Thursday, June 24, 2010

ಓರೆಯಾಗಿ ವಾಲಿದ ಭೂಮಿ: ಬೊಗಳೂರಿನಲ್ಲಿ ಆತ್ಮಹತ್ಯೆ ಹೆಚ್ಚಳ!

[ಬೊಗಳೂರು ಹೃದಯಭಗ್ನ ಬ್ಯುರೋದಿಂದ]
ಬೊಗಳೂರು, ಜೂ.24- ಬೊಗಳೂರಿನ ಒಂದು ಭಾಗದಲ್ಲೇ ಭೂಬ್ಸ್‌ಕಂಪನ ಆಗಿರುವುದರಿಂದಾಗಿ, ಇಡೀ ಜಗತ್ತೇ ಮತ್ತೊಂದಿಷ್ಟು ಡಿಗ್ರಿ ಓರೆಯಾಗಿ ವಾಲಿರುವ ಸಂಗತಿ ಬೆಳಕಿಗೆ ಬಂದ ತಕ್ಷಣವೇ, ಇಂದೇನು Barking News? ಅಂತ ಮೂಗಿನ ಮೇಲೆ ಬೆರಳಿಟ್ಟ ಬೊಗಳೆ ರಗಳೆ ಬ್ಯುರೋಗೆ ಕೊನೆಗೂ ಹಾರ್ಟು ಬ್ರೇಕಿಂಗ್ ಸುದ್ದಿ ಸಿಕ್ಕಿದೆ ಎಂದು ಪ್ರತಿಸ್ಪರ್ಧಿ ಪತ್ರಿಕೆಗಳಾದ ಟೈಮ್ಸ್ ಆಫ್ ಬೊಗಳೂರು ಮುಂತಾದವುಗಳಲ್ಲಿ ವರದ್ದಿಯಾಗಿದೆ.

ಈ ರೀತಿ ಭೂಮಿ ಓರೆಯಾಗುವುದಕ್ಕೆ ಕಾರಣವೆಂದರೆ ಬೊಗಳೂರಿನ ಜನಸಂಖ್ಯೆಯಲ್ಲಿ ದಿಢೀರ್ ಕುಸಿತ ಕಂಡುಬಂದಿರುವುದು. ಈ ಸುಳಿವು ಸಿಕ್ಕ ತಕ್ಷಣವೇ ಬೊಗಳೂರು ಏಕಸದಸ್ಯ ಬ್ಯುರೋದ ಸರ್ವ ಸದಸ್ಯರೂ ಕ್ಷಿಪ್ರ ಸಮೀಕ್ಷೆಯೊಂದನ್ನು ನಡೆಸಿ, ಯುವ ಜನಾಂಗದ ಅದರಲ್ಲೂ ಯುವಕರ ಸಂಖ್ಯೆಯಲ್ಲಿ ಭಾರೀ ಕುಸಿತ ಕಂಡುಬಂದಿದೆ ಎಂದು ತಿಳಿದುಕೊಳ್ಳಲಾಯಿತು.

ಹೀಗೆ ಸಮೀಕ್ಷೆ ಮಾಡಲು ತೆರಳಿದಾಗ ಶಾಲಾ-ಕಾಲೇಜುಗಳು ಮುಂತಾದೆಡೆ, ಪಾರ್ಕುಗಳಲ್ಲಿ, ಬೀಚುಗಳಲ್ಲಿ ಇತ್ಯಾದಿ ಕಡೆಗಳಲ್ಲಿ ಸಾಕಷ್ಟು ಹಗ್ಗಗಳು, ನೇಣುಗಳು, ಟಿಕ್-20ಗಳು, ಫಾಲಿಡಾಲುಗಳು, ಫೆರಡಾನ್‌ಗಳು ಮುಂತಾದ ಬಾಟಲಿಗಳು ಪತ್ತೆಯಾಗಿವೆ. ಹೀಗಾಗಿ ಇದು ಖಂಡಿತಾ ಆತ್ಮಹತ್ಯೆಗಳ ಪರಿಣಾಮ ಎಂಬುದನ್ನು ಕಂಡುಕೊಳ್ಳಲಾಯಿತು.

ಎಲ್ಲಾದಕ್ಕೂ ಒಂದು ಕಾರಣವಿದ್ದೇ ಇರುತ್ತದೆ ಎಂಬ ಲೋಕ ನಿಯಮವನ್ನು ಪರಿಗಣನೆಗೆ ತೆಗೆದುಕೊಂಡು ಮತ್ತು ಪ್ರತಿಯೊಂದು ಕ್ರಿಯೆಗೂ ಪ್ರತಿಕ್ರಿಯೆಯೊಂದು ಇರುತ್ತದೆಂಬ ಓಲ್ಡ್‌ಟನ್ ನಿಯಮವನ್ನೂ ಪರಿಗಣನೆಗೆ ತೆಗೆದುಕೊಂಡು, ಅದನ್ನು ನಂಬಿ ತನಿಖೆ ಮುಂದುವರಿಸಿದಾಗ ಕಾಲಿಗೆ ಎಡತಾಕಿದ್ದು ಈ ಸುದ್ದಿ. ಮಾದಕ ನಟಿ ನಮಿತಾ ಇನ್ನು ಸೆಕ್ಸೀ ಪಾತ್ರಗಳಲ್ಲಿ ನಟಿಸೋದಿಲ್ಲವೆಂಬ ಸುದ್ದಿ ಈ ಯುವಜನಾಂಗದ ಹೃದಯಕ್ಕೆ ಕೊಳ್ಳಿ ಇಕ್ಕಿದ್ದು, ಕೆಲವರ ಹೃದಯವೇ ಒಡೆದು ಚೂರು ಚೂರಾಗಿದೆ. ಆ ಚೂರುಗಳನ್ನು ಗೂಗಲ್‌ನಲ್ಲಿ ಹುಡುಕಿದರೂ ಪತ್ತೆ ಹಚ್ಚಿ ಜೋಡಿಸಲಾಗುತ್ತಿಲ್ಲ ಎಂಬುದನ್ನು ಅನ್ವೇಷಿ ನೇತೃತ್ವದ ಬ್ಯುರೋ ತಪಾಸಣೆ ಮಾಡಿ ವಲ್ಲಿ ವರದ್ದಿ ತಂದು ಸುರಿದಿದೆ.

Tuesday, June 22, 2010

ಟಾಯ್ಲೆಟ್ ಪೇಪರ್ ಕೊರತೆ ನೀಗಿಸಲು ಪಾಕಿಗೆ ಸಾಕ್ಷ್ಯಾಧಾರ!

[ಬೊಗಳೂರು Dossier ಬ್ಯುರೋದಿಂದ]
ಬೊಗಳೂರು, ಜೂ.21- ಪಾಕಿಸ್ತಾನಕ್ಕೆ ಭಾರತವು ಪದೇ ಪದೇ ಇಂಗ್ಲಿಷಿನಲ್ಲಿ ದೋಸೆಗಳು ಎಂದು ಕರೆಯಲಾಗುತ್ತಿರುವ ಸಾಕ್ಷ್ಯಾಧಾರ ದಾಖಲೆ ಪತ್ರಗಳನ್ನು ಕಳುಹಿಸುತ್ತಿರುವುದಕ್ಕೆ ಹಾಗೂ ಅದು ಕೂಡ ಪದೇ ಪದೇ "ಇದು ಸಾಲುತ್ತಿಲ್ಲ, ಇದು ಸಾಲುತ್ತಿಲ್ಲ" ಎಂದೆಲ್ಲಾ ಬೊಬ್ಬೆ ಹೊಡೆಯುತ್ತಿರುವುದಕ್ಕೆ ಕಾರಣವೇನೆಂಬುದನ್ನು ಪತ್ತೆ ಹಚ್ಚಲಾಗಿದೆ.

ಪಾತಕಿಸ್ತಾನದಲ್ಲಿ ಉಗ್ರಗಾಮಿ ಜನಾಂಗೀಯರ ಹಾವಳಿ ಹೆಚ್ಚಾಗಿರುವುದರಿಂದ ಅಲ್ಲಿ ಮನುಷ್ಯ ಜನಾಂಗೀಯರನ್ನು ಹುಡುಕುವುದೇ ಕಷ್ಟವಾಗಿಬಿಟ್ಟಿದೆ. ಅಲ್ಲಿರುವವರೆಲ್ಲರೂ ಶಿಲಾಯುಗದ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಅವರಿಗೆ ನಿಸರ್ಗದ ಕರೆ ಬರುವುದು ಕೂಡ ಹೆಚ್ಚಾಗುತ್ತಿದೆ. ಪರಿಸರ ಪರಿಶುದ್ಧತೆಗಾಗಿ ನೀರಿನ ಕೊರತೆಯೂ ಇದೆ. ಹೀಗಾಗಿ ಅವರಿಗೆಲ್ಲರಿಗೂ ಟಾಯ್ಲೆಟ್ ಪೇಪರುಗಳು ಲೋಡುಗಟ್ಟಲೆ ಭಾರೀ ಪ್ರಮಾಣದಲ್ಲಿ ಬೇಕಾಗಿದೆ ಎಂಬುದನ್ನು ಪ್ರಾಥಮಿಕ ತನಿಖೆಯಲ್ಲಿ ಕಂಡುಕೊಳ್ಳಲಾಗಿದೆ.

ಪ್ರಾಥಮಿಕದ ಬಳಿಕ ದ್ವಿತೀಯ ಹಂತದ ತನಿಖೆ ಕೈಗೊಳ್ಳಲಾಯಿತು. ಈ ಟಾಯ್ಲೆಟ್ ಪೇಪರ್ ಕೊರತೆಗೂ, ಭಾರತವು ರಾಶಿ ರಾಶಿ ದಾಖಲೆ ಪತ್ರಗಳನ್ನು ಕಳುಹಿಸುತ್ತಿರುವುದಕ್ಕೂ ಏನಾದರೂ ಸಂಬಂಧವಿದೆಯೇ ಎಂಬುದು ಈ ತನಿಖೆಯ ಹಿಂದಿನ ಉದ್ದೇಶವಾಗಿತ್ತು. ಹೌದು! ಸಂಬಂಧ ಇದೆ ಎಂಬುದು ಬ್ರೇಕ್ ಆಗಿರುವ ಸುದ್ದಿ ಮತ್ತು ರದ್ದಿಯೂ ಹೌದು.

ಭಾರತಕ್ಕೆ ಕನಿಕರ ಯಾವಾಗಲೂ ಜಾಸ್ತಿಯೇ. ಪಾಕಿಸ್ತಾನವು ಕಳೆದ ಹಲವಾರು ವರ್ಷಗಳಿಂದ ಮತ್ತು ಅದಕ್ಕೂ ಮೊದಲಿನಿಂದಲೇ, "ಸಾಕ್ಷ್ಯಾಧಾರ ಕೊಡಿ ಕೊಡಿ" ಅಂತ ಕೇಳುತ್ತಲೇ ಇದೆ... ಪಾಪ, ಅಲ್ಲಿನ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಬೇಕು. ಅಲ್ಲಿಗೆ ಕಳುಹಿಸಿದ ದಾಖಲೆಗಳು ಹೇಗೂ ಟಾಯ್ಲೆಟ್ ಪೇಪರ್ ರೂಪದಲ್ಲೇ ಬಳಕೆಯಾಗುತ್ತಿವೆ. ಹೀಗಾಗಿ ಅದು ಕೇಳುತ್ತಲೇ ಇರುವಾಗ, ನಾವು ಕೂಡ ಕೊಡುತ್ತಲೇ ಇರೋಣ ಎಂಬ ಮಾನವೀಯ ದೃಷ್ಟಿಕೋನದಿಂದಾಗಿ ಈ ದಾಖಲೆ ವರದ್ದಿಗಳನ್ನು ಕಳುಹಿಸಲಾಗುತ್ತಿದೆ ಎಂದು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿ ಬಿಟ್ಟಿದೆ.

ಮುಂಬೈ ಮೇಲೆ ದಾಳಿ ಮಾಡಿದ ಮತ್ತು ಈಗಲೂ ದೇಶಾದ್ಯಂತ ಅಲ್ಲಲ್ಲಿ ವಿಧ್ವಂಸಕ ಕೃತ್ಯಗಳನ್ನು ಮಾಡುತ್ತಲೇ ಇರುವವರ ಮೇಲೆ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನದ ಮೇಲೆ ಒತ್ತಡ ಹೇರಲು ವಿಫಲವಾದರೂ, ಅಲ್ಲಿಗೆ ರಾಶಿರಾಶಿಗಟ್ಟಲೆ ಲಾರಿಗಳಲ್ಲಿ, ರೈಲುಗಳಲ್ಲಿ ಕಳುಹಿಸುತ್ತಿರುವ ದಾಖಲೆಯ ದೋಸೆಯರ್(dossier)ಗಳನ್ನು ಹೇರಿ ಹೇರಿ ಒಂದಿಷ್ಟು ಒತ್ತಡ ಹೇರಬಹುದು ಎಂಬುದು ನಮ್ಮವರ ಲೆಕ್ಕಾಚಾರವಾಗಿತ್ತು ಎಂದು ನಮ್ಮ ಬಲ್ಲ ಮೂಲಗಳು ತಿಳಿಸಿವೆ.

Thursday, June 17, 2010

ಶಾಲೆಯ ಭಯ: ಎವರೆಸ್ಟ್ ಹುಡುಗ್ರ ಎವರ್ ರೆಸ್ಟ್!

[ಬೊಗಳೂರು ತನಿಖಾನ್ವೇಷಣಾ ಬ್ಯುರೋದಿಂದ]
ಬೊಗಳೂರು, ಜೂ.17- ಬೊಗಳೂರಿನ ಶಾಲೆಗಳಿಂದ ಮಕ್ಕಳು ಇತ್ತೀಚೆಗೆ ನಾಪತ್ತೆಯಾಗುತ್ತಿರುವ ಪ್ರಕರಣಗಳು ಹೆಚ್ಚಾಗತೊಡಗಿದ್ದು, ಶಾಲೆಗಳಲ್ಲಿ ಹಾಜರಾತಿ ತೀರಾ ಕುಸಿದುಬಿದ್ದಿರುವುದು ಸರಕಾರದ ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ರಾಜ್ಯದ ಸರ್ವರನ್ನೂ ಶಿಕ್ಷಿಸುವ ಅಭಿಯಾನದ ಹೊಣೆ ಹೊತ್ತ ಶಿಕ್ಷಣ ಸಚಿವರು, ಬೊಗಳೂರು ಬ್ಯುರೋ ಸಂಪರ್ಕಿಸಿ ಮಾಹಿತಿ ನೀಡಿದ್ದಾರಲ್ಲದೆ, ತನಿಖೆಯನ್ನೂ ನಡೆಸುವಂತೆ ಆದೇಶಿಸಿದ್ದಾರೆ.

ಈ ಕುರಿತು ತನಿಖೆ ನಡೆಸಲು ಕನಿಷ್ಠ 26 ವರ್ಷಗಳಾದರೂ ಬೇಕು, ಅದಕ್ಕಿಂತ ಮೊದಲು ಬಾಲಕರು ನಾಪತ್ತೆಯಾಗಲು ಕಾರಣರಾದವರನ್ನು ಬಂಧಿಸಿದ ನಾಟಕವಾಡಿ, ಬಿಡುಗಡೆಗೊಳಿಸಿ ವಿಮಾನದಲ್ಲಿ ವಿದೇಶಕ್ಕೆ ಕಳುಹಿಸಿಕೊಡಬೇಕು... ಇತ್ಯಾದಿ ಫಾರ್ಮಾಲಿಟಿಗಳೆಲ್ಲಾ ಇವೆಯಲ್ಲಾ, ಅದೆಲ್ಲಾ ಆದ ಮೇಲೆ ನಾವು ತನಿಖೆ ಶುರು ಮಾಡುತ್ತೇವೆ ಎಂದು ಸರಕಾರಕ್ಕೆ ಭರವಸೆ ನೀಡಲಾಗಿದೆ.

ಇದಕ್ಕೆ ಸಚಿವರು ಒಪ್ಪಿದ ಬಳಿಕ ತನಿಖೆಯನ್ನು ತೀವ್ರಗತಿಯಲ್ಲೇ ಮುಂದುವರಿಸಲಾಯಿತು. ಹೀಗಾಗಿ ತಲೆಗೆ ಹೆಲ್ಮೆಟ್, ಬೆನ್ನಿಗೆ ಬಲುದೊಡ್ಡ ಗನ್ನಿ ಬ್ಯಾಗ್, ಅದರೊಳಗೆ ಪುಸ್ತಕಗಳ ರಾಶಿ, ಕೈಯಲ್ಲೊಂದು ಉದ್ದದ ಅಜ್ಜನ ಕೋಲಿನಂತಹ ಕೊಡೆ, ಓದಿ ಓದಿ ಹಾಳಾದ ಕಣ್ಣಿಗೆ ದಪ್ಪ ಗಾಜಿನ ಕನ್ನಡಕ, ಕಾಲಿಗೆ ಕರಿಬೂಟು, ಕೈಗೆ ಕೈಗವುಸು ಇತ್ಯಾದಿಗಳನ್ನೆಲ್ಲಾ ಧರಿಸಿಕೊಂಡು ನಮ್ಮ ಅನ್ವೇಷಣೆಯನ್ನು ಆರಂಭಿಸಲಾಯಿತು.

ಕನ್ಯಾಕುಮಾರಿಯಿಂದ ಅಭಿಯಾನ ಆರಂಭಿಸಿದ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳೂ, ಮೇಲೆ ಮೇಲೆ ಇಂಚಿಂಚಾಗಿ ಶೋಧಿಸುತ್ತಾ ಹೊರಟು, "ಮದ್ಯ"ಪ್ರದೇಶದಲ್ಲಿ ಪೆಟ್ರೋಲ್ ಹಾಕಿಸಿಕೊಂಡು, ಅಲ್ಲಿಂದ ಮೇಲೇಳುತ್ತಿದ್ದ ಅನಿಲದ ವಾಸನೆಯನ್ನು ಆಘ್ರಾಣಿಸುತ್ತಾ, ಮುಂದುವರಿಯಲಾಯಿತು.

ಮೇಲಮೇಲಕ್ಕೆ ಹೋಗಿ ಹೋಗಿ ತಲುಪಿದ್ದು ಎವರೆಸ್ಟ್ ಶಿಖರದ ತುತ್ತ.... ತುದಿಗೆ ಖಂಡಿತಾ ಅಲ್ಲ, ಅದರ ಬುಟ್ಟ-ಬುಡಕ್ಕೆ! ಅಲ್ಲಿ ಹೋಗಿ ಆಯಾಸದಿಂದ ಬಿದ್ದವರು ಮೇಲಕ್ಕೆ ನೋಡಿದಾಗ... ಕಂಡಿದ್ದೇನು...! ಎಲ್ಲ ಮಕ್ಕಳೂ ಅದರ ತುತ್ತ ತುದಿಯಲ್ಲಿದ್ದಾರೆ!

ಕೂಡಲೇ ನಾವು ಕೂಡ ಮೇಲೇರಲು ಪ್ರಯತ್ನಿಸಿ ಪ್ರಯತ್ನಿಸಿ ವಿಫಲವಾದಾಗ, ಅಲ್ಲಿಂದಲೇ ಸಂದರ್ಶನಕ್ಕೆ ಕೋರಿಕೊಳ್ಳಲಾಯಿತು. ಬೇಗ ಮರಳಿ ಬನ್ನೀ, ನಿಮ್ಮನ್ನು ಎಲ್ಲರೂ ಕೇಳುತ್ತಿದ್ದಾರೆ ಎಂದು ಅವರಿಗೆ ಹೇಳಲಾಯಿತು.

ಅದಕ್ಕೆ, ಈಗಾಗಲೇ 13 ವಯಸ್ಸಿನಲ್ಲೇ ಎವರೆಸ್ಟ್‌ನಲ್ಲಿ ಏರಿ, ಇತಿಹಾಸ ಸೃಷ್ಟಿಸಿದ ಬಾಲಕರೆಲ್ಲರೂ, "ನಾವು ಖಂಡಿತಾ ಬರೋದಿಲ್ಲ, ಇಲ್ಲಾದರೆ ನಮಗೆ ಹೋಂ ವರ್ಕ್ ಒತ್ತಡ ಇಲ್ಲ, ಶಾಲೆಗೆ ಹೋಗಲೇಬೇಕಿಲ್ಲ, ಮಣಭಾರದ ಸ್ಕೂಲ್ ಬ್ಯಾಗ್ ಹೊರಬೇಕಿಲ್ಲ. ಮನೆಗೆ ಬಂದ ತಕ್ಷಣ ಟ್ಯೂಷನ್ ಕ್ಲಾಸಿಗೆ, ಸಂಗೀತ ಕ್ಲಾಸಿಗೆ, ನಾಟ್ಯ ಕ್ಲಾಸಿಗೆ, ಇಂಡಿಯನ್ ಐಡಲ್ ಕ್ಲಾಸಿಗೆ ಅಥವಾ ರಿಯಾಲಿಟಿ ಶೋಗಳಿಗೆ, ಲೈವ್ ಶೋಗಳಿಗೆ ಹೋಗು ಎಂಬ ಒತ್ತಡ ಇರಲ್ಲ. ನಾವು ಇಲ್ಲೇ ಆರಾಮವಾಗಿದ್ದೇವೆ. ಚೆಂಡಾಟ ಆಡಿಕೊಂಡು ಎವರೆಸ್ಟ್‌ನಲ್ಲಿಯೇ ಎವರ್ ರೆಸ್ಟ್ ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ" ಎಂದುಬಿಟ್ಟರು.

ಇಲ್ಲೇ ಇದ್ದರೆ, ಜಗತ್ತಿನಲ್ಲಿ, ನಮ್ಮ ಭಾರತದಲ್ಲಿ ಏನೆಲ್ಲಾ ಆಗುತ್ತದೆ ಎಂಬುದನ್ನು ಒಂದಿಷ್ಟು ಬಗ್ಗಿ ನೋಡಿಬಿಟ್ಟರೆ ಎಲ್ಲವೂ ತಿಳಿಯುತ್ತದೆ ಎಂದು ಆ ಎವರೆಸ್ಟ್ ಏರಿದ ಅತಿ ಕಿರಿಯನೆಂಬ ಸಾಧನೆ ಮಾಡಿದ ಮಗು ಹೇಳಿದ ತಕ್ಷಣವೇ, ಅಲ್ಲಿಂದ ಧಢಾರನೆ ಬಿದ್ದ ಬೊಗಳೆ ರಗಳೆ ಬ್ಯುರೋದ ಸಮಸ್ತ ಸಿಬ್ಬಂದಿಗಳು ಎದ್ದದ್ದು ಬೊಗಳೂರಿನಲ್ಲಿಯೇ! ಮತ್ತು ಆ ಮಕ್ಕಳಿಗೆ ಎವರೆಸ್ಟ್ ಏರುವುದನ್ನೇ ನಿಷೇಧಿಸಿರುವ ಚೀನಾ ಸರಕಾರದ ನಿರ್ಧಾರದಲ್ಲಿ ಬೊಗಳೆ ರಗಳೆ ಬ್ಯುರೋದ ಕೈವಾಡವಿಲ್ಲ ಎಂಬುದನ್ನು ತಿಳಿಹೇಳುವಲ್ಲಿ ಸಾಕುಬೇಕಾಯಿತು!

Tuesday, June 15, 2010

ನೆರೆ ಬಂದಿದ್ದೆಲ್ಲಿಂದ?: ತನಿಖೆಗೆ ಕೇಡೀಶಿ ಆಗ್ರಹ!

(ಬೊಗಳೂರು ನೆರೆ ಪ್ರವಾಹ ಬ್ಯುರೋದಿಂದ)
ಬೊಗಳೂರು, ಜೂ.15- ಬೊಗಳೂರು ಇರುವ ರಾಜ್ಯವು ಹಿಂದೆಂದೂ ಕಂಡು ಕೇಳರಿಯದ ನೆರೆ ಪ್ರವಾಹದ ಸಂದರ್ಭದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದೊಳಗೆ ಭಿನ್ನಮತ ಹೊಗೆಯಾಡಿ, ಹೊಗೆಯಾಡಿ, ಗಣಿಧಣಿಗಳು ಒಬ್ಬ ಮಹಿಳಾ ಮಂತ್ರಿಯನ್ನು ತೆಗೆದುಹಾಕಲು ಮಾಡಿದ ಪ್ರಯತ್ನವಿದೆಂದು ತಿಳಿದು ಎಲ್ಲವೂ ಶಮನವಾಗಿದೆ ಎಂದು ಅಂದುಕೊಳ್ಳುತ್ತಿರುವಾಗ, ಅದೇ ನೆರೆ ಪ್ರವಾಹದ ಕೊಚ್ಚೆಯಲ್ಲಿ ವಿರೋಧ ಪಕ್ಷ ಕಾಂ-ಗೆಸ್ ಕೂಡ ಸಿಲುಕಿಬಿಟ್ಟಿದೆ.

ನೆರೆ ಪರಿಹಾರಕ್ಕಾಗಿ ಜನರಿಂದ ಸಂಗ್ರಹಿಸಿ ಹಣವನ್ನು ಗುಳುಂ ಅಂತ ಸದ್ದು ಬಾರದಂತೆಯೇ ನುಂಗಿರುವ ಆರೋಪಗಳು ನೂರಿಪ್ಪತ್ತೈದು ವರ್ಷ ಇತಿಹಾಸವಿರುವ ಪಕ್ಷವನ್ನು ಅಲುಗಾಡಿಸುತ್ತಿದ್ದು, ಈ ಬಗ್ಗೆ Conಗೆಟ್ಟಿರುವ ಪಕ್ಷದ ಮುಖ್ಯಸ್ಥರು ಇದೀಗ ಈ ಬಗ್ಗೆ ತನಿಖೆಯಾಗಲಿ ಎಂದು ಬೊಗಳೂರು ಬ್ಯುರೋಗೆ ಫೋನ್ ಮಾಡಿ ಒತ್ತಾಯಿಸಿದ್ದಾರೆ.

ಕೇಡೀಶಿ ಮತ್ತು ಡೇಶೀಪಿ ನಡುವಣ ಕಲಹದಿಂದಾಗಿಯೇ ಈ ಹಣ ದುರುಪಯೋಗ ಆಗಿದೆ ಎಂಬ ಮಾತುಗಳು ಕೇಳಿಬಂದಿದ್ದರಿಂದ ಬೊಗಳೂರು ಏಕಸದಸ್ಯ ಬ್ಯುರೋದ ಸರ್ವ ಸದಸ್ಯರೂ ಕಿವಿ ನಿಮಿರಿಸಿ ಈ ಫೋನ್ ಕರೆಗೆ ಓಗೊಟ್ಟಿದ್ದರು.

ಡೇಶೀಪಿ ಅವರು ಫೋನ್ ಮಾಡುತ್ತಾ, ಹಣ ಸಂಗ್ರಹಿಸಿದ್ದು ನಿಜ, ನಾವು ಜನರಿಂದ ಸಂಗ್ರಹಿಸಿದಹಣವನ್ನು (ನಮ್ಮ) ಜನರಿಗೇ ಕೊಟ್ಟಿದ್ದೇವೆ. ಅದರಲ್ಲೇನು ತಪ್ಪಿದೆ ಎಂದು ಕೇಳಿದರಲ್ಲದೆ, ಹಣ ದುರುಪಯೋಗವಾಗಿದ್ದು ಬಯಲಾಗಿದ್ದು ಹೇಗೆ ಎಂದು ತನಿಖೆ ಮಾಡಿಸುವಂತೆ ಹೈಕಮಂಗ್ ಜೊತೆ ಆಗ್ರಹಿಸುವುದಾಗಿ ಹೇಳಿದರು.

ಅವರ ಫೋನ್ ಕರೆಯನ್ನು ಕಿವಿಯಾಚೆ ಹಿಡಿದು, ಡೇಕೀಶಿ ಕರೆಯನ್ನು ಕೈಗೆತ್ತಿಕೊಳ್ಳಲಾಯಿತು. ಅವರು ಹೇಳಿದ್ದು: ನಮ್ಮಲ್ಲಿ ಹಣ ಸಂಗ್ರಹ ಮುಂಚಿನಿಂದಲೇ ಆಗುತ್ತಿತ್ತು. ಆದರೆ, ಹಣ ಸಂಗ್ರಹವಾದ ನಂತರ ಈ ನೆರೆ ಬಂದದ್ದು ಎಲ್ಲಿಂದ ಮತ್ತು ಅದು ಹೇಗೆ ಎಂಬುದೇ ತನಿಖೆಯಾಗಬೇಕು!

Monday, June 07, 2010

'ಕಂತ್ರಿ' ಎಂದು ಅವಮಾನ: ಡಾಗ್ ಸಂಘ ಪ್ರತಿಭಟನೆ

(ಬೊಗಳೂರು ಗುಂಡುಹಾಕುವ ಬ್ಯುರೋದಿಂದ)
ಬೊಗಳೂರು, ಜೂ.7- ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾವು ಸಿದ್ಧಿ-ಪ್ರಸಿದ್ಧಿ ಗಳಿಸುತ್ತಿರುವಾಗ, ಹೆಸರಿಗೆ ಒಂದಿಷ್ಟು ಮಸಿ ಬಳಿಯಲು ಪ್ರಯತ್ನಿಸುತ್ತಿರುವ ಬೆಂಗಳೂರು ಡಿಜಿಪಿ ಅಜಯ್ ಕುಮಾರ್ ಸಿಂಗ್ ಅವರ ವರ್ತನೆಯನ್ನು ಖಂಡಿಸಿರುವ ಬೊಗಳೂರಿನ ನಾಯಿಗಳು, ಮರ್ಯಾದೆ ಮಣ್ಣುಪಾಲಾಯ್ತು ಎಂದು ಗುಲ್ಲೆಬ್ಬಿಸಿವೆ.

ಪೊಲೀಸರು, ಕೇಂದ್ರ ಗೃಹ ಸಚಿವರು, ರಾಜ್ಯದ ಮಂತ್ರಿಗಳು, ಮುಖ್ಯಮಂತ್ರಿಗಳೆಲ್ಲರೂ, ಶ್ರೀಶ್ರೀ ಅವರ ಮೇಲೆ ದಾಳಿ ಉದ್ದೇಶವಾಗಿರಲಿಲ್ಲ ಎಂದು ಒತ್ತಿ ಒತ್ತಿ ಹೇಳುತ್ತಿರುವಂತೆಯೇ, ಇಲ್ಲ, ಇಲ್ಲ, ಇದು ತನ್ನ ಮೇಲೆಯೇ ದಾಳಿ ನಡೆದದ್ದು ಎಂದು ಗುರೂಜಿವರ್ಯರು ಹೇಳುತ್ತಲೇ ಬಂದಿದ್ದರು. ಇದೀಗ ಪೊಲೀಸರು ತನಿಖೆ, ಪ್ರಯೋಗಾಲಯ, ಎಂದೆಲ್ಲಾ ಸುತ್ತಾಡಿ, ಒಂದಷ್ಟು ಗುಂಡುಗಳನ್ನು ಪತ್ತೆ ಹಚ್ಚಿ ತಾಳೆ ನೋಡಿ, ಇದು ನಾಯಿಗಳಿಗೆ ಹಾರಿಸಲಾದ ಗುಂಡು, ತಪ್ಪಾಗಿ ಶ್ರೀಶ್ರೀಗಳ ಅನುಯಾಯಿ ಮೇಲೆ ಬಿದ್ದಿದೆ ಎಂದು ಸಂಚೋದನೆ ಮಾಡಿ ಹೇಳಿದ್ದರು.

ಈ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿಜಿಪಿ ಅಜಯ್ ಕುಮಾರ್ ಸಿಂಗ್ ಅವರು, ಬರೇ ನಾಯಿಗಳನ್ನು ಓಡಿಸಲು ಹಾರಿಸಿದ ಗುಂಡಾಗಿತ್ತದು ಎಂದು ಹೇಳಿದ್ದರೆ ನಾವು ತೆಪ್ಪಗಿರುತ್ತಿದ್ದೆವು, ಆದರೆ ಅವರು ಅದಕ್ಕೆ ಸೇರಿಸಿದ ಇನ್ನೊಂದು ಪದ 'ಕಂತ್ರಿ' ನಾಯಿ ಅಂತ. ಇದನ್ನೆಂದಿಗೂ ಸಹಿಸುವುದು ಸಾಧ್ಯವಿಲ್ಲ ಎಂದಿರುವ ನಾಯಿಗಳ ಸಂಘದ ಅಧ್ಯಕ್ಷ ಶ್ವಾನ ಕುಮಾರ್ ಅವರು, ಇದನ್ನು ಸಹಿಸುವುದು ತುಂಬಾ ಕಷ್ಟವಾಗುತ್ತಿದೆ, ನಮಗೆ ಬೊಗಳದೇ ಇರಲು ಆಗುತ್ತಲೇ ಇಲ್ಲ ಎಂದು ಅಲವತ್ತುಕೊಂಡಿದ್ದಾರೆ.

ಆದರೆ, ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ, ತಮ್ಮ ಹೇಳಿಕೆಯನ್ನು ಭಾಷಾಂತರಿಸಿ ಇಂಗ್ಲಿಷಿನಲ್ಲಿ ಹೇಳುವಾಗ, ಸರಿಯಾಗಿಯೇ Country ನಾಯಿಗಳು ಅಂತ ಉಚ್ಚರಿಸಿದ್ದಾರೆ. ಇದು ನಮ್ಮ ದೇಶಭಕ್ತಿಯ ಸೂಚಕವೂ ಹೌದು. ಆದರೆ, ಸ್ಥಳೀಯ ಭಾಷೆಯಲ್ಲಿ, ಅಚ್ಚಕನ್ನಡದ ಪತ್ರಿಕೆಗಳವರಿಗೆ ಮಾಹಿತಿ ನೀಡುವಾಗ, ಕಂತ್ರಿ ಎಂಬ ಪದ ಪ್ರಯೋಗಿಸಿದ್ದರು ಎಂದು ಅವರು ದೂರಿದ್ದಾರೆ.

ಈ ಮಧ್ಯೆ, ಆಶ್ರಮದ ಪಕ್ಕದಲ್ಲಿದ್ದ ಫಾರ್ಮ್ ಹೌಸ್ ಮಾಲೀಕರು ನೀಡಿದ ಸ್ಪಷ್ಟನೆಗೂ ಈ ನಾಯಿಗಳು ಕಿಡಿ ಕಾರಿವೆ. "ತಾವು ಯಾರನ್ನೂ ಗುರಿಯಾಗಿರಿಸಿ ಗುಂಡಿನ ದಾಳಿ ನಡೆಸಿರಲಿಲ್ಲ" ಎಂದವರು ಒಂದು ಕಡೆ ಹೇಳಿದ್ದರು. ಇದನ್ನು ಖಂಡಿಸಿರುವ ಶ್ವಾನ್ ಕುಮಾರ್, ಇಲ್ಲ, ಇಲ್ಲ, ಖಂಡಿತಾ ಇದನ್ನು ನಮ್ಮನ್ನು ಗುರಿಯಾಗಿರಿಸಿಕೊಂಡು ಮಾಡಿದ ದಾಳಿ, ನಮಗೆ ರಕ್ಷಣೆ ಇಲ್ಲ, ಬೆಂಗಳೂರಲ್ಲಿ ಎಲ್ಲಿ ಹೋದರೂ ನಮಗೆ ಬಾಲ ಅಲ್ಲಾಡಿಸುವುದಕ್ಕೂ ಜಾಗ ಸಿಗುತ್ತಿಲ್ಲ. ಹೀಗಾಗಿ, ಖಂಡಿತಾ ಇದು ನಮ್ಮ ವಿರುದ್ಧ ಮಾಡಿರುವ ಸಂಚು ಎಂದು ಆರೋಪಿಸಿವೆ.

ಕುರಿ ಮೇಲೆ ನಮ್ಮ ಸಮುದಾಯದವರು ದಾಳಿ ಮಾಡಿದ್ದು ನಿಜ ಎಂಬುದನ್ನು ಒಪ್ಪಿಕೊಂಡ ಅವರು, ಹೀಗಿರುವಾಗ, ಅವರು ಬರೇ ಗಾಳಿಯಲ್ಲಿ ಗುಂಡು ಹಾಕುವುದು ಹೇಗೆ ಸಾಧ್ಯ? ಖಂಡಿತಾ ಈ ಹೇಳಿಕೆ ನೀಡುತ್ತಿರುವಾಗ ಅವರು ಗುಂಡು ಹಾಕಿರಲೇ ಬೇಕು. ನಮ್ಮನ್ನೇ ಗುರಿಯಾಗಿರಿಸಿಯೇ ಅವರು ಗುಂಡು ಹಾಕಿದ್ದು ಎಂದು ಆರೋಪಿಸಿದ್ದಾರೆ. ಈ ಬಗ್ಗೆ, ಆ ಬುಲೆಟ್ ನಮ್ಮನ್ನೇ ಗುರಿಯಾಗಿರಿಸಿ ಹೊರಬಂದಿರುವುದೇ ಅಲ್ಲವೇ ಎಂಬುದನ್ನು ತನಿಖೆ ನಡೆಸಲು ಐತಲಕಡಿ ಖ್ಯಾತಿಯ ಬುಲೆಟ್ ಪ್ರಕಾಶ್ ಅವರ ಮೊರೆ ಹೋಗುವುದಾಗಿಯೂ ಅವರು ಹೇಳಿದ್ದಾರೆ.

ಇದರೊಂದಿಗೆ, ಸಮೀಪದ ಫಾರ್ಮ್‌ಹೌಸ್ ಮಾಲೀಕರು ಕತ್ತಲಲ್ಲಿಯೇ ಗುಂಡು ಹಾಕಿದ್ದರೇ ಎಂಬುದರ ಕುರಿತೂ ತನಿಖೆ ನಡೆಸಬೇಕೆಂದು ಕೊಟ್ಟ ಕೊನೆಗೆ ಬೊಗಳೂರಿನ ಅಸತ್ಯಾನ್ವೇಷಿ ನೇತೃತ್ವದ ಏಕ ಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು ಆಗ್ರಹಿಸತೊಡಗಿದ್ದಾರೆ.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...