Monday, November 29, 2010

ಬೊಗಳೆ ಬಯಲಿಗೆಳೆದ ಸತ್ಯ: ಮಾಧ್ಯಮಗಳ ಬೌದ್ಧಿಕ ದಿವಾಳಿತನ!

(ಬೊಗಳೂರು ಜಾಗೋ ಗ್ರಾಹಕ್ ಜಾಗೋ ಬ್ಯುರೋದಿಂದ)
ಬೊಗಳೂರು, ನ.29- ಮುಂಬಯಿಯಲ್ಲಿ ಭಯೋತ್ಪಾದಕ ಕೃತ್ಯ ನಡೆದು ಸಾಕ್ಷ್ಯಾಧಾರ ಸಮೇತ ಉಗ್ರಗಾಮಿ ಸಿಕ್ಕಿಬಿದ್ದು 730ಕ್ಕೂ ಹೆಚ್ಚು ದಿನಗಳು ಕಳೆದು ಹೋದ ಸಂದರ್ಭದಲ್ಲಿ ನಡೆದ ಎರಡನೇ ವರ್ಷಾಚರಣೆಯಲ್ಲಿ ಮಾಧ್ಯಮಗಳ (ಬೊಗಳೆ ರಗಳೆ ಎಂಬ ಕುಖ್ಯಾತ ಪತ್ರಿಕೆಯ ಹೊರತಾಗಿ), ಟಿವಿ ಚಾನೆಲ್‌ಗಳು ಮತ್ತು ಅಂತರ್ಪಿಶಾಚಿ (internet) ಮಾಧ್ಯಮಗಳಲ್ಲಿ ಬಂದಿರುವ ವರದಿಗಳು ಪುತ್ರಿಕೋದ್ಯಮದ ವ್ಯಕ್ತಿನಿಷ್ಠೆಯನ್ನೇ ಅಲುಗಾಡಿಸಿ ವೃತ್ತಿನಿಷ್ಠೆಯನ್ನು ಮೆರೆದ ಪ್ರಕರಣವನ್ನು ಬೊಗಳೂರು ಬ್ಯುರೋ ಮಾತ್ರ ಕಂಡುಕೊಂಡಿದೆ.

ಬುರಖಾದತ್, ವೀರ್ ಸಾಂಘ್ವಿ ಅವರುಗಳೆಲ್ಲಾ ನೀರಾ ರಾಡಿಯಾ ಜೊತೆ ಸೇರಿಕೊಂಡು ಮೀಡಿಯಾವನ್ನು ರಾಡಿಯೆಬ್ಬಿಸಿದ ಬೆನ್ನಿಗೇ, 26/11 ವರದಿಗಾರಿಕೆಯಲ್ಲಿಯೂ ಎಲ್ಲ ಪತ್ರಿಕೆಗಳೂ, ಎಲ್ಲ ಮಾಧ್ಯಮಗಳೂ, ಎಲ್ಲ ಎಲ್ಲವುಗಳೂ ರಾಡಿಯೆಬ್ಬಿಸಿ ಪುತ್ರಿಕೋದ್ಯಮದ ಮುಖಕ್ಕೆ ಮಸಿ ಬಳಿದಿವೆ.

ಕಳೆದೊಂದು ತಿಂಗಳಿಂದ ಭರ್ಜರಿ ನಿದ್ರೆ ಮಾಡುತ್ತಿದ್ದ ಬೊಗಳೂರು ಬ್ಯುರೋದವರಿಗೆ ನಿದ್ದೆಯಿಂದೆದ್ದೇಳಲು ಇದೊಂದು ಅಂಶವಷ್ಟೇ ಸಾಕಾಗಿತ್ತು. ಪುತ್ರಿಕೋದ್ಯಮ ಮತ್ತು ಪುತ್ರಕೋದ್ಯಮವು ಗಬ್ಬೆದ್ದು ಹೋಗುತ್ತಿರುವ ಸಂದರ್ಭದಲ್ಲಿ ಮಹಾ ಮಹಾನ್ ಹೆಸರು ಕಟ್ಟಿಕೊಂಡಿದ್ದ, ನೂರಾರು ವರ್ಷಗಳಿಂದಲೂ ಚಾಲ್ತಿಯಲ್ಲಿರುವ ಮಾಧ್ಯಮಗಳು 26/11ರ ವರದಿಯಲ್ಲಿ ಎಡವಿದ್ದಾದರೂ ಏನು? ಯಾಕೆ ಎಂದು ಬೊಗಳೂರು ಓದುಗರಿಗೆ ಖಂಡಿತಾ ಈಗ ಅಚ್ಚರಿ ಮೂಡಿಸಬಹುದಲ್ಲವೇ?

ಹಾಗಿದ್ದರೆ, ಪುತ್ರಿಕಾ ಮಾಧ್ಯ-ಮಗಳಲ್ಲಿ ಪ್ರಕಟವಾಗಿರುವ ಮರುದಿನದ ವ-ರದ್ದಿಗಳ ಶೀರ್ಷಿಕೆಗಳನ್ನೇ ನೋಡಿ:

* ನಾವು ಶತ್ರುಗಳ (ಪಾಕಿಸ್ತಾನ)ದ ತಂತ್ರಗಳಿಗೆ ಎಂದಿಗೂ ಮಣಿಯುವುದಿಲ್ಲ: ಮನಮೋಹಕ ಸಿಂಗ್ (ನಿಧಾನಿ)
** ಮುಂಬಯಿ ದಾಳಿ ಖಂಡನೀಯ, ಪಾಕಿಸ್ತಾನವು ಭಯೋತ್ಪಾದನೆಯ ಉತ್ಪಾದನಾ ಘಟಕಗಳನ್ನು ಮುಚ್ಚಬೇಕು: ಸೇಮ್ ಕೃಷ್ಣ (ವಿದೇಶದ ಸಚಿವ)
*** ನಾವು ತಪ್ಪಿತಸ್ಥರನ್ನು ಹಿಡಿದು ಗಂಭೀರಾತಿಗಂಭೀರವಾಗಿ ಶಿಕ್ಷಿಸುತ್ತೇವೆ - ಪೀಚಿ ದಂಬರಂ (ಮನೆ ಸಚಿವ)
**** ಪಾತಕಿಸ್ತಾನವು ತನ್ನ ಭರವಸೆ ಈಡೇರಿಸಲೇಬೇಕು: ಪೀಚಿ ದಂಬರಂ (ಗೃಹದೊಳಗೆ ಸಚಿವ)
***** ಟೆರರ್ ನೆಟ್ವರ್ಕ್ ನಿರ್ಮೂಲಗೊಳಿಸದ ಹೊರತು ಪಾಕಿಸ್ತಾನದೊಂದಿಗೆ ಮಾತುಕತೆಯಿಲ್ಲ : ಮನಮೋಹಕ ಸಿಂಗ್ (ನಿಧಾನಿಯೇ ಪ್ರಧಾನಿ)
****** ನಮ್ಮ ನೆಲದಲ್ಲಿ ಭಯೋತ್ಪಾದನೆ ನೆಲೆಯೂರಲು ಬಿಡುವುದಿಲ್ಲ: ಸಾನಿಯಾ ಗಾಂಧಿ (ಉಪ (=UPA) ಅಧ್ಯಕ್ಷರು)
******* (ಅಡ್ಡ)ಕಸಬಿಗೆ ಗಲ್ಲು ಶಿಕ್ಷೆ ವಿಧಿಸಿ: ಮುಂಬೈಯಲ್ಲಿ ದಾಳಿಯಲ್ಲಿ ಹುತಾತ್ಮರಾದ ಧೀರ ಯೋಧರ ಕುಟುಂಬಿಕರು
******** ಭಯೋತ್ಪಾದನೆ ತಡೆಗೆ ನಾವು ಬದ್ಧ, ಭಾರತಕ್ಕೆ ಸಹಕರಿಸುತ್ತೇವೆ: ಪಾತಕಿಸ್ತಾನ
********* ಮುಂಬೈ ದಾಳಿಯಲ್ಲಿ ಕೈವಾಡವಿರುವ ಬಗ್ಗೆ ಇನ್ನೂ ಸಾಕ್ಷಿಗಳನ್ನು ಕೊಡಿ: ಪಾತಕಿಸ್ತಾನ
********** ಪಾಕಿಗೆ ಮತ್ತೊಂದು ಲಾರಿಯಲ್ಲಿ ದೋಸೆ (Dossier) ಕಳುಹಿಸುತ್ತೇವೆ- ಸೇಮ್ ಕೃಷ್ಣ (ವಿದೇಶದ ಮಂತ್ರಿ)

ಇವೆಲ್ಲವೂ ಸರಿಯೇ ಇದೆಯಲ್ಲಾ... ಇದರಲ್ಲೇನು ಪುತ್ರಿಕೋದ್ಯಮದ ಮಾನ ಮರ್ಯಾದೆ ಹರಾಜ್ಆಯ್ತು ಅಥವಾ ಹಜಾರ್ಆಯ್ತು ಅಂತ ನೀವೆಲ್ಲಾ ತಲೆಕೆಡಿಸಿಕೊಂಡಿದ್ದರೆ, ನಮ್ಮ ವರದ್ದಿಗಾರರೂ, ಸೊಂಪಾದಕರೂ ಮತ್ತು ಓದುಗರೂ ಆಗಿರುವ ಅಸತ್ಯಾನ್ವೇಷಿಗಳು ನೀಡಿರುವ ಅಂತಿಮ ಟಿಪ್ಪಣಿ, ಸ್ಪಷ್ಟನೆ ಇಲ್ಲಿದೆ.

ಅಸತ್ಯಾನ್ವೇಷಿ ಸ್ಪಷ್ಟನೆ, ವಿವರಣೆ:
"ಸ್ವಾಮೀ, ಈ ಮಾಧ್ಯಮಗಳೆಲ್ಲವೂ ಬೊಗಳೂರು ಸೊಂಪಾದಕರನ್ನು ಮಂಗ ಮಾಡಿವೆ. ಮತ್ತು ತಮ್ಮ ಓದುಗರನ್ನೂ 3ಖ ಆಗಿಸಿವೆ. ಇವೆಲ್ಲಾ ಸುದ್ದಿಗಳು 2008ರಲ್ಲಿ ದಾಳಿ ನಡೆದ ಬಳಿಕ ಪ್ರಕಟವಾಗುತ್ತಿದ್ದ ವರದಿಗಳು. ಮತ್ತು 2009ರಲ್ಲಿ 365ನೇ ದಿನಾಚರಣೆಯ ಮರುದಿನವೂ ಇದೇ ಸುದ್ದಿಗಳು ಪತ್ರಿಕೆಗಳು ಪ್ರಕಟವಾಗಿದ್ದವು. ಅವುಗಳನ್ನೇ ಹಿಡಿದು ಕಾಪಿ-ಪೇಸ್ಟ್ ಮಾಡಿ, ಪತ್ರಿಕೆಗಳು ಪುಟ ಭರ್ತಿ ಮಾಡಿದ್ದರೆ, ಟೀವಿ ಚಾನೆಲ್‌ಗಳು ಅದೇ ಮೊಂಬತ್ತಿ ಉರಿಸುವ, ಪುಷ್ಪಗುಚ್ಛವಿರಿಸಿ ಕೈಮುಗಿಯುವ ಚಿತ್ರಗಳನ್ನು ತೋರಿಸಿವೆ. ಎಲ್ಲವೂ ಆವತ್ತಿನದ್ದೇ. ಇದೆಲ್ಲವೂ ಹಣ ಕೊಟ್ಟು ಪತ್ರಿಕೆ ಓದುವ ಓದುಗರಿಗೆ ಮಾಡಿದ ವಂಚನೆ ಸ್ವಾಮೀ. ಇನ್ನೂ ಅರ್ಥವಾಗಲಿಲ್ಲವೇ? ಅಂದು ಎಲ್ಲ ವರದ್ದಿಗಾರರು ರಜೆಯಲ್ಲಿದ್ದುದರಿಂದ, ಪ್ರತಿವರ್ಷವೂ ಇದೇ ಮಾತು ಬಂದೇಬರುತ್ತದೆ ಎಂಬುದು ಗ್ಯಾರಂಟಿಯಾಗಿದ್ದುದರಿಂದ, ಇದನ್ನೇ ಕಾಪಿ ಪೇಸ್ಟ್ ಮಾಡಿದ್ದಾರೆ. ಇನ್ನೂ ಹಲವಾರು ವರ್ಷ ಇದೇ ಮುಂದುವರಿಯುತ್ತದೆ!"

Saturday, November 27, 2010

ಮಾಧ್ಯಮಗಳ ಸುದ್ದಿ ಶೂನ್ಯತೆ: ವಂಚನೆ ಬಯಲಿಗೆಳೆದ ಬೊಗಳೆ

(ಬೊಗಳೂರು ಜಾಹೀರಾತು ಬ್ಯುರೋದಿಂದ)
ಬೊಗಳೂರು, ನ.27- ಸುದೀರ್ಘ ಕಾಲದಿಂದ ಬೊಗಳೆ ರಗಳೆ ಬ್ಯುರೋ ಮತ್ತೊಂದು ಬಾರಿ ನಿದ್ದೆಯಿಂದ ಎದ್ದೇಳಲು ಬಲವಾದ ಕಾರಣವೊಂದು ಸಿಕ್ಕಿದೆ.

ಈ ಕಾರಣವೇನು ಮತ್ತು ಏನಲ್ಲ ಎಂಬುದನ್ನು ತಿಳಿಯಲು ಬೊಗಳೆ ರಗಳೆಯ ಸೋಮವಾರದ ಸಂಚಿಕೆಯಲ್ಲಿ ವೀಕ್ಷಿಸಿ.

ಸುದ್ದಿ ಮಾಡುವವರೇ ಸುದ್ದಿಯಾಗುತ್ತಿರುವ ಈ ದಿನಗಳಲ್ಲಿ, ಯಾವುದೇ ಮಾಧ್ಯ-ಮಗಳೂ ವರದ್ದಿ ಮಾಡದ, ಪುತ್ರಿಕೋದ್ಯಮವೇ ಕಂಡು ಕೇಳರಿಯದ ವಿ-ಶೇಷ ವರದ್ದಿಯೊಂದನ್ನು ನಿಮ್ಮ ಮುಂದೆ ತಂದು ಸುರಿಯಲಾಗುತ್ತದೆ.

ನಿಮ್ಮ ಬೊಗಳೆ ಪ್ರತಿಗಳನ್ನು ಇಂದೇ ಕಾದಿರಿಸಿ.

Wednesday, November 03, 2010

ಸಂಪುಟ ವಿಸ್ತರಣೆ ಮಾಡಿ: ಯಡ್ಡಿಗೆ ರೆಸಾರ್ಟ್‌ಗಳ ಆಗ್ರಹ

[ಬೊಗಳೂರು ಸಂಪುಟ ವಿಸರ್ಜನಾ... ಅಲ್ಲಲ್ಲ ವಿಸ್ತರಣಾ ಬ್ಯುರೋದಿಂದ]
ಬೊಗಳೂರು, ನ.3- ಈಗಾಗಲೇ ಸಂಪುಟ ವಿಸ್ತರಣೆ ಎಂಬ ಎರಡು ಶಬ್ಧಗಳು ಕೇಳಿದ ತಕ್ಷಣವೇ ಬಿಜೆಪಿ ಶಾಸಕರೆಲ್ಲರೂ ಪಟಾಕಿಗಳಂತೆ ಸಿಡಿಯುವ ಮೂಲಕ ದೀಪಾವಳಿಗೆ ಮುನ್ನವೇ ದೀಪಾವಳಿ ಆಚರಿಸಿ, ತಮಿಳುನಾಡು, ಗೋವಾ, ಕೊಚ್ಚಿ ಮುಂತಾದೆಡೆ ರೆಸಾರ್ಟ್‌ಗಳಲ್ಲಿ ಅವಿತುಕೊಳ್ಳುವ ಪ್ರಕ್ರಿಯೆಯು ನಿತ್ಯದ ಕಾಯಕವಾಗಿಬಿಟ್ಟಿರುವುದರಿಂದ, ಇದೀಗ ಸಂಪುಟ ವಿಸ್ತರಣೆ ಮುಂದೂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ದೇಶದ ವಿವಿಧೆಡೆಗಳ ರೆಸಾರ್ಟ್‌ಗಳು ಕೆಂಗಣ್ಣು ಬೀರುತ್ತಿವೆ.

ಇದು ವಿವಿಧ ರಾಜ್ಯಗಳ ಪ್ರವಾಸೋದ್ಯಮ ಕ್ಷೇತ್ರಕ್ಕೆ ಬೀಳುವ ದೊಡ್ಡ ಹೊಡೆತವೆಂದು ಪ್ರತಿಪಾದಿಸಿರುವ ಈ ರೆಸಾರ್ಟ್ ಮಾಲೀಕರು, ತಕ್ಷಣವೇ ಸಂಪುಟ ವಿಸ್ತರಣೆ ಮಾಡುವಂತೆಯೂ, ಆಗಾಗ್ಗೆ ಸಂಪುಟ ವಿಸ್ತರಣೆ ಘೋಷಣೆ ಮಾಡುವಂತೆಯೂ ಆಗ್ರಹಿಸಿದ್ದಾರೆ.

ಈ ಕುರಿತು ಏಕಸದಸ್ಯ ಬೊಗಳೆ ಬ್ಯುರೋದ ಸಮಸ್ತ ಸಿಬ್ಬಂದಿಗಳಿಗೆ ಪತ್ರ ಬರೆದಿರುವ ರೆಸಾರ್ಟ್ ಮಾಲೀಕರು, ತಾವಾದರೂ ತಮ್ಮ ಇಲ್ಲದ ಪ್ರಭಾವ ಬೀರಿ, ಮುಖ್ಯಮಂತ್ರಿ ತಲೆಯೊಳಗೆ ಸಂಪುಟ ವಿಸ್ತರಣೆಯ ಹುಳವನ್ನು ಬಿಡುವಂತೆ ತಾಕೀತು ಮಾಡಿದ್ದಾರೆ.

[ಬೊಗಳೂರ ಸಕಲ ಓದುಗರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ನೀವು ಪಟಾಕಿ ಹಚ್ಚಿದಾಗ ಠುಸ್ ಆದವುಗಳೆಷ್ಟು ಎಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ...]

ಈಗ ದೀಪಾವಳಿ ಹಬ್ಬಕ್ಕೆ ನಮ್ಮ ವಿಶೇಷ ಕೊಡುಗೆಗಳೂ ಇವೆ. ನಮ್ಮಲ್ಲಿ ಬರುವ ಶಾಸಕರಿಗೆ ವಿಶೇಷ ರಿಯಾಯಿತಿಯನ್ನೂ ನೀಡುತ್ತೇವೆ. ಅವರು ನಮ್ಮ ರೆಸಾರ್ಟ್‌ನಲ್ಲಿ ಉಳಿದುಕೊಂಡರೆ ಅವರಿಗೆ ಉಚಿತವಾಗಿ ಆಹಾರ ಒದಗಿಸಲಾಗುವುದು ಎಂದು ಮಾಲೀಕರು ಬೊಗಳೂರಿಗೆ ಬಂದು ನಡೆಸಿದ ರದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆದರೆ ಇಲ್ಲಿಯೂ ಸ್ಟಾರ್ ಮಾರ್ಕ್ ಉಳ್ಳ ಷರತ್ತುಗಳು ಅನ್ವಯವಾಗುತ್ತವೆ. ನಮ್ಮಿಂದ ಬಾಟಲಿಗಳನ್ನು ಪೂರೈಸುವುದು ಅಸಾಧ್ಯವಾದ ಕೆಲಸ ಎಂದು ಎಲ್ಲ ರಾಜ್ಯಗಳ ರೆಸಾರ್ಟ್ ಮಾಲೀಕರು ಒಗ್ಗಟ್ಟಾಗಿ ಘೋಷಿಸಿದ್ದಾರೆ.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...