ಬೊಗಳೂರು ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳೆಲ್ಲ ಒಂದೊಂದು ಫಿಂಗ್ ಕಿಸ್ಸರ್ ವಿಮಾನವೇರಿ ಮುಂಬೈಗೆ ಧಾವಿಸಿದಾಗ ಅತಿ ದೊಡ್ಡ ಪ್ರಮಾದವೊಂದನ್ನು ಪತ್ತೆ ಹಚ್ಚಲಾಯಿತು.

ಅಲ್ಲಿರುವ ಐದೂವರೆ ಕಿಲೋಮೀಟರ್ ಉದ್ದದ ಸಮುದ್ರ ಮೇಲಿನ ಸೇತುವೆಯ (ಇದು ಶ್ರೀರಾಮ ಕಟ್ಟಿಸಿದ ಸೇತುವೆ ಇರಬಹುದೆಂಬ ಶಂಕೆ ನಿವಾರಣೆಯಾಯಿತು) ಉದ್ದಕ್ಕೂ ಹಾಕಲಾಗಿರುವ ಸಾವಿರಾರು ಕಂಬಗಳಲ್ಲಿ ರಾಜೀವ್ ಗಾಂಧಿಯ ಹೆಸರಿಲ್ಲದಿರುವುದು ಈ ದೇಶ ಕಂಡ ಅತಿ ದೊಡ್ಡ ದುರಂತ ಎಂಬುದನ್ನು ಪತ್ತೆ ಹಚ್ಚಲಾಯಿತು.

ಈ ಸೇತುವೆಯನ್ನು ರಾಜೀವ್ ಗಾಂಧಿ ಸೇತುವೆ ಅಂತ ಹೆಸರಿಸಿದ್ದಾರೆ. ದೇಶದ ಪ್ರತಿಯೊಂದು ಮೂಲೆ ಮೂಲೆಯಲ್ಲಿ, ಗಲ್ಲಿ ಗಲ್ಲಿಯಲ್ಲಿ ರಾಜೀವ್ ಗಾಂಧಿ ರಸ್ತೆ, ಇಂದಿರಾ ಗಾಂಧಿ ಆವಾಸ ಯೋಜನೆ, ಇಂದಿರಾ ಗಾಂಧಿ ಕುಡಿಯುವ ನೀರಿನ ಯೋಜನೆ, ರಾಜೀವ್ ಗಾಂಧಿ ಸ್ಟೇಡಿಯಂ, ರಾಜೀವ್ ವಿಶ್ವವಿದ್ಯಾನಿಲಯ, ರಾಜೀವ್ ಅದು, ಇಂದಿರಾ ಇದು ಎಂಬಿತ್ಯಾದಿ ಗಾಂಧಿ ಕುಟುಂಬದ ಸಮಸ್ತರ ಹೆಸರುಗಳು ಅಲ್ಲಲ್ಲಿರುತ್ತವೆ. ಹೀಗಿರುವಾಗ ಈ ಸೇತುವೆಯ ಮೂಲೆ ಮೂಲೆಯಲ್ಲಿ, ಕಂಬ ಕಂಬಕ್ಕೆ ರಾಜೀವ್ ಗಾಂಧಿ ಹೆಸರಿಲ್ಲವೇಕೆ ಎಂಬುದು ಬೊಗಳೂರಿನ ಸಮಸ್ತ ತೆರಿಗೆದಾರರನ್ನು ತೀವ್ರವಾಗಿ ಕಾಡಿದ ಪ್ರಶ್ನೆ.

ದೇಶಕ್ಕೆ ಈ ಗಾಂಧಿ ಕುಟುಂಬಕ್ಕಿಂತ ಅತ್ಯಂತ ಕಿರಿದಾದ ಸೇವೆಗಳನ್ನು ಸಲ್ಲಿಸಿದ್ದ ಲಾಲ್ ಬಹಾದೂರ್ ಶಾಸ್ತ್ರಿ, ವಲ್ಲಭಭಾಯಿ ಪಟೇಲ್, ಸುಭಾಶ್ ಚಂದ್ರ ಬೋಸ್ ಹೆಸರುಗಳು ಕೂಡ ಇಡೀ ದೇಶದಲ್ಲಿ ಒಂದೆರಡು ಕಡೆಯಾದರೂ ಗೋಚರಿಸುತ್ತಿರುತ್ತದೆ. ಆದರೆ ಇಷ್ಟು ಕಿಲೋಮೀಟರ್ ಉದ್ದದ ಸೇತುವೆಯ ಕಂಬ ಕಂಬಗಳಲ್ಲಿ ಎಲ್ಲಿಯೂ ಕೂಡ ರಾಜೀವ್ ಗಾಂಧಿ ಹೆಸರಿಲ್ಲದ್ದು ತೀರಾ ದೊಡ್ಡ ದುರಂತ ಎಂದು ಬಣ್ಣಿಸಲಾಗಿದೆ.

ಈ ಬಗ್ಗೆ ಹಲವಾರು ಶಂಕೆಗಳನ್ನು ಎತ್ತಿದಾಗ ಒಂದು ಶಂಕೆಯು ಧುತ್ತನೇ ಮೇಲೆದ್ದು ಬಂತು. ಬಹುಶಃ ಈ ಕಂಬ ಕಂಬಗಳಲ್ಲಿ ರಾಜೀವ್ ಗಾಂಧಿ ಬದಲು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೆಸರು ಇರಿಸಲು ಬಲುದೊಡ್ಡ ಸಂಚೊಂದು ರೂಪಿಸಲ್ಪಟ್ಟಿದೆ ಎಂದು ಪತ್ತೆ ಹಚ್ಚಲಾಗಿದ್ದು, ಪ್ರಿಯಾಂಕಾ ಗಾಂಧಿ ಅಲ್ಲ ವಾದ್ರಾ, ಮತ್ತು ಅವರ ಮಕ್ಕಳಾದ ರೈಹಾನ್ ಹಾಗೂ ಮಿರಾಯಾ ಅವರ ಹೆಸರುಗಳನ್ನೂ ಆ 8 ಲೇನ್‌ಗಳಿಗೆ ಇರಿಸಲು ನಿರ್ಧರಿಸಲಾಗಿದೆ ಎಂದು ನಂಬಲು ತೀರಾ ಅನರ್ಹವಾದ ಮೂಲಗಳು ತಿಳಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

12 ಕಾಮೆಂಟ್‌ಗಳು

  1. ಇಡೀ ದೇಶಕ್ಕೆ ರಾಜೀವ್ ಅಂತ ಹೆಸರಿಡಬೇಕೆಂಬ ಪ್ರಯತ್ನಕ್ಕೆ ನಾನಂತು ಬೆಂಬಲಿಸುತ್ತೇನೆ. ;-)

    ಪ್ರತ್ಯುತ್ತರಅಳಿಸಿ
  2. ಬರೀ ಸೇತುವೆ ಹಾಗೂ ಕಂಬಗಳಿಗೆ ಅಷ್ಟೇ ಏಕೆ, ಆ ಸಮುದ್ರಕ್ಕೇ
    ರಾಜೀವ ಗಾಂಧಿ ಸಮುದ್ರ ಎಂದು ಹೆಸರಿಡುವದು ಅತ್ಯಂತ ಯೋಗ್ಯವಾಗಿದೆ. ಈ ಪ್ರಸ್ತಾವನೆಯನ್ನು ಸಲ್ಲಿಸಿದವರಿಗೆ ಈ ವರ್ಷದ ಬದ್ಮಭೂಷಣ ಪ್ರಶಸ್ತಿ ನೀಡಲಾಗುವದು.

    ಪ್ರತ್ಯುತ್ತರಅಳಿಸಿ
  3. ಮತ್ತೊಮ್ಮೆ ನೀವಾಗಲಿ ಅಥವಾ ನಿಮ್ಮ ಏಕ ಸದಸ್ಯ ಬ್ಯುರೋವಿನ ಯಾರೇ ಆಗಲಿ, ಆ ಸೇತುವೆ ಕಡೆ ಬರಬೇಡಿ
    ಇದು ಕಳಕಳಿಯ ಮನವಿ - ಹಾಗೇನಾದರೂ ಬಂದಲ್ಲಿ, ಏನಾದರೂ ಹೆಚ್ಚು ಕಡಿಮೆ ಆದಲ್ಲಿ ನಾವು ಜವಾಬುದಾರರಲ್ಲ

    ಯಾಕೆ ಹೇಳ್ತಿದ್ದೀನಿ ಅಂದ್ರೆ, ಆ ಸೇತುವೆಯ ಒಂದು ಕೊನೆಯಿಂದ ಇನ್ನೊಂದು ಕೊನೆಯವರೆವಿಗಿನ ತಿರುಪೆಯ ಕಂಟ್ರಾಕ್ಟ್ ನಮಗೇ ಲಭಿಸಿರುವುದು
    ನಮ್ಮ ಅಣತಿ ಇಲ್ಲದೇ ಯಾರೂ ಅಲ್ಲಿ ಕಾಲಿಡೋ ಹಾಗಿಲ್ಲ. ಮೊದಲ ದಿನವೇ ಅಲ್ಲಿ ಟ್ರಾಫಿಕ್ ಜಾಮ್ ಆಗಿರೋದು ಗೊತ್ತಿರಬೇಕಲ್ವೇ? ಯಾರಿದಕ್ಕೆ ಹೊಣೆ ಅಂತ ಸ್ವಲ್ಪ ಯೋಚಿಸಿ ಹ್ಹ ಹ್ಹ ಹ್ಹ

    ಜೇಮ್ಸ ಬೊಂಡ ೦೦೦

    ಪ್ರತ್ಯುತ್ತರಅಳಿಸಿ
  4. ಕಂಬಗಳಿಗೆ ರಾಜೀವ್ ಹೆಸರಿಲ್ಲದಿರಲು ಮಂಘ ಪರಿವಾರದ ಒಳಸಂಚೇ ಕಾರಣವೆಂಬ ಶಂಕೆ ಇದೆ. ಬೊಗಳೆ ಪತ್ರಿಕೆಯ ಮೂಲಕ ತನಿಖೆಗೆ ಆಗ್ರಹಿಸಬೇಕಾಗಿ ಕೋರುತ್ತಿದ್ದೇವೆ.

    ಪ್ರತ್ಯುತ್ತರಅಳಿಸಿ
  5. ಭಾರತಕ್ಕೆ ಭಾರಥನಿಂದ ಬಂದ ಹೆಸರಿಣಿ ಹಾಗೆ ಎನ್ನುತ್ತೀರ? ಕಾಲಕ್ಕೆ ತಕ್ಕಂತೆ ದೇಶದ ಹೆಸರೂ ಬದಲಾಗುತ್ತದೆ.

    ಪ್ರತ್ಯುತ್ತರಅಳಿಸಿ
  6. ri swamy nehru inda hidu rahul vargu yellara hasroo idbekaagittu adoo ondondu kambakku

    ಪ್ರತ್ಯುತ್ತರಅಳಿಸಿ
  7. ಪ್ರಸ್ಕರೇ,
    ನಿಮ್ಮ ಬೇಡಿಕೆಯು ಸಂಸತ್ತಿನಲ್ಲಿ ಅವಿರೋಧವಾಗಿ ಅಂಗೀಕರಿಸಲ್ಪಟ್ಟಿದೆ.

    ಪ್ರತ್ಯುತ್ತರಅಳಿಸಿ
  8. ಸುನಾಥರೆ,
    ಯಾವುದೇ ಕಂಬಗಳ ಕೆಳ ಭಾಗದಲ್ಲಿ ಹೆಸರು ಕೆತ್ತಿಸಬಾರದು ಎಂದು ಆದೇಶಿಸಲಾಗಿದೆ. ಇದಕ್ಕೆ ಕಾರಣವೆಂದರೆ ಶ್ವಾನ ಸಂಘದ ಸದಸ್ಯರೇನಾದರೂ ಕಾಲೆತ್ತಿದರೆ ಕಂಬವು ಕೆಲವೇ ದಿನಗಳಲ್ಲಿ ಮುರಿದುಬೀಳಬಹುದು.

    ಪ್ರತ್ಯುತ್ತರಅಳಿಸಿ
  9. ಕುರುಕುರೇ,
    ನಾವಲ್ಲಿಗೆ ಬಂದರೆ ಹೆಚ್ಚಾದರೆ ಪರವಾಗಿಲ್ಲ, ಆದರೆ ನಮಗೇನಾದರೂ ಕಡಿಮೆಯಾದರೆ ನಾವು ಕೂಡ ಸುಮ್ಮನಿರೋದಿಲ್ಲ. ನಿಮ್ಮ ಜೇಮ್ಸ್ ಭಂಡನಿಗೆ ಒಂದು ಸ್ವಲ್ಪ ಕಡಿಮೆ ನಗೋದಿಕ್ಕೆ ಹೇಳಿ. ನೀವೇ ಆ ಸೇತುವೇಲಿ ಜಾಮ್ ಮಾಡಿ ಮಾರಾಟ ಮಾಡ್ತೀರಂತ ಗುಪ್ತವಾದ ದಳಕ್ಕೆ ಮಾಹಿತಿ ಸಿಕ್ಕಿದೆಯಂತೆ. ಹುಷಾರ್...

    ಪ್ರತ್ಯುತ್ತರಅಳಿಸಿ
  10. ಶ್ರೀThree ಅವರೆ,
    ಆ ಹೆಸರಿಡಲು ರಾಜೀವ್ ಯಾವ ಇಂಜಿನಿಯರಿಂಗ್ ಕಾಲೇಜಲ್ಲಿ ಓದಿದ್ದು ಅಂತ ಕೇಳಲು ಕಪ್ಪುಕನ್ನಡಕಧಾರಿ ಸ್ವಲ್ಪ ಸಮಯದ ಬಳಿಕ ಇರುವುದಿಲ್ಲ. ಹೀಗಾಗಿ ಈಗಾಗಲೇ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ.

    ಎಲ್ಲದಕ್ಕೂ ಬೊಗಳೆ ಬ್ಯುರೋವೇ ತನಿಖೆ ಮಾಡಬೇಕೆಂಬ ಒತ್ತಡ ಹೆಚ್ಚಿರುವುದರಿಂದ ಮತ್ತು ಎರಡೂ ಕಡೆಗಳಿಂದ ಬಾಚಿಕೊಳ್ಳಲು ಸಾಕಷ್ಟು ಸಮಯದ ಅಗತ್ಯವಿರುವುದರಿಂದ ಒಂದೊಂದಾಗಿ ಕೆಲಸ ಬಾಚಿಕೊಳ್ಳಲಾಗುತ್ತದೆ ಎಂದು ನಮ್ಮ ತನಿಖಾ ಮಂಡಳಿಯ ಮೂಲಗಳು ಹೇಳಿವೆ.

    ಪ್ರತ್ಯುತ್ತರಅಳಿಸಿ
  11. ಮೈ ಜರ್ನಲ್ ಅವರೆ, ಬೊಗಳೂರಿಗೆ ಸ್ವಾಗತ.

    ನಿಮ್ಮ ಸಲಹೆಯ ಪ್ರಕಾರ, ಭಾರತ ಬದಲು ರಾಜೀವ್ ದೇಶ ಅಥವಾ ರಾಜೀವ್ ನಾಡು ಎಂಬ ಹೆಸರೇ ಸೂಕ್ತ ಅನ್ನಿಸುತ್ತದೆ. ಈ ಬಗ್ಗೆ ಸಂಸತ್ತಿನಲ್ಲಿ ಪ್ರಸ್ತ ಮಂಡಿಸಲಾಗುತ್ತದೆ.

    ಪ್ರತ್ಯುತ್ತರಅಳಿಸಿ
  12. ಉಮೇಶ ವಸಿಷ್ಠ ಅವರೇ, ಬೊಗಳೂರಿಗೆ ಸ್ವಾಗತ.

    ರಾಜೀವ್ ಮಕ್ಕಳಿಗೆ ಮದುವೆ ಮಾಡಿಸಿ, ಅವರ ಮೊಮ್ಮಕ್ಕಳಿಗೂ ಮದುವೆ ಮಾಡಿಸಿ ಮಕ್ಕಳಾಗಿಸಿ ಅವರ ಹೆಸರು ಕೂಡ ದೇಶದ ಕಂಬ ಕಂಬದಲ್ಲಿ, ಮರ ಗಿಡದಲ್ಲಿ ಅಜರಾಮರವಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಇದಕ್ಕೆ ನಿಮ್ಮ ಸಲಹೆಯೂ ಕಾರಣ ಎಂದು ಕೆಳಗೆ ನಮೂದಿಸಲಾಗುತ್ತದೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D