Monday, March 26, 2012

ಬೊಗಳೆ: ಚಹಾ ಮಾರಾಟ ಹೆಚ್ಚಿದ್ರೆ ಜನಸಂಖ್ಯೆ ಏರಿಕೆ!


[ಬೊಗಳೂರು ಮಕ್ಕಳೋತ್ಪಾದನಾ ಬ್ಯುರೋದಿಂದ]
ಬೊಗಳೂರು, ಮಾ. 26- ಬೊಗಳೂರಿನಲ್ಲಿ ಹಾಲಾಹಲ, ಕೋಲಾಹಲ, ಆಲ್ಕೋಹಾಲ ಎಲ್ಲವೂ ಎದ್ದಿದೆ. ಇದಕ್ಕೆ ಕಾರಣ ನಮ್ಮ ಬದ್ಧ ಪ್ರತಿಸ್ಪರ್ಧಿ ಪತ್ರಿಕೆ ಪ್ರಕಟಿಸಿದ ಒಂದು ವರದ್ದಿ.

ಮಕ್ಕಳು ಬೇಕಿದ್ದರೆ, ದಿನಕ್ಕೆರಡು ಕಪ್ ಚಹಾ ಕುಡಿಯಿರಿ ಎಂಬ ಸಂಚೋದ್ಯದ ವರದ್ದಿಯೇ ಎಲ್ಲಾ ಗುಂಡಾಂತರಗಳಿಗೆ, ಗಂಡಾಂತರಗಳಿಗೆ ಕಾರಣವಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಇತ್ತೀಚೆಗೆ ಬೊಗಳೂರಿನಲ್ಲಿ ಚಹಾ ಮಾರಾಟದ ಪ್ರಮಾಣವು ಏರಿಕೆಯಾಗಿರುವುದು ಮತ್ತು ಜೊತೆ ಜೊತೆಗೇ ಬೊಗಳೂರಿನ ಜನಸಂಖ್ಯೆಯೂ ಏರಿಕೆಯಾಗುತ್ತಿರುವುದರ ಹಿಂದೆ ಯಾವ ಮತ್ತು ಯಾರ ಕೈವಾಡವಿದೆ ಎಂದು ಬೊಗಳೂರಿನ ಸರಕಾರವು ಬೊಗಳೆ ರಗಳೆಗೆ ತನಿಖಾ ವರದ್ದಿ ಒಪ್ಪಿಸುವಂತೆ ಸೂಚನೆ ನೀಡಿತ್ತು.

ಈ ಕುರಿತು ಬೇರೆಯವರು ಯಾರೋ ತನಿಖೆ ಕೈಗೊಂಡು ವರದ್ದಿ ಪ್ರಕಟಿಸಿದಾಗಲೇ, ಎಲ್ಲದಕ್ಕೂ ಕಾರಣ ಚಹಾ ಸೇವನೆ ಎಂಬ ಅಂಶ ಪತ್ತೆಯಾಗಿತ್ತು.

ಬಿಸಿಬಿಸಿ ಚಹಾ ಕುಡಿದರೆ ಗರ್ಭಿಣಿಯಾಗುವ ಸಾಧ್ಯತೆಗಳು ಶೇ.27ರಷ್ಟು ಹೆಚ್ಚಾಗುತ್ತದೆ ಎಂಬುದು ಈ ಸಂಚೋದನಾ ವರದ್ದಿಯ ಸಾರಾಂಶ. ಆದರೆ, ಅದನ್ನು ಬೋಸ್ಚನ್ ಚಹಾ ಕೂಟ ಖ್ಯಾತಿಯ ಬೋಸ್ಟನ್ ಯುನಿವರ್ಸಿಟಿಯವರೇ ಪ್ರಕಟಿಸಿರುವುದು, ಇದು ಬೋಸ್ಟನ್ ಚಹಾದ ಜಾಹೀರಾತು ಉತ್ತೇಜನಾ ತಂತ್ರವೇ ಎಂಬ ಬಗ್ಗೆ ತನಿಖೆ ನಡೆಸಲು, ಅವರು ನಮ್ಮ ಜಾಹೀರಾತುದಾರರಾಗಿರುವುದರಿಂದಾಗಿ ಸಾಧ್ಯವಾಗುತ್ತಿಲ್ಲ ಎಂದು ಬೊಗಳೂರು ಸೊಂಪಾದಕರು ಸ್ಪಷ್ಟಪಡಿಸಿದ್ದಾರೆ.

Monday, March 19, 2012

ಬೊಗಳೆ: Bitch ಅಂತ ಕರೆದ್ರೆ ಲೈಂಗಿಕ ಕಿರುಕುಳ, ಹೇಗೆ?


[ಬೊಗಳೂರು ಮಹಿಳಾ ಅಜಾಗೃತಿ ಬ್ಯುರೋದಿಂದ]
ಬೊಗಳೂರು, ಮಾ.18- ಮಾನನೀಯ ಹೈಕೋರ್ಟ್ ತೀರ್ಪೊಂದು ಮಹಿಳಾ ಸಮುದಾಯದಲ್ಲಿ ತೀವ್ರತರವಾದ, ಗಂಭೀರವಾದ ಚರ್ಚೆಗೆ grass ಒದಗಿಸಿರುವ ಸಂಗತಿಯೊಂದು ಬೊಗಳೆ ರಗಳೆ ಬ್ಯುರೋದ ಕಣ್ಣಿಗೆ ಬಿದ್ದದ್ದೇ ತಡ, ಕಣ್ಣುಜ್ಜಿಕೊಂಡು ಅದರ ಮೇಲೆ ಬೆಳಕು ಚೆಲ್ಲಲು ನಿರ್ಧರಿಸಲಾಯಿತು.

ಹುಡುಗಿಯರನ್ನು ಸೆಕ್ಸೀ ಎಂದು ಕರೆದರೆ, ಅದರ ಬಗೆಗೆ ಏನೂ ತಲೆ ಕೆಡಿಸಿಕೊಳ್ಳಬೇಕಿಲ್ಲ, ಅದನ್ನು ಕೂಡ ಹೆಮ್ಮೆಯಿಂದಲೇ ಒಪ್ಪಿಕೊಳ್ಳಿ ಮತ್ತು ಅದೇನೂ ಲೈಂಗಿಕ ಕಿರುಕುಳವಲ್ಲ ಎಂದು ರಾಷ್ಟ್ರೀಯ ಮಹಿಳಾ ಹಕ್ಕುಗಳ ಆಯೋಗದ ಅಧ್ಯಕ್ಷರೇ ಹೇಳಿರುವ ಹಿನ್ನೆಲೆಯಲ್ಲಿ ಮಹಿಳಾ ಮಣಿಗಳೀಗ ಎಚ್ಚೆತ್ತುಕೊಂಡು, ಬಹುತೇಕ ಮಂದಿ ಈ ಮಾತಿಗೆ ಸಡಗರಡಿಂದ ಬೆಂಬಲ ಸೂಚಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ, ಸಾಮಾನ್ಯವಾಗಿ ಮಹಿಳೆಯರು ಆಯೋಗದ ಅಧ್ಯಕ್ಷರ ಮಾತನ್ನೇ ಅನುಸರಿಸುತ್ತಾ, ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ನ್ಯಾಯಾಲಯದ ತೀರ್ಪು ಮಾತ್ರ ಅವರನ್ನು ಗೊಂದಲದಲ್ಲಿ ಕೆಡವಿದೆ. ಆ ತೀರ್ಪೇನೆಂದರೆ, ಸ್ತ್ರೀಯರನ್ನು bitch ಅಂತ ಕರೆಯಬಾರದು, ಕರೆದರೆ ಅದು ಲೈಂಗಿಕ ಕಿರುಕುಳವಾಗುತ್ತದೆ ಎಂಬುದು ನ್ಯಾಯಾಲಯದ ತೀರ್ಪಿನ ಸಾರಾಂಶ.

ಮಹಿಳೆಯರು ಈ ಬಗ್ಗೆ ತಲೆ ಕೆಡಿಸಿಕೊಂಡೂ ಕೆಡಿಸಿಕೊಂಡೂ ಒಂದು ತೀರ್ಮಾನಕ್ಕೆ ಬಂದು ಬೊಗಳೆ ರಗಳೆ ಬ್ಯುರೋದೆದುರು, ನೀವೇ ಇದರ ಬಗ್ಗೆ ಸಂಚೋದನೆ ನಡೆಸಿ, ಯಥಾರ್ಥ ತಿಳಿಸಿ ನಮ್ಮನ್ನು ಕೃತಾರ್ಥರನ್ನಾಗಿಸಬೇಕು ಎಂದು ಅಲವತ್ತುಕೊಂಡಿದ್ದಾರೆ.

ಹೀಗಾಗಿ ಬೊಗಳೂರು ಬ್ಯುರೋ ಕೂಡ ತಲೆಕೆಡಿಸಿಕೊಂಡು ಒಂದು ತೀರ್ಪು ಕೊಟ್ಟುಬಿಟ್ಟ ನಂತರ, ಪ್ರತಿಭಟನಾಕಾರ್ತಿ ಮಹಿಳೆಯರು ಬಾವುಟ, ಫ್ಲೇಕ್ಸ್, ಘೋಷಣಾ ಫಲಕ ಇತ್ಯಾದಿಗಳನ್ನೆಲ್ಲಾ ಮಡಚಿ ತಮ್ಮ ವ್ಯಾನಿಟಿ ಬ್ಯಾಗಿನಲ್ಲಿಟ್ಟುಕೊಂಡು ಹೊರಟುಹೋದರು.

ಬೊಗಳೆ ಬ್ಯುರೋ ನೀಡಿದ ತೀರ್ಪಿನ ಸಾರಾಂಶ ಇಂತಿದೆ: "ನ್ಯಾಯಾಲಯವೆಂದಿಗೂ ತಪ್ಪು ಮಾಡುವುದಿಲ್ಲ. ಮಾಡಿದ್ದಿದ್ದರೆ ನೀವೇ ತಪ್ಪು ಮಾಡಿಕೊಂಡಿರಬಹುದು. ಅಥವಾ ನೀವೇ ತಪ್ಪಾಗಿ ಅರ್ಥೈಸಿಕೊಂಡಿದ್ದಿರಬಹುದು. bitch ಅನ್ನೋ ಪದವು ಲೈಂಗಿಕ ಕಿರುಕುಳ ವ್ಯಾಪ್ತಿಗೆ ಅಂತ ಕೋರ್ಟು ಹೇಳಿದೆಯಾದರೂ ನೀವೇನೂ ತಲೆಕೆಡಿಸಿಕೊಳ್ಳಬೇಕಿಲ್ಲ. ನಾವು ಆ ಇಂಗ್ಲಿಷ್ ಪದವನ್ನು ಕನ್ನಡದಲ್ಲಿಯೇ ಅರ್ಥ ಮಾಡಿಕೊಳ್ಳೋಣ. ಹೇಗೆಂದರೆ, 'ಬಿಚ್ಚು' ಅಂತ ಮಹಿಳೆಯರಿಗೆ ಕರೆದರೆ... ಅಲ್ಲಲ್ಲ... ಹೇಳಿದರೆ ಮಾತ್ರವೇ ಅದು ಲೈಂಗಿಕ ಕಿರುಕುಳ ಅಂತ ನೀವು ಭಾವಿಸಿಕೊಳ್ಳಿ!"

ಈ ತೀರ್ಪಿನ ಹಿನ್ನೆಲೆಯಲ್ಲಿ ಮತ್ತೊಂದೆಡೆಯಿಂದ ನಟೀಮಣಿಯರು ಕೂಡ ಬೇರೆಯೇ ರೀತಿಯಾಗಿ ವ್ಯಾಖ್ಯಾನಿಸಿಕೊಂಡು, ಪ್ರತಿಭಟನೆಗೆ ಸಜ್ಜಾಗುತ್ತಿದ್ದಾರೆ ಎಂಬುದು ಕೂಡ ತಿಳಿದುಬಂದಿದೆ. ಅದೆಂದರೆ, ತಮ್ಮನ್ನು ಬಿಚ್ಚಮ್ಮ ಅಂತ ಕರೆದರೆ ಪರವಾಗಿಲ್ಲ, ಆದ್ರೆ bicthಅಮ್ಮ ಅಂತ ಕರೆದ್ರೆ ನಾವು ಪ್ರತಿಭಟಿಸ್ತೀವಿ ಎಂಬುದು ಅವರ ಉಡುಗೆಯಷ್ಟೇ ಚಿಕ್ಕದಾದ, ಒಂದು ಸಾಲಿನ ಪ್ರತಿಭಟನೆಯ ಅಸ್ತ್ರ.

ಈ ನಡುವೆ, ಮದ್ರಾಸು ಹೈಕೋರ್ಟಿನಲ್ಲಿ ಯಾರಾದರೂ ಕನ್ನಡಿಗ ನ್ಯಾಯಾಧೀಶರು ಕೂಡ ಇದ್ದಿರಬಹುದೇ ಎಂಬುದರ ಬಗ್ಗೆ ಬೊಗಳೂರು ಬ್ಯುರೋ ಈಗ ಸಂಚೋದನೆಗೆ ಹೊರಟಿದೆ.

Wednesday, March 14, 2012

ಬೊಗಳೆ: ನಟಿಯರು ರಾಜಕೀಯಕ್ಕೆ ಸೇರೋ ಹಿಂದಿನ ರಹಸ್ಯ


[ಬೊಗಳೂರು ಸಂಚೋದನಾ ಬ್ಯುರೋದಿಂದ]
ಬೊಗಳೂರು, ಮಾ.14- ಇತ್ತೀಚೆಗೆ ಸಿನಿಮಾ ಮಂದಿ, ಅದರಲ್ಲಿಯೂ ವಿಶೇಷವಾಗಿ ನಟೀಮಣಿಯರು ಸಮಾಜಸೇವೆಯ ಹೆಸರಿನಲ್ಲಿ ರಾಜಕೀಯ ಪಕ್ಷಗಳನ್ನು ಸೇರುತ್ತಿರುವುದು ಮತ್ತು ಜಾರಕಾರಣ ಮಾಡೋ ಹಿಂದಿರುವ ರಹಸ್ಯವನ್ನು ಬಯಲು ಮಾಡಿ ಎಂದು ಇಡೀ ಲೋಕವೇ ಬೊಗಳೆ ರಗಳೆ ಬ್ಯುರೋಗೆ ಸಂದೇಶ ಕಳುಹಿಸಿರುವುದರಿಂದ ಈ ತನಿಖಾ ವರದ್ದಿಯನ್ನು ಅನಿವಾರ್ಯವಾಗಿ ಪ್ರಕಟಿಸಲಾಗುತ್ತಿದೆ.

ಶ್ರುತಿ, ತಾರಾ, ಮಾಳವಿಕಾ, ಪೂಜಾ ಗಾಂಧಿ, ರಮ್ಯಾ, ರಕ್ಷಿತಾ, ಭಾವನಾ ಮುಂತಾದವರೆಲ್ಲರೂ ಒಂದು ಕಾಲದಲ್ಲಿ ಯುವ ಹೃದಯಗಳನ್ನು ಹೃದಯ ಕದ್ದು ಮೆರೆದ ನಾಯಕೀಮಣಿಯರು. ಯುವ ಜನಾಂಗದ ನಿದ್ದೆಯನ್ನು ಕದ್ದವರಾದರೂ, ಇತ್ತಿತ್ತಲಾಗಿ ಅವರು ನಿದ್ದೆಯಲ್ಲಿಯೂ ಬೆಚ್ಚಿ ಬೀಳಿಸುವಂತಾಗಿಬಿಟ್ಟಿರುವುದಕ್ಕೂ ರಾಜಕೀಯ ಸೇರ್ಪಡೆಗೂ ಏನೋ ಲಿಂಕ್ ಇರಬೇಕೆಂದು ಶಂಕಿಸಿ, ಆ ನಿಟ್ಟಿನಲ್ಲಿ ತನಿಖೆ ನಡೆಸಲಾಯಿತು.

ಈ ತನಿಖಾ ಸಂಚೋದನೆಯ ವೇಳೆ ಕಂಡುಬಂದ ಅತ್ಯಂತ ತೀಕ್ಷ್ಣವಾದ ಅಸತ್ಯವೆಂದರೆ, ರಾಜಕೀಯ ಸೇರಿದರೆ, ಆಗಾಗ್ಗೆ ಉಪವಾಸ ಸತ್ಯಾಗ್ರಹ ನಡೆಸಬಹುದು. ಉದಾಹರಣೆ, ನಿನ್ನೆ ಸಿರಿರಾಮುಲು ಜೊತೆಗೆ ರಕ್ಷಿತಾ ಕೂಡ ಉಪವಾಸ ಕೂತಿದ್ದು. ನಟೀಮಣಿಯರಿಗೆಲ್ಲ ಮಾಮೂಲಿಯಾಗಿ ಉಪವಾಸ ಮಾಡಲು ಪುರುಸೊತ್ತಿಲ್ಲ. ರಾಜಕೀಯ ಸೇರಿದರೆ ಆ ಕಾರಣ, ಈ ಕಾರಣ, ನಿಷ್ಕಾರಣ... ಇತ್ಯಾದಿಗಳಿಗಾಗಿ ಉಪವಾಸ ಸತ್ಯಾಗ್ರಹ ನಡೆಸಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಇದರಿಂದಲಾದರೂ, ಯುವ ಹೃದಯಗಳನ್ನು ನಿದ್ದೆಯಲ್ಲಿಯೂ ಬೆಚ್ಚಿ ಬೀಳಿಸುವ ಮಟ್ಟಿಗೆ ಏರಿದ ತಮ್ಮ ತೂಕವನ್ನು ಇಳಿಸಿಕೊಳ್ಳಬಹುದು ಎಂಬ ದೂರಾಲೋಚನೆ ಎಂಬುದು ನಮ್ಮ ತನಿಖಾ ವರದ್ದಿಗಾರರು ತಂದು ಹಾಕಿ ಹೋದ ಬಾರ್ಕಿಂಗ್ ನ್ಯೂಸ್.

Friday, March 09, 2012

ಮಹಿಳಾ ದಿನ ವಿಶೇಷ ಬೊಗಳೆ: ಸಬಲೆಯರಾಗಿಲ್ಲವೇ?


[ಬೊಗಳೂರು ಮಹಿಳಾ ಬ್ಯುರೋದಿಂದ]
ಬೊಗಳೂರು, ಮಾ.9- ಮಹಿಳೆಯರಿನ್ನೂ ಸಬಲೆಯರಾಗಿಲ್ಲ, ಅಬಲೆಯರಾಗಿಯೇ ಇದ್ದಾರೆ ಎಂದೆಲ್ಲಾ ಮಹಿಳಾ ದಿನಾಚರಣೆಯಂದು ಮಾತ್ರವೇ ಕೇಳಿ ಬರುತ್ತಿದ್ದ ಮಾತುಗಳು ಗುರುವಾರ (ಮಾರ್ಚ್ 8, 2012) ಕೂಡ ಕೇಳಿಬಂದವು.

ಈ ಕುರಿತು ತನಿಖೆ ನಡೆಸಿ ಜನತೆಯೆದುರು ಅಸತ್ಯವನ್ನೇ ಮುಂದಿಡೋಣ ಎಂದುಕೊಂಡು, ಸೊಂಪಾದಕರಿಂದ ಅನುಜ್ಞೆಯನ್ನು ಪಡೆದುಕೊಂಡು ಹೊರಟ ಬೊಗಳೆ ರಗಳೆ ಬ್ಯುರೋಗೆ ಹಲವಾರು ದೃಶ್ಯಗಳು ಕಣ್ಣಿಗೆ ಬಿದ್ದಾಗ, ವರದ್ದಿ ತಂದು ಒಪ್ಪಿಸುವುದು ಹೇಗೆ ಎಂಬ ಗೊಂದಲವಾಯಿತು.

ಬೊಗಳೂರಿನಲ್ಲಿ ಹೀಗೆಯೇ ಸುತ್ತಾಡುತ್ತಿದ್ದಾಗ, ಹೋಳಿ ಹಬ್ಬವೂ ಕಣ್ಣಿಗೆ ರಾಚಿ, ಬೊಗಳೂರು ಇಡೀ ಬಣ್ಣದ ಓಕುಳಿ ಮತ್ತು ಬಣ್ಣದ ಪುಡಿಗಳಿಂದಲೇ ಮಿಶ್ರಿತವಾಗಿದ್ದವು. ಆದರೆ, ಈ ಬಣ್ಣಗಳನ್ನು ಮೆತ್ತುವವರು ಮತ್ತು ಮೆತ್ತಿಸಿಕೊಳ್ಳುವವರು ಪುರುಷರೋ, ಮಹಿಳೆಯರೋ ಎಂಬುದು ತಿಳಿಯದೆ ಗೊಂದಲವಾಯಿತು. ಯಾಕೆಂದರೆ, ತಲೆ ಕೂದಲು ಕೆರೆದುಕೊಂಡು, ಚಿತ್ರವಿಚಿತ್ರ ಡ್ರೆಸ್ ತೊಟ್ಟುಕೊಂಡು, ಎದುರಲ್ಲಿದ್ದವರನ್ನು ಅಟ್ಟಾಡಿಸಿಕೊಂಡು ಹೋಗುವವರೆಲ್ಲರೂ ಕಣ್ಣಿಗೆ ರಾಚಿದರು.

ಇವರು ಪುರುಷರೋ ಅಥವಾ ಮಹಿಳೆಯರೋ ಎಂಬುದು ಗೊಂದಲವಾಯಿತು. ಯಾಕೆಂದರೆ ಉಡುಗೆಯಲ್ಲಿ ಪುರುಷನೋ, ಮಹಿಳೆಯೋ ಎಂದು ಗುರುತಿಸುವುದು ಸಾಧ್ಯವಿಲ್ಲದಂತಹಾ ಪರಿಸ್ಥಿತಿ. ಹುಡುಗರಿಗೂ ಉದ್ದ ತಲೆಕೂದಲಿರುತ್ತದೆ. ಎಲ್ಲರೂ ಪ್ಯಾಂಟು ಶರಟು ಧರಿಸುತ್ತಾರೆ. ಹಾಗಿದ್ದರೆ ಯಾವ ರೀತಿ ವರದ್ದಿ ತಂದೊಪ್ಪಿಸುವುದು ಎಂದು ಯೋಚಿಸಿದ ಬಳಿಕ, ಸಂಜೆಯವರೆಗೂ, ರಾತ್ರಿಯವರೆಗೂ ಕಾದು ಕೊನೆಗೂ ವರದ್ದಿ ಸುರಿಯಲು ನಿರ್ಧರಿಸಲಾಯಿತು.

ಕೊನೆಗೂ ಕಷ್ಟ ಪಟ್ಟು ಸಂಪಾದಿಸಿದ ಆ ಒಂದು ಸಾಲಿನ ಬ್ರೇಕಿಂಗ್ ನ್ಯೂಸ್ ಇಲ್ಲಿದೆ:
ಯಾವುದೇ ಮಹಿಳೆಯರು ಮಹಿಳಾ ದಿನದಂದು ನಮಗೆ ಪಾರ್ಟಿ ಕೊಡಿಸಿಲ್ಲವಾದುದರಿಂದ, ಅವರಿನ್ನೂ ಸಬಲೆಯರಾಗಿಲ್ಲ. ಅವರು ಮತ್ತಷ್ಟು ಸಬಲೆಯರಾಗಬೇಕಾದ ಅನಿವಾರ್ಯತೆ ಇದೆ!

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...