Friday, December 02, 2011

ಚಿಲ್ಲರೆ ಕ್ಷೇತ್ರಕ್ಕೆ ವಿದೇಶೀ ಹೂಡಿಕೆ: ಚಿಲ್ಲರೆ ಕೊಡದ ಕಂಡಕ್ಟರುಗಳು!


(ಬೊಗಳೂರು ಚಿಲ್ಲರೆ ಬ್ಯುರೋದಿಂದ)
ಬೊಗಳೂರು, ಡಿ.2- ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶೀ ನೇರ ಹೂಡಿಕೆಗೆ ಕೇಂದ್ರ ಸರಕಾರವು ಅನುಮತಿ ನೀಡಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಚಿಲ್ಲರೆಯ ಕೊರತೆ ಕಾಣತೊಡಗಿರುವುದು ಈಗಷ್ಟೇ ಬೊಗಳೆ ರಗಳೆ ಬ್ಯುರೋದ ಅನುಭವಕ್ಕೆ ಬಂದಿದೆ.

ಕಳೆದ ಕೆಲವು ದಿನಗಳಿಂದ ಬೊಗಳೂರಿನ ಬಸ್ಸುಗಳಲ್ಲಿ ಓಡಾಡಿ ಅನುಭವವಿದ್ದ ಏಕ ಸದಸ್ಯ ಬ್ಯುರೋದ ಎಲ್ಲ ಸಿಬ್ಬಂದಿಗಳು, ಚೀಟಿಯನ್ನು ಚುಚ್ಚಿ ತೂತು ಕೊರೆದು ವಿತರಿಸುವ ಕಂಟ್ರಾಕ್ಟರಿಗೆ ನೋಟು ನೀಡಿ ಚಿಲ್ಲರೆ ಕೇಳಿದರು. ಏನಾಶ್ಚರ್ಯ! ಈ ಕಂಟ್ರಾಕ್ಟರರ ಬಾಯಲ್ಲಿ ಒಂದೇ ಒಂದು ಶಬ್ದವಿಲ್ಲ, ಬದಲಾಗಿ ಚೀಟಿಯ ಹಿಂದುಗಡೆ 1 ಅಂತ ಗೀಚಿ ವಾಪಸ್ ಕೊಟ್ಟಿದ್ದರು.

ಇದರ ಹಿಂದಿನ ಮರ್ಮ ಹುಡುಕಿದಾಗ ನಮಗೆ ತಿಳಿದದ್ದು ಇಷ್ಟು. ದೇಶದಲ್ಲಿ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶೀ ನೇರ ಹೂಡಿಕೆಗೆ ಕೇಂದ್ರದ ಬೆಲೆ ಏರಿಕೆ ಸರಕಾರವು ಅನುಮತಿ ನೀಡಲು ನಿರ್ಧರಿಸಿರುವುದರಿಂದ ಎಲ್ಲ ಚಿಲ್ಲರೆಗಳಿಗೂ ಬೇಡಿಕೆ ಹೆಚ್ಚಾಗಿದೆಯಂತೆ. ಹೀಗಾಗಿ ಚಿಲ್ಲರೆಯನ್ನೇ ಬಂಡವಾಳವಾಗಿಸಿಕೊಳ್ಳುವ ಈ ಬಸ್ ಕಂಟ್ರಾಕ್ಟರುಗಳು, ಈ ಚಿಲ್ಲರೆಗಳನ್ನೆಲ್ಲಾ ಒಳಗೆ ಹಾಕಿಕೊಳ್ಳುವ ನಿಟ್ಟಿನಲ್ಲಿ ಇಂಥದ್ದೊಂದು ತಂತ್ರಗಾರಿಕೆಯನ್ನು ಅನುಸರಿಸುತ್ತಿದ್ದಾರೆ ಎಂಬುದನ್ನು ಬೊಗಳೆ ರಗಳೆಯ ಅನ್ವೇಷಕರು ಕಂಡುಕೊಂಡಿದ್ದಾರೆ.

ಈ ತಂತ್ರಗಾರಿಕೆಯ ಪ್ರಕಾರ, ಹಣ ಕೇಳಿ ಪಡೆದುಕೊಂಡ ಚೀಟಿಯ ಹಿಂದುಗಡೆ 1 ಅಥವಾ 2 ಅಂತೆಲ್ಲಾ ಗೀಚಿ ಬರೆಯುವುದು, ರಶ್ ಇರುವ ಸಂದರ್ಭದಲ್ಲೆಲ್ಲಾ ಪ್ರಯಾಣಿಕರು ಇಳಿಯುವಾಗ ಅವರು ಇರುವಲ್ಲಿಂದ ಮತ್ತೊಂದು ಬಾಗಿಲಿನ ಬಳಿ ನಿಂತುಕೊಂಡು ರೈಟ್ ರೈಟ್ (ಈ ನತದೃಷ್ಟ ಪ್ರಯಾಣಿಕನ ಕಡೆ ಬೆನ್ನು ಹಾಕಿ, ಅಂದರೆ ತಿರುಗಿಯೂ ನೋಡದೆ) ಹೇಳುತ್ತಾ ಇರುವುದು .... ಇದರಿಂದಾಗಿ ಚಿಲ್ಲರೆಗಳೆಲ್ಲವೂ ಚರ್ಮದ ಚೀಲದೊಳಗೆಯೇ ಭದ್ರವಾಗಿ ಕುಳಿತಿರುತ್ತವೆ.

ಎಲ್ಲಾದರೂ ಅಪ್ಪಿ ತಪ್ಪಿ ಪ್ರಯಾಣಿಕರು ಚಿಲ್ಲರೆ ವಾಪಸ್ ಕೇಳಿಯೇ ಬಿಟ್ಟರೋ... ಅವರನ್ನು ಚಿಲ್ಲರೆಯಂತೆಯೇ ನೋಡಲಾಗುತ್ತದೆಯಾದರೂ, ಬಸ್ ಈ ಕಂಡಕ್ಟರುಗಳ ಲಾಭದ ಪ್ರಮಾಣವು ಹೆಚ್ಚಾಗುತ್ತದೆ! ಹೇಗೆ ಗೊತ್ತೇ? ಚಿಲ್ಲರೆ ಕೊಡುತ್ತೇನೆ ಎಂಬ ನೆಪದಲ್ಲಿ, ಎಷ್ಟು ಬರೆದಿದ್ದು ಎಂಬುದನ್ನು ನೋಡಲೆಂದು, ಅವರಿಂದ ಪ್ರಯಾಣದ ಚೀಟಿಯನ್ನು ಕಿತ್ತುಕೊಳ್ಳುವುದು; ಒಂದೋ ಎರಡೋ ಚಿಲ್ಲರೆ ಕೊಡುವುದು, ಆದರೆ ತನ್ನ ಕೈಗೆ ಸಿಕ್ಕಿದ ಅದೇ ಚೀಟಿಯನ್ನು ಬೇರೊಬ್ಬ ಪ್ರಯಾಣಿಕನಿಗೆ ವಿತರಿಸುವುದು! ಹೇಗಿದೆ ಚಿಲ್ಲರೆ ಐಡಿಯಾ? ಹೀಗಾಗಿ ಬೊಗಳೂರೆಂಬ ಬೊಗಳೂರಲ್ಲಿ ಹೇಗಾದರೂ ಬದುಕಬಹುದು ಎಂಬುದಕ್ಕೆ ಈ ಕಂಟ್ರಾಕ್ಟರುಗಳು ದಾರಿಯನ್ನು ತೋರಿಸಿದ್ದಾರೆ. ಈಗ ಇದೇ ಅಡ್ಡದಾರಿ ಹಿಡಿಯಲು ಬೊಗಳೂರು ಬ್ಯುರೋದ ಸರ್ವ ಸದಸ್ಯರೂ ಉದ್ಯುಕ್ತರಾಗಿದ್ದಾರೆ ಎಂಬುದನ್ನು ನಮ್ಮ ಹದ್ದಿನ ಕಣ್ಣಿನ ತನಿಖಾ ಮಂಡಳಿ ಪತ್ತೆ ಹಚ್ಚಿರುವುದಾಗಿ ಬೊಗಳೂರಿನ ಪ್ರತಿಸ್ಪರ್ಧಿ ಪತ್ರಿಕೆಯಲ್ಲಿ ವರದಿ ಬಂದಿದೆ.

Thursday, November 03, 2011

ತನು,ಮನದಲ್ಲಿ ಕನ್ನಡಕ್ಕೆ ಒತ್ತು ನೀಡೋಣ!


(ಬೊಗಳೂರು ಕನ್ನಡವೇ ಆತ್ಮ ಬ್ಯುರೋದಿಂದ)
ಭೊಘಳೂರು: ಖಣ್ಣಢ ರಾಝ್ಯೋಥ್ಸವ ಭಂಧಿಧ್ಧರೂ ಭೊಘಳೂರು ಭ್ಯುರೋ ಎಛ್ಛೆಥ್ಥೂ...! ಖೊಂಢಿಳ್ಳವೇಖೆ ಎಂಧು ವಿಷ್ವಾಧ್ಯಂತ ಹರಢಿಖೊಂಢಿರುವ ಭೊಘಳೆ ರಘಳೆ ಅಂಥರ್ಝಾಳ ಫಥ್ರಿಖೆಯ ಏಖೈಖ ಓಧುಘರೆಳ್ಳರೂ ಧಭಾಯಿಸಿಧ ಖಾರಣಧಿಂಧಾಘಿಯೇ ಈ ಒಂಧು ಶ್ಫಷ್ಠಣೆ.

ಮೇಲೆ ಅಕ್ಷರಗಳೆಲ್ಲವೂ ಮಹಾಪ್ರಾಣ ಹೆಚ್ಚಾಗಿದ್ದು, ನಮ್ಮ ಪ್ರಾಣ ಯಾಕೆ ತಿಂತೀರಾ ಎಂದು ಕೇಳುವ ಓದುಗರಿಗೆಲ್ಲಾ ನಮ್ಮ ಉತ್ತರ... "ಮುಖ್ಯಮಂತ್ರಿಗಳು ಹೇಳಿದ್ದಾರೆ!" ಅಂತ ಮಾತ್ರ.

ಹಾಗಾದರೆ ಮುಖ್ಯಮಂತ್ರಿಗೋಳು ಏನಂತ ಹೇಳಿದ್ದಾರೆ? ಕನ್ನಡ ರಾಜ್ಯೋತ್ಸವದ ಭಾಷಣ ಮಾಡುತ್ತಿದ್ದ ಅವರು, ಕನ್ನಡ ನಮ್ಮ ಆಸ್ತಿ, ಅದನ್ನು ನಾವು ಉಳಿಸಬೇಕು (ಕಡಿಮೆ ಬಳಸಿದರೆ ಉಳಿತಾಯ ಆಗುತ್ತದೆ ಅಂತ ಗಣಕಿಂಡಿಯ ಪವನಜ ಆಗಾಗ್ಗೆ ಉಲ್ಲೇಖಿಸುತ್ತಲೇ ಬಂದಿದ್ದಾರೆ.) ಮತ್ತು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕನ್ನಡಕ್ಕೆ ನಾವು ಯಾವಾಗಲೂ ಒತ್ತು ನೀಡಬೇಕು ಎಂದಿದ್ದರು. ಅದನ್ನೇ ಕಾಯಾ-ವಾಚಾ-ಮನಸಾ-ಪೆನ್ನಾ ಪಾಲಿಸಿದ ನಮ್ಮ ಬ್ಯುರೋ, ಕನ್ನಡವನ್ನು ಒತ್ತಿ ಒತ್ತಿ ಬರೆಯಲು ನಿರ್ಧರಿಸಿದ ಪರಿಣಾಮವಾಗಿ ಮೇಲಿನ ವಾಕ್ಯ ಮೂಡಿಬಂದಿದೆ.

||ನಮ್ಮ ಬರಹವೂ, ಮಾತೂ, ಮನಸ್ಸೂ ಕನ್ನಡವಾಗಿರಲಿ, ಮತ್ತು ನಮ್ಮ ಯೋಚನೆಯೂ ಕನ್ನಡದಲ್ಲೇ ಇರಲಿ||
ಸರ್ವರಿಗೂ ಕನ್ನಡದ ಹಬ್ಬದ ಶುಭಾಶಯಗಳು

Tuesday, October 04, 2011

ಮೇಯೋರನ್ನೇ ಕತ್ತೆ ಮಾಡಬೇಕೋ, ಕತ್ತೆಯನ್ನೇ ಮೇಯೋರ್ ಮಾಡ್ಬೇಕೋ?


[ಬೊಗಳೂರು ಮೇಯೋರ ಬ್ಯುರೋದಿಂದ]
ಬೊಗಳೂರು, ಅ.4- ಈ ದೇಶದಲ್ಲಿ ವಂಚನೆ ಮಾಡದವರು, ಧಗಾಕೋರರಲ್ಲದವರು, ಭ್ರಷ್ಟಾಚಾರ ಮಾಡದವರಿಗೆ ಅಧಿಕಾರ, ಹಣ, ಅಂತಸ್ತು ಯಾವುದೂ ಇರುವುದಿಲ್ಲ ಎಂಬುದನ್ನು ಮನಗಂಡ ಹೊರತಾಗಿಯೂ ಬೊಗಳೂರಿನ ಮಂದಿ ವಿಶೇಷವಾದ ಪ್ರಯೋಗವೊಂದನ್ನು ಮಾಡಲು ಹೊರಟಿದ್ದಾರೆ.

ಮುಂಬರುವ ಮಹಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ಈ ಪ್ರಯೋಗವನ್ನು ಮಾಡಲಾಗುತ್ತಿದ್ದು, ಆರಂಭಿಕ ಹಂತದಲ್ಲಿ, ನಗರ ಸಭೆಗಳಿಗೆ ಈ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಅದರ ಪ್ರಕಾರ, ಬೊಗಳೂರು ಮಹಾನರಕ ಪಾಲಿಕೆಯ ಮುಂದಿನ ಮೇಯೋರ್ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ಶ್ರೀಶ್ರೀಮಾನ್‌ಮಾನ್ ಗಾರ್ದಭೇಶ್ ಅವರನ್ನು ನಿಲ್ಲಿಸಲು ನಿರ್ಧರಿಸಲಾಗಿದೆ.

ಗಾರ್ದಭೇಶ್‌ಗೆ ವಂಚನೆ ಮಾಡುವುದು, ಮೋಸ ಮಾಡುವುದು, ಧಗಾ ಎಸಗುವುದು, ಭ್ರಷ್ಟಾಚಾರ ಮಾಡುವುದು, ವಿದೇಶೀ ಬ್ಯಾಂಕುಗಳಲ್ಲಿ ಕಪ್ಪು ಹಣ ಇರಿಸುವುದು, ಓಟು ಬ್ಯಾಂಕ್ ರಾಜಕಾರಣ ಮಾಡುವುದು ಇತ್ಯಾದಿಗಳೆಲ್ಲವೂ ಗೊತ್ತಿಲ್ಲ ಎಂಬುದು ಈ ಮೇಯೋರ್ ಅಭ್ಯರ್ಥನಕ್ಕೆ ಅರ್ಹತೆಯಾಗಿದ್ದರೂ ಒಂದೇ ಒಂದು ಶಂಕೆಯ ಸುಳಿಯೊಂದು ಕೂಡ ಕೇಳಿಬರುತ್ತಿದೆ.

ಅದೇನು ಗೊತ್ತೇ? ಈ ಗಾರ್ದಭ ಮಹಾಶಯರು ಕಸ, ಕಡ್ಡಿ ಇತ್ಯಾದಿಯಾಗಿ ಸಿಕ್ಕಿದ್ದೆಲ್ಲವನ್ನೂ ನುಂಗುವ ಛಾತಿ ಉಳ್ಳವರಾಗಿರುವುದರಿಂದ ಊರಿನ ಖಜಾನೆಯಲ್ಲಿರುವ ಹಣ, ವಿವಿಧ ಕಾಮಗಾರಿಗಳಿಗೆ ಮಂಜೂರಾಣ ಹಣ, ಸಂತ್ರಸ್ತರಿಗೆ ಪರಿಹಾರ ವಿತರಣೆಗಾಗಿ ಮೀಸಲಾಗಿರುವ ಹಣವನ್ನೆಲ್ಲಾ ನುಂಗಿದರೆ ಏನು ಮಾಡುವುದು ಎಂಬ ಒಂದೇ ಒಂದು ಚಿಂತೆಯನ್ನು ಗಾರ್ದಭೇಶ್ ಅವರ ಪಕ್ಷೀಯರು ತೋಡಿಕೊಂಡಿದ್ದು, ಈ ಬಗ್ಗೆ ಅಸತ್ಯಾನ್ವೇಷಿಯ ಸಲಹೆ ಕೇಳಿದ್ದಾರೆ ಮತ್ತು ಗಾರ್ದಭೇಶ್ ಮೇಲೆ ಹದ್ದಿನ ಕಣ್ಣು ಅಲ್ಲದಿದ್ದರೂ, ಕತ್ತೆಯ ಕಣ್ಣನ್ನಾದರೂ ಇರಿಸುವಂತೆ ಕೋರಿಕೊಂಡಿದ್ದಾರೆ.

ಹೀಗಾಗಿಯೇ ಶೀರ್ಷಿಕೆಯಲ್ಲಿನ ಜಿಜ್ಞಾಸೆ ಎಲ್ಲ ಜಾರಕೀಯ ಪಕ್ಷಗಳನ್ನೂ ಕಾಡುತ್ತಿರುವುದು ಸ್ಪಷ್ಟವಾಗಿದೆ.

Tuesday, September 27, 2011

ಬೊಗಳೆ ಹಾರ್ಟ್ ಬ್ರೇಕ್: ಇಂದಿನಿಂದ ಯುವತಿಯರ ಉಗುರು ಉದ್ದವಾಗಲಿದೆ!


[ಬೊಗಳೂರು ವಿಶೇಷ ಯುವ Some-ಚೋದನಾ ಬ್ಯುರೋದಿಂದ]
ಬೊಗಳೂರು, ಸೆ.27- ಇಂದಿನಿಂದ ಕಾಲೇಜು ಹುಡುಗಿಯರು ಮತ್ತು ಹುಡುಗರ ಉಗುರುಗಳು ತೀರಾ ಉದ್ದ ಬೆಳೆಯಲಿವೆ ಎಂದು ಬೊಗಳೂರು ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು ನಿಗೂಢವಾದ ರಹಸ್ಯವೊಂದನ್ನು ಪತ್ತೆ ಹಚ್ಚಿದ್ದಾರೆ.

ಹೀಗಯೇ ತಿರುಗಾಡುತ್ತಿದ್ದಾಗ ಕ್ಯೂಟ್ ಆಗಿರುವ ಎಸ್ಸೆಮ್ಮೆಸ್ಸುಗಳು ಬೊಗಳೂರು ಬ್ಯುರೋದ ವರದ್ದಿಗಾರರ ಇನ್‌ಬಾಕ್ಸ್‌ನಲ್ಲಿಯೂ ಅಪ್ಪಿ ತಪ್ಪಿ ಬಂದು ಬೀಳುತ್ತಿದ್ದವು. ಅವುಗಳನ್ನು ಓದಲಾಗದೆ, ಈ ಎಸ್ಸೆಮ್ಮೆಸ್ಸುಗಳೆಂಬ ನಿರ್ಭಾವುಕ ಸಂದೇಶಗಳ ಹಿಂದಿನ ಭಾವಾರ್ಥವನ್ನು ಅರ್ಥೈಸಿಕೊಳ್ಳಲಾಗದೆ ಚಡಪಡಿಸಿ, ಏನು ಮಾಡೋಣ ಎಂದು ಚಿಂತಾಕ್ರಾಂತವದನರಾಗಿ ಕುಳಿತಿದ್ದಾಗ ಆಗಲೇ ಒಂದು ವರದ್ದಿಯು ಸಿಡಿಲೆರಗಿದಂತೆ ಬಂದು ಬಿದ್ದು ನಮ್ಮ ವರದ್ದಿಗಾರರನ್ನು ಗಾಢ ನಿದ್ರೆಯಿಂದ ಎಬ್ಬಿಸಿತ್ತು.

ಬೇರೆಲ್ಲಾ ಅಗತ್ಯ ವಸ್ತುಗಳ ಬೆಲೆಗಳನ್ನು ಆಗಸದೆತ್ತರಕ್ಕೆ ಏರಿಸುತ್ತಲೇ ಇರುವ ಯುಪಿಎ ಸರಕಾರ ಒಂದಾದರೂ ಆವಶ್ಯ ವಸ್ತುಗಳನ್ನು ಇಳಿಸಬಹುದಲ್ಲಾ ಎಂದು ಆಲೋಚಿಸಿ ಈ ನಿರ್ಧಾರ ಕೈಗೊಂಡಿತ್ತು ಎನ್ನಲಾಗಿದೆ.

ಅವೇನು ಅಂತ ನಮ್ಮ ಯುವ ಓದುಗ ಬಳಗಕ್ಕೆ ಈಗಾಗಲೇ ಕುತೂಹಲ ಮೂಡಿರಲಿಕ್ಕಿಲ್ಲ. ಯಾಕೆಂದರೆ, ಕೆಲವರು ಈಗಾಗಲೇ ರೋದಿಸತೊಡಗಿದ್ದಾರೆ. ಬೆಲೆ ಏರಿಸುತ್ತಲೇ ಜನರನ್ನು ದುಃಖದಲ್ಲಿ ತೇಲಾಡುವಂತೆ ಮಾಡುತ್ತಿದ್ದ ಸರಕಾರ, ಈ ಬಾರಿ ಇಳಿಸೋಣ ಎಂದುಕೊಂಡು, ದಿನವೊಂಕ್ಕೆ ಕಳುಹಿಸಬಹುದಾದ ಗರಿಷ್ಠ ಎಸ್ಎಂಎಸ್‌ಗಳ ಸಂಖ್ಯೆಯನ್ನು ಕೇವಲ 100ಕ್ಕೆ ಸೀಮಿತಗೊಳಿಸಿ ಆದೇಶ ಹೊರಡಿಸಿದೆ. ಇದರಿಂದಾಗಿ ತಮಗೆ ಬಂದ ಎಸ್ಸೆಮ್ಮೆಸ್ಸುಗಳನ್ನು ಫಾರ್ವರ್ಡ್ ಮಾಡುತ್ತಲೇ ಹಲವಾರು ಯುವ ಹೃದಯಗಳನ್ನು ಕಲಕುತ್ತಾ, ಅವರನ್ನು ತತ್ವಜ್ಞಾನಿಗಳಂತೆ ಮಾಡುತ್ತಿದ್ದ, "ಈ ಸಂದೇಶ ನಿಜವಾಗಿರಬಹುದೇ?" ಎಂದೆಲ್ಲಾ ಆಲೋಚನೆಗೀಡಾಗುವಂತೆ ಮಾಡುತ್ತಿದ್ದ ಈ ಸಂದೇಶಗಳು ಇನ್ನು ಕಡಿಮೆ ಬರಬಹುದು ಎಂಬುದೇ ಈ ಯುವ ಜನಾಂಗದ ಗೋಳಾಟಗಳಿಗೆ ಕಾರಣ.

ಇದು ಒಂದೆಡೆಯಾದರೆ, ಯುವಕರು ಮತ್ತು ಯುವತಿಯರ ಉಗುರುಗಳು ಬೆಳೆಯಲಾರಂಭಿಸಿರುವುದನ್ನು ಕೂಡ ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ.

ಇದುವರೆಗೆ, ಮೊಬೈಲ್ ಫೋನಿನ ಕೀಪ್ಯಾಡುಗಳಲ್ಲಿನ ಅಕ್ಷರಗಳೆಲ್ಲವೂ ಮಾಸಿ ಹೋಗಿ, ಇದ್ಯಾವ ಡಬ್ಬಾ ಮೊಬೈಲ್ ಅಂತ ಗೋಚರಿಸಿರುವುದನ್ನು ನೀವು ಎಂದಾದರೂ ಮನಗಂಡಿರಬಹುದು. ಆದರೆ ಎರಡೂ ಕೈಗಳಿಂದ, ಒಂದು ಕೈಯಿಂದ ಮತ್ತು ಕೆಲವರಂತೂ ಒಂದೇ ಬೆರಳಿನಿಂದ ಎಸ್ಎಂಎಸ್ ಟೈಪ್ ಮಾಡುವ ಪ್ರವೀಣರುಗಳ ಮಹತ್ಸಾಧನೆಯ ಫಲವಿದು. ಇಂಟರ್ನೆಟ್ ಸಂಪರ್ಕವಿಲ್ಲದೆಯೇ ತಮ್ಮ ಪ್ರೀತಿಪಾತ್ರರ ಜೊತೆಗೆ ಸಂಭಾಷಣೆ ಮಾಡಬಲ್ಲ ಕಲೆ ಇವರಿಗೆ ಸಿದ್ಧಿಸಿರುತ್ತದೆ. ಮಸ್ತಕದಲ್ಲಿ ಮೂಡಿದ ಭಾವನೆಗಳನ್ನು ನೇರವಾಗಿಯೇ ಮೊಬೈಲು ಫೋನಿನ ಎಸ್ಎಂಎಸ್‌ನಗಳಗೆ ತುರುಕಿ, ಜಿಮೇಲ್ ಚಾಟಿಂಗಿಗಿಂತಲೂ ವೇಗವಾಗಿ ಟೈಪ್ ಮಾಡಿ ಮಾಡಿ, ಅವರ ಬೆರಳ ತುದಿಗಳೆಲ್ಲವೂ ಸವೆದಷ್ಟೇ ಈ ಕೀಪ್ಯಾಡ್ ಮೇಲಿನ ಅಕ್ಷರಗಳೂ ಸವೆದಿರುವುದನ್ನು ಬೊಗಳೆ ರಗಳೆ ಬ್ಯುರೋ ಕೂಡ ಗಮನಿಸಿದೆ.

ಈಗ ದಿನವೊಂದಕ್ಕೆ ಬರೇ 100 ಎಸ್ಸೆಮ್ಮೆಸ್ಸುಗಳಿಗೆ ಮಾತ್ರವೇ ಅವಕಾಶವಿರುವುದರಿಂದ ದಿನಕ್ಕೆ ಸಾವಿರಗಟ್ಟಲೆ ಸಂದೇಶಗಳನ್ನು ಟೈಪು ಮಾಡುತ್ತಾ ಉಗುರು ಬೆಳೆಯದಂತೆ (ಅಂದರೆ ಕೈಯಲ್ಲಿರುವ ಉಗುರಿಗೆ ಬೆಳೆಯಲೂ ಅವಕಾಶವಿಲ್ಲದಂತೆ!) ಫಾಸ್ಟಾಗಿ ಟೈಪು ಮಾಡುತ್ತಾ, ಎಸ್ಎಂಎಸ್ ಚಾಟ್ ಮಾಡುತ್ತಿರುವವರು ಕಂಗಾಲಾಗಿದ್ದಾರೆ, ರೋದಿಸಲಾರಂಭಿಸಿದ್ದಾರೆ ಮತ್ತು ಇದುವರೆಗೆ ಹಾಸಿಗೆಯಲ್ಲೇ ಆರಾಮವಾಗಿ ಮಲಗಿಕೊಂಡು ರಾತ್ರಿಯಿಡೀ ಟೈಪು ಮಾಡುತ್ತಿದ್ದವರೆಲ್ಲ ನೆಲದ ಮೇಲೆ ಬಿದ್ದು ಹೊರಳಾಡಿ ನರಳಾಡತೊಗಿದ್ದಾರೆ.

ಸರಕಾರದ ಕೊಡುಗೆಯೆಂದರೆ ಇದೇ! ಬೇರೆಲ್ಲಾ ಬೆಲೆಗಳು ಏರಿದಂತೆಯೇ, ಎಸ್ಎಂಎಸ್‌ಗಳ ಸಂಖ್ಯೆಯನ್ನು ಇಳಿಸಿ ನೋಡೋಣ ಎಂದುಕೊಂಡರೆ, ಯುವಜನರ ಉಗುರಿನ ಉದ್ದವೂ ಏರಿಕೆಯಾಗತೊಡಗಿದೆ!

Monday, September 26, 2011

ಬೊಗಳೆಯಲ್ಲಿ ನಾಳೆ ಒಂದು ಹಾರ್ಟ್ ಬ್ರೇಕಿಂಗ್ ಸುದ್ದಿ!

[ಬೊಗಳೂರು ಜಾಹೀರಾತು ಬ್ಯುರೋದಿಂದ]
ಸರಕಾರದ ಬೆಲೆ ಏರಿಕೆ ಕಾರ್ಯಕ್ರಮದಿಂದ ಮೇಲೇಳಲಾರದೆ, ಇಂದು ಯಾವುದರ ಬೆಲೆ ಏರಿದೆ ಎಂಬ ಆತಂಕದಿಂದಲೇ ಬೆಳಗ್ಗೆ ಎಚ್ಚರವಾದರೂ ಮರಳಿ ಹೊದ್ದು ಮಲಗುತ್ತಿದ್ದ ಬೊಗಳೂರು ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳನ್ನು ಬಡಿದೆಬ್ಬಿಸುವ ಕಾರ್ಯಕ್ರಮವೊಂದು ನಡೆದಿದೆ.
ಇಷ್ಟಕ್ಕೂ ಕುಂಭಕರ್ಣನಿಗಿಂತಲೂ ಮಿಗಿಲಾಗಿ ತೂಕಡಿಸುತ್ತಿದ್ದ ಬೊಗಳೂರು ಬ್ಯುರೋವನ್ನು ಎಚ್ಚರಿಸಲು ಈ ಸರಕಾರ ಮಾಡಿದ ಕ್ರಮವದರೂ ಏನು?
ಅಂತ ತಿಳಿದುಕೊಳ್ಳಿ.... ಮಂಗಳವಾರದ ಸಂಚಿಕೆಯಲ್ಲಿ...
ನಿಮ್ಮ ಬೊಗಳೆ ರಗಳೆ ಪ್ರತಿಗಳನ್ನು ಈಗಲೇ ಕಾಯ್ದಿರಿಸಿಕೊಳ್ಳಿ.
ಇಲ್ಲವಾದರೆ, ಅತ್ಯುತ್ತಮ ವರದ್ದಿಗಳಿರುವ ಬೊಗಳೆ ರಗಳೆ ಪತ್ರಿಕೆಯ ಪ್ರತಿಗಳೆಲ್ಲಾ ರದ್ದಿಗೆ ಸೇರಬಹುದು, ಎಚ್ಚರಿಕೆ!

Wednesday, August 24, 2011

ಅಣ್ಣಾಗೆ ಯುವಜನರ ಬೆಂಬಲ ಕಟ್ ಮಾಡಲು ಯುಪಿಎ ಮಾಡಿದ್ದೇನು ಗೊತ್ತೇ????

(ಬೊಗಳೂರು ಸಂಚೋದನಾ ಬ್ಯುರೋದಿಂದ)
ಬೊಗಳೂರು: ಅಣ್ಣಾ ಹಜಾರೆಯವರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುತ್ತಿರುವುದು ಹೆಚ್ಚಾಗಿ ಯುವ ಜನತೆ. ಆದರೆ, ಏಳೆಂಟು ದಿನಗಳಾದ ಬಳಿಕವಾದರೂ, ಅಣ್ಣಾ ಅವರಿಗಿರುವ ಬೆಂಬಲದ ಸಾಗರ ನಿಲ್ಲಬಹುದೆಂದು ಲೆಕ್ಕಾಚಾರ ಹಾಕಿದ್ದ ಉಪ (upa) ಸರಕಾರಕ್ಕೆ ಭ್ರಮ ನಿರಸನಾಗಿದೆ. ಹೀಗಾಗಿ ಅದಕ್ಕಾಗಿ ಹೊಸ ಹೊಸ ತಂತ್ರಗಳನ್ನು ಹೂಡುತ್ತಿದೆ ಎಂದು ನೂರು ವರ್ಷ ಹಳೆಯ ಪಕ್ಷದ ವಕ್ತಾರ ಎಂತೀವಾರಿ ಅವರು ಬೊಗಳೂರು ಬ್ಯುರೋಗೆ ಮಾತ್ರವೇ ತಿಳಿಸಿದ್ದಾರೆ.

ನಮ್ಮ ದೇಶದ ಮಾನ್ಯ ನಿಧಾನಮಂತ್ರಿಗಳು ಆಗಾಗ್ಗೆ ದಿಢೀರ್ ಆಗಿ ನಿದ್ದೆಯಿಂದ ಏಳುವಂತೆಯೇ, ಬೊಗಳೂರು ಬ್ಯುರೋದ ಸೊಂಪಾದಕರು, ವರದ್ದಿಗಾರರೂ ಕೂಡ ದಿಢೀರ್ ಆಗಿ ನಿದ್ದೆಯಿಂದ ಎದ್ದು ಕುಳಿತಾಗ, ದೇಶಾದ್ಯಂತ ಎಲ್ಲರ ಡಿಕ್ಷನರಿಗಳು 'ರಾಜಕಾರಣಿಗಳು ಎಂದರೆ ಭ್ರಷ್ಟಾಚಾರ' ಎಂಬ ಅರ್ಥವನ್ನೇ ತೋರಿಸುತ್ತಿದ್ದವು. ಇದರ ಹಿಂದಿನ ಕಾರಣದ ಜಾಡು ಹಿಡಿದು ಹೊರಟಾಗ ಹಲವು ಅಂಶಗಳು ಬಯಲಾದವು. ಯುವಕರು, ಕಾಲೇಜಿಗೆ ಹೋಗುವವರು ಎಲ್ಲ ಕಡೆ ಚಕ್ಕರ್ ಹಾಕಿ ಅಣ್ಣಾ ಬಳಗವನ್ನು ಸೇರುತ್ತಿರುವುದನ್ನೇ ಮುಖ್ಯ ಗುರಿಯಾಗಿರಿಸಿ ತನಿಖೆ ಕೈಗೊಳ್ಳಲಾಗಿತ್ತುಯ

ಹೊಸ ಹೊಸ ಅಸ್ತ್ರಗಳನ್ನು ಪ್ರಯೋಗಿಸುತ್ತಿರುವ ಸಾನಿಯಾ ಗಾಂಧಿಯವರ 'ಉಪ' ಸರಕಾರವು, ಇದೀಗ ಮಾಡೆಲ್‌ಗಳನ್ನು ಛೂಬಿಟ್ಟಿದೆ ಎಂದು ಗೊತ್ತಾಗಿದೆ. ಮಾಡೆಲ್ಲುಗಳು ಹೆಚ್ಚಾಗಿ ಮೈಮೇಲೆ ಅರಿವೆಯೂ ಪರಿವೆಯೂ ಇಲ್ಲದೆ, ಜನರನ್ನು ಅದರಲ್ಲೂ ಯುವ ಜನಾಂಗವನ್ನು ಸೆಳೆಯುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದನ್ನು ಅರಿತುಕೊಂಡಿರುವ ಸರಕಾರವು, ಅವರನ್ನೇ ಕಣಕ್ಕಿಳಿಸಿದರೆ ಹೇಗೆ ಎಂದೆಲ್ಲಾ ಯೋಚಿಸಿ ನಿರ್ಧಾರಕ್ಕೆ ಬಂದಿರುವುದಾಗಿ, ಅಣ್ಣಾ ಹಜಾರೆಯವರನ್ನು "ಕಾಲಿನಿಂದ ತಲೆಯವರೆಗೆ ಭ್ರಷ್ಟ" ಎಂದು ಕರೆದು, ಈಗ ಮೂಲೆಗೆ ಝಾಡಿಸಲ್ಪಟ್ಟಿರುವ ಎಂತಿವಾರಿ, ಬೊಗಳೂರು ರದ್ದಿಗಾರರಿಗೆ ತಿಳಿಸಿದ್ದಾರೆ.

ಇಂಥದ್ದೊಂದು ತಂತ್ರಗಾರಿಕೆಗೆ ತಮ್ಮದೇ ಮಾತುಗಳು, ಪದಪ್ರಯೋಗ, ವಿದ್ವತ್ ಕಾರಣ ಎಂದೂ ಎಂತಿವಾರಿ ಎದೆ ತಟ್ಟಿಕೊಂಡು ಹೇಳಿದ್ದಾರೆ. ಯಾಕೆಂದರೆ, ತಾವು ಹಜಾರೆಯವರನ್ನು "ಟಾಪ್ ಟು ಬಾಟಮ್" ಭ್ರಷ್ಟ ಎಂದಿದ್ದೆ. ಆನಂತರ ಪಕ್ಷವು ಇದನ್ನು ನಿರಾಕರಿಸಿ ಹೇಳಿಕೆ ನೀಡಲೇಬೇಕಾದ ಅನಿವಾರ್ಯತೆ ಬಂದಿತ್ತು. ನಿರಾಕರಿಸುವುದು ಹೇಗೆ? ಹಿಂದಿನ ಹೇಳಿಕೆಗೆ "ಇಲ್ಲ" ಸೇರಿಸಿದರೆ ಆಯಿತು. ಅಂದರೆ ಟಾಪ್ ಇಲ್ಲ, ಬಾಟಮ್ ಇಲ್ಲ, ಮೀನ್ಸ್ ಟಾಪ್‌ಲೆಸ್ ಮತ್ತು ಬಾಟಮ್‌ಲೆಸ್. ಇದುವೇ ಯುಪಿಎಯ ತಂತ್ರಗಾರರಿಗೆ ಹೊಳೆದ ಅಂಶ. ಈ ಕಾರಣದಿಂದ, 'ಅಣ್ಣಾ ಅವರು ಹೇಳಿದಂತೆ ಬಲಿಷ್ಠ ಲೋಕಪಾಲ ಕಾಯಿದೆ ಜಾರಿಗೊಳಿಸದಿದ್ದರೆ, ಟಾಪ್‌ಲೆಸ್-ಬಾಟಂಲೆಸ್ ಆಗಿ ಬೆತ್ತಲೆ ನೃತ್ಯ ಮಾಡುತ್ತೇನೆ' ಎಂದು ಮಾಡೆಲ್ಲುಗಳ ಕೈಯಿಂದ ಮತ್ತು ಬಾಯಿಯಿಂದ ಹೇಳಿಕೆ ಕೊಡಿಸಲಾರಂಭಿಸಿದ್ದಾರೆ!

ಹೇಗಿದ್ದರೂ ಬಿಸಿ ರಕ್ತದ ಯುವಕರು ಈ ಮಾಡೆಲ್ಲುಗಳತ್ತ ಆಕರ್ಷಿತವಾಗಬಹುದು. ಅವರು ಅಣ್ಣಾ ಹಜಾರೆಗೆ ಬೆಂಬಲ ನೀಡುವುದನ್ನು ನಿಲ್ಲಿಸಿ, ಕಠಿಣ ಲೋಕಪಾಲ ಮಸೂದೆಯು ಜಾರಿಯಾಗದಂತೆ ನೋಡಿಕೊಂಡರೆ, ಮುಂದೆ ತಮಗೇ ಒಳಿತು, ಈ ಮಾಡೆಲ್ಲುಗಳ ನಗ್ನ ನೃತ್ಯ ನೋಡಬಹುದಾಗಿದೆ ಎಂದುಕೊಳ್ಳುವರು ಎಂಬುದು ಈ ಸರಕಾರದ ಲೆಕ್ಕಾಚಾರವಾಗಿತ್ತು!

ಆದರೆ, ಯುವಜನತೆಗೆ ಭ್ರಷ್ಟಾಚಾರ ಎಷ್ಟು ರೋಸಿಹೋಗಿದೆಯೆಂದರೆ, ಟಾಪ್‌ಲೆಸ್-ಬಾಟಂಲೆಸ್ ಆಗಿ ಹ್ಯಾಪ್‌ಲೆಸ್ ಆಗಿದ್ದರೂ ಅಲ್ಲೂ ಕೂಡ ಹೋಪ್‌ಲೆಸ್ ಭ್ರಷ್ಟಾಚಾರವೇ ಕಾಣುತ್ತಿದೆ, ಅವರು ಹೋರಾಟವನ್ನೆಂದಿಗೂ ಬಿಡಲಾರರು ಎಂಬ ಅಂಶವಂತೂ ಇವರಿಗೆ ಅರ್ಥವಾಗದಿರುವುದು ಈ ದೇಶದ ದುರಂತ ಎಂದು ಬೊಗಳೂರು ವರದ್ದಿಗಾರರು ನ್ಯೂಸ್‌ನಲ್ಲಿ ತಮ್ಮ ವ್ಯೂಸ್ ಸೇರಿಸಿದ್ದಾರೆ.
||ಅಣ್ಣಾ ಹೋರಾಟಕ್ಕೆ ಜಯವಾಗಲಿ||

Thursday, June 16, 2011

ಕಾಂಗ್ರೆಸಿನ 'ಅಡಿಗೆ' ಜನರ ನಡಿಗೆ ಆರಂಭ

[ಬೊಗಳೂರು ವಿಚಿತ್ರ ಸಂಚೋದನಾ ಬ್ಯುರೋದಿಂದ]
ಬೊಗಳೂರು, ಜೂ.16- "ಕಾಂಗ್ರೆಸ್‌ನಡಿಗೆ" ಜನರ ಬಳಿಗೆ ಎಂಬ ಜನಾಂದೋಲನವನ್ನು ಆರಂಭಿಸಿರುವುದಾಗಿ ಬೊಗಳೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆಯೂ, ಸದ್ಯಕ್ಕೆ ಆತುರಾತುರವಾಗಿ ಸ್ವಿಜರ್ಲೆಂಡ್ ಪ್ರವಾಸಕ್ಕೆ ಹೋಗಿ, ಬಳಿಕ ಇಟಲಿಗೆ ತೆರಳಿರುವ ರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷೆಯೂ ಆಗಿರುವ ಸುಷ್ಮಾ ಗಾಂಧಿ ಅವರು ಅಪ್ಪಣೆ ಹೊರಡಿಸಿದ್ದಾರೆ.

"ಕಾಂಗ್ರೆಸಿನಡಿಗೆ ಜನರು" ಎಂಬ ಆ ಅರುವತ್ತು ದಿನಗಳ ಜನಾಂದೋಲನವನ್ನು ದೇಶದ ಮೂಲೆ ಮೂಲೆಯಲ್ಲಿ ನಡೆಸುವಂತೆಯೂ, ಅದರ ಮುಂದಿನ ಹಂತವಾಗಿ ವಿದೇಶಗಳ ಮೂಲೆ ಮೂಲೆಯಲ್ಲಿಯೂ ನಡೆಸುವಂತೆ ಕ್ರಮ ಕೈಗೊಳ್ಳಲಾಗಿದೆ.

ಜೂನ್ 4ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿ ಮಲಗಿ ನಿದ್ರಿಸುತ್ತಿದ್ದವರೆಲ್ಲರೂ ಕಾಂಗ್ರೆಸ್‌ನಡಿಗೆ ಬಿದ್ದು ಅಪ್ಪಚ್ಚಿಯಾದಾಗಲೇ ಈ ಆಂದೋಲನ ಆರಂಭವಾಗಿದ್ದರೂ, ಅಧಿಕೃತವಾಗಿ ಗುರುವಾರ ಆರಂಭವಾಗಿದೆ ಎಂದು ಮೂಲಗಳು ವರದ್ದಿ ತಂದು ಹಾಕಿವೆ.

ಅಂದು ಶನಿವಾರ ರಾತ್ರಿ ಕಾಂಗ್ರೆಸಿನಡಿಗೆ ಬಿದ್ದವರು ಅಲ್ಲಲ್ಲಿ ಎದ್ದು ಬಿದ್ದು ಆಸ್ಪತ್ರೆಯಲ್ಲಿ ಸೇರಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಸ್ವಲ್ಪ ಸಮಯದ ನಂತರ ಪ್ರಯತ್ನಿಸುವ ಧೋರಣೆ ಅನುಸರಿಸಿರುವ ಪಕ್ಷವು, ಗಾಂಧೀಜಿ ಹೇಳಿಕೊಟ್ಟ ಸತ್ಯಾಗ್ರಹದ ಹಾದಿಯನ್ನೆಲ್ಲಾ ಗಟ್ಟಿಯಾಗಿ ಕಟ್ಟಿಟ್ಟು, ಬೇರಾರೂ ಅದನ್ನು ಮುಟ್ಟದಂತೆ ಸುರಕ್ಷಿತವಾಗಿ ಕಪಾಟಿನಲ್ಲಿ ಭದ್ರವಾಗಿರಿಸಿ, ಕಾಯುತ್ತಾ ಕೂರಲು ನಿರ್ಧರಿಸಿದೆ ಎಂದು ಮೂಲಗಳು ಹೇಳಿಕೆ ನೀಡಿಲ್ಲ.

ಆದರೆ, ಕರ್ನಾಟಕದಲ್ಲಿ ಇತ್ತೀಚೆಗೆ ನಡೆದಿರುವ ಎಲ್ಲ ಉಪಚುನಾವಣೆಗಳಲ್ಲಿ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕಾಂಗ್ರೆಸ್‌ನೆಡೆಗೆ ಜನರು ಬಡಿಗೆ ತಂದಿದ್ದು ಯಾಕೆ ಎಂಬುದರ ಕುರಿತು ಸಂಚೋದನೆ ನಡೆಸಲು ಬೊಗಳೆ ಬ್ಯುರೋಗೆ ಮೇಲಿನಿಂದ ಅಂದರೆ ಹೈ-ಕ-ಮಂಡೆಯಿಂದ ಆದೇಶ ಬಂದಿದೆ.

Tuesday, June 14, 2011

Barking News: ಗಾಂಧಿ ಕನ್ನಡಕ ಅಡಗಿಸಿಟ್ಟದ್ದು ಯಾರು ಗೊತ್ತಾ?

[ಬೊಗಳೂರು ಸಂಚೋದನಾ ಬ್ಯುರೋದಿಂದ]
ಬೊಗಳೂರು, ಜೂ.14- ಬೊಗಳೂರಿನ ಗಾಂಧಿ ಆಶ್ರಮದಿಂದ ಗಾಂಧೀಜಿ ಕನ್ನಡಕಗಳನ್ನು ಕದ್ದಿರುವುದನ್ನು ಬೊಗಳೆ ರಗಳೆಯ ಸಂಚೋದನಾ ಬ್ಯುರೋ ಪತ್ತೆ ಹಚ್ಚಿದೆ. ಮತ್ತು ಅದಕ್ಕೆ ಕಾರಣಗಳನ್ನೂ ವಿವರಿಸಿದೆ.

ದೇಶಾದ್ಯಂತ ಕಣ್ಣು ಮುಚ್ಚಿ ತೆರೆಯುವುದರೊಳಗೆ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಪ್ರಕರಣಗಳು ನಡೆಯುತ್ತಿವೆ. ಇಂಥದ್ದನ್ನೆಲ್ಲಾ ಗಾಂಧೀಜಿ ಸಾವಿನ ಬಳಿಕವೂ ನೋಡಬಾರದೆಂಬ ಉದ್ದೇಶದಿಂದಾಗಿ ಸರಕಾರದ ಪ್ರತಿನಿಧಿಗಳು ಗಾಂಧೀಜಿ ಕನ್ನಡಕವನ್ನು ಅಡಗಿಸಿಟ್ಟಿದ್ದಾರೆ ಎಂದು ಮೂಲಗಳು ವರದ್ದಿ ತಂದುಹಾಕಿವೆ.

ಭ್ರಷ್ಟಾಚಾರದ ವಿರುದ್ಧ ಅಲ್ಲಲ್ಲಿ, ದೇಶದೆಲ್ಲೆಡೆ, ಬೊಗಳೂರಿನಲ್ಲಿ ಕೂಡ ಅಹಿಂಸಾತ್ಮಕ ಪ್ರತಿಭಟನೆ ನಡೆಸಲಾಗಿದೆ. "ಆ"ಮರಣ ಉಪವಾಸದ ಬದಲಾಗಿ "ಅ"ಮರಣ ನಿರಶನ ನಡೆಸಲು ನಿರ್ಧರಿಸಲಾಗಿತ್ತು. ಆದರೂ, ಅಂಥ ಉಪವಾಸ ಮಾಡುತ್ತಿದ್ದವರ ಮೇಲೆ ಬೊಗಳೂರು ಸರಕಾರವು "ಇದು ಕೇಸರಿ ಕೋಮುವಾದಿಗಳ ಪಡೆ" ಎಂದುಕೊಳ್ಳುತ್ತಾ, ರೈಫಲ್, ಎಕೆ-47, ಲಾಠಿ ಇತ್ಯಾದಿಗಳನ್ನು ಕೊಟ್ಟು ಪೊಲೀಸರ ಪಡೆಯನ್ನೇ ಕಳುಹಿಸಲಾಗಿತ್ತು. ಮಲಗಿ ನಿದ್ರಿಸುತ್ತಿದ್ದ ಮಕ್ಕಳು, ಮುದುಕರು, ಮಹಿಳೆಯರೆನ್ನದೆ, ಎಲ್ಲರೆದುರು ಕೇಂದ್ರದ ಬೊಗಳೂರು ಸರಕಾರವು ತನ್ನ ಪೌರುಷ ಮೆರೆದಿದ್ದದ್ದನ್ನು ಕೂಡ ಗಾಂಧೀಜಿ ಮತ್ತೆ ಮತ್ತೆ ಟೀವಿಗಳಲ್ಲಿ ನೋಡಬಾರದು ಎಂಬ ಕಾರಣಕ್ಕಾಗಿ ಈ ಕನ್ನಡಕವನ್ನು ಅಡಗಿಸಿಡಲಾಗಿದೆ ಎಂದು ಮೂಲಗಳು ವರದ್ದಿ ಮಾಡಿದ್ದನ್ನು ಬೊಗಳೂರು ಬ್ಯುರೋ ಪತ್ತೆ ಹಚ್ಚಿ, ಸಂಚೋದನೆ ಮಾಡಿ ಇಲ್ಲಿ ವರದ್ದಿ ಮಾಡಿದೆ.

ಹೀಗಾಗಿ, ಗಾಂಧೀಜಿ ಕನ್ನಡಕ ಕಳವಿನಲ್ಲಿ ಆರೆಸ್ಸೆಸ್ ಕೈವಾಡವಿದೆ ಎಂದು ಆರೋಪಿಸುವ ಅವಕಾಶವು Digವಿಜಯ್ ಸಿಂಗ್ ಅವರಿಗೆ ತಪ್ಪಿ ಹೋಗಿದೆ ಎಂದು ಮೂಲಗಳು ಹೇಳಿಲ್ಲ. ಆದರೆ, ಇದನ್ನು Digವಿಜಯ್ ಸಿಂಗ್ ಅವರೇ ಅಡಗಿಸಿಟ್ಟಿದ್ದಾರೆ ಮತ್ತು ತಾವೇ ಹಾಕಿಕೊಂಡಿದ್ದಾರೆ ಎಂದು ಕೂಡ ಮೂಲಗಳು ಅಲ್ಲಲ್ಲಿ ವರದ್ದಿ ತಂದು ಸುರಿದಿವೆ!

Thursday, June 02, 2011

ಎಲ್ಲರೂ UPAವಾಸ ಮಾಡಿದ್ರೆ ಬೆಲೆ ಇಳಿಕೆ!

[ಬೊಗಳೂರು ಬೆಲೆ ಏರಿಕೆ ಸಂ-ಚೋದನಾ ಬ್ಯುರೋದಿಂದ]
ಬೊಗಳೂರು, ಜೂ.2- ಭ್ರಷ್ಟಾಚಾರಿಗಳನ್ನು ಮಟ್ಟ ಹಾಕಲು ಕಠಿಣ ಕಾಯ್ದೆ ಜಾರಿಗೆ ಮತ್ತು ವಿದೇಶದಲ್ಲಿ ರಾಶಿ ರಾಶಿಯಾಗಿ ಮೌಂಟ್ ಎವರೆಸ್ಟ್‌ಗಿಂತಲೂ ಎತ್ತರದ ಶಿಖರ ಎಂದು ಪ್ರಸಿದ್ಧಿ ಪಡೆದಿರುವ ಕಪ್ಪು ಹಣದ ಬೆಟ್ಟವನ್ನು ಅಗೆಯಲು ಹಿಂದು-ಮುಂದು ನೋಡುತ್ತಿರುವ ಬೊಗಳೂರು ಕೇಂದ್ರದ ಉಪ (UPA) ಸರಕಾರವು, ಇದೀಗ ದೇಶದ ಬಡತನ ನಿವಾರಣೆ ಹಾಗೂ ಏರುತ್ತಿರುವ ಬೆಲೆಗಳನ್ನು ನಿಯಂತ್ರಿಸಲು ಹೊಸ UPAಯವನ್ನು ಕಂಡುಕೊಂಡಿದೆ.

ಕೇಂದ್ರದ ಎಲ್ಲ ಸಚಿವರು ರಾಮದೇವ ಬಾಬಾ ಅವರ ಕಾಲಿಗೆ ಬಿದ್ದು, ಹೇಗಾದರೂ ಉಪವಾಸ ನಿಲ್ಲಿಸಿ ಅಂತ ಕೇಳಿಕೊಂಡಿರುವುದು ಕೇವಲ ನಾಟಕ ಎಂದು ತಿಳಿದುಬಂದಿದ್ದು, ಬಾಬಾ ರಾಮದೇವ್ ಮತ್ತು ಅಣ್ಣಾ ಹಜಾರೆ ಮುಂತಾದವರಿಗೆ ಬೆಂಬಲಿಗರ ದೊಡ್ಡ ಪಡೆಯೇ ಇದೆ. ಕೋಟಿ ಕೋಟಿ ಜನರು ಅವರು ಕರೆ ಕೊಟ್ಟರೆ ಉಪವಾಸ ಕೂರುತ್ತಾರೆ. ಅವರಿಗೆ ತಿನ್ನಲು ಏನೂ ಬೇಕಾಗಿಲ್ಲ. ಹೀಗಾಗಿ ದೇಶದಲ್ಲಿ ಬದುಕಲು ಅಗತ್ಯವಿರುವ ಅಕ್ಕಿ, ಬೇಳೆ, ಧಾನ್ಯ, ತರಕಾರಿ ಇತ್ಯಾದಿಗಳ ಅಗತ್ಯವೇ ಕಡಿಮೆಯಾಗಿ, ಅದು ಅನಗತ್ಯ ವಸ್ತುವಾಗಿಬಿಡುತ್ತದೆ. ತತ್ಪರಿಣಾಮವಾಗಿ ಅದರ ಬೆಲೆಯೂ ತನ್ನಿಂತಾನೇ ಇಳಿಯುತ್ತದೆ ಎಂದು ಬೊಗಳೂರು ಸರಕಾರವು ನಂಬಿಕೊಂಡು ಕೂತಿರುವುದಾಗಿ ವರದ್ದಿಯಾಗಿದೆ.

ಈಗಾಗಲೇ ದಾಸ್ತಾನು ಕೇಂದ್ರಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಹಾರ ಧಾನ್ಯಗಳು ಕೊಳೆಯುತ್ತಿವೆ. ಅದನ್ನು ರಿಲೀಸ್ ಮಾಡಿಬಿಟ್ಟರೆ ಬೆಲೆ ಇಳಿಯಬಹುದು. ಬೆಲೆ ಇಳಿದರೆ ಏನು ತೊಂದರೆ ಎಂಬುದು ಗೊತ್ತೇ? ಬೊಗಳೂರು ದೇಶದಲ್ಲಿರುವವರೆಲ್ಲರೂ ಕಡಿಮೆ ಬೆಲೆಯ ಆಹಾರ ತಿನ್ನುವವರು ಎಂದು ಜಾಗತಿಕ ಮಟ್ಟದಲ್ಲಿ ಅವಮಾನವಾಗುತ್ತದೆ. ಹೀಗಾಗಿ ಹೆಚ್ಚು ಬೆಲೆಯ ಆಹಾರವನ್ನೇ ಅವರು ಸೇವಿಸಬೇಕಾಗುತ್ತದೆ. ಹೀಗಾಗಿ ಬೆಲೆಗಳು ಏರಿಯೇ ಇರುವಂತೆ ನೋಡಿಕೊಳ್ಳಬೇಕಾಗಿದೆ ಎಂದು ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ.

ಇದಲ್ಲದೆ, ಗೋದಾಮುಗಳಲ್ಲಿ ಆಹಾರ ಧಾನ್ಯಗಳನ್ನು ಪೇರಿಸಿಟ್ಟು ಕೃತಕ ಕೊರತೆ ಸೃಷ್ಟಿಸುವುದರಿಂದ ದೇಶದ ಬೆನ್ನೆಲುಬಾಗಿರುವ ರೈತರಿಗೂ ಸಾಕಷ್ಟು ಉಪಕಾರವಾಗುತ್ತದೆ. ಜನರಿಗೆ ಸರಿಯಾಗಿ ವಿತರಣೆ ಮಾಡದೆ ಗೋದಾಮುಗಳಲ್ಲಿ ಹೆಚ್ಚು ಹೆಚ್ಚು ಆಹಾರಗಳನ್ನು ಸೇರಿಸಿದರೆ, ಅವುಗಳು ಕೊಳೆತು ಹೋಗುತ್ತವೆ. ಈ ಕೊಳೆತ ವಸ್ತುಗಳನ್ನೆಲ್ಲಾ ಉತ್ತಮ ಗೊಬ್ಬರವಾಗಿ ಬಳಸಿ, ಮತ್ತಷ್ಟು ಆಹಾರ ಧಾನ್ಯಗಳನ್ನು ಬೆಳೆಯಬಹುದು. ಗೊಬ್ಬರ ಕೊರತೆಯಿಂದ ಬಳಲುತ್ತಿರುವ ರೈತರೂ ಸುಖಿಯಾಗಿರುತ್ತಾರೆ ಎಂದು ಬೊಗಳೂರು ಸರಕಾರದ ಮಂತ್ರಿಗಳೆಲ್ಲರೂ ಗಂಭೀರವಾದ ತುರ್ತು ಸಮಾಲೋಚನೆ, ಗೂಢಾಲೋಚನೆ ಇತ್ಯಾದಿಗಳನ್ನೆಲ್ಲಾ ಕೈಗೊಂಡು ನಿರ್ಧಾರಕ್ಕೆ ಬಂದಿದ್ದಾರೆ ಎಂದು ಮೂಲಗಳು ಹೇಳಿಯೇ ಇಲ್ಲವೆಂಬುದನ್ನು ನಮ್ಮ ವರದ್ದಿಗಾರರು ವರದ್ದಿ ಮಾಡಿಲ್ಲ.

Monday, May 23, 2011

ಬೊಗಳೂರು ವಿಶೇಷ ವರದ್ದಿಗಾರರಾಗಿ ಭಾರರಾಜ್ ಹಂಸಧ್ವಜ!

[ಬೊಗಳೂರು ನೇಮಕಾತಿ ಬ್ಯುರೋದಿಂದ]
ಬೊಗಳೂರು, ಮೇ 23- ಬೊಗಳೂರಿಗೆ ಶೀಘ್ರದಲ್ಲೇ ಹೊಸ ವರದ್ದಿಗಾರರೊಬ್ಬರ ನೇಮಕವಾಗಲಿದೆ ಎಂದು ನಾವು ಈ ಮೂಲಕ ಘೋಷಿಸಲು ಬಯಸುತ್ತಿದ್ದೇವೆ. ಈ ರೀತಿಯ ಬದಲಾವಣೆಗೆ ಪ್ರಮುಖ ಕಾರಣವೆಂದರೆ ಬೊಗಳೂರು ದೇಶದ ದಕ್ಷಿಣ ಭಾಗದಲ್ಲಿರುವ ಕರ್‌ನಾಟಕ ಎಂಬ ರಾಜ್ಯದಲ್ಲಿ ನಡೆಯುತ್ತಿರುವ ಅರಾಜಕೀಯ ವಿದ್ಯಮಾನಗಳು.

ಹೇಗಿದ್ದರೂ ಬೊಗಳೆ ರಗಳೆ ಪತ್ರಿಕೆಗಿರುವುದು ಏಕ ಸದಸ್ಯ ಬ್ಯುರೋ. ಒಬ್ಬರೇ ವರದ್ದಿ ತರಬೇಕು, ಒಬ್ಬರೇ ಬರೆಯಬೇಕು, ಒಬ್ಬರೇ ತಿದ್ದಬೇಕು, ಒಬ್ಬರೇ ಪುಟಕ್ಕೆ ಹಾಕಬೇಕು, ಒಬ್ಬರೇ ಪ್ರಕಟಿಸಬೇಕು ಮತ್ತು ಕೊನೆಗೆ ಒಬ್ಬರೇ ಓದಬೇಕು! ಹೀಗಾಗಿ, ನಾಟಕ ರಾಜ್ಯದ ರಾಜಭವನದಲ್ಲಿ ಆಡಳಿತ ಪಕ್ಷದ ಶಾಸಕರ ಭೇಟಿಗೆ ಮತ್ತು ಅಧಿವೇಶನ ಕರೆಯುವ ಪ್ರಕ್ರಿಯೆಯನ್ನೆಲ್ಲಾ ಆರಂಭಿಸಲು 'ತೀವ್ರವಾದ ಸಿಬ್ಬಂದಿ ಕೊರತೆ' ಇದೆ ಎಂಬ ಸತ್ಯಾಂಶದ ಹೊರತಾಗಿಯೂ, ಸರಕಾರ ಸರಿ ಇಲ್ಲ, ಇಲ್ಲಿ Cong-stitutional ಬಿಕ್ಕಟ್ಟು ಉದ್ಭವವಾಗಿದೆ, ಹೀಗಾಗಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಲಿ ಎಂಬ ಒಂದೇ ಒಂದು ಸಾಲಿನ "ವಿಶೇಷ ವರದ್ದಿ"ಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿಕೊಟ್ಟಿರುವ ರಾಜ್ಯಪೌಲ್, ಶ್ರೀಯುತ ಭಾರರಾಜ ಹಂಸಧ್ವಜರನ್ನೇ ಬೊಗಳೂರಿನ ವಿಶೇಷ ವರದ್ದಿಗಾರರಾಗಿ ನೇಮಿಸಲು ಸೊಂಪಾದಕರು ತೀರ್ಮಾನಿಸಿದ್ದಾರೆ.

ಇದರ ಹಿಂದೆ ಇರುವ ಹಲವಾರು ಉದ್ದೇಶಗಳು, ಯಾಕೆ ನೇಮಿಸಲಾಯಿತು ಎಂಬ ಕುರಿತಾದ ನೆಪಗಳು, ಕಾರಣಗಳನ್ನು ಏಕಸದಸ್ಯ ಬ್ಯುರೋದ ಏಕೈಕ ಓದುಗ ಮಹಾಶಯರೆದುರು (ಯಾಕೆಂದರೆ, ಈ ವರದ್ದಿಯನ್ನು ಓದುತ್ತಿರುವುದು ನೀವು ಮಾತ್ರ ಅಲ್ಲವೇ???) ಇಡುವುದು ನಮ್ಮ ಬೊಗಳೂರು ಬೀರುವಿನ ಆದ್ಯ ಕರ್ತವ್ಯ.

ಮೊದಲನೆಯದಾಗಿ, ಸಿಬ್ಬಂದಿ ಕೊರತೆಯಿದ್ದರೂ, ವಿರೋಧ ಪಕ್ಷಗಳ ಮುಖಂಡರಾದ ಸಿ. ಧರಾಮಯ್ಯ, ಡಾಕ್ಟರ್ಜೀಪರ ಮೇಶ್ವರ, ನಿದ್ರೇವೇಗೌಡ, ಕು.ಮರಸ್ವಾಮಿ ಮುಂತಾದವರ ಭೇಟಿಗೆ ಅದು ಹೇಗೋ ಅವಕಾಶಗಳನ್ನೆಲ್ಲಾ ಮಾಡಿಕೊಂಡು, ವಿಶೇಷ ವರದ್ದಿ ತಯಾರಿಸಿ ಕಳುಹಿಸಿರುವ ಅವರ ಕಾರ್ಯನಿಷ್ಠೆಯು ಬೊಗಳೂರು ಸೊಂಪಾದಕರಿಗೆ ನುಂಗಲಾರದ ಇಷ್ಟವಾಗಿದೆ.

ಎರಡನೇಯದು ಎಂದರೆ, ಈ ಮೊದಲು ಕೂಡ ಇಂತಹಾ ವಿಶೇಷ ವರದಿಯನ್ನು ಕಳುಹಿಸಿ, ರಾಜ್ಯದಲ್ಲಿ ಅರಾಜಕತೆಯ ವಾತಾವರಣ ಸೃಷ್ಟಿ ಮಾಡಿದ್ದಾಗಲೂ ಕೇಂದ್ರವು ಇಂಥದ್ದೇ ವರದ್ದಿಯನ್ನು ಕಸದಬುಟ್ಟಿಗೆ ಹಾಕಿತ್ತು. ಆದರೂ ಛಲಬಿಡದ ತ್ರಿವಿಕ್ರಮನಂತೆ, ಅಡಿಗೆ ಬಿದ್ದರೂ ಮೂಗು ಮೇಲೆಯೇ ಮಾಡಿಕೊಳ್ಳುತ್ತಾ, ಉಗಿಸಿಕೊಂಡರೂ ಧೈರ್ಯಗುಂದದೆ, ಈ ಬಾರಿ ಮೇಢಂರನ್ನು ಮೆಚ್ಚಿಸಿಯೇ ಸಿದ್ಧ ಎಂಬ ಕಾರಣಕ್ಕೆ 'ಮರಳಿ ಯತ್ನವ ಮಾಡಿ' ವರದ್ದಿ ಕಳುಹಿಸಿದ್ದಾರೆ.

ಹಳೆಯ ವರದಿಗೇ ಒಂದಿಷ್ಟು ಬಣ್ಣ ಹಚ್ಚಿ, ರೆಕ್ಕೆ ಪುಕ್ಕ ಜೋಡಿಸಿ, 'ಈ ಬಾರಿ ಗುರಿ ಮುಟ್ಟುತ್ತದೋ' ಎಂಬ ಕಾತರದಿಂದ ಚಾತಕ ಪಕ್ಷಿಯಂತೆ ಕುಳಿತ ಹಂಸಧ್ವಜ ಭಾರರಾಜರು, ಈಗ ರಾಜ್ಯದಲ್ಲಿ ಯಾವುದೇ ಸಮಸ್ಯೆಗಳಿಲ್ಲದಿದ್ದರೂ, ಸರಕಾರಕ್ಕೆ ಒಂದಷ್ಟು ಕೆಲಸ ಮಾಡಲು ಅವಕಾಶ ಸಿಕ್ಕಿತು ಎಂದಾಗುವಾಗ, ಮತ್ತದೇ ವರದ್ದಿಯನ್ನು ಕಳುಹಿಸುವ ಅವರ ಛಾತಿಯು ಕೂಡ ಬೊಗಳೂರು ಬ್ಯುರೋದ ಸೊಂಪಾದಕರಿಗೆ ಇಷ್ಟವಾಗಿದೆ ಎಂದು ಈ ಮೂಲಕ ಸ್ಪಷ್ಟಪಡಿಸಲಾಗುತ್ತಿದೆ.

Thursday, April 28, 2011

ಪಾಕ್ ಆಟಗಾರ್ತಿಯರು ಸ್ಕರ್ಟ್ ಧರಿಸಲ್ವಂತೆ!

[ಬೊಗಳೂರು ವಿಶ್ಲೇಷಣಾ ಬ್ಯುರೋದಿಂದ]
ಬೊಗಳೂರು, ಏ.28- ಇದಪ್ಪಾ ಸುದ್ದಿ. ಒಂದು ಸಂಪ್ರದಾಯಶೀಲ ರಾಷ್ಟ್ರವು ಇದಕ್ಕೆ ಹೇಗೆ ಅವಕಾಶ ಕೊಡುತ್ತದೆ? ಎಂಬುದು (ಕ್ಲಿಕ್ ಮಾಡಿ ಹೆಡ್ಡಿಂಗ್ ಮಾತ್ರ ಓದಿ, ಜಾಸ್ತಿ ಓದಿದರೆ ನಿಮ್ಮ ಇಂಟರ್ನೆಟ್ ಡೇಟಾ ವೆಚ್ಚ ಹೆಚ್ಚಾಗಬಹುದು! ಅಂತ ಎಲ್ಲ ಓದುಗರಿಗೆ ಮನವಿ) ಬೊಗಳೆ ರಗಳೆ ಬ್ಯುರೋಗೆ ಅರ್ಥವಾಗದ ಹಿನ್ನೆಲೆಯಲ್ಲಿ ಒಂದು 'ರೀತಿಯ' ವಿಶ್ಲೇಷಣೆಯನ್ನು ನೀಡಲಾಗಿದೆ.

ಮಹಿಳೆಯರು ಪವಿತ್ರರು. ಅವರ ಮೇಲೆ ಕೆಟ್ಟ ದೃಷ್ಟಿ ಬೀಳಬಾರದು ಎಂಬಿತ್ಯಾದಿ ಕಾರಣಗಳಿಗೆ ಬುರ್ಖಾ ಕಡ್ಡಾಯ ಮಾಡುವಷ್ಟು ಕಟ್ಟು ನಿಟ್ಟಿನ ನಿಯಮಾವಳಿ ಇರುವ ಪಾಕಿಸ್ತಾನದಲ್ಲಿ ಇದೀಗ ಈ ಸುದ್ದಿಯನ್ನು ಎಲ್ಲರೂ ಹೇಗೆ ಅರಗಿಸಿಕೊಳ್ಳುತ್ತಾರೆ ಎಂಬುದು ನಂಬಲು ಅಸಾಧ್ಯವಾದ ಸಂಗತಿಯಾಗಿದೆ.

ಪಾಕಿಸ್ತಾನದ ಫೀಮೇಲು ಆಟಗಾರರು ಸ್ಕರ್ಟ್ ಹಾಕದೆಯೇ ಹೇಗೆ ಆಟವಾಡುತ್ತಾರೆ ಮತ್ತು ಇದನ್ನು ಕ್ರೀಡಾ ಅಭಿಮಾನಿಗಳು, ಕಟ್ಟಾ ಸಂಪ್ರದಾಯಸ್ಥ ಪ್ರೇಕ್ಷಕರು ಯಾವ ರೀತಿ ಪರಿಗಣಿಸುತ್ತಾರೆ? ಇಡೀ ಪಾಕಿಸ್ತಾನದಲ್ಲಿ ಕೋಲಾಹಲವೇ ಏರ್ಪಡಬಹುದಲ್ಲವೇ?

ನಮ್ಮ ಭಾರತದಲ್ಲಾದರೆ, ಸೋನಿಯಾ ಮಿರ್ಜಾ ತುಂಡು ಲಂಗ ಹಾಕಿದ್ದಕ್ಕೇ ಫತ್ವಾ ಇತ್ಯಾದಿಗಳನ್ನು ಹೊರಡಿಸಿ, ಆಕೆಗೆ ಬೆದರಿಕೆಯೊಡ್ಡಿ, ಅವಳನ್ನು ಪಾಕಿಸ್ತಾನಕ್ಕೇ ಶೋಯಬ್ ಮಲಿಕ್ ಜತೆ ಓಡಿಸಲಾಗಿದೆ. ಇರಾನ್‌ನ ಫುಟ್ಬಾಲ್ ತಂಡಗಳ ಫೋಟೋಗಳನ್ನು ನೋಡಿ ಅನುಭವ ಇದ್ದವರಿಗೆ, ಯಾವುದೇ ಮಹಿಳಾ ಕ್ರೀಡಾಳುಗಳು ಹೇಗಿರಬೇಕು ಎಂಬುದಕ್ಕೆ ಮಾದರಿ ದೊಹರೆಯುತ್ತದೆ.

ಬಹುತೇಕ ಅಷ್ಟೇ ಸಂಪ್ರದಾಯ ಪಾಲಿಸುವ ಪಾಕಿಸ್ತಾನದಲ್ಲಿ ಸ್ಕರ್ಟ್ ಹಾಕದೆ ಮಹಿಳಾಮಣಿಗಳು ಆಟವಾಡತೊಡಗಿದರೆ, ಅಲ್ಲಿ ಗಲಭೆ, ದಾಂಧಲೆ ಎಲ್ಲ ಭುಗಿಲೆದ್ದು, ಹಿಂಸಾಚಾರವೂ ನಡೆದು, ಕಲ್ಲು ತೂರಾಟ, ಗನ್‌ಗಳ ಸದ್ದು, ಗುಂಡುಗಳ ಸಿಡಿತ, ಬಾಂಬುಗಳ ಮೊರೆತ ಇತ್ಯಾದಿ ಎಲ್ಲವೂ ಆಗಬಹುದಲ್ಲವೇ?

ಈ ಕಾರಣಕ್ಕೆ ಈಗಾಗಲೇ ಪಾಕ್ ಪ್ರಧಾನಿಯೂ ಆಗಿರುವಂತಿರುವ ಐಎಸ್ಐ ಮುಖ್ಯಸ್ಥರಿಗೆ ಬೊಗಳೆ ರಗಳೆ ಬ್ಯುರೋ ಪತ್ರ ಬರೆದು, ದಯವಿಟ್ಟು ನಿಮ್ಮ ಆಟಗಾರ್ತಿಯರಿಗೆ ಕನಿಷ್ಠಪಕ್ಷ ಸ್ಕರ್ಟನ್ನಾದರೂ ಹಾಕಿಕೊಂಡು ಆಟವಾಡಲು ಹೇಳಿ ಎಂದು ಮನವಿ ಮಾಡಲಾಗಿದೆ. ಉತ್ತರಕ್ಕಾಗಿ ನಿರೀಕ್ಷಿಸಲಾಗುತ್ತಿದೆ.

Tuesday, April 05, 2011

'ಹೃದಯ ವೈಶಾಲ್ಯವಿಲ್ಲ' ಅಂತ ಅಫ್ರಿದಿ ಯಾರಿಗೆ ಹೇಳಿದ್ದು ಗೊತ್ತೇ?

[ಬೊಗಳೂರು ಕ್ರೀಡಾ ಬ್ಯುರೋದಿಂದ]
ಬೊಗಳೂರು, ಏ.5- ಬೊಗಳೂರು ಅಂದರೆ ಭಾರತ ಅಂದರೆ ಬೊಗಳೂರಿನ ತಂಡವು ವಿಶ್ವಕಪ್ ಗೆದ್ದುಕೊಂಡ ಬಳಿಕ ಎಚ್ಚೆತ್ತುಕೊಂಡ ನಮ್ಮ ಏಕ ಸದಸ್ಯ ಬೀರುವಿನ ಸದಸ್ಯರೆಲ್ಲರೂ, ಪಾತಕಿಸ್ತಾನದ ನಾಯಕ, ಭಾರತದೆದುರು ಆಟವಾಡಿ ಶಹೀದ್ ಆಗಿರುವ ಅಫ್ರಿದಿ ಅವರ ಹೇಳಿಕೆಗಳ ಹಿಂದೆ ಬೀಳಲಾರಂಭಿಸಿದಾಗ, ರೋಚಕ, ರೋಮಾಂಚಕ ಮತ್ತು ಇನ್ನೂ ಏನೇನೋ ಆಗಬಲ್ಲ ರಸವತ್ತಾದ ಸುದ್ದಿಗಳು ಲಭಿಸಿವೆ.

ಅವುಗಳಲ್ಲೆಲ್ಲಾ 'ಭಾರತೀಯರು ವಿಶಾಲ ಹೃದಯಿಗಳಲ್ಲ' ಎಂಬ ಒಂದು ವಾಕ್ಯದ ಬೆನ್ನ ಹಿಂದೆ ಬಿದ್ದು ಬಿದ್ದು ಹೊರಟಾಗ ಅಫ್ರಿದಿ ಮಾತಿನ ಹಿಂದಿನ ನಿಜಾರ್ಥವೇನೆಂಬುದನ್ನು ನಮ್ಮ ವ-ರದ್ದಿಗಾರರು ಪತ್ತೆ ಹಚ್ಚಿದ್ದಾರೆ.

ಶಾಹಿದ್ ಅಫ್ರಿದಿಯ ಈ ಕಳವಳಕಾರಿ, ಆಘಾತ ತುಂಬಿದ, ವೇದನೆ ತುಂಬಿದ ಹೇಳಿಕೆಗಳಿಗೆಲ್ಲ ಕಾರಣವಾಗಿದ್ದೇ ಪೂನಂ ಪಾಂಡೆ ಎಂಬ ಮಹಿಳೆ. ಈ ಅಚ್ಚರಿಯ ಅಂಶವನ್ನು ಅಫ್ರಿದಿ ಸುದ್ದಿಗೋಷ್ಠಿ ಸಂದರ್ಭ ಪಕ್ಕದಲ್ಲೇ ಕಾದು ಕುಳಿತಿದ್ದ ಬೊಗಳೂರು ವರದ್ದಿಗಾರರನ್ನು ಸ್ವಲ್ಪ ಆಚೆಗೆ ಅಂದರೆ ಬಾಗಿಲ ಸಂದಿನಲ್ಲಿ ಕರೆದು ಸ್ವತಃ ಬಯಲುಪಡಿಸಿದ್ದರು.

ಈ ಬಗ್ಗೆ ಒಂದಿಷ್ಟು ವಿವರಿಸುವಿರಾ? ನಾವು ಬೊಗಳೆ ರಗಳೆ ಪತ್ರಿಕೆಯಲ್ಲಿ ಮಾತ್ರವೇ ಎಕ್ಸ್-ಜೂಸಿವ್ ಆಗಿ ಪ್ರಕಟಿಸುತ್ತೇವೆ ಎಂದು ಗುಸುಗುಸು ಪಿಸು ಮಾತಿನಲ್ಲಿ ಹೇಳಿದಾಗ ಅವರು ವಿವರಿಸಿದ್ದು ಹೀಗೆ:

"ಹೌದು ಸ್ವಾಮೀ, ನಿಮಗಾದರೆ, ವಿಶ್ವಕಪ್‌ಗಾಗಿ ಹುಟ್ಟುಡುಗೆಯ ವಿಶ್ವರೂಪ ದರ್ಶನ ಮಾಡಿಸುತ್ತೇವೆ ಎಂದು ಹೇಳುವವರಿದ್ದಾರೆ. ಅದನ್ನೇನೋ ನಾನೂ ಚಿತ್ರ ಡೌನ್‌ಲೋಡ್ ಮಾಡಿಕೊಂಡಿರುವ ಪೂನಂ ಪಾಂಡೆಯೇ ಹೇಳಿದ್ದು. ಹಾಗಾಗಿ ಅಷ್ಟೇನೂ ಪ್ರಚಾರದಲ್ಲಿಲ್ಲದವಳು ಆಕೆ. ಭಾರತೀಯ ನಟೀಮಣಿಯರಲ್ಲಿ ವಿಶಾಲ ಹೃದಯ ಹೊಂದಿರುವ ಒಬ್ಬರಾದರೂ, ಕನಿಷ್ಠ ಪಕ್ಷ ರಾಖೀ ಸಾವಂತ್ ಆದರೂ ನಮಗೊಂದು ಅಂತಹಾ ಆಫರ್ ಮಾಡಬಹುದಿತ್ತಲ್ಲ... ನಿಮ್ಮ ಭಾರತೀಯರಲ್ಲಿ ಹೆಚ್ಚಾಗಿ ಹೃದಯವಿರುವುದು ನಟೀಮಣಿಯರಲ್ಲಿ ಅಂತಾನೇ ಕೇಳಿದ್ದೆ... ಯಾಕೆಂದರೆ, ಅವರೇ ಅಲ್ಲವೇ ಎಲ್ಲವನ್ನೂ ತೆರೆದು ತೋರಿಸುತ್ತೇವೆ, ಹೃದಯವನ್ನು ವಿಶಾಲವಾಗಿ ತೋರಿಸುತ್ತೇವೆ ಎಂದೆಲ್ಲಾ ಘೋಷಿಸಿರುವುದು! ಈಗ ಭಾರತವೇ ವಿಶ್ವಕಪ್ ಗೆದ್ದಿದೆ. ನಮಗಿನ್ನೇನು ಉಳಿದಿದೆ ತೋರಿಸಲು? ಇನ್ನು ತೋರಿಸಿದರೂ ನಮಗೆ ಆಡಲು ಪ್ರೇರಣೆ ದೊರೆಯುವುದು ಯಾವಾಗ? ಮುಂದಿನ ವಿಶ್ವಕಪ್ ಸಂದರ್ಭದಲ್ಲಾದರೂ ಭಾರತೀಯ ನಟಿಯರು ಈ ಬಗ್ಗೆ ಎಚ್ಚರ ವಹಿಸಬೇಕು, ಹೃದಯವನ್ನು ವಿಶಾಲವಾಗಿಸಿಕೊಳ್ಳಬೇಕು!"

ಆಗ ಬೊಗಳೂರು ಬ್ಯುರೋಗೆ ಅರಿವಾಗಿದ್ದು, ಸೆಮಿಫೈನಲಿನಲ್ಲಿ ಸೋತ ಬಳಿಕವೂ ಬಾರದ ಈ ಮಾತು, ಭಾರತವು ವಿಶ್ವಕಪ್ ಗೆದ್ದಾದ ಬಳಿಕ ಇಷ್ಟು ತಡವಾಗಿ ಬಂದದ್ದೇಕೆ ಎಂಬುದರ ಹಿಂದಿನ ತಥ್ಯ. ಭಾರತ ವಿಶ್ವಕಪ್ ಗೆಲ್ಲಲು ಪೂನಂ ಪಾಂಡೆಯೇ ಕಾರಣ ಎಂಬುದು ಅಫ್ರಿದಿ ಬಲವಾದ ನಂಬಿಕೆಯಾಗಿದ್ದು, ತಮಗೂ ಅಂತಹಾ ಹೃದಯ ವೈಶಾಲ್ಯತೆ ತೋರುವವರು ಯಾರಾದರೂ ಇದ್ದಿದ್ದರೆ, ಖಂಡಿತಾ ಗೆದ್ದೇ ಗೆಲ್ಲುತ್ತಿದ್ದೆವು ಎಂಬುದು ಅವನ ಮಾತಿನ ಅರ್ಥವಾಗಿತ್ತಂತೆ. ಇದನ್ನೂ ಅವರೇ ಬೊಗಳೆ ರಗಳೆ ಬ್ಯುರೋ ನಡೆಸಿದ ಮುಚ್ಚಿದ ಬಾಗಿಲ ಸಂದರ್ಶನದಲ್ಲಿ ಹೇಳಿದ್ದರು!

Friday, April 01, 2011

ಬೊಗಳೆ ರಗಳೆಗೆ 5ನೇ ಹುಟ್ಟುಹಬ್ಬ: 1 ಲಕ್ಷ ಒದೆ

[ಬೊಗಳೂರು ಸೊಂಪಾದಕೀಯ ಬ್ಯುರೋದಿಂದ]
ಆತ್ಮೀಯ ಓದುಗರೇ,
2006ರ ಏಪ್ರಿಲ್ 4ರ ಆ ಶುಭ ಮಂಗಳವಾರ, ಬೊಗಳೆ ರಗಳೆ ಬ್ಯುರೋ ಬಾಗಿಲು ತೆರೆದಾಗ ಭಾರತದಲ್ಲಿ ಚೆನ್ನೈಯಲ್ಲಿ ಸುನಾಮಿ ಎಂಬ ಪದ ಕೇಳಿದ್ದ ಜನರಿಗೆ, ಆಗ ಈ ಥರಹದ ಮತ್ತೊಂದು ಸುನಾಮಿ ಹುಟ್ಟಿಕೊಂಡಿದೆ ಎಂಬ ಪರಿವೆಯೇ ಇರಲಿಲ್ಲ. ಈಗಲೂ ಇಲ್ಲ! ಆ ಒಂದು ಸಾಲಿನ ವ-ರದ್ದಿಗೆ ಒಂದೇ ಒಂದು ಪ್ರತಿಕ್ರಿಯೆ ಬಾರದಿರುವುದೇ ಇದಕ್ಕೆ ಸಾಕ್ಷಿ.

ವಿಷಯಕ್ಕೆ ಬರೋಣ. ಜಗತ್ತಿನಾದ್ಯಂತವಿರುವ ಕೋಟಿ ಕೋಟಿ ಕನ್ನಡಿಗರಲ್ಲಿ, ಈ ಏಕ-ಸದಸ್ಯ ಬೊಗಳೆ ರಗಳೆ ಬ್ಯುರೋದಲ್ಲಿರುವ ಸಿಬ್ಬಂದಿಗಳಷ್ಟೇ ಅಪಾರವಾದ ಓದುಗರ ಸಂಖ್ಯೆಯನ್ನು ಹೊಂದಿರುವ ಈ ಅನಿಯತಕಾಲಿಕವು ನಾಲ್ಕು ವರ್ಷ ಪೂರೈಸಿದಾಗ ಅದು ಹೇಗೆ ಒಂದು ಲಕ್ಷ ಮಂದಿ ಒದೆ ಕೊಟ್ಟರೋ ನಾಕಾಣೆ. ಆದರೂ ಐದನೇ ವರ್ಷಕ್ಕೆ ಕಾಲಿರಿಸುತ್ತಿದೆ ನಮ್ ಬ್ಯುರೋ!

ಮತ್ತು ಇದು ನಮ್ಮ ಬ್ಯುರೋದ ಗಮನಕ್ಕೇ ಬಂದಿರಲಿಲ್ಲ. ಯಾಕೆಂದರೆ ಸ್ಟ್ಯಾಟ್‌ಕೌಂಟರ್ ತೋರಿಸುತ್ತಿದ್ದ ಹೆಚ್ಚಿನ ಸಂಖ್ಯೆ ಸೊನ್ನೆಯೇ ಆಗಿತ್ತು. ಕೊನೆಯಲ್ಲಿ 1 ಇತ್ತು ಎಂಬುದು ಗಮನಕ್ಕೆ ಬಂದಾಗ ಕಾಲ ಮೀರಿ ಹೋಗಿತ್ತು.

ಕಂಪ್ಯೂಟರ್ ಎಂದರೇನೆಂದು ಅರಿವಿಗೆ ಬರುವ ಮುನ್ನವೇ ಈ ಬ್ಲಾಗು ಎಂದರೇನೆಂದು ತಿಳಿಯದೆ, ಬರೀ ಬೊಗಳೆ ಇರಬಹುದು ಎಂದುಕೊಂಡೇ ಇದಕ್ಕೆ ಬೊಗಳೆ ರಗಳೆ ಎಂದೇ ನಾಮಕರಣ ಮಾಡಲಾಗಿತ್ತು. ಜಗತ್ತಿನಾದ್ಯಂತ ಇರುವ ಆಯಾ ಸರ್ವರ್‌ಗಳಿಂದ ಕಾರ್ಯಾಚರಿಸುತ್ತಿರುವ ಈ ನಮ್ಮ ಅಂತರ್ಜಾಲದ ಅಂತರ್ಪಿಶಾಚಿ ಪತ್ರಿಕೆಗೆ ಆರಂಭದಲ್ಲಿ ಇದ್ದದ್ದು ಒಬ್ಬರೇ ಸೊಂಪಾದಕರು, ಒಬ್ಬರೇ ವರದ್ದಿಗಾರರು, ಒಬ್ಬರೇ ಪ್ರಸರಣಧಿಕ್ಕಾರಿ ಮತ್ತು ಒಬ್ಬರೇ ಜಗಜ್ಜಾಹೀರಾತುದಾರರು ಹಾಗೂ ಒಬ್ಬ ಓದುಗ ಮಾತ್ರ. ಆ ಒಬ್ಬ ಓದುಗ ಯಾರೆಂಬ ಕುತೂಹಲವೇ? ಹೇಳುತ್ತೇವೆ ಕೇಳಿ, ಅದುವೇ ಈ ಬೊಗಳೂರು ಬ್ಯುರೋದ ಸಮಸ್ತ ಸಿಬ್ಬಂದಿಯಾಗಿರುವ ಸೊಂಪಾದಕರು! ತಾವು ಬರೆದಿದ್ದನ್ನು ಪ್ರತಿ ದಿನ ತಾವೇ ಓದುತ್ತಿದ್ದರವರು ಮತ್ತು ಓದಬೇಕಾಗಿ ಬರುತ್ತಿತ್ತು!

ಇಂಥದ್ದರಲ್ಲಿ, ಈಗಲೂ ನಮ್ಮ ಬ್ಯುರೋದ ಸಿಬ್ಬಂದಿಗಳ ಸಂಖ್ಯೆಯನ್ನು 1ಕ್ಕಿಂತ ಹೆಚ್ಚಿಸಿಲ್ಲ. ಅಂತೆಯೇ ಓದುಗರ ಸಂಖ್ಯೆಯೂ 1 ದಾಟಿದೆ. ಆದರೆ ಇದು ಒಂದು ಲಕ್ಷ ಎಂಬುದು ನಮ್ಮ ಲಕ್ಷ್ಯಕ್ಕೆ ಈಗ ಬಂದಿರುವುದರಿಂದ ಮತ್ತೊಮ್ಮೆ ನಿಮಗೆ ಧನ್ಯವಾದಗಳು. ಕೆಲವು ದಿನ ನಾಪತ್ತೆಯಾದರೂ ಬಂದು ಒದ್ದು ಹೋಗುವ ಅಂದರೆ ಓದಿ ಹೋಗುವ ನಿಮ್ಮ ತಾಳ್ಮೆಗೆ, ನಮ್ಮ ವರದ್ದಿಗಳನ್ನು ಓದಿ ಮತ್ತು ಓದದೆಯೂ ಅರ್ಥೈಸಿಕೊಳ್ಳುವ ಹಾಗೂ ಅಪಾರ್ಥೈಸಿಕೊಳ್ಳುವ, ನಮ್ಮ ವರದ್ದಿಯಲ್ಲಿರುವ ಟೊಳ್ಳನ್ನೇ ಬಾರ್ಕಿಂಗ್ ನ್ಯೂಸ್ ಎಂದು ಪರಿಗಣಿಸಿ ಓದಿ, ಒಂದಷ್ಟು ಆಣಿಮುತ್ತುಗಳನ್ನು ಉದುರಿಸಿ ಹೋಗುವ, ಈ ವರದ್ದಿಗಳನ್ನು ಓದಿಯೂ ಮತ್ತೊಮ್ಮೆ ಓದಲೆಂದು ಬರುವ ನಿಮಗೆಲ್ಲರಿಗೂ ಮತ್ತೊಮ್ಮೆ ಮೆಣಸ್‌ಕಾರಗಳು.

ಆದರೆ, ಈಗಲೂ ಕೂಡ ಬೊಗಳೆ ರಗಳೆ ಹುಟ್ಟಿಕೊಂಡಿದ್ದು ಏಪ್ರಿಲ್ 1ರಂದು ಎಂದೇ ವಾದಿಸುತ್ತಿದ್ದಾರೆ. ಬೊಗಳೆ ರಗಳೆ ಜನ್ಮ ದಿನ ಏಪ್ರಿಲ್ ಒಂದನೇ ತಾರೀಕೇ ಎಂಬುದು ಅವರ ಮನಸ್ಸಿನಲ್ಲಿ ಇಂದಿಗೂ ಕಾಡುತ್ತಿರುವ ಸಂಗತಿ ಮತ್ತು ಅವರ ವಾದವೂ ಹೌದು. ಹೀಗಾಗಿ, ಇದು ಖಂಡಿತವಾಗಿಯೂ ನಮ್ಮ ದಿನವಲ್ಲ ಎಂದು ಎಂದಿನಂತೆಯೇ ನಾವು ಸ್ಪಷ್ಟೀಕರಣ ನೀಡುತ್ತಿದ್ದೇವೆ.

ಈ ಒದೆಗಳನ್ನು ಕೊಟ್ಟ ಓದುಗರಿಗೆ (ಓದುಗ ಅಂದರೆ ಒದ್ದುಗ ಅಂದರೆ ಒದೆ ಕೊಡುವವ ಅಂತ ನಮ್ಮ ಡಿಕ್ಷನರಿ ಹೇಳುತ್ತದೆ!) ನಿಜಕ್ಕೂ ಕೋಟಿ ಕೋಟಿ ಪ್ರಣಾಮಗಳು ಮತ್ತು ಆನ್‌ಲೈನ್‌ನಲ್ಲೇ ದೊಡ್ಡ ಪಾರ್ಟಿಯನ್ನೂ ಈ ಮೂಲಕ ಇಟ್ಟುಕೊಂಡಿದ್ದೇವೆ. ಎಲ್ಲರೂ ಬಂದು ತಿಂದುಂಡುಹೋಗಬೇಕಾಗಿ ವಿನಂತಿಸುತ್ತಿದ್ದೇವೆ.

Monday, March 28, 2011

ಮೂರ್ಖರ ದಿನಕ್ಕೆ ಬೊಗಳೆಯಲ್ಲಿ ವಿಶೇಷ ವ-ರದ್ದಿ

ಬೊಗಳೆ ವಿಶೇಷ ಜಗಜ್ಜಾಹೀರಾತು
ಈ ಬಾರಿ ನಿಮ್ಮದೇ ಮೂರ್ಖರ ದಿನಾಚರಣೆ ಪ್ರಯುಕ್ತ ನಮ್ಮ ಬೊಗಳೆ ರಗಳೆ ಸಂಚಿಕೆಯಲ್ಲಿ ವಿಶೇಷ ವರದ್ದಿಯೊಂದು ಪ್ರಕಟವಾಗುವ ಸಾಧ್ಯತೆಗಳು ನಿಚ್ಚಳವಾಗಿದೆ. ಆದುದರಿಂದ ಈಗಲೇ ನಿಮ್ಮ ಪ್ರತಿಗಳನ್ನು ಕಾಯ್ದಿರಿಸಿಕೊಳ್ಳಿ.

ರಶ್ ಆಗುವುದರಿಂದ ಮತ್ತು ಆರ್ಡರ್ ಮಾಡಿದ್ದು ಹೆಚ್ಚಾದರೆ ಪ್ರಿಂಟ್ ಮಾಡಲು ಕಷ್ಟವಾಗುವ ಸಾಧ್ಯತೆಗಳಿರುವುದರಿಂದ ಆದಷ್ಟು ಬೇಗನೇ ಮತ್ತೆ ಮತ್ತೆ ನೀವೆಲ್ಲರೂ ಕಾಲ್ ಮಾಡಿ ಪ್ರತಿಗಳನ್ನು ಕಾಯ್ದಿರಿಸಬಹುದು. ಈ ಆರ್ಡರ್ ಪ್ರತಿಗಳಲ್ಲೇ ನಾವು ಅದನ್ನು ಮುದ್ರಿಸಿಕೊಡುವ ಸಂಚು ರೂಪಿಸುತ್ತಿದ್ದೇವೆ. -ಸಂ

Wednesday, March 23, 2011

ಬೊಗಳೋದನ್ನು ಕುಡುಕರ ಅರಚಾಟಕ್ಕೆ ಹೋಲಿಸಿದ್ದಕ್ಕೆ ಶ್ವಾನ ಸಂಘ ಕೆಂಡ

[ಬೊಗಳೂರು ಶ್ವಾನದಯಾ ಸಂಘದ ಬ್ಯುರೋದಿಂದ]
ಬೊಗಳೂರು, ಮಾ.23- ತಮ್ಮನ್ನು ಹೆಂಡದಂಗಡಿ ಬಳಿ ಕುಡುಕರು ಮಾತನಾಡುವಂತೆ ತಾನು ಬೊಗಳುತ್ತಿದ್ದೇನೆ ಎಂಬ ಆರೋಪವನ್ನು ಕೇಳಿ ದಿಢೀರನೇ ಎಚ್ಚೆತ್ತ ಹುಚ್ಚು ಸಂಘದ ಪದಾಧಿಕಾರಿಗಳು, ಈ ಬಗ್ಗೆ ತೀವ್ರ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದು, ತಮಗೆ ಪ್ರತಿಭಟನೆಗೆ ಮಾರ್ಗದರ್ಶನ ಮಾಡಬೇಕು ಎಂದು ವಟವಟಾಳ್ ಗಾನರಾಜ್ ಅವರ ಮೊರೆ ಹೊಕ್ಕಿದೆ ಎಂದು ಮೂಲಗಳು ತಿಳಿಸಿವೆ.

ವಿಕಿಲೀಕ್ಸ್ ಬಹಿರಂಗವಾದಂದಿನಿಂದ ನಾಪತ್ತೆಯಾಗಿದ್ದ ಬೊಗಳೂರಿನ ಏಕೈಕ ಸದಸ್ಯರನ್ನೊಳಗೊಂಡ ಬ್ಯುರೋದ ಸಮಸ್ತ ಸಿಬ್ಬಂದಿಗಳ ಹಗರಣವನ್ನು ವಿಕಿಲೀಕ್ಸ್ ಮೂಲಕವೇ ಬಯಲಿಗೆ ತರುವುದಾಗಿ ಬೆದರಿಕೆಯೊಡ್ಡಿದ ತಕ್ಷಣವೇ ನಾಯಿ ಬೊಗಳುತ್ತಿರುವುದು ಕೇಳಿ ದಿಢೀರನೇ ಎಚ್ಚೆತ್ತ ಸಿಬ್ಬಂದಿ ಈ ಸುದ್ದಿಯ ವಾಸನೆ ಹಿಡಿದು ಮೂಗು ಮುಚ್ಚಿಕೊಂಡು ಹೊಸ ಸ್ಫೋಟಕ ಸುದ್ದಿ ತಂದಿದ್ದಾರೆ ಎಂದು ಬೊಗಳೆ ರಗಳೆ ಬ್ಯುರೋದ ಸೊಂಪಾದಕರುಗಳು ತಿಳಿಸಿದ್ದಾರೆ.

ಈಗಾಗಲೇ ನಿರ್ದಯಿ ಅಮಾನವರು ತಾವೇ ಮಾನವರು ಎಂದುಕೊಳ್ಳುತ್ತಾ, ನಿಷ್ಠೆಗೆ ಹೆಸರಾದ ನಮ್ಮನ್ನು ಪ್ರತಿಯೊಂದಕ್ಕೂ ಹೋಲಿಸಿಕೊಳ್ಳುತ್ತಿದ್ದಾರೆ. ಇದು ನಮ್ಮ ಕುಲಕ್ಕೇ ಅವಮಾನ ಎಂದು ಶ್ವಾನಸಂಘದ ಪದಧಿಕ್ಕಾರಿಗಳು, ಬೊಗಳೂರು ಬ್ಯುರೋ ಎಚ್ಚೆತ್ತುಕೊಂಡಿದೆ ಎಂಬುದನ್ನು ತಿಳಿದಾಕ್ಷಣ ಸುದ್ದಿಗೋಷ್ಠಿ ಕಳೆದು ವಿವರ ನೀಡಿದ್ದಾರೆ.

ಇದಲ್ಲದೆ, ತಮ್ಮ ಸಂಘದಲ್ಲಿ ಯಾವುದೇ ಒಡಕಿಲ್ಲ. ಇಡೀ ಜಗತ್ತಿನಲ್ಲಿ ಇರುವುದು ಎರಡೇ ಎರಡು ಸಂಘಗಳು ಮಾತ್ರ. ಒಂದು ತಮ್ಮ ಶ್ವಾನ ಸಂಘ ಮತ್ತು ತಮ್ಮ ಹೆಸರು ಬಳಸಿಕೊಳ್ಳುತ್ತಿರುವವರು, ಸ್ವಾಮಿನಿಷ್ಠೆ ಎಂಬಿತ್ಯಾದಿ ಪದ ಉಪಯೋಗಿಸುತ್ತಿರುವವರು ಸೇರಿದ ಉಳಿದದ್ದೆಲ್ಲವೂ ಹುಚ್ಚು ಶ್ವಾನ ಸಂಘ ಎಂದು ಸ್ಪಷ್ಟನೆ ನೀಡಿದ ಅವರು, ನಾವು ಬೊಗಳುವುದಕ್ಕೂ ರಾಜಕಾರಣಿಗಳು ಬೊಗಳುವುದಕ್ಕೂ ಹೋಲಿಕೆ ಮಾಡಬಾರದು ಎಂದು ಮಾಧ್ಯಮಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಒಂದಲ್ಲ ಒಂದು ದಿನ ಈ ರೀತಿ ಕೆಟ್ಟದಾಗಿ ಬೊಗಳುತ್ತಾ, ಅದು ಶ್ವಾನಗಳ ಬೊಗಳುವಿಕೆ ಎಂದು ಪೋಸು ಕೊಡುತ್ತಿರುವ ಅಮಾನವರ ಅಮಾನವೀಯ ಜನಾಂಗಕ್ಕೆ ಮುಂದಿನ ಜನ್ಮದಲ್ಲಾದರೂ ತಕ್ಕ ಪಾಠ ಕಲಿಸುವುದಾಗಿ ಶ್ವಾನ ಸಂಘದ ಎಲ್ಲ ಪದಧಿಕ್ಕಾರಿಗಳು (ಸಿಂಹಕ್ಕೆ ತಿಳಿಸಬೇಡಿ ಎನ್ನುತ್ತಲೇ) ಘರ್ಜಿಸಿದ್ದಾರೆ! ಮಾತ್ರವಲ್ಲ, ಇನ್ನು ಕರೆಂಟು ಕಂಬ ನೋಡಿದ ತಕ್ಷಣ ಕಾಲೆತ್ತುವವರು ಮಾತ್ರ ನಿಜವಾದ ಶ್ವಾನ ಸಂಘದವರು, ಹೋದಲ್ಲಿ, ಬಿದ್ದಲ್ಲಿ, ಎದ್ದಲ್ಲಿ ಕಾಲೆತ್ತುವವರು ಅಲ್ಲವೇ ಅಲ್ಲ ಎಂಬ ಸಂದೇಶವನ್ನೂ ಶ್ವಾನ ಸಂಘದ ಅಧ್ಯಕ್ಷರು ಬೊಗಳೆ ರಗಳೆ ಮೂಲಕ ಸಮಸ್ತ ಜನತೆಗೆ ಸಂದೇಶ ರವಾನಿಸಿದ್ದಾರೆ.

[ಸೂಚನೆ: ನಾಡಿದ್ದು ಸೋಮವಾರ 28ರಂದು ನಿಮ್ಮೂರಾದ ಬೊಗಳೂರಿನ ಬೊಗಳೆ ರಗಳೆ ಪತ್ರಿಕೆಯಲ್ಲಿ ವಿಶೇಷವಾದ ಘೋಷಣೆ ಇರುತ್ತದೆ - ಸಂ]

Tuesday, January 18, 2011

ಬೊಗಳೆ: ಸರ್ಕಾರದ ಹೊಸ ನೀತಿ - Drink, don't drive

[ಬೊಗಳೂರು ಬೆಲೆ ಏರಿಕೆ ರಂಜನಾ ಬ್ಯುರೋದಿಂದ]
ಬೊಗಳೂರು, ಜ.18- ಬಡ ಪ್ರಜೆಗಳು ಚೀಲ ತುಂಬಾ ಹಣದ ನೋಟುಗಳನ್ನು ತೆಗೆದುಕೊಂಡು ಹೋಗಿ ಅಂಗಿಯ ಜೇಬು ತುಂಬಾ ಆಹಾರ ವಸ್ತುಗಳು ದೊರೆಯುವಂತೆ ಮಾಡಿರುವ Unprecedented Price Agenda ಸರಕಾರದ ಆಳ್ವಿಕೆಯಡಿ, ಜನತೆ ಸಂತೃಪ್ತರಾಗಿದ್ದಾರೆ.

ಇದಕ್ಕೆ ಕಾರಣವೇನು ಎಂದು ಪತ್ತೆ ಹಚ್ಚಲು ಬೊಗಳೂರು ಬ್ಯುರೋ ಸಿಬ್ಬಂದಿ ಹೊರಟಾಗ ಹಲವಾರು ದೊಡ್ಡ ದೊಡ್ಡ ಪರ್ವತಗಳು ಎದುರಾದವು ಮತ್ತು ಸಾಕಷ್ಟು ರಾಕೆಟ್‌ಗಳು ಕೂಡ ಆಗಸಕ್ಕೆ ನೆಗೆನೆಗೆದು ಬೀಳುತ್ತಿದ್ದವು.

ಅವುಗಳನ್ನು ವಿಚಾರಿಸಲಾಗಿ, ಅವೆಲ್ಲವೂ ಏರಿದ ಬೆಲೆಗಳ ಪರ್ವತವಾಗಿದ್ದು, ರಾಕೆಟ್‌ನಂತೆ ಆಗಸಕ್ಕೆ ಚಿಮ್ಮುತ್ತಿರುವುದೆಲ್ಲವೂ ಪೆಟ್ರೋಲ್, ಟೊಮೆಟೋ, ಈರುಳ್ಳಿ, ಅಕ್ಕಿ, ಬೇಳೆ, ಗೋಧಿ ಮುಂತಾದ ಬಡ ಜನರ ಅಗತ್ಯ ವಸ್ತುಗಳು ಎಂಬುದು ಪತ್ತೆಯಾಯಿತು.

ಹೀಗಾಗಿ, ಬಡವರ ನಿರ್ಮೂಲನೆಯೇ ತಮ್ಮ ಗುರಿ ಎಂದು ಯುಪಿಎ ಸರಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದು ಸರಿಯಾಗಿದೆ. ಆ ಪ್ರಣಾಳಿಕೆಯ ಭರವಸೆ ಈಡುರುತ್ತಿದೆ ಎಂಬ ಸಂತಸವೂ ಜನರನ್ನು ಆವರಿಸಿಕೊಂಡಿದೆ. ಇನ್ನು ಮುಂದೆ ಈ ದೇಶದಲ್ಲಿ ಬಡವರೇ ಇರುವುದಿಲ್ಲ; ಎಲ್ಲರೂ ಈರುಳ್ಳಿ ಕೊಳ್ಳುವವರೇ ಆಗಿರುತ್ತಾರೆ!

ಅದಕ್ಕೂ ಮಿಗಿಲಾಗಿ ಸಂತೋಷ ತಂದಿರುವ ಒಂದು ಅಂಶ ನಿಧಾನವಾಗಿ ಬಯಲಿಗೆ ಬಂತು. ಅದೆಂದರೆ, CON-guess ಸರ್ಕಾರವು ಹೊಸ ನೀತಿಯೊಂದನ್ನು ಜಾರಿಗೊಳಿಸಿದೆ. ಅದೆಂದರೆ, Don't drink and drive ಎಂಬ ನೀತಿಗೆ ತಿದ್ದುಪಡಿ ತಂದು, ಅದನ್ನು Drink and don't drive ಎಂದು ಬದಲಾಯಿಸಿರುವುದು.

ಈ ನೀತಿಯ ಜಾರಿಗೆ ಕಾರಣವೂ ಇಲ್ಲದಿಲ್ಲ. ಪೆಟ್ರೋಲ್ ಬೆಲೆಗಿಂತಲೂ ಮದ್ಯವೇ ಇಂದು ಚೀಪಾಗಿ ದೊರೆಯುತ್ತಿದೆ. ಒಂದು ಲೀಟರ್ ಪೆಟ್ರೋಲ್ ಬೆಲೆ 64 ರೂಪಾಯಿ ಇದ್ದರೆ, ಬಿಯರು, ಹೆಂಡ ಮುಂತಾದವುಗಳು ಈ ಹಣದಲ್ಲಿ ಪೀಪಾಯಿಗಟ್ಟಲೆ ದೊರೆಯುತ್ತವೆ! ಹೀಗಾಗಿ ಚೀಪಾಗಿರುವುದನ್ನು ಡ್ರಿಂಕ್ ಮಾಡಿ, ಆದರೆ ಕಾಸ್ಟ್ಲೀ ಆಗಿರುವುದನ್ನು ಡ್ರೈವ್ ಮಾಡಬೇಡಿ ಎಂಬ ಸಂದೇಶವನ್ನು ಒತ್ತಾಯಪೂರ್ವಕವಾಗಿ ಅದು ಜಾರಿಗೊಳಿಸುತ್ತಿದೆ!

Monday, January 10, 2011

ಬೊಗಳೆ ಬ್ರೇಕ್: ಮಾರ್ಕೆಟ್ಟಲ್ಲಿ ನಕಲಿ ಈರುಳ್ಳಿ ಹಾವಳಿ

[ಬೊಗಳೂರು ಕಣ್ಣೀರುಳ್ಳಿ ತನಿಖಾ ಬ್ಯುರೋದಿಂದ]
ಬೊಗಳೂರು, ಜ.10- ನೂರಿನ್ನೂರು ಗ್ರಾಂ ಈರುಳ್ಳಿ ಖರೀದಿಸಿದವರ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ ಗಲಿಬಿಲಿಗೊಂಡಿರುವ ಈರುಳ್ಳಿ ದಾಸ್ತಾನುಗಾರರು, ಇದೀಗ ನಕಲಿ ಈರುಳ್ಳಿಗಳನ್ನು ತಯಾರಿಸಿ ಮಾರುಕಟ್ಟೆಗೆ ಇಳಿಸಿರುವುದಾಗಿ ವರದ್ದಿಗಳು ತಿಳಿಸಿವೆ.

ಇತ್ತೀಚೆಗೆ ಬೊಗಳೂರು ಬ್ಯುರೋದ ಏಕೈಕ ಸದಸ್ಯರನೇಕರು ಖರೀದಿಸಿದ ಈರುಳ್ಳಿಗಳನ್ನು ಎಷ್ಟೇ ಕೊಯ್ದರೂ ಕಣ್ಣಲ್ಲಿ ನೀರು ಬರುತ್ತಿರಲಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗಿ, ವರ್ತಕರು ಮಾರುತ್ತಿದ್ದುದು ನಕಲಿ ಈರುಳ್ಳಿ ಎಂದು ಸ್ಪಷ್ಟಗೊಂಡಿದೆ. ಆದರೆ ಅವರಲ್ಲಿ ಬೆಲೆ ಹೇಳಿದ ನಂತರವಷ್ಟೇ ಕಣ್ಣಲ್ಲಿ ನೀರುಬರುತ್ತಿತ್ತು.

ಈಗ ಉಳ್ಳಾಗಡ್ಡಿ ನಕಲಿ ಎಂಬೊಂದು ಶಂಕೆ ಬರುವುದಕ್ಕೂ ಕಾರಣವಿದೆ. ಉಳ್ಳವರಿಗೆ ಮಾತ್ರವೇ ಆಗಿಬಿಟ್ಟಿರುವ ಉಳ್ಳಾಗಡ್ಡಿಯನ್ನು ರಾಜಕಾರಣಿಗಳ ಮನೆಯಲ್ಲಿ ಗಾಡಿ ಗಾಡಿ ಪ್ರಮಾಣದಲ್ಲಿ ಕೊಂಡು ತಂದು ಮನೆಯಲ್ಲಿ ಕತ್ತರಿಸುತ್ತಿದ್ದಾಗ ಯಾರ ಕಣ್ಣಲ್ಲಿಯೂ ಒಂದಿನಿತೂ ನೀರು ಬರುತ್ತಿರಲಿಲ್ಲ. ಇದಕ್ಕೆ ಕಾರಣವೆಂದರೆ, ಜನ ಸಾಮಾನ್ಯರು ತೆರಿಗೆ ಕಟ್ಟಿದ ಹಣ ಸರಕಾರದ ಖಜಾನೆಯಲ್ಲಿ ಕೊಳೆಯುತ್ತಿದೆ ಎಂಬ ಕಾರಣಕ್ಕೆ ಈ ಮಂತ್ರಿಗಳು, ಮಾಗಧರು, ರಾಜಕಾರಣಿಗಳೆಲ್ಲರೂ ಸಾಕಷ್ಟು ಪ್ರಮಾಣದಲ್ಲಿ ಈರುಳ್ಳಿ ಖರೀದಿಸಿಟ್ಟುಕೊಳ್ಳುತ್ತಿದ್ದರು. ಸಂಸತ್ತಿನಲ್ಲಿ, ಶಾಸನ ಸಭೆಗಳಲ್ಲಿ ಕೂಡ ಬೇಕಾದಷ್ಟು ಬಿಟ್ಟೀರುಳ್ಳಿ ದೊರೆಯುತ್ತಿತ್ತು. ಹೇಗಿದ್ದರೂ Unprecedented Price Agenda ಸರಕಾರವಲ್ಲವೇ! ಈರುಳ್ಳಿ ಏನಾಯಿತು ಎಂಬುದನ್ನು ನೋಡಲು ಕೃಷಿ ಮಂತ್ರಿಗೆ ಪುರುಸೊತ್ತಿರಲಿಲ್ಲ.

ಈ ಎಲ್ಲ ಕಾರಣಕ್ಕಾಗಿ, ರಾಜಕಾರಣಿಗಳು ಇವನ್ನು ತಂದು ಕತ್ತರಿಸಿದಾಗ ಅವರೆಲ್ಲರಿಗೂ ಒಂದಿನಿತೂ ನೀರು ಬರುತ್ತಿರಲಿಲ್ಲ. ಆದರೆ, ಜನ ಸಾಮಾನ್ಯರು ಮಾತ್ರವೇ ಈ ಈರುಳ್ಳಿಯ ಬೆಲೆಯನ್ನು ಕೇಳಿದ ತಕ್ಷಣವೇ ಕಣ್ಣಲ್ಲಿ ನೀರು ಹೊಸಸೂಸುತ್ತಿತ್ತು. ಹೀಗಾಗಿ, ಖಂಡಿತವಾಗಿಯೂ ಇದು ನಕಲಿ ಈರುಳ್ಳಿ ಎಂಬುದು ದೃಢಪಟ್ಟಿದೆ. ಇದು ಜನ ಸಾಮಾನ್ಯರ ಕಣ್ಣಲ್ಲಿ ರಕ್ತ ಕಣ್ಣೀರು ಸುರಿಸುತ್ತಿರುವುದರಿಂದಾಗಿ ಬೊಗಳೂರು ಬ್ಯುರೋ ಇದಕ್ಕೆ ರಕ್ತ ಕಣ್ಣೀರುಳ್ಳಿ ಎಂದೂ ನಾಮಕರಣ ಮಾಡಿ ಉತ್ಸವಾಚರಣೆ ಮಾಡಿದೆ ಎಂದು ತಿಳಿದುಬಂದಿದೆ.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...