Thursday, December 05, 2013

ಕಂಡಲ್ಲಿ ಗುಂಡು: ರಾಜ್ಯದಲ್ಲಿ ಮದ್ಯ ವ್ಯಾಪಾರ ಜೋರು

[ಬೊಗಳೆ ಗುಂಡು ಬ್ಯುರೋದಿಂದ]
ಬೊಗಳೂರು, ಡಿ.2: ರಾಜ್ಯ ಸರಕಾರವು ಬೆಂಗಳೂರಿನಿಂದ ಬೆಳಗಾವಿಗೆ ಶಿಫ್ಟ್ ಆಗಿ, ಅಲ್ಲಿಂದಲೇ ಕಂಡ ಕಂಡಲ್ಲಿ ಗುಂಡಿಕ್ಕಲು ಆದೇಶ ನೀಡಿರುವ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲ ಮದ್ಯ ಕೇಂದ್ರಗಳಲ್ಲಿ, ದ್ರಾಕ್ಷಾರಸಕ್ಕೆ, ತಾಳೆ ರಸಕ್ಕೆ, ಗೇರು ಕೊಳೆಸಿದ ರಸಕ್ಕೆ ಬೇಡಿಕೆ ಹೆಚ್ಚಾಗಿದೆ ಎಂಬ ಅಂಶವನ್ನು ಬೊಗಳೆ ರಗಳೆ ಬ್ಯುರೋ ಪತ್ತೆ ಮಾಡಿದೆ.

ನರ ಭಕ್ಷಕ ಹುಲಿ ಜಾತಿಗೆ ಸೇರಿದ ಪ್ರಾಣಿಗಳಿಗೆ ಗುಂಡಿಕ್ಕಲು ಆದೇಶ ನೀಡಿದ್ದರೂ, ಹೊಸ ಸರಕಾರ ಅಸ್ತಿತ್ವಕ್ಕೆ ಬಂದಂದಿನಿಂದಲೂ ಹಾಲು ಭಾಗ್ಯದ ಸವಿಯುಣ್ಣುತ್ತಿರುವ ಜನರು, ಆಲ್ಕೋಹಾಲು ಭಾಗ್ಯಕ್ಕಾಗಿಯೇ ಕಾತರದಿಂದ ಕಾಯುತ್ತಿದ್ದರು. ಅಗ್ಗದ ಆಲ್ಕೋಹಾಲು ಕೂಡ ಸಿಗುತ್ತದೆ ಎಂದು ತುದಿಗಾಲಲ್ಲಿ ನಿಂತಿದ್ದರು.

ಆದರೆ ಈಗ ಕಂಡ ಕಂಡಲ್ಲಿ ಗುಂಡು ಹಾಕಬಹುದು ಎಂಬ ಸರಕಾರದ ಘೋಷಣೆಯನ್ನೇ ಕಟ್ಟಾಜ್ಞೆ ಎಂದು ಪರಿಗಣಿಸಿದವರೆಲ್ಲರೂ, ನಿಂತಲ್ಲೇ ಕುಂತಲ್ಲೇ, ಎದ್ದಲ್ಲಿ, ಬಿದ್ದಲ್ಲಿ ಗುಂಡು ಹಾಕಲಾರಂಭಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿಲ್ಲ.

Wednesday, November 20, 2013

BARKING ನ್ಯೂಸ್: ಮೂಗು ತೂರಿಸುವವರೆಂದು ತೋರಿಸಿಕೊಳ್ಳಲು ಮೂಗು ದೊಡ್ಡದು!

[ಬೊಗಳೂರು ಮೂಗು ತೂರಿಸೋ ಬ್ಯುರೋದಿಂದ]
ಬೊಗಳೂರು, ನ.20: ಬೊಗಳೂರು ಮತ್ತೆ ಎಚ್ಚೆತ್ತಾಗ ಯಾರ್ಯಾರಿಗೋ ರತ್ನಳನ್ನು ನೀಡಲಾಗಿತ್ತು. ಹಾಗೇ ಒಂದು ಸುತ್ತು ತಿರುಗಿದಾಗ ಸಿಕ್ಕಿದ ಸುದ್ದಿ ಇದು.

ಯಾರು ಮೂಗು ತೂರಿಸುತ್ತಾರೋ, ಅವರ ಮೂಗು ದೊಡ್ಡದಿರುವುದಿಲ್ಲ; ಆದರೆ ಮೂಗು ತೂರಿಸದೇ ಇರುವವರ ಮೂಗು ದೊಡ್ಡದು. ಹೀಗಾಗಿ ಅವರು ಪ್ರತಿಯೊಂದಕ್ಕೂ ಮೂಗು ತೂರಿಸಿದಂತೆ ಕಾಣಿಸೋದು ಮಾತ್ರ ಎಂಬ ಅಸತ್ಯಾಂಶವನ್ನು ಬೊಗಳೂರು ಬ್ಯುರೋ ಸಂಚೋದನೆಯ ಮೂಲಕ ಬಯಲಿಗೆಳೆದಿದೆ.

ಬೇರೆಯವರ ಕೆಲಸದಲ್ಲಿ ಅನವಶ್ಯ ಮೂಗು ತೂರಿಸಲು ಇದು ಕೂಡ ನೆರವಾಗುತ್ತದೆ ಎಂಬ ವಾದ ಮಾಡುವವರಿಗೆ ಪೂರಕವಾಗಿರುವ ಸುದ್ದಿಗಳನ್ನು ಪ್ರಕಟಿಸುತ್ತಿರುವ ಬೊಗಳೂರು ಬ್ಯುರೋಗೆ ಪ್ರತಿಸ್ಪರ್ಧೆ ಒಡ್ಡುತ್ತಿರುವ ಏಕೈಕ ಲೈನ್‌ನಲ್ಲಿರುವ (ಆನ್ ಲೈನ್) ಪತ್ರಿಕೆಯ ವಿರುದ್ಧ ಅವಮಾನ ಹಾನಿ ಮೊಕದ್ದಮೆ ಹೂಡುವ ಕುರಿತು ಚಿಂತನೆ ನಡೆಸಲಾಗುತ್ತದೆ ಎನ್ನಲಾಗುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ನಮ್ಮ ಬಾತ್ಮೀದಾರರು ವರದ್ದಿ ಮಾಡಿರುವುದಾಗಿ ಎಸ್ಸೆಮ್ಮೆಸ್ ಸಂದೇಶವೊಂದು ಅನಾಮಿಕರ ಹೆಸರಿನಲ್ಲಿ ನಮ್ಮ ಇನ್‌ಬಾಕ್ಸ್‌ಗೆ ಬಿದ್ದಿದ್ದನ್ನು ನಮ್ಮ ವರದ್ದಿಗಾರರು ಬ್ಯುರೋ ಮುಖ್ಯಸ್ಥರಿಗೆ ಫಾರ್ವರ್ಡ್ ಮಾಡಿದ್ದಾರೆ ಎನ್ನಲಾಗುತ್ತಿದೆಯೆಂದು ತಿಳಿದುಬಂದಿರುವುದಾಗಿ ಅನ್ಯ ಪತ್ರಿಕೆಗಳಲ್ಲಿ ಪ್ರಕಟವಾಗಿದೆಯೆಂದು ಪ್ರತ್ಯಕ್ಷದರ್ಶಿಗಳನ್ನು ಉದ್ದೇಶಿಸಿ ಸಂಶೋಧನಾ ಲೇಖನವೊಂದು ಪ್ರಕಟವಾಗಿರುವುದಾಗಿ ಬೊಗಳೆ ರಗಳೆಯಲ್ಲೇ ಪ್ರಕಟಿಸಬೇಕೆಂದು ಓದುಗರು ಒತ್ತಾಯಿಸಿದ್ದಾರೆಂದು ತಿಳಿದುಬಂದಿರುವುದಾಗಿ ಹೇಳಲಾಗುತ್ತಿದೆ ಎಂದು..... Zzzzzzz!

Tuesday, October 29, 2013

ಬೊಗಳೆ ಬ್ರೇಕ್: ಮಧ್ಯ ಪ್ರದೇಶದಲ್ಲಿ ಯಾರಿಗೂ ಕೈಗಳೇ ಇಲ್ಲ!

[ಬೊಗಳೂರು ಕರ-ಕಮಲ ಬ್ಯುರೋದಿಂದ]
ಬೊಗಳೂರು, ಅ.29- ಮಧ್ಯಪ್ರದೇಶದಲ್ಲಿ ಇತ್ತಿತ್ತಲಾಗಿ ಯಾರಿಗೂ ಕೈಗಳೇ ಇಲ್ಲದಿರುವುದರ ಹಿಂದಿನ ತಥ್ಯ ಬಯಲಾಗಿದೆ.

ಇದಕ್ಕೆಲ್ಲಾ ಕಾರಣವೆಂದರೆ, ಅಲ್ಲಿ ಶೀಘ್ರವೇ ನಡೆಯುವ ಚುನಾವಣೆಗಳು. ಜನರನ್ನು ಸುಲಿಗೆ ಮಾಡುವ, ಅಗತ್ಯವಸ್ತುಗಳ ಬೆಲೆ ಏರಿಸುತ್ತಾ ಎಲ್ಲರೂ ಈ ಲೋಕದಿಂದಲೇ ಹೊರಟು ಹೋಗುವಂತೆ ಮಾಡಿ, ತಾವು ಮಾತ್ರ ಒಂದ್ರೂಪಾಯಿಗೆ ಐಷಾರಾಮಿ ಊಟ ಸೇವಿಸುತ್ತಾ ಇರುವ ಮತ್ತು ಬೆಲೆಯನ್ನು ರಾಕೆಟ್ ಬಾಲಕ್ಕೆ ಕಟ್ಟಿ ಏರಿಸುತ್ತಾ, ಅದರ ಹಿಂದೆಯೇ ಹೋಗುವ ಜನ ಸಾಮಾನ್ಯರೂ ಕೂಡ ಆಕಾಶದಲ್ಲೇ ತೇಲಾಡುವಂತೆ ಮಾಡುತ್ತಿರುವ, ಜನರ ತೆರಿಗೆ ಹಣವನ್ನು ನುಂಗುತ್ತಿರುವ ರಾಜಕಾರಣಿಗಳಿಗೆ ಮತ ಹಾಕುವವರಿಗೆ ಮೆದುಳೇ ಇಲ್ಲ ಎಂಬ ವಾದವೂ ಇದ್ದರೂ, ಈಗ ಕೈಗಳೇ ಇಲ್ಲದಿರುವುದರ ಹಿಂದಿನ ಗುಟ್ಟೇನು ಎಂದು ಅನ್ವೇಷಿಗಳು ಮತ್ತೊಮ್ಮೆ ನಿದ್ರಾಭಂಗಗೊಂಡು ತನಿಖೆ ಆರಂಭಿಸಿದಾಗ ವಿಷಯ ತಿಳಿದಿದೆ.

ವಿಷಯವಿಷ್ಟೆ. ಮಧ್ಯ ಪ್ರದೇಶದಲ್ಲಿರುವ ಎಲ್ಲ ಪಾರ್ಕುಗಳು, ಕೆರೆಗಳು, ಉದ್ಯಾನಗಳಲ್ಲಿ ತಾವರೆ ಹೂವುಗಳು ಅರಳಿ ನಿಂತಿವೆ. ಅವುಗಳನ್ನು ನೋಡಿದಾಕ್ಷಣ ಜನರು ಪ್ರಚೋದನೆಗೊಂಡು ಕಮಲದ ಚಿಹ್ನೆಯುಳ್ಳ ಬಿಜೆಪಿಗೇ ಮತ ಹಾಕುತ್ತಾರೆ ಎಂಬುದು CONಗ್ರೆಸ್ ಆರೋಪ.

ಈ ಕಾರಣಕ್ಕೆ ಚುನಾವಣಾ ಆಯೋಗಕ್ಕೆ ಅದು ದೂರು ನೀಡಿರುವುದಾಗಿ ಇಲ್ಲಿ ವರದ್ದಿಯಾಗಿದೆ.

ಇದಕ್ಕೆ ಪ್ರತಿಯಾಗಿ ಕಮಲದ ಪಕ್ಷದವರೂ ಚುನಾವಣಾ ಆಯೋಗಕ್ಕೆ ದೂರು ನೀಡಿ, "ಎಲ್ಲರಲ್ಲಿಯೂ ಕೈಗಳಿವೆ. ಅದು ಕಾಂಗ್ರೆಸ್ ಚಿಹ್ನೆ. ಅವುಗಳನ್ನೆಲ್ಲಾ ಕತ್ತರಿಸಿ, ಚುನಾವಣೆಗಳು ಮುಗಿಯುವವರೆಗೆ ಯಾರಿಗೂ ಕಾಣದಂತೆ ಇರಿಸಬೇಕು" ಎಂದು ಆಗ್ರಹಿಸಿದೆ.

ಹೀಗಾಗಿ, ಆ ರಾಜ್ಯದಲ್ಲಿ ಇತ್ತೀಚೆಗೆ ಯಾರ ಕೈಗಳೂ ಗೋಚರಿಸುತ್ತಿಲ್ಲ ಎಂದು ಅನ್ವೇಷಿ ಪತ್ತೆ ಹಚ್ಚಿದ ಬಳಿಕ, ಮತ್ತೊಮ್ಮೆ ಧಡಾರನೇ ಬಾಗಿಲು ಹಾಕಿಕೊಂಡು ಮಲಗಿರುವುದಾಗಿ ವರದ್ದಿಯಾಗಿದೆ.

Wednesday, October 02, 2013

ಬೊಗಳೆ ಬ್ರೇಕ್: ನೇತಾಗಳಿಂದ ಗಾಂಧಿಗಿರಿ, ಜೈಲ್ ಭರೋ ಚಳವಳಿ

[ಬೊಗಳೂರು ಗಾಂಧಿವಾದಿ ಬ್ಯುರೋದಿಂದ]
ಬೊಗಳೂರು, ಅ.2: ತಡೆಯಲಾರದ ನಿದ್ದೆಯಿಂದ ಮತ್ತೆ ಎಚ್ಚೆತ್ತುಕೊಂಡಿರುವ ಬೊಗಳೆ ರಗಳೆ ಬ್ಯುರೋ, ಗಾಂಧಿ ಗಿರಿ ಕುರಿತು ವಿಶೇಷ ವರದ್ದಿ ಪ್ರಕಟಿಸುವ ಮುಲಾಜಿಗೆ ಒಳಗಾಗಿದೆ.

ಲಾಲ್ ಬಹಾದೂರ್ ಶಾಸ್ತ್ರಿ ಜನ್ಮದಿನದಂದು ಕೂಡ ಗಾಂಧಿಗಿರಿ ಪ್ರದರ್ಶಿಸುವ ಗೋಜಿಗೆ ಸಿಲುಕಿರುವ ಬೊಗಳೂರು ಏಕ ಸದಸ್ಯ ಬ್ಯುರೋದ ಸೊಂಪಾದ-ಕರು, ಓದುಗರು, ವರದ್ದಿಗಾರರು, ವಿತರಕರು... ಹೀಗೆ ಮಲ್ಟಿಟಾಸ್ಕಿಂಗ್ ಪರಿಣತರು ದೇಶವಿಡೀ ಓಡಾಡಿದಾಗ, ದೇಶದಲ್ಲಿ ಎಲ್ಲ ಭ್ರಷ್ಟಾಚಾರಿಗಳು ಗಾಂಧಿಗಿರಿ ಅನುಸರಿಸುತ್ತಿರುವುದು ಗಮನಕ್ಕೆ ಬಂದಿದೆ.

ಬ್ರಿಟಿಷ್ ಸರಕಾರದ ವಿರುದ್ಧ ಹೋರಾಡಿದ್ದ ಗಾಂಧೀಜಿ, ಬ್ರಿಟಿಷ್ ಸರಕಾರ ವಿರುದ್ಧ ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, ವಾಕಿಂಗ್ ಮುಂತಾದ ಚಳವಳಿಗಳನ್ನು ಅಹಿಂಸೆಯಿಂದಲೇ ಮಾಡಿದ್ದರು ಮತ್ತು ಅದೆಷ್ಟೋ ಬಾರಿ ಸ್ವಯಂಪ್ರೇರಿತವಾಗಿ ಜೈಲ್ ಭರೋ ಚಳವಳಿಯನ್ನೂ ಮಾಡಿದ್ದರು. ಇದೇ ಗಾಂಧಿಗಿರಿಯನ್ನು ಅನುಸರಿಸುತ್ತಿರುವ ಈಗಿನ ರಾಜಕಾರಣಿಗಳು ಕೂಡ ಜೈಲ್ ಭರೋ ಚಳವಳಿಗೆ ಮುಂದಾಗಿದ್ದಾರೆ.

ತೀರಾ ಮೊನ್ನೆಯ ಪ್ರಕರಣವೆಂದರೆ ಅಸತ್ಯ'ಮೇವು' ಜಯತೇ ಎಂದೇ ಪ್ರತಿಪಾದಿಸುತ್ತಿರುವ ಬಿಹಾರದ ಮಾಜಿ ಮುಖ್ಯಮಂತ್ರಿ, Fodder ಆಫ್ ದಿ ನೇಷನ್, ಲಲ್ಲೂ ಪ್ರಸಾದ್ ಯಾದವ್ ಜೈಲ್ ಭರೋಗೆ ಚಾಲನೆ ನೀಡಿದ್ದಾರೆ. ಅವರ ಬೆನ್ನಿಗೇ ಮತ್ತೊಬ್ಬ ಸಂಸದ, ವೈದ್ಯರಾಗಲು ಅನರ್ಹರಾಗಿದ್ದರೂ ಅವರಿಗೆ ಎಂಬಿಬಿಎಸ್ ಸೀಟು ಕೊಡಿಸಿ ಔದಾರ್ಯ ಮೆರೆದ ರಶೀದ್ ಮಸೂದ್ ಕೂಡ ಜೈಲು ಪಾಲಾಗಿದ್ದಾರೆ.

ಇದಕ್ಕಿಂತ ಮುನ್ನ ಕರ್ನಾಟಕದಲ್ಲಿಯೂ ಸಾಕಷ್ಟು ಮಂದಿ ಕೇವಲ ಮಣ್ಣಂಗಟ್ಟಿ ಕೆಲಸ ಮಾಡಿದ್ದಕ್ಕಾಗಿ ಅದಾಗಲೇ ಜೈಲು ಯಾತ್ರೆ ಆರಂಭಿಸಿಬಿಟ್ಟಿದ್ದಾರೆ. ರೆಡ್ಡಿ- ಯಡ್ಡಿಗಳು, ಮತ್ತು ಅವರಿಗೆ ಊರುಗೋಲಾಗಿದ್ದ ಹಲವು ಕಡ್ಡಿಗಳು ಈಗಾಗಲೇ ಜೈಲು ಪಾಲಾಗಿದ್ದು, ಇನ್ನು ಕೆಲವರು ಜೈಲಿನಗಾಗಿ ಇದಿರು ನೋಡುತ್ತಿದ್ದಾರೆ.

ಬೆಲೆ ಏರಿಕೆಯ ಈ ಯುಗದಲ್ಲಿ, ಉಚಿತ ಅನ್ನಾಹಾರ, ನಿದ್ರೆ ಇತ್ಯಾದಿ ದೊರೆಯಬಹುದಾದ ಜೈಲು ಸೇರುವುದೇ ಒಳಿತು ಎಂಬುದು ಈ ಜಾರಕಾರಣಿಗಳ ಕ್ರಮದ ಹಿಂದಿನ ಪ್ರಧಾನ ಉದ್ದೇಶವಾಗಿದ್ದರೂ, ಗಾಂಧೀಜಿಯೇ ಜೈಲ್ ಭರೋ ಅಂತ ಸಾರಿರುವಾಗ, ನಾವು ಅದನ್ನೇ ಅನುಸರಿಸುತ್ತಿದ್ದೇವೆ ಎಂದು ಚೆನ್ನಾಗಿಯೇ ಹೇಳಿಕೊಳ್ಳತೊಡಗಿದ್ದಾರೆ ಈ ಕುಳಗಳು. ಇವರೊಂದಿಗೆ ಈಗಾಗಲೇ ಆಟಿಕೆ ಪಿಸ್ತೂಲು ಹಿಡಿದುಕೊಂಡಿದ್ದ ಮುನ್ನಾಭಾಯಿ ಎಂಬಿಬಿಎಸ್ ಕೂಡ ಜೈಲು ಸೇರಿ, ಸಮಜಾ ಸೇವೆಯ ಬಳಿಕ ಸಮಾಜಸೇವೆಯ ಜ್ಞಾನೋದಯವಾಗಿ, ಗಾಂಧಿಗಿರಿಯಿಂದಾಗಿಯೇ ಹೊರಗೆ ಬಂದಿದ್ದಾರೆ.

ಜಾರಕಾರಣಿಗಳ ಗಾಂಧಿಗಿರಿಯ ಜೈಲು ಅಭಿಯಾನ ಶೀಘ್ರವೇ ಮೇರೆ ಮೀರಲಿದೆ. ಆದರೆ, ಜೈಲಿನಿಂದಲೇ ಚುನಾವಣೆ ಸ್ಪರ್ಧಿಸುವಂತಾಗಲು ಕೇಂದ್ರದಲ್ಲಿರುವ ಸುಗ್ರೀವ ಸೇನೆಯ ಮಂದಿ ಆಜ್ಞೆಯನ್ನೂ ಹೊರಡಿಸಲು ಸಿದ್ಧತೆ-ಬದ್ಧತೆ ವ್ಯಕ್ತಪಡಿಸಿದ್ದಾರೆ ಎಂಬುದು ಏನೂ ಗೊತ್ತಿಲ್ಲದ ಮೂಲಗಳಿಂದ ತಿಳಿದುಬಂದ ವಿಚಾರ.

Thursday, April 04, 2013

ಬೊಗಳೂರು ಫ್ಲ್ಯಾಶ್: ಆಂಟಿಯ ರೇಪ್ ಬಿಲ್‌ಗೆ ಅಂಕಿತ


[ಬೊಗಳೂರು ರೇಪ್ ಬ್ಯುರೋದಿಂದ]
ಬೊಗಳೂರು, ಏ.5- ಆಂಟಿಯ ರೇಪ್ ಬಿಲ್‌ಗೆ ರಾಷ್ಟ್ರಪತಿಗಳು ಅಂಕಿತ ಮುದ್ರೆ ಹಾಕಿರುವಂತೆಯೇ ಬೊಗಳೂರಿನಲ್ಲಿ ಸಂಚಲನವೆದ್ದಿದೆ.

ಫೇಸ್‌ಬುಕ್ಕಿನಲ್ಲಿ ಪೋಕ್ ಮಾಡುವವರಿಗೂ ಆಂಟಿಯ ರೇಪ್ ಬಿಲ್ ಅನ್ವಯವಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮತ್ತೆ ಮತ್ತೆ ಸಚಿವರಾಗಲು ಹಂಬಲಿಸುತ್ತಿರುವ ಮಾಜಿ ಕೇಂದ್ರ ಸಚಿವರೂ, ಅದಕ್ಕೂ ಹೆಚ್ಚಿನದಾಗಿ ಅತ್ಯಂತ ಖ್ಯಾತ ಮಾಜಿ ರಾಜ್ಯಪಾಲರೂ ಆಗಿರುವ ಏನ್‌ಡೀ ಛೀವಾರಿಯವರು, ಹಾಗೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಮಧ್ಯೆ, ಕರುನಾಟಕದ ರಾಜಕೀಯದಲ್ಲಿ ಬಿಗ್‌ಬಾಸ್‌ನಿಂದ ಹೊರದೂಡಲ್ಪಟ್ಟು ನೇರವಾಗಿ ಫ್ಯಾನಿನಡಿ ಬಂದು ಬಿದ್ದ ನರ್ಸ್‌ಲಕ್ಷ್ಮಿ ಅವರು ರೇಣುಕಾಚಾರ್ಯ ವಿರುದ್ಧ ಸ್ಪರ್ಧಿಸುವುದಕ್ಕೂ ಅಂಗೀಕಾರಗೊಂಡಿರುವ ಆಂಟಿಯ ರೇಪ್ ಬಿಲ್‌ಗೂ ಸಂಬಂಧವಿದೆಯೇ ಎಂಬ ಕುರಿತು ಸಂಚೋದನೆಗಳು ನಡೆಯುತ್ತಿರುವುದಾಗಿ ತಿಳಿದುಬಂದಿದೆ.

Thursday, March 21, 2013

ಚುನಾವಣೆ ಘೋಷಣೆ: ಮೇ 8ರಿಂದ ಪೂರ್ತಿ ಬುಕ್ ಆಗಿವೆ ರೆಸಾರ್ಟ್‌ಗಳು

[ಬೊಗಳೂರು ರೆಸಾರ್ಟ್ ವರದ್ದಿ ಬ್ಯುರೋದಿಂದ]
ಬೊಗಳೂರು, ಮಾ.21- ಜಗತ್ತಿನಾದ್ಯಂತ ಚುನಾವಣೆ ಘೋಷಣೆಯಾಗಿದೆ ಎಂದು ಯಾರೋ ಹೇಳಿದಾಕ್ಷಣ ಮತ್ತೊಮ್ಮೆ ನಿದ್ದೆಯಿಂದ ಎಚ್ಚೆತ್ತ ಬೊಗಳೆ ರಗಳೆ ಬ್ಯುರೋ, ಸುದ್ದಿ ಪ್ರಕಟಣೆ ಮರುಪ್ರಾರಂಭಿಸಿದೆ.

ರೆಸಾರ್ಟಿನಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆಯುತ್ತಿದ್ದಾಗ ಆಘಾತಕಾರಿಯೋ ಎಂಬಂತೆ ಈ ಚುನಾವಣೆ ಆದೇಶವು ಮೈಮೇಲೆ ಬಿದ್ದಾಕ್ಷಣ ಕಣ್ಣುಜ್ಜಿಕೊಂಡು ಹೊರಗೆ ನೋಡಿದಾಗ, ಬಿಜೆಪಿ, ಕಾಂಗ್ರೆಸ್, ಕೆಜೆಪಿ, ಆಜೆಪಿ, ಈಜೆಪಿ ಮುಂತಾದ ಪಕ್ಷ-ಕಿರುಪಕ್ಷಗಳಲ್ಲಿರುವ ಶಾಸ'ಕರು'ಗಳೆಲ್ಲರೂ ಧಾವಂತದಿಂದ ಅತ್ತಿಂದಿತ್ತ ಓಡಾಡುತ್ತಿದ್ದುದು ಗಮನಕ್ಕೆ ಬಂದಿದೆ.

ಈ ಹಿನ್ನೆಲೆಯಲ್ಲಿ ತೂಕಡಿಸುತ್ತಲೇ ತನಿಖೆಗಿಳಿದಾಗ, ನಾಡಿನ ಎಲ್ಲ ರೆಸಾರ್ಟುಗಳು, ವಿಶೇಷವಾಗಿ ಬೊಗಳೂರು ಹೊರವಲಯದಲ್ಲಿರುವವುಗಳು, ಮೇ 8ರಿಂದಲೇ 'ಹೌಸ್‌ಫುಲ್' ಎಂದು ಘೋಷಿಸಿದ್ದು, ಕನಿಷ್ಠ ಪಕ್ಷ ನಾಲ್ಕೈದು ವಾರಗಳವರೆಗೆ ಬುಕಿಂಗ್ ಆಗಿವೆ ಎಂಬುದು ತಿಳಿದುಬಂದಿದೆ.

ತಾವು ಯಾವ ಪಕ್ಷದಲ್ಲಿದ್ದೇವೆ, ಅಧಿಕಾರದಲ್ಲಿದ್ದೇವೋ-ಪ್ರತಿಪಕ್ಷದಲ್ಲಿದ್ದೇವೋ ಎಂಬ ಗೊಂದಲದಲ್ಲಿಯೇ ಮುಳುಗಿರುವ ಬಿ-ಕೆ-ಜೆಪಿ ಶಾಸಕರು, ಸರ್ವತಂತ್ರ ಸ್ವತಂತ್ರರೆಲ್ಲರೂ ಈ ಬಾರಿ ಜನರು ತಮ್ಮನ್ನು ಒದ್ದೋಡಿಸಿ ಮನೆಗೆ ಕಳುಹಿಸುತ್ತಾರೋ, ಅಥವಾ ಪುನಃ ಜೋರಾಗಿ ಒದ್ದು ವಿಧಾನಸೌಧದೊಳಗೆ ಕಳುಹಿಸುತ್ತಾರೋ ಎಂಬ ಆತಂಕದಲ್ಲಿ ಮುಳುಗಿದ್ದಾರೆ.

ಯಾವುದಕ್ಕೂ ಇರಲಿ ಎಂಬುದಕ್ಕಾಗಿ ಆ ಬಣ, ಈ ಬಣಗಳೆಲ್ಲವೂ ಅಕ್ಕ-ಪಕ್ಕದಲ್ಲಿರುವ ಎಲ್ಲ ರೆಸಾರ್ಟ್‌ಗಳನ್ನು ಬುಕ್ ಮಾಡಿಕೊಂಡಿವೆ ಎಂಬುದು ತಿಳಿದುಬಂದಿದೆ. ಯಾಕೆಂದರೆ, ಮುಂದಿನ ಸರಕಾರ ರಚನೆ ಪ್ರಕ್ರಿಯೆಯು ರೆಸಾರ್ಟ್ ಮೂಲಕವೇ ಆರಂಭವಾಗುವ ಎಲ್ಲ ಸಾಧ್ಯತೆಗಳೂ ಇರುವುದರಿಂದ ಈ ಕ್ರಮ ಅನುಸರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹೆಚ್ಚಿನ ಮಾಹಿತಿಯನ್ನು ಶೀಘ್ರವೇ ರೆಸಾರ್ಟ್‌ನಿಂದಲೇ ವರದ್ದಿ ತಂದು ಸುರುವಲಾಗುತ್ತದೆ ಎಂದು ಬೊಗಳೂರು ಬ್ಯುರೋದ ದಿಕ್ಕೆಟ್ಟು ಎಚ್ಚೆತ್ತ ಸೊಂಪಾದ'ಕರು'ಗಳು ತಿಳಿಸಿದ್ದಾರೆ.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...