Thursday, June 16, 2011

ಕಾಂಗ್ರೆಸಿನ 'ಅಡಿಗೆ' ಜನರ ನಡಿಗೆ ಆರಂಭ

[ಬೊಗಳೂರು ವಿಚಿತ್ರ ಸಂಚೋದನಾ ಬ್ಯುರೋದಿಂದ]
ಬೊಗಳೂರು, ಜೂ.16- "ಕಾಂಗ್ರೆಸ್‌ನಡಿಗೆ" ಜನರ ಬಳಿಗೆ ಎಂಬ ಜನಾಂದೋಲನವನ್ನು ಆರಂಭಿಸಿರುವುದಾಗಿ ಬೊಗಳೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆಯೂ, ಸದ್ಯಕ್ಕೆ ಆತುರಾತುರವಾಗಿ ಸ್ವಿಜರ್ಲೆಂಡ್ ಪ್ರವಾಸಕ್ಕೆ ಹೋಗಿ, ಬಳಿಕ ಇಟಲಿಗೆ ತೆರಳಿರುವ ರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷೆಯೂ ಆಗಿರುವ ಸುಷ್ಮಾ ಗಾಂಧಿ ಅವರು ಅಪ್ಪಣೆ ಹೊರಡಿಸಿದ್ದಾರೆ.

"ಕಾಂಗ್ರೆಸಿನಡಿಗೆ ಜನರು" ಎಂಬ ಆ ಅರುವತ್ತು ದಿನಗಳ ಜನಾಂದೋಲನವನ್ನು ದೇಶದ ಮೂಲೆ ಮೂಲೆಯಲ್ಲಿ ನಡೆಸುವಂತೆಯೂ, ಅದರ ಮುಂದಿನ ಹಂತವಾಗಿ ವಿದೇಶಗಳ ಮೂಲೆ ಮೂಲೆಯಲ್ಲಿಯೂ ನಡೆಸುವಂತೆ ಕ್ರಮ ಕೈಗೊಳ್ಳಲಾಗಿದೆ.

ಜೂನ್ 4ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿ ಮಲಗಿ ನಿದ್ರಿಸುತ್ತಿದ್ದವರೆಲ್ಲರೂ ಕಾಂಗ್ರೆಸ್‌ನಡಿಗೆ ಬಿದ್ದು ಅಪ್ಪಚ್ಚಿಯಾದಾಗಲೇ ಈ ಆಂದೋಲನ ಆರಂಭವಾಗಿದ್ದರೂ, ಅಧಿಕೃತವಾಗಿ ಗುರುವಾರ ಆರಂಭವಾಗಿದೆ ಎಂದು ಮೂಲಗಳು ವರದ್ದಿ ತಂದು ಹಾಕಿವೆ.

ಅಂದು ಶನಿವಾರ ರಾತ್ರಿ ಕಾಂಗ್ರೆಸಿನಡಿಗೆ ಬಿದ್ದವರು ಅಲ್ಲಲ್ಲಿ ಎದ್ದು ಬಿದ್ದು ಆಸ್ಪತ್ರೆಯಲ್ಲಿ ಸೇರಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಸ್ವಲ್ಪ ಸಮಯದ ನಂತರ ಪ್ರಯತ್ನಿಸುವ ಧೋರಣೆ ಅನುಸರಿಸಿರುವ ಪಕ್ಷವು, ಗಾಂಧೀಜಿ ಹೇಳಿಕೊಟ್ಟ ಸತ್ಯಾಗ್ರಹದ ಹಾದಿಯನ್ನೆಲ್ಲಾ ಗಟ್ಟಿಯಾಗಿ ಕಟ್ಟಿಟ್ಟು, ಬೇರಾರೂ ಅದನ್ನು ಮುಟ್ಟದಂತೆ ಸುರಕ್ಷಿತವಾಗಿ ಕಪಾಟಿನಲ್ಲಿ ಭದ್ರವಾಗಿರಿಸಿ, ಕಾಯುತ್ತಾ ಕೂರಲು ನಿರ್ಧರಿಸಿದೆ ಎಂದು ಮೂಲಗಳು ಹೇಳಿಕೆ ನೀಡಿಲ್ಲ.

ಆದರೆ, ಕರ್ನಾಟಕದಲ್ಲಿ ಇತ್ತೀಚೆಗೆ ನಡೆದಿರುವ ಎಲ್ಲ ಉಪಚುನಾವಣೆಗಳಲ್ಲಿ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕಾಂಗ್ರೆಸ್‌ನೆಡೆಗೆ ಜನರು ಬಡಿಗೆ ತಂದಿದ್ದು ಯಾಕೆ ಎಂಬುದರ ಕುರಿತು ಸಂಚೋದನೆ ನಡೆಸಲು ಬೊಗಳೆ ಬ್ಯುರೋಗೆ ಮೇಲಿನಿಂದ ಅಂದರೆ ಹೈ-ಕ-ಮಂಡೆಯಿಂದ ಆದೇಶ ಬಂದಿದೆ.

Tuesday, June 14, 2011

Barking News: ಗಾಂಧಿ ಕನ್ನಡಕ ಅಡಗಿಸಿಟ್ಟದ್ದು ಯಾರು ಗೊತ್ತಾ?

[ಬೊಗಳೂರು ಸಂಚೋದನಾ ಬ್ಯುರೋದಿಂದ]
ಬೊಗಳೂರು, ಜೂ.14- ಬೊಗಳೂರಿನ ಗಾಂಧಿ ಆಶ್ರಮದಿಂದ ಗಾಂಧೀಜಿ ಕನ್ನಡಕಗಳನ್ನು ಕದ್ದಿರುವುದನ್ನು ಬೊಗಳೆ ರಗಳೆಯ ಸಂಚೋದನಾ ಬ್ಯುರೋ ಪತ್ತೆ ಹಚ್ಚಿದೆ. ಮತ್ತು ಅದಕ್ಕೆ ಕಾರಣಗಳನ್ನೂ ವಿವರಿಸಿದೆ.

ದೇಶಾದ್ಯಂತ ಕಣ್ಣು ಮುಚ್ಚಿ ತೆರೆಯುವುದರೊಳಗೆ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಪ್ರಕರಣಗಳು ನಡೆಯುತ್ತಿವೆ. ಇಂಥದ್ದನ್ನೆಲ್ಲಾ ಗಾಂಧೀಜಿ ಸಾವಿನ ಬಳಿಕವೂ ನೋಡಬಾರದೆಂಬ ಉದ್ದೇಶದಿಂದಾಗಿ ಸರಕಾರದ ಪ್ರತಿನಿಧಿಗಳು ಗಾಂಧೀಜಿ ಕನ್ನಡಕವನ್ನು ಅಡಗಿಸಿಟ್ಟಿದ್ದಾರೆ ಎಂದು ಮೂಲಗಳು ವರದ್ದಿ ತಂದುಹಾಕಿವೆ.

ಭ್ರಷ್ಟಾಚಾರದ ವಿರುದ್ಧ ಅಲ್ಲಲ್ಲಿ, ದೇಶದೆಲ್ಲೆಡೆ, ಬೊಗಳೂರಿನಲ್ಲಿ ಕೂಡ ಅಹಿಂಸಾತ್ಮಕ ಪ್ರತಿಭಟನೆ ನಡೆಸಲಾಗಿದೆ. "ಆ"ಮರಣ ಉಪವಾಸದ ಬದಲಾಗಿ "ಅ"ಮರಣ ನಿರಶನ ನಡೆಸಲು ನಿರ್ಧರಿಸಲಾಗಿತ್ತು. ಆದರೂ, ಅಂಥ ಉಪವಾಸ ಮಾಡುತ್ತಿದ್ದವರ ಮೇಲೆ ಬೊಗಳೂರು ಸರಕಾರವು "ಇದು ಕೇಸರಿ ಕೋಮುವಾದಿಗಳ ಪಡೆ" ಎಂದುಕೊಳ್ಳುತ್ತಾ, ರೈಫಲ್, ಎಕೆ-47, ಲಾಠಿ ಇತ್ಯಾದಿಗಳನ್ನು ಕೊಟ್ಟು ಪೊಲೀಸರ ಪಡೆಯನ್ನೇ ಕಳುಹಿಸಲಾಗಿತ್ತು. ಮಲಗಿ ನಿದ್ರಿಸುತ್ತಿದ್ದ ಮಕ್ಕಳು, ಮುದುಕರು, ಮಹಿಳೆಯರೆನ್ನದೆ, ಎಲ್ಲರೆದುರು ಕೇಂದ್ರದ ಬೊಗಳೂರು ಸರಕಾರವು ತನ್ನ ಪೌರುಷ ಮೆರೆದಿದ್ದದ್ದನ್ನು ಕೂಡ ಗಾಂಧೀಜಿ ಮತ್ತೆ ಮತ್ತೆ ಟೀವಿಗಳಲ್ಲಿ ನೋಡಬಾರದು ಎಂಬ ಕಾರಣಕ್ಕಾಗಿ ಈ ಕನ್ನಡಕವನ್ನು ಅಡಗಿಸಿಡಲಾಗಿದೆ ಎಂದು ಮೂಲಗಳು ವರದ್ದಿ ಮಾಡಿದ್ದನ್ನು ಬೊಗಳೂರು ಬ್ಯುರೋ ಪತ್ತೆ ಹಚ್ಚಿ, ಸಂಚೋದನೆ ಮಾಡಿ ಇಲ್ಲಿ ವರದ್ದಿ ಮಾಡಿದೆ.

ಹೀಗಾಗಿ, ಗಾಂಧೀಜಿ ಕನ್ನಡಕ ಕಳವಿನಲ್ಲಿ ಆರೆಸ್ಸೆಸ್ ಕೈವಾಡವಿದೆ ಎಂದು ಆರೋಪಿಸುವ ಅವಕಾಶವು Digವಿಜಯ್ ಸಿಂಗ್ ಅವರಿಗೆ ತಪ್ಪಿ ಹೋಗಿದೆ ಎಂದು ಮೂಲಗಳು ಹೇಳಿಲ್ಲ. ಆದರೆ, ಇದನ್ನು Digವಿಜಯ್ ಸಿಂಗ್ ಅವರೇ ಅಡಗಿಸಿಟ್ಟಿದ್ದಾರೆ ಮತ್ತು ತಾವೇ ಹಾಕಿಕೊಂಡಿದ್ದಾರೆ ಎಂದು ಕೂಡ ಮೂಲಗಳು ಅಲ್ಲಲ್ಲಿ ವರದ್ದಿ ತಂದು ಸುರಿದಿವೆ!

Thursday, June 02, 2011

ಎಲ್ಲರೂ UPAವಾಸ ಮಾಡಿದ್ರೆ ಬೆಲೆ ಇಳಿಕೆ!

[ಬೊಗಳೂರು ಬೆಲೆ ಏರಿಕೆ ಸಂ-ಚೋದನಾ ಬ್ಯುರೋದಿಂದ]
ಬೊಗಳೂರು, ಜೂ.2- ಭ್ರಷ್ಟಾಚಾರಿಗಳನ್ನು ಮಟ್ಟ ಹಾಕಲು ಕಠಿಣ ಕಾಯ್ದೆ ಜಾರಿಗೆ ಮತ್ತು ವಿದೇಶದಲ್ಲಿ ರಾಶಿ ರಾಶಿಯಾಗಿ ಮೌಂಟ್ ಎವರೆಸ್ಟ್‌ಗಿಂತಲೂ ಎತ್ತರದ ಶಿಖರ ಎಂದು ಪ್ರಸಿದ್ಧಿ ಪಡೆದಿರುವ ಕಪ್ಪು ಹಣದ ಬೆಟ್ಟವನ್ನು ಅಗೆಯಲು ಹಿಂದು-ಮುಂದು ನೋಡುತ್ತಿರುವ ಬೊಗಳೂರು ಕೇಂದ್ರದ ಉಪ (UPA) ಸರಕಾರವು, ಇದೀಗ ದೇಶದ ಬಡತನ ನಿವಾರಣೆ ಹಾಗೂ ಏರುತ್ತಿರುವ ಬೆಲೆಗಳನ್ನು ನಿಯಂತ್ರಿಸಲು ಹೊಸ UPAಯವನ್ನು ಕಂಡುಕೊಂಡಿದೆ.

ಕೇಂದ್ರದ ಎಲ್ಲ ಸಚಿವರು ರಾಮದೇವ ಬಾಬಾ ಅವರ ಕಾಲಿಗೆ ಬಿದ್ದು, ಹೇಗಾದರೂ ಉಪವಾಸ ನಿಲ್ಲಿಸಿ ಅಂತ ಕೇಳಿಕೊಂಡಿರುವುದು ಕೇವಲ ನಾಟಕ ಎಂದು ತಿಳಿದುಬಂದಿದ್ದು, ಬಾಬಾ ರಾಮದೇವ್ ಮತ್ತು ಅಣ್ಣಾ ಹಜಾರೆ ಮುಂತಾದವರಿಗೆ ಬೆಂಬಲಿಗರ ದೊಡ್ಡ ಪಡೆಯೇ ಇದೆ. ಕೋಟಿ ಕೋಟಿ ಜನರು ಅವರು ಕರೆ ಕೊಟ್ಟರೆ ಉಪವಾಸ ಕೂರುತ್ತಾರೆ. ಅವರಿಗೆ ತಿನ್ನಲು ಏನೂ ಬೇಕಾಗಿಲ್ಲ. ಹೀಗಾಗಿ ದೇಶದಲ್ಲಿ ಬದುಕಲು ಅಗತ್ಯವಿರುವ ಅಕ್ಕಿ, ಬೇಳೆ, ಧಾನ್ಯ, ತರಕಾರಿ ಇತ್ಯಾದಿಗಳ ಅಗತ್ಯವೇ ಕಡಿಮೆಯಾಗಿ, ಅದು ಅನಗತ್ಯ ವಸ್ತುವಾಗಿಬಿಡುತ್ತದೆ. ತತ್ಪರಿಣಾಮವಾಗಿ ಅದರ ಬೆಲೆಯೂ ತನ್ನಿಂತಾನೇ ಇಳಿಯುತ್ತದೆ ಎಂದು ಬೊಗಳೂರು ಸರಕಾರವು ನಂಬಿಕೊಂಡು ಕೂತಿರುವುದಾಗಿ ವರದ್ದಿಯಾಗಿದೆ.

ಈಗಾಗಲೇ ದಾಸ್ತಾನು ಕೇಂದ್ರಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಹಾರ ಧಾನ್ಯಗಳು ಕೊಳೆಯುತ್ತಿವೆ. ಅದನ್ನು ರಿಲೀಸ್ ಮಾಡಿಬಿಟ್ಟರೆ ಬೆಲೆ ಇಳಿಯಬಹುದು. ಬೆಲೆ ಇಳಿದರೆ ಏನು ತೊಂದರೆ ಎಂಬುದು ಗೊತ್ತೇ? ಬೊಗಳೂರು ದೇಶದಲ್ಲಿರುವವರೆಲ್ಲರೂ ಕಡಿಮೆ ಬೆಲೆಯ ಆಹಾರ ತಿನ್ನುವವರು ಎಂದು ಜಾಗತಿಕ ಮಟ್ಟದಲ್ಲಿ ಅವಮಾನವಾಗುತ್ತದೆ. ಹೀಗಾಗಿ ಹೆಚ್ಚು ಬೆಲೆಯ ಆಹಾರವನ್ನೇ ಅವರು ಸೇವಿಸಬೇಕಾಗುತ್ತದೆ. ಹೀಗಾಗಿ ಬೆಲೆಗಳು ಏರಿಯೇ ಇರುವಂತೆ ನೋಡಿಕೊಳ್ಳಬೇಕಾಗಿದೆ ಎಂದು ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ.

ಇದಲ್ಲದೆ, ಗೋದಾಮುಗಳಲ್ಲಿ ಆಹಾರ ಧಾನ್ಯಗಳನ್ನು ಪೇರಿಸಿಟ್ಟು ಕೃತಕ ಕೊರತೆ ಸೃಷ್ಟಿಸುವುದರಿಂದ ದೇಶದ ಬೆನ್ನೆಲುಬಾಗಿರುವ ರೈತರಿಗೂ ಸಾಕಷ್ಟು ಉಪಕಾರವಾಗುತ್ತದೆ. ಜನರಿಗೆ ಸರಿಯಾಗಿ ವಿತರಣೆ ಮಾಡದೆ ಗೋದಾಮುಗಳಲ್ಲಿ ಹೆಚ್ಚು ಹೆಚ್ಚು ಆಹಾರಗಳನ್ನು ಸೇರಿಸಿದರೆ, ಅವುಗಳು ಕೊಳೆತು ಹೋಗುತ್ತವೆ. ಈ ಕೊಳೆತ ವಸ್ತುಗಳನ್ನೆಲ್ಲಾ ಉತ್ತಮ ಗೊಬ್ಬರವಾಗಿ ಬಳಸಿ, ಮತ್ತಷ್ಟು ಆಹಾರ ಧಾನ್ಯಗಳನ್ನು ಬೆಳೆಯಬಹುದು. ಗೊಬ್ಬರ ಕೊರತೆಯಿಂದ ಬಳಲುತ್ತಿರುವ ರೈತರೂ ಸುಖಿಯಾಗಿರುತ್ತಾರೆ ಎಂದು ಬೊಗಳೂರು ಸರಕಾರದ ಮಂತ್ರಿಗಳೆಲ್ಲರೂ ಗಂಭೀರವಾದ ತುರ್ತು ಸಮಾಲೋಚನೆ, ಗೂಢಾಲೋಚನೆ ಇತ್ಯಾದಿಗಳನ್ನೆಲ್ಲಾ ಕೈಗೊಂಡು ನಿರ್ಧಾರಕ್ಕೆ ಬಂದಿದ್ದಾರೆ ಎಂದು ಮೂಲಗಳು ಹೇಳಿಯೇ ಇಲ್ಲವೆಂಬುದನ್ನು ನಮ್ಮ ವರದ್ದಿಗಾರರು ವರದ್ದಿ ಮಾಡಿಲ್ಲ.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...