Tuesday, October 29, 2013

ಬೊಗಳೆ ಬ್ರೇಕ್: ಮಧ್ಯ ಪ್ರದೇಶದಲ್ಲಿ ಯಾರಿಗೂ ಕೈಗಳೇ ಇಲ್ಲ!

[ಬೊಗಳೂರು ಕರ-ಕಮಲ ಬ್ಯುರೋದಿಂದ]
ಬೊಗಳೂರು, ಅ.29- ಮಧ್ಯಪ್ರದೇಶದಲ್ಲಿ ಇತ್ತಿತ್ತಲಾಗಿ ಯಾರಿಗೂ ಕೈಗಳೇ ಇಲ್ಲದಿರುವುದರ ಹಿಂದಿನ ತಥ್ಯ ಬಯಲಾಗಿದೆ.

ಇದಕ್ಕೆಲ್ಲಾ ಕಾರಣವೆಂದರೆ, ಅಲ್ಲಿ ಶೀಘ್ರವೇ ನಡೆಯುವ ಚುನಾವಣೆಗಳು. ಜನರನ್ನು ಸುಲಿಗೆ ಮಾಡುವ, ಅಗತ್ಯವಸ್ತುಗಳ ಬೆಲೆ ಏರಿಸುತ್ತಾ ಎಲ್ಲರೂ ಈ ಲೋಕದಿಂದಲೇ ಹೊರಟು ಹೋಗುವಂತೆ ಮಾಡಿ, ತಾವು ಮಾತ್ರ ಒಂದ್ರೂಪಾಯಿಗೆ ಐಷಾರಾಮಿ ಊಟ ಸೇವಿಸುತ್ತಾ ಇರುವ ಮತ್ತು ಬೆಲೆಯನ್ನು ರಾಕೆಟ್ ಬಾಲಕ್ಕೆ ಕಟ್ಟಿ ಏರಿಸುತ್ತಾ, ಅದರ ಹಿಂದೆಯೇ ಹೋಗುವ ಜನ ಸಾಮಾನ್ಯರೂ ಕೂಡ ಆಕಾಶದಲ್ಲೇ ತೇಲಾಡುವಂತೆ ಮಾಡುತ್ತಿರುವ, ಜನರ ತೆರಿಗೆ ಹಣವನ್ನು ನುಂಗುತ್ತಿರುವ ರಾಜಕಾರಣಿಗಳಿಗೆ ಮತ ಹಾಕುವವರಿಗೆ ಮೆದುಳೇ ಇಲ್ಲ ಎಂಬ ವಾದವೂ ಇದ್ದರೂ, ಈಗ ಕೈಗಳೇ ಇಲ್ಲದಿರುವುದರ ಹಿಂದಿನ ಗುಟ್ಟೇನು ಎಂದು ಅನ್ವೇಷಿಗಳು ಮತ್ತೊಮ್ಮೆ ನಿದ್ರಾಭಂಗಗೊಂಡು ತನಿಖೆ ಆರಂಭಿಸಿದಾಗ ವಿಷಯ ತಿಳಿದಿದೆ.

ವಿಷಯವಿಷ್ಟೆ. ಮಧ್ಯ ಪ್ರದೇಶದಲ್ಲಿರುವ ಎಲ್ಲ ಪಾರ್ಕುಗಳು, ಕೆರೆಗಳು, ಉದ್ಯಾನಗಳಲ್ಲಿ ತಾವರೆ ಹೂವುಗಳು ಅರಳಿ ನಿಂತಿವೆ. ಅವುಗಳನ್ನು ನೋಡಿದಾಕ್ಷಣ ಜನರು ಪ್ರಚೋದನೆಗೊಂಡು ಕಮಲದ ಚಿಹ್ನೆಯುಳ್ಳ ಬಿಜೆಪಿಗೇ ಮತ ಹಾಕುತ್ತಾರೆ ಎಂಬುದು CONಗ್ರೆಸ್ ಆರೋಪ.

ಈ ಕಾರಣಕ್ಕೆ ಚುನಾವಣಾ ಆಯೋಗಕ್ಕೆ ಅದು ದೂರು ನೀಡಿರುವುದಾಗಿ ಇಲ್ಲಿ ವರದ್ದಿಯಾಗಿದೆ.

ಇದಕ್ಕೆ ಪ್ರತಿಯಾಗಿ ಕಮಲದ ಪಕ್ಷದವರೂ ಚುನಾವಣಾ ಆಯೋಗಕ್ಕೆ ದೂರು ನೀಡಿ, "ಎಲ್ಲರಲ್ಲಿಯೂ ಕೈಗಳಿವೆ. ಅದು ಕಾಂಗ್ರೆಸ್ ಚಿಹ್ನೆ. ಅವುಗಳನ್ನೆಲ್ಲಾ ಕತ್ತರಿಸಿ, ಚುನಾವಣೆಗಳು ಮುಗಿಯುವವರೆಗೆ ಯಾರಿಗೂ ಕಾಣದಂತೆ ಇರಿಸಬೇಕು" ಎಂದು ಆಗ್ರಹಿಸಿದೆ.

ಹೀಗಾಗಿ, ಆ ರಾಜ್ಯದಲ್ಲಿ ಇತ್ತೀಚೆಗೆ ಯಾರ ಕೈಗಳೂ ಗೋಚರಿಸುತ್ತಿಲ್ಲ ಎಂದು ಅನ್ವೇಷಿ ಪತ್ತೆ ಹಚ್ಚಿದ ಬಳಿಕ, ಮತ್ತೊಮ್ಮೆ ಧಡಾರನೇ ಬಾಗಿಲು ಹಾಕಿಕೊಂಡು ಮಲಗಿರುವುದಾಗಿ ವರದ್ದಿಯಾಗಿದೆ.

Wednesday, October 02, 2013

ಬೊಗಳೆ ಬ್ರೇಕ್: ನೇತಾಗಳಿಂದ ಗಾಂಧಿಗಿರಿ, ಜೈಲ್ ಭರೋ ಚಳವಳಿ

[ಬೊಗಳೂರು ಗಾಂಧಿವಾದಿ ಬ್ಯುರೋದಿಂದ]
ಬೊಗಳೂರು, ಅ.2: ತಡೆಯಲಾರದ ನಿದ್ದೆಯಿಂದ ಮತ್ತೆ ಎಚ್ಚೆತ್ತುಕೊಂಡಿರುವ ಬೊಗಳೆ ರಗಳೆ ಬ್ಯುರೋ, ಗಾಂಧಿ ಗಿರಿ ಕುರಿತು ವಿಶೇಷ ವರದ್ದಿ ಪ್ರಕಟಿಸುವ ಮುಲಾಜಿಗೆ ಒಳಗಾಗಿದೆ.

ಲಾಲ್ ಬಹಾದೂರ್ ಶಾಸ್ತ್ರಿ ಜನ್ಮದಿನದಂದು ಕೂಡ ಗಾಂಧಿಗಿರಿ ಪ್ರದರ್ಶಿಸುವ ಗೋಜಿಗೆ ಸಿಲುಕಿರುವ ಬೊಗಳೂರು ಏಕ ಸದಸ್ಯ ಬ್ಯುರೋದ ಸೊಂಪಾದ-ಕರು, ಓದುಗರು, ವರದ್ದಿಗಾರರು, ವಿತರಕರು... ಹೀಗೆ ಮಲ್ಟಿಟಾಸ್ಕಿಂಗ್ ಪರಿಣತರು ದೇಶವಿಡೀ ಓಡಾಡಿದಾಗ, ದೇಶದಲ್ಲಿ ಎಲ್ಲ ಭ್ರಷ್ಟಾಚಾರಿಗಳು ಗಾಂಧಿಗಿರಿ ಅನುಸರಿಸುತ್ತಿರುವುದು ಗಮನಕ್ಕೆ ಬಂದಿದೆ.

ಬ್ರಿಟಿಷ್ ಸರಕಾರದ ವಿರುದ್ಧ ಹೋರಾಡಿದ್ದ ಗಾಂಧೀಜಿ, ಬ್ರಿಟಿಷ್ ಸರಕಾರ ವಿರುದ್ಧ ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, ವಾಕಿಂಗ್ ಮುಂತಾದ ಚಳವಳಿಗಳನ್ನು ಅಹಿಂಸೆಯಿಂದಲೇ ಮಾಡಿದ್ದರು ಮತ್ತು ಅದೆಷ್ಟೋ ಬಾರಿ ಸ್ವಯಂಪ್ರೇರಿತವಾಗಿ ಜೈಲ್ ಭರೋ ಚಳವಳಿಯನ್ನೂ ಮಾಡಿದ್ದರು. ಇದೇ ಗಾಂಧಿಗಿರಿಯನ್ನು ಅನುಸರಿಸುತ್ತಿರುವ ಈಗಿನ ರಾಜಕಾರಣಿಗಳು ಕೂಡ ಜೈಲ್ ಭರೋ ಚಳವಳಿಗೆ ಮುಂದಾಗಿದ್ದಾರೆ.

ತೀರಾ ಮೊನ್ನೆಯ ಪ್ರಕರಣವೆಂದರೆ ಅಸತ್ಯ'ಮೇವು' ಜಯತೇ ಎಂದೇ ಪ್ರತಿಪಾದಿಸುತ್ತಿರುವ ಬಿಹಾರದ ಮಾಜಿ ಮುಖ್ಯಮಂತ್ರಿ, Fodder ಆಫ್ ದಿ ನೇಷನ್, ಲಲ್ಲೂ ಪ್ರಸಾದ್ ಯಾದವ್ ಜೈಲ್ ಭರೋಗೆ ಚಾಲನೆ ನೀಡಿದ್ದಾರೆ. ಅವರ ಬೆನ್ನಿಗೇ ಮತ್ತೊಬ್ಬ ಸಂಸದ, ವೈದ್ಯರಾಗಲು ಅನರ್ಹರಾಗಿದ್ದರೂ ಅವರಿಗೆ ಎಂಬಿಬಿಎಸ್ ಸೀಟು ಕೊಡಿಸಿ ಔದಾರ್ಯ ಮೆರೆದ ರಶೀದ್ ಮಸೂದ್ ಕೂಡ ಜೈಲು ಪಾಲಾಗಿದ್ದಾರೆ.

ಇದಕ್ಕಿಂತ ಮುನ್ನ ಕರ್ನಾಟಕದಲ್ಲಿಯೂ ಸಾಕಷ್ಟು ಮಂದಿ ಕೇವಲ ಮಣ್ಣಂಗಟ್ಟಿ ಕೆಲಸ ಮಾಡಿದ್ದಕ್ಕಾಗಿ ಅದಾಗಲೇ ಜೈಲು ಯಾತ್ರೆ ಆರಂಭಿಸಿಬಿಟ್ಟಿದ್ದಾರೆ. ರೆಡ್ಡಿ- ಯಡ್ಡಿಗಳು, ಮತ್ತು ಅವರಿಗೆ ಊರುಗೋಲಾಗಿದ್ದ ಹಲವು ಕಡ್ಡಿಗಳು ಈಗಾಗಲೇ ಜೈಲು ಪಾಲಾಗಿದ್ದು, ಇನ್ನು ಕೆಲವರು ಜೈಲಿನಗಾಗಿ ಇದಿರು ನೋಡುತ್ತಿದ್ದಾರೆ.

ಬೆಲೆ ಏರಿಕೆಯ ಈ ಯುಗದಲ್ಲಿ, ಉಚಿತ ಅನ್ನಾಹಾರ, ನಿದ್ರೆ ಇತ್ಯಾದಿ ದೊರೆಯಬಹುದಾದ ಜೈಲು ಸೇರುವುದೇ ಒಳಿತು ಎಂಬುದು ಈ ಜಾರಕಾರಣಿಗಳ ಕ್ರಮದ ಹಿಂದಿನ ಪ್ರಧಾನ ಉದ್ದೇಶವಾಗಿದ್ದರೂ, ಗಾಂಧೀಜಿಯೇ ಜೈಲ್ ಭರೋ ಅಂತ ಸಾರಿರುವಾಗ, ನಾವು ಅದನ್ನೇ ಅನುಸರಿಸುತ್ತಿದ್ದೇವೆ ಎಂದು ಚೆನ್ನಾಗಿಯೇ ಹೇಳಿಕೊಳ್ಳತೊಡಗಿದ್ದಾರೆ ಈ ಕುಳಗಳು. ಇವರೊಂದಿಗೆ ಈಗಾಗಲೇ ಆಟಿಕೆ ಪಿಸ್ತೂಲು ಹಿಡಿದುಕೊಂಡಿದ್ದ ಮುನ್ನಾಭಾಯಿ ಎಂಬಿಬಿಎಸ್ ಕೂಡ ಜೈಲು ಸೇರಿ, ಸಮಜಾ ಸೇವೆಯ ಬಳಿಕ ಸಮಾಜಸೇವೆಯ ಜ್ಞಾನೋದಯವಾಗಿ, ಗಾಂಧಿಗಿರಿಯಿಂದಾಗಿಯೇ ಹೊರಗೆ ಬಂದಿದ್ದಾರೆ.

ಜಾರಕಾರಣಿಗಳ ಗಾಂಧಿಗಿರಿಯ ಜೈಲು ಅಭಿಯಾನ ಶೀಘ್ರವೇ ಮೇರೆ ಮೀರಲಿದೆ. ಆದರೆ, ಜೈಲಿನಿಂದಲೇ ಚುನಾವಣೆ ಸ್ಪರ್ಧಿಸುವಂತಾಗಲು ಕೇಂದ್ರದಲ್ಲಿರುವ ಸುಗ್ರೀವ ಸೇನೆಯ ಮಂದಿ ಆಜ್ಞೆಯನ್ನೂ ಹೊರಡಿಸಲು ಸಿದ್ಧತೆ-ಬದ್ಧತೆ ವ್ಯಕ್ತಪಡಿಸಿದ್ದಾರೆ ಎಂಬುದು ಏನೂ ಗೊತ್ತಿಲ್ಲದ ಮೂಲಗಳಿಂದ ತಿಳಿದುಬಂದ ವಿಚಾರ.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...