Friday, December 31, 2010

1-1-11ರಂದೇ ಹೊಸ ವರ್ಷ: ದೇಶಾದ್ಯಂತ ಹಾಯ್ ಅಲರ್ಟ್

ಹೊಸ ವರ್ಷವು ಈ ಬಾರಿ 1-1-11ರಂದೇ ಶುರುವಾಗುವ ಹಿನ್ನೆಲೆಯಲ್ಲಿ ದೇಶಾದ್ಯಂತ ಹಾಯ್ ಅಲರ್ಟ್ ಘೋಷಿಸಲಾಗಿದೆ. ಹತ್ತು ವರ್ಷಗಳ ಹಿಂದೆ ವೈ2ಕೆ ವೈರಸ್ ಬಂದಿದ್ದಾಗ, ಈ ಆನ್‌ಲೈನ್‌ನಲ್ಲಿ ಈ ಹಾಯ್-ಬಾಯ್‌ಗಳ ಜ್ವರವು ನಿಧಾನವಾಗಿತ್ತು. ಇದೀಗ ವೈ2ಕೆ2 ಇರುವಾಗಲಂತೂ, ಎದುರಿಗೆ ಸಿಕ್ಕಾಗ ಮಾತನಾಡಿಸದ ನಾವು ಎಸ್ಎಂಎಸ್ ಮೂಲಕವೋ, ಇ-ಮೇಲ್ ಮೂಲಕವೋ, ಐಎಂ ಮೂಲಕವೋ ಹಾಯ್ ಬಾಯ್ ಎಂದು ಹೇಳುತ್ತೇವೆ. ಎದುರಿಗೆ ಬಂದಾಗ ಇಲ್ಲದಿರುವ ಕಾಳಜಿ, ಪ್ರೀತಿಗಳೆಲ್ಲಾ ತುಂಡು ತುಂಡಾದ ಪದಗಳ hi, Lol, ILU, bzy, cm, h r u. ಎಂಬಿತ್ಯಾದಿಗಳ ಮೂಲಕ ಭರಪೂರ ಹರಿದಾಡುತ್ತಿರುತ್ತವೆ.

ಇದು ಅಸತ್ಯವಲ್ಲದಿದ್ದರೂ ಅಷ್ಟೇ ನಿಜ. ಅಲ್ಲಲ್ಲ, ನಿಜವಾದರೂ ಅಷ್ಟೇ ಸುಳ್ಳಲ್ಲದ ಸಂಗತಿಯಿದು. ಅರ್ಥ ಮಾಡಿಕೊಳ್ಳಿ, ಅಪಾರ್ಥ ಮಾಡಿಕೊಳ್ಳಬೇಡಿ, ಅನರ್ಥವಂತೂ ಮಾಡಿಕೊಳ್ಳಲೇಬೇಡಿ ಎಂಬ ಬೊಗಳೂರಿನ ಏಕಸದಸ್ಯ ಬೊಗಳೆ ರಗಳೆ ಬ್ಯುರೋ ಸಂದೇಶದೊಂದಿಗೆ, ಈ ವರ್ಷದ ನಮ್ಮ ಕಥೆಯನ್ನು ಮುಗಿಸುತ್ತಿದ್ದೇವೆ. ಇನ್ನೇನಿದ್ದರೂ ಎರಡು ಕೋಲುಗಳು ಮಾತ್ರ - ಅದುವೇ 11ರಲ್ಲಿ ಭೇಟಿ.

ಎಲ್ಲ ಓದುಗರಿಗೆ, ಬೊಗಳೂರು ಬಿಟ್ಟೋಡುಗರಿಗೆ, ಓದದವರಿಗೆ, ಶುಭ ಹಾರೈಸಿದವರಿಗೆ, ಹಾರೈಸದವರಿಗೆ ಮತ್ತು ವಿಶೇಷವಾಗಿ ಇಂಟರ್ನೆಟ್‌ನಲ್ಲಿ ಇಲ್ಲದ ವಿಶಾಲ ಪ್ರಪಂಚದಲ್ಲಿ ಹರಡಿಕೊಂಡಿರುವ ಬೊಗಳೆ ರಗಳೆ ಪತ್ರಿಕೆಯ ಅಸಂಖ್ಯಾತ ಮತ್ತು ಅಲ್ಪ ಸಂಖ್ಯಾತರಾದ ಓದುಗರಿಗೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು.

ನನಸು ಕನಸಾಗದಿರಲಿ. ನೆನಕೆ ನನಸಾಗಲಿ.

Thursday, December 16, 2010

ಕೊನೆಯುಸಿರಿನವರೆಗೂ ಪಕ್ಷಾಂತರ: ಬಂಬಂಗಾರಿ ಪ್ರತಿಜ್ಞೆ

[ಬೊಗಳೂರು ಪಕ್ಷಾಂತರ ಬ್ಯುರೋದಿಂದ]
ಬೊಗಳೂರು, ಡಿ.16- ಈಗ ಯಾವ ಪಕ್ಷದಲ್ಲಿದ್ದೇವೆ ಮತ್ತು ಯಾವ ಪಕ್ಷಕ್ಕೆ ಸೇರುತ್ತಿದ್ದೇವೆ ಎಂಬುದನ್ನೇ ಮರೆತುಬಿಟ್ಟಂತಿರುವ ಮಾನ್ಯ (ಕುಮಾರಸ್ವಾಮಿಯವರು ಯಡಿಯೂರಪ್ಪರನ್ನು, ರೇಣುಕಾಚಾರ್ಯರನ್ನು, ಈಶ್ವರಪ್ಪರನ್ನು ನಿಂದಿಸುವುದು ಹೇಗೆ!) ಬಂಬಂಗಾರಪ್ಪನವರು, ಪಕ್ಷಗಳಿಂದ ಪಕ್ಷಕ್ಕೆ ಜಿಗಿಯುತ್ತಲೇ ಪ್ರಸಿದ್ಧರಾಗಿದ್ದು, ನಿನ್ನೆ ನಿನ್ನೆಯಷ್ಟೇ ಯಾವುದೋ ಪಕ್ಷದಿಂದ ಮಗದೊಮ್ಮೆ ಹೊರಬಂದು, ಬೇರೆ ಯಾವುದೋ ಪಕ್ಷಕ್ಕೆ ಸೇರಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.

ಮಾಜಿ ನಿಧಾನಿಗಳಾದ ವೇದೇಗೌಡರಿಗೆ ಮತ್ತು ತನಗೆ ಬಹುತೇಕ ಹೆಚ್ಚೂಕಮ್ಮಿ ಒಂದೇ ರೀತಿಯ ವಯಸ್ಸಾಗಿದೆ. ಅವರ ಮಕ್ಕಳೂ ನಮ್ಮ ಮಕ್ಕಳಿಗೆ ಸಮಾನವೇ. ಆದರೆ ಅಲ್ಲಿ ಅಪ್ಪ-ಮಕ್ಕಳು ಒಂದೇ ಪಕ್ಷದಲ್ಲಿದ್ದಾರೆ. ನಾವು ಈಗಷ್ಟೇ ಹೊರಬಂದಿರುವ ಕೈಪಕ್ಷದಲ್ಲಿ ಅಪ್ಪ-ಮಕ್ಕಳು ಬೇರೆ ಬೇರೆಯಾಗಿರಬೇಕಾದ ಅನಿವಾರ್ಯತೆ ಎದುರಾಗಿತ್ತು ಎಂದು ಅವರು ಬೊಗಳೆ ರಗಳೆ ಕಚೇರಿಯಲ್ಲಿ ನಡೆಸಿದ ರದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಜೀವನದಲ್ಲಿ ಒಮ್ಮೆಯಾದರೂ ಜೆಡಿಎಸ್ ಪಕ್ಷ ಸೇರಬೇಕೆಂಬುದು ತನ್ನ ಮಹದಾಕಾಂಕ್ಷೆಯಾಗಿತ್ತು ಎಂದ ಅವರು, ಇನ್ನು ಉಳಿದ ಜೀವನದಲ್ಲಿ ಒಮ್ಮೆಯಾದರೂ ಕಮ್ಯೂನಿಷ್ಠರೊಂದಿಗೆ ಸೇರುವುದು ನನ್ನ ಕನಸಾಗಿದೆ. ಅದು ಕನಸಾಗಿಯೇ ಉಳಿಯಲು ಬಿಡುವುದಿಲ್ಲ ಎಂದರು.

ತೆನೆ ಹೊತ್ತ ಮಹಿಳೆಯ ಕೈಯನ್ನು ಯಾವಾಗ ಬಿಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಲು ತಡಕಾಡುತ್ತಲೇ ಹರ್ಷ ವ್ಯಕ್ತಪಡಿಸಿದ ಅವರು, ಇವೆಲ್ಲವೂ ತನ್ನ ಕೈಯಲ್ಲಿರುವುದಿಲ್ಲ, 'ದೇವ'ರ ಹಾಗೂ ದೇವೇಗೌಡರ ಕೈಯಲ್ಲಿದೆ ಎಂದೂ ನುಡಿದರು ಅವರು.

ನೀವು ಆವಾಗಾವಾಗ ಮತ್ತು ಆಗಾಗ್ಗೆ, ಪದೇ ಪದೇ ಪಕ್ಷಗಳ ಒಳಗೆ-ಹೊರಗೆ ಹೋಗಿ ಬರುತ್ತಲೇ ಇರುತ್ತೀರಲ್ಲಾ? ಯಾಕೆ? ನಿಮ್ಮನ್ನು ಪಕ್ಷಾಂತರಿ ಅಂತ ಕರೆಯಬಾರದೇಕೆ ಎಂದು ಬೊಗಳೂರಿನ ಅಸತ್ಯಾನ್ವೇಷಿಗಳು ಕೇಳಿದ ಪ್ರಶ್ನೆಗೆ ತಡವರಿಸಗದೆ ಉತ್ತರಿಸಿದ ಅವರು, "ಥೂ ನಿಮ್ಮ... ಏನ್ ಪ್ರಶ್ನೆ ಅಂತ ಕೇಳ್ತೀರಾ... ಅಷ್ಟೂ ಗೊತ್ತಾಗಲ್ವೇ? ನಮ್ಮ ರಾಜ್ಯದಲ್ಲಿ, ಕೇಂದ್ರದಲ್ಲಿ ಆಗಾಗ್ಗೆ ಬೇರೆ ಬೇರೆ ಪಕ್ಷಗಳು ಅಧಿಕಾರಕ್ಕೆ ಬರುವುದಿಲ್ಲವೇ? ಅದು ಹೇಗೆ? ನಮ್ಮ ಮತದಾರರು ಪಕ್ಷಾಂತರಿಗಳು ಆಗುವುದರಿಂದಾಗಿ. ಮತದಾರರೇ ಪಕ್ಷ ಬದಲಿಸಿ ಬೇರೆ ಪಕ್ಷಕ್ಕೆ ಹಾರುತ್ತಾರೆ, ಓಟು ಕೊಡುತ್ತಾರೆ ಎಂದಾದರೆ, ಪ್ರಜೆಗಳೇ ಪ್ರಭುಗಳು ಎಂಬ ನಾಣ್ಣುಡಿಗಾದರೂ ಬೆಲೆ ಬೇಡವೇ? ಹೀಗಾಗಿ ಪ್ರಜೆಗಳ ಥರಾನೇ ನಾನೂ ಕೂಡ ಬೇರೆ ಪಕ್ಷಕ್ಕೆ ಸೇರಿಕೊಂಡಿದ್ದೇನೆ" ಎಂದು ತತ್ವಜ್ಞಾನಿಯಂತೆ ತತ್ತರಿಸುತ್ತಾ ಉತ್ತರಿಸಿದರು.

ಇದೇ ವೇಳೆ ಭೀಷ್ಮ ಪ್ರತಿಜ್ಞೆಯೊಂದನ್ನೂ ಮಾಡಲು ನಿರ್ಧರಿಸಿದ ಬಂಬಂಗಾರಪ್ಪ ಅವರು, ಕೊನೆಯುಸಿರಿರುವವರೆಗೂ ಈ ಪಕ್ಷಾಂತರವನ್ನು ಬಿಡುವುದಿಲ್ಲ ಎಂದೂ ಈ ಸಂದರ್ಭದಲ್ಲಿ ಅವರು ಘೋಷಿಸಿದರು.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...