Thursday, April 28, 2011

ಪಾಕ್ ಆಟಗಾರ್ತಿಯರು ಸ್ಕರ್ಟ್ ಧರಿಸಲ್ವಂತೆ!

[ಬೊಗಳೂರು ವಿಶ್ಲೇಷಣಾ ಬ್ಯುರೋದಿಂದ]
ಬೊಗಳೂರು, ಏ.28- ಇದಪ್ಪಾ ಸುದ್ದಿ. ಒಂದು ಸಂಪ್ರದಾಯಶೀಲ ರಾಷ್ಟ್ರವು ಇದಕ್ಕೆ ಹೇಗೆ ಅವಕಾಶ ಕೊಡುತ್ತದೆ? ಎಂಬುದು (ಕ್ಲಿಕ್ ಮಾಡಿ ಹೆಡ್ಡಿಂಗ್ ಮಾತ್ರ ಓದಿ, ಜಾಸ್ತಿ ಓದಿದರೆ ನಿಮ್ಮ ಇಂಟರ್ನೆಟ್ ಡೇಟಾ ವೆಚ್ಚ ಹೆಚ್ಚಾಗಬಹುದು! ಅಂತ ಎಲ್ಲ ಓದುಗರಿಗೆ ಮನವಿ) ಬೊಗಳೆ ರಗಳೆ ಬ್ಯುರೋಗೆ ಅರ್ಥವಾಗದ ಹಿನ್ನೆಲೆಯಲ್ಲಿ ಒಂದು 'ರೀತಿಯ' ವಿಶ್ಲೇಷಣೆಯನ್ನು ನೀಡಲಾಗಿದೆ.

ಮಹಿಳೆಯರು ಪವಿತ್ರರು. ಅವರ ಮೇಲೆ ಕೆಟ್ಟ ದೃಷ್ಟಿ ಬೀಳಬಾರದು ಎಂಬಿತ್ಯಾದಿ ಕಾರಣಗಳಿಗೆ ಬುರ್ಖಾ ಕಡ್ಡಾಯ ಮಾಡುವಷ್ಟು ಕಟ್ಟು ನಿಟ್ಟಿನ ನಿಯಮಾವಳಿ ಇರುವ ಪಾಕಿಸ್ತಾನದಲ್ಲಿ ಇದೀಗ ಈ ಸುದ್ದಿಯನ್ನು ಎಲ್ಲರೂ ಹೇಗೆ ಅರಗಿಸಿಕೊಳ್ಳುತ್ತಾರೆ ಎಂಬುದು ನಂಬಲು ಅಸಾಧ್ಯವಾದ ಸಂಗತಿಯಾಗಿದೆ.

ಪಾಕಿಸ್ತಾನದ ಫೀಮೇಲು ಆಟಗಾರರು ಸ್ಕರ್ಟ್ ಹಾಕದೆಯೇ ಹೇಗೆ ಆಟವಾಡುತ್ತಾರೆ ಮತ್ತು ಇದನ್ನು ಕ್ರೀಡಾ ಅಭಿಮಾನಿಗಳು, ಕಟ್ಟಾ ಸಂಪ್ರದಾಯಸ್ಥ ಪ್ರೇಕ್ಷಕರು ಯಾವ ರೀತಿ ಪರಿಗಣಿಸುತ್ತಾರೆ? ಇಡೀ ಪಾಕಿಸ್ತಾನದಲ್ಲಿ ಕೋಲಾಹಲವೇ ಏರ್ಪಡಬಹುದಲ್ಲವೇ?

ನಮ್ಮ ಭಾರತದಲ್ಲಾದರೆ, ಸೋನಿಯಾ ಮಿರ್ಜಾ ತುಂಡು ಲಂಗ ಹಾಕಿದ್ದಕ್ಕೇ ಫತ್ವಾ ಇತ್ಯಾದಿಗಳನ್ನು ಹೊರಡಿಸಿ, ಆಕೆಗೆ ಬೆದರಿಕೆಯೊಡ್ಡಿ, ಅವಳನ್ನು ಪಾಕಿಸ್ತಾನಕ್ಕೇ ಶೋಯಬ್ ಮಲಿಕ್ ಜತೆ ಓಡಿಸಲಾಗಿದೆ. ಇರಾನ್‌ನ ಫುಟ್ಬಾಲ್ ತಂಡಗಳ ಫೋಟೋಗಳನ್ನು ನೋಡಿ ಅನುಭವ ಇದ್ದವರಿಗೆ, ಯಾವುದೇ ಮಹಿಳಾ ಕ್ರೀಡಾಳುಗಳು ಹೇಗಿರಬೇಕು ಎಂಬುದಕ್ಕೆ ಮಾದರಿ ದೊಹರೆಯುತ್ತದೆ.

ಬಹುತೇಕ ಅಷ್ಟೇ ಸಂಪ್ರದಾಯ ಪಾಲಿಸುವ ಪಾಕಿಸ್ತಾನದಲ್ಲಿ ಸ್ಕರ್ಟ್ ಹಾಕದೆ ಮಹಿಳಾಮಣಿಗಳು ಆಟವಾಡತೊಡಗಿದರೆ, ಅಲ್ಲಿ ಗಲಭೆ, ದಾಂಧಲೆ ಎಲ್ಲ ಭುಗಿಲೆದ್ದು, ಹಿಂಸಾಚಾರವೂ ನಡೆದು, ಕಲ್ಲು ತೂರಾಟ, ಗನ್‌ಗಳ ಸದ್ದು, ಗುಂಡುಗಳ ಸಿಡಿತ, ಬಾಂಬುಗಳ ಮೊರೆತ ಇತ್ಯಾದಿ ಎಲ್ಲವೂ ಆಗಬಹುದಲ್ಲವೇ?

ಈ ಕಾರಣಕ್ಕೆ ಈಗಾಗಲೇ ಪಾಕ್ ಪ್ರಧಾನಿಯೂ ಆಗಿರುವಂತಿರುವ ಐಎಸ್ಐ ಮುಖ್ಯಸ್ಥರಿಗೆ ಬೊಗಳೆ ರಗಳೆ ಬ್ಯುರೋ ಪತ್ರ ಬರೆದು, ದಯವಿಟ್ಟು ನಿಮ್ಮ ಆಟಗಾರ್ತಿಯರಿಗೆ ಕನಿಷ್ಠಪಕ್ಷ ಸ್ಕರ್ಟನ್ನಾದರೂ ಹಾಕಿಕೊಂಡು ಆಟವಾಡಲು ಹೇಳಿ ಎಂದು ಮನವಿ ಮಾಡಲಾಗಿದೆ. ಉತ್ತರಕ್ಕಾಗಿ ನಿರೀಕ್ಷಿಸಲಾಗುತ್ತಿದೆ.

Tuesday, April 05, 2011

'ಹೃದಯ ವೈಶಾಲ್ಯವಿಲ್ಲ' ಅಂತ ಅಫ್ರಿದಿ ಯಾರಿಗೆ ಹೇಳಿದ್ದು ಗೊತ್ತೇ?

[ಬೊಗಳೂರು ಕ್ರೀಡಾ ಬ್ಯುರೋದಿಂದ]
ಬೊಗಳೂರು, ಏ.5- ಬೊಗಳೂರು ಅಂದರೆ ಭಾರತ ಅಂದರೆ ಬೊಗಳೂರಿನ ತಂಡವು ವಿಶ್ವಕಪ್ ಗೆದ್ದುಕೊಂಡ ಬಳಿಕ ಎಚ್ಚೆತ್ತುಕೊಂಡ ನಮ್ಮ ಏಕ ಸದಸ್ಯ ಬೀರುವಿನ ಸದಸ್ಯರೆಲ್ಲರೂ, ಪಾತಕಿಸ್ತಾನದ ನಾಯಕ, ಭಾರತದೆದುರು ಆಟವಾಡಿ ಶಹೀದ್ ಆಗಿರುವ ಅಫ್ರಿದಿ ಅವರ ಹೇಳಿಕೆಗಳ ಹಿಂದೆ ಬೀಳಲಾರಂಭಿಸಿದಾಗ, ರೋಚಕ, ರೋಮಾಂಚಕ ಮತ್ತು ಇನ್ನೂ ಏನೇನೋ ಆಗಬಲ್ಲ ರಸವತ್ತಾದ ಸುದ್ದಿಗಳು ಲಭಿಸಿವೆ.

ಅವುಗಳಲ್ಲೆಲ್ಲಾ 'ಭಾರತೀಯರು ವಿಶಾಲ ಹೃದಯಿಗಳಲ್ಲ' ಎಂಬ ಒಂದು ವಾಕ್ಯದ ಬೆನ್ನ ಹಿಂದೆ ಬಿದ್ದು ಬಿದ್ದು ಹೊರಟಾಗ ಅಫ್ರಿದಿ ಮಾತಿನ ಹಿಂದಿನ ನಿಜಾರ್ಥವೇನೆಂಬುದನ್ನು ನಮ್ಮ ವ-ರದ್ದಿಗಾರರು ಪತ್ತೆ ಹಚ್ಚಿದ್ದಾರೆ.

ಶಾಹಿದ್ ಅಫ್ರಿದಿಯ ಈ ಕಳವಳಕಾರಿ, ಆಘಾತ ತುಂಬಿದ, ವೇದನೆ ತುಂಬಿದ ಹೇಳಿಕೆಗಳಿಗೆಲ್ಲ ಕಾರಣವಾಗಿದ್ದೇ ಪೂನಂ ಪಾಂಡೆ ಎಂಬ ಮಹಿಳೆ. ಈ ಅಚ್ಚರಿಯ ಅಂಶವನ್ನು ಅಫ್ರಿದಿ ಸುದ್ದಿಗೋಷ್ಠಿ ಸಂದರ್ಭ ಪಕ್ಕದಲ್ಲೇ ಕಾದು ಕುಳಿತಿದ್ದ ಬೊಗಳೂರು ವರದ್ದಿಗಾರರನ್ನು ಸ್ವಲ್ಪ ಆಚೆಗೆ ಅಂದರೆ ಬಾಗಿಲ ಸಂದಿನಲ್ಲಿ ಕರೆದು ಸ್ವತಃ ಬಯಲುಪಡಿಸಿದ್ದರು.

ಈ ಬಗ್ಗೆ ಒಂದಿಷ್ಟು ವಿವರಿಸುವಿರಾ? ನಾವು ಬೊಗಳೆ ರಗಳೆ ಪತ್ರಿಕೆಯಲ್ಲಿ ಮಾತ್ರವೇ ಎಕ್ಸ್-ಜೂಸಿವ್ ಆಗಿ ಪ್ರಕಟಿಸುತ್ತೇವೆ ಎಂದು ಗುಸುಗುಸು ಪಿಸು ಮಾತಿನಲ್ಲಿ ಹೇಳಿದಾಗ ಅವರು ವಿವರಿಸಿದ್ದು ಹೀಗೆ:

"ಹೌದು ಸ್ವಾಮೀ, ನಿಮಗಾದರೆ, ವಿಶ್ವಕಪ್‌ಗಾಗಿ ಹುಟ್ಟುಡುಗೆಯ ವಿಶ್ವರೂಪ ದರ್ಶನ ಮಾಡಿಸುತ್ತೇವೆ ಎಂದು ಹೇಳುವವರಿದ್ದಾರೆ. ಅದನ್ನೇನೋ ನಾನೂ ಚಿತ್ರ ಡೌನ್‌ಲೋಡ್ ಮಾಡಿಕೊಂಡಿರುವ ಪೂನಂ ಪಾಂಡೆಯೇ ಹೇಳಿದ್ದು. ಹಾಗಾಗಿ ಅಷ್ಟೇನೂ ಪ್ರಚಾರದಲ್ಲಿಲ್ಲದವಳು ಆಕೆ. ಭಾರತೀಯ ನಟೀಮಣಿಯರಲ್ಲಿ ವಿಶಾಲ ಹೃದಯ ಹೊಂದಿರುವ ಒಬ್ಬರಾದರೂ, ಕನಿಷ್ಠ ಪಕ್ಷ ರಾಖೀ ಸಾವಂತ್ ಆದರೂ ನಮಗೊಂದು ಅಂತಹಾ ಆಫರ್ ಮಾಡಬಹುದಿತ್ತಲ್ಲ... ನಿಮ್ಮ ಭಾರತೀಯರಲ್ಲಿ ಹೆಚ್ಚಾಗಿ ಹೃದಯವಿರುವುದು ನಟೀಮಣಿಯರಲ್ಲಿ ಅಂತಾನೇ ಕೇಳಿದ್ದೆ... ಯಾಕೆಂದರೆ, ಅವರೇ ಅಲ್ಲವೇ ಎಲ್ಲವನ್ನೂ ತೆರೆದು ತೋರಿಸುತ್ತೇವೆ, ಹೃದಯವನ್ನು ವಿಶಾಲವಾಗಿ ತೋರಿಸುತ್ತೇವೆ ಎಂದೆಲ್ಲಾ ಘೋಷಿಸಿರುವುದು! ಈಗ ಭಾರತವೇ ವಿಶ್ವಕಪ್ ಗೆದ್ದಿದೆ. ನಮಗಿನ್ನೇನು ಉಳಿದಿದೆ ತೋರಿಸಲು? ಇನ್ನು ತೋರಿಸಿದರೂ ನಮಗೆ ಆಡಲು ಪ್ರೇರಣೆ ದೊರೆಯುವುದು ಯಾವಾಗ? ಮುಂದಿನ ವಿಶ್ವಕಪ್ ಸಂದರ್ಭದಲ್ಲಾದರೂ ಭಾರತೀಯ ನಟಿಯರು ಈ ಬಗ್ಗೆ ಎಚ್ಚರ ವಹಿಸಬೇಕು, ಹೃದಯವನ್ನು ವಿಶಾಲವಾಗಿಸಿಕೊಳ್ಳಬೇಕು!"

ಆಗ ಬೊಗಳೂರು ಬ್ಯುರೋಗೆ ಅರಿವಾಗಿದ್ದು, ಸೆಮಿಫೈನಲಿನಲ್ಲಿ ಸೋತ ಬಳಿಕವೂ ಬಾರದ ಈ ಮಾತು, ಭಾರತವು ವಿಶ್ವಕಪ್ ಗೆದ್ದಾದ ಬಳಿಕ ಇಷ್ಟು ತಡವಾಗಿ ಬಂದದ್ದೇಕೆ ಎಂಬುದರ ಹಿಂದಿನ ತಥ್ಯ. ಭಾರತ ವಿಶ್ವಕಪ್ ಗೆಲ್ಲಲು ಪೂನಂ ಪಾಂಡೆಯೇ ಕಾರಣ ಎಂಬುದು ಅಫ್ರಿದಿ ಬಲವಾದ ನಂಬಿಕೆಯಾಗಿದ್ದು, ತಮಗೂ ಅಂತಹಾ ಹೃದಯ ವೈಶಾಲ್ಯತೆ ತೋರುವವರು ಯಾರಾದರೂ ಇದ್ದಿದ್ದರೆ, ಖಂಡಿತಾ ಗೆದ್ದೇ ಗೆಲ್ಲುತ್ತಿದ್ದೆವು ಎಂಬುದು ಅವನ ಮಾತಿನ ಅರ್ಥವಾಗಿತ್ತಂತೆ. ಇದನ್ನೂ ಅವರೇ ಬೊಗಳೆ ರಗಳೆ ಬ್ಯುರೋ ನಡೆಸಿದ ಮುಚ್ಚಿದ ಬಾಗಿಲ ಸಂದರ್ಶನದಲ್ಲಿ ಹೇಳಿದ್ದರು!

Friday, April 01, 2011

ಬೊಗಳೆ ರಗಳೆಗೆ 5ನೇ ಹುಟ್ಟುಹಬ್ಬ: 1 ಲಕ್ಷ ಒದೆ

[ಬೊಗಳೂರು ಸೊಂಪಾದಕೀಯ ಬ್ಯುರೋದಿಂದ]
ಆತ್ಮೀಯ ಓದುಗರೇ,
2006ರ ಏಪ್ರಿಲ್ 4ರ ಆ ಶುಭ ಮಂಗಳವಾರ, ಬೊಗಳೆ ರಗಳೆ ಬ್ಯುರೋ ಬಾಗಿಲು ತೆರೆದಾಗ ಭಾರತದಲ್ಲಿ ಚೆನ್ನೈಯಲ್ಲಿ ಸುನಾಮಿ ಎಂಬ ಪದ ಕೇಳಿದ್ದ ಜನರಿಗೆ, ಆಗ ಈ ಥರಹದ ಮತ್ತೊಂದು ಸುನಾಮಿ ಹುಟ್ಟಿಕೊಂಡಿದೆ ಎಂಬ ಪರಿವೆಯೇ ಇರಲಿಲ್ಲ. ಈಗಲೂ ಇಲ್ಲ! ಆ ಒಂದು ಸಾಲಿನ ವ-ರದ್ದಿಗೆ ಒಂದೇ ಒಂದು ಪ್ರತಿಕ್ರಿಯೆ ಬಾರದಿರುವುದೇ ಇದಕ್ಕೆ ಸಾಕ್ಷಿ.

ವಿಷಯಕ್ಕೆ ಬರೋಣ. ಜಗತ್ತಿನಾದ್ಯಂತವಿರುವ ಕೋಟಿ ಕೋಟಿ ಕನ್ನಡಿಗರಲ್ಲಿ, ಈ ಏಕ-ಸದಸ್ಯ ಬೊಗಳೆ ರಗಳೆ ಬ್ಯುರೋದಲ್ಲಿರುವ ಸಿಬ್ಬಂದಿಗಳಷ್ಟೇ ಅಪಾರವಾದ ಓದುಗರ ಸಂಖ್ಯೆಯನ್ನು ಹೊಂದಿರುವ ಈ ಅನಿಯತಕಾಲಿಕವು ನಾಲ್ಕು ವರ್ಷ ಪೂರೈಸಿದಾಗ ಅದು ಹೇಗೆ ಒಂದು ಲಕ್ಷ ಮಂದಿ ಒದೆ ಕೊಟ್ಟರೋ ನಾಕಾಣೆ. ಆದರೂ ಐದನೇ ವರ್ಷಕ್ಕೆ ಕಾಲಿರಿಸುತ್ತಿದೆ ನಮ್ ಬ್ಯುರೋ!

ಮತ್ತು ಇದು ನಮ್ಮ ಬ್ಯುರೋದ ಗಮನಕ್ಕೇ ಬಂದಿರಲಿಲ್ಲ. ಯಾಕೆಂದರೆ ಸ್ಟ್ಯಾಟ್‌ಕೌಂಟರ್ ತೋರಿಸುತ್ತಿದ್ದ ಹೆಚ್ಚಿನ ಸಂಖ್ಯೆ ಸೊನ್ನೆಯೇ ಆಗಿತ್ತು. ಕೊನೆಯಲ್ಲಿ 1 ಇತ್ತು ಎಂಬುದು ಗಮನಕ್ಕೆ ಬಂದಾಗ ಕಾಲ ಮೀರಿ ಹೋಗಿತ್ತು.

ಕಂಪ್ಯೂಟರ್ ಎಂದರೇನೆಂದು ಅರಿವಿಗೆ ಬರುವ ಮುನ್ನವೇ ಈ ಬ್ಲಾಗು ಎಂದರೇನೆಂದು ತಿಳಿಯದೆ, ಬರೀ ಬೊಗಳೆ ಇರಬಹುದು ಎಂದುಕೊಂಡೇ ಇದಕ್ಕೆ ಬೊಗಳೆ ರಗಳೆ ಎಂದೇ ನಾಮಕರಣ ಮಾಡಲಾಗಿತ್ತು. ಜಗತ್ತಿನಾದ್ಯಂತ ಇರುವ ಆಯಾ ಸರ್ವರ್‌ಗಳಿಂದ ಕಾರ್ಯಾಚರಿಸುತ್ತಿರುವ ಈ ನಮ್ಮ ಅಂತರ್ಜಾಲದ ಅಂತರ್ಪಿಶಾಚಿ ಪತ್ರಿಕೆಗೆ ಆರಂಭದಲ್ಲಿ ಇದ್ದದ್ದು ಒಬ್ಬರೇ ಸೊಂಪಾದಕರು, ಒಬ್ಬರೇ ವರದ್ದಿಗಾರರು, ಒಬ್ಬರೇ ಪ್ರಸರಣಧಿಕ್ಕಾರಿ ಮತ್ತು ಒಬ್ಬರೇ ಜಗಜ್ಜಾಹೀರಾತುದಾರರು ಹಾಗೂ ಒಬ್ಬ ಓದುಗ ಮಾತ್ರ. ಆ ಒಬ್ಬ ಓದುಗ ಯಾರೆಂಬ ಕುತೂಹಲವೇ? ಹೇಳುತ್ತೇವೆ ಕೇಳಿ, ಅದುವೇ ಈ ಬೊಗಳೂರು ಬ್ಯುರೋದ ಸಮಸ್ತ ಸಿಬ್ಬಂದಿಯಾಗಿರುವ ಸೊಂಪಾದಕರು! ತಾವು ಬರೆದಿದ್ದನ್ನು ಪ್ರತಿ ದಿನ ತಾವೇ ಓದುತ್ತಿದ್ದರವರು ಮತ್ತು ಓದಬೇಕಾಗಿ ಬರುತ್ತಿತ್ತು!

ಇಂಥದ್ದರಲ್ಲಿ, ಈಗಲೂ ನಮ್ಮ ಬ್ಯುರೋದ ಸಿಬ್ಬಂದಿಗಳ ಸಂಖ್ಯೆಯನ್ನು 1ಕ್ಕಿಂತ ಹೆಚ್ಚಿಸಿಲ್ಲ. ಅಂತೆಯೇ ಓದುಗರ ಸಂಖ್ಯೆಯೂ 1 ದಾಟಿದೆ. ಆದರೆ ಇದು ಒಂದು ಲಕ್ಷ ಎಂಬುದು ನಮ್ಮ ಲಕ್ಷ್ಯಕ್ಕೆ ಈಗ ಬಂದಿರುವುದರಿಂದ ಮತ್ತೊಮ್ಮೆ ನಿಮಗೆ ಧನ್ಯವಾದಗಳು. ಕೆಲವು ದಿನ ನಾಪತ್ತೆಯಾದರೂ ಬಂದು ಒದ್ದು ಹೋಗುವ ಅಂದರೆ ಓದಿ ಹೋಗುವ ನಿಮ್ಮ ತಾಳ್ಮೆಗೆ, ನಮ್ಮ ವರದ್ದಿಗಳನ್ನು ಓದಿ ಮತ್ತು ಓದದೆಯೂ ಅರ್ಥೈಸಿಕೊಳ್ಳುವ ಹಾಗೂ ಅಪಾರ್ಥೈಸಿಕೊಳ್ಳುವ, ನಮ್ಮ ವರದ್ದಿಯಲ್ಲಿರುವ ಟೊಳ್ಳನ್ನೇ ಬಾರ್ಕಿಂಗ್ ನ್ಯೂಸ್ ಎಂದು ಪರಿಗಣಿಸಿ ಓದಿ, ಒಂದಷ್ಟು ಆಣಿಮುತ್ತುಗಳನ್ನು ಉದುರಿಸಿ ಹೋಗುವ, ಈ ವರದ್ದಿಗಳನ್ನು ಓದಿಯೂ ಮತ್ತೊಮ್ಮೆ ಓದಲೆಂದು ಬರುವ ನಿಮಗೆಲ್ಲರಿಗೂ ಮತ್ತೊಮ್ಮೆ ಮೆಣಸ್‌ಕಾರಗಳು.

ಆದರೆ, ಈಗಲೂ ಕೂಡ ಬೊಗಳೆ ರಗಳೆ ಹುಟ್ಟಿಕೊಂಡಿದ್ದು ಏಪ್ರಿಲ್ 1ರಂದು ಎಂದೇ ವಾದಿಸುತ್ತಿದ್ದಾರೆ. ಬೊಗಳೆ ರಗಳೆ ಜನ್ಮ ದಿನ ಏಪ್ರಿಲ್ ಒಂದನೇ ತಾರೀಕೇ ಎಂಬುದು ಅವರ ಮನಸ್ಸಿನಲ್ಲಿ ಇಂದಿಗೂ ಕಾಡುತ್ತಿರುವ ಸಂಗತಿ ಮತ್ತು ಅವರ ವಾದವೂ ಹೌದು. ಹೀಗಾಗಿ, ಇದು ಖಂಡಿತವಾಗಿಯೂ ನಮ್ಮ ದಿನವಲ್ಲ ಎಂದು ಎಂದಿನಂತೆಯೇ ನಾವು ಸ್ಪಷ್ಟೀಕರಣ ನೀಡುತ್ತಿದ್ದೇವೆ.

ಈ ಒದೆಗಳನ್ನು ಕೊಟ್ಟ ಓದುಗರಿಗೆ (ಓದುಗ ಅಂದರೆ ಒದ್ದುಗ ಅಂದರೆ ಒದೆ ಕೊಡುವವ ಅಂತ ನಮ್ಮ ಡಿಕ್ಷನರಿ ಹೇಳುತ್ತದೆ!) ನಿಜಕ್ಕೂ ಕೋಟಿ ಕೋಟಿ ಪ್ರಣಾಮಗಳು ಮತ್ತು ಆನ್‌ಲೈನ್‌ನಲ್ಲೇ ದೊಡ್ಡ ಪಾರ್ಟಿಯನ್ನೂ ಈ ಮೂಲಕ ಇಟ್ಟುಕೊಂಡಿದ್ದೇವೆ. ಎಲ್ಲರೂ ಬಂದು ತಿಂದುಂಡುಹೋಗಬೇಕಾಗಿ ವಿನಂತಿಸುತ್ತಿದ್ದೇವೆ.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...