Thursday, April 07, 2016

ತಿಮಿಂಗಿಲಗಳಿಗೆ ಸಹಕಾರ: ಪ್ರಶ್ನೆ ಪತ್ರಿಕೆ, ಬೆಲೆ ಇಳಿಕೆಗಳಿಗೂ ನಿಷೇಧ

[ಬೊಗಳೂರು ಭಾಗ್ಯಗಳ ಬ್ಯುರೋದಿಂದ]
ಬೊಗಳೂರು: ಜನರು ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದರಿಂದ ಸೀಲಿಂಗ್ ಫ್ಯಾನನ್ನೇ ನಿಷೇಧಿಸಬೇಕು ಎಂದು ಸಾರೀ ಖಾವಂತ್ ಎಂಬ ಸ್ವಘೋಷಿತ ಮಹಿಳಾ ಮಣಿ ಆಗ್ರಹಿಸಿರುವುದರಿಂದ, ಬೊಗಳೂರು ಬ್ಯುರೋ ದಿಢೀರನೇ ಮತ್ತೊಮ್ಮೆ ಎಚ್ಚೆತ್ತುಕೊಂಡಿತು.

ಅರೆ, ಇದ್ಯಾರಪ್ಪ, ನಮ್ಮ ವರದ್ದಿಯನ್ನೆಲ್ಲಾ ತಾವೇ ಘೋಷಿಸಿಕೊಳ್ಳುತ್ತಿರುವುದು ಅಂತ ಭಾವಿಸಿದ ಕಾರಣದಿಂದಾಗಿಯೇ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಯೂ ಎಚ್ಚೆತ್ತುಕೊಂಡು, ತಡಬಡಾಯಿಸಿ, ಕಂಪ್ಯೂಟರ್ ಹುಡುಕಾಡಿ, ಕೀಲಿಮಣೆಯನ್ನು ಕುಟ್ಟ ತೊಡಗಿರುವುದು ಸಕಾರಾತ್ಮಕ ಬೆಳವಣಿಗೆ ಎನ್ನಲಾಗುತ್ತಿದೆ.

ಇದೀಗ ಬೊಗಳೂರು ಬ್ಯುರೋ ನೇರವಾಗಿ ಕರು-ನಾಟಕ ಸರಕಾರದ ಅಮುಖ್ಯಮಂತ್ರಿಗಳನ್ನು ಸಂದರ್ಶನಕ್ಕೆ ಒಳಪಡಿಸಿ, ಸಾರೀ ಖಾವಂತ್‌ಳ ಹೇಳಿಕೆ ಬಗ್ಗೆ ಅಭಿಪ್ರಾಯ ಕೇಳಿತು.

ನಮ್ಮ ಪ್ರಶ್ನೆ ಪತ್ರಿಕೆ ಮೊದಲೇ ಲೀಕ್ ಆಗಿತ್ತೋ ಏನೋ, ಅವರು ಯಾವುದೇ ರೀತಿ ಎದೆಗುಂದದೆ ಉತ್ತರ ಬರೆದುಬಿಟ್ಟರು!

ಹೌದು, ನಾವು ಇನ್ನು ಮುಂದೆ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯನ್ನೇ ನಿಷೇಧಿಸುತ್ತೇವೆ, ಹಾಗಿರುವಾಗ ಯಾವ ನನ್‌ಮಗ ಅದನ್ನು ಲೀಕ್ ಮಾಡುವ ಧೈರ್ಯ ತೋರುತ್ತಾನೆ ಎಂದು ಅವರು ಪ್ರತಿ-ಪ್ರಶ್ನೆಪತ್ರಿಕೆಯನ್ನು ನಮಗೂ ಕೊಟ್ಟುಬಿಟ್ಟರು.

ಇದಲ್ಲದೆ, ಬೊಗಳೂರಿನಲ್ಲಿ ತಿಂದು ತೇಗುವ ತಿಮಿಂಗಿಲಗಳಿಗೆ ತಿನ್ನಲು ಇತ್ತೀಚೆಗೆ ಏನೇನೂ ಸಿಗುತ್ತಿಲ್ಲ. ಯಾಕೆಂದರೆ, ಅದನ್ನು ಅದಾಗಲೇ ತಿಂದು ತಿಂದು ಖಜಾನೆ ಬರಿದು ಮಾಡಲಾಗಿದೆ. ಹೀಗಾಗಿ ಇನ್ನು ಮುಂದೆ ಯಾರು ಕೂಡ ಯಾವುದೇ ಬೆಲೆಗಳನ್ನು ಇಳಿಸದಂತೆಯೂ ನಿಷೇಧ ಹೇರಲಾಗುತ್ತಿದೆ ಎಂದು ಅಮುಖ್ಯಮಂತ್ರಿಗಳು ಹೇಳಿದರು.

ಮತ್ತೊಂದೆಡೆ, ಈ ತಿಮಿಂಗಿಲಗಳಿಗೆ ತಿನ್ನುವುದಕ್ಕಾಗಿಯೇ ನಮ್ಮ ಸರಕಾರವು ಸಂಪನ್ಮೂಲ ಕ್ರೋಡೀಕರಣಕ್ಕೆ ಪ್ರಯತ್ನಿಸುತ್ತಿದೆ. ಹೀಗಾಗಿ ಆಸ್ತಿ ತೆರಿಗೆ, ರಸ್ತೆ ತೆರಿಗೆ, ಪೆಟ್ರೋಲ್ ತೆರಿಗೆ, ನೋಂದಣಿ ಶುಲ್ಕ ಇವುಗಳನ್ನೆಲ್ಲ ಹೆಚ್ಚಿಸುತ್ತೇವೆ. ಇನ್ನು ಮುಂದೆ ಯಾವ ನನ್‌ಮಗ ಆಸ್ತಿ ಖರೀದಿಸುವ ಧೈರ್ಯ ಮಾಡುತ್ತಾನೆ... ಆಸ್ತಿ ಖರೀದಿಯನ್ನೂ ನಿಷೇಧಿಸುತ್ತೇವೆ ಎಂದರವರು.

ತಿಮಿಂಗಿಲಗಳನ್ನು ಸಂತೃಪ್ತಿಗೊಳಿಸುವುದೇ ನಮ್ಮ ಬೊಗಳೂರು ಸರಕಾರದ ಮೂಲ ಧ್ಯೇಯ. ಜನರು ಹೇಗಿದ್ದರೂ ಬದುಕಲಿ ಅಥವಾ ಸಾಯಲಿ. ಬೆಲೆ ಏರಿಕೆಯಿಂದ ಅವರನ್ನು ತತ್ತರಿಸುತ್ತಿರುವಂತೆ ಮಾಡಿದರೆ, ಈ ತಿಮಿಂಗಿಲಗಳಾದರೂ ನೆಮ್ಮದಿಯಿಂದ ಬದುಕಬಹುದು. ಜನಸಂಖ್ಯೆ ಕಡಿಮೆಯಿದ್ದಷ್ಟೂ ಸಮೃದ್ಧಿ ಜಾಸ್ತಿ, ನಮ್ಮ ರಾಜ್ಯವೇ ನಂಬರ್ ಒನ್ ಆಗಬಹುದೆಂಬ ಇರಾದೆ ಎಂದು ಅವರು ವಿವರಿಸಿದರು.

ಏಕಸದಸ್ಯ ಸಿಬ್ಬಂದಿಗಳ ಸಂಖ್ಯೆ ಕಡಿತಗೊಳಿಸುವುದು ಹೇಗೆಂಬ ಯೋಚನೆಯೊಂದಿಗೆ ಬೊಗಳೂರು ಬ್ಯುರೋ ಗಂಟುಮೂಟೆ ಕಟ್ಟಿ ಅಲ್ಲಿಂದ ತೊಲಗಿತು.

Wednesday, June 17, 2015

ಬೊಗಳೆ ಬಾರ್ಕಿಂಗ್ ನ್ಯೂಸ್: ತಾಜ್ ಮಹಲಿನಲ್ಲಿ ಇನ್ನು ಫ್ರೀ ವೈಫಿಗಳು!

[ಬೊಗಳೂರು ತಾಂತ್ರಿಕಜ್ಞಾನ ಬ್ಯುರೋದಿಂದ]
ಬೊಗಳೂರು, ಜೂ.17- ಭಾರತದ ಮೋಡಿ ಸರಕಾರವು ಪ್ರೇಮಿಗಳ ಸ್ವರ್ಗಲೋಕ ಎಂದೇ ಪರಿಗಣಿಸಲ್ಪಟ್ಟ ಆಗ್ರಾದ ತಾಜಮಹಲ್ ತಾಣದಲ್ಲಿ ಉಚಿತವಾಗಿ ವೈಫ್ ಒದಗಿಸುವ ಕುರಿತ ಸುದ್ದಿ ಕೇಳಿ ಬೊಗಳೂರು ಏಕಸದಸ್ಯ ಬ್ಯುರೋದ ಸರ್ವರೂ ದಿಢೀರನೇ ಎಚ್ಚೆತ್ತುಕೊಂಡಿದ್ದಾರೆ.

ಈ ಹಾರ್ಟ್ ಬ್ರೇಕಿಂಗ್ ಸುದ್ದಿಯ ಬೆಂಬತ್ತಿ ಹೋದ ಬೊಗಳೂರು ಬ್ಯುರೋದ ಸಿಬ್ಬಂದಿಗೆ, ತಾಜ್ ಮಹಲಿನ ಸುತ್ತ ಮುತ್ತ ವೈಫಿಗಳು ಉಚಿತವಾಗಿ ಓಡಾಡುತ್ತಿರುವುದನ್ನು ಕಂಡು ಭಾರತದ ಪ್ರೇಮಿಗಳೆಲ್ಲರೂ, ವಿಶೇಷವಾಗಿ ವಿಫಲ ಪ್ರೇಮಿಗಳು ಆನಂದ ತುಂದಿಲರಾಗಿದ್ದಾರೆ.

ಒಂದೆಡೆ, ಮದುವೆಯಾಗಬೇಕಿದ್ದರೆ ವೈಫ್‌ಗಳೇ ಸಿಗುತ್ತಿಲ್ಲ. ಸ್ತ್ರೀಯರ ಜನಸಂಖ್ಯೆ ಕಡಿಮೆಯಾಗಿರುವುದರಿಂದ ಈ ಸಂಕಷ್ಟ ಎದುರಾಗಿದ್ದು, ಇದಕ್ಕಾಗಿ ಕಾಶ್ಮೀರಿ ಪಂಡಿತೆಯರನ್ನು ಮದುವೆಯಾಗುವ ಪ್ರಯತ್ನಗಳು ನಡೆಯುತ್ತಿರುವ ಹಂತದಲ್ಲೇ, ಉಚಿತ ವೈಫಿ ಒದಗಿಸುವ ಮೋಡಿ ಸರಕಾರದ ಕ್ರಮವನ್ನು ವಾಟ್ಸಾಪ್, ಫೇಸ್‌ಬುಕ್ ಬಳಕೆ ವಯಸ್ಸಿಗೆ ಪಬಂದ ಎಲ್ಲ ಗಂಡುಗಳು ಸ್ವಾಗತಿಸಿದ್ದಾರೆ.

ಜೋರಾಗಿಯೇ ಸ್ವಾಗತಿಸಿರುವ ಅವರು ತಾಜ್‌ಮಹಲ್ ಸುತ್ತಮುತ್ತಲೇ ತಮ್ಮ ಕ್ಯಾಂಪ್ ನಿರ್ಮಿಸಿಕೊಂಡಿದ್ದು, ಯಾವಾಗ ಸಿಗುತ್ತದೆ ಎಂದು ಠಿಕಾಣಿ ಹಾಕಿ ಕೂತಿದ್ದಾರೆ.

ಮೋಡಿ ಸರಕಾರದ ಈ ಘೋಷಣೆಯನ್ನು ಕೇಳಿದಾಗಲಂತೂ ಷಹಜಹಾನ್ ಕೂಡ, ನನಗೂ ಈ ವ್ಯವಸ್ಥೆ ದೊರೆಯಬಾರದಾಗಿತ್ತೇ? ವಾಟ್ಸಾಪ್‌ನಲ್ಲಿ, ಗೂಗಲ್ ಹ್ಯಾಂಗೌಟ್ಸ್ ಹಾಗೂ ಫೇಸ್‌ಬುಕ್ ಮೆಸೆಂಜರಿನಲ್ಲಿ ಮುಮ್ತಾಜ್ ಜತೆಗೆ ಚಾಟಿಂಗ್ ಮಾಡಬಹುದಿತ್ತು, ಸೆಲ್ಫೀ ಕಳುಹಿಸಬಹುದಿತ್ತು ಎಂದು ಹಿರಿಹಿರಿ ಕುಗ್ಗಿದ್ದಾರೆಂದು ನಮ್ಮ ಪರಲೋಕದ ಪ್ರತಿನಿಧಿ ಅಲ್ಲಿಂದಲೇ ವರದ್ದಿಸಿದ್ದಾರೆ.

Monday, May 25, 2015

ಮಕ್ಕಳು ಕಡಿಮೆ ಅಂಕ ಪಡೆದರೆ ದೇಶದ ಆರ್ಥಿಕ ಅಭಿವೃದ್ಧಿ

[ಬೊಗಳೂರು ಶೈ-ಕ್ಷಣಿಕ ಬ್ಯುರೋದಿಂದ]
ಬೊಗಳೂರು: ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿ ವಿದ್ಯಾರ್ಥಿಗಳು ಯಾರು ಕೂಡ ಅತೀ ಹೆಚ್ಚು ಅಂಕಗಳನ್ನು ಪಡೆಯಬಾರದು ಎಂದು ಸರಕಾರವು ಸುತ್ತೋಲೆ ಹೊರಡಿಸಿರುವುದಾಗಿ ವರದಿಯಾಗಿದೆ.

ಶೇ.90ಕ್ಕಿಂತ ಕಡಿಮೆ ಅಂಕಗಳನ್ನು ಗಳಿಸಿದಲ್ಲಿ ಅದು ದೇಶದ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸುತ್ತದೆ ಎಂದು ಬೊಗಳೂರು ಸರಕಾರದ ವಕ್ತಾರರು ಅನ್ವೇಷಿ ನೇತೃತ್ವದ ಏಕಸದಸ್ಯ ಬೊಗಳೆ ರಗಳೆ ಬ್ಯುರೋಗೆ ಸಕಲರಿಗೂ ತಿಳಿಸಿದ್ದಾರೆ.

ಇದು ಹೇಗೆ ಎಂದು ಪ್ರಶ್ನಿಸಲಾಗಿ, ಬೊಗಳೂರು ಪ್ರಧಾನಿ ಮರೇಂದ್ರ ನೋಡಿ ಅವರ ಮೂಲಕ ಒದಗಿಸಲಾದ ಉತ್ತರ ಮತ್ತು ತತ್ತರ ಹೀಗಿದೆ.

ಮಕ್ಕಳು ಜಾಸ್ತಿ ಅಂಕ ಗಳಿಸಿದರೆ, ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಸುಲಿಯಲು ಅವಕಾಶ ಸಿಗುವುದಿಲ್ಲ. ಉತ್ತಮ ಅಂಕ ಗಳಿಸಿದವರ ತಥಾಕಥಿತ ಪ್ರವೇಶ ಶುಲ್ಕ, ಬೋಧನಾ ಶುಲ್ಕ, ಟಿವಿ, ಕಂಪ್ಯೂಟರ್ ಶುಲ್ಕ, ಶಾಲೆ ದುರಸ್ತಿ ಶುಲ್ಕ, ಆಟದ ಮೈದಾನ ಇಲ್ಲದಿದ್ದರೂ ಮೈದಾನ ಶುಲ್ಕ, ಪ್ರಯೋಗಾಲಯ ಇಲ್ಲದಿದ್ದರೂ ಪ್ರಯೋಗಾಲಯ ಶುಲ್ಕ, ಲೈಬ್ರರಿ ಇಲ್ಲದಿದ್ದರೂ ಗ್ರಂಥಾಲಯ ಶುಲ್ಕ... ಮಣ್ಣು ಮಸಿ ಇತ್ಯಾದಿತ್ಯಾದಿತ್ಯಾದಿ... ಯಾವುದರಲ್ಲೂ ಹೆಚ್ಚು ಹೆಚ್ಚು ಕೀಳಲು ಬರುವುದಿಲ್ಲ. ಅಂತೆಯೇ, ಯಾವುದೇ ಅಭಿವೃದ್ಧಿಯಾಗದಿದ್ದರೂ, ಕಾಲೇಜು ಅಭಿವೃದ್ಧಿ ಶುಲ್ಕದ ಹೆಸರಲ್ಲಿಯೂ ಬಡಪಾಯಿ ವಿದ್ಯಾರ್ಥಿಗಳ ಪೋಷಕರನ್ನು ಸುಲಿಯಲು ಆಗುವುದಿಲ್ಲ.

ಆದರೆ, ಸ್ವಲ್ಪ ಕಡಿಮೆ ಅಂಕ ಗಳಿಸಿದರೆಂದಾದರೆ, ಈ ಎಲ್ಲ ರೀತಿಯ ಶುಲ್ಕಗಳನ್ನೂ ರಕ್ತ ಹೀರಿದಂತೆ ಹೀರಿದರೆ, ಕಾಲೇಜುಗಳ ಆಡಳಿತ ಮಂಡಳಿಗಳು ಉದ್ಧಾರವಾಗುತ್ತವೆ ಹಾಗೂ ಟ್ರಸ್ಟ್ ಹೆಸರಿನಲ್ಲಿ ಸಮಾಜ ಸೇವೆ ಹೆಸರಿನಲ್ಲಿ ಸಾಕಷ್ಟು ದುಡ್ಡು ಮಾಡಬಹುದು.

"ಉಚಿತ ಶಿಕ್ಷಣ ನೀಡುತ್ತೇವೆ, ಬಡ ಮಕ್ಕಳ ಉದ್ಧಾರವೇ ನಮ್ಮ ಗುರಿ. ಮಕ್ಕಳು ಕಲಿಯಬೇಕು, ಅವರಿಗೆ ಶಿಕ್ಷಣ ದೊರೆಯಬೇಕು, ಮುಕ್ತವಾಗಿ ಜ್ಞಾನ ದೊರೆಯಬೇಕು" ಎಂದೆಲ್ಲಾ ಬೊಗಳೆ ಬಿಡುವ ಜಾಹೀರಾತಿಗಾಗಿ ಖರ್ಚು ಮಾಡಲು ಸಾಕಷ್ಟು ಹಣವನ್ನು ಮಕ್ಕಳಿಂದ ಸಂಪಾದಿಸಬಹುದಾಗಿದೆ.

ಅಂಕ ಕಡಿಮೆ ತೆಗೆದಷ್ಟೂ abcdefg ಶುಲ್ಕಗಳನ್ನು ಹೆಚ್ಚಿಸುತ್ತಾ ಹೋಗಬಹುದು. ಇದರಿಂದ ದೇಶಾದ್ಯಂತ ಶಾಲಾ ಕಾಲೇಜುಗಳು ಸಮೃದ್ಧಿ ಸಂಪತ್ತಿನಿಂದ ತುಂಬಿ ತುಳುಕಾಡುತ್ತವೆ. ಈ ಸಂಪತ್ತನ್ನು ತೋರಿಸಿ, ಭಾರತ ಬಡ ದೇಶವಲ್ಲ ಎಂದು ಸಾರಿ ಸಾರಿ ಹೇಳಬಹುದು ಎಂಬುದು ಶಿಕ್ಷಣ ಸಂಸ್ಥೆಗಳ, ಶಿಕ್ಷಣ ಪ್ರತಿಷ್ಠಾನಗಳ, ಶಿಕ್ಷಣ 'ಸೇವೆ' ನೀಡುವ ಎಲ್ಲರ ಅಭಿಪ್ರಾಯ.

ಈ ಕಾರಣಕ್ಕಾಗಿಯೇ ಎಲ್ಲ ಮಕ್ಕಳೂ ಕಡಿಮೆ ಅಂಕಗಳನ್ನು ತೆಗೆಯಲು ಪ್ರಯತ್ನಿಸಬೇಕು. ಇದರಿಂದ ಹೆಚ್ಚು ಅಂಕ ಬಂದಿಲ್ಲ ಅಂತ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯೂ ಕಡಿಮೆಯಾಗುತ್ತದೆ ಎಂದು ಶಿಕ್ಷಣ ಸಚಿವ ಸುಮ್ಮನೆ ಕಿತ್ನಾಕರ ಅವರು ಸಲಹೆ ನೀಡಿರುವುದಾಗಿ ವರದಿಯಾಗಿರುವುದು ಸತ್ಯವೆಂದು ಇನ್ನೂ ಸಾಬೀತಾಗಿಲ್ಲ.

Friday, March 06, 2015

ಬೊಗಳೆ BREAK: ಕಾಂಗ್ರೆಸ್ ಅಧ್ಯಕ್ಷತೆಗೆ ನರೇಂದ್ರ ಮೋದಿ?

[ಬೊಗಳೂರು ಜಾರಕೀಯ ಬ್ಯುರೋದಿಂದ]
ಬೊಗಳೂರು, ಮಾ.06- ಇದೀಗ ನಾಪತ್ತೆಯಾಗಿರುವ ರಾಹುಲ್ ಗಾಂಧಿ ಅವರ ಸ್ಥಾನದಲ್ಲಿ ಸಮರ್ಥ ಅಭ್ಯರ್ಥಿಯನ್ನು ಪ್ರತಿಷ್ಠಾಪಿಸಲು ಒಳಗಿಂದೊಳಗೆ, ಬೂದಿ ಮುಚ್ಚಿದ ಕೆಂಡದಂತೆ ಪ್ರಯತ್ನವೊಂದು ಸದ್ದಿಲ್ಲದೆ ನಡೆಯುತ್ತಿರುವುದನ್ನು ಬೊಗಳೂರು ಬ್ಯುರೋ ಪತ್ತೆ ಹಚ್ಚಿದೆ.

ಪ್ರಸ್ತುತ ನರೇಂದ್ರ ಮೋದಿ ಎಂಬವರನ್ನು ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಿಸಲು ಭರದಿಂದ ಪ್ರಯತ್ನಗಳು ಸಾಗುತ್ತಿವೆ ಎಂಬುದನ್ನು ಏಕ ಸದಸ್ಯ ಬ್ಯುರೋದಲ್ಲಿರುವ ಸಮಸ್ತ ಸದಸ್ಯರು ತಮ್ಮಿಷ್ಟ ಬಂದಂತೆ ವರದ್ದಿಗಳನ್ನು ತಂದು ಬೊಗಳೆ ಬ್ಯುರೋದ ಬಾಗಿಲೆದುರು ತಂದು ಸುರುವಿ ಹೋಗಿದ್ದಾರೆ.

ಈಗಾಗಲೇ ದೇಶದಲ್ಲಿ ಮೋದಿ ಅಲೆಯು ಸುನಾಮಿಯಂತೆ ಕಾಂಗ್ರೆಸಿನ ಮೇಲೆ ಅಪ್ಪಳಿಸಿರುವುದರಿಂದ, ಈ ಹಿನ್ನಡೆಯನ್ನೇ ಸಾಧನೆಯಾಗಿ ಪರಿವರ್ತಿಸಬಾರದೇಕೆ ಎಂಬುದು ಕಾಂಗ್ರೆಸ್ ಲಾಗಾಯ್ತಿನಿಂದಲೂ ಚಾಣಾಕ್ಷ ನೀತಿಯ ಮೂಲಕ ಸಿದ್ಧಿ-ಪ್ರಸಿದ್ಧಿ ಗಳಿಸಿದ್ದ ಹಿರಿಯ ಕಾಂಗ್ರೆಸ್ ಮುಖಂಡರ ಪ್ರಶ್ನೆ.

ಕಾಂಗ್ರೆಸ್ ಯುವ ರಾಜ ಈಗಾಗಲೇ ಹೇಗಿದ್ದರೂ ನಾಪತ್ತೆಯಾಗಿದ್ದಾರೆ. ಈ ಕಾರಣಕ್ಕಾಗಿಯೇ, ಅವರು ಬರುವುದರೊಳಗೆ ನರೇಂದ್ರ ಮೋದಿಯನ್ನು ಪೀಠಾರೋಹಣ ನಡೆಸುವಂತೆ ಒತ್ತಡ ಹೇರಲಾಗುತ್ತಿದೆ ಎಂದು ನಂಬಲನರ್ಹ ಮೂಲಗಳು ಸ್ಪಷ್ಟಪಡಿಸಿವೆ.

ಆದರೂ, ಆಗಾಗ್ಗೆ ನಾಪತ್ತೆಯಾಗುವ ಬೊಗಳೆ ರಗಳೆ ಬ್ಯುರೋದ ಕಿರಿಕಿರಿ ಸಂಪಾದಕ, ಹಿರಿ ಸಂಪಾದಕ, ಸಂಪಾದ-ಕರುಗಳು, ವಿತರಕ, ಓದುಗ... ಹೀಗೆ ಎಲ್ಲವೂ ಆಗಿರುವ ಅಸತ್ಯಾನ್ವೇಷಿ ರೀತಿಯೇ ರಾಹುಲ್ ಗಾಂಧಿಯವರೂ ಸಂಚು ಹೂಡುತ್ತಿದ್ದಾರೆಯೇ ಎಂಬ ಬಗ್ಗೆ ಏಕೈಕ ಸದಸ್ಯರಿರುವ ಬ್ಯುರೋದ ಎಲ್ಲರೂ ತನಿಖೆಗೆ ಹೊರಟಿರುವುದಾಗಿ ಮೂಲಗಳು ಬಾಯಿ ಬಿಡಲಾರಂಭಿಸಿವೆ.

Thursday, February 05, 2015

ಬೊಗಳೆ ಬ್ರೇಕ್: ಮದುವೆಯಾಗಬೇಕೇ? ಐ ಲವ್ ಯು ಅನ್ನಿ!

[ಬೊಗಳೆ ರಗಳೆ ಪ್ರೇಮಿಗಳ ಬ್ಯುರೋದಿಂದ]
ಬೊಗಳೂರು, ಫೆ.05- ಫೆ.14ರಂದು ಎಲ್ಲೆಡೆ ಮದುವೆ ಸಮಾರಂಭಗಳಿಗೆ ಅಲ್ಲಲ್ಲಿ, ಹಾದಿಬೀದಿಗಳಲ್ಲಿ, ಗಲ್ಲಿಗಲ್ಲಿಗಳಲ್ಲಿ ಸಿದ್ಧತೆ ನಡೆಯುತ್ತಿದೆ ಎಂಬ ಸ್ಫೋಟಕ ಮಾಹಿತಿಯ ಸದ್ದು ಕೇಳಿದಾಕ್ಷಣ ಧುತ್ತನೇ ಎದ್ದುನಿಂತ ಬೊಗಳೆ ರಗಳೆ ಬ್ಯುರೋ ಸಿಬ್ಬಂದಿ, ಇದರ ಹಿಂದಿನ ಅಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು ನಿರ್ಧಾರ ಮಾಡಿರುವುದಾಗಿ ತಿಳಿದುಬಂದಿದೆ.

ಇದಕ್ಕೆಲ್ಲ ಕಾರಣ, ಫೆ.14ರಂದು ಫೇಸ್‌ಬುಕ್ ತಾಣದಲ್ಲಿ, ಐ ಲವ್ ಯು ಅಂತ ಬರೆದರೆ ಹಿಂದೂ ಮಹಾಸಭಾದವರು ತಕ್ಷಣ ಮದುವೆ ಮಾಡಿಸಿಬಿಡುತ್ತಾರೆ ಎಂಬ ಖುಷಿಯ ಸಂಗತಿ ಎಂಬುದು ಆ ಬಳಿಕ ತಿಳಿದುಬಂದಿತು.

ಇಷ್ಟಲ್ಲದೆ, ವ್ಯಾಲೆಂಟೀನ್ ದಿನದಂದು ಲವ್ ಮಾಡಿದ್ರೆ ಮದುವೆಯಾಗುವುದು ಕಡ್ಡಾಯ ಎಂಬ ಕಟ್ಟುಕಟ್ಟಳೆಗೆ ಹಿಂದು ಮಹಾಸಭಾ ಕಟ್ಟುಬಿದ್ದಿರುವುದು ಕೂಡ ಮದುವೆಯ ಸೀಸನ್ ಅರಳುವುದಕ್ಕೆ ಕಾರಣವಾಗಿದೆ.

ಮತ್ತೊಂದೆಡೆಯಲ್ಲಿ, ಈ ಗುಲಾಬಿಯು ನಿನಗಾಗಿ ಅಂತ ಕೆಂಪು ರೋಸು ಹಿಡಿದುಕೊಂಡಿದ್ದವರ ಕೈಯಿಂದ ಅದ್ಯಾರೋ ಗುಲಾಬಿ ಕಿತ್ಕೊಂಡು, ತನ್ನ ಪ್ರೇಯಸಿಗೆ ನೀಡುವ ಅಪಾಯವೂ ಇರುವುದರಿಂದ, ಗುಲಾಬಿಗಳಿಗೆ ರಕ್ಷಣೆ ನೀಡಬೇಕು ಎಂಬ ಕೂಗು ಕೂಡ ಕೇಳಿಬರತೊಡಗಿದೆ.

ಗುಲಾಬಿಯ ಮಾರಾಟ ಜಾಸ್ತಿಯಾಗಿರುವುದರಿಂದ, ಯಾರಿಗೆ ಗುಲಾಬಿ ಕೊಡಬೇಕೆಂಬುದರ ಬಗ್ಗೆ ಹಲವು ಪ್ರೇಮ ಹಕ್ಕಿಗಳು ತಲ್ಲಣ ಅನುಭವಿಸುತ್ತಿದ್ದರೆ, ಯಾರಿಂದ ಗುಲಾಬಿ ತೆಗೆದುಕೊಳ್ಳಲಿ ಎಂಬುದು ಬಹುಮುಖಿ ಪ್ರೇಮಿಗಳ ಕಳವಳ.

ಕಳೆದ ಬಾರಿ ಹಣಕಾಸು ಸಮಸ್ಯೆಯಿಂದ ಮದುವೆ ಸಮಾರಂಭ ಏರ್ಪಡಿಸುವುದು ಸಾಧ್ಯವಾಗಿರಲಿಲ್ಲ, ಈ ಬಾರಿಯಾದರೂ ಅವರನ್ನೇ ಲವ್ ಮಾಡಿ ಮದುವೆಯಾಗಬಹುದು ಎಂಬ ಯೋಚನೆಯಲ್ಲಿ ಹಲವಾರು ಜೋಡಿಗಳು ಕಾದು ಕುಳಿತಿರುವುದಾಗಿ ಮೂಲಗಳು ವರದ್ದಿ ತಂದು ಸುರಿದಿವೆ. ಈ ಬಾರಿ ವಿಶೇಷವೆಂದರೆ ಅಂತರ್‌ಧರ್ಮೀಯ ವಿವಾಹಗಳಿಗೂ ಸಾಕಷ್ಟು ಪ್ರೋತ್ಸಾಹ ನೀಡಲಾಗಿದ್ದು, ಶುದ್ಧೀಕರಣದ ಬಳಿಕ ಮದುವೆ ಮಾಡಿಸಲಾಗುತ್ತದೆಯಂತೆ. ಈ ಕಾರಣಕ್ಕಾಗಿ, ಜಾತ್ಯತೀತ ವಿವಾಹಗಳಿಗೂ ವೇದಿಕೆ ಸಿದ್ಧವಾಗುತ್ತಿದೆ.

ಫೇಸ್‌ಬುಕ್ ಮಾತ್ರವಲ್ಲದೆ, ಟ್ವಿಟರ್, ವಾಟ್ಸಾಪ್‌ಗಳಲ್ಲಿಯೂ ವ್ಯಾಲೆಂಟೀನ್ ವಾರವಿಡೀ ಪ್ರೇಮ ಸಂದೇಶಗಳನ್ನು ಕಳುಹಿಸುವವರಿಗೆ ವಿವಾಹ ಭಾಗ್ಯ ಕರುಣಿಸುವ ಯೋಜನೆಯ ಜಾರಿಗೆ ಈಗಾಗಲೇ ಪ್ರೇಮಿಗಳು ತುದಿಗಾಲಲ್ಲಿ ನಿಂತಿರುವುದಾಗಿ, ತುದಿಗಾಲಿನ ಮೇಲ್ತುದಿಯಲ್ಲಿ ಅಳವಡಿಸಲಾದ ತಲೆಯಲ್ಲಿದ್ದ ಬಾಯಿಯಿಂದ ಕೆಲವರು ಮಾಹಿತಿ ನೀಡಿದ್ದಾರೆ.


ಒಟ್ಟಿನಲ್ಲಿ, ದೇಶಾದ್ಯಂತ ಪ್ರೇಮಿಗಳು ಇದರಿಂದ ಆನಂದ ತುಂದಿಲರಾಗಿದ್ದರೆ, ಪ್ರತಿ ತಿಂಗಳೂ ಫೆಬ್ರವರಿ 14 ಬರಬಾರದೇಕೆ ಎಂದು ಹಲುಬಿದವರು ಹಲವರು.

Monday, September 15, 2014

ಬೊಗಳೆ ಹುಟ್ಟು ಹಬ್ಬಕ್ಕೆ ಕಡಿವಾಣ: ಮೋದಿ

[ಬೊಗಳೂರು ಹುಹ ಬ್ಯುರೋದಿಂದ]
ಬೊಗಳೂರು, ಸೆ.15- ಬೊಗಳೂರು ಬ್ಯುರೋದ ಏಕೈಕ ಓದುಗರೂ ಆಗಿರುವ ಸಂಸ್ಥಾಪಕ ಅಸತ್ಯದ ಅನ್ವೇಷಿ ಹುಟ್ಟು ಹಬ್ಬವನ್ನು ಇಡೀ ಭಾರತದಲ್ಲಿ ಹಿಂದೀ ದಿವಸವಾಗಿ ಆಚರಿಸುತ್ತಾ ಮತ್ತು ಪ್ರತಿಭಟನೆಯನ್ನೂ ಮಾಡುತ್ತಿರುವುದರಿಂದ ಎಚ್ಚೆತ್ತ ಕೇಂದ್ರ ಸರಕಾರವು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ ಎಂದು ಮೂಲಗಳು ವರದ್ದಿ ತಂದು ಸುರಿದಿವೆ.

ತಾಜಾ ಸುದ್ದಿಯ ಪ್ರಕಾರ, ಏಕ ಸದಸ್ಯ ಬೊಗಳೂರು ಬ್ಯುರೋದ ಸಮಸ್ತ ಸದಸ್ಯರ ಹುಟ್ಟುಹಬ್ಬವನ್ನು ಎಲ್ಲರೂ ಪರಿಪರಿಯಾಗಿ ಆಚರಿಸುತ್ತಿರುವುದರಿಂದ, ನಮ್ಮ ಜನ-ಅಪ್ರಿಯತೆಯನ್ನು ಮನಗಂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಈ ಕುರಿತು ನೇರವಾಗಿ ಹೇಳಿಕೆ ನೀಡಿದ್ದಾರೆ.

ಇದೆಂದರೆ, ಹುಟ್ಟು ಹಬ್ಬವನ್ನು ಯಾರು ಕೂಡ ಭರ್ಜರಿಯಾಗಿ ಆಚರಿಸಿಕೊಳ್ಳಬಾರದು ಎಂದು, ಜನಪ್ರಿಯತೆಯಲ್ಲಿ ಕೆಳಗಿನಿಂದ ನಮ್ಮಿಂದ ಸಾವಿರದ ಒಂಬೈನೂರನೇ ಸ್ಥಾನದಷ್ಟು ದೂರದಲ್ಲಿರುವ ಪ್ರತಿಸ್ಫರ್ಧಿ ಪತ್ರಿಕೆ ಇಲ್ಲಿ ವರದಿ ಮಾಡಿದೆ.

ಇದೇ ವೇಳೆ, ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದವರಿಗೆ, ಶುಭಾಶಯಕ್ಕಾಗಿಯೇ ನಮ್ಮ ಬ್ಯುರೋದವರನ್ನು ನಿದ್ದೆಯಿಂದ ಬಡಿದೆಬ್ಬಿಸಲು ಪ್ರಯತ್ನಿಸಿದವರಿಗೆ ಪ್ರತಿ-ಶುಭಾಶಯಗಳನ್ನೂ ಈ ಮೂಲಕ ಕೋರಲಾಗಿದೆ. ದಯವಿಟ್ಟು ನರೇಂದ್ರ ಮೋದಿ ಅವರಿಗೆ ವಿಷಯ ತಿಳಿಸಬಾರದಾಗಿ ಮತ್ತೊಂದು ವಿನಂತಿ.

Tuesday, May 06, 2014

ಬೊಗಳೆ ಬ್ರೇಕ್: ಸೌದಿ ಮಹಿಳೆಯರ ವಿರುದ್ಧ ಕತ್ತೆಗಳ ಪ್ರತಿಭಟನೆ

[ಬೊಗಳೂರು ಪ್ರಾಣಿಗಳ ಬ್ಯುರೋದಿಂದ]
ಬೊಗಳೂರು, ಮೇ 06- ಗಂಡಂದಿರು ಹೆಂಡಂದಿರ ವಿರುದ್ಧ ತಮ್ಮ ಹೆಸರು ದುರುಪಯೋಗಪಡಿಸುತ್ತಿರುವುದಕ್ಕಾಗಿ ಕತ್ತೆಗಳು ಮತ್ತು ಹಸುಗಳು ಕೋರ್ಟ್ ಮೆಟ್ಟಿಲೇರಿದ್ದು, ಪ್ರಾಣಿ ನಿರ್ದಯ ಸಂಘ ನೇತೃತ್ವದಲ್ಲಿ ಪ್ರತಿಭಟನೆಗಿಳಿದಿವೆ.

ಇದಕ್ಕೆ ಕಾರಣ, ಸೌದಿ ಅರೇಬಿಯದಲ್ಲಿ ಒಬ್ಬನೇ ಗಂಡ, ತನ್ನ ಒಬ್ಬಳೇ ಹೆಂಡತಿಯನ್ನು ಬಹಿರಂಗವಾಗಿ, ಸಾರ್ವಜನಿಕವಾಗಿ, ಸಾರಾಸಗಟಾಗಿ ಮತ್ತು ಧೈರ್ಯ ಹಾಗೂ ವೀರಾವೇಶದಿಂದ 'ಏಯ್ ದನಾ, ಏಯ್ ಕತ್ತೆ' ಅಂತ ಕರೆದು ನ್ಯಾಯಾಲಯದ ಮೆಟ್ಟಿಲು ಹತ್ತಬೇಕಾದ ಪ್ರಸಂಗ. ಅದು ಇಲ್ಲಿ ವರದ್ದಿಯಾಗಿದೆ. 

ಹೆಂಡತಿಯರನ್ನು ಇನ್ಸಲ್ಟ್ ಮಾಡಲು ನಮ್ಮ ಹೆಸರು ದುರುಪಯೋಗಪಡಿಸಲಾಗಿದೆ. ನಾವೇನು ಅಷ್ಟು ಕೀಳು ಪ್ರಾಣಿಗಳೇ ಎಂದು ಪ್ರಾಣಿ ನಿರ್ದಯ ಸಂಘವು ಅಧಿಕಾರಿಗಳಿಗೆ ಸಲ್ಲಿಸಿದ ಅರ್ಜಿಯಲ್ಲಿ ಅಲವತ್ತುಕೊಂಡಿದೆ.

"ನಮ್ಮ ಹೆಸರನ್ನೇ ಇನ್ಸಲ್ಟ್ ಎಂದು ಕರೆದ ಪತ್ನಿಯರನ್ನು ಬಂಧಿಸಬೇಕು" ಎಂದು ಒತ್ತಾಯಿಸಿರುವ ಸಂಘದ ಅಧ್ಯಕ್ಷ ಪ್ರಾಣಿ ಕುಮಾರ್ ಅವರು, ಅಷ್ಟು ಸಾಧುವಾದ ಪ್ರಾಣಿಗಳನ್ನು ಅಸಹ್ಯ ಮತ್ತು ಕೀಳು ಎಂದು ಪರಿಗಣಿಸಿರುವವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ನೀವೇನು ನಮ್ಮಂತೆ ದುಡಿಯುವುದಿಲ್ಲವೇ ಎಂದು ಸಂಘದ ಮಹಾ ಕೋಶಾಧಿಕಾರಿ ಗಾರ್ದಭ ಕುಮಾರ್ ಮಹಿಳೆಯರಿಗೆ ನಾಟುವ ರೀತಿಯಲ್ಲಿ ಪ್ರಶ್ನಿಸಿದ್ದಾರೆ. ಮುಂದಿನ ವಿಚಾರಣೆಯ ಕುರಿತು ಅಸತ್ಯಾನ್ವೇಷಣೆ ನಡೆಯುತ್ತಿದೆ.

ತಿಮಿಂಗಿಲಗಳಿಗೆ ಸಹಕಾರ: ಪ್ರಶ್ನೆ ಪತ್ರಿಕೆ, ಬೆಲೆ ಇಳಿಕೆಗಳಿಗೂ ನಿಷೇಧ

[ಬೊಗಳೂರು ಭಾಗ್ಯಗಳ ಬ್ಯುರೋದಿಂದ] ಬೊಗಳೂರು: ಜನರು ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದರಿಂದ ಸೀಲಿಂಗ್ ಫ್ಯಾನನ್ನೇ ನಿಷೇಧಿಸಬೇಕು...