ಬೊಗಳೆ ರಗಳೆ

header ads

9/11: ಬೊಗಳೆಯ ಬ್ಲಾಗಿಲು ಧಢಾರ್ ತಟ್ಟಿದ ವಿಕ!


[ಬೊಗಳೂರು 9/11 ಬ್ಯುರೋದಿಂದ]
ಬೊಗಳೂರು, ಸೆ.12- ಸೆಪ್ಟೆಂಬರ್ 11 ಎಂದರೆ ದೊಡ್ಡಣ್ಣ ಅಮೆರಿಕದ ಮೇಲೆ ದಾಳಿಯಾದ, ಇಡೀ ವಿಶ್ವವೇ ಶೋಕ ಆಚರಿಸುವ ದಿನ. 9/11 ಅಂತಲೇ ಪ್ರಸಿದ್ಧಿಪಡೆದಿರುವ ಆ ದಿನವೇ ಬೊಗಳೆ ರಗಳೆಯ ಕೈಬೆರಳಿನಷ್ಟು ಓದುಗರ ಲಕ್ಷಕ್ಕೆ ಸಾಟಿಯಾಗಬಲ್ಲ ಪ್ರತಿಸ್ಪರ್ಧಿ ಪತ್ರಿಕೆ ವಿಕ, ಬೊಗಳೆ ರಗಳೆಯ ಮಿಕವನ್ನು ಹಿಡಿದು ಬ್ಲಾಗಿಲಿನೊಳಗೆ ಧಢಾರ್ ಎಂದು ಹಾಕಿರುವುದು ಇಡೀ ಜಗತ್ತಿನಲ್ಲಿ ಪ್ರಳಯದ ಮುನ್ಸೂಚನೆಯಷ್ಟು ಸದ್ದು ಮಾಡಿರುವುದಾಗಿ ಹೇಳಲಾಗುತ್ತಿದೆ.

ಬೊಗಳೆಯ ಬ್ಲಾಗಿಲನ್ನು ನೋಡಿ 9/11 ಅನುಭವ ಆಗಿದೆ ಎಂದು ವಿಶ್ವಾದ್ಯಂತ ಹರಡಿ ಹಂಚಿ ಹೋಗಿರುವ ಬೊಗಳೆ ರಗಳೆಯ ಅಳಿದುಳಿದ ಒಂದುವರೆಯಷ್ಟು ಓದುಗರು ಇಂದು ತಿಳಿಸಿದ ಬಳಿಕವಷ್ಟೇ ಬೊಗಳೂರು ಬ್ಯುರೋ ಎಚ್ಚೆತ್ತುಕೊಂಡು ಈ ವರದ್ದಿ ಪ್ರಕಟಿಸುತ್ತಿದೆ.

* ಸ್ಪಷ್ಟನೆ: ಕೈಬೆರಳಿನಷ್ಟು ಓದುಗರ ಲಕ್ಷಕ್ಕೆ ಸಾಟಿಯಾಗಬಲ್ಲ ಪತ್ರಿಕೆ ಎಂದು ನಿಂದಿಸಿದ್ದಕ್ಕಾಗಿ ಅಂತರಜಾಲದ ಅಂತರಪಿಶಾಚಿಯಾಗಿರುವ ಬೊಗಳೆ ರಗಳೆ ಬ್ಯುರೋದಿಂದ ಗಂಭೀರವಾಗಿ ಸ್ಪಷ್ಟನೆ ಕೇಳುವ ಸಾಧ್ಯತೆಗಳಿರುವುದರಿಂದ ಈ ರೀತಿ ಸ್ಪಷ್ಟನೆ ನೀಡಲು ನಾವು ಸಿದ್ಧವಾಗಿರುವುದಾಗಿ ತಿಳಿದುಬಂದಿದೆ.

ಬೊಗಳೆ ರಗಳೆಯ ಏಕ ಸದಸ್ಯ ಬ್ಯುರೋದಲ್ಲಿ ಇರುವವರೆಲ್ಲರ ಕೈಬೆರಳುಗಳನ್ನು ಒಟ್ಟು ಸೇರಿಸಿದರೆ, ಎಷ್ಟೇ ಕಷ್ಟ ಪಟ್ಟರೂ 10 ಮೀರಲಾರದು. ಹೀಗಾಗಿಯೇ ಬೇರೆಲ್ಲಾ ಪತ್ರಿಕೆಗಳನ್ನು ಹಿಂದಿಕ್ಕೆ, ಆರೇಳು ಲಕ್ಷ ಓದುಗ ವರ್ಗವನ್ನು ಹೊಂದಿ ನಂ.1 ಆಗಿರುವ ಪತ್ರಿಕೆಗೆ ನಮ್ಮ ಬ್ಯುರೋದ ಮಂದಿಯ ಅಷ್ಟೂ (10) "ಲಕ್ಷ" ಓದುಗರಿಲ್ಲ ಎಂಬುದನ್ನು ಘಂಟಾಘೋಷವಾಗಿ ಸಾರಲಾಗಿದೆ ಎಂದು ಸ್ಪಷ್ಟನೆ ನೀಡಲಾಗುತ್ತದೆ ಎನ್ನಲಾಗಿದೆ ಎಂದು ಹೇಳಲಾಗಿದೆ ಅಂತ ಊಹಾಪೋಹಗಳು ಕೇಳಿಬಂದಿರುವುದಾಗಿ ತಿಳಿದುಬಂದಿರುವುದನ್ನು ನಿರಾಕರಿಸಲಾಗಿದೆ.

ವಿಜಯ ಕರ್ನಾಟಕದಲ್ಲಿ ಇದನ್ನು ಪ್ರಕಟಿಸಿರುವುದಕ್ಕೆ ಸಂಬಂಧಪಟ್ಟವರಿಗೆ ಅಸತ್ಯವಲ್ಲದ ಧನ್ಯವಾದ.

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

ಏನಾದ್ರೂ ಹೇಳ್ರಪಾ :-D