Thursday, April 20, 2006


90ರ ಹಣ್ಣು ಹಣ್ಣು ಮುದುಕಿ ಮೇಲೆ

ಅತ್ಯಾಚಾರ: (ನಮ್ಮ ಸ್ವಂತ ವರದಿಗಾರರಿಂದ)

ಬೊಗಳೂರು, ಏ.20- ಶತಕ ಬಾರಿಸಲು ಹೊರಟಿದ್ದ 90 ವರ್ಷದ ವೃದ್ಧೆಯೊಬ್ಬಳ ಮೇಲೆ ನಮ್ಮ ವರದಿಗಾರರು ಅತ್ಯಾಚಾರ ಮಾಡಿದ್ದನ್ನು ವೀಡಿಯೊ ವಿವರಣೆ ಸಹಿತ ಇಲ್ಲಿ ವರದಿ ಮಾಡಿದ್ದಾರೆ.

ನಿಲ್ಲಿ ಸ್ವಾಮೀ..... ಇದು ನಮ್ಮ ಪತ್ರಿಕೆಯ ಸುದ್ದಿಮನೆಯಲ್ಲಾದ ಅವಾಂತರ ಅಲ್ಲ. ಅಲ್ಲಲ್ಲ.... ಅಂದ್ರೆ ಅತ್ಯಾಚಾರ ನಮ್ಮ ಸುದ್ದಿ ಮನೆಯಲ್ಲಾಗಿದೆ ಅಂತ ಅಲ್ಲವೇ ಅಲ್ಲ. ಪುಟ ವಿನ್ಯಾಸಕಾರ ಮಾಡಿದ ಮಿಸ್ಟೇಕ್.

ಅಂದ್ರೆ ಪುಟ ವಿನ್ಯಾಸಕಾರ ಅತ್ಯಾಚಾರ ಮಾಡಿದ್ದಾರೆ ಅಂತನೂ ಅರ್ಥ ಅಲ್ಲ ಮಾರಾಯ್ರೇ...! ಇದು ಉಪಸಂಪಾದಕರ ನಿರ್ಲಕ್ಷ್ಯದಿಂದಾದ ಅವಾಂತರ. ಅಂದ್ರೆ.... ಅವ್ರೂ ಅತ್ಯಾಚಾರ ಮಾಡಿದ್ದು ಅಂತಲ್ಲ. ಇದು ಸಂಪಾದಕರು ನೋಡದೆ ಮಾಡಿದ ತಪ್ಪು. ಅಂದ್ರೆ... ಅಂದ್ರೆ... ನೀವಂದುಕೊಂಡಂತೆ ಸಂಪಾದಕರು ತಿಳಿಯದೆ ಮಾಡಿದ ಅತ್ಯಾಚಾರ ಅನ್ನುವುದೂ ತಪ್ಪು.
ಈ ವಿಷಯ ಓದುಗರ ತಲೆ ಕೆಡಿಸುವುದಕ್ಕಿಂತ ಮೊದಲು ಈ ಅವಾಂತರ ಸರಣಿಯ ಪೂರ್ವಾಪರಗಳನ್ನು ಇಲ್ಲಿ ಪಟ್ಟಿ ಮಾಡುತ್ತಿದ್ದೇವೆ.

ನಡೆದದ್ದಿಷ್ಟು: ಬಾಲ್ಟಿಮೋರ್‌ನ ಕಾಕಿಸ್‌ವಿಲ್ಲೆ ಎಂಬಲ್ಲಿ 90ರ ಮುದುಕಿ ಮೇಲೆ ಅತ್ಯಾಚಾರವಾಗಿ, ಆಕೆ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿರುವುದು ಮತ್ತು ಅತ್ಯಾಚಾರಿಗಾಗಿ ಶೋಧ ನಡೆಯುತ್ತಿರುವುದು ನಮ್ಮ ನೆಟ್ಗಳ್ಳರ ಬ್ಯುರೋಗೆ ಪತ್ರಿಕೆ ಅಚ್ಚಿಗೆ ಹೋಗುವ ಕೆಲವೇ ಕ್ಷಣಗಳ ಮೊದಲು ತಿಳಿಯಿತು. ಈ ಲೇಟೆಸ್ಟ್ ಸುದ್ದಿಯನ್ನು ಪತ್ರಿಕೆಯಲ್ಲಿ ಹಾಕದಿದ್ದರೆ ನಾಳೆ ಮಜಾವಾಣಿ, ನೂರೆಂಟು ಸುಳ್ಳು, ವಿಶ್ವಪುಟ, ಕನ್ನಡಸಾರಥಿ ಮುಂತಾದ ಬೊಗಳೆ (ಕ್ಷಮಿಸಿ... ಇದು ಬ್ಲಾಗ್ ಎಂಬುದರ "ದ್ಭ" ರೂಪ !) ಪತ್ರಿಕೆಗಳಲ್ಲಿ ಪ್ರಕಟವಾಗಿ, ನಮ್ಮ ಪತ್ರಿಕೆಯಲ್ಲಿ ಇಲ್ಲದಿದ್ದರೆ ವಿಶ್ವದೆಲ್ಲೆಡೆ ಒಟ್ಟಾರೆ ಇರುವ ಕೋಟಿಗಟ್ಟಲೆ ಓದುಗರಲ್ಲಿ ನಮ್ಮ ಪತ್ರಿಕೆಯ (ಲೆಕ್ಕ ಮಾಡಲು ಹೋದರೆ ಕೈಬೆರಳುಗಳನ್ನು ಮೈನಸ್ (ಕಟ್) ಮಾಡಬೇಕಾಗುತ್ತದೆ) ಓದುಗರಿಂದ ಧಮಕಿ ಬರಬಹುದೆಂಬ ಭೀತಿಯಲ್ಲಿ ಪತ್ರಿಕೆಗೆ ಈ ಸುದ್ದಿ ಅಳವಡಿಸಲು ಕೊನೆಯ ಕ್ಷಣದಲ್ಲಿ ನಿರ್ಧಾರವಾಗಿತ್ತು.

ಸರಿ... ವರದಿಗಾರರು ಅವಸರವಸರವಾಗಿ ಟೈಪಿಸಿ, ಉಪಸಂಪಾದಕರಿಗೆ ಕೊಟ್ಟರು. ಉಪಸಂಪಾದಕರು ಅವಸರವಸರವಾಗಿ ಅದನ್ನು ನೋಡಿ ಪುಟ ವಿನ್ಯಾಸಕಾರನಿಗೆ ಪಾಸ್ ಮಾಡಿದರು. ಪುಟ ವಿನ್ಯಾಸಕಾರ ಅವಸರವಸರವಾಗಿ ಮೊದಲ ಎರಡೂ ವಾಕ್ಯಗಳನ್ನು ಹೆಡ್ಡಿಂಗ್ ಎಂದು ದೊಡ್ಡಕ್ಷರದಲ್ಲಿ ಬರುವಂತೆ ನೋಡಿಕೊಂಡ. ಅವನಿಗೂ ಅವಸರ ನೋಡಿ..... ಕಂಪ್ಯೂಟರ್ ಕೀಬೋರ್ಡ್‌ನಲ್ಲಿ ಬೆರಳಾಡಿಸುವಾಗ ಮೊದಲ ಪ್ಯಾರಾದಲ್ಲಿ " ನಮ್ಮ ವರದಿಗಾರರು" ಅನ್ನೋ ಪದವು ಐದು ಪದಗಳನ್ನು ದಾಟಿ ಹಿಂದೆ ಬಂದು ಕೂತಿತು. ಸಂಪಾದಕರು ಅವಸರವಸರವಾಗಿ ಕಣ್ಣಾಡಿಸಿ ಗ್ರೀನ್ ಸಿಗ್ನಲ್ ನೀಡಿದರು. ಸರಿ... ಪುಟ ಅಚ್ಚಿಗೆ ಹೋಯಿತು. ಆಗ ಮೂಡಿದ್ದೇ ಈ ವಿಶೇಷ ಅವಾಂತರದ ಪುಟ.

ದಯವಿಟ್ಟು ನಂಬಿ. ನಮ್ಮ ವರದಿಗಾರರು ಅತ್ಯಾಚಾರದಂತಹ ಕೀಳು ಕೃತ್ಯ.... ಅದೂ 90ರ ವೃದ್ಧೆ ಮೇಲೆ..... ಛೀ.... ಥೂ...... ಅಂಥದ್ದು ಮಾಡಲು ಖಂಡಿತಾ ಹೋಗಲಾರರು.

8 comments:

 1. ಪ್ರಿಯ ಪ್ರತಿಸ್ಪರ್ಧಿ ಸಂಪಾದಕರೆ,
  ನಿಮ್ಮ ಸಿಬ್ಬಂದಿಯ ಅಚಾತುರ್ಯ ಹಾಗೂ ಅದರ ಬಗ್ಗೆ ನಿಮ್ಮ ಪ್ರಾಮಾಣಿಕ ಸ್ಪಷ್ಟೀಕರಣ ಎಲ್ಲಾ ಸಂಪಾದಕರಿಗೂ ಅನುಕರಣೀಯ. ಸುದ್ದಿಯನ್ನು ಬೇಗ ನೀಡುವ ಭರದಲ್ಲಿ ಹೀಗಾಗುವುದು ಸ್ವಾಭಾವಿಕ, ಅದನ್ನು ಒಪ್ಪಿಕೊಳ್ಳುವದು ಪ್ರಾಕೃತಿಕ, ಒಪ್ಪದಿರುವುದು ವಿಕೃತಿ(ಕ)! ಏನಂತೀರಿ?

  ReplyDelete
 2. ವಿಶ್ವಪುಟದೊಡೆಯರೇ,
  ನಾವು ಸ್ಪಷ್ಟೀಕರಣ ನೀಡಿದ್ದನ್ನು ದಯವಿಟ್ಟು ಬೇರಾರಿಗೂ ಹೇಳಬೇಡಿ. ಹೇಳಿದರೆ ಅವರೂ ಈ ಲೇಖನ ಓದುತ್ತಾರೆ, ಇದರಿಂಗ ನಾವು ಕೂಡ ತಪ್ಪು ಮಾಡಿದ್ದೇವೆ ಎಂಬುದು ಬಟಾಬಯಲಾಗುತ್ತದೆ. ನಾವು ಅಡಿಗೆ ಬಿದ್ದರೂ ನಮ್ಮ ಮೂಗು ಮೇಲೆಯೇ ಇರಲು ಬಯಸುತ್ತೇವೆ.

  ReplyDelete
 3. ಸೂಪರ್ ಬೊಗಳೆ - ನಿಮ್ಮ ವರದಿಗಾರರು ಬಹಳ ಮನೋಜ್ಞವಾಗಿ ಅತ್ಯಾಚಾರ ಮಾಡಿದ್ದಾರೆ. ಅತ್ಯಾಚಾರದ ಬಗ್ಗೆ ಹೆಚ್ಚಿನ ಸ್ಟಡಿ ಮಾಡಲು ಅವರನ್ನು ವಿಶ್ವಸಂಸ್ಥೆಗೆ ನಾಮಿನೇಟ್ ಮಾಡಬೇಕೆಂದು ಮನಸ್ಸಾಗಿದೆ. ಅಂದ ಹಾಗೆ ನಿಮ್ಮ ಪತ್ರಿಕೆಯವರು ಇಲ್ಲಿಯವರೆವಿಗೆ ಎಷ್ಟು ಅತ್ಯಾಚಾರ ಮಾಡಿದ್ದಾರೆ ತಿಳಿಸುವಿರಾ?

  ReplyDelete
 4. ನಿಮ್ಮ ವರದಿಯ ಕೊನೆಯಲ್ಲಿ "ನಮ್ಮ ವರದಿಗಾರರು ಅತ್ಯಾಚಾರದಂತಹ ಕೀಳು ಕೃತ್ಯ.... ಅದೂ 90ರ ವೃದ್ಧೆ ಮೇಲೆ..... ಛೀ.... ಥೂ...... ಅಂಥದ್ದು ಮಾಡಲು ಖಂಡಿತಾ ಹೋಗಲಾರರು" ಎಂದು ಹೇಳಿದ್ದೀರಿ. ಅನುಮಾನ ಬಂದು ಅಸತ್ಯಾನ್ವೇಷಿಗಳನ್ನು ಸತ್ಯದ ಅನ್ವೇಷಣೆಗೆ ಗುರಿಪಡಿಸಿದಾಗ ತಿಳಿದುಬಂದದ್ದು ಇಷ್ಟೇ... ಅವರ ಅಸತ್ಯಾಚಾರಗಳೆಲ್ಲವೂ ನಡೆಯುವುದು ವೃದ್ಧೆಯರ ಮೇಲಲ್ಲ ಷೋಡಷಿಯರ ಮೇಲೆ. ಅಸತ್ಯಾನ್ವೇಷಿಗಳೇ, ನಿಮ್ಮ ಆಚಾರದಲ್ಲಿ ಎಷ್ಟು ಬಾಲೆಯರು ಬೆಳದಿಂಗಳು ಚೆಲ್ಲಿದ್ದಾರೆ?

  ReplyDelete
 5. ಬೊಗಳೆಯನ್ನು ರಗಳೆ ಎಂದು ಭಾವಿಸದೆ ಈ ಎಲೆಕ್ಟ್ರಾನಿಕ್ ಯುಗದಲ್ಲಿಯೂ ಅಷ್ಟು ದೂರದ ಮುಂಬಯಿಯಿಂದ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಶ್ರೀನಿವಾಸ್ ಅವರೆ.

  ಇನ್ನು ನಮ್ಮ ಅತ್ಯಾಚಾರದ ವಿಷಯ.(ನಮ್ಮದಲ್ಲ ಸ್ವಾಮೀ...). ನಮ್ಮ ಪತ್ರಿಕೆಯವರು ಇಷ್ಟರವರೆಗೆ ಎಷ್ಟು 'ಅತಿ' ಆಚಾರ ಮಾಡಿದ್ದಾರೆ ಮತ್ತವರು ಮಾಡುತ್ತಲೇ ಇರುತ್ತಾರೆ ಎಂಬುದು ನಿಮಗಂತೂ ಗೊತ್ತೇ ಇದೆ (ಯಾಕೆಂದರೆ ನಮ್ಮ ಲೆಕ್ಕಕ್ಕೇ ಸಿಗಲಿಲ್ಲ!). ಅದರ ಲೆಕ್ಕಪತ್ರಗಳನ್ನಿರಿಸಲು ನಾವು ಮಾನವ ಕಂಪ್ಯೂಟರ್ ಎಂದೇ ಖ್ಯಾತಿ ಪಡೆದ ಡಾ.ಶಕುಂತಲಾ ದೇವಿ ಅವರಿಗೆ ಪತ್ರ ಬರೆದಿದ್ದೇವೆ. ಮತ್ತು ಲೆಕ್ಕ ಮಾಡಲು ವಿಶೇಷ ಸಾಫ್ಟ್ ವೇರ್ ತಯಾರಿಸಿಕೊಡಲು ಬಿಲ್ ಗೇಟ್ಸ್ ಗೆ ಸಾಮಾನ್ಯ ಅಂಚೆ ಲಕೋಟೆಯಲ್ಲಿ ಪತ್ರ ಗೀಚಿದ್ದೇವೆ. ಇದರ ಒಂದು ಪ್ರತಿಯನ್ನು ಅಮೆರಿಕದ ಮೋನಿಕಾ ಲೆವಿನ್ಸ್ಕಿಗೂ ಕಳಿಸಿದ್ದೇವೆ.

  ಇದರ ಜತೆಗೆ, ವಿಶ್ವ ಸಂಸ್ಥೆಗೆ ನೀವಂತೂ ನಮ್ಮ ಹೆಸರನ್ನು ಶಿಫಾರಸು ಮಾಡುತ್ತೀರಿ ಎಂಬ ಭರವಸೆಯಿದೆ.

  ReplyDelete
 6. ಸಾರಥಿಯವರೆ,
  ನಿಮ್ಮ ಪತ್ತೆದಾರಿಕೆ ಮೆಚ್ಚುವಂಥದ್ದು. ನೀವಂತೂ ನಮ್ಮ ಪತ್ರಿಕಾಲಯದ ಮಾನ ಹರಾಜು ಮಾಡಲು ಹೊರಟಂತಿದೆ. ಧನ್ಯವಾದಗಳು.

  ಅಬ್ಬಾ.... ನಮ್ಮ ವರದಿಗಾರರು 90ರ ವೃದ್ಧೆ ಮೇಲೆ ಅತ್ಯಾಚಾರ ಮಾಡಲಾರರು ಅಂದರೆ ಷೋಡಶಿಯರ ಮೇಲೆ ಮಾತ್ರ ಅಂತ ಅರ್ಥ ಎಂಬುದನ್ನು ಎಷ್ಟೊಂದು ಮನೋಜ್ಞವಾಗಿ ಬಯಲಿಗೆಳೆದಿದ್ದೀರಿ...! ನಿಮ್ಮ ಸ್ವಅನುಭವದ ನುಡಿಗಳಿಗೆ ನಮ್ಮ ಸಾವಿರ ಮೆಣಸ್ಕಾರಗಳು! ದಯವಿಟ್ಟು ಇದನ್ನು ಯಾರಿಗೂ ಗೊತ್ತಾಗುವಂತೆ ಜೋರಾಗಿ ಹೇಳಬೇಡಿ.
  ಬೇಕಿದ್ದರೆ ನಿಮಗೆ ನಮ್ಮ ಪತ್ರಿಕಾಲಾಯದಲ್ಲಿ ಕೆಲಸ ಕೊಡುತ್ತೇವೆ...!

  ReplyDelete
 7. ಅನ್ವೇಷಿಗಳೇ, ನೀವು ಅಸತ್ಯದ ಪರಮಾವಧಿ ತಲುಪುತ್ತಿದ್ದೀರಾ ಜೋಕೆ. ನನ್ನ ತಲೆಗೇ ಮೆಣಸ್ಕಾರಗಳನ್ನು ಹಾಕಿ ಮಸಾಲೆ ಅರೆಯುತ್ತಿರುವುದನ್ನು ನೋಡಿದರೆ ನೀವು ಪತ್ರಿಕಾಲಯವಲ್ಲ, ಚಿಕ್ಕನ್ ಕಬಾಬ್ ಸೆಂಟರ್ ನಡೆಸುತ್ತಿದ್ದೀರೆಂಬ ಅನುಮಾನ ಸುಳಿಯುತ್ತಿದೆ.

  ನಿಮ್ಮ ಅಸತ್ಯದ ಕೈಗಳು ದೂರ ಅಮೆರಿಕದಲ್ಲಿರುವ ಬಿಲ್ ಗೇಟ್ಸ್ ಅವರ ಕೈ ಹಿಡಿದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಬಿಲ್ ಗೇಟ್ಸ್ ಅವರ ಫ್ಯಾನ್ ಆಗಿರುವ ನನಗೆ ಭಯ ಇರುವುದು, ನೀವು ಎಲ್ಲಿ ಗೇಟ್ಸ್ ಬಳಿಗೆ ಮೊನಿಕಾ ಲೆವಿನ್ಸ್ಕಿ ಅವರ ತಳ್ಳಿಬಿಡುತ್ತೀರೆಂದು.

  ReplyDelete
 8. ಅಯ್ಯಯ್ಯೋ... ನಿಮಗೆ ಕಬಾಬ್ ಸೆಂಟರ್ ಕೂಡ ಗೊತ್ತಾಗಿಬಿಡ್ತಾ...? ಶ್ಶ್... ಸ್ವಲ್ಪ ಈ ಕಡೆ ಬನ್ನಿ. ದಯವಿಟ್ಟು ಜೋರಾಗಿ ಇದನ್ನೆಲ್ಲಾ ಬಟಾಬಯಲು ಮಾಡಬೇಡಿ. ನಿಮಗೆ ಉಚಿತವಾಗಿ ನಮ್ಮಲ್ಲಿ ಕೆಲಸ ಕೊಡುತ್ತೇವೆ. ಒಪ್ಪಿಕೊಳ್ಳಿ ಪ್ಲೀಸ್.

  ಮತ್ತೆ ನೀವು ಬಿಲ್ ಗೇಟ್ಸ್ ಫ್ಯಾನ್ ಎಂದೂ ಬರೆದ್ರಲ್ಲ. ಆ ಬ್ರಾಂಡ್ ಹೆಸರು ನಾನು ಇದುವರೆಗೆ ಕೇಳಿರಲೇ ಇಲ್ಲ. ಖೇತಾನ್, ಬಜಾಜ್, ಓರಿಯಂಟ್ ಫ್ಯಾನ್ ಗಳೆಲ್ಲಾ ಗೊತ್ತಿದೆ. ಆದ್ರೆ ಇದು ನಾನು ಕೇಳಿದ್ದೇ ಹೊಸತು.

  ಸರಿ. ನೀವು ನಮ್ಮ ಪತ್ರಿಕಾ ಲಾಯಕ್ಕೆ ಬಂದರೆ ಅಲ್ಲಿಗೆ ಬೇರೆ ಫ್ಯಾನ್ ಹಾಕಿಸುವುದೇ ಇಲ್ಲ, ಇದ್ದದ್ದನ್ನು ತೆಗೆಸುತ್ತೇನೆ. ಅಲ್ಲಿ ನಿಮಗೇ ಅಗ್ರಪಟ್ಟ.
  ಸರೀನಾ...? ಹೂಂ ಅನ್ನಿ ಮತ್ತೆ....!

  ReplyDelete

ನಿಮ್ಮ ಸಲಹೆ/ಅಭಿಪ್ರಾಯ ತಿಳಿಸಿ..

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...