Wednesday, October 10, 2012

ಬ್ರೇಕಿಂಗ್: ನೆಹರೂ-ಗಾಂಧಿ ಪಶು ಶಿಕ್ಷಣ ಯೋಜನೆಯಲ್ಲಿ ಭಾರೀ ಹಗರಣ


[ನಿರಂತರ ಹಗರಣ ನಿರತ ಬ್ಯುರೋದಿಂದ]
ಬೊಗಳೂರು, ಅ.10- ಕೇಂದ್ರ ಸರಕಾರದ ಮತ್ತೊಂದು ಹಗರಣ ಬಯಲಿಗೆ ಬಂದಿದೆ. ಕೋಲ್ಗೇಟ್, ಗ್ರಾನೈಟ್ ಗೇಟ್, 2ಜಿ ಗೇಟ್, ಕಾಮನ್ವೆಲ್ತ್ ಗೇಟ್ ಮುಂತಾದವುಗಳ ಭರಾಟೆಯ ಬಳಿಕ ಇದೀಗ ಬೆಳಕಿಗೆ ಬಂದಿರುವುದು ಗೋ-ಗೇಟ್!

ಬೊಗಳೂರು ಬ್ಯುರೋದ ಅನ್ವೇಷಕರು ಪತ್ತೆ ಹಚ್ಚಿದ ಪ್ರಕರಣ ಹೀಗಿದೆ:

ವಿದ್ಯಾವಿಹೀನಂ ಪಶು ಸಮಾನಂ ಎಂಬ ಮಾತನ್ನು ಕೇಳಿದ ಕೇಂದ್ರದ ಉಪ (UPA) ಸರಕಾರದ ಮುಖ್ಯಸ್ಥೆಯಾಗಿರುವ ಇಟಲಿ ಮೂಲದ ಸೋನಿಯಾ ಗಾಂಧಿ ಅವರು, ಈ ಸಂಸ್ಕೃತ ಶ್ಲೋಕವನ್ನು ಚೆನ್ನಾಗಿ ಅರ್ಥೈಸಿಕೊಳ್ಳಲು ಹೋಗಿದ್ದು. ಪಶು ಎಂದರೆ ಪ್ರಾಣಿಗಳು ಎಂಬ ಅರ್ಥವಿರುವುದರಿಂದ ಇನ್ನು ಮುಂದೆ ವಿದ್ಯೆ ಇಲ್ಲದವರನ್ನು ನಾಯಿ-ನರಿ-ಹಸು-ಮಂಗ-ಕತ್ತೆ ಮುಂತಾಗಿ ಪ್ರಾಣಿಗಳ ಹೆಸರಿನಲ್ಲಿ ಕರೆಯದಂತಾಗಬೇಕು.

ಇದಕ್ಕೆ ರೂಪುಗೊಂಡಿರುವ ಯೋಜನೆಯೇ ನೆಹರೂ-ಗಾಂಧಿ ಪಶು ಶಿಕ್ಷಣ ಯೋಜನೆ (NGPSY). ಈ ಯೋಜನೆಯ ಉದ್ದೇಶವೆಂದರೆ, ಪಶುಗಳಿಗೇ ಶಿಕ್ಷಣ ಕೊಡಿಸಿಬಿಟ್ಟರೆ, ಯಾರು ಕೂಡ ವಿದ್ಯಾವಿಹೀನಂ ಪಶು ಸಮಾನಂ ಅಂತ ಲೇವಡಿ ಮಾಡುವಂತಿಲ್ಲ!

ಪಶುಗಳಿಗೆ ಬಾಲ ಅಲ್ಲಾಡಿಸುವುದು ಹೇಗೆ, ಹಿಂದೆ ಬಂದರೆ ಒದೆಯುವುದು ಹೇಗೆ, ಮುಂದೆ ಹೋದರೆ ಹಾಯುವುದು ಹೇಗೆ, ಪುಸ್ತಕ ಓದುವಂತೆ ನಟಿಸುವುದು ಹೇಗೆ, ಕಂಪ್ಯೂಟರುಗಳ ಬಳಿ ಇರುವ ಇಲಿಗಳನ್ನು ಬೆಕ್ಕಿನಿಂದ ಕಾಪಾಡುವುದು ಹೇಗೆ ಮುಂತಾದ ಪಠ್ಯ ಕ್ರಮಗಳನ್ನು ರೂಪಿಸಲು ಕೇಂದ್ರ ಸರಕಾರವು 1880 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ. ಇದು ಬಡ ತೆರಿಗೆದಾರರ ಹಣ. ಈ ಹಣ ಎಲ್ಲಿ ಹೋಗಿದೆ ಎಂದು ಯಾವುದೇ ಪಶುಗಳನ್ನು ಕೇಳಿದರೂ ಕೂಡ ಬಾಯಿ ಬಿಡುತ್ತಿಲ್ಲ. ಯಾಕೆಂದರೆ 'ಸುಶಿಕ್ಷಿತ' ಎನಿಸಿಕೊಂಡಿರುವ ಪಶುಗಳಿಗೆ ಬಾಯಿ ಮುಚ್ಚಲು ಮಾತ್ರವೇ ಕಲಿಸಲಾಗಿದೆ ಎಂಬುದು ಮೂಕಪ್ರಾಣಿಗಳ ಹೋರಾಟ ಸಂಘದ ಅಧ್ಯಕ್ಷ ವಟವಟಾಳ್ ಮೇಘರಾಜ್ ಅವರ ಅಭಿಮತ.

ಅವರೇ ಆರ್‌ಟಿಐ ಅರ್ಜಿಯ ಮೂಲಕ ಈ ಹಗರಣವನ್ನು ಬಯಲಿಗೆಳೆದಿದ್ದು, ಇಷ್ಟು ಮೊತ್ತ ಹಣ ಎಲ್ಲಿಗೆ ಹೋಗಿದೆಯೆಂಬುದೇ ತಿಳಿದುಬಂದಿಲ್ಲ. ಮಾಹಿತಿಹಕ್ಕು ಕಾಯಿದೆಯಡಿ ಅವರು ಸಲ್ಲಿಸಿದ್ದ ಅರ್ಜಿಯು ಹಲವಾರು ಇಲಾಖೆಯೊಳಗೆ ಹೋಗಿ ಬಂದಿದ್ದು, ಪಶು ಸಂಗೋಪನಾ ಇಲಾಖೆಯಿಂದ ಬಂದಿರುವ ಉತ್ತರದಲ್ಲಿ ಖಾಲಿ ಕಾಗದ ಮಾತ್ರವೇ ಇತ್ತು! ಈ ಬಗ್ಗೆ ವಿಚಾರಿಸಿದಾಗ, ಈ ಉತ್ತರ ಬರೆಯಲು ಬಳಸಿದ ಇಂಕ್ ಕಳಪೆ ಗುಣಮಟ್ಟದ್ದಾಗಿದ್ದು, ಇದರ ಹಗರಣವನ್ನೂ ಬಯಲಿಗೆಳೆಯಿರಿ ಎಂಬ ಮೌಖಿಕ ಉತ್ತರವೂ ದೊರೆಯಿತು ಎಂದು ವಟವಟಾಳ್ ಮೇಘರಾಜ್ ತಿಳಿಸಿದ್ದಾರೆ.

Monday, October 08, 2012

ಬ್ರೇಕಿಂಗ್: ಬಂದ್‌ನಿಂದಾಗಿ ತಮಿಳುಕಾಡಿಗೆ ಹೆಚ್ಚು ಹರಿದ ಕಾವೇರಿ!


[ಧಾssssssssssರಾವಾಹಿ ಪ್ರಸಾರ ಬ್ಯುರೋದಿಂದ]
ಬೊಗಳೂರು, ಅ.8- ಮೊನ್ನೆ ಬೆಂಗಳೂರು ಬಂದ್ ಮಾಡಿದ್ದರಿಂದ ಏನೂ ಪ್ರಯೋಜನವಾಗಿಲ್ಲ, ಆದರೆ ಇಡೀ ಕರ್ನಾಟಕವನ್ನೇ ಬಂದ್ ಮಾಡಿದ ಪರಿಣಾಮವಾಗಿ ಬೊಗಳೂರು ಇರುವ ತಮಿಳುನಾಡಿಗೆ ಭಾರೀ ಪ್ರಮಾಣದಲ್ಲಿ ಕಾವೇರಿ ನೀರು ಹರಿದಿದೆ.

ಭಾರೀ ಬರದ ಭರಾಟೆಯ ನಡುವೆಯೂ ತಮಿಳುನಾಡಿಗೆ ಹೆಚ್ಚು ನೀರು ಹರಿಯಲು ಕಾರಣವೇನೆಂಬುದನ್ನು ಬೊಗಳೆ ಬ್ಯುರೋ ಮೊನ್ನೆಯಷ್ಟೇ ಬಿತ್ತರಿಸಿ ವಿಶ್ವಾದ್ಯಂತ ಹರಡಿಕೊಂಡಿರುವ ಕೋಟ್ಯಂತರ ಲಕ್ಷಾಂತರ ಮಂದಿಯಲ್ಲಿ ಒಂದೆರಡು ಓದುಗರಲ್ಲಿ ಆಕ್ರೋಶವನ್ನೂ ಮೂಡಿಸಿತ್ತು.

ಈಗ ಮತ್ತೊಂದು ನಿಜವಾದ ಬ್ರೇಕಿಂಗ್ ನ್ಯೂಸ್ ದೊರೆತಿದೆ. ಶನಿವಾರ ನಡೆಸಿದ ಕರ್ನಾಟಕ ಬಂದ್‌ನಿಂದಾಗಿ ತಮಿಳುನಾಡಿಗೆ ಹೆಚ್ಚು ಹೆಚ್ಚು ನೀರು ಪ್ರವಾಹದೋಪಾದಿಯಲ್ಲಿ ಹರಿದಿದೆ.

ಇದಕ್ಕೆ ಕಾರಣವೆಂದರೆ, ಕೇಬಲ್ ಮಾಲೀಕರು ಮನರಂಜನಾ ಚಾನೆಲ್‌ಗಳನ್ನು ಬಂದ್ ಮಾಡಿರುವುದು. ಮನೆಯಲ್ಲಿ ಧಾರಾವಾಹಿಗಳಿಗಾಗಿಯೇ ತಮ್ಮೆಲ್ಲಾ ಕಣ್ಣೀರನ್ನು ಕಟ್ಟಿಟ್ಟುಕೊಂಡು ಕುಳಿತಿದ್ದ ನಾರೀಮಣಿಯರು, ಮನರಂಜನಾ ಚಾನೆಲುಗಳು ಬಂದ್ ಆಗಿದ್ದರಿಂದಾಗಿ ಧಾರಾವಾಹಿಯಿಲ್ಲದೆ ಕಂಗಾಲಾಗಿದ್ದರು.

ಅವರು ಧಾರಾವಾಹಿಯಲ್ಲಿ ಬರುವ ಸನ್ನಿವೇಶಗಳಿಗಾಗಿ ಕಣ್ಣಲ್ಲಿ ಕಟ್ಟಿಟ್ಟುಕೊಂಡ ನೀರನ್ನೆಲ್ಲಾ, ಧಾರಾವಾಹಿಗಳು ಇಲ್ಲದಂತೆ ಮಾಡಿದ ಜಯಲಲಿತಾಗೆ ಹಿಡಿಶಾಪ ಹಾಕುತ್ತಾ, ಕಾವೇರಿಗಾಗಿ ಹರಿಸಿಯೇಬಿಟ್ಟರು. ಅವರ ಕನ್ನಂಬಾಡಿ ಕಟ್ಟೆ ಒಡೆದು ಭಾರೀ ಪ್ರಮಾಣದಲ್ಲಿ ಬೊಗಳೂರಿಗೆ ನೀರು ಹರಿಯಿತು. ತಾನೀಗ ಫುಲ್ ಖುಷ್ ಆಗಿರುವುದಾಗಿ ಸ್ವತಃ ಜಯಲಲಿತಾ ಅವರೇ ಫೋನ್ ಮಾಡಿ ಬೊಗಳೆ ರಗಳೆ ಬ್ಯುರೋಗೆ ತಿಳಿಸಿ, ಅಭಿನಂದಿಸಿದರು.

Thursday, October 04, 2012

ಬ್ರೇಕಿಂಗ್: ತಮಿಳುನಾಡಿಗೆ ಹೆಚ್ಚು ನೀರು ಹರಿಯಲು ಕಾರಣ!


[ಕಾವೇರಿ ಕಣ್ಣೀರ ಕಟ್ಟೆ ಬ್ರೇಕಿಂಗ್ ಬ್ಯುರೋದಿಂದ]
ಬೊಗಳೂರು, ಅ.4- ಕರ್ನಾಟಕವು ಬೊಗಳೂರು ಇರುವ ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂ ಕೋರ್ಟು ಆದೇಶಿಸಿರುವುದು ಕರ್ನಾಟಕದಲ್ಲಿ ಕಾವು ಏರಿಸಿರುವಂತೆಯೇ, ತಮಿಳುನಾಡಿನ ಬೊಗಳೂರು ಕಚೇರಿಗೂ ನೀರು ನುಗ್ಗಿ ಬಂದಿರುವುದರ ಹಿಂದಿನ ರಹಸ್ಯವೇನೆಂದು ತಪಾಸಣೆ ನಡೆಸಲು ಬೊಗಳೂರು ಬ್ಯುರೋ ನಿರ್ಧರಿಸಿ ಈ ವರದ್ದಿ ತಂದು ಸುರುವಿದೆ.

ಬೊಗಳೆ ಬ್ಯುರೋ ಇರುವುದರಿಂದಾಗಿ ತಮಿಳುನಾಡಿಗೆ ನೀರು ಬಿಡಬಾರದು ಎಂದು ಕರ್ನಾಟಕದ ರೈತರು ತೀವ್ರವಾಗಿ ಆಗ್ರಹಿಸುತ್ತಾ, ಬುಧವಾರ ಕನ್ನಂಬಾಡಿ ಕಟ್ಟೆ ಒಡೆಯಲು ಸಿದ್ಧರಾಗುತ್ತಿದ್ದಂತೆಯೇ, ಕರ್ನಾಟಕದಿಂದ ಸುಪ್ರೀಂ ಕೋರ್ಟು ಸೂಚಿಸಿದ 9 ಸಾವಿರ ಕ್ಯೂಸೆಕ್‌ಗಿಂತಲೂ ಹೆಚ್ಚು ಪ್ರಮಾಣದ ನೀರು ಹರಿದು ಬಂದಿರುವುದೇ ಈ ರೀತಿ ಬೊಗಳೂರು ಕಚೇರಿಗೂ ಪ್ರವಾಹ ನುಗ್ಗಲು ಕಾರಣ ಎಂಬುದು ಗೊತ್ತಾಗಿದೆ.

ಆದರೆ ಇದರ ಮೂಲವು ಕೊಡಗಿನ ತಲಕಾವೇರಿಯೇ ಎಂದು ಶೋಧಿಸಹೊರಟಾಗ ಬೊಗಳೂರು ಬ್ಯುರೋಗೆ ಫ್ಲ್ಯಾಶ್ ನ್ಯೂಸ್ ಒಂದು ಸಿಕ್ಕಿದೆ. ಅದೇನೆಂದರೆ ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚುವರಿ ನೀರು ಹರಿದುಬರಲು ಕಾರಣ ಬೇರೇನೂ ಅಲ್ಲ, ಕರ್ನಾಟಕದ ರೈತರ ಕಣ್ಣೀರಿನ ಕಟ್ಟೆ ಒಡೆದಿರುವುದೇ ಆಗಿದೆ!

ಕರ್ನಾಟಕದ ಕಾವೇರಿ ಕೊಳ್ಳದ ರೈತರು ತಮ್ಮ ಬೆಳೆಗಳಿಗೆ ನೀರಿಲ್ಲದೆ ಮತ್ತು ಈಗ ಬೊಗಳೂರಿಗೆ ಸ್ಪರ್ಧೆ ನೀಡುತ್ತಿರುವ ಬೆಂಗಳೂರಿಗೂ ನೀರು ಹರಿಸುವುದನ್ನು ನಿಲ್ಲಿಸಿದ ಪರಿಣಾಮ ಬೆಂಗಳೂರಿಗರೂ ಕಣ್ಣೀರು ಹರಿಸುತ್ತಿರುವುದರಿಂದ, ಕನ್ನಂಬಾಡಿ ಕಟ್ಟೆಯು ಒಡೆದಿತ್ತು. ಈ ಕಣ್ಣೀರ ಹರಿವೇ ಬೊಗಳೂರಿನಲ್ಲಿ ಪ್ರವಾಹಕ್ಕೆ ಕಾರಣವೆಂದು ಕಂಡುಕೊಳ್ಳಲಾಗಿದೆ.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...