Wednesday, August 24, 2011

ಅಣ್ಣಾಗೆ ಯುವಜನರ ಬೆಂಬಲ ಕಟ್ ಮಾಡಲು ಯುಪಿಎ ಮಾಡಿದ್ದೇನು ಗೊತ್ತೇ????

(ಬೊಗಳೂರು ಸಂಚೋದನಾ ಬ್ಯುರೋದಿಂದ)
ಬೊಗಳೂರು: ಅಣ್ಣಾ ಹಜಾರೆಯವರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುತ್ತಿರುವುದು ಹೆಚ್ಚಾಗಿ ಯುವ ಜನತೆ. ಆದರೆ, ಏಳೆಂಟು ದಿನಗಳಾದ ಬಳಿಕವಾದರೂ, ಅಣ್ಣಾ ಅವರಿಗಿರುವ ಬೆಂಬಲದ ಸಾಗರ ನಿಲ್ಲಬಹುದೆಂದು ಲೆಕ್ಕಾಚಾರ ಹಾಕಿದ್ದ ಉಪ (upa) ಸರಕಾರಕ್ಕೆ ಭ್ರಮ ನಿರಸನಾಗಿದೆ. ಹೀಗಾಗಿ ಅದಕ್ಕಾಗಿ ಹೊಸ ಹೊಸ ತಂತ್ರಗಳನ್ನು ಹೂಡುತ್ತಿದೆ ಎಂದು ನೂರು ವರ್ಷ ಹಳೆಯ ಪಕ್ಷದ ವಕ್ತಾರ ಎಂತೀವಾರಿ ಅವರು ಬೊಗಳೂರು ಬ್ಯುರೋಗೆ ಮಾತ್ರವೇ ತಿಳಿಸಿದ್ದಾರೆ.

ನಮ್ಮ ದೇಶದ ಮಾನ್ಯ ನಿಧಾನಮಂತ್ರಿಗಳು ಆಗಾಗ್ಗೆ ದಿಢೀರ್ ಆಗಿ ನಿದ್ದೆಯಿಂದ ಏಳುವಂತೆಯೇ, ಬೊಗಳೂರು ಬ್ಯುರೋದ ಸೊಂಪಾದಕರು, ವರದ್ದಿಗಾರರೂ ಕೂಡ ದಿಢೀರ್ ಆಗಿ ನಿದ್ದೆಯಿಂದ ಎದ್ದು ಕುಳಿತಾಗ, ದೇಶಾದ್ಯಂತ ಎಲ್ಲರ ಡಿಕ್ಷನರಿಗಳು 'ರಾಜಕಾರಣಿಗಳು ಎಂದರೆ ಭ್ರಷ್ಟಾಚಾರ' ಎಂಬ ಅರ್ಥವನ್ನೇ ತೋರಿಸುತ್ತಿದ್ದವು. ಇದರ ಹಿಂದಿನ ಕಾರಣದ ಜಾಡು ಹಿಡಿದು ಹೊರಟಾಗ ಹಲವು ಅಂಶಗಳು ಬಯಲಾದವು. ಯುವಕರು, ಕಾಲೇಜಿಗೆ ಹೋಗುವವರು ಎಲ್ಲ ಕಡೆ ಚಕ್ಕರ್ ಹಾಕಿ ಅಣ್ಣಾ ಬಳಗವನ್ನು ಸೇರುತ್ತಿರುವುದನ್ನೇ ಮುಖ್ಯ ಗುರಿಯಾಗಿರಿಸಿ ತನಿಖೆ ಕೈಗೊಳ್ಳಲಾಗಿತ್ತುಯ

ಹೊಸ ಹೊಸ ಅಸ್ತ್ರಗಳನ್ನು ಪ್ರಯೋಗಿಸುತ್ತಿರುವ ಸಾನಿಯಾ ಗಾಂಧಿಯವರ 'ಉಪ' ಸರಕಾರವು, ಇದೀಗ ಮಾಡೆಲ್‌ಗಳನ್ನು ಛೂಬಿಟ್ಟಿದೆ ಎಂದು ಗೊತ್ತಾಗಿದೆ. ಮಾಡೆಲ್ಲುಗಳು ಹೆಚ್ಚಾಗಿ ಮೈಮೇಲೆ ಅರಿವೆಯೂ ಪರಿವೆಯೂ ಇಲ್ಲದೆ, ಜನರನ್ನು ಅದರಲ್ಲೂ ಯುವ ಜನಾಂಗವನ್ನು ಸೆಳೆಯುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದನ್ನು ಅರಿತುಕೊಂಡಿರುವ ಸರಕಾರವು, ಅವರನ್ನೇ ಕಣಕ್ಕಿಳಿಸಿದರೆ ಹೇಗೆ ಎಂದೆಲ್ಲಾ ಯೋಚಿಸಿ ನಿರ್ಧಾರಕ್ಕೆ ಬಂದಿರುವುದಾಗಿ, ಅಣ್ಣಾ ಹಜಾರೆಯವರನ್ನು "ಕಾಲಿನಿಂದ ತಲೆಯವರೆಗೆ ಭ್ರಷ್ಟ" ಎಂದು ಕರೆದು, ಈಗ ಮೂಲೆಗೆ ಝಾಡಿಸಲ್ಪಟ್ಟಿರುವ ಎಂತಿವಾರಿ, ಬೊಗಳೂರು ರದ್ದಿಗಾರರಿಗೆ ತಿಳಿಸಿದ್ದಾರೆ.

ಇಂಥದ್ದೊಂದು ತಂತ್ರಗಾರಿಕೆಗೆ ತಮ್ಮದೇ ಮಾತುಗಳು, ಪದಪ್ರಯೋಗ, ವಿದ್ವತ್ ಕಾರಣ ಎಂದೂ ಎಂತಿವಾರಿ ಎದೆ ತಟ್ಟಿಕೊಂಡು ಹೇಳಿದ್ದಾರೆ. ಯಾಕೆಂದರೆ, ತಾವು ಹಜಾರೆಯವರನ್ನು "ಟಾಪ್ ಟು ಬಾಟಮ್" ಭ್ರಷ್ಟ ಎಂದಿದ್ದೆ. ಆನಂತರ ಪಕ್ಷವು ಇದನ್ನು ನಿರಾಕರಿಸಿ ಹೇಳಿಕೆ ನೀಡಲೇಬೇಕಾದ ಅನಿವಾರ್ಯತೆ ಬಂದಿತ್ತು. ನಿರಾಕರಿಸುವುದು ಹೇಗೆ? ಹಿಂದಿನ ಹೇಳಿಕೆಗೆ "ಇಲ್ಲ" ಸೇರಿಸಿದರೆ ಆಯಿತು. ಅಂದರೆ ಟಾಪ್ ಇಲ್ಲ, ಬಾಟಮ್ ಇಲ್ಲ, ಮೀನ್ಸ್ ಟಾಪ್‌ಲೆಸ್ ಮತ್ತು ಬಾಟಮ್‌ಲೆಸ್. ಇದುವೇ ಯುಪಿಎಯ ತಂತ್ರಗಾರರಿಗೆ ಹೊಳೆದ ಅಂಶ. ಈ ಕಾರಣದಿಂದ, 'ಅಣ್ಣಾ ಅವರು ಹೇಳಿದಂತೆ ಬಲಿಷ್ಠ ಲೋಕಪಾಲ ಕಾಯಿದೆ ಜಾರಿಗೊಳಿಸದಿದ್ದರೆ, ಟಾಪ್‌ಲೆಸ್-ಬಾಟಂಲೆಸ್ ಆಗಿ ಬೆತ್ತಲೆ ನೃತ್ಯ ಮಾಡುತ್ತೇನೆ' ಎಂದು ಮಾಡೆಲ್ಲುಗಳ ಕೈಯಿಂದ ಮತ್ತು ಬಾಯಿಯಿಂದ ಹೇಳಿಕೆ ಕೊಡಿಸಲಾರಂಭಿಸಿದ್ದಾರೆ!

ಹೇಗಿದ್ದರೂ ಬಿಸಿ ರಕ್ತದ ಯುವಕರು ಈ ಮಾಡೆಲ್ಲುಗಳತ್ತ ಆಕರ್ಷಿತವಾಗಬಹುದು. ಅವರು ಅಣ್ಣಾ ಹಜಾರೆಗೆ ಬೆಂಬಲ ನೀಡುವುದನ್ನು ನಿಲ್ಲಿಸಿ, ಕಠಿಣ ಲೋಕಪಾಲ ಮಸೂದೆಯು ಜಾರಿಯಾಗದಂತೆ ನೋಡಿಕೊಂಡರೆ, ಮುಂದೆ ತಮಗೇ ಒಳಿತು, ಈ ಮಾಡೆಲ್ಲುಗಳ ನಗ್ನ ನೃತ್ಯ ನೋಡಬಹುದಾಗಿದೆ ಎಂದುಕೊಳ್ಳುವರು ಎಂಬುದು ಈ ಸರಕಾರದ ಲೆಕ್ಕಾಚಾರವಾಗಿತ್ತು!

ಆದರೆ, ಯುವಜನತೆಗೆ ಭ್ರಷ್ಟಾಚಾರ ಎಷ್ಟು ರೋಸಿಹೋಗಿದೆಯೆಂದರೆ, ಟಾಪ್‌ಲೆಸ್-ಬಾಟಂಲೆಸ್ ಆಗಿ ಹ್ಯಾಪ್‌ಲೆಸ್ ಆಗಿದ್ದರೂ ಅಲ್ಲೂ ಕೂಡ ಹೋಪ್‌ಲೆಸ್ ಭ್ರಷ್ಟಾಚಾರವೇ ಕಾಣುತ್ತಿದೆ, ಅವರು ಹೋರಾಟವನ್ನೆಂದಿಗೂ ಬಿಡಲಾರರು ಎಂಬ ಅಂಶವಂತೂ ಇವರಿಗೆ ಅರ್ಥವಾಗದಿರುವುದು ಈ ದೇಶದ ದುರಂತ ಎಂದು ಬೊಗಳೂರು ವರದ್ದಿಗಾರರು ನ್ಯೂಸ್‌ನಲ್ಲಿ ತಮ್ಮ ವ್ಯೂಸ್ ಸೇರಿಸಿದ್ದಾರೆ.
||ಅಣ್ಣಾ ಹೋರಾಟಕ್ಕೆ ಜಯವಾಗಲಿ||

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...