Thursday, June 07, 2012

ಶೌಚಾಲಯ ನವೀಕರಣ: ಬಡವರ ನಿರ್ಮೂಲನೆಯ ದಿಟ್ಟ ಹೆಜ್ಜೆ!


[ಬೊಗಳೂರು ಶೌಚಾಲಯ ಬ್ಯುರೋದಿಂದ]
ಬೊಗಳೂರು, ಜೂ.7- ಸ್ಮಾರ್ಟ್ ಕಾರ್ಡ್ ಹೊಂದಿರುವವರು ಮಾತ್ರವೇ ಶೌಚಾಲಯ ಬಳಸಬೇಕು, ಉಳಿದವರು ಬಳಸಬಾರದು ಎಂದ ಆಯೋಮಯೋಜನಾ ಆಯೋಗವು ಸೂಚಿಸಿರುವುದರಿಂದಾಗಿ ದೇಶದಲ್ಲಿ ಬಡವರ ಸಂಖ್ಯೆ ಕಡಿಮೆಯಾಗಿದೆ ಎಂದು ಕೇಂದ್ರದ ಬೊಗಳೆ ಸರಕಾರವು ಘೋಷಿಸಿದೆ.

ದೇಶದ ಮೂಲೆ ಮೂಲೆಯ ಶೌಚಾಲಯಗಳನ್ನು 35 ಲಕ್ಷಕ್ಕೂ ಹೆಚ್ಚು ವೆಚ್ಚದಲ್ಲಿ ನವೀಕರಣಗೊಳಿಸಬೇಕು. ಆಗಷ್ಟೇ ಈ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಭಾರತವು ನಂ.1 ಅಂತ ಕರೆಸಿಕೊಳ್ಳುವುದು ಸಾಧ್ಯ ಎಂದು ಮಾನ್ಯ ನಿಧಾನಮಂತ್ರಿಗಳು ಘೋಷಿಸಿರುವುದಾಗಿ ವಿಪಿತ್ತ ಸಚಿವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದೆಲ್ಲವೂ ಸಾಧ್ಯ. ಆರ್ಥಿಕತೆಯಲ್ಲಿ ಚೀನಾ, ಅಮೆರಿಕವನ್ನೆಲ್ಲಾ ನಾವು ಹಿಂದಿಕ್ಕಬಹುದು ಎಂದು ವಿಪಿತ್ತ ಸಚಿವರು ಹೇಳಿದಾಗ ಕುತೂಹಲಗೊಂಡ ಅಸತ್ಯಾನ್ವೇಷಿ ಮತ್ತೊಂದು ಪ್ರಶ್ನೆಯ ಬಾಣವನ್ನೇ ಎಸೆದಾಗ ಈ ರೀತಿಯಾಗಿ ತತ್ತರಿಸುವ ಉತ್ತರ ಬಂದಿತ್ತು.

ಅದು ಹೇಗೆ ಎಂದು ಕೇಳಲಾಗಿ, "ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಪ್ರಜೆಗಳು ತತ್ತರಿಸಿದ್ದು ಹೌದು. ಹಾಗಿರುವಾಗ ಹಸಿವು ನೀಗಿಸಲು ತಿನ್ನುವುದನ್ನಾದರೂ ಏನನ್ನು ಮತ್ತು ಹೇಗೆ ಸಾಧ್ಯ? ಕಡಿಮೆ ತಿನ್ನುವಾಗ ಶೌಚಾಲಯಗಳ ಅಗತ್ಯವೂ ಕಡಿಮೆ ಇರುತ್ತದೆ. ಹೀಗಾಗಿ ಹಣವಿದ್ದವರು ಮಾತ್ರವೇ ತಿಂದುಂಡು, ಸ್ಮಾರ್ಟುಕಾರ್ಡುಗಳನ್ನು ಮಾಡಿಸಿಕೊಂಡು ಶೌಚಾಲಯ ಬಳಸಬಹುದು. ಇದರಿಂದಾಗಿ ದೇಶದೆಲ್ಲೆಡೆ ಶೌಚಾಲಯಗಳು ಎಸಿ, ಫ್ಯಾನು, ಇತ್ಯಾದಿಗಳೊಂದಿಗೆ ಫಳ ಫಳ ಹೊಳೆಯುವಂತಿರುತ್ತದೆ" ಎಂದು ಆಯೋಮಯೋಜನಾಯೋಗದ ಉಪಾಧ್ಯಕ್ಷರು ಬೊಗಳೆ ರಗಳೆ ಬ್ಯುರೋದ ಬಳಿ ಹೇಳಿಕೊಂಡಿದ್ದಾರೆ.

ಆದರೆ, ನಾವು ಶೌಚಾಲಯದೊಳಗೆ ಹಣ ತೆತ್ತು ಒಳಗೆ ಹೋಗಬೇಕು ಎಂದಷ್ಟೇ ಹೇಳಿದ್ದೇವೆಯೇ ಹೊರತು, ಹೊರಗೆ ಬರಬೇಕು ಎಂದು ಎಲ್ಲಿಯೂ ಬರೆದುಹಾಕಿಲ್ಲ ಎಂದೂ ವಿಪಿತ್ತ ಸಚಿವರು ಸ್ಪಷ್ಟನೆ ನೀಡಿದ್ದಾರೆ.

ಅದೂ ಅಲ್ಲದೆ, ಇತ್ತೀಚೆಗೆ ಶೌಚಾಲಯಗಳಲ್ಲಿಯೂ ಕಳವು ಪ್ರಕರಣಗಳು ನಡೆಯುತ್ತಿರುವುದರಿಂದ ಹೆಚ್ಚಿನ ಭದ್ರತೆ ಒದಗಿಸಲು, ವಿದ್ಯುದ್ದೀಪಾಲಂಕಾರಕ್ಕಾಗಿ ಮುಂತಾಗಿ ಹೆಚ್ಚಿನ ಬಜೆಟ್ ಅಗತ್ಯವಿರುತ್ತದೆ. ಮುಂದಿನ ಬಜೆಟಿನಲ್ಲಿ ಇದನ್ನು ಪ್ರಸ್ತಾಪಿಸಿ, ಶೌಚಾಲಯ ನವೀಕರಣ ನಿಧಿ ಕಾಯ್ದಿರಿಸುವಂತೆ ನಿಧಾನಿಯವರಿಗೆ ಪತ್ರ ಬರೆಯುವುದಾಗಿ ಹೇಳಿದರು.

ಇತ್ತಿತ್ತಲಾಗಿ ಪೆಟ್ರೋಲ್ ಬೆಲೆ ಏರುತ್ತಿರುವುದರಿಂದ ಶೌಚಾಲಯಗಳು ಕೂಡ ಮುಂದೆ ಇಂಧನದ ಮೂಲವಾಗುವ ಸಾಧ್ಯತೆಗಳು ದಟ್ಟವಾಗಿವೆ. ಈ ಬಯೋ ಫ್ಯುಯೆಲ್ ನಿರ್ಮಾಣಕ್ಕೂ ಹೆಚ್ಚಿನ ಬಜೆಟ್ ಕಾಯ್ದಿರಿಸಿ ಅದನ್ನು ಅಧಿಕಾರಿಗಳಿಗೆ, ಮಂತ್ರಿ ಮಾಗಧರಿಗೆ ಅಧಿಕೃತವಾಗಿಯೇ ಹಂಚುವ ಮೂಲಕವಾಗಿ, ಯಾರೂ ಕೂಡ ಹಣ ಮಾಡುವುದು 'ಅಕ್ರಮ' ಎಂದಾಗದಂತೆ ನೋಡಿಕೊಳ್ಳುತ್ತೇವೆ. ಈ ಮೂಲಕ ಭ್ರಷ್ಟಾಚಾರವನ್ನೂ ತಡೆಗಟ್ಟಬಹುದಾಗಿದೆ ಎಂದು ಮಾನ್ಯ ನಿಧಾನಮಮಂತ್ರಿಗಳು ಅಭಿಪ್ರಾಯಪಟ್ಟಿರುವುದಾಗಿ ಬೊಗಳೆ ರಗಳೆ ಬಿಟ್ಟು ಉಳಿದೆಲ್ಲ ಮಾಧ್ಯಮಗಳಲ್ಲಿ ವರದ್ದಿಯಾಗಿಲ್ಲ.

Friday, June 01, 2012

ಕಚೇರಿಗೆ ಪ್ರವಾಹ: ಎಚ್ಚೆತ್ತ ಬೊಗಳೂರು ಬ್ಯುರೋ


[ಬೊಗಳೂರು ಎಚ್ಚೆತ್ತ ಬ್ಯುರೋದಿಂದ]
ಬೊಗಳೂರು, ಜೂ.1- ಈ ಸುದ್ದಿ ಓದಿದ ಬಳಿಕ ಬರೋಬ್ಬರಿ 2 ತಿಂಗಳಿನಿಂದ ನಿದ್ರಾಪೀಡಿತರಾಗಿದ್ದ ಬೊಗಳೆ ರಗಳೆ ಬ್ಯುರೋದ ಮಂದಿಯ ಕಣ್ಣುಗಳಿಗೇ ನೀರು ಬಿದ್ದ ಕಾರಣ, ದಿಢೀರನೇ ಎಚ್ಚೆತ್ತುಕೊಂಡು ಸಿದ್ಧಪಡಿಸಿದ ವರದ್ದಿಯಿದು.

ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಬೊಗಳೂರಿನಾದ್ಯಂತ ಎಲ್ಲ ಆಫೀಸುಗಳು, ದೊಡ್ಡ ದೊಡ್ಡ ಕಟ್ಟಡಗಳೆಲ್ಲವೂ ನೀರಿನಲ್ಲಿ ಮುಳುಗೇಳುತ್ತಿದ್ದವು. ಈ ಕಾರಣದಿಂದಾಗಿಯೇ ನೀರಿನ ಪ್ರಮಾಣ ಹೆಚ್ಚಾಗಿ ಬೊಗಳೂರು ಸಿಬ್ಬಂದಿಗೆ ಎಚ್ಚೆತ್ತುಕೊಳ್ಳಲು ಸಹಾಯವಾಯಿತು.

ಅಳುವೇ ಪರಮೌಷಧ ಎಂದು ಇಲ್ಲಿ ಪ್ರಕಟವಾಗಿರುವುದರಿಂದಾಗಿಯೇ ಕಚೇರಿಗೆ ನೀರು ನುಗ್ಗಿದು ಎಂಬುದು ಅನುಭವಕ್ಕೆ ಬಂದಿತು. ಹಾಗಾದರೆ ಅಳುವುದು ಒಳ್ಳೆಯದು ಎಂದು ಹೇಳಿರುವುದರಿಂದ, ಬೊಗಳೂರಿನ ಪ್ರತಿಯೊಂದು ಟೀವಿ ಚಾನೆಲ್ಲುಗಳಲ್ಲಿ ಬರುವ ಧಾರಾವಾಹಿಗಳನ್ನು ಮತ್ತಷ್ಟು ಎಳೆದರೆ ಒಳ್ಳೆಯದಲ್ಲವೇ ಎಂಬ ಸಲಹೆಯೂ ಬೊಗಳೂರು ಮಂದಿಯಿಂದ ಕೇಳಿಬಂತು.

ಅತ್ತರೆ ಯಶಸ್ಸು ದೊರೆಯುತ್ತದೆ ಎಂಬುದು ಈ ಸಂಚೋದನೆಯ ಸಾರವಾಗಿರುವುದರಿಂದಲೇ ಪ್ರೇರೇಪಣೆಗೊಂಡು ಕಚೇರಿಯಲ್ಲಿರೋ ಮಹಿಳೆಯರೆಲ್ಲ ಅಳತೊಡಗಿದ್ದರು. ಮತ್ತು ಧಾರಾವಾಹಿ ನಿರ್ದೇಶಕರಿಗೂ ಇದೇ ಪ್ರ-ಚೋದನೆಯಾಗಿತ್ತು ಎಂಬುದನ್ನು ಬೊಗಳೂರು ಅಸತ್ಯಾನ್ವೇಷಿ ಬ್ಯುರೋ ಪತ್ತೆ ಹಚ್ಚಿದೆ.

ಬಹುಶಃ ಅತ್ತುಬಿಟ್ಟರೆ ಸಾಕು, ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬ ಗಾದೆ ಶೀಘ್ರವೇ ಸೃಷ್ಟಿಯಾಗಲಿರುವುದರಿಂದ, ಬೊಗಳೂರು ಬ್ಯುರೋ ಮತ್ತೆ ಮಲಗಲು ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...