Monday, March 29, 2010

ಬಿಗ್-ಬಿ ಸಿನಿಮಾ ವೀಕ್ಷಿಸಿದ್ದಕ್ಕೆ ಕಠಿಣ ಶಿಕ್ಷೆ!

(ಬೊಗಳೂರು ಅಸಾಧ್ಯ ಬ್ಯುರೋದಿಂದ)
ಬಾಂದ್ರಾ-ವರ್ಲಿ ಸೀ-ಲಿಂಕ್ (ಸಮುದ್ರ ಬೆಸೆಯುವ) ಕಾರ್ಯಕ್ರಮದಲ್ಲಿ ಅಮಿತಾಭ್ ಬಚ್ಚನ್ ಎಂಬ ಬಿಗ್-ಬಿ ಜೊತೆ ವೇದಿಕೆಯನ್ನು ಯಾರಿಗೂ ತಿಳಿಯದಂತೆ ಹಂಚಿಕೊಂಡಿದ್ದಕ್ಕಾಗಿ ಮತ್ತು ಅಮಿತಾಭ್ ಅವರು ಗುಜರಾತ್ ಪ್ರತಿನಿಧಿ ಎಂಬ ಕಾರಣಕ್ಕಾಗಿ ಅವರನ್ನು ದ್ವೇಷಿಸುತ್ತಿರುವ ಕಾ-ಗ್ರೇಸ್, ಇದೀಗ ಹೊಸ ಕಾನೂನು ಜಾರಿಗೆ ತರಲು ಪ್ರಯತ್ನಿಸುತ್ತಿದೆ ಎಂದು ಸುದ್ದಿರಹಿತ ಮೂಲಗಳು ತಿಳಿಸಿವೆ.

ಗುಜರಾತ್ ಗೂಜೆಪಿ ಸರಕಾರ, ಅದರಲ್ಲಿಯೂ ವಿಶೇಷವಾಗಿ ನರೇಂದ್ರ ಮೋಡಿ ಅಧಿಕಾರದಲ್ಲಿರುವ ರಾಜ್ಯವನ್ನು ದೇಶ-ವಿದೇಶದಲ್ಲಿ ಪ್ರಚಾರ ಮಾಡುವ ರಾಯಭಾರಿಗಾಗಿಯೇ ವಿಶೇಷ ಕಾನೂನೊಂದನ್ನು ಜಾರಿಗೆ ತರಲಾಗುತ್ತಿದ್ದು, ಬಿಗ್-ಬಿ ಸಿನಿಮಾ ನೋಡಿದವರಿಗೆ ಗಲ್ಲು ಶಿಕ್ಷೆಯಂತಹಾ ಕಠಿಣಾತಿಕಠಿಣ ಶಿಕ್ಷೆ ವಿಧಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ.

ಇದಲ್ಲದೆ, ಬಿಗ್-ಬಿ ಕೂಡ ಕೋಮುವಾದಿಯಾಗುತ್ತಿದ್ದಾರೆ ಎಂದು ಆಮಶಂಕೆ ವ್ಯಕ್ತಪಡಿಸಿರುವ ಕ್ಯಾ-ಗ್ರೇಸ್, ಈಗಾಗಲೇ ಬಿಗ್-ಬಿ ಪುತ್ರ ಸ್ಮಾಲ್-ಬಿ ಕಾರ್ಯಕ್ರಮ ಸಂಬಂಧವೂ ಕಿತಾಪತಿ ಮಾಡಿದ್ದು, ಇನ್ನು ಮುಂದೆ ಅವರ ಮಗ ಅಭಿಷೇಕ್, ಸೊಸೆ ಐಶ್ವರ್ಯಾ ರೈ ಮುಂತಾದವರು ಭಾಗವಹಿಸಿದ ಚಿತ್ರಗಳಿಗೂ ನಿಷೇಧ ಹೇರುವ ಸಾಧ್ಯತೆಗಳು ದಟ್ಟವಾಗಿವೆ.

ಇಷ್ಟು ಮಾತ್ರವಲ್ಲದೆ, ಅಮಿತಾಭ್ ಪ್ರಚಾರ ರಾಯಭಾರಿಯಾಗಿರುವ ಹಿಮಾನಿ ಫಾಸ್ಟ್ ರಿಲೀಫ್, ಬೋರೋಪ್ಲಸ್, ಬಿನಾನಿ ಸಿಮೆಂಟ್, ನವರತ್ನ ತೇಲ್ ಮುಂತಾದವುಗಳನ್ನೂ ನಿಷೇಧಿಸುವ ಕುರಿತು ಗಂಭೀರ ಮತ್ತು ಚಿಂತಾಜನಕ ಚಿಂತನೆಯೂ ನಡೆಯುತ್ತಿದೆ ಎಂದು ಮೂಲಗಳು ವರದ್ದಿ ತಂದು ಸುರಿದಿವೆ.

ಇದರ ನಡುವೆಯೇ, ಇತ್ತೀಚೆಗೆ ಬಂದಿರುವ ವರದಿಗಳ ಪ್ರಕಾರ, ಇದೀಗ ಗುಜರಾತನ್ನು ವಿಶ್ವದಲ್ಲೆಡೆ ಪ್ರಚಾರ ಮಾಡುತ್ತಿರುವ ಬಿಗ್-ಬಿ, ಗೋಧ್ರಾ ಗಲಭೆಯಲ್ಲಿ ಕೈವಾಡ ಹೊಂದಿರುವ ಶಂಕೆಯೊಂದು ಕೂಡ ಕ್ಯಾ-ಗ್ರೇಸ್ ಸರಕಾರಕ್ಕೆ ಹೊಳೆದಿದ್ದು, ಅವರು 2002ರಲ್ಲಿ ನಡೆದ ಗಲಭೆಯನ್ನು ಖಂಡಿಸ ಬೇಕು. ಇದೇ ರೀತಿಯಾಗಿ, ಸಿಖ್ ನರಮೇಧ, ಮುಂಬೈ ಭಯೋತ್ಪಾದನಾ ದಾಳಿ, ಅಹಮದಾಬಾದ್ ದಾಳಿ, ದಿಲ್ಲಿ ದಾಳಿ, ಬೆಂಗಳೂರು ದಾಳಿ, ಅಸ್ಸಾಂ ದಾಳಿ, ಜಮ್ಮು ಮತ್ತು ಕಾಶ್ಮೀರ ದಾಳಿ ಮುಂತಾಗಿ, ತಮ್ಮ ಆಡಳಿತಾವಧಿಯಲ್ಲಿಯೂ ನಡೆದ ದಾಳಿಗಳನ್ನು ಖಂಡಿಸಬೇಕು ಎಂದು ಕ್ಯಾ-ಗ್ರೇಸ್ ಆಗ್ರಹಿಸಿದೆ.

ಇಲ್ಲವಾದಲ್ಲಿ, ಈ ಬಗ್ಗೆಯೂ ಹಲವು ಸದಸ್ಯರ ತನಿಖಾ ಆಯೋಗವನ್ನು ರಚಿಸಲು ನಿರ್ಧರಿಸಲಾಗುತ್ತಿದೆ ಎಂದು ತಲೆಬುಡವಿಲ್ಲದ ಮೂಲಗಳು ವರದ್ದಿ ತಂದು ಸುರಿದಿವೆ. ಇದರೊಂದಿಗೆ, ಸೀ-ಲಿಂಕ್ ಗಲಾಟೆಗೂ ಗುಜರಾತ್-ಗೋಧ್ರಾ ಗಲಭೆಗೂ ಲಿಂಕ್ ಕಲ್ಪಿಸಲು ಹೇತುವಾಗಿದೆ ಎಂದು ಮೂಲಗಳು ವಿಶ್ಲೇಷಿಸುತ್ತಿಲ್ಲ.

Wednesday, March 24, 2010

ಮಲ್ಯರ ಕಿಂಗ್‌ಫಿಷರ್ ವಿಮಾನದಲ್ಲಿದ್ದುದು ಗುಂಡು!

(ಬೊಗಳೂರು ಸಂಚೋದನಾ ಬ್ಯುರೋದಿಂದ)
ಬೊಗಳೂರು, ಮಾ.24- ಕಿಂಗ್ ಫಿಷರ್ ವಿಮಾನದಲ್ಲಿ ಸ್ಫೋಟಕ ಪತ್ತೆಯಾಗಿರುವ ಪ್ರಕರಣದ ಹಿಂದೆ ಬಿದ್ದಿರುವ ಬೊಗಳೆ ರಗಳೆ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿ ಗಡಣವು ಕೊನೆಗೂ ಅದರೊಳಗಿದ್ದುದು ಗುಂಡು ಎಂಬುದನ್ನು ಪತ್ತೆ ಹಚ್ಚಿದ್ದಾರೆ.

ಬೃಹತ್ ಬೊಗಳೂರು ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೊಗಳೂರಿನಲ್ಲಿ ಕಂಡಲ್ಲಿ ಗುಂಡು ಹಾಕುವ ನಿಟ್ಟಿನಲ್ಲಿ ಕಿಂಗ್ ಫಿಷರ್ ಸಂಸ್ಥೆಯೇ ಈ ಗುಂಡುಗಳನ್ನು ತಿರುವನಂತಪುರದ ಗೇರು ತೋಟಗಳಿಂದ ತರಿಸುತ್ತಿತ್ತು ಎಂಬುದನ್ನು ಸಂಚೋದಿಸಲಾಗಿದೆ.

ಒಳಗೆ ಸೇರಿದರೆ ಗುಂಡು, ಹುಡುಗಿ ಆಗುವಳು ಗಂಡು ಎಂಬ ಹಾಡಿನಿಂದ ಪ್ರೇರಿತರಾಗಿರುವ ಮದಿರೆಯ ದೊರೆ ಮಲ್ಯರ ಕಿಂಗ್ ಫಿಷರ್ ಸಂಸ್ಥೆಯು, ಗುಂಡುಗಳನ್ನೇ ತರಿಸಿದರೆ ಚುನಾವಣೆ ಸಂದರ್ಭ ವಿಭಿನ್ನ ರಾಜಕೀಯ ಪಕ್ಷಗಳಿಗೆ ಹಂಚಲು ನೆರವಾಗಬಹುದು ಎಂದು ಲೆಕ್ಕಾಚಾರ ಹಾಕಿಯೇ ಇದನ್ನು ತರಿಸಿತ್ತು.

ಈ ಗುಂಡನ್ನು ಸ್ಫೋಟಕ ಎಂದು ಕರೆದಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದೂ ಸಮರ್ಥಿಸಿಕೊಂಡಿರುವ ಸಂಸ್ಥೆಯು, ಒಳಗೆ ಸೇರಿದರೆ ಖಂಡಿತವಾಗಿಯೂ ಇದು ಸ್ಫೋಟಕ ಫಲಿತಾಂಶವನ್ನು ನೀಡುತ್ತದೆ. ಗೆಲ್ಲಬೇಕಾದ ಅಭ್ಯರ್ಥಿ ಸೋಲುವ, ಸೋಲಬೇಕಾದ ಅಭ್ಯರ್ಥಿ ಗೆಲ್ಲುವ ಸ್ಫೋಟಕ ಫಲಿತಾಂಶಗಳನ್ನು ಅದು ತಂದೊಡ್ಡುತ್ತದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

Tuesday, March 23, 2010

ಬ್ರೇಕ್: ವಿಮಾನದಲ್ಲಿ ಪತ್ತೆಯಾದದ್ದು ಯಾವ ಸ್ಫೋಟಕ?

ಮಲ್ಯರ ಕಿಂಗ್ ಫಿಷರಿನಲ್ಲಿ ಪತ್ತೆಯಾದದ್ದು ಎಂತಹಾ ಸ್ಫೋಟಕ? ತಿಳಿಯಲು ಬುಧವಾರದ ಬೊಗಳೆ-ರಗಳೆ ಸಂಚಿಕೆ ಓದಿ. ನಿಮ್ಮ ಪ್ರತಿಗಳನ್ನು ನಾಡಿದ್ದು ಕಾದಿರಿಸಿ. ಯಾಕೆಂದರೆ ನಾಳೆ ಸಿಕ್ಕಾಪಟ್ಟೆ ಡಿಮಾಂಡ್ ಇರಬಹುದು. ರಶ್ ಆಗದಂತಿರಲು ಈ ವ್ಯವಸ್ಥೆ.

ಕಳೆದೊಂದು ತಿಂಗಳಿಂದ ಇದುವರೆಗೆ ತಲೆಮರೆಸಿಕೊಂಡಿದ್ದಕ್ಕೆ ಕೈಕಾಲು ಬಡಿದು ವಿಷಾದ ವ್ಯಕ್ತಪಡಿಸುತ್ತಿದ್ದೇವೆ. -ಸಂ

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...