Wednesday, September 15, 2010

ದಕ್ಷಿಣದಲ್ಲಿ ಕಾಲ್ ಸೆಂಟರ್: ಕಾಶ್ಮೀರದಲ್ಲಿ ಕಲ್ಲು ಸೆಂಟರ್ ಬೂಮ್!

(ಬೊಗಳೂರು ಕಲ್ಲೇಟಿನಿಂದ ಎಚ್ಚೆತ್ತುಕೊಂಡ ಬ್ಯುರೋದಿಂದ)
ಬೊಗಳೂರು, ಸೆ.15- ದಕ್ಷಿಣ ಭಾರತ ಮತ್ತು ದೇಶ ವಿದೇಶಗಳಿಂದಲೂ ಜಮ್ಮು ಮತ್ತು ಕಾಶ್ಮೀರಕ್ಕೆ ಕಲ್ಲುಗಳು ಸರಬರಾಜಾಗುತ್ತಿವುದರಿಂದ ಕಾಶ್ಮೀರದ ವಾಣಿಜ್ಯೋದ್ಯಮ ಮತ್ತು ಪ್ರವಾಸೋದ್ಯಮ ಬೆಳೆಯುತ್ತಿದ್ದು ಉತ್ತಮ ಬೆಳವಣಿಗೆಯಾಗಿದೆ ಎಂದು ಕೇಂದ್ರದ ಉಪ (UPA) ಸರಕಾರದ ನಿಧಾನಿಗಳು ಘೋಷಿಸಿದ್ದಾರೆ.

ಕಲ್ಲುಗಳು ಹೆಚ್ಚು ಹೆಚ್ಚಾಗಿ ಬಂದು ಬೀಳುತ್ತಿರುವುದರಿಂದ, ಈ ಕಲ್ಲುಗಳ ಮಾ(ತೂ)ರಾಟದಿಂದ ಜನರ ಜೀವನ ಮಟ್ಟ ಸುಧಾರಿಸಿದೆ. ಅವರು ಬಾಂಬ್, ಗುಂಡಿನ ದಾಳಿಗಳನ್ನೆಲ್ಲಾ ಬದಿಗಿಟ್ಟು, ಕಲ್ಲಿನ ಉದ್ಯಮ ಆರಂಭಿಸಿರುವುದು ಹೊಸ ಶಕೆಗೆನಾಂದಿ ಎಂದು ವರದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಉಪ ನಿಧಾನಿ ಹೇಳಿದರು.

ಕಾಶ್ಮೀರದಲ್ಲಿ ನಡೆಯುತ್ತಿರುವ ಗಲಭೆ, ಹಿಂಸಾಚಾರಗಳಲ್ಲಿ ಪಾತಕಿಸ್ತಾನದ ಕೈವಾಡವಿರುವುದು ಸಾಧ್ಯವೇ ಇಲ್ಲ, ನಾವು ಆಗಾಗ್ಗೆ ಪಾತಕಿಸ್ತಾನದ ಬಳಿಗೆ ಹೋಗಿ ಮಾತುಕತೆ ನಡೆಸಿ ಬರುತ್ತಿದ್ದೇವೆ. ಅಲ್ಲಿ ಯಾವತ್ತೂ ತಲೆ ಎತ್ತದೆ, ಇಲ್ಲಿ ಬಂದಾಗಲೂ ತಲೆ ತಗ್ಗಿಸಿಯೇ ಇರುತ್ತೇವೆ. ನಾವು ಇಷ್ಟು ದಯನೀಯ ಮತ್ತು ವಿಧೇಯ ದೃಷ್ಟಿಕೋನ ಹೊಂದಿರುವಾಗ ಪಾತಕಿಸ್ತಾನೀಯರು ನಮ್ಮ ಮೇಲೆ ಆಕ್ರೋಶಗೊಳ್ಳುವುದಾದರೂ ಹೇಗೆ ಸಾಧ್ಯ ಎಂದವರು ಪ್ರಶ್ನಿಸಿದ್ದಾರೆ.

ಇದೀಗ ಕಾಶ್ಮೀರದಲ್ಲಿ ಲೋಡುಗಟ್ಟಲೆ ಕಲ್ಲುಗಳು ಬಂದು ಬೀಳುತ್ತಿವೆ. ಹೀಗಾಗಿ ಅಲ್ಲಿ ಹಿಮಪಾತ ಜೋರಾಗಿ, ಮಳೆ ಸುರಿದು ಪ್ರವಾಹ ಬರುವುದೆಲ್ಲಾ ಸಾಧ್ಯವಾಗದ ಮಾತು. ಯಾಕೆಂದರೆ ಹಳ್ಳ ದಿಣ್ಣೆಗಳೆಲ್ಲವೂ ಈಗಾಗಲೇ ಕಲ್ಲುಗಳಿಂದ ತುಂಬಿ ಹೋಗಿದ್ದು, ನೀರು ಕೂಡ ಕಾಶ್ಮೀರದಿಂದ ಮಳೆಯ ಕೊರತೆಯಿಂದ ಬಳಲುತ್ತಿರುವ ಭಾರತದ ಕೆಳ ಭಾಗಕ್ಕೆ ಸರಾಗವಾಗಿ ಹರಿಯುತ್ತದೆ. ಇದು ಬಹೂಪಯೋಗಿ ಯೋಜನೆ ಎಂದವರು ಘೋಷಿಸಿದ್ದಾರೆ.

ಅಂತೆಯೇ, ಗೀಲಾನಿ ಕರೆ ನೀಡಿರುವಂತೆ ಹಗಲು ಕಲ್ಲು ಹೊಡೆದು, ರಾತ್ರಿ ಕೆಲಸ ಮಾಡುವುದು ಹೆಚ್ಚಾಗಿರುವುದರಿಂದಾಗಿ ಜನಸಂಖ್ಯೆಯೂ ನಿಯಂತ್ರಣದಲ್ಲಿರುತ್ತದೆ. ಭಾರತದ ಶಿರೋಭಾಗವು ಜನಸಂಖ್ಯಾ ಸ್ಫೋಟದಿಂದಾಗಿ ಹೆಚ್ಚು ಭಾರವಾಗಿ, ಒಂದು ಭಾಗಕ್ಕೆ (ಬಲಭಾಗ -ಪಾಕಿಸ್ತಾನ ಅಥವಾ ಎಡಭಾಗ - ಚೀನಾದತ್ತ) ವಾಲುವುದಕ್ಕೂ ಕಾರಣವಾಗುತ್ತಿತ್ತು. ಇದೀಗ ಈ ವಾಲುವಿಕೆಯ ಸಮಸ್ಯೆಗೆ ಆಟೋಮ್ಯಾಟಿಕ್ ಪರಿಹಾರ ದೊರೆತಿದೆ ಎಂದು ಎಂದಿರನ್ (ತಮಿಳಿನಲ್ಲಿ ರಜನಿಕಾಂತ್ ಅವರ ಹೊಸ ಚಿತ್ರ ರೋಬೋಟ್ ಎಂದರ್ಥ) ಖ್ಯಾತಿಯ ಮಾನ್ಯ ಮನಮೋಹಕ ಸಿಂಗರು ತಿಳಿಸಿದ್ದಾರೆ.

ಕೇಂದ್ರದಲ್ಲಿ ಸರಕಾರ ಸ್ಥಗಿತವಾಗಿದೆ, ಸರಕಾರ ಇದೆಯೇ ಇಲ್ಲವೇ ಎಂಬುದೇ ತಿಳಿಯುತ್ತಿಲ್ಲ ಎಂಬ ಪ್ರತಿಪಕ್ಷಗಳ ಕೂಗಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಕಳೆದ ಆರು ವರ್ಷದಿಂದ ಆ ಕುರ್ಚಿಯ ಮೇಲೆ ಕೂತಿದ್ದೇವೆ. ನಿಮಗೇನೂ ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿದರು.

ಅಷ್ಟು ಮಾತ್ರವಲ್ಲದೆ, ಕಾಶ್ಮೀರದಲ್ಲಿ ಉದ್ಯೋಗಾವಕಾಶಗಳೂ ಹೆಚ್ಚುತ್ತಿವೆ. ಯುವಕರೆಲ್ಲಾ ಕಲ್ಲು ಹೊಡೆಯುವ ಉದ್ಯೋಗಕ್ಕೇ ಜೋತು ಬೀಳುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಕಾಲ್ ಸೆಂಟರ್‌ಗಳ ಉದ್ಯೋಗದ ಬೂಮ್ ಆಗಿರುವಂತೆಯೇ ಉತ್ತರದಲ್ಲಿ ಕಲ್ಲು ಸೆಂಟರ್‌ಗಳು ಹೆಚ್ಚಾಗುತ್ತಿದೆ ಎಂದು ನಿಧಾನಿಗಳು ಹರ್ಷ ವ್ಯಕ್ತಪಡಿಸಿದರು.

ನಕ್ಸಲರ ಅಟ್ಟಹಾಸ, ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ದಾಂಧಲೆ, ದೇಶದ ಎಲ್ಲೆಡೆ ಭಯೋತ್ಪಾದಕರ ಹಾವಳಿ ಮುಂತಾದ ಆಂತರಿಕ ಭದ್ರತೆಗೆ ಸಂಬಂಧ ಪಟ್ಟ ವಿಷಯಗಳಲ್ಲಿ ನೀವೇಕೆ ಮೂಗು ತೂರಿಸುತ್ತಿಲ್ಲ, ಮೌನವಾಗಿದ್ದೀರಲ್ಲಾ ಎಂದು ಬೊಗಳೆ ಬ್ಯುರೋ ವರದ್ದಿಗಾರರು ಕೇಳಿದಾಗ, ಯಂತ್ರಮಾನವರಂತೆ ಒಂದು ಕೈ ಮಾತ್ರ ಆಡಿಸುತ್ತಾ ಉತ್ತರಿಸಿದ ನಿಧಾನಿಗಳು, ಬೆಚ್ಚಿ ಬಿದ್ದಂತೆ ಈ ಕೆಳಗಿನಂತೆ ಉತ್ತರಿಸಿದರು:

"ಏನು? ಮೂಗು ತೂರಿಸುತ್ತಿಲ್ಲವೇ? ನಮ್ಮ ಮನೆ ಸಚಿವರಾಗಿರುವ ಪೀಚಿ ದಂಬರಂ ಅವರು ಆಗಾಗ್ಗೆ ಹೇಳಿಕೆ ಕೊಡುತ್ತಿದ್ದಾರೆ. ಅವರಿಗೆ ಹೇಳಿಕೆ ನೀಡಲು ನಮ್ಮ ಅಧಿನಾಯಕಿ ಕೂಡ ಆಗಾಗ್ಗೆ ಸೂಚನೆ ನೀಡುತ್ತಿರುತ್ತಾರೆ. ಅವರ ಮೂಗು ಸಣ್ಣದಿರುವುದರಿಂದ ಅವರು ಮೂಗು ತೂರಿಸುತ್ತಿರುವುದು ನಿಮಗೆ ಕಾಣಿಸುತ್ತಿಲ್ಲ ಅಷ್ಟೇ. ಒಮ್ಮೆ ಸೂಕ್ಷ್ಮದರ್ಶಕ ಯಂತ್ರ (ಮೈಕ್ರೋಸ್ಕೋಪ್) ಬಳಸಿ ನೋಡಿ" ಎಂದು ಬೊಗಳೆ ಬ್ಯುರೋದವರಿಗೇ ಉಪದೇಶ ನೀಡಿದರು.

(ಹಲವು ದಿನಗಳಿಂದ ಕಲ್ಲೇಟಿನಿಂದ ತಲೆಮರೆಸಿಕೊಳ್ಳಬೇಕಾದ ಬೊಗಳೂರು ಏಕಸದಸ್ಯ ಬ್ಯುರೋದ ಸದಸ್ಯರು, ದಿಢೀರ್ ಆಗಿ ತಲೆಗೇ ಏಟು ಬಿದ್ದಿದ್ದರಿಂದ ಎಚ್ಚೆತ್ತುಕೊಂಡು ಈ ವರದ್ದಿ ಕಳುಹಿಸಿದ್ದಾರೆ. -ಸಂ)

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...