Wednesday, January 18, 2012

ಆನೆಗೇ ಬಕೀಟು: ಪರ್ದಾ ನಿಷೇಧಕ್ಕೆ ಉ.ಪ್ರ.ಸರ್ಕಾರ ಚಿಂತನೆ

[ಬೊಗಳೂರು ಆನೆಗೆ ಬಕೀಟು ಹಿಡಿಯುವ ಬ್ಯುರೋದಿಂದ]
ಬೊಗಳೂರು, ಜ.18- ತತ್ತರ ಪ್ರದೇಶದಲ್ಲಿ ಪರ್ದಾ ನಿಷೇಧ ಹೇರಲಾಗಿದೆ. ದಲಿತರ ಅಧಿನಾಯಕಿ ಮಾಯಾವತಿ ಇರುವ ನಾಡಿನಲ್ಲಿ, ಮುಸಲ್ಮಾನರ ಏಳಿಗೆಗಾಗಿ ಹಗಲಿರುಳೂ ಶ್ರಮಿಸುತ್ತಿರುವ ಮುಲಾಮು ಸಿಂಗ್ ಕೂಡ ಗರ್ಜಿಸುವ ಈ ನಾಡಿನಲ್ಲಿ ಪರ್ದಾಕ್ಕೆ ಅಷ್ಟು ಸುಲಭವಾಗಿ ಮತ್ತು ಧೈರ್ಯದಿಂದ ನಿಷೇಧ ಹೇರಿದ್ದು ಹೇಗೆ ಎಂಬುದು ಎಲ್ಲರಿಗೂ ಆತಂಕಕ್ಕೂ, ಅಚ್ಚರಿಗೂ, ಕುತೂಹಲಕ್ಕೂ ಕಾರಣವಾಗಿತ್ತು.

ಈ ಕಾರಣಕ್ಕಾಗಿ ಬೊಗಳೂರು ಏಕಸದಸ್ಯ ಬ್ಯುರೋದ ಸರ್ವ ಸದಸ್ಯರೂ ವಿಶೇಷ ಪ್ರವಾಸಕ್ಕೆಂದು ಕೇಂದ್ರ ಸರಕಾರದಿಂದ ಅನುದಾನ ಪಡೆದುಕೊಂಡು ಅಲ್ಲಿಗೆ ಹೋಗಿ ವರದ್ದಿ ತರಲು ತೆರಳಿತು.

ಅಲ್ಲಿ ಹೋಗಿ ನೋಡಲೆನಿತು ಅಚ್ಚರಿ! ಎಲ್ಲೆಲ್ಲೂ ಆನೆಗಳು! ಮತ್ತು ಆನೆ ನಡೆದದ್ದೇ ದಾರಿ ಎಂದು ತಮಗೆ ಮನಬಂದಂತೆ ನಿಯಮಾವಳಿಗಳನ್ನು ರೂಪಿಸುತ್ತಾ, ತಾವು ಮಾಡಿದ್ದೇ ಸರಿ ಎಂಬ ಧೋರಣೆ ತಳೆಯುವ ಈ ಆನೆಗಳ ಹಿಂದೆಯೂ ಮುಂದೆಯೂ ಬಕೀಟು ಹಿಡಿಯುವವರೇ ಹೆಚ್ಚಾಗಿದ್ದಾರೆ!

ಇಂಥ ಒಂದು ಅಚ್ಚರಿಗಳ ನಡುವೆಯೇ, ನಮ್ಮ ವರದ್ದಿಗಾರರು ಬಕೀಟು ಹಿಡಿದದ್ದು ಲದ್ದಿಗೋ ಅಥವಾ ವರದ್ದಿಗೋ ಎಂಬ ಅನುಮಾನ ಬಾರದಿರಲಿ ಎಂದು ಸೊಂಪಾದಕರು ಈಗಾಗಲೇ ಸೂಚಿಸಿರುವ ಹಿನ್ನೆಲೆಯಲ್ಲಿ, ಆನೆಯ ಹಿಂದೆ ಹೋಗುವ ಬದಲು, ಆನೆಗಳೆಲ್ಲವೂ ಪರದೆಯೊಳಗೆ ಅವಿತಿರುವುದರ ಹಿಂದಿನ ರಹಸ್ಯದ ಹಿಂದೆ ಹೋಗಲು ತೀರ್ಮಾನಿಸಲಾಯಿತು.

ನಮ್ಮ ಅಸತ್ಯದ ಅನ್ವೇಷಣೆಯ ಬ್ಯುರೋದವರು ಹೋದಲ್ಲಿ, ಬಂದಲ್ಲಿ, ಕಾಲುಗಳಡಿ ಸಿಲುಕುವ ಈ ಬೃಹತ್ ಗಾತ್ರದ ಆನೆಗಳು ಯಾರ ಕಣ್ಣಿಗೂ ಬೀಳಬಾರದು ಎಂದು ಚುನಾವಣಾ ಆಯೋಗವು ಕಟ್ಟು ನಿಟ್ಟಿನ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಅಲ್ಲಿನ ಮಾಯಾಂಗನೆ ಸರಕಾರವು, ಬಡಪಾಯಿಗಳ, ದಲಿತರ ಕಲ್ಯಾಣಕ್ಕಾಗಿ ಮೀಸಲಾಗಿಟ್ಟ, ರಾಜ್ಯದ ಪ್ರಜೆಗಳ ತೆರಿಗೆ ಹಣದಲ್ಲಿ ಶತಸಹಸ್ರ ಕೋಟಿ ವ್ಯಯಿಸಿ ನಿರ್ಮಿಸಿದ ಆನೆಗಳನ್ನು ಮುಚ್ಚಲು ಮತ್ತೆ ನೂರು ಕೋಟಿ ವ್ಯಯಿಸುವ ಸಂಕಷ್ಟವನ್ನು ಎದುರಿಸಿತ್ತು.

ಹೀಗಾಗಿ, ಉತ್ತರ ಪ್ರದೇಶದಲ್ಲಿ ಚುನಾವಣೆಗಳು ಮುಗಿಯುವವರೆಗಾದರೂ ಪರ್ದಾ ನಿಷೇಧ ಕಾನೂನು ಜಾರಿಗೊಳಿಸಿದರೆ, ಆನೆಗಳಿಗೆ ಮುಸುಕು ಹಾಕುವ ವ್ಯರ್ಥ ಕಸರತ್ತಿನಿಂದ ಪಾರಾಗಬಹುದು ಎಂದು ಸರಕಾರ ಆಲೋಚಿಸಿದೆ ಎಂದು ನಮ್ಮ ಬಾತು-ಮೀದಾರರು ವರದ್ದಿ ಮಾಡಿದ್ದಾರೆ.

6 comments:

 1. ಪರ್ದಾ ನಿಷೇಧಿಸಿದರೆ ಪರ್ದೆ ಹೊಲಿಯುವವರು ಎಲ್ಲಿ ಹೋಗಬೇಕು... ಅನ್ವೇಶಿಗಳೆ..? :))

  ReplyDelete
  Replies
  1. ಪರದೆ ಹೊಲಿಯೋರಿಗೆ ಇತ್ತೀಚೆಗೆ ಕೆಲಸ ಕಡಿಮೆಯಾಗುತ್ತಿದೆ. ಸಿನಿಮಾ ನೋಡಿದ್ರೆ ಗೊತ್ತಾಗಲ್ವಾ? ನಟಿಯರಲ್ಲಿ ಉಳಿತಾಯ ಮನೋಭಾವ ಜಾಸ್ತಿಯಾಗ್ತಿದೆ ಚುಕ್ಕಿಚಿತ್ತಾರರೇ!

   Delete
 2. ತುಘಲಕನ ದರ್ಬಾರು!

  ReplyDelete
  Replies
  1. ಸುನಾಥರೇ,
   ಇಲ್ಲಿ ಎಲ್ಲರೂ ತುಘಲಕರೇ! ಹಣ ಮಾತ್ರ ತೆರಿಗೆದಾರರದು!

   Delete
 3. Replies
  1. ಅನಾನಿಮಸರೇ, ನಿಜಕ್ಕೂ ಚೆನ್ನಾಗಿದೆಯೇ?

   Delete

ನಿಮ್ಮ ಸಲಹೆ/ಅಭಿಪ್ರಾಯ ತಿಳಿಸಿ..

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...