Thursday, May 27, 2010

ಬೊಗಳೆ ಬ್ರೇಕ್: 'ಆಮ್' ಆದ್ಮೀಯಾದ ಮನಮೋಹಕ ಸಿಂಗ್

(ಬೊಗಳೂರು ಪ್ರತಿ-ಭಟನಾ ಬ್ಯುರೋದಿಂದ)
ಬೊಗಳೂರು, ಮೇ 27- ಮನಮೋಹಕ ಸಿಂಗ್ ಅವರು ಯುಪಿಎ ಎರಡನೇ ಅವಧಿಯಲ್ಲಿ ಪ್ರಧಾನಿಯಾಗಿ ಒಂದು ವರ್ಷ ಕಳೆದಿದ್ದರೂ, ಚುನಾವಣಾ ಪ್ರಣಾಳಶಿಶುವಿನ ಬಿಡುಗಡೆ ವೇಳೆ ಮಾಡಿದ ವಾಗ್ದಾನದಲ್ಲಿ ಈಡೇರಿದ್ದೇನೂ ಕೇಳಿಬರುತ್ತಿಲ್ಲವಲ್ಲ ಎಂದು ಬೊಗಳೂರು ಮುಂದೆ ಪ್ರತಿಭಟನಾಕಾರರು ಜಮಾಯಿಸಿದಾಗ ಎಚ್ಚೆತ್ತ ಬೊಗಳೂರು ಸಿಬ್ಬಂದಿ, ಇದೀಗ ಈ ಪ್ರತಿಭಟನಾಕಾರರ ಬಾಯಿ ಮುಚ್ಚಿಸಲು ಅಸ್ತ್ರವೊಂದನ್ನು ಪತ್ತೆ ಹಚ್ಚಿದೆ.

ಬೆಲೆ ಏರಿಕೆ, ಎಷ್ಟೇ ಏರಿದರೂ ಬೆಲೆ ಇಳಿಯದ ಆಹಾರ ಪದಾರ್ಥಗಳು, ತರಕಾರಿಗಳು ಜನಸಾಮಾನ್ಯನಿಗೆ ತ್ರಾಸ ಕೊಡುತ್ತಿರುವ ಕುರಿತು ಇದ್ದೂ ಇಲ್ಲದಂತಿರುವ ವಿರೋಧ ಪಕ್ಷಗಳು ತಗಾದೆ ತೆಗೆದ ತಕ್ಷಣ, ಅವುಗಳ ಬಾಯಿ ಮುಚ್ಚಿಸಲಿಕ್ಕಾಗಿ ಒಂದಲ್ಲ ಒಂದು ಹೊಸ ಇಶ್ಯೂಗಳನ್ನು ಎಳೆದುಹಾಕಿಕೊಳ್ಳುತ್ತಾ, ರಕ್ಷಣಾ ಕವಚ ಸೃಷ್ಟಿಸಿಕೊಳ್ಳುತ್ತಾ, ಪ್ರತಿಪಕ್ಷಗಳ ಅಸ್ತಿತ್ವದ ಮೇಲೆಯೇ ಪ್ರಶ್ನಾರ್ಥಕ ಚಿಹ್ನೆ ಹಾಕಿರುವ ಮನಮೋಹಕ ಸಿಂಗ ಸರಕಾರದ ನೀತಿಯನ್ನೇ ಬೊಗಳೂರು ಬ್ಯುರೋ ಕೂಡ ಅನುಸರಿಸಿತು ಎಂದು ಹೇಳಲು ಯಾವುದೇ ದಾಕ್ಷಿಣ್ಯ ಇಲ್ಲವೆಂದೂ ಸ್ಪಷ್ಟಪಡಿಸಲಾಗುತ್ತಿದೆ.

ಕಾರಣವೆಂದರೆ, ಬೆಲೆ ಏರಿಕೆ ಬಗ್ಗೆ ಪ್ರತಿಪಕ್ಷಗಳು ಕೂಗಾಡತೊಡಗಿದಾಗ, ದಿಢೀರನೇ ಟೆಲಿಫೋನ್ ಕದ್ದಾಲಿಕೆ ವಿಷಯ ಹೊರ ಹಾಕಿ, ಅದರ ಬಗ್ಗೆ ಕೂಗಾಡುವಂತೆ ಮಾಡಲಾಗಿತ್ತು. ನಂತರ ದಿಢೀರನೇ ಅಣ್ವಸ್ತ್ರ ಮಸೂದೆಯ ಬತ್ತಳಿಕೆಯನ್ನು ಹೊರಗೆಳೆಯಲಾಯಿತು. ನಡುವೆಯೇ ಪುಣೆ ಸ್ಫೋಟ, ದಾಂತೇವಾಡ ನಕ್ಸಲರ ಅಟ್ಟಹಾಸ, ನಂತರ ಪಾಕಿಸ್ತಾನದ ತಗಾದೆ, ಹಫೀಜ್ ಸಯೀದ್ ಖುಲಾಸೆಯಿಂದಾಗಿ ನಮಗೆ ನಿರಾಶೆ ಮಾತ್ರ ಆಗಿದೆ ಎಂಬ ಹೇಳಿಕೆ, 2G ಸ್ಪೆಕ್ಟ್ರಮ್ ಹಗರಣ, ಫೋನ್ ಟ್ಯಾಪಿಂಗ್, ಶಶಿ ತರೂರ್ ರಾದ್ಧಾಂತ, ಐಪಿಎಲ್ ಮೋದಿ ವಿವಾದ, ಖಂಡನಾ ನಿರ್ಣಯದಿಂದ ಪಾರಾಗಲು ಮಾಯಾವತಿಯ ಖರೀದಿ, ಕಸಬ್ ಮರಣದಂಡನೆ ವಿವಾದ, ಎಲ್ಲವನ್ನೂ ಹೊರಗೆಳೆದುಕೊಂಡು, ಯಾವುದರ ಬಗ್ಗೆ ಪ್ರತಿಭಟನೆ ಮಾಡುವುದು, ಕೂಗಾಡುವುದು ಎಂದು ಪ್ರತಿಪಕ್ಷಗಳಿಗೇ ಗೊಂದಲ ಮೂಡಿಸುವಲ್ಲಿ ಯಶಸ್ವಿಯಾಗಿ ಪಾರಾಗಿರುವ ಯುಪಿಎ ತಂತ್ರವು ಬೊಗಳೂರಿಗೆ ಕೂಡ ಇಲ್ಲಿ ವರದಾನವಾಗಿ ಪರಿಣಮಿಸಿದೆ.

ಅದೇನೆಂದರೆ, ಮನಮೋಹಕ ಸಿಂಗರ ಪಕ್ಷವು ಪ್ರಣಾಳಿಕೆಯಲ್ಲಿದ್ದ ಒಂದೇ ಒಂದೇ ಭರವಸೆಯನ್ನೂ ಈಡೇರಿಸಿಲ್ಲ ಎಂದು ಒಣಮೋರೆ ಹೊತ್ತು ಹೇಳಿದಾಗ, ಈಗಾಗಲೇ Unprecedented Price-Rise Agenda ಸರಕಾರದಿಂದ ಈಗಾಗಲೇ ಸಾಕಷ್ಟು ನಿಧಿ ಪಡೆದುಕೊಂಡಿರುವ ಬೊಗಳೂರು ಬ್ಯುರೋ, ಯುಪಿಎ ರಕ್ಷಣೆಗೆ ಗುರಾಣಿ ಹಿಡಿದು ಹೊರಟಿತು.

ಏನ್ರೀ, ನೀವೇನೇನೆಲ್ಲಾ ಬಾಯಿಗೆ ಬಂದಾಗೆ ಹೇಳ್ತೀರಲ್ಲಾ.... Con-guess ಸರಕಾರವು ಆಮ್ ಆದ್ಮೀ ಆಮ್ ಆದ್ಮೀ ಅಂತೆಲ್ಲಾ ಪ್ರಣಾಳಿಕೆಯಲ್ಲಿ ಹೇಳ್ತಾ ಇರಲಿಲ್ವಾ... ಅದನ್ನು ಈಡೇರಿಸಿದ್ದಾರೆ ನೋಡಿ.... ಈಗಾಗ್ಲೇ ತಮ್ಮ ಆತ್ಮೀಯ ಮಿತ್ರರಾಷ್ಟ್ರವಾಗಿರುವ ಪಾತಕಿಸ್ತಾನದ ಪ್ರಧಾನ ಮಂತ್ರಿಗೆ ಅವರು ಆಮ್ ಕಳುಹಿಸಿಕೊಟ್ಟಿದ್ದಾರೆ. ಅವರನ್ನೂ ಜೊತೆಗೆ ತಮ್ಮನ್ನೂ ಕೂಡ ಆಮ್ ಆದ್ಮೀ ಎಂದು ಪರಿಗಣಿಸಿಕೊಂಡು ಈ ಕೃತ್ಯ ಎಸಗಿದ್ದಾರೆ. ಹೀಗಾಗಿ ಅದೇನೋ ಆಮ್ ಆದ್ಮೀ ಎಂದು ಉಲ್ಲೇಖಿಸಿದ್ದಾರಲ್ಲಾ... ಅದನ್ನು ಈಡೇರಿಸಿದ್ದಾರೆ ಕಣ್ರೀ... ನೋಡಿ ಇಲ್ಲಿ ಎಂದು ಕಿರುಚಾಡಿದ ತಕ್ಷಣ, ನಮ್ಮ ಪ್ರತಿಪಕ್ಷಗಳಂತೆಯೇ ಗೊಂದಲದಲ್ಲಿ ಬಿದ್ದ ಪ್ರತಿಭಟನಾಕಾರರು, ಸದ್ದಿಲ್ಲದೆ ಅಲ್ಲಿಂದ ಕಾಲ್ಕಿತ್ತರು. ಇನ್ನು ನಾಲ್ಕು ದಿನ ಸುಮ್ಮನಿದ್ದು, ಪ್ರತಿಭಟನೆಗೆ ಬೇರೇನಾದರೂ ವಿಷಯ ಹುಡುಕೋಣ, ಅದುವರೆಗೆ ಪ್ರತಿಭಟನೆ ರದ್ದು ಎಂದು ಘೋಷಿಸುತ್ತಿರುವುದು ಕೇಳುತ್ತಿತ್ತು.

Tuesday, May 25, 2010

ಪಟ್ಟಿಯಿಂದ ಹೆಸರು ಡಿಲೀಟ್: ಕಪಿಸೈನ್ಯ ಪ್ರತಿಭಟನೆ!

(ಬೊಗಳೂರು, ಕಪಿಸೇನಾ ಬ್ಯುರೋದಿಂದ)
ಹಲವು ದಿನಗಳಿಂದ ಗಡದ್ದಾಗಿ ನಿದ್ದೆ ಮಾಡುತ್ತಿದ್ದ ಬೊಗಳೆ ಬ್ಯುರೋ, ಮಂಗಳೂರಿನಲ್ಲಿ ಮನೆ ಪಕ್ಕದಲ್ಲೇ ವಿಮಾನ ಬಿದ್ದರೂ ಎಚ್ಚರವಾಗದಿದ್ದಾಗ ವೇದೇಗೌಡ್ರು ಬಂದು, ರಾಮಾಯಣದ ಕಥೆ ಕೇಳಿದಾಗ ಬೆಚ್ಚಿ ಬಿದ್ದು ಎದ್ದು ಈ ವರದಿ ಪ್ರಕಟಿಸಿದೆ.

ಅರೆ, ಬೊಗಳೆ ಬ್ಯುರೋ ಇಲ್ಲದಿದ್ದರೂ ಜಗತ್ತಿನಲ್ಲಿ ಇಷ್ಟೆಲ್ಲಾ ವಿದ್ಯಮಾನಗಳು ಘಟಿಸಿದ್ದಾದರೂ ಹೇಗೆ ಎಂದು ಮೂಗಿನ ಮೇಲೆ ಬೆರಳು ಇರಿಸುತ್ತಿರುವಂತೆಯೇ, ರಾಮ, ರಾವಣ, ಸೀತೆ, ಹನುಮಂತ, ವಿಭೀಷಣ, ಲಕ್ಷ್ಮಣ ಎಂಬೆಲ್ಲಾ ಅಮೂಲ್ಯ ಪದಗಳು ನಮ್ಮ 'ಜಾರ'ಕಾರಣಿಗಳ ಬಾಯಿಂದ ಪಟಪಟನೆ ಉದುರುತ್ತಿರುವುದನ್ನು ನೋಡಿ, ರಾವಣರಾಜ್ಯದಲ್ಲಿ ನಿದ್ದೆ ಮಾಡಿದ್ದ ನಾವು, ರಾಮರಾಜ್ಯದಲ್ಲಿ ಎದ್ದೆವೇ ಎಂದುಕೊಂಡು ಮತ್ತೊಂದು ಕೈಯ ಬೆರಳನ್ನೂ ಮೂಗಿನ ಮೇಲೆ ಇರಿಸಲಾಯಿತು!

ಇದೇ ಸಂದರ್ಭದಲ್ಲಿ ಕಿಟಕಿಯಿಂದ ಹೊರಗೆ ನೋಡಿದಾಗ, ಕಪಿಸೈನ್ಯವು ತೀವ್ರ ಪ್ರತಿಭಟನೆ ಮಾಡುತ್ತಿರುವುದು ಕಂಡುಬಂದಿತು. ಇದಕ್ಕೆ ಕಾರಣವೇನು, ಯಾರ ವಿರುದ್ಧ ಪ್ರತಿಭಟನೆ, ಯಾಕಾಗಿ ಈ ಅಪ್ರತಿಭ ಪ್ರತಿಭಟನೆ ಎಂದೆಲ್ಲಾ ವಿಚಾರಿಸಲು ಬೊಗಳೂರು ಬ್ಯುರೋ ಕ್ಯಾಮರಾ ಹೆಗಲಿಗೇರಿಸಿಕೊಂಡು, ಒಡೆದ ಮೈಕ್ ಹಿಡಿದು ಅತ್ತ ಕಡೆ ತೆರಳಿತು.

ಮೈಕ್ ನೋಡಿದ ತಕ್ಷಣವೇ ಮಂಗವೊಂದು ಹಾರಿ, ಅದನ್ನು ಕಿತ್ತುಕೊಳ್ಳಲು ನೋಡಿತು. ತಕ್ಷಣವೇ ಬೊಗಳೂರಿನ ಅನ್ವೇಷಿ ನೇತೃತ್ವದ ಬ್ಯುರೋ ಎಂದು ತಿಳಿದಾಗ, "ಓ... ಇದು ನಮ್ಮವರೇ" ಎಂದುಕೊಂಡ ಆ ಕಪಿಯು, ಸಾರಿ ಸಾರಿ, ನಾನು ನಿಮ್ ಕೈಯಲ್ಲಿರೋದು ಬಾಳೆಹಣ್ಣೋ ಎಂದುಕೊಂಡು ಕಿತ್ತುಕೊಂಡೆ ಎಂದು ಸಮಜಾಯಿಷಿ ನೀಡಿತು.

ಆ ಮಂಗವನ್ನೇ ಕೈಯಲ್ಲಿ ಹಿಡಿದು ಮಾತನಾಡಲು ನಿರ್ಧರಿಸಲಾಯಿತು. ಯಾಕಾಗಿ ಈ ಪ್ರತಿಭಟನೆ ಎಂದು ಕೇಳಿದ ತಕ್ಷಣವೇ ಕಿರುಚಲು ಆರಂಭಿಸಿದ ಅದು ಹೇಳಿದ್ದು, "ರಾಮ, ರಾವಣರೆಲ್ಲ ಈ ಯುಗಕ್ಕೆ ಅಪಥ್ಯ. ಈಗಿನ ಕರ್ನಾಟಕದ ರಾಜಕೀಯ ಪರಿಸ್ಥಿತಿ ಗಮನಿಸಿದರೆ ರಾಮ, ರಾವಣ, ಸೀತೆ, ಲಕ್ಷ್ಮಣ ಮುಂತಾದವರು ಇತ್ತಕಡೆ ತಲೆ ಹಾಕಲೂ ಮಲಗುವುದಿಲ್ಲ ಎಂದು ನಮ್ಮಲ್ಲಿ ಹೇಳಿದ್ದಾರೆ. ಈಗೇನಿದ್ದರೂ ನಮ್ಮದೇ ಸಾಮ್ರಾಜ್ಯ. ಇಲ್ಲಿಯೂ ಕೂಡ ನಮ್ಮವರೇ ತುಂಬಿಕೊಂಡಿದ್ದಾರೆ. ಹೀಗಾಗಿ ಈ ಜಾರಕಾರಣಿಗಳ ಬಾಯಲ್ಲಿ, ರಾಮ, ರಾವಣ, ಸೀತೆ ಹೆಸರಿನ ಬದಲಿಗೆ ಕಪಿ ಸೈನ್ಯದ ಹೆಸರೇ ಬರಬೇಕಿತ್ತು. ನಮ್ಮನ್ನು ಉಲ್ಲೇಖಿಸದೇ ಇರುವುದು ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ. ಇದಕ್ಕಾಗಿಯೇ ಅಪ್ರತಿಭರಾಗಿ ನಾವು ಈ ಪ್ರತಿಭಟನೆ ಮಾಡುತ್ತಿದ್ದೇವೆ" ಎಂದು ಹೇಳಿ ಛಂಗನೆ ನೆಗೆದು ಓಡಿತು.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...