ಬೊಗಳೆ ರಗಳೆ

header ads

ಬಿಗ್-ಬಿ ಸಿನಿಮಾ ವೀಕ್ಷಿಸಿದ್ದಕ್ಕೆ ಕಠಿಣ ಶಿಕ್ಷೆ!

(ಬೊಗಳೂರು ಅಸಾಧ್ಯ ಬ್ಯುರೋದಿಂದ)
ಬಾಂದ್ರಾ-ವರ್ಲಿ ಸೀ-ಲಿಂಕ್ (ಸಮುದ್ರ ಬೆಸೆಯುವ) ಕಾರ್ಯಕ್ರಮದಲ್ಲಿ ಅಮಿತಾಭ್ ಬಚ್ಚನ್ ಎಂಬ ಬಿಗ್-ಬಿ ಜೊತೆ ವೇದಿಕೆಯನ್ನು ಯಾರಿಗೂ ತಿಳಿಯದಂತೆ ಹಂಚಿಕೊಂಡಿದ್ದಕ್ಕಾಗಿ ಮತ್ತು ಅಮಿತಾಭ್ ಅವರು ಗುಜರಾತ್ ಪ್ರತಿನಿಧಿ ಎಂಬ ಕಾರಣಕ್ಕಾಗಿ ಅವರನ್ನು ದ್ವೇಷಿಸುತ್ತಿರುವ ಕಾ-ಗ್ರೇಸ್, ಇದೀಗ ಹೊಸ ಕಾನೂನು ಜಾರಿಗೆ ತರಲು ಪ್ರಯತ್ನಿಸುತ್ತಿದೆ ಎಂದು ಸುದ್ದಿರಹಿತ ಮೂಲಗಳು ತಿಳಿಸಿವೆ.

ಗುಜರಾತ್ ಗೂಜೆಪಿ ಸರಕಾರ, ಅದರಲ್ಲಿಯೂ ವಿಶೇಷವಾಗಿ ನರೇಂದ್ರ ಮೋಡಿ ಅಧಿಕಾರದಲ್ಲಿರುವ ರಾಜ್ಯವನ್ನು ದೇಶ-ವಿದೇಶದಲ್ಲಿ ಪ್ರಚಾರ ಮಾಡುವ ರಾಯಭಾರಿಗಾಗಿಯೇ ವಿಶೇಷ ಕಾನೂನೊಂದನ್ನು ಜಾರಿಗೆ ತರಲಾಗುತ್ತಿದ್ದು, ಬಿಗ್-ಬಿ ಸಿನಿಮಾ ನೋಡಿದವರಿಗೆ ಗಲ್ಲು ಶಿಕ್ಷೆಯಂತಹಾ ಕಠಿಣಾತಿಕಠಿಣ ಶಿಕ್ಷೆ ವಿಧಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ.

ಇದಲ್ಲದೆ, ಬಿಗ್-ಬಿ ಕೂಡ ಕೋಮುವಾದಿಯಾಗುತ್ತಿದ್ದಾರೆ ಎಂದು ಆಮಶಂಕೆ ವ್ಯಕ್ತಪಡಿಸಿರುವ ಕ್ಯಾ-ಗ್ರೇಸ್, ಈಗಾಗಲೇ ಬಿಗ್-ಬಿ ಪುತ್ರ ಸ್ಮಾಲ್-ಬಿ ಕಾರ್ಯಕ್ರಮ ಸಂಬಂಧವೂ ಕಿತಾಪತಿ ಮಾಡಿದ್ದು, ಇನ್ನು ಮುಂದೆ ಅವರ ಮಗ ಅಭಿಷೇಕ್, ಸೊಸೆ ಐಶ್ವರ್ಯಾ ರೈ ಮುಂತಾದವರು ಭಾಗವಹಿಸಿದ ಚಿತ್ರಗಳಿಗೂ ನಿಷೇಧ ಹೇರುವ ಸಾಧ್ಯತೆಗಳು ದಟ್ಟವಾಗಿವೆ.

ಇಷ್ಟು ಮಾತ್ರವಲ್ಲದೆ, ಅಮಿತಾಭ್ ಪ್ರಚಾರ ರಾಯಭಾರಿಯಾಗಿರುವ ಹಿಮಾನಿ ಫಾಸ್ಟ್ ರಿಲೀಫ್, ಬೋರೋಪ್ಲಸ್, ಬಿನಾನಿ ಸಿಮೆಂಟ್, ನವರತ್ನ ತೇಲ್ ಮುಂತಾದವುಗಳನ್ನೂ ನಿಷೇಧಿಸುವ ಕುರಿತು ಗಂಭೀರ ಮತ್ತು ಚಿಂತಾಜನಕ ಚಿಂತನೆಯೂ ನಡೆಯುತ್ತಿದೆ ಎಂದು ಮೂಲಗಳು ವರದ್ದಿ ತಂದು ಸುರಿದಿವೆ.

ಇದರ ನಡುವೆಯೇ, ಇತ್ತೀಚೆಗೆ ಬಂದಿರುವ ವರದಿಗಳ ಪ್ರಕಾರ, ಇದೀಗ ಗುಜರಾತನ್ನು ವಿಶ್ವದಲ್ಲೆಡೆ ಪ್ರಚಾರ ಮಾಡುತ್ತಿರುವ ಬಿಗ್-ಬಿ, ಗೋಧ್ರಾ ಗಲಭೆಯಲ್ಲಿ ಕೈವಾಡ ಹೊಂದಿರುವ ಶಂಕೆಯೊಂದು ಕೂಡ ಕ್ಯಾ-ಗ್ರೇಸ್ ಸರಕಾರಕ್ಕೆ ಹೊಳೆದಿದ್ದು, ಅವರು 2002ರಲ್ಲಿ ನಡೆದ ಗಲಭೆಯನ್ನು ಖಂಡಿಸ ಬೇಕು. ಇದೇ ರೀತಿಯಾಗಿ, ಸಿಖ್ ನರಮೇಧ, ಮುಂಬೈ ಭಯೋತ್ಪಾದನಾ ದಾಳಿ, ಅಹಮದಾಬಾದ್ ದಾಳಿ, ದಿಲ್ಲಿ ದಾಳಿ, ಬೆಂಗಳೂರು ದಾಳಿ, ಅಸ್ಸಾಂ ದಾಳಿ, ಜಮ್ಮು ಮತ್ತು ಕಾಶ್ಮೀರ ದಾಳಿ ಮುಂತಾಗಿ, ತಮ್ಮ ಆಡಳಿತಾವಧಿಯಲ್ಲಿಯೂ ನಡೆದ ದಾಳಿಗಳನ್ನು ಖಂಡಿಸಬೇಕು ಎಂದು ಕ್ಯಾ-ಗ್ರೇಸ್ ಆಗ್ರಹಿಸಿದೆ.

ಇಲ್ಲವಾದಲ್ಲಿ, ಈ ಬಗ್ಗೆಯೂ ಹಲವು ಸದಸ್ಯರ ತನಿಖಾ ಆಯೋಗವನ್ನು ರಚಿಸಲು ನಿರ್ಧರಿಸಲಾಗುತ್ತಿದೆ ಎಂದು ತಲೆಬುಡವಿಲ್ಲದ ಮೂಲಗಳು ವರದ್ದಿ ತಂದು ಸುರಿದಿವೆ. ಇದರೊಂದಿಗೆ, ಸೀ-ಲಿಂಕ್ ಗಲಾಟೆಗೂ ಗುಜರಾತ್-ಗೋಧ್ರಾ ಗಲಭೆಗೂ ಲಿಂಕ್ ಕಲ್ಪಿಸಲು ಹೇತುವಾಗಿದೆ ಎಂದು ಮೂಲಗಳು ವಿಶ್ಲೇಷಿಸುತ್ತಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಆ ಎಲ್ಲಾ ದಾಳಿಗಳಿಗಿಂತಲೂ ಅನ್ವೇಶಿಗಳ ಧಾಳಿಯೇ ಅಮೋಘವಾಗಿದೆ.

    ಪ್ರತ್ಯುತ್ತರಅಳಿಸಿ
  2. ಕ್ಯಾ-ಗ್ರೇಸ್ ಸಿನೆಮಾ ಕಂಪನಿಯಲ್ಲಿ ರಾಹುಲ್ ಗಾದಿಯಂತಹ ಹೀರೋ, ಸೋನಾ ಗಾದಿಯಂತಹ ಪೋಷಕ ನಟಿ, ಮೋಹನ್ (ಗ್ರಾಮ)ಸಿಂಗನಂತಹ ವಿದೂಷಕ ಇವರೆಲ್ಲಾ ಇರೋವಾಗ ಬಿಗ್-ಬಿ ಸಿನೆಮಾ ಹೇಗೆ ನಡೆದೀತು? "ಪ್ರತಿಮೆಗಳು"-ನಾಟಕದ ಮಾಯಾ ಎನ್ನುವ ಖಳನಾಯಕಿಯೇ ಇವರಿಗೆ ಮದ್ದು!

    ಪ್ರತ್ಯುತ್ತರಅಳಿಸಿ
  3. ಸುದ್ದಿ ರಹಿತ ಮೂಲಗಳು ತಿಳಿಸಿದ್ದನ್ನು, ಬೊಗಳೂರು ಅಸಾಧ್ಯ ಬ್ಯುರೊದವರು ಪ್ರಕಟಿಸಿ, ಓದುಗರಿಗೆ ಅಸಾಧ್ಯ ಮನೋರ೦ಜನೆ ಹಾಗೂ ಅಸಾಧ್ಯ ವಿವರಗಳನ್ನು ಕೊಟ್ಟಿದ್ದಲ್ಲದೇ, ಮು೦ದಿನ ಪ್ರಕಟಣೆಯ ಬಗ್ಗೆ ಅಸಾಧ್ಯ ಕುತೂಹಲವನ್ನು೦ಟು ಮಾಡಿದೆ!!

    ಪ್ರತ್ಯುತ್ತರಅಳಿಸಿ
  4. ತುಂಬಾ ಚೆನ್ನಾಗಿ ಬರೀತಿರಿ. ಹೀಗೆ time passಗೆ ಅಂತ ಬಂದೆ. ನಿಮ್ಮ ಲೇಖನ ಪೂರ್ತಿ ಓದೋ ಹಾಗಾಯ್ತು gud keep it up

    ಪ್ರತ್ಯುತ್ತರಅಳಿಸಿ
  5. ಈ ಬಾಳಠಾಕ್ರೆ ತುಂಬಾ ನಿಗುರುತ್ತಿದ್ದಾನೆ. ಈ ಕಾಂಗ್ರೆಸ್ ನಾಯಿಗಳೂ ಕೂಡಾ ಜೋರಾಗಿ ಬೊಗಳ ಹತ್ತಿವೆ. ಈ ಬಾಳಠಾಕ್ರೆಯಂತಹ ದೇಶದ್ರೋಹಿಯನ್ನು ನಡುಬೀದಿಯಲ್ಲಿ ನೇಣಿಗೆ ಹಾಕಬೇಕು. ಈ ದೇಶಪ್ರೇಮಿಯಾಗಿದ್ದ ಬಾಳಠಾಕ್ರೆ ಈಗ ದೇಶದ್ರೋಹಿಯಾಗಿ ಬದಲಾಗಲು ಕಾರಣ ಪತ್ತೆ ಹಚ್ಚುವಿರಾ ಅನ್ವೇಶಿಯವರೇ?.

    ಪ್ರತ್ಯುತ್ತರಅಳಿಸಿ
  6. ಸುಬ್ರಹ್ಮಣ್ಯರೇ,
    ನಮ್ಮ ದಾಳಿಯನ್ನು ಅಮೋಘನ ದಾಳಿಗೆ ಹೋಲಿಸಿದ್ದಕ್ಕೆ ಶೀಘ್ರವೇ ಪ್ರತಿದಾಳಿ ನಡೆಸಲಾಗುತ್ತದೆ.

    ಸುನಾಥರೇ,
    ಆದರೂ ತತ್ತರ ಪ್ರದೇಶದಲ್ಲಿ ಗಾಂಧಿ-ನೆಹರೂ ಪ್ರತಿಮೆಗಳಿಗಿಂತಲೂ ಮಾಯಾ-ಕಾನ್ಶಿ ಪ್ರತಿ-ತೆಗಳುಗಳೇ ಹೆಚ್ಚಾಗಿವೆಯಂತಲ್ಲಾ...

    ಮುಕ್ತವಾಗಿರೋ ಮನದವರೇ,
    ನಿಮ್ಮ ಕುತೂಹಲ ತಣಿಸಲು ಪಶ್ಚಿಮ ಕರಾವಳಿಯ ಸಮುದ್ರವನ್ನೇ ಬುಕ್ ಮಾಡಿದ್ದೇವೆ. ಎಷ್ಟು ಬೇಕೋ ಅಷ್ಟು ನೀರು ಬಳಸಬಹುದು. ಯಾಕೆಂದರೆ, ಬೇರೆ ನೀರು ಬಳಸಿದರೆ, ಈಗಾಗಲೇ ದರ ಏರಿಕೆ ಮಾಡಲಾಗಿದೆ.

    ಜಿತ ಅವರೆ,
    ಬೊಗಳೂರಿಗೆ ಸ್ವಾಗತ. ಚೆನ್ನಾಗಿ ಬರೀತೀರಿ ಅಂತ ಮಕ್‌ಕೆ ಚೆನ್ನಾಗಿ ಉಗುಳಿದ್ದೀರ... ಟೈಂ ಪಾಸ್ ಕಡ್ಲೇಕಾಯಿ ನಮಗೂ ಕೊಡ್ಸಿ.

    ಗುರುಗಳೇ,
    ಕಾರಣ ಪತ್ತೆ ಹಚ್ಚಿದ್ದೇವೆ. ಠಾಕರೆಯವರು ಈಗಾಗಲೇ ಪಾಕಿಸ್ತಾನದಲ್ಲಿರುವ ಮನಸ್ಥಿತಿಯಲ್ಲಿರುವುದರಿಂದಾಗಿಯೇ ಹೀಗಾಗಿರಬಹುದೆಂಬುದು ಆಮಶಂಕೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D