Tuesday, August 25, 2009

ಪಾತಕಿಸ್ತಾನ ಜೊತೆ ಅನರ್ಥಪೂರ್ಣ ಮಾತುಕತೆಗೆ ಸಿದ್ಧ

(ಬೊಗಳೂರು ಬಂಬಡಾ ಬ್ಯುರೋದಿಂದ)
ಬೊಗಳೂರು, ಆ.25- ಪಾತಕಿಸ್ತಾನದ ಜೊತೆಗೆ ನಾವು ಟೂ ಬಿಡುತ್ತೇವೆ, ಕೋಪ.... ಮಾತನಾಡುವುದೇ ಇಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.

ಆದರೂ ಈ ಹುಸಿಮುನಿಸು ಆಗಾಗ್ಗೆ ಶಮನವಾಗಿ, ಎಲ್ಲಾದರೂ ನಮ್ಮ ಕೈಮೀರಿ, ನಮಗರಿವಿಲ್ಲದಂಯೆತೇ ಮಾತುಕತೆ ನಡೆಸಿಬಿಟ್ಟರೆ...? ಎಂಬ ಆತಂಕವೂ ಭಾರತವನ್ನು ಆಳುತ್ತಿರುವವರಿಗಿದೆ. ಹೀಗಾಗಿ, ಪಾತಕಿಸ್ತಾನದೊಂದಿಗೆ "ಅರ್ಥಪೂರ್ಣ" ಮಾತುಕತೆ ಇಲ್ಲ ಎಂಬ ಪದಗುಚ್ಛವನ್ನು ಪತ್ರಿಕಾ ಹೇಳಿಕೆಯೊಳಗೆ ಸೇರಿಸಲಾಗಿದೆ.

ಈ ಮೂಲಕ, ಖಂಡಿತವಾಗಿಯೂ ಪಾತಕಿಸ್ತಾನದ ಜೊತೆಗೆ ಅನರ್ಥಪೂರ್ಣವಾದ ಮಾತುಕತೆ ನಡೆಸುತ್ತೇವೆ ಎಂದು ವಿದೇಶದಅಂಗಿ (ಹಾಕಿಕೊಳ್ಳುವ) ಸಚಿವರು ಸ್ಪಷ್ಟಪಡಿಸಿದ್ದಾರೆ.

ಪಾತಕಿಸ್ತಾನವು ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ, ಆದರೆ ಕ್ರಮ ಕೈಗೊಂಡಂತೆ ಆಗಾಗ್ಗೆ ಏನೇನೋ ಬಡಬಡಾಯಿಸುತ್ತಿರುತ್ತದೆ ಎಂಬುದನ್ನು ಮನಗಂಡಿರುವ ಬೊಗಳೂರು ಪ್ರಜೆಗಳು, ವಿದೇಶದ ಅಂಗವಾಗಿರುವ ಸಚಿವರ ವಿರುದ್ಧ ಪ್ರತಿಭಟನೆ ನಡೆಸದಿರಲು ತೀರ್ಮಾನಿಸಿದ್ದಾರೆ. ಪ್ರತಿಭಟನೆ ನಡೆಸಿದರೂ ಪ್ರಯೋಜನವಿಲ್ಲ ಎಂಬುದೇ ಅವರ ಈ ತೀರ್ಮಾನಕ್ಕೆ ಕಾರಣ.

ಭಾರತ-ಪಾತಕಿಸ್ತಾನಗಳ ನಡುವಣ ದ್ವಿಪಕ್ಷೀಯ ಸಂಬಂಧಗಳ ವೃದ್ಧಿಗೆ ಎಲ್ಲಾದರೂ "ಧನಾ"ತ್ಮಕ ತಿರುವು ದೊರೆಯುತ್ತದೆಯೋ ಎಂದು ಎರಡೂ ದೇಶಗಳ ರಾಜಕಾರಣಿಗಳು ಕಾಯುತ್ತಿದ್ದಾರೆ. ಈ ಧನ ಲಭ್ಯವಾದಲ್ಲಿ, ಈಗಾಗಲೇ ಭ್ರಷ್ಟ ರಾಜಕಾರಣಿಗಳಿಂದಾಗಿ ಭ್ರಷ್ಟ ದೇಶಗಳ ಪಟ್ಟಿ ಸೇರಿಕೊಂಡುಬಿಟ್ಟಿರುವ ಎರಡು ದೇಶಗಳಿಗೂ ತಮ್ಮ ರ‌್ಯಾಂಕಿಂಗ್ ವೃದ್ಧಿಸಿಕೊಳ್ಳಲು ಸಹಾಯಕವಾಗುತ್ತದೆ ಎಂಬುದು ಅವರ ನಂಬಿಕೆ.

ಪಾತಕಿಸ್ತಾನವು ಭರವಸೆಗಳನ್ನು ಪೂರೈಸುವುದಿಲ್ಲ ಎಂದು ಅಲ್ಲಿನ ಮಂಡೆಗಳ ಕಂಪ್ಯೂಟರುಗಳಲ್ಲಿ ಡೀಫಾಲ್ಟ್ ಪ್ರೋಗ್ರಾಂ ಆಗಿ ಫಿಕ್ಸ್ ಮಾಡಲಾಗಿದೆ. ಆದರೆ, ಅಲ್ಲಿನ ಎಲ್ಲ ಮಂಡೆಗಳು ಕೂಡ ಭರವಸೆಗಳನ್ನು ಧಂಡಿಯಾಗಿ ನೀಡುತ್ತವೆ. ಅಂತಾರಾಷ್ಟ್ರೀಯ ಸಮುದಾಯವನ್ನು ಸಂತುಷ್ಟಗೊಳಿಸಲು ಇದು ಸಾಕಾಗುತ್ತದೆ ಎಂದು ಭಾರತದ ಜಾರಕಾರಣಿಗಳು ಬಲವಾಗಿ ನಂಬಿದ್ದಾರೆ.

ಮುಂಬೈ ಮೇಲಿನ ದಾಳಿಗೆ ಸಂಬಂಧಿಸಿದಂತೆ ಅದೆಷ್ಟೋ ಸಾಕ್ಷ್ಯಾಧಾರಗಳ ಸಹಿತ ಅಜ್ಮಲ್ ಎಂಬ ಕಸ ಸಿಕ್ಕಿಬಿದ್ದಿದ್ದರೂ, ಆತನಿಗೆ ಏನೂ ಆಗದಂತೆ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರಕ್ಷಣೆ ನೀಡುತ್ತಾ, ಬಿರಿಯಾನಿ, ಮಟನ್ ಎಲ್ಲ ನೀಡುತ್ತಾ ಆತನಿಗೆ ಐಷಾರಾಮದ ವ್ಯವಸ್ಥೆ ಮಾಡಿರುವುದು ಯಾಕೆ ಎಂಬುದರ ಕುರಿತು ಸ್ವತಃ ಪಾಕಿಸ್ತಾನವೇ ಅಚ್ಚರಿ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಉಗ್ರಗಾಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರುವ ಕುರಿತು ಭಾರತದಲ್ಲಿ ಜನಾಕ್ರೋಶವಿದ್ದರೂ, ನಮಗಿಂತ ಯಾರೂ ಮೇಲಲ್ಲ ಎಂದು ಸರಕಾರ ತೋರಿಸಿಕೊಡುತ್ತಿದೆ ಎಂಬುದನ್ನು ಬೊಗಳೂರು ಜನತೆ ಪತ್ತೆ ಹಚ್ಚಿಬಿಟ್ಟಿದ್ದಾರೆ. ಇದರ ಹಿಂದಿರುವ (ಓಟ್) ಬ್ಯಾಂಕಿನ ಕೈವಾಡವನ್ನು ಕೂಡ ತಳ್ಳಿ ಹಾಕಲು ಮೂಲಗಳು ನಿರಾಕರಿಸಿವೆ. ಸದ್ಯಕ್ಕೆ ಓಟುಗಳೆಲ್ಲವನ್ನೂ ಸ್ವಿಸ್ ಬ್ಯಾಂಕಿನಲ್ಲಿ ಭದ್ರ ಮಾಡಿ ಇರಿಸಲಾಗಿದೆ ಎಂಬುದನ್ನು ಕೂಡ ಮೂಲಗಳು ಪತ್ತೆ ಹಚ್ಚಿವೆ.

Tuesday, August 18, 2009

ಸ್ವೈನ್ ಫ್ಲೂ ನಿಷೇಧಿಸಿದ್ದೇವೆ: ಕೇಂದ್ರ ಸ್ಪಷ್ಟನೆ

(ಬೊಗಳೂರು ಆರೋಗ್ಯಾತಂಕ ಬ್ಯುರೋದಿಂದ)
ಬೊಗಳೂರು, ಆ.17- ಐದಾರು ತಿಂಗಳ ಹಿಂದೆಯೇ ಕಾಣಿಸಿಕೊಂಡಿದ್ದರೂ, ಇದುವರೆಗೆ ಏನೂ ಮಾಡಲಿಲ್ಲ ಎಂಬ ಜನರ ಆಕ್ರೋಶವು ವಿರೋಧ ಪಕ್ಷಗಳ ತಂತ್ರ ಎಂದು ದೂರಿರುವ ಕೇಂದ್ರ ಸರಕಾರವು, ಸ್ವೈನ್ ಫ್ಲೂ ತಡೆಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದು, ಒಬ್ಬರನ್ನೂ ಸಾಯಲು ಬಿಡುವುದಿಲ್ಲ ಎಂದು ಭರವಸೆ ನೀಡಿರುವುದಾಗಿ ನಮ್ಮ ಪ್ರತಿಸ್ಪರ್ಧಿ ಮತ್ತು ಎದುರಾಳಿ ಪತ್ರಿಕೆಗಳು ವರದ್ದಿ ಮಾಡಿವೆ.

ಸ್ವೈನ್ ಫ್ಲೂ ಬಗ್ಗೆ ಎಲ್ಲರಿಗೂ ಅರಿವು ಮತ್ತು ಆತಂಕ ಉಂಟಾಗಿದ್ದರೂ, ಒಂದು ಜೀವವನ್ನೇ ಅದು ಬಲಿ ತೆಗೆದುಕೊಂಡ ಬಳಿಕ ಎಚ್ಚೆತ್ತುಕೊಂಡ ಕೇಂದ್ರ ಸರಕಾರವು, ಸ್ವೈನ್ ಫ್ಲೂ ನಿಷೇಧಿಸಲು ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ. ಮತ್ತು ಯಾರು ಕೂಡ ಆತಂಕ ಪಡಬೇಕಾಗಿಲ್ಲ, ಸರಕಾರದಲ್ಲಿರುವವರು, ಆಳುವವರು, ಅಧಿಕಾರದಲ್ಲಿರುವವರು, ಮಂತ್ರಿಗಳು, ಶಾಸಕರು ಮತ್ತು ಸಂಸದರು ಸುರಕ್ಷಿತರಾಗಿದ್ದಾರೆ. ನಿಮ್ಮನ್ನು ಆಳುವವರಿಗೆ ಏನೂ ಆಗಿಲ್ಲವಾದುದರಿಂದ ಯಾವುದೇ ರೀತಿಯಲ್ಲಿಯೂ ಯಾರೂ ಕೂಡ ಭಯಪಡಬೇಡುವ ಅಗತ್ಯವಿಲ್ಲ ಎಂದು ಸಾರಿ ಸಾರಿ ಹೇಳಲಾಗುತ್ತಿದೆ.

ಸ್ವೈನ್ ಫ್ಲೂ ಮೊದಲು ಸೊಳ್ಳೆಯಿಂದ ಹರಡುತ್ತದೆ ಎಂದು ಸರಕಾರವು ಸರ್ವಾನುಮತದ ನಿರ್ಣಯ ಕೈಗೊಂಡು ಕಾಯಿದೆ ರೂಪಿಸಿತ್ತು. ಆದರೆ, ಸಂವಿಧಾನ ತಿದ್ದುಪಡಿ ಮಾಡಿದ ಬಳಿಕ ಅದು ಹಂದಿಯಿಂದಲೇ ಬರುತ್ತದೆ ಎಂದು ಕೂಡ ತಿದ್ದುಪಡಿ ಕಾಯಿದೆಯನ್ನು ಜಾರಿಗೊಳಿಸಲಾಗಿತ್ತು. ಇದೀಗ ಸ್ವೈನ್ ಫ್ಲೂ ಉಸಿರಿನಿಂದಲೇ ಹರಡುತ್ತಿದೆ ಎಂದು ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವವರು ಮತ್ತು ಸರಕಾರವನ್ನು ಗಾಢ ನಿದ್ರೆಯಿಂದ ಎಬ್ಬಿಸಲು ಪ್ರಯತ್ನಿಸುವವರು ಅಪಪ್ರಚಾರ ಆರಂಭಿಸಿದ್ದಾರೆ. ಹೀಗಾಗಿ ಈ ಅಪಪ್ರಚಾರಕ್ಕೆ ಸ್ಪಂದಿಸಲೇಬೇಕಾಗಿದೆ ಎಂದು ಸರಕಾರದ ವಕ್ತಾರರು ಹೇಳಿದ್ದಾರೆ.

ಇಪ್ಪತ್ತೈದಕ್ಕೂ ಹೆಚ್ಚು ಮಂದಿ ದೇಶದಲ್ಲಿ ಹಂದಿಗೆ ಬಲಿಯಾಗಿದ್ದಾರೆ ಎಂಬುದನ್ನು ನಮಗೆ ಯಾರೂ ಹೇಳಿಲ್ಲ ಎಂದು ತಿಳಿಸಿರುವ ವಕ್ತಾರರು, ನೋಡೋಣ, ಮಂತ್ರಿ ಮಾಗಧರಿಗೇನಾದರೂ ಇದು ಬಂದರೆ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಜನರಿಗಾಗಿ ನಾವು ಈಗಾಗಲೇ ಹಂದಿ ಜ್ವರವನ್ನು ನಿಷೇಧಿಸಿದ್ದೇವೆ. ಈಗ ನಮಗೆ ಸಾಕಷ್ಟು ಬೇರೆ ವಿಷಯಗಳಿವೆ. ಅಂತಾರಾಷ್ಟ್ರೀಯ ಸಂಬಂಧಗಳನ್ನು ಸುಧಾರಿಸಬೇಕಿದೆ, ಅಣ್ವಸ್ತ್ರ ಒಪ್ಪಂದವು ಕಾರ್ಯಾನುಷ್ಠಾನವಾಗುವಂತೆ ನೋಡಿಕೊಳ್ಳಬೇಕಾಗಿದೆ. ಅಲ್ಲಲ್ಲಿ ರಾಜೀವ್ ಗಾಂಧಿ, ನೆಹರೂ ಹೆಸರಿನಲ್ಲಿ ಪ್ರತಿಮೆಗಳು, ಕ್ರೀಡಾಕೂಟಗಳು, ಸ್ಟೇಡಿಯಂಗಳು, ರಸ್ತೆಗಳು ಇತ್ಯಾದಿ ಸ್ಥಾಪನೆಯಾಗಬೇಕಿವೆ. ಈ ಜನಕಲ್ಯಾಣ ಕಾರ್ಯಕ್ರಮಗಳನ್ನು ಬಿಟ್ಟು ಯಃಕಶ್ಚಿತ್ ಹಂದಿಯ ಜ್ವರವನ್ನೇ ದೊಡ್ಡದು ಮಾಡುವುದು ಸರಿಯಲ್ಲ ಎಂಬ ನಿರ್ಧಾರ ನಮ್ಮದು ಎಂದು ಅವರು ಹೇಳಿದ್ದಾರೆ.

ಈಗಾಗಲೇ ಹಂದಿ ಜ್ವರವು ಹರಡದಂತೆ ನಾವು ಹಂದಿಗಳಿಗೆ ಸೂಚಿಸಿದ್ದೇವೆ. ಆದರೂ ಮುಂದುವರಿದರೆ ಕಠಿಣಾತಿಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಅವುಗಳಿಗೆ ಎಚ್ಚರಿಸಿದ್ದೇವೆ. ಎಲ್ಲೆ ಮೀರಿ ಹರಡುತ್ತಿರುವ ಹಂದಿಜ್ವರದಿಂದ ಕಂಗೆಟ್ಟು ಬಾಡಿ ಹೋದ ಮುಖಗಳನ್ನು ಮುಚ್ಚಿಕೊಳ್ಳುವುದಕ್ಕಾಗಿ ಮುಖವಾಡಗಳನ್ನು (ಮಾಸ್ಕ್) ಕಾಳಸಂತೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಿಡುಗಡೆ ಮಾಡಿದ್ದೇವೆ ಎಂದು ವಕ್ತಾರರು ಒದರಿದ್ದಾರೆ.

ಆದರೆ ಅದನ್ನು ಧರಿಸಬಾರದು ಎಂದು ಸೂಚಿಸಿದ್ದೇವೆ. ಯಾಕೆಂದರೆ, ಅದನ್ನು ಧರಿಸಿದವರು ಉಗ್ರಗಾಮಿಗಳು ಎಂದು ಕರೆಸಿಕೊಳ್ಳುವ ಭಯವಿರುವುದರಿಂದ ಮತ್ತು ಇದು ನಮ್ಮ ಓಟಿನ ಬ್ಯಾಂಕುಗಳಿಗೂ ನೋವು ಉಂಟು ಮಾಡುವುದರಿಂದ ಮಾಸ್ಕ್‌ಗಳಿಗೆ ರಂಧ್ರ ಮಾಡಿ, ಮುಖ ಸಂಪೂರ್ಣವಾಗಿ ತೋರಿಸುವಂತಹ ಕಳಪೆ ಮಾಸ್ಕ್‌ಗಳನ್ನು ವಿತರಿಸಲಾಗುತ್ತಿದೆ ಎಂದವರು ಸ್ಪಷ್ಟಪಡಿಸಿದ್ದಾರೆ.

ಈ ಹಂದಿ ಜ್ವರಕ್ಕೆ ಎಷ್ಟೇ ಜನರು ಬಲಿಯಾದರೂ ಕೂಡ ಯಾರು ಕೂಡ ಒಂದಿನಿತೂ ಆತಂಕ ಪಡಬೇಕಾಗಿಲ್ಲ ಎಂದು ಸರಕಾರವು ಪದೇ ಪದೇ ಎಚ್ಚರಿಕೆ ಸಂದೇಶಗಳನ್ನು ನೀಡುತ್ತಿರುವುದಾಗಿ ಇಡೀ ದಿನ ವರದ್ದಿ ಮಾಡುವಂತೆ ಬೊಗಳೂರು ಬ್ಯುರೋಗೆ ಕೇಂದ್ರವು ನಿರ್ದೇಶಿಸಿದೆ.

Tuesday, August 11, 2009

ಚೆನ್ನೈ ಕನ್ನಡಿಗರ ಓಟಿಗಾಗಿ ಪೆರಿಯ ತಂಬಿ ಪ್ರತಿಮೆ!

(ಬೊಗಳೂರು ಪ್ರತಿಮಾ ಬ್ಯುರೋದಿಂದ)
ಬೊಗಳೂರು, ಆ.11- ಬೊಗಳೂರಿನಲ್ಲಿ ಜಾಗವಿಲ್ಲದಿರುವುದರಿಂದ ಕರುನಾಡಿನ ಮೂರ್ತಿಗಳೆಲ್ಲವನ್ನೂ ತಮಿಳುಕಾಡಿನಲ್ಲಿ ಸ್ಥಾಪಿಸುವ ಬಗ್ಗೆ ಉಭಯ ರಾಜ್ಯಗಳ ನಡುವೆ ಒಪ್ಪಂದವೊಂದು ಏರ್ಪಟ್ಟಿದ್ದು, ಪ್ರಥಮ ಹೆಜ್ಜೆಯಾಗಿ ಸರ್ವಜ್ಞ ಮೂರ್ತಿಯು ಚೆನ್ನೈಯ ಅಯ್ಯಯ್ಯಾನವರಂನಲ್ಲಿ ಸ್ಥಾಪನೆಗೊಳ್ಳುತ್ತಿದೆ.

ಆ ನಂತರದ ದಿನಗಳಲ್ಲಿ ಕರ್ನಾಟಕ ಕಂಡ ಮಹಾನ್ ನೇತಾರರಾದ ವೇದೇಗೌಡ ಹಾಗೂ ಚಿನ್ನ ತಂಬಿಯಾಗಿಬಿಟ್ಟ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪೆರಿಯ ತಂಬಿಯ ಪ್ರತಿಮೆಯನ್ನೂ ಸ್ಥಾಪಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಈ ಪೆರಿಯ ತಂಬಿಯ ಪ್ರತಿಷ್ಠಾಪನೆಗಾಗಿ ಕಪ್ಪನೆಯ ಕನ್ನಡಕದ ನಿರ್ಮಾಣವು ಸಮಸ್ಯೆಯ ಸಂಗತಿ. ಯಾಕೆಂದರೆ, ಪೆರಿಯ ತಂಬಿಯು ತಮಿಳು ಭಾಷಿಕರಾದರೂ, ಅವರು ಹಾಕಬೇಕಿರುವುದು "ಕನ್ನಡ"ಕ. ಈ 'ಕನ್ನಡ'ಕ ಹಾಕಿದ ಕಣ್ಣಿನಲ್ಲಿ ನೋಡಿಬಿಟ್ಟರೆ, ಅವರಿಗೇನಾದರೂ ಅಜ್ಞಾನದ ಪೊರೆ ಸರಿದು, ಸುಜ್ಞಾನದ ಸಂಗತಿಗಳು ಕಂಡರೆ ಮತ್ತು ಅವರು ಏನಾದರೂ ಸರಿಯಾಗಿಬಿಟ್ಟರೆ ಎಂಬುದೇ ಹಲವು ಮಂದಿಯ ಆತಂಕ.

ಸರಿಯಾಗುವುದು ಎಂದರೆ ಹೇಗೆ? ಚೆನ್ನೈಯಲ್ಲಿರುನ ಕನ್ನಡಿಗ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಅವರು ಕೂಡ ಚೆನ್ನೈ ಕನ್ನಡಿಗರಿಗಾಗಿ ಒಂದಷ್ಟು ಪ್ರತಿಮೆಗಳನ್ನು ನೀಡುತ್ತಾರೆ. ಚೆನ್ನೈ ಅಥವಾ ತಮಿಳುನಾಡಿನ ಕನ್ನಡಿಗರಿಗೆ ಕಾವೇರಿ ನೀರು ಕುಡಿಸಬೇಕೆಂಬ ಅದಮ್ಯ ಆಸೆಯನ್ನು ಕರ್ನಾಟಕ ಸರಕಾರದ ಮುಂದಿಡಬುದಾಗಿದೆ.

ಈ ಕಾರಣಕ್ಕಾಗಿಯೇ, ಇದರ ಆರಂಭದಲ್ಲಿ ಸರ್ವಜ್ಞನ ಬಳಿಕ ಎರಡನೇ ಹೆಜ್ಜೆಯಾಗಿ ನಡೆಯುವ ಕಾರ್ಯಕ್ರಮಕ್ಕೆ, ನಿಮ್ಮೂರಿನ ಮುಖ್ಯಮಂತ್ರಿಯವರ ಪೆರಿಯ ತಂಬಿಯ ಪ್ರತಿಮೆ ಸ್ಥಾಪಿಸಲಾಗುತ್ತದೆ ಎಂದು ತಮಿಳುಕಾಡು ಸರಕಾರವು ವಾಗ್ದಾನ ನೀಡಿದೆ. ಅದರ ಅನಾವರಣಕ್ಕೆ ಕರ್ನಾಟಕದ ಮಹಾನ್ ಹೋರಾಟಗಾರ ನಾಟಾಳ್ ವಾಗರಾಜ್ ಅವರನ್ನು ಆಹ್ವಾನಿಸುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಯಾವುದೇ ಮೂಲಗಳು ವರದಿ ಮಾಡಿಲ್ಲ.

ಅಲ್ಲಿಗೆ, ತಮಿಳ್ನಾಡು ಕನ್ನಡಿಗರಿಗೂ ನಮ್ಮ ಮುಖ್ಯಮಂತ್ರಿಯ ಪೆರಿಯ ತಂಬಿಯ ಮನೆಯಿದು ಎಂಬ ಎಮ್ಮೆಯ ಸಂಗತಿಯೂ ದೊರೆಯುತ್ತದೆ, ಮತ್ತು ನಮ್ಮ ಕಾವೇರಿ ನೀರು ನಮಗೆ ಸ್ವಲ್ಪಸ್ವಲ್ಪ ಸಿಗುತ್ತದೆ ಎಂಬ ಹಿರಿಮೆಯೂ ಇರುತ್ತದೆ. ಆದರೆ ಹೆಚ್ಚು ಲಾಭವಾಗಿದ್ದು ತಮಿಳುನಾಡಿನ ಸಹೋದರರಿಗೆ ಎಂಬ ಅಂಶವು ಕಪ್ಪು ಕನ್ನಡಕದ ಹಿಂದೆ ಮರೆಯಾಗಿತ್ತು ಎಂದು ಮೂಲಗಳು ತಿಳಿಸಿಲ್ಲ.

Monday, August 03, 2009

ಗೊರಿಲ್ಲಾಗೆ ಏಡ್ಸ್ ಹೆಗ್ಗಳಿಕೆ: ಮಾನವರ ಪ್ರತಿಭಟನೆ

(ಬೊಗಳೂರು ಸಂಚೋದನಾ ಬ್ಯುರೋದಿಂದ)
ಬೊಗಳೂರು, ಆ.3- ಈ ವರದಿಗೆ ಮಾತ್ರ ನಮ್ಮ ಬೊಗಳೂರಿನ ಸಮಸ್ತರು ತೀವ್ರ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಇದುವರೆಗೆ ಎಲ್ಲ ಹೆಗ್ಗಳಿಕೆಗಳೂ ಮಾನವರಿಗೇ ದೊರೆಯುತ್ತಿದ್ದವು. ಯಾಕೆಂದರೆ ಅವರಿಗೆ ತಲೆಯೊಳಗೆ ಮೆದುಳಿನಂತಹ ಅಂಗವೊಂದು ಇದೆ ಎಂಬುದನ್ನು ವಿಜ್ಞಾನಿಗಳು ಸಾಬೀತು ಮಾಡಿದ್ದರು.

ಆದರೆ ಈಗ ನೋಡಿದರೆ, ಏಡ್ಸ್ ಎಂಬ ರೋಗಕ್ಕೆ ಗೊರಿಲ್ಲಾಗಳು ಕಾರಣ ಎಂದು ಆ ಹೆಗ್ಗಳಿಕೆಯನ್ನೂ ಕಿತ್ತುಕೊಂಡು, ಮಾನವನನ್ನು ಮೆದುಳಿಲ್ಲದ ಪ್ರಾಣಿ ಎಂದು ಸಾಬೀತುಪಡಿಸಲು ಹೊರಟಿರುವ ವಿಜ್ಞಾನಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಹಾಗಿದ್ದರೆ, ವಾಷಿಂಗ್ಟನ್ನಿನಲ್ಲಿ ಪತ್ತೆಯಾದಂತೆ, ಮಹಿಳೆಯ ದೇಹದೊಳಗೆ ಗೊರಿಲ್ಲಾದಿಂದ ಬಂದಿರುವ ಏಡ್ಸ್ ಪತ್ತೆಯಾಗಿದ್ದು ಹೇಗೆ ಎಂಬುದು ಬೊಗಳೂರು ಜನತೆಯ ಶಂಕೆಯ ಬೆಂಕಿಗೆ ತುಪ್ಪ ಎರೆದ ವಿಷಯವಾಗಿದೆ. ಯಾಕೆಂದರೆ, ಈ ಮಹಿಳೆಯು ಖಂಡಿತವಾಗಿಯೂ ಗೊರಿಲ್ಲಾ ಆಗಿರಲಿಲ್ಲ ಎಂದು ಸಂಚೋದಕರು ಪತ್ತೆ ಹಚ್ಚಿದ್ದಾರೆ.

ಆದರೆ, ತೀರಾ ಸಂಚೋದನೆ ಮಾಡಲು ಹೋಗುವುದರಲ್ಲಿರುವಾಗ ದೊರೆತ ಅಂಶವೆಂದರೆ, ಮಾನವರ ತಲೆಯೊಳಗಿರುವ ಮೆದುಳನ್ನು ಗೊರಿಲ್ಲಾಗಳಿಗೆ ಇರಿಸಿದ್ದೇ ಕಾರಣವಿರಬಹುದು. ಯಾಕೆಂದರೆ ಇತ್ತೀಚೆಗೆ ತಂದೆಯಿಂದ ಮಗಳ ಮೇಲೆ ಅತ್ಯಾಚಾರ, ವಿದ್ಯಾರ್ಥಿನಿ ಮೇಲೆ ಶಿಕ್ಷಕರಿಂದ ಅತ್ಯಾಚಾರ ಮುಂತಾದ ಪ್ರಕರಣಗಳು ಹೆಚ್ಚು ಹೆಚ್ಚು ಆಗುತ್ತಿರುವುದರಿಂದ, ಮಾನವರ ಮೆದುಳನ್ನು ಗೊರಿಲ್ಲಾಗಳ ತಲೆಯೊಳಗೆ ಅದಲುಬದಲು ಮಾಡಿಕೊಂಡಿರುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಬೊಗಳೂರಿನ ಮಂದಿ ಆಮ ಶಂಕೆ ವ್ಯಕ್ತಪಡಿಸಿದ್ದಾರೆ.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...