Thursday, April 28, 2011

ಪಾಕ್ ಆಟಗಾರ್ತಿಯರು ಸ್ಕರ್ಟ್ ಧರಿಸಲ್ವಂತೆ!

[ಬೊಗಳೂರು ವಿಶ್ಲೇಷಣಾ ಬ್ಯುರೋದಿಂದ]
ಬೊಗಳೂರು, ಏ.28- ಇದಪ್ಪಾ ಸುದ್ದಿ. ಒಂದು ಸಂಪ್ರದಾಯಶೀಲ ರಾಷ್ಟ್ರವು ಇದಕ್ಕೆ ಹೇಗೆ ಅವಕಾಶ ಕೊಡುತ್ತದೆ? ಎಂಬುದು (ಕ್ಲಿಕ್ ಮಾಡಿ ಹೆಡ್ಡಿಂಗ್ ಮಾತ್ರ ಓದಿ, ಜಾಸ್ತಿ ಓದಿದರೆ ನಿಮ್ಮ ಇಂಟರ್ನೆಟ್ ಡೇಟಾ ವೆಚ್ಚ ಹೆಚ್ಚಾಗಬಹುದು! ಅಂತ ಎಲ್ಲ ಓದುಗರಿಗೆ ಮನವಿ) ಬೊಗಳೆ ರಗಳೆ ಬ್ಯುರೋಗೆ ಅರ್ಥವಾಗದ ಹಿನ್ನೆಲೆಯಲ್ಲಿ ಒಂದು 'ರೀತಿಯ' ವಿಶ್ಲೇಷಣೆಯನ್ನು ನೀಡಲಾಗಿದೆ.

ಮಹಿಳೆಯರು ಪವಿತ್ರರು. ಅವರ ಮೇಲೆ ಕೆಟ್ಟ ದೃಷ್ಟಿ ಬೀಳಬಾರದು ಎಂಬಿತ್ಯಾದಿ ಕಾರಣಗಳಿಗೆ ಬುರ್ಖಾ ಕಡ್ಡಾಯ ಮಾಡುವಷ್ಟು ಕಟ್ಟು ನಿಟ್ಟಿನ ನಿಯಮಾವಳಿ ಇರುವ ಪಾಕಿಸ್ತಾನದಲ್ಲಿ ಇದೀಗ ಈ ಸುದ್ದಿಯನ್ನು ಎಲ್ಲರೂ ಹೇಗೆ ಅರಗಿಸಿಕೊಳ್ಳುತ್ತಾರೆ ಎಂಬುದು ನಂಬಲು ಅಸಾಧ್ಯವಾದ ಸಂಗತಿಯಾಗಿದೆ.

ಪಾಕಿಸ್ತಾನದ ಫೀಮೇಲು ಆಟಗಾರರು ಸ್ಕರ್ಟ್ ಹಾಕದೆಯೇ ಹೇಗೆ ಆಟವಾಡುತ್ತಾರೆ ಮತ್ತು ಇದನ್ನು ಕ್ರೀಡಾ ಅಭಿಮಾನಿಗಳು, ಕಟ್ಟಾ ಸಂಪ್ರದಾಯಸ್ಥ ಪ್ರೇಕ್ಷಕರು ಯಾವ ರೀತಿ ಪರಿಗಣಿಸುತ್ತಾರೆ? ಇಡೀ ಪಾಕಿಸ್ತಾನದಲ್ಲಿ ಕೋಲಾಹಲವೇ ಏರ್ಪಡಬಹುದಲ್ಲವೇ?

ನಮ್ಮ ಭಾರತದಲ್ಲಾದರೆ, ಸೋನಿಯಾ ಮಿರ್ಜಾ ತುಂಡು ಲಂಗ ಹಾಕಿದ್ದಕ್ಕೇ ಫತ್ವಾ ಇತ್ಯಾದಿಗಳನ್ನು ಹೊರಡಿಸಿ, ಆಕೆಗೆ ಬೆದರಿಕೆಯೊಡ್ಡಿ, ಅವಳನ್ನು ಪಾಕಿಸ್ತಾನಕ್ಕೇ ಶೋಯಬ್ ಮಲಿಕ್ ಜತೆ ಓಡಿಸಲಾಗಿದೆ. ಇರಾನ್‌ನ ಫುಟ್ಬಾಲ್ ತಂಡಗಳ ಫೋಟೋಗಳನ್ನು ನೋಡಿ ಅನುಭವ ಇದ್ದವರಿಗೆ, ಯಾವುದೇ ಮಹಿಳಾ ಕ್ರೀಡಾಳುಗಳು ಹೇಗಿರಬೇಕು ಎಂಬುದಕ್ಕೆ ಮಾದರಿ ದೊಹರೆಯುತ್ತದೆ.

ಬಹುತೇಕ ಅಷ್ಟೇ ಸಂಪ್ರದಾಯ ಪಾಲಿಸುವ ಪಾಕಿಸ್ತಾನದಲ್ಲಿ ಸ್ಕರ್ಟ್ ಹಾಕದೆ ಮಹಿಳಾಮಣಿಗಳು ಆಟವಾಡತೊಡಗಿದರೆ, ಅಲ್ಲಿ ಗಲಭೆ, ದಾಂಧಲೆ ಎಲ್ಲ ಭುಗಿಲೆದ್ದು, ಹಿಂಸಾಚಾರವೂ ನಡೆದು, ಕಲ್ಲು ತೂರಾಟ, ಗನ್‌ಗಳ ಸದ್ದು, ಗುಂಡುಗಳ ಸಿಡಿತ, ಬಾಂಬುಗಳ ಮೊರೆತ ಇತ್ಯಾದಿ ಎಲ್ಲವೂ ಆಗಬಹುದಲ್ಲವೇ?

ಈ ಕಾರಣಕ್ಕೆ ಈಗಾಗಲೇ ಪಾಕ್ ಪ್ರಧಾನಿಯೂ ಆಗಿರುವಂತಿರುವ ಐಎಸ್ಐ ಮುಖ್ಯಸ್ಥರಿಗೆ ಬೊಗಳೆ ರಗಳೆ ಬ್ಯುರೋ ಪತ್ರ ಬರೆದು, ದಯವಿಟ್ಟು ನಿಮ್ಮ ಆಟಗಾರ್ತಿಯರಿಗೆ ಕನಿಷ್ಠಪಕ್ಷ ಸ್ಕರ್ಟನ್ನಾದರೂ ಹಾಕಿಕೊಂಡು ಆಟವಾಡಲು ಹೇಳಿ ಎಂದು ಮನವಿ ಮಾಡಲಾಗಿದೆ. ಉತ್ತರಕ್ಕಾಗಿ ನಿರೀಕ್ಷಿಸಲಾಗುತ್ತಿದೆ.

4 comments:

 1. 'ದಯವಿಟ್ಟು ನಿಮ್ಮ ಆಟಗಾರ್ತಿಯರಿಗೆ ಕನಿಷ್ಠಪಕ್ಷ ಸ್ಕರ್ಟನ್ನಾದರೂ ಹಾಕಿಕೊಂಡು ಆಟವಾಡಲು ಹೇಳಿ ಎಂದು ಮನವಿ ಮಾಡಲಾಗಿದೆ.'
  ಯಾಕೆ ಅನ್ವೇಷಿಗಳೆ, ರಸಿಕ ವೀಕ್ಷಕರಿಗೆ ಅನ್ಯಾಯ ಮಾಡುತ್ತಿದ್ದೀರಿ? ಏನಾದರೂ ಧರಿಸಲೇಬೇಕೆನ್ನುವದು ಕಡ್ಡಾಯವಾಗಿದ್ದರೆ, ಟೈ ಕಟ್ಟಿಕೊಳ್ಳಲಿ ಸಾಕು!

  ReplyDelete
 2. ಸುನಾಥ್ ಕಾಕ,
  ಟೈನೊಂದಿಗೆ ಸಾಕ್ಸ್ ಸಹ ಇರಲಿ

  ReplyDelete
 3. ಸುನಾಥರೇ,
  ಫ್ಲೈಟ್ ತಡವಾಯಿತು. ಹೀಗಾಗಿ ಉತ್ತರಿಸಲೂ ತಡ.
  ಫ್ಲೈಟಿನಲ್ಲಿ ಇತ್ತೀಚೆಗೆ ಸಾಮಾನು ಸರಂಜಾಮು ಹೊತ್ತುಕೊಂಡು ಹೋಗುವುದನ್ನು ನಿಷೇಧಿಸಲಾಗಿದ್ದು, ಸೂಟುಕೇಸುಗಳಿಗೆ ನಿರ್ಬಂಧವಿದೆ. ಹೀಗಾಗಿ ಬೆಂಕಿಪೊಟ್ಟಣದೊಳಗೆ ಮಾತ್ರ ಏನನ್ನಾದರೂ ತೆಗೆದುಕೊಂಡು ಹೋಗಬಹುದು ಎಂಬ ನಿಯಮ ಇರುವುದರಿಂದ, ನಿಮ್ಮ ಟೈ ಕೂಡ ಟೈಟಾದೀತು.

  ReplyDelete
 4. ಶಾನಿಯವರೆ,
  ನಿಮಗೆ ಉತ್ತರಿಸಿ ತತ್ತರಿಸುವ ಗೋಜಿಗೇ ಹೋಗುವುದಿಲ್ಲ!

  ReplyDelete

ನಿಮ್ಮ ಸಲಹೆ/ಅಭಿಪ್ರಾಯ ತಿಳಿಸಿ..

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...