Tuesday, October 13, 2009

ಸಂತ್ರಸ್ತ ಗ್ರಾಮಗಳ ಸ್ಥಳಾಂತರ: ಬೊಗಳೂರಲ್ಲಿ ಆತಂಕ

(ಬೊಗಳೂರು ಸಂತ್ರಸ್ತ ಸ್ಥಳಾಂತರ ಬ್ಯುರೋದಿಂದ)
ಬೊಗಳೂರು, ಅ.13- ಪ್ರವಾಹದ ಭೀತಿ ಎದುರಿಸುತ್ತಿರುವ ಹಳ್ಳಿಗಳನ್ನೇ ಸ್ಥಳಾಂತರಿಸುವ ಸರಕಾರದ ಕಾರ್ಯಕ್ರಮಕ್ಕೆ ಬೊಗಳೂರು ಒಂದು ಕಡೆಯಿಂದ ಸ್ವಾಗತಿಸಿದೆ ಮತ್ತು ಇನ್ನೊಂದು ಕಡೆಯಿಂದ ವಿರೋಧಿಸುತ್ತಿದೆ ಎಂದು ವರದಿಯಾಗಿದೆ.

ಓಟು ಪಡೆದು ನಿಧಾನಸಭೆಗೆ ಆಯ್ಕೆಯಾಗಿ ಅಲ್ಲಿ ಐದು ವರ್ಷಗಳ ಕಾಲ ನಿಧಾನವಾಗಿಯೇ ನಿದ್ದೆ ಮಾಡಿದ ಬಳಿಕ, ಮತ್ತೆ ಓಟು ಬರುವ ಹೊತ್ತಿಗೆ ನಿಧಾನವಾಗಿ ಮೇಲೆದ್ದು, ಸಕಲ ಮಂತ್ರಿ ಗಡಣ, ಹಿಂಬಾಲಕರನ್ನು ಕರೆದುಕೊಂಡು ಪ್ರವಾಹದೋಪಾದಿಯಲ್ಲಿ ಕ್ಷೇತ್ರಗಳಿಗೆ ಮಂತ್ರಿ ಮಾಗಧರು ಆಗಮಿಸುವುದರಿಂದ ಬೊಗಳೂರು ಸೇರಿದಂತೆ ಕೆಲವು ಹಳ್ಳಿಗಳ ಜನರು ಭಯಭೀತರಾಗಿದ್ದಾರೆ.

ಈ ರೀತಿ ಜಾರಕಾರಣಿಗಳ ಪ್ರವಾಹ ಬರುವ ಹಳ್ಳಿಗಳನ್ನು ಸ್ಥಳಾಂತರ ಮಾಡಿದರೆ, ಅಥವಾ ಇಂತಹಾ ಪ್ರವಾಹಗಳು ಮತ್ತೆ ಬಾರದಂತೆ ತಡೆದರೆ ಪುಣ್ಯ ಕಟ್ಟಿಕೊಟ್ಟಂತಾಗುತ್ತದೆ ಎಂದು ಬೊಗಳೂರಿನ ಜಾರಕೀಯ ಪ್ರವಾಹ ಸಂತ್ರಸ್ತರಲ್ಲೊಬ್ಬರಾದ ಬೊಗಳೇದಾಸ ಅವರು ಪ್ರತಿಕ್ರಿಯಿಸಿದ್ದಾರೆ.

ಈ ಗ್ರಾಮಗಳನ್ನು ನಿಧಾನಸೌಧ ಪಕ್ಕದಲ್ಲೇ ಇರುವ ಬೆಂಗಳೂರಿಗೆ ಸ್ಥಳಾಂತರಿಸಿದರೆ ಮತ್ತೂ ಉತ್ತಮ. ಅಲ್ಲಿನ ರಸ್ತೆಗಳಲ್ಲೇ ಹೇಗೂ ಬೇಕಾದಷ್ಟು ಹೊಂಡಾ-ಗುಂಡಿಗಳಿವೆ. ಅದರಲ್ಲೇ ಒಂದಷ್ಟು ಬೀಜ ಬಿತ್ತಿ ಕೃಷಿ ಮಾಡಬಹುದು ಎಂಬುದು ಅವರ ಮುಂದಾಲೋಚನೆ.

ಹಾಗಿದ್ದರೆ ಕಾಂಕ್ರೀಟು ಕಾಡುಗಳ ಮಧ್ಯೆ, ಕೃಷಿಗಾಗಿ ಫಲವತ್ತಾದ ಮಣ್ಣು ಬೇಡವೇ ಎಂಬ ಪ್ರಶ್ನೆಗೆ ಉತ್ತರಿಸಿದ ಬೊಗಳೇದಾಸ ಅವರು, ಸಿಕ್ಕೇ ಸಿಗುತ್ತದಲ್ಲ. ಹೇಗೂ ರಸ್ತೆಗಳ ಹೊಂಡಾಗುಂಡಿಗಳಿಂದ ಸಾಕಷ್ಟು ಧೂಳು ಅಥವಾ ಮಳೆ ಬಂದರೆ ಕೆಸರು ಮೇಲೇಳುತ್ತದೆ. ಪಕ್ಕದ ಕಟ್ಟಡಗಳಿಗೆ ರಾಚಿದ ಈ ಧೂಳು ಮತ್ತು ಕೆಸರನ್ನು ತೆಗೆದು ನಾವು ರಸ್ತೆಯಲ್ಲಿ ನೆಟ್ಟ ಗಿಡಗಳ ಬುಡಕ್ಕೆ ಹಾಕುತ್ತೇವೆ. ಇದು ಫಿಲ್ಟರ್ ಆದ ಮಣ್ಣು ಆಗಿದ್ದು, ಸಾಕಷ್ಟು ಫಲವತ್ತಾಗಿರುತ್ತದೆ ಎಂದವರು ಸ್ಪಷ್ಟನೆ ನೀಡಿದರು.

ಈಗ ಸ್ಥಳಾಂತರವನ್ನು ಸ್ವಾಗತಿಸುವವರು, ಅದನ್ನು ವಿರೋಧಿಸಲು ಏನು ಕಾರಣವಿದೆ ಎಂದು ಕೇಳಿದಾಗ, ತತ್ತರಿಸಿ ಉತ್ತರಿಸಿದ ಬೊಗಳೆದಾಸ, ಅವರು ಆ ಗ್ರಾಮಗಳನ್ನು ಏನಾದರೂ ಬೊಗಳೂರಿಗೆಯೇ ಸ್ಥಳಾಂತರಿಸಿದರೆ ಎಂಬುದೇ ನಮ್ಮ ಆತಂಕ ಎಂದರು.

ಇದಕ್ಕೇಕೆ ಆತಂಕಪಡಬೇಕು ಎಂದು ಪ್ರಶ್ನಿಸಿದಾಗ, ಎಲ್ಲ ಜಾರಕಾರಣಿಗಳ ಪ್ರವಾಹವು ಇಲ್ಲಿಗೆ ಬಂದರೆ ಅವರನ್ನು ಇಡಲು ಇಲ್ಲಿ ಜಾಗ ಇಲ್ಲ. ಅದಕ್ಕಾಗಿಯೇ ಶೋಕೇಸುಗಳನ್ನು ಸಿದ್ಧಪಡಿಸಬೇಕಾಗುತ್ತದೆ. ಒಂದಷ್ಟು ಜನರನ್ನು ಒಟ್ಟುಗೂಡಿಸಿ ಕೈಗೊಂದು ಮೈಕು ನೀಡುವ ಅನಿವಾರ್ಯತೆ ಎದುರಾಗುತ್ತದೆ. ಹೀಗಾಗಿ ಇಲ್ಲಸಲ್ಲದ ಕೆಲಸಕ್ಕೆ ಬೊಗಳೂರಿಗರು ಆತಂಕಿತರಾಗಿದ್ದಾರೆ ಎಂದರವರು.

Friday, October 09, 2009

ನೋBell ಶಾಂತಿ ಪ್ರಶಸ್ತಿ ಒಬಾಮ ಅಲ್ಲ, ಒಸಾಮ!

(ಬೊಗಳೂರು Barking News! ಬ್ಯುರೋದಿಂದ)
ಬೊಗಳೂರು, ಅ.9- ಅಮೆರಿಕ ಅಧ್ಯಕ್ಷ ಒಬಾಮ ಅವರಿಗೇ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ ಘೋಷಿಸಲಾಗಿದೆ ಎಂಬ ಮಾಧ್ಯಮಗಳ ವರದಿಯನ್ನು ನೇರಾನೇರವಾಗಿ, ಖಡಾಖಂಡಿತವಾಗಿ ತಳ್ಳಿ ಹಾಕಿರುವ ಬೊಗಳೆ-ರಗಳೆ, ಇದು ನಿಜ ಸುದ್ದಿಯನ್ನು ಒಡೆದು ಹಾಕಿದ (Breaking) ಸೊಂಪಾದಕರು ಮತ್ತು ವರದ್ದಿಗಾರರ ಕೈವಾಡ ಎಂದು ಘೋಷಿಸಿದೆ.

ಶೂ ಎಸೆದ ಪತ್ರಕರ್ತನನ್ನು ಕ್ಷಮಿಸಿದ್ದು, ಇರಾಕಿನಲ್ಲಿ ಯುದ್ಧಕ್ಕೆ ಮಂಗಳ ಹಾಡಿ ಶಾಂತಿಗೆ ಸಹಕರಿಸಿದ್ದು, ಮಾತ್ರವಲ್ಲದೆ ಭಾರತದ ಮೇಲೆ ದಾಳಿ ಮಾಡಿ, ದಿನಕ್ಕೊಂದು ಬಾಯಿಗೆ ಬಂದ ಹೇಳಿಕೆ ನೀಡುತ್ತಾ, ಸಣ್ಣ ಮಕ್ಕಳಂತೆ ಆಟವಾಡುತ್ತಿರುವ ಪಾಕಿಸ್ತಾನಕ್ಕೆ ಯಾವುದೇ ಬುದ್ಧಿ ಕಲಿಸುವ ಗೋಜಿಗೆ ಒಬಾಮ ಹೋಗಿಲ್ಲ ಎಂಬುದು ಅಪ(ಸ)ಥ್ಯವಾದರೂ, ಇದರ ನಡುವೆಯೇ ಇತ್ತೀಚೆಗೆ ಟಿವಿ ಸಂದರ್ಶನವೊಂದರಲ್ಲಿ ಅವರು ನೊಣವೊಂದನ್ನು ಹೊಡೆದು ಕೊಂದು ತಮ್ಮ ಹಿಂಸಾ ಮನೋಭಾವ ಮೆರೆದಿದ್ದಾರೆ. ಇದು ಅಶಾಂತಿಯಲ್ಲವೇ? ಹೀಗಾಗಿ ಒಬಾಮಗೆ ಹೇಗೆ ಈ ಪ್ರಶಸ್ತಿ ಲಭಿಸಿತು ಎಂಬುದು ಬೊಗಳೂರು ತಲೆಯಿಲ್ಲದ ಸೊಂಪಾದ-ಕರುಗಳ ಪ್ರಶ್ನೆ.

ಇದರ ಹಿಂದೆ ಸ್ವತಃ ಒಬಾಮ ಕೈವಾಡವನ್ನೂ ತಳ್ಳಿ ಹಾಕುವಂತಿಲ್ಲ. ಯಾಕೆಂದರೆ, ಒಬಾಮ ತಮ್ಮ ಅಧ್ಯಕ್ಷೀಯ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಅಮೆರಿಕವನ್ನು ಬದಲಾಯಿಸುತ್ತೇವೆ ಎಂಬ ಸಂದೇಶದೊಂದಿಗೆ "Yes, We Can" ಎಂದೇ ಜನರಲ್ಲಿ ಸಮೂಹ ಸನ್ನಿ ಮೂಡಿಸಿದ್ದರು. ಈ ಕಾರಣಕ್ಕೆ, ನೊಬೆಲ್ ಸಮಿತಿಯವರಲ್ಲಿಯೂ "ನೀವು ನೊಬೆಲ್ ಪ್ರಶಸ್ತಿ ನನಗೆ ಕೊಡಬಹುದೇ?" ಎಂದು ಕೇಳಿದಾಗ, ಅದೇ ಸಮೂಹಸನ್ನಿಗೊಳಗಾಗಿದ್ದ ನೊಬೆಲ್ ಕಮಿಟಿಯವರು ಕೂಡ Yes, We can ಎಂದು ಹೇಳಿರುವುದೂ ಕೂಡ ಕಾರಣವಿರಬಹುದು ಎಂದು ಸಂದೇಹಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಆದರೆ, ಇಲ್ಲಿ ಬೊಗಳೂರಿನ ಸಂದೇಹ ಬೇರೆಯದೇ ಆಗಿದೆ. ಇತ್ತೀಚೆಗಿನ ದಿನಗಳಲ್ಲಿ ಸತ್ತಿದ್ದಾನೆಯೇ ಬದುಕಿದ್ದಾನೆಯೇ ಎಂಬುದಿನ್ನೂ ಸಾಬೀ-ತಾಗದಿರುವ ಮತ್ತು ಅಮೆರಿಕದ ಯಾವುದೇ ಡ್ರೋನ್ ದಾಳಿಯೂ ತಾಗದಿರುವ ಒಸಾಮ ಬಿನ್ ಲಾಡೆನ್ ಯಾವುದೇ ಸದ್ದು ಮಾಡುತ್ತಿಲ್ಲ. ಬಾಂಬು ಪಟಾಕಿ ಸಿಡಿಸಿದ್ದೂ ಕಡಿಮೆ. ಸದ್ದು ಮಾಡಲು Bell ಬೇಕಲ್ಲವೇ? ಹೀಗಾಗಿ No Bell ಆಗಿಬಿಟ್ಟಿರುವ ಒಸಾಮನಿಗೆ ಅಶಾಂತಿ ಪ್ರಶಸ್ತಿ ಸಿಕ್ಕಿದ್ದು, ಅದನ್ನು ಸೊಂಪಾದಕರು ಅಥವಾ ರದ್ದಿಗಾರರು ಪ್ರೂಫ್ ಮಿಸ್ಟೇಕ್‌ನಿಂದ ಒbaಮ ಮಾಡಿ ಜಗಜ್ಜಾಹೀರುಗೊಳಿಸಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.

ಅಹಿಂಸೆ ಪ್ರತಿಪಾದಿಸಿದ ಗಾಂಧೀಜಿಗೇ ದೊರೆಯದ ನೋ-ಬೆಲ್, ಗಾಂಧೀಜಿಯೇ ನನಗೆ ಪ್ರೇರಣೆ ಎನ್ನುತ್ತಲೇ ನೊಣವೊಂದನ್ನು ಕೊಂದು ಹಾಕಿದ್ದ ಒಬಾಮನಿಗೆ ದೊರೆತಿರುವುದು ಸರ್ವಥಾ ಸರಿಯಲ್ಲ ಎಂಬ ಕಾರಣಕ್ಕಾಗಿಯೇ ಬೊಗಳೂರು ಬ್ಯುರೋ ಈ ರೀತಿಯ ತಗಾದೆ ಎಬ್ಬಿಸಿರುವುದಾಗಿ ಎಲ್ಲಿಯೂ ವರದಿಯಾಗಿಲ್ಲ.

Thursday, October 01, 2009

ಬೊಗಳೆ: ಜಾನುವಾರುಗಳ ದರ್ಜೆಗೆ ತಶಿ ಶರೂರ್ ಸಮರ್ಥನೆ

(ಬೊಗಳೂರು ಟ್ವೀಟ್ ಬ್ಯುರೋದಿಂದ)
ಬೊಗಳೂರು, ಅ.1- ಕೇಂದ್ರ ಸಚಿವ ತಶಿ ಶರೂರ್ ಅವರು ವಿಮಾನದಲ್ಲಿ ಜಾನುವಾರು ಕ್ಲಾಸ್ ಇದೆ ಎಂಬ ಬಗ್ಗೆ ಹೇಳಿಕೆ ನೀಡಿ ಇದು ಸುಮ್ ಸುಮ್ನೇ ವಿವಾದವಾಗಿದ್ದನ್ನು ಕಂಡು ಕಿಡಿ ಕಾರಿದ್ದಾರೆ. ಅವರು ನೇರವಾಗಿ ಕಿಡಿ ಕಾರಿದವರೇ, ಅವರು ಕಾರಿದ ಕಿಡಿ ಬೊಗಳೂರಿನ ಕ.ಬು.ಗೇ ಬಂದು ಬಿದ್ದಿದೆ.

ಹೀಗಾಗಿ ಅವರು ಬೊಗಳೂರಿಗೇ ಬಂದು ಸಂದರ್ಶನ ನೀಡಿ ಒಂದು ಪ್ರಶ್ನೆಗೆ ಉತ್ತರಿಸಿ ಬೊಗಳೂರು ಬ್ಯುರೋವನ್ನು ತತ್ತರಿಸಿ ಹೋಗಿದ್ದಾರೆ.

ನೀವು ಜಾನುವಾರು ದರ್ಜೆಯ ವಿಮಾನ ಯಾನ ಅಂತ ಹೇಳಿದ್ದು ಸರಿಯೋ ತಪ್ಪೋ? ನೀವದನ್ನು ಒಪ್ಪುತ್ತೀರೋ ಇಲ್ವೋ? ಸಮರ್ಥಿಸಿಕೊಳ್ತೀರಾ ಇಲ್ಲಾ ನಿರಾಕರಿಸ್ತೀರಾ? ಪಕ್ಷವು ನಿಮ್ಮನ್ನು ಉಚ್ಚಾಟಿಸಿದರೆ ಒಪ್ತೀರಾ ಇಲ್ವಾ? ಜಾನುವಾರು ಅಂದಿದ್ದು ಸರಿಯೋ ತಪ್ಪೋ ಎಂಬಿತ್ಯಾದಿಯಾಗಿ ಒಂದೇ ಒಂದು ಪ್ರಶ್ನೆಯನ್ನು ಕೇಳಲಾಯಿತು.

ಅದಕ್ಕೆ ಅವರು ಉತ್ತರಿಸಿದ್ದು ಹೀಗೆ: ಜಾನುವಾರುಗಳು ಎಂದರೆ ನಾಯಿ, ಕುರಿ, ಬೆಕ್ಕು, ದನ, ಜನ, ಒಂಟೆ, ಆನೆ ಮುಂತಾದ ಪ್ರಾಣಿಗಳು ಬರುತ್ತವೆ. ನಾನು ನಿಜವಾಗಿಯೂ ಹೇಳಿದ್ದು ಆನೆಗಳನ್ನು ಉದ್ದೇಶಿಸಿ ಮಾತ್ರ. ಆದರೆ ಅವು ಬಿಳಿಯಾನೆಗಳಿಗೆ ಮಾತ್ರ!

ಅಂತ ಹೇಳಿ ಅವರು ಟ್ವಿಟ್ಟರಿನಲ್ಲಿಮತ್ತೊಂದು ಟ್ವೀಟ್ ಮಾಡಲು ಹೊರಟೇಹೋದರು.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...