Thursday, September 24, 2009

ಚಂದ್ರನಲ್ಲಿ ನೀರು: ಭೂಮಿಯಲ್ಲಿ ತಲ್ಲಣ!

(ಬೊಗಳೂರು ನೀರು ಪತ್ತೆ ಬ್ಯುರೋದಿಂದ)
ಬೊಗಳೂರು, ಸೆ.24- ಚಂದ್ರನಲ್ಲಿ ಸಾಕಷ್ಟು ನೀರು ಇದೆ ಎಂಬುದನ್ನು ತಿಳಿದುಕೊಂಡ ನಾಗರಿಕರು, ಇದೀಗ ಭೂಮಿಯ ಮೇಲಿರುವ ನೀರನ್ನೆಲ್ಲಾ ಬೇಕಾಬಿಟ್ಟಿ ಖರ್ಚು ಮಾಡಲಾರಂಭಿಸಿರುವುದು ಬೆಳಕಿಗೆ ಬಂದಿದೆ.

ಬೊಗಳೂರಿನ ಗಲ್ಲಿ ಗಲ್ಲಿಗಳ ಚರಂಡಿಯೆಲ್ಲಾ ಇದೀಗ ತುಂಬಿ ತುಳುಕಾಡುತ್ತಿದ್ದು, ಪ್ರವಾಹದ ಭೀತಿಯೂ ಉಂಟಾಗಿದೆ. ಬಹುಶಃ ಬುಧವಾರ ರಾತ್ರಿ ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಮಳೆಯಾಗಿರುವುದು ಕೂಡ ಇದೇ ಕಾರಣಕ್ಕೆ ಎಂದು ಅಜ್ಞಾನಿಗಳು ಶಂಕಿಸಿದ್ದಾರೆ.

ಸುದ್ದಿ ತಿಳಿದ ತಕ್ಷಣವೇ, ವರ್ಷಗಟ್ಟಲೆ ಸ್ನಾನ ಮಾಡದೇ ಇರುವವರೆಲ್ಲರೂ ಇದೀಗ ಸ್ನಾನ ಮಾಡಲು ಆರಂಭಿಸಿದ್ದಾರೆ ಎಂಬ ವರದಿಗಳು ರಾಜ್ಯದ ನಾನಾ ಕಡೆಗಳಿಂದ ಬರತೊಡಗಿವೆ.

ಚಂದ್ರನಲ್ಲಿ ಹೇಗಿದ್ದರೂ ಸಾಕಷ್ಟು ನೀರು ಇದೆಯಲ್ಲ, ಇನ್ನು ನಮಗೇತರ ಭಯ ಎಂದು ಬೊಗಳೂರಿನ ಪ್ರಜೆಯೊಬ್ಬರು ನೀರನ್ನೇ ಕುಡಿಯುತ್ತಾ, ನೀರಿನಲ್ಲೇ ಸ್ನಾನ ಮಾಡುತ್ತಾ, ನೀರನ್ನೇ ಹೊರಬಿಡುತ್ತಾ ಪ್ರಶ್ನಿಸಿದ್ದಾರೆ.

ಈ ವರದಿ ಪ್ರಕಟವಾಗತೊಡಗಿದಂತೆಯೇ, ದೇವಸ್ಥಾನದಲ್ಲಿ ಲೋಟೆಗಳಲ್ಲಿ ತೀರ್ಥ ಕೊಡಲು ಆರಂಭವಾಗಿರುವುದಾಗಿ ವರದಿಗಳು ತಿಳಿಸಿವೆ. ಮತ್ತೆ ಕೆಲವರು, ಚಂದ್ರನಲ್ಲಿ ನೀರಲ್ಲ, ಬೀರು ಲಭ್ಯವಾಗಿದೆ ಎಂದು ಅಪಾರ್ಥ ಮಾಡಿಕೊಂಡು, ಸಿಕ್ಕಾಪಟ್ಟೆ ಬೀರು ಕುಡಿದು ಕುಡಿದು ಸುಸ್ತಾಗಿ ಅಲ್ಲಲ್ಲಿ ಬಿದ್ದಿರುವ ವರದಿಗಳೂ ಬೊಗಳೂರು ಬ್ಯುರೋದ ಬಾಗಿಲಲ್ಲಿ ಬಂದು ಬೀಳತೊಡಗಿವೆ.

ಇನ್ನೊಬ್ಬ ನಾಗರಿಕರು ಹೇಳುವಂತೆ, UPAವಾಸ (©ಸುನಾಥ) ಸರಕಾರವಂತೂ ತಿನ್ನುವ ವಸ್ತುಗಳ ಬೆಲೆ ಬೇಕಾಬಿಟ್ಟಿಯಾಗಿ ಏರಿಸಿಬಿಟ್ಟಿದೆ. ಇನ್ನು ಬದುಕುವುದು ಹೇಗೆಂಬ ಚಿಂತೆ ಆವರಿಸಿಬಿಟ್ಟಿತ್ತು. ಇದೀಗ ನೀರು ಸಿಕ್ಕಿರುವುದರಿಂದ ನೀರನ್ನೇ ಸಾಕಷ್ಟು ಬಾರಿ ಕುಡಿದು ಬದುಕಬಹುದು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಚಂದ್ರನಲ್ಲಿ ನೀರು ಪತ್ತೆಯಾಗಿರುವ ಸಂಭ್ರಮದ ಸಂಗತಿ ಕೇಳಿ, ಅಲ್ಲಲ್ಲಿ ಹಾಲಿನಲ್ಲಿ ನೀರಿನಂಶ ಹೆಚ್ಚಾಗಿರುವುದೂ ಕಂಡುಬಂದಿದೆ. ಇದು ಹಾಲಿನ ಸಾಂದ್ರತೆ ಪತ್ತೆ ಯಂತ್ರದಲ್ಲಿ ಶೇ.90ರಷ್ಟು ದಾಖಲಾಗಿದೆ ಎಂದು ಬೊಗಳೂರು ರದ್ದಿಗಾರರ ಮೂಲಗಳು ತಿಳಿಸಿವೆ.

ಈ ಮಧ್ಯೆ, ಕೊಳಚೆ ನೀರನ್ನು ಚೆನ್ನಾಗಿ ಸೋಪು ಹಾಕಿ ತೊಳೆದು ಶುದ್ಧವಾಗಿ ಕಾಣಿಸುವಂತೆ ಮಾಡಿ ಬಾಟಲಿಯಲ್ಲಿ ತುಂಬಿಸಿ ಮಾರಾಟ ಮಾಡುತ್ತಿದ್ದ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಪೂರೈಸುವ ಕಂಪನಿಗಳು ಅಂಗಾತ ನೆಲಕಚ್ಚತೊಡಗಿವೆ ಎಂದು ಮೂಲಗಳು ವರದ್ದಿ ಸುರಿದಿವೆ. ತೀವ್ರ ಬೆಲೆ ಕುಸಿತ ಕಂಡ ಹಿನ್ನೆಲೆಯಲ್ಲಿ, ಈ ಕಂಪನಿಗಳು ನೀರನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿರುವ ವರದ್ದಿಗಳು ಅಲ್ಲಲ್ಲಿಂದ ಬೊಗಳೂರು ಬ್ಯುರೋಗೆ ಬಂದು ತಲುಪತೊಡಗಿವೆ.

ಇಷ್ಟು ಮಾತ್ರವಲ್ಲದೆ, ಅಮೆರಿಕದಲ್ಲಿ ಟಾಯ್ಲೆಟ್ ಪೇಪರ್ ಉದ್ಯಮವೂ ಮಕಾಡೆ ಮಲಗಿದ್ದು, ಎಲ್ಲರೂ ಇದೀಗ ನೀರು ಉಪಯೋಗಿಸಲಾರಂಭಿಸಿರುವುದಾಗಿ ನಮ್ಮ ಬಾತ್ಮೀದಾರರಾದ ಬರಾಕ್ ಹೋಗಾಕ್ ಒಬಾಮ ಅವರು ಬೊಗಳೂರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ಇನ್ನೊಂದೆಡೆ, ಚಂದ್ರನಲ್ಲಿ ನೀರು ಪತ್ತೆ ಮಾಡಿರುವುದರ ಹಿಂದೆ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸುವ ಸಂಚು ಇದೆ ಎಂದು ಕಾನ್guess ವಕ್ತಾರರು ಅವಸರದ ಪತ್ರಿಕಾಗೋಷ್ಠಿ ಕರೆದು ದೂರಿದ್ದಾರೆ. ರಮ್ಜಾನ್ ಮಾಸ ಮುಗಿದ ತಕ್ಷಣವೇ ಆ ಚಂದ್ರನಲ್ಲಿ ನೀರು ಇದೆ ಎಂದೆಲ್ಲಾ ವರದ್ದಿ ಮಾಡಿರುವುದು, ಚಂದ್ರನನ್ನು ಮುಂದೆಂದೂ ಕಾಣಿಸದಂತೆ ಮಾಡುವ ಸಂಚು ಎಂದು ಅವರು ದೂರಿದ್ದಾರೆ. ಮಾತ್ರವಲ್ಲದೆ, ಚಂದ್ರನ ಮೇಲೆ ನೀರು ಇರುವಿಕೆಯನ್ನು ಪತ್ತೆ ಹಚ್ಚಿದ ಇಸ್ರೋ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ಚಂದ್ರನಲ್ಲಿರುವ ನೀರಿನಲ್ಲಿ ಅಲ್ಪಸಂಖ್ಯಾತರಿಗೆ, ದಲಿತರಿಗೆ ಮೀಸಲಾತಿ ಇರಬೇಕು. ಒಳಮೀಸಲಾತಿಯನ್ನೂ ನೀಡಬೇಕು ಎಂದು ಒತ್ತಾಯಿಸತೊಡಗಿದ್ದಾರೆ.

ಇಷ್ಟೆಲ್ಲದರ ನಡುವೆ, ಚಂದ್ರನಿಗೊಂದು ಕೊಳವೆ ಸಿಕ್ಕಿಸಿ, ಅಲ್ಲಿಂದ ನೀರು ತರುವ ಅಥವಾ ಕದಿಯುವ ಹುನ್ನಾರವೂ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.

Tuesday, September 22, 2009

ಬೆಲೆ ಏರಿಕೆಗೆ 'ಆಟೋಮ್ಯಾಟಿಕ್' ಪ್ರತಿಭಟನೆ

(ಬೊಗಳೂರು ಅಪ್ರತಿಭ-ಟನೆ ಬ್ಯುರೋದಿಂದ)
ಬೊಗಳೂರು, ಸೆ.22- ಚೀಲ ತುಂಬಾ ನೋಟುಗಳನ್ನು ಹಾಕಿಕೊಂಡು ಜೇಬು ತುಂಬಾ ದಿನಸಿ ಸಾಮಾನು ಮತ್ತು ಒಂದು ಸಿಂಗಲ್ ತರಕಾರಿ ತುಂಡು ತರುವ ಸಾಧ್ಯತೆಯಿರುವ ಈ ಬೆಲೆ ಏರಿಕೆ ದಿನಗಳಲ್ಲಿ, ಕೇಂದ್ರದ ಪೀಪಿಏ ಸರಕಾರದ ನಿರ್ಲಕ್ಷ್ಯ ಧೋರಣೆಯನ್ನು ಪ್ರತಿಭಟಿಸಿ ಬೊಗಳೂರು ನಾಗರಿಕರು ಸ್ವಯಂಚಾಲಿತವಾಗಿ ಪ್ರತಿಭಟಿಸತೊಡಗಿದ್ದಾರೆ.

ವಿಶೇಷವೆಂದರೆ, ಈ ಪ್ರತಿಭಟನಾ ಆಂದೋಲನಕ್ಕೆ ಯಾರ ಕುಮ್ಮಕ್ಕು ಕೂಡ ಇಲ್ಲದಿರುವುದು ಮತ್ತು ಯಾರದ್ದೇ ಒತ್ತಡ, ಸಲಹೆ ಇತ್ಯಾದಿಗಳು ಅನಗತ್ಯವಾಗಿರುವುದು.

ಈ ಮಧ್ಯೆ, ಬೆಲೆ ಏರಿಕೆ ನಿಯಂತ್ರಿಸುವ ಬದಲು ನಾವು ಕಡಿಮೆ ಖರ್ಚು ಮಾಡುತ್ತಿದ್ದೇವೆ, ನೀವೂ ಕಡಿಮೆ ಖರ್ಚು ಮಾಡಿ ಎಂಬ ಸಂದೇಶ ನೀಡಲು ಕೇಂದ್ರದ Unprecedented Price-rise Agenda ಸರಕಾರ ನಿರ್ಧರಿಸಿದೆ.

ಸಚಿವರು, ಸಂಸದರು ಮತ್ತು 'ಸೂಪರ್ ಪ್ರಧಾನಿನಿ'ಯರೆಲ್ಲರೂ ಇಕಾನಮಿ ಕ್ಲಾಸ್ ಎನ್ನುತ್ತಾ ಬೊಗಳೆ ರಗಳೆ ಬ್ಯುರೋಗಿಂತಲೂ ಜೋರಾಗಿ ಬೊಗಳೆ ಬಿಡತೊಡಗಿರುವುದು ನಮ್ಮ ಬ್ಯುರೋದ ಅಸ್ತಿತ್ವಕ್ಕೇ ಬಂದ ಸವಾಲು ಆಗಿದೆ. ಕೇಂದ್ರದಲ್ಲಂತೂ ಸಾಕಷ್ಟು ಬೊಗಳೆ ಬ್ಯುರೋಗಳು ಅಣಬೆಗಳಂತೆ ಮೇಲೇಳುತ್ತಿವೆ. ಈ ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ದುಂದುವೆಚ್ಚದ ಮಿತವ್ಯಯ ಬೋಧಿಸುತ್ತಾ ಬೊಗಳೆ ಬ್ಯುರೋ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆಯಾದರೂ, ಅದನ್ನು ಎಲ್ಲಿಯೂ ತೋರ್ಪಡಿಸಿಕೊಳ್ಳುತ್ತಿಲ್ಲ. ಜಾನುವಾರು ದರ್ಜೆಯಲ್ಲಿ ಪ್ರಯಾಣ ಮಾಡುವ ಸಲಹೆ ನೀಡಿದ ಕೇಂದ್ರದ ವಿದೇಶದ ಅಂಗವಾಗಿರುವ ಸಚಿವ ತಶಿ ಶರೂರ್ ಅವರನ್ನು ಪಶುಸಂಗೋಪನಾ ಖಾತೆ ಸಚಿವರನ್ನಾಗಿಸಬೇಕು ಎಂದು ಬೊಗಳೂರು ಬ್ಯುರೋ ಬಾಯಿಬಿಟ್ಟು ಆಗ್ರಹಿಸತೊಡಗಿದೆ.

ಇದಕ್ಕಾಗಿ ದೇಶದ ಪ್ರಜೆಗಳೆಲ್ಲರನ್ನೂ ಜಾನುವಾರುಗಳೆಂದು ಪರಿಗಣಿಸಿ, ಅವರಿಗೆ ದಿನಸಿ ಆಹಾರದ ಅಗತ್ಯವಿಲ್ಲ, ಅಕ್ಕಿಯಂತೂ ತೀರಾ ಅನಗತ್ಯ (ಇದಕ್ಕಾಗಿ ಅದರ ಬೆಲೆ 35 ರೂಪಾಯಿಗೂ ಹೆಚ್ಚು ಮಾಡಲಾಗಿದೆ). ಈ ಎಲ್ಲ ದುಂದುವೆಚ್ಚವನ್ನು ನಿಲ್ಲಿಸಿ ಮಿತವ್ಯಯ ಮಾಡಬೇಕು ಎಂದು ಪರಿಗಣಿಸಿರುವ ಕೇಂದ್ರದ ಸರಕಾರದ ಪಕ್ಷೋದ್ಧಾರದ ಗಮನವನ್ನು ಇತ್ತ ಕಡೆ ಸೆಳೆಯುವುದಕ್ಕಾಗಿ ಸಕಲ ಜನ-ಜಾನುವಾರುಗಳೊಂದಿಗೆ ಅಪ್ರತಿಭ-ಟನೆ ಮಾಡಲು ನಿರ್ಧರಿಸಲಾಗಿದೆ.

ಈ ಪ್ರತಿಭಟನೆಯ ಅಂಗವೇ ಬಾಯ್ಮುಚ್ಚುವ ಅಂಗ. ಅಂದರೆ ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರಿಗೆ ಯಾವುದೇ ಆಹಾರ ಪದಾರ್ಥ ಕೊಳ್ಳುವುದು ಅಸಾಧ್ಯವಾಗಿರುವುದರಿಂದ ಆಟೋಮ್ಯಾಟಿಕ್ ಆಗಿ ಉಪವಾಸ ಅನ್ನ ಸತ್ಯಾಗ್ರಹ ಕೈಗೊಳ್ಳಲಾಗುತ್ತದೆ. ಇದು ಬೊಗಳೂರು ಜನತೆಗೆ ಗಾಂಧೀಜಿಯೇ ಹೇಳಿಕೊಟ್ಟಿದ್ದು, ಈಗಿನ ಸಾನಿಯಾ ಗಾಂಧೀಜಿಗಳು ಕೂಡ ಅದನ್ನೇ ಅನುಸರಿಸುವಂತೆ ಜನತೆಗೆ ಕರೆ ನೀಡಿರುವುದನ್ನು ಬೊಗಳೂರು ಬ್ಯುರೋ ಮಾತ್ರವೇ ವರದಿ ಮಾಡಿದೆ.

ಇದನ್ನು ಕೇಳಿ ಮಾನ್ಯ ನಿಧಾನ ಮಂತ್ರಿಗಳು ಮತ್ತವರ ಸಚಿವರ ಬಳಗವು ಮಾಧ್ಯಮಗಳ ಕಣ್ಣಿಗೆ ಬೀಳದಂತೆ ನಾಪತ್ತೆಯಾಗಿ ಬೊಗಳೂರಿನಲ್ಲಿ ಅವಿತು ಕೂತಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.

Thursday, September 17, 2009

ತಿರುಪತಿ ಲಡ್ಡು ಮಾತ್ರವಲ್ಲ, ನಾಮಕ್ಕೂ ಪೇಟೆಂಟ್!

(ಬೊಗಳೂರು ನಾಮ ಹಾಕಿಸಿಕೊಳ್ಳೋ ಬ್ಯುರೋದಿಂದ)
ಬೊಗಳೂರು, ಸೆ.17- ತಿರುಪತಿಯ ನಕಲಿ ಲಡ್ಡು ತಯಾರಿಸದಂತೆ ನಿರ್ಬಂಧ ವಿಧಿಸಿರುವ ಬೆನ್ನಲ್ಲೇ, ನಾಮ ಹಾಕಿಸಿಕೊಳ್ಳುವುದಕ್ಕೂ ಪೇಟೆಂಟ್ ಮಾಡಿಸಬೇಕು ಎಂದು ಬೊಗಳೂರು ಪ್ರಜೆಗಳು ವ್ಯರ್ಥಾಲಾಪ ಆರಂಭಿಸಿದ್ದಾರೆ.

ಈಗಾಗಲೇ ನಮ್ಮನ್ನು ಆಳಲೆಂದು ನಾವು ಆರಿಸಿ ಕಳುಹಿಸಿದವರೆಲ್ಲರೂ ಬೊಗಳೂರಿನ ಬಡ ಪ್ರಜೆಗಳಿಗೆ ಸಾಕಷ್ಟು ಬಾರಿ ನಕಲಿ ಮೂರ್‌ನಾಮಗಳನ್ನು ಹಾಕಿದ್ದಾರೆ. ಕೇಂದ್ರ ಸರಕಾರವಂತೂ ತಿನ್ನುವ ಆಹಾರ ವಸ್ತುಗಳ ಬೆಲೆಯನ್ನು ಬೇಕಾಬಿಟ್ಟಿ ಏರಿಸಿ, ಆರಾಮವಾಗಿ ಪ್ರಯಾಣದಲ್ಲಿ ಮಿತವ್ಯಯ ಮಾಡಿ ಎಂಬಿತ್ಯಾದಿ ಗಿಮಿಕ್‌ಗಳ ಮೂಲಕ ಈಗಾಗಲೇ ಪ್ರಜೆಗಳಿಗೆ ದೊಡ್ಡ ದೊಡ್ಡ ಮೂರು ನಾಮ ಹಾಕಲಾರಂಭಿಸಿದೆ. ಇದೇ ರೀತಿ ರಾಜ್ಯ ಸರಕಾರದಲ್ಲಿ ಭದ್ರವಾಗಿ ನೆಲೆಯಾಗಿರುವ ಮಂತ್ರಿ-ಮಾಗಧರು, ಅಧಿಕಾರಿಗಳು ಕೂಡ ಗಣಿ ಲೂಟಿ, ಇದ್ದಿಲು-ಮಣ್ಣು-ಮಸಿ ಹಗರಣ, ಭೂಕಬಳಿಕೆ ಮುಂತಾದ ಹಗರಣಗಳು, ವಿದ್ಯುತ್ ಕೊಡುತ್ತೇವೆ ಎಂಬೋ ಭರವಸೆಗಳ ಹೆಸರಲ್ಲಿ ನಕಲಿ ನಾಮ ಹಾಕುತ್ತಿರುವುದನ್ನು, ನಮ್ಮನ್ನಾಳುವವರ ಅಂದ-ಚಂದ-ವೈಭವವನ್ನೆಲ್ಲ ಕಣ್ಣಾರೆ ಕಾಣಲಾರಂಭಿಸಿದ್ದಾರೆ.

ಚೀಲ ತುಂಬಾ ಹಣ ಒಯ್ದು, ಜೇಬು ತುಂಬಾ ದಿನಸಿ ಸಾಮಗ್ರಿ ಖರೀದಿಸಬೇಕಾಗಿರುವ ಈ ದಿನಗಳಲ್ಲಿ, ನಾಮ ಹಾಕಿಸಿಕೊಳ್ಳೋದಕ್ಕೂ ಕೆಲವರ ಬಳಿ ಹಣವಿಲ್ಲದಿರುವುದು ಕಂಡುಬಂದಿದೆ. ಹಿಂದೆ, ವಿನಿವಿಂಕ್‌ನಿಂದ ಬಿದ್ದ ನಾಮದಿಂದಲೇ ಪ್ರಜೆಗಳು 'ಚಾ'ತರಿಸಿಕೊಂಡಿಲ್ಲ, ಅದರ ನಡುವೆ ಆ ಸ್ಕೀಮು, ಈ ಸ್ಕೀಮು ಎಂಬಿತ್ಯಾದಿ ಸಾಲೋಸಾಲಾಗಿ ಬ್ಲೇಡು ಕಂಪನಿಗಳು ನಾಮ ಹಾಕುತ್ತಲೇ ಇರುತ್ತವೆ. ಈ ನಾಮದ ಮಹಿಮೆ ಅಪಾರವಾಗಿ, ನಾಮದ ಬಲ ಜೋರಾಗಿ ಜನರು ಜಾಗತಿಕ ಹಣಕಾಸು ಬಿಕ್ಕಟ್ಟಿನ ಮಧ್ಯೆ ಅಳಿದುಳಿದ ಬಿಡಿಗಾಸನ್ನೂ ಕಳೆದುಕೊಳ್ಳತೊಡಗಿರುವುದು ಈ ಪೇಟೆಂಟ್ ಕುರಿತ ಜನಾಗ್ರಹಕ್ಕೆ ಮೂಲ ಹೇತುವಾಗಿದೆ ಎಂದು ತಿಳಿದುಬಂದಿದೆ.

ಈ ನಡುವೆಯೇ, ನಾಲ್ಕನೇ ನಾಮ ಹಾಕಲು ಭಾರೀ ಸಿದ್ಧತೆ ನಡೆದಿದ್ದು, ವಿಮಾನ ಪ್ರಯಾಣದಲ್ಲಿ ಎಕಾನಮಿ ದರ್ಜೆ, ಬ್ಯುಸಿನೆಸ್ ದರ್ಜೆ, ಎಕ್ಸಿಕ್ಯೂಟಿವ್ ದರ್ಜೆ ಮುಂತಾದವುಗಳು ಮಾತ್ರವಲ್ಲದೆ, ಹಸುಗಳ ದರ್ಜೆ, ನಾಯಿ-ನರಿಗಳ ದರ್ಜೆಗಳನ್ನೂ ತೆರೆಯುವ ಮೂಲಕ ಮತ್ತೊಂದು ನಾಮದ ಸ್ಮರಣೆಯೊಂದು ಕೇಳಿಬರುತ್ತಿದೆ ಎಂದು ಇಲ್ಲಿ ವರದಿಯಾಗಿರುವುದು, ಬಡ ಪ್ರಜೆಗಳೆಲ್ಲರೂ, ಇಷ್ಟೆಲ್ಲಾ ನಾಮಗಳನ್ನು ಎಲ್ಲಿ ಧರಿಸುವುದು ಎಂಬ ಕುರಿತು ಕಕ್ಕಾಬಿಕ್ಕಿಯಾಗಿದ್ದಾರೆ ಎಂದು ಅಪ್ರತ್ಯಕ್ಷದರ್ಶಿ ವರದಿಗಾರರು ವರದ್ದಿ ತಂದು ಸುರುವಿದ್ದಾರೆ.

ಇದ್ದ ಬದ್ದವರ ಕೈಯಲ್ಲಿ ನಮಗೆ ನಾಮ ಹಾಕಿಸಿಕೊಳ್ಳೋದೇ ಆಯ್ತು. ಹೀಗಾಗಿ ಈ ತಿರುಪತಿ ಲಡ್ಡಿನ ಬದಲು, ತಿರುಪತಿಯ ನಕಲಿ ನಾಮ ಹಾಕುವ ಈ ಪ್ರಕ್ರಿಯೆಗಳಿಗೆ ಪೇಟೆಂಟ್ ಮಾಡಿಸಿಟ್ಟರೆ ಸ್ವಲ್ಪವಾದರೂ ಉಸಿರುಬಿಡಬಹುದು ಎಂಬುದು ಬೊಗಳೂರು ಪ್ರಜೆಗಳ ಲೆಕ್ಕಾಚಾರ.

Monday, September 14, 2009

Blame-Game: ನಿಮಗೆ ಬ್ಲೇಮ್, ನಮಗೆ ಗೇಮ್ ಎಂದ ಪಾಕ್!

(ಬೊಗಳೂರು Blame ಕ್ರೀಡಾ ಬ್ಯುರೋದಿಂದ)
ಬೊಗಳೂರು, ಸೆ.14- ಮುಂಬೈ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತವು blame ಮಾತ್ರ ಮಾಡಬೇಕು, game ನಮಗೆ ಇರಲಿ ಎಂದು ಪಾತಕಿ ಸ್ತಾನವು ಸ್ಪಷ್ಟಪಡಿಸಿದೆ.

ಮುಂಬೈ ಮೇಲೆ ನಡೆದ ದಾಳಿಯ ವರ್ಷಾಚರಣೆ ಸಮೀಪಿಸುತ್ತಿರುವಂತೆಯೇ ಉಭಯ ರಾಷ್ಟ್ರಗಳ ನಡುವೆ ಸೌಹಾರ್ದತೆ ಏರ್ಪಡಲು ಹೊಸ ಹೊಸ ಸಾಧ್ಯತೆಗಳನ್ನು ಪರದಾಡಿ ಪರದಾಡಿ ಹುಡುಕಲಾಗುತ್ತಿದ್ದು, ಕಳೆದ ಒಂದು ವರ್ಷದಿಂದ "ಉಗ್ರರ ವಿರುದ್ಧ ಕ್ರಮ ಕೈಗೊಳ್ಳೀssssssssssss, ಇಲ್ಲವಾದರೆ ನಾವೇ ಕ್ರಮ ಕೈಗೊಳ್ಳುತ್ತೇವೆ" ಎಂದು ಪದೇ ಪದೇ ಹೇಳುತ್ತಿದ್ದ ಭಾರತ ಸರಕಾರವು ಪಾತಕಿಸ್ತಾನದ ಮೇಲೆ Blame ಮಾತ್ರ ಮಾಡಿ, Game ಆಡಲು ಅದಕ್ಕೆ ಬಿಟ್ಟಿರುವುದಾಗಿ ಮೂಲಗಳು ವರದ್ದಿ ಮಾಡಿವೆ.

"ನೀವು ಬ್ಲೇಮ್ ಮಾಡಿ, ನಾವು ಗೇಮ್ ಆಡುತ್ತೇವೆ" ಎಂದು ಇತ್ತೀಚೆಗೆ ಪಾತಕಿಸ್ತಾನದಿಂದ ಭಾರತದ ನಿಧಾನಮಂತ್ರಿ ಸೋನಿಯಾ ಸಿಂಗ್.... ಅಲ್ಲಲ್ಲ ಮನಮೋಹಕ ಸಿಂಗ್ ಅವರಿಗೆ ಪಾಕಿಸ್ತಾನದ ಸರಕಾರದ ಮುಖ್ಯಸ್ಥರೂ ಆಗಿರುವ ಐಎಸ್ಐ ಮುಖ್ಯಸ್ಥರು ಪತ್ರ ಬರೆದಿರುವುದಾಗಿ ಮೂಲಗಳು ಬೊಗಳೆ-ರಗಳೆಗೆ ತಿಳಿಸಿಲ್ಲ.

ಮುಂಬೈ ಮೇಲೆ ನಮ್ಮವರು ದಾಳಿ ಮಾಡಿ ಒಂದು ವರ್ಷವಾಗ್ತಾ ಬಂದ್ರೂ ನಿಮ್ ಕೈಯಲ್ಲಿ ಏನೂ ಮಾಡಲಾಗಿಲ್ಲ ಎಂಬ ಕುಹಕ ನಗೆಯೊಂದು, ಜಮ್ಮು ಮತ್ತು ಕಾಶ್ಮೀರದಲ್ಲಿ ಮಾಮೂಲಿ ಪ್ರಕ್ರಿಯೆಯಾಗಿಬಿಟ್ಟಿರುವ, ಗಡಿ ನಿಯಂತ್ರಣ ರೇಖೆ ದಾಟಿ ನುಸುಳುವ ಪ್ರಕ್ರಿಯೆಯ ಮೂಲಕ ಭಾರತ ಪ್ರವೇಶಿಸಿರುವುದಾಗಿ ಬೊ.ರ. ಬ್ಯುರೋದ ಮಂದಿ ಕದ್ದು ಮುಚ್ಚಿ ವರದ್ದಿ ತಂದು ಹಾಕಿದ್ದಾರೆ.

(ಕೆಲವಾರು ದಿನಗಳಿಂದ ಬೊಗಳೂರು ಬ್ಯುರೋ ಸಿಕ್ಕಾಪಟ್ಟೆ ಧೂಳು ತಿನ್ನುತ್ತಿದ್ದ ಕಾರಣ ಚಾ-ತರಿಸಿಕೊಂಡು ಬಳಿಕ ಧೂಳೊರೆಸಿ ವಾಪಸ್ ಮರಳಲಾಗಿದೆ. ಆದರೆ, ಈ ಸಮಯದಲ್ಲಿ ನಮ್ಮ ಬೊಗಳೆ-ರಗಳೆ ಪತ್ರಿಕೆ ಲಭಿಸದ ದಾರವಿಲ್ಲದ ಚಂದಾರಹಿತರು, ಅಡ್ಜಸ್ಟ್ ಮಾಡಿಕೊಂಡು, ಮುಂದಿನ ತಿಂಗಳ ಬಿಲ್‌ನಲ್ಲಿ ಸೇರಿಸಿ ನಮಗೆ ಪಾವತಿಸಲು ಕೋರಲಾಗಿದೆ.)

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...