Tuesday, September 27, 2011

ಬೊಗಳೆ ಹಾರ್ಟ್ ಬ್ರೇಕ್: ಇಂದಿನಿಂದ ಯುವತಿಯರ ಉಗುರು ಉದ್ದವಾಗಲಿದೆ!


[ಬೊಗಳೂರು ವಿಶೇಷ ಯುವ Some-ಚೋದನಾ ಬ್ಯುರೋದಿಂದ]
ಬೊಗಳೂರು, ಸೆ.27- ಇಂದಿನಿಂದ ಕಾಲೇಜು ಹುಡುಗಿಯರು ಮತ್ತು ಹುಡುಗರ ಉಗುರುಗಳು ತೀರಾ ಉದ್ದ ಬೆಳೆಯಲಿವೆ ಎಂದು ಬೊಗಳೂರು ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು ನಿಗೂಢವಾದ ರಹಸ್ಯವೊಂದನ್ನು ಪತ್ತೆ ಹಚ್ಚಿದ್ದಾರೆ.

ಹೀಗಯೇ ತಿರುಗಾಡುತ್ತಿದ್ದಾಗ ಕ್ಯೂಟ್ ಆಗಿರುವ ಎಸ್ಸೆಮ್ಮೆಸ್ಸುಗಳು ಬೊಗಳೂರು ಬ್ಯುರೋದ ವರದ್ದಿಗಾರರ ಇನ್‌ಬಾಕ್ಸ್‌ನಲ್ಲಿಯೂ ಅಪ್ಪಿ ತಪ್ಪಿ ಬಂದು ಬೀಳುತ್ತಿದ್ದವು. ಅವುಗಳನ್ನು ಓದಲಾಗದೆ, ಈ ಎಸ್ಸೆಮ್ಮೆಸ್ಸುಗಳೆಂಬ ನಿರ್ಭಾವುಕ ಸಂದೇಶಗಳ ಹಿಂದಿನ ಭಾವಾರ್ಥವನ್ನು ಅರ್ಥೈಸಿಕೊಳ್ಳಲಾಗದೆ ಚಡಪಡಿಸಿ, ಏನು ಮಾಡೋಣ ಎಂದು ಚಿಂತಾಕ್ರಾಂತವದನರಾಗಿ ಕುಳಿತಿದ್ದಾಗ ಆಗಲೇ ಒಂದು ವರದ್ದಿಯು ಸಿಡಿಲೆರಗಿದಂತೆ ಬಂದು ಬಿದ್ದು ನಮ್ಮ ವರದ್ದಿಗಾರರನ್ನು ಗಾಢ ನಿದ್ರೆಯಿಂದ ಎಬ್ಬಿಸಿತ್ತು.

ಬೇರೆಲ್ಲಾ ಅಗತ್ಯ ವಸ್ತುಗಳ ಬೆಲೆಗಳನ್ನು ಆಗಸದೆತ್ತರಕ್ಕೆ ಏರಿಸುತ್ತಲೇ ಇರುವ ಯುಪಿಎ ಸರಕಾರ ಒಂದಾದರೂ ಆವಶ್ಯ ವಸ್ತುಗಳನ್ನು ಇಳಿಸಬಹುದಲ್ಲಾ ಎಂದು ಆಲೋಚಿಸಿ ಈ ನಿರ್ಧಾರ ಕೈಗೊಂಡಿತ್ತು ಎನ್ನಲಾಗಿದೆ.

ಅವೇನು ಅಂತ ನಮ್ಮ ಯುವ ಓದುಗ ಬಳಗಕ್ಕೆ ಈಗಾಗಲೇ ಕುತೂಹಲ ಮೂಡಿರಲಿಕ್ಕಿಲ್ಲ. ಯಾಕೆಂದರೆ, ಕೆಲವರು ಈಗಾಗಲೇ ರೋದಿಸತೊಡಗಿದ್ದಾರೆ. ಬೆಲೆ ಏರಿಸುತ್ತಲೇ ಜನರನ್ನು ದುಃಖದಲ್ಲಿ ತೇಲಾಡುವಂತೆ ಮಾಡುತ್ತಿದ್ದ ಸರಕಾರ, ಈ ಬಾರಿ ಇಳಿಸೋಣ ಎಂದುಕೊಂಡು, ದಿನವೊಂಕ್ಕೆ ಕಳುಹಿಸಬಹುದಾದ ಗರಿಷ್ಠ ಎಸ್ಎಂಎಸ್‌ಗಳ ಸಂಖ್ಯೆಯನ್ನು ಕೇವಲ 100ಕ್ಕೆ ಸೀಮಿತಗೊಳಿಸಿ ಆದೇಶ ಹೊರಡಿಸಿದೆ. ಇದರಿಂದಾಗಿ ತಮಗೆ ಬಂದ ಎಸ್ಸೆಮ್ಮೆಸ್ಸುಗಳನ್ನು ಫಾರ್ವರ್ಡ್ ಮಾಡುತ್ತಲೇ ಹಲವಾರು ಯುವ ಹೃದಯಗಳನ್ನು ಕಲಕುತ್ತಾ, ಅವರನ್ನು ತತ್ವಜ್ಞಾನಿಗಳಂತೆ ಮಾಡುತ್ತಿದ್ದ, "ಈ ಸಂದೇಶ ನಿಜವಾಗಿರಬಹುದೇ?" ಎಂದೆಲ್ಲಾ ಆಲೋಚನೆಗೀಡಾಗುವಂತೆ ಮಾಡುತ್ತಿದ್ದ ಈ ಸಂದೇಶಗಳು ಇನ್ನು ಕಡಿಮೆ ಬರಬಹುದು ಎಂಬುದೇ ಈ ಯುವ ಜನಾಂಗದ ಗೋಳಾಟಗಳಿಗೆ ಕಾರಣ.

ಇದು ಒಂದೆಡೆಯಾದರೆ, ಯುವಕರು ಮತ್ತು ಯುವತಿಯರ ಉಗುರುಗಳು ಬೆಳೆಯಲಾರಂಭಿಸಿರುವುದನ್ನು ಕೂಡ ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ.

ಇದುವರೆಗೆ, ಮೊಬೈಲ್ ಫೋನಿನ ಕೀಪ್ಯಾಡುಗಳಲ್ಲಿನ ಅಕ್ಷರಗಳೆಲ್ಲವೂ ಮಾಸಿ ಹೋಗಿ, ಇದ್ಯಾವ ಡಬ್ಬಾ ಮೊಬೈಲ್ ಅಂತ ಗೋಚರಿಸಿರುವುದನ್ನು ನೀವು ಎಂದಾದರೂ ಮನಗಂಡಿರಬಹುದು. ಆದರೆ ಎರಡೂ ಕೈಗಳಿಂದ, ಒಂದು ಕೈಯಿಂದ ಮತ್ತು ಕೆಲವರಂತೂ ಒಂದೇ ಬೆರಳಿನಿಂದ ಎಸ್ಎಂಎಸ್ ಟೈಪ್ ಮಾಡುವ ಪ್ರವೀಣರುಗಳ ಮಹತ್ಸಾಧನೆಯ ಫಲವಿದು. ಇಂಟರ್ನೆಟ್ ಸಂಪರ್ಕವಿಲ್ಲದೆಯೇ ತಮ್ಮ ಪ್ರೀತಿಪಾತ್ರರ ಜೊತೆಗೆ ಸಂಭಾಷಣೆ ಮಾಡಬಲ್ಲ ಕಲೆ ಇವರಿಗೆ ಸಿದ್ಧಿಸಿರುತ್ತದೆ. ಮಸ್ತಕದಲ್ಲಿ ಮೂಡಿದ ಭಾವನೆಗಳನ್ನು ನೇರವಾಗಿಯೇ ಮೊಬೈಲು ಫೋನಿನ ಎಸ್ಎಂಎಸ್‌ನಗಳಗೆ ತುರುಕಿ, ಜಿಮೇಲ್ ಚಾಟಿಂಗಿಗಿಂತಲೂ ವೇಗವಾಗಿ ಟೈಪ್ ಮಾಡಿ ಮಾಡಿ, ಅವರ ಬೆರಳ ತುದಿಗಳೆಲ್ಲವೂ ಸವೆದಷ್ಟೇ ಈ ಕೀಪ್ಯಾಡ್ ಮೇಲಿನ ಅಕ್ಷರಗಳೂ ಸವೆದಿರುವುದನ್ನು ಬೊಗಳೆ ರಗಳೆ ಬ್ಯುರೋ ಕೂಡ ಗಮನಿಸಿದೆ.

ಈಗ ದಿನವೊಂದಕ್ಕೆ ಬರೇ 100 ಎಸ್ಸೆಮ್ಮೆಸ್ಸುಗಳಿಗೆ ಮಾತ್ರವೇ ಅವಕಾಶವಿರುವುದರಿಂದ ದಿನಕ್ಕೆ ಸಾವಿರಗಟ್ಟಲೆ ಸಂದೇಶಗಳನ್ನು ಟೈಪು ಮಾಡುತ್ತಾ ಉಗುರು ಬೆಳೆಯದಂತೆ (ಅಂದರೆ ಕೈಯಲ್ಲಿರುವ ಉಗುರಿಗೆ ಬೆಳೆಯಲೂ ಅವಕಾಶವಿಲ್ಲದಂತೆ!) ಫಾಸ್ಟಾಗಿ ಟೈಪು ಮಾಡುತ್ತಾ, ಎಸ್ಎಂಎಸ್ ಚಾಟ್ ಮಾಡುತ್ತಿರುವವರು ಕಂಗಾಲಾಗಿದ್ದಾರೆ, ರೋದಿಸಲಾರಂಭಿಸಿದ್ದಾರೆ ಮತ್ತು ಇದುವರೆಗೆ ಹಾಸಿಗೆಯಲ್ಲೇ ಆರಾಮವಾಗಿ ಮಲಗಿಕೊಂಡು ರಾತ್ರಿಯಿಡೀ ಟೈಪು ಮಾಡುತ್ತಿದ್ದವರೆಲ್ಲ ನೆಲದ ಮೇಲೆ ಬಿದ್ದು ಹೊರಳಾಡಿ ನರಳಾಡತೊಗಿದ್ದಾರೆ.

ಸರಕಾರದ ಕೊಡುಗೆಯೆಂದರೆ ಇದೇ! ಬೇರೆಲ್ಲಾ ಬೆಲೆಗಳು ಏರಿದಂತೆಯೇ, ಎಸ್ಎಂಎಸ್‌ಗಳ ಸಂಖ್ಯೆಯನ್ನು ಇಳಿಸಿ ನೋಡೋಣ ಎಂದುಕೊಂಡರೆ, ಯುವಜನರ ಉಗುರಿನ ಉದ್ದವೂ ಏರಿಕೆಯಾಗತೊಡಗಿದೆ!

Monday, September 26, 2011

ಬೊಗಳೆಯಲ್ಲಿ ನಾಳೆ ಒಂದು ಹಾರ್ಟ್ ಬ್ರೇಕಿಂಗ್ ಸುದ್ದಿ!

[ಬೊಗಳೂರು ಜಾಹೀರಾತು ಬ್ಯುರೋದಿಂದ]
ಸರಕಾರದ ಬೆಲೆ ಏರಿಕೆ ಕಾರ್ಯಕ್ರಮದಿಂದ ಮೇಲೇಳಲಾರದೆ, ಇಂದು ಯಾವುದರ ಬೆಲೆ ಏರಿದೆ ಎಂಬ ಆತಂಕದಿಂದಲೇ ಬೆಳಗ್ಗೆ ಎಚ್ಚರವಾದರೂ ಮರಳಿ ಹೊದ್ದು ಮಲಗುತ್ತಿದ್ದ ಬೊಗಳೂರು ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳನ್ನು ಬಡಿದೆಬ್ಬಿಸುವ ಕಾರ್ಯಕ್ರಮವೊಂದು ನಡೆದಿದೆ.
ಇಷ್ಟಕ್ಕೂ ಕುಂಭಕರ್ಣನಿಗಿಂತಲೂ ಮಿಗಿಲಾಗಿ ತೂಕಡಿಸುತ್ತಿದ್ದ ಬೊಗಳೂರು ಬ್ಯುರೋವನ್ನು ಎಚ್ಚರಿಸಲು ಈ ಸರಕಾರ ಮಾಡಿದ ಕ್ರಮವದರೂ ಏನು?
ಅಂತ ತಿಳಿದುಕೊಳ್ಳಿ.... ಮಂಗಳವಾರದ ಸಂಚಿಕೆಯಲ್ಲಿ...
ನಿಮ್ಮ ಬೊಗಳೆ ರಗಳೆ ಪ್ರತಿಗಳನ್ನು ಈಗಲೇ ಕಾಯ್ದಿರಿಸಿಕೊಳ್ಳಿ.
ಇಲ್ಲವಾದರೆ, ಅತ್ಯುತ್ತಮ ವರದ್ದಿಗಳಿರುವ ಬೊಗಳೆ ರಗಳೆ ಪತ್ರಿಕೆಯ ಪ್ರತಿಗಳೆಲ್ಲಾ ರದ್ದಿಗೆ ಸೇರಬಹುದು, ಎಚ್ಚರಿಕೆ!

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...