Wednesday, September 12, 2012

9/11: ಬೊಗಳೆಯ ಬ್ಲಾಗಿಲು ಧಢಾರ್ ತಟ್ಟಿದ ವಿಕ!


[ಬೊಗಳೂರು 9/11 ಬ್ಯುರೋದಿಂದ]
ಬೊಗಳೂರು, ಸೆ.12- ಸೆಪ್ಟೆಂಬರ್ 11 ಎಂದರೆ ದೊಡ್ಡಣ್ಣ ಅಮೆರಿಕದ ಮೇಲೆ ದಾಳಿಯಾದ, ಇಡೀ ವಿಶ್ವವೇ ಶೋಕ ಆಚರಿಸುವ ದಿನ. 9/11 ಅಂತಲೇ ಪ್ರಸಿದ್ಧಿಪಡೆದಿರುವ ಆ ದಿನವೇ ಬೊಗಳೆ ರಗಳೆಯ ಕೈಬೆರಳಿನಷ್ಟು ಓದುಗರ ಲಕ್ಷಕ್ಕೆ ಸಾಟಿಯಾಗಬಲ್ಲ ಪ್ರತಿಸ್ಪರ್ಧಿ ಪತ್ರಿಕೆ ವಿಕ, ಬೊಗಳೆ ರಗಳೆಯ ಮಿಕವನ್ನು ಹಿಡಿದು ಬ್ಲಾಗಿಲಿನೊಳಗೆ ಧಢಾರ್ ಎಂದು ಹಾಕಿರುವುದು ಇಡೀ ಜಗತ್ತಿನಲ್ಲಿ ಪ್ರಳಯದ ಮುನ್ಸೂಚನೆಯಷ್ಟು ಸದ್ದು ಮಾಡಿರುವುದಾಗಿ ಹೇಳಲಾಗುತ್ತಿದೆ.

ಬೊಗಳೆಯ ಬ್ಲಾಗಿಲನ್ನು ನೋಡಿ 9/11 ಅನುಭವ ಆಗಿದೆ ಎಂದು ವಿಶ್ವಾದ್ಯಂತ ಹರಡಿ ಹಂಚಿ ಹೋಗಿರುವ ಬೊಗಳೆ ರಗಳೆಯ ಅಳಿದುಳಿದ ಒಂದುವರೆಯಷ್ಟು ಓದುಗರು ಇಂದು ತಿಳಿಸಿದ ಬಳಿಕವಷ್ಟೇ ಬೊಗಳೂರು ಬ್ಯುರೋ ಎಚ್ಚೆತ್ತುಕೊಂಡು ಈ ವರದ್ದಿ ಪ್ರಕಟಿಸುತ್ತಿದೆ.

* ಸ್ಪಷ್ಟನೆ: ಕೈಬೆರಳಿನಷ್ಟು ಓದುಗರ ಲಕ್ಷಕ್ಕೆ ಸಾಟಿಯಾಗಬಲ್ಲ ಪತ್ರಿಕೆ ಎಂದು ನಿಂದಿಸಿದ್ದಕ್ಕಾಗಿ ಅಂತರಜಾಲದ ಅಂತರಪಿಶಾಚಿಯಾಗಿರುವ ಬೊಗಳೆ ರಗಳೆ ಬ್ಯುರೋದಿಂದ ಗಂಭೀರವಾಗಿ ಸ್ಪಷ್ಟನೆ ಕೇಳುವ ಸಾಧ್ಯತೆಗಳಿರುವುದರಿಂದ ಈ ರೀತಿ ಸ್ಪಷ್ಟನೆ ನೀಡಲು ನಾವು ಸಿದ್ಧವಾಗಿರುವುದಾಗಿ ತಿಳಿದುಬಂದಿದೆ.

ಬೊಗಳೆ ರಗಳೆಯ ಏಕ ಸದಸ್ಯ ಬ್ಯುರೋದಲ್ಲಿ ಇರುವವರೆಲ್ಲರ ಕೈಬೆರಳುಗಳನ್ನು ಒಟ್ಟು ಸೇರಿಸಿದರೆ, ಎಷ್ಟೇ ಕಷ್ಟ ಪಟ್ಟರೂ 10 ಮೀರಲಾರದು. ಹೀಗಾಗಿಯೇ ಬೇರೆಲ್ಲಾ ಪತ್ರಿಕೆಗಳನ್ನು ಹಿಂದಿಕ್ಕೆ, ಆರೇಳು ಲಕ್ಷ ಓದುಗ ವರ್ಗವನ್ನು ಹೊಂದಿ ನಂ.1 ಆಗಿರುವ ಪತ್ರಿಕೆಗೆ ನಮ್ಮ ಬ್ಯುರೋದ ಮಂದಿಯ ಅಷ್ಟೂ (10) "ಲಕ್ಷ" ಓದುಗರಿಲ್ಲ ಎಂಬುದನ್ನು ಘಂಟಾಘೋಷವಾಗಿ ಸಾರಲಾಗಿದೆ ಎಂದು ಸ್ಪಷ್ಟನೆ ನೀಡಲಾಗುತ್ತದೆ ಎನ್ನಲಾಗಿದೆ ಎಂದು ಹೇಳಲಾಗಿದೆ ಅಂತ ಊಹಾಪೋಹಗಳು ಕೇಳಿಬಂದಿರುವುದಾಗಿ ತಿಳಿದುಬಂದಿರುವುದನ್ನು ನಿರಾಕರಿಸಲಾಗಿದೆ.

ವಿಜಯ ಕರ್ನಾಟಕದಲ್ಲಿ ಇದನ್ನು ಪ್ರಕಟಿಸಿರುವುದಕ್ಕೆ ಸಂಬಂಧಪಟ್ಟವರಿಗೆ ಅಸತ್ಯವಲ್ಲದ ಧನ್ಯವಾದ.

Monday, September 10, 2012

ಹೃದಯ ಶಸ್ತ್ರಚಿಕಿತ್ಸೆ: ಪ್ರೇಮಿಗಳ ತಳಮಳ


[ಬೊಗಳೂರು ಲವ್ ಬ್ಯುರೋದಿಂದ]
ಬೊಗಳೂರು, ಸೆ.10- ಪ್ರೇಮಿಗಳು ಬೆಚ್ಚಿ ಬಿದ್ದಿದ್ದಾರೆ. ಒಂದಾದ ಮತ್ತು ಒಂದಾದ ಹೃದಯಗಳಿಗೆ ಈ ಜಗತ್ತಿನಲ್ಲಿ ಜಾಗವೇ ಇಲ್ಲವೆಂಬಂತಹಾ ಪರಿಸ್ಥಿತಿಯಿಂದ ಅವರು ತತ್ತರಿಸಿ ಹೋಗಿದ್ದಾರೆ. ಇದಕ್ಕೆ ಕಾರಣ ಇಲ್ಲಿ ಪ್ರಕಟವಾಗಿರುವ "ಜೋಡಿಸಿದ ಹೃದಯ ಹೊರತೆಗೆದ ಹೃದಯಾಲಯ" ಎಂಬ ವರದ್ದಿ.

ಕದ್ದು ಮುಚ್ಚಿ ಪ್ರೇಮ ಮಾಡಲು ಕೂಡ ಈ ಜಗತ್ತಿನಲ್ಲಿ ಯಾರು ಕೂಡ ಬಿಡುತ್ತಿಲ್ಲ. ಎಲ್ಲಿದ್ದರೂ ಟಿವಿ ಕ್ಯಾಮರಾಗಳು ಸುಳಿದಾಡುತ್ತಿರುತ್ತವೆ, ಮಾಧ್ಯಮದ ಮಂದಿ ಬೆನ್ನು ಬೀಳುತ್ತಿದ್ದಾರೆ. ಈ ಕಾರಣಕ್ಕೆ ಅನ್ಯಥಾ ಶರಣಂ ನಾಸ್ತಿ ಅಂತ ತಾವು ಹೃದಯಗಳನ್ನು ಒಳಗಿಂದೊಳಗೇ ಜೋಡಿಸಿಕೊಂಡರೆ, ಈ ವೈದ್ಯರು ಅದಕ್ಕೂ ಬಿಡುತ್ತಿಲ್ಲ ಎಂಬುದು ಪ್ರೇಮಿಗಳ ಸಂಘದ ಅಧ್ಯಕ್ಷ ಪ್ರೇಮಕುಮಾರ್ ಅವರ ಅಭಿಮತ.

ಕೃತಕ ಹೃದಯ ಅಳವಡಿಸಲಾಗಿತ್ತು ಎಂದು ರೋಗಿಯು ಹೇಳಿದರೂ, ಅದು ನಿಜಕ್ಕೂ ತನ್ನ ಪ್ರಿಯತಮೆಯ ಹೃದಯ ಎಂದು ತಮ್ಮನ್ನು ಸಂದರ್ಶಿಸಿದ ಬೊಗಳ ರಗಳೆ ಬ್ಯುರೋದ ಎದುರು ಈ ತಥಾಕಥಿತ 'ರೋಗಿ'ಯು ಹೇಳಿಕೊಂಡಿರುವುದಾಗಿ ವರದ್ದಿಯಾಗಿದೆ.

ಕೃತಕ ಎಂದು ಹೇಳಲಾಗುತ್ತಿರುವ ಪ್ರೇಯಸಿಯ ಹೃದಯ ಜೋಡಿಸಿದ ಬಳಿಕವಷ್ಟೇ ತನ್ನ ಹೃದಯ ಸರಿಯಾಗಿ ಕಾರ್ಯ ನಿರ್ವಹಿಸಲಾರಂಭಿಸಿತ್ತು. ನಾವಿಬ್ಬರೂ ಜೊತೆಯಾಗಿಯೇ ಬಾಳಲು ನಿರ್ಧರಿಸಿದ್ದೇವೆ. ಹೀಗಾಗಿ ರಕ್ತದಲ್ಲೂ ಒಂದಾಗುವ ಹಂಬಲದಿಂದ ಎರಡೆರಡು ಹೃದಯಗಳೊಂದಿಗೆ ಬದುಕುತ್ತಿದ್ದೆ, ಪ್ಲೀಸ್ ನಮ್ಮನ್ನು ನಮ್ಮಷ್ಟಕ್ಕೇ ಬಿಡಿ ಎಂದು ಅವರು ಹೇಳಿಕೊಂಡಿದ್ದಾರೆ.

ಈ ಹೊಸ ವಿದ್ಯಮಾನದಿಂದ ಬೊಗಳೂರಿನಾದ್ಯಂತ ಇರುವ ಪ್ರೇಮಿಗಳು ಕಳವಳಗೊಂಡಿದ್ದು, ಶೀಘ್ರದಲ್ಲೇ ತುರ್ತು ಸಭೆ ಸೇರಿ ಹೃದಯಾಲಯದ ಈ ಅಮಾನವೀಯ ಕೃತ್ಯದ ವಿರುದ್ಧ ಸಿಡಿದೇಳಲು ನಿರ್ಧರಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಹೆಚ್ಚಿನ ತನಿಖೆ ನಡೆಯುತ್ತಿದೆ.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...