Wednesday, April 28, 2010

ಭೂಕಂಪ ಹೆಸರಿಗೆ ಬೂಬ್‌ಕ್ವೇಕ್ ಕಾರಣ!

[ಬೊಗಳೂರು ಭೂಕ್ವೇಕ್ ಬ್ಯುರೋದಿಂದ]
ಬೊಗಳೂರು, ಏ.28- ಅಲ್ಲಲ್ಲಿ ಭೂಕಂಪವಾಗುತ್ತಿರುವುದಕ್ಕೆ ಬಿಚ್ಚೋಲೆ ಗೌರಮ್ಮಗಳೇ ಕಾರಣ ಎಂದು ಇರಾನ್ ಧರ್ಮಗುರು ನೀಡಿದ್ದ ಹೇಳಿಕೆಯ ಹಿಂದೆ ಸತ್ಯಾಂಶವಿದ್ದುದು ಅಲ್ಲಲ್ಲಿ ಪತ್ತೆಯಾಗಿದೆ.

ಬಿಡದಿಯ ನಿತ್ಯಾನಂದ ಆಶ್ರಮ ಕಂಪಿಸುತ್ತಿರುವುದರ ಹಿಂದೆ ಈ ಕಾರಣದ ಜೊತೆಗೆ ಮತ್ತೂ ಹಲವಾರು ಕಾರಣಗಳಿರುವುದು ಗೊತ್ತಾಗಿರುವಂತೆಯೇ, ಈ ರೀತಿಯ ಭೂಕಂಪ ಆಗುವ ಸಾಧ್ಯತೆಗಳು ಎಲ್ಲೆಲ್ಲಿವೆ ಎಂಬುದನ್ನು ಪತ್ತೆ ಹಚ್ಚುವ ಕಾರ್ಯವನ್ನು ಯೂನೀಕ್ ಐಡೆಂಟಿಟಿ ಕಾರ್ಯಕ್ರಮ ಮಾದರಿಯಲ್ಲೇ ನಡೆಸಲು ವಿಪ್ರೋಸಿಸ್ ಮುಖ್ಯಸ್ಥರಾದ ಮೂರ್ತೇಕಣಿ ಅವರಿಗೆ ವಹಿಸಲಾಗಿದೆ ಎಂದು ಬಲ್ಲದ ಮೂಲಗಳು ತಿಳಿಸಿವೆ.

ಅವರು ಈಗಾಗಲೇ ಕೆಲಸ ಆರಂಭಿಸಿದ್ದು, ಇತ್ತೀಚೆಗಂತೂ ಬೆಂಗಳೂರಿನ ಎಂ.ಜಿ.ರೋಡ್ ಸಿಕ್ಕಾಪಟ್ಟೆ ನಡುಗಲಾರಂಭಿಸಿರುವುದು ಅವರಿಗೆ ಅಚ್ಚರಿ ಮೂಡಿಸಿಲ್ಲವಾದರೂ, ಕುತೂಹಲ ಮೂಡಿಸಿತ್ತು ಎಂದು ತಿಳಿದುಬಂದಿದೆ.

ಇದರ ನಡುವೆ, ಗಾಂಧಿನಗರದ ಗಲ್ಲಿಗಲ್ಲಿಗಳು ಮಾತ್ರವಲ್ಲದೆ, ಕಾಲೇಜು ಪರಿಸರಗಳಲ್ಲಿಯೂ ಭೂಕಂಪನವಾಗುತ್ತಿರುವುದು ಮತ್ತು ಕಂಪನವಾಗುವ ಸಾಧ್ಯತೆಗಳು ದಟ್ಟವಾಗಿ ಗೋಚರಿಸಿರುವುದಾಗಿ ಮೂಲಗಳು ವರದ್ದಿ ಮಾಡಿವೆ.

ಭೂಕಂಪನ ಕಾರಣ ಪತ್ತೆ ಹಚ್ಚಿದ್ದಕ್ಕಾಗಿ ಬೂಬ್‌ಕ್ವೇಕ್ ಪ್ರತಿಭಟನೆ ನಡೆಸಲಾಗಿದೆ ಎಂಬುದು ನಿಜವಾದರೂ, ಅದೇ ದಿನ ತೈವಾನ್‌ನಲ್ಲಿ ಸಂಭವಿಸಿದ ಭೂಕಂಪಕ್ಕೂ, ತಮಗೂ ಸಂಬಂಧವಿಲ್ಲ ಎಂದು ಬೂಬ್‌ಕ್ವೇಕ್ ಆಯೋಜಕರು ಬೊಗಳೂರು ವರದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ.

ಈ ರೀತಿ ಸ್ಪಷ್ಟನೆ ನೀಡುತ್ತಿರುವಾಗಲೇ ವರದ್ದಿಗಾರರ ಗುಂಡಿಗೆ ಢವಢವನೆ ಜೋರಾಗಿಬಡಿದುಕೊಂಡ ಕಾರಣ, ಕೆಳಗಿದ್ದ ನೆಲ ಸ್ವಲ್ಪಸ್ವಲ್ಪವೇ ಅದುರತೊಡಗಿತ್ತು ಎಂದು ಲೈವ್ ವರದಿಯಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಕಾಲೇಜಿನ ಪರಿಸರಗಳಲ್ಲಿ ಅಲ್ಲಲ್ಲಿ ಭೂಕುಸಿತ ಸಂಭವಿಸಿರುವುದು, ರಸ್ತೆಗಳು ಮಣ್ಣೆದ್ದುಹೋಗಿರುವುದಕ್ಕೂ ಸಂಬಂಧವಿರಬೇಕೆಂದು ಶಂಕಿಸಲಾಗುತ್ತಿದೆ.

ಈ ನಡುವೆ, ಬೊಗಳೂರು ಸಂಚೋದಕರ ಪಡೆಯೊಂದು ಭೂಕಂಪ ಹೆಸರು ಬರಲು ಕಾರಣವಾಗಿದ್ದೇ ಈ ಬೂಬ್ ಕ್ವೇಕ್ ಅಂತ ವಾದಿಸಲು ತೊಡಗಿದೆ. ಅದು ಭೂಬ್‌ಕ್ವೇಕ್ ಆಗಿದ್ದು, ಕಾಲಾನುಕ್ರಮದಲ್ಲಿ ಬಾಯಿಂದ ಬಾಯಿಗೆ ಹರಡಿ, ಜರಡಿಯಲ್ಲಿ ಸಾರಿಸಿದಂತಾಗಿ, ಕೊನೆಗೆ ಭೂ-ಕ್ವೇಕ್ ಮಾತ್ರ ಉಳಿದುಕೊಂಡಿತ್ತು. ಆ 'ಭೂ' ಶಬ್ದವು ಭಾಷಾಂತರಗೊಂಡು ಅರ್ಥ್ ಆಗಿ, ಅರ್ಥ್ ಕ್ವೇಕ್ ಅಂತ ಪ್ರಸಿದ್ಧಿಯಾಯಿತು ಎಂದು ಒಣವಾದವನ್ನು ಮಂಡಿಸಿದೆ.

Thursday, April 22, 2010

ಬೆಲೆ ಕುಸಿತಕ್ಕೆ ಆದೇಶ, ಕುಸಿದದ್ದು ಗಡ್ಕರಿ!

(ಬೊಗಳೂರು ಬೆಲೆ ಏರಿಕೆ ಸ್ಪಷ್ಟನೆ ಬ್ಯುರೋದಿಂದ)
ಬೊಗಳೂರು, ಏ.22- ಏರುತ್ತಿರುವ ಬೆಲೆಗಳನ್ನು ಇಳಿಸಲೇಬೇಕು ಎಂದು ಹೋರಾಟ ಮಾಡುತ್ತಿದ್ದ ಬಿಜೆಪಿ, ಕೇಂದ್ರದ ಬೆಲೆ ಏರಿಕೆ ಸರಕಾರದ ವಿರುದ್ಧ ಪ್ರತಿಭಟನೆ ಮಾಡಿದ ಸಂದರ್ಭದ ಘಟನೆಗೆ ಸ್ಪಷ್ಟನೆಗಳ ಮಹಾಪೂರವೇ ಹರಿದುಬರುತ್ತಿದೆ.

ಒಂದೆಡೆ, ನೀವು ಬೆಲೆ ಕುಸಿತ ಮಾಡದಿದ್ದರೆ, ನಾನೇ ಕುಸಿದುಬೀಳುತ್ತೇನೆ ಎಂದು ಗಡ್ಕರಿ ಹೆದರಿಸಿ ಮಾಡಿಯೂ ತೋರಿಸಿದ್ದರು ಎಂದು ಒಂದು ಮೂಲವು ವರದ್ದಿ ತಂದು ಸುರಿದಿದ್ದರೆ, ಮತ್ತೊಂದು ರದ್ದಿ ಮೂಲದ ಪ್ರಕಾರ, ಆಕಾಶದಲ್ಲಿ ಹೋಗುತ್ತಿದ್ದ ಜೀವನಾವಶ್ಯಕ ವಸ್ತುಗಳ ಬೆಲೆಯನ್ನು ನೋಡಿಯೇ, ಗಡ್ಕರಿ ತಲೆ ತಿರುಗಿ ತಿರು ತಿರುಗಿ, ತಿರುವು ಮುರುವಾಗಿ ಬಿದ್ದರು!

ಇನ್ನೊಂದು ಸ್ಪಷ್ಟನೆ ತಿಳಿಸಿರುವಂತೆ, ಅಲ್ಲಿ ಲಕ್ಷಾಂತರ ಮಂದಿ ಹರಿದುಬಂದಿದ್ದರಿಂದಾಗಿ, ದೆಹಲಿಯ ಆ ಭಾಗದ ಮೇಲೆ ಭಾರ ಹೆಚ್ಚಾಯಿತು. ಹೀಗಾಗಿ ಭೂಮಿಯೇ ಒಂದಿಷ್ಟು ವಾಲಿದ ಪರಿಣಾಮವಾಗಿ ವೇದಿಕೆಯೂ ಅಲುಗಾಡಿದ ಅನುಭವವಾಯಿತು ಗಡ್ಕರಿ ಅವರಿಗೆ. ಹೀಗಾಗಿ ಅವರು ಸಾವರಿಸಿಕೊಳ್ಳುವಷ್ಟರಲ್ಲಿ ತತ್ತರಿಸಿ ಬಿದ್ದಿದ್ದರು ಎನ್ನುತ್ತವೆ ಏನೂ ತಿಳಿಯದ ಮೂಲಗಳು.

ತೀವ್ರ ಬಿಸಿಲೆಂಬುದು ಜನಸಾಗರಕ್ಕೆ ತಿಳಿಸಿದ ಕಾರಣವಾದರೂ, ಅಷ್ಟೊಂದು ಜನ ಸಾಗರವೇ ಇರುವಾಗ, ಈ ತಂಪು ತಂಪು ಸಾಗರದಲ್ಲಿ ಬಿಸಿಲಿನ ಝಳವಾದರೂ ಎಷ್ಟರಮಟ್ಟಿಗೆ ಪರಿಣಾಮ ಬೀರಬಹುದು? ಸಾಗರದಲ್ಲಿ ತಂಪು ನೀರೇ ಅಲ್ಲವೇ ಇರುವುದು? ಸಾಗರದ ಬೀಚುಗಳಿಗೆ ಹೋಗುವುದು ಕೂಡ ವಾಯು ವಿಹಾರಕ್ಕಾಗಿಯೇ ಅಲ್ಲವೇ? ಈ ಕಾರಣಕ್ಕೆ, ಅವರು ಕುಸಿದದ್ದು ಖಂಡಿತಾ ಬಿಸಿಲಿನ ತಾಪದಿಂದಾಗಿ ಅಲ್ಲ ಎಂದು ಮಗದೊಂದು ಮೂಲವು ವಾದಿಸುತ್ತಿದೆ.

ಇನ್ನೂ ಒಂದು ಮೂಲದ ವಾದವಿದೆ. ಈ ಪ್ರಮಾಣದಲ್ಲಿ ರಾಜ್ಯ-ಹೊರರಾಜ್ಯಗಳ ಜನರನ್ನು ಕರೆದುತಂದು ದಿಲ್ಲಿಯಲ್ಲಿ ರ‌್ಯಾಲಿ ಮಾಡುತ್ತಿದ್ದರೂ, ಪ್ರಧಾನಿ ಮನಮೋಹನ್ ಸಿಂಗ್ ಎಲ್ಲಿದ್ದಾರೆ? ಸರಕಾರವನ್ನು ನಿಜಕ್ಕೂ ನಿಯಂತ್ರಿಸುತ್ತಿರುವ ಸೋನಿಯಾ ಗಾಂಧಿ ಎಲ್ಲಿದ್ದಾರೆ? ಕೇಂದ್ರ ವಿತ್ತ ಸಚಿವರು ಎಲ್ಲಿದ್ದಾರೆ ಎಂದೆಲ್ಲಾ ಕತ್ತು ಉದ್ದ ಮಾಡಿ, ಮಾಡಿ, ಗಡ್ಕರಿಯವರು ಅವರನ್ನು ಈ ದೇಶದೊಳಗೆಲ್ಲೂ ಕಾಣದೆ, ಸುಸ್ತಾಗಿ ಕುಸಿದುಬಿದ್ದರು!

ಅಧಿಕಾರಕ್ಕೆ ಬಂದ ನೂರೇ ದಿನಗಳಲ್ಲಿ ಬೆಲೆ ಕುಸಿತ ಮಾಡುತ್ತೇವೆ ಎಂದು ಅನಾದಿ ಕಾಲದಿಂದ ಭರವಸೆ ನೀಡಿ ಅಧಿಕಾರಕ್ಕೇರಿದ್ದ ಯುಪಿಎ ಸರಕಾರದಲ್ಲಿ, ಈ ರೀತಿ ಹೇಳಿದವರ್ಯಾರೂ ಕಾಣಿಸದೇ ಹೋಗಿದ್ದರಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆಯಾದರೂ, ಭಾರತದ ದಕ್ಷಿಣ ಭಾಗದಿಂದ ಮೇಲಕ್ಕೇರುತ್ತಲೇ ಹೋದ ಅಗತ್ಯ ವಸ್ತುಗಳ ಬೆಲೆಗಳೆಲ್ಲವೂ ದೆಹಲಿ ಮೇಲೆ ಹಾರಾಡುತ್ತಿದ್ದರಿಂದಾಗಿ, ಅಲ್ಲಿನ ಭೂಮಿಯ ಭಾರ ಜಾಸ್ತಿಯಾಗಿ, ವೇದಿಕೆ ಅಲುಗಾಡಿ ಗಡ್ಕರಿ ಕುಸಿದರು ಎಂದೂ ಹೇಳಲಾಗುತ್ತಿದೆ.

ಕೊಟ್ಟ ಕೊನೆಯ ಮೂಲದ ಪ್ರಕಾರ, ಕೇಂದ್ರದಲ್ಲಿ ಇದೆ ಎನ್ನಲಾಗುತ್ತಿರುವ ಸರಕಾರವೇ ಬೆಲೆ ಕುಸಿತಕ್ಕೆ ಆದೇಶ ನೀಡಿದಾಗ, ಅದು ತಿಳಿಯದೆ ತಾವಾಗಿಯೇ ಸ್ವತಃ ಗಡ್ಕರಿ ಗಡಗಡನೆ ಕುಸಿದರು ಅಂತೆ!

Tuesday, April 13, 2010

ಬ್ರೇಕ್ ಮಾಡಲು ಸುದ್ದಿ ಇಲ್ಲದೆ ಪರದಾಡಿದ ಬೊಗಳೆ!

[ಬೊಗಳೂರು ಬ್ರೇಕ್ ಆಗದ ಬ್ಯುರೋದಿಂದ]
ಬೊಗಳೂರು, ಏ.12- ಇಂದು ಬೊಗಳೂರು ಸುದ್ದಿ ಮನೆಯಲ್ಲಿ ಮಾತಿಲ್ಲ, ಕಥೆಯಿಲ್ಲ. ಏನೇ ಆದರೂ ಒಡೆದು ಹೋಗುತ್ತಿಲ್ಲ. ಅಂದರೆ ಅಕ್ಷರಶಃ ಬ್ರೇಕ್ ಆಗುತ್ತಿಲ್ಲ. ಬ್ರೇಕ್ ಆಗಲು ಏನೂ ಉಳಿದಿಲ್ಲ.

ಇದಕ್ಕೆಲ್ಲಾ ಕಾರಣ ನೂರಾರು ಜನಸಂಖ್ಯೆಯಿರುವ ಬೊಗಳೂರಿನಲ್ಲಿ ಕೋಟ್ಯಂತರ ಹೃದಯಗಳನ್ನು ಗೆದ್ದಿದ್ದ ಸಾನಿಯಾ ಮಿರ್ಜಾಳ ಮದುವೆ. ಹಾಂ! ತಪ್ಪು ತಿಳಕೋಬ್ಯಾಡ್ರೀ... ಇದು ವಿರಹವೇದನೆಯಂತೂ ಅಲ್ಲವೇ ಅಲ್ಲ. ಆದರೆ, ಶೋಯಬ್-ಸಾನಿಯಾ ಮದುವೆಯಾದ ಬಳಿಕ ಬೊಗಳೂರಿನ ಸುದ್ದಿಮನೆಯು ಬಿಕೋ ಎಂಬಂತಾಗಿಬಿಟ್ಟಿರುವ ಪರಿಸ್ಥಿತಿಯ ವಿವರಣೆ ಅಷ್ಟೆ!

ಸಾನಿಯಾ ಯಾವ ಸೀರೆ ಉಟ್ಟಿದ್ದಳು, ಅದರ ಬಣ್ಣ ಯಾವುದು, ಅದು ತಾಯಿಯ ಸೀರೆಯನ್ನೇ ಉಟ್ಟಳೇ, ಅದು ಯಾಕೆ? ಹಾಗಾದರೆ ತಾಯಿಗೆ ಉಡಲು ಸೀರೆ ಇತ್ತೇ? ಸಾನಿಯಾ ಪ್ರಯಾಣಿಸಿದ ಕಾರಿಗೆ ಎಷ್ಟು ಚಕ್ರಗಳಿದ್ದವು? ಅದರ ಗಾಲಿಯಲ್ಲಿ ಸಾಕಷ್ಟು ಗಾಳಿ ಇತ್ತೇ? ಮೂಗುತಿ ಸುಂದರಿ ಮೂಗಿಗೆ ಏನು ಇಟ್ಟಳು? ಬ್ರೇಕಿಂಗ್ ಸುದ್ದಿಯ ಧಾವಂತ ನೋಡಿ ನೋಡಿ ಮೂಗಿಗೆ ಕೈಯಿಟ್ಟಳೇ? ಅಥವಾ ಕೈಮುಚ್ಚಿಕೊಂಡಳೇ? ಎಂಬಿತ್ಯಾದಿ ರದ್ದಿಯನ್ನು ಬ್ರೇಕ್ ಮಾಡಿ ಮಾಡಿ ಸುಸ್ತಾಗಿದ್ದಾಗಲೇ, ಈ ಬ್ರೇಕಿಂಗ್ ನ್ಯೂಸ್ ಬಂದಿತ್ತು. ಸಾನಿಯಾ-ಶೋಯಬ್ ಕೊನೆಗೂ ಮದುವೆ ಆಗಿಬಿಟ್ಟಿತು! ಅಲ್ಲಿಗೆ ಇನ್ನು ಬ್ರೇಕ್ ಮಾಡಲು ಏನೂ ಉಳಿದಿಲ್ಲ ಎಂಬಂತಹಾ ಶೂನ್ಯ ಪರಿಸ್ಥಿತಿ!

ದಿಢೀರ್ ಆಗಿ ಮದುವೆ ಮಾಡಿಸುವಲ್ಲಿ ಸಾನಿಯಾ ಕೈವಾಡವೂ ಇದೆ ಎಂದು ಶಂಕಿಸಲಾಗಿದೆ. ಅಂದರೆ, ಬೊಗಳೂರು ರದ್ದಿ ಚಾನೆಲಿನಲ್ಲಿ ನಿರಂತರವಾಗಿ ಸಾನಿಯಾ-ಶೋಯಬ್ ಬಗ್ಗೆ, ಶೋಯಬ್ ತಂದೆಯ ಹೆಸರಿನ ಬಗ್ಗೆ, ಶೋಯಬ್ ಮೊದಲನೇ ಪತ್ನಿಯ ಬಗ್ಗೆ, ಎರಡನೇ ಪತ್ನಿಯ ಬಗ್ಗೆ ಇತ್ಯಾದಿತ್ಯಾದಿ ಹಗ್ಗೆ ರೇಜಿಗೆ ಹುಟ್ಟಿಸುವಂತಹಾ ಬ್ರೇಕಿಂಗ್ ರದ್ದಿಗಳು, ತಲೆಯಿರುವ ಆದರೆ ಬುಡವಿಲ್ಲದ ವಿಶ್ಲೇಷಣಾತ್ಮಕ ರದ್ದಿಗಳನ್ನು ತಂದು ತಂದು ಸುರಿದು ಮೂಗು ಮುಚ್ಚಿಸುತ್ತಿದ್ದವರಿಗೆ ಕೆಲಸವಿಲ್ಲದೆ ಹೊಡೆಯೋಣವೆಂದರೆ ನೊಣವೂ ಸಿಗಲಾರದ ಪರಿಸ್ಥಿತಿ. ಅವುಗಳೂ ಸಾನಿಯಾ ಮದುವೆಗೆ ಗುಂಯ್‌ಗುಡಲು ಹೋಗಿರುವ ಶಂಕೆ.

ಹೀಗಾಗಿ, ಇನ್ನು ಮುಂದೆ ಬೊಗಳೂರು ಬ್ಯುರೋ ಏನೇನೇ ಬಾಯಿಗೆ ಬಂದ ವರದ್ದಿ ಪ್ರಕಟಿಸಿ, ಯಾರೋ ಯಾರನ್ನೋ ಮದುವೆಯಾಗಿಬಿಟ್ಟರು ಎಂದೆಲ್ಲಾ ತಪ್ಪು ತಪ್ಪು ಚಿತ್ರಗಳನ್ನು ತೋರಿಸದಂತಾಗಲೂ, ಬೊಗಳೂರು ಛಾಯಾಗ್ರಾಹಕರಿಗೆ ಅವಕಾಶವೇ ನೀಡದೆ, ತಾವೇ ಚಿತ್ರಗಳನ್ನು ಕಳುಹಿಸುವುದಾಗಿ ಮದುವೆ ಮನೆಯಿಂದ ಸೂಚನೆಗಳು ಬಂದಿದ್ದವು.

ಆಗಿಬಿಟ್ಟಿತು. ಆಗಿಯೇ ಬಿಟ್ಟಿತು. ಇನ್ನು ಮುಂದೆ ಸಾನಿಯಾ ಬ್ರೇಕ್ ಆದ ನ್ಯೂಸಿಗೆ ಅವಕಾಶವೇ ಇಲ್ಲದಂತಾಗಿರುವ ಕಾರಣ, ಬೊಗಳೂರು ಬ್ಯುರೋ ಬಿಕೋ!

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...