Monday, April 09, 2018

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ]
ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ ಮುಂದೆ ಸಾಗಿದ ರೈಲಿನ ಕುರಿತಾದ ವರದ್ದಿಯೊಂದರಿಂದ ಎಚ್ಚೆತ್ತ ಬೊಗಳೆ ಏಕೈಕ ಸದಸ್ಯರ ಬ್ಯುರೋದ ಸಮಸ್ತ ಸಿಬ್ಬಂದಿ, ಚಕಿತರಾಗಿದ್ದಾರೆ.

Avinash Avi ಅವರ ಫೋಟೋ.ಇದಕ್ಕೆ ಕಾರಣ, ಬೊಗಳೆ ರಗಳೆ ಪತ್ರಿಕೆಯ ಸೊಂಪಾದಕರೇ ಯಾವತ್ತೂ ಹಳಿ ಇಲ್ಲದ ರೈಲು ಚಲಾವಣೆಯಲ್ಲಿ ನಿಸ್ಸೀಮರಾಗಿರುವಾಗ, ಅವರಿಗೆ ಸಿಗದ ಪ್ರಚಾರ, ಪ್ರಸಾರವು ಇದೀಗ ಮುಖ್ಯವಾಹಿನಿಯ ಮಾಧ್ಯಮಗಳಿಗೆ ಸಿಗುತ್ತಿರುವ ಬಗ್ಗೆ ಬೊಗಳೆ ರಗಳೆ ಪತ್ರಿಕೆಯ ಸಂಪಾದಕರೂ, ಪ್ರೂಫ್ ರೀಡರೂ, ವರದ್ದಿಗಾರರೂ, ಬೆರಳಚ್ಚು ಸಿಬ್ಬಂದಿಯೂ ಮತ್ತು ಏಕೈಕ ಓದುಗರೂ ಕೂಡ ಆಗಿರುವ ಬೊ.ರ. ಸಿಬ್ಬಂದಿ ತಗಾದೆ ಎತ್ತಿದ್ದಾರೆ.

ಹಳಿ ಇಲ್ಲದೆ ರೈಲು ಬಿಡುವವರು ಇಡೀ ಲೋಕದಲ್ಲಿ ಸಾಕಷ್ಟು ಮಂದಿ ತುಂಬಿರುವಾಗ ಎಂಜಿನ್ ಇಲ್ಲದೆಯೇ ರೈಲು ಬಿಟ್ಟವರ ವಿಷಯ ದೊಡ್ಡದೇನಲ್ಲ ಎಂಬುದು ಅವರ ಅಂಬೋಣ. ಹೀಗಾಗಿ ರೈಲ್ವೇ ಸಿಬ್ಬಂದಿ ಮೇಲೆ ಕ್ರಮ ಕೈಗೊಂಡಿರುವುದು ಅರ್ಥಹೀನ ಎಂಬುದನ್ನು ಬೊ.ರ. ತನ್ನ ತನಿಖೆಯಿಂದ ಕಂಡುಕೊಂಡಿದೆ.

Tuesday, March 06, 2018

ರಾಹುಲ್ ಕರೆ ಬಳಿಕ ಸ್ಪಿರಿಟ್ ದರ ಏರಿಕೆ

[ಬೊಗಳೂರು ಸ್ಪಿರಿಟ್ ಬ್ಯುರೋದಿಂದ]
ಬೊಗಳೂರು: ಇತ್ತೀಚೆಗೆ ಸ್ಪಿರಿಟ್‌ನ ಬೇಡಿಕೆಯೂ, ದರವೂ ಏರಿಕೆಯಾದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಮರೇಂದ್ರ ನೋದಿ ಅವರನ್ನೇ ಹೊಣೆಯಾಗಿಸುವ ಯತ್ನಗಳ ಹಿನ್ನೆಲೆಯಲ್ಲಿ ಬೊಗಳೆ ರಗಳೆಯ ಏಕಸದಸ್ಯ ಬ್ಯುರೋ ತನಿಖೆ ನಡೆಸಿತು.

ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಕಾರ್ಯಕ್ರಮವೊಂದರ ಬಳಿಕ ಸ್ಪಿರಿಟ್ ಬೇಡಿಕೆ ಮತ್ತು ದರ ಏರಿಕೆಯಾಗಿತ್ತು. ಆದರೆ, ಅಬಕಾರಿ ಇಲಾಖೆಯ ಬದಲು ತೆರಿಗೆ ಇಲಾಖೆ ಅಧಿಕಾರಿಗಳ ಕ್ರೀಡಾಕೂಟದಲ್ಲಿ ಸ್ಪಿರಿಟ್ ಬಗ್ಗೆ ಹೆಚ್ಚು ಚರ್ಚೆಯಾಗಿರುವುದರಿಂದ, ಈ ಪ್ರಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು.

ಯುವಜನರ ಆರಾಧ್ಯ ದೈವವಾಗಿರುವ ರಾಹುಲ್ ದ್ರಾವಿಡ್ ಅವರೇ ತಂಡ ತಂಡವಾಗಿ ಸ್ಪಿರಿಟ್ ಸೇವಿಸಬೇಕು, ಟೀಂ ಸ್ಪಿರಿಟ್ ಅತ್ಯಂತ ಅಗತ್ಯ ಎಂದು ಭಾಷಣದ ವೇಳೆ ಹೇಳಿರುವುದರಿಂದಾಗಿ ಜನ ಹುಚ್ಚೆದ್ದು ಸ್ಪಿರಿಟ್ ಮೊರೆ ಹೋಗಿದ್ದರು ಎಂದು ಬೊಗಳೆ-ರಗಳೆ ಏಕಸದಸ್ಯ ಬ್ಯುರೋದ ಸರ್ವ ಸಿಬ್ಬಂದಿಗಳು ಏಕಕಾಲದಲ್ಲಿ ವರದಿ ಮಾಡಿದ್ದಾರೆ.

Friday, March 02, 2018

ಪಾಕಿಸ್ತಾನದಿಂದ ಅನುಷ್ಕಾ ಚಿತ್ರ ನಿಷೇಧದ ಕಾರಣ ಪತ್ತೆ

ಪಾಕಿಸ್ತಾನವು ಅನುಷ್ಕಾ ಶರ್ಮಾ ನಟನೆಯ ಪರಿ ಚಿತ್ರವನ್ನು ಪರಿಪರಿಯಾಗಿ ನಿಷೇಧಿಸಿರುವುದರ ಹಿಂದಿನ ಕಾರಣ ಗೊತ್ತಾಗಿದೆ.

ಭಾರತ ಕ್ರಿಕೆಟ್ ತಂಡವನ್ನು ಹಿಂದಿನಂತೆ ಹೋದಲ್ಲೆಲ್ಲಾ ಚಚ್ಚಲು ಆಗುತ್ತಿಲ್ಲ. ಈಗ ಅದರ ನಾಯಕ ವಿರಾಟ ಕೋಹ್ಲಿ. ಆತನ ಗೆಳತಿಯೇ ಈ ಪರಿ ಚಲನಚಿತ್ರದಲ್ಲಿ ಹವಾ ಎಬ್ಬಿಸುತ್ತಿದ್ದಾಳೆ. ಈ ಚಿತ್ರವನ್ನೇ ನಾವು ನೋಡದೇ ಬಿಟ್ಟರೆ, ಅನುಷ್ಕಾರಿಗೆ ಆಘಾತವಾಗುತ್ತದೆ. ವಿರಾಟ್ ಕೋಹ್ಲಿಯ ಧೈರ್ಯ ಕುಂದುತ್ತದೆ. ಈ ಪರಿಯಾಗಿಯಾದರೂ ಕ್ರಿಕೆಟ್ ಗೆಲ್ಲೋಣ ಎಂಬುದು ಪಾಕಿಸ್ತಾನೀಯರ ಸಂಚು ಎಂಬುದನ್ನು ಬೊಗಳೆ ರಗಳೆ ಬ್ಯುರೋ ಹಲವಾರು ವರ್ಷಗಳ ಬಳಿಕ ಎಚ್ಚೆತ್ತುಕೊಂಡು ವರದಿ ತಯಾರಿಸಿದೆ.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...