ಬೊಗಳೆ ರಗಳೆ

header ads

ಮದುವೆಯಾಗಲು ಲಂಚ!

(ಬೊಗಳೂರು Some-ಬಂಧನ ಬ್ಯುರೋದಿಂದ)
ಬೊಗಳೂರು, ಸೆ.19- ರಾಷ್ಟ್ರದ ವಿವಿಧೆಡೆ ಮಂಡೂಕಗಳ ಸಾಮೂಹಿಕ ವಿವಾಹೋತ್ಸವ ನಡೆದ ಬಳಿಕ ಈಗ ಮಂಡೂಕಗಳಿಗಿಂತ ಮೇಲ್ಜಾತಿಯವರು ಎಂದು ಕರೆಯಲಾಗುವ ಮಾನವರ ಸರದಿ.
 
'ಮೇಲ್ಜಾತಿ-ಕೀಳುಜಾತಿ' ಎಂಬ ಭೇದ ತೊಡೆದು ಹಾಕುವುದೇ ನಮ್ಮ ಉದ್ದೇಶ ಎಂದು ಹೇಳಿರುವ ಕೇಂದ್ರ ಸರಕಾರವು, ಮೇಲ್ಜಾತಿಯವರು ಕೀಳು ಎಂದು ಭಾವಿಸದೆ ಪರಿಶಿಷ್ಟ ಜಾತಿ-ವರ್ಗದವರನ್ನೇ ವಿವಾಹವಾಗಬೇಕು. ಹಾಗಾದರೆ ನೀಡಲಾಗುವ ಪ್ರೋತ್ಸಾಹ ಧನವನ್ನು 50 ಸಾವಿರ ರೂ.ಗಳಿಗೆ ಏರಿಸಲು ಸೂಚನೆ ನೀಡಿರುವುದು ಇದರ ಹಿಂದಿನ ಪ್ರಧಾನ ಕಾರಣ. ಈ ಕಾರಣಕ್ಕೆ ಅಲ್ಲಲ್ಲಿ ಸಾಮೂಹಿಕ ವಿವಾಹೋತ್ಸವ ನಡೆಸಲು ಭರ್ಜರಿ ಸಿದ್ಧತೆಗಳು ಆರಂಭವಾಗಿರುವುದು ನಮ್ಮ ಬ್ಯುರೋದ ಗಮನಕ್ಕೆ ಬಂದಿದೆ.
 
ಆದರೆ ಇದು ಅಂತಿಂಥ ಸಾಮೂಹಿಕ ವಿವಾಹೋತ್ಸವಗಳಲ್ಲ. ಮೇಲ್ಜಾತಿಯ ಒಬ್ಬನೇ ವ್ಯಕ್ತಿ ಸಾಮೂಹಿಕವಾಗಿ ಹತ್ತಿಪ್ಪತ್ತು ಮಂದಿಯ ಉದ್ಧಾರ ಮಾಡುವ ಪ್ರಯತ್ನವಾಗಿದ್ದು, ಕನಿಷ್ಠ 10 ಮಂದಿಯನ್ನು ವಿವಾಹವಾದರೆ (50 ಸಾವಿರx10) ಕನಿಷ್ಠ 5 ಲಕ್ಷ ರೂ. ಪಡೆಯುವ ಲೆಕ್ಕಾಚಾರ ಎಂಬುದು ತನಿಖೆಯಿಂದ ಗೊತ್ತಾಗಿದೆ. ಸರಕಾರ ಕರೆಕರೆದು ನೀಡುತ್ತಿರುವ ಹಣವನ್ನು ವ್ಯರ್ಥ ಮಾಡಬಾರದು, ಸದುಪಯೋಗಪಡಿಸಿಕೊಳ್ಳಬೇಕು ಎಂಬುದು ಇದರ ಹಿಂದಿನ ಸಾಮಾಜಿಕ ಕಳಕಳಿ.
 
ಮೇಲ್ಜಾತಿಯವರು ಪರಿಶಿಷ್ಟರನ್ನು ಮದುವೆಯಾದರೆ ಜಾತಿ ಭಾವನೆಗಳನ್ನು ತೊಳೆದು ಹಾಕಬಹುದು. ಈ ಭಾವನೆ ತೊಳೆಯಲು ಸೋಪು, ಶ್ಯಾಂಪೂ, ಮರಳು, ತೆಂಗಿನ ನಾರಿನ ಬ್ರಶ್... ಇತ್ಯಾದಿಗಳಿಗೆ 50 ಸಾವಿರ ರೂ. ಖರ್ಚು ಆಗುತ್ತದೆ. ಇದನ್ನು ಭರಿಸಲು ಯತ್ನಿಸುವಂತೆ ರಾಜ್ಯ ಸರಕಾರಗಳಿಗೆ ಕೇಂದ್ರ ಸೂಚಿಸಿದೆ.
 
ಈ ಮಧ್ಯೆ, ಮದುವೆಯೇ ಆಗೋದಿಲ್ಲ, ಇಹ ಸಂಸಾರೇ... ಬಲು ನಿಸ್ಸಾರೇ.... ಎಂದು ಹಾಡುತ್ತಾ ಸಂ-ನ್ಯಾಸಕ್ಕೆ ಸಿದ್ಧತೆ ನಡೆಸುತ್ತಿರುವವರು ಮತ್ತು ಸಂಸಾರ ಸಾಗರದಲ್ಲಿ ತೇಲುವುದಕ್ಕಿಂತ ಅಮಲಿನಲ್ಲೇ ತೇಲಾಡೋದು ಒಳಿತು ಎಂದು ಸುಮ್ಮನೆ ಬಾಟ್ಲಿ ಹಿಡಿದು ಕೂತವರನ್ನೂ ಮದುವೆ ಮಂಟಪಕ್ಕೆ ಎಳೆದು ತರುವ ಪ್ರಯತ್ನಗಳು ನಡೆಯುತ್ತಿವೆ. ಅವರನ್ನು ಮಂಟಪದಲ್ಲಿ ಕೂರಿಸಿ ಅವರ ತಲೆಗೆ ಅಕ್ಕಿ ಕಾಳು ಹಾಕಿ ಸರಕಾರದ ಹಣವನ್ನು ಹೆಕ್ಕಿಕೊಳ್ಳುವ ಉದ್ಯಮವನ್ನೇ ಕೆಲವರು ಆರಂಭಿಸಿದ್ದಾರೆ ಎಂದು ತನಿಖೆಯಿಂದ ಗೊತ್ತಾಗಿದೆ.
 
ಇಷ್ಟೆಲ್ಲಾ ಅನಾಹುತಗಳ ನಡುವೆ, ಈಗಾಗಲೇ ಮದುವೆಯಾದವರು ತಮ್ಮ ತಮ್ಮ ಹೆಂಡತಿಯರಿಗೆ ಕಿರುಕುಳ ನೀಡುತ್ತಾ, ಅವರಿಗೆ ತುಳಿತಕ್ಕೊಳಗಾದವರು, ದಲಿತರು ಎಂದೆಲ್ಲಾ ಸರ್ಟಿಫಿಕೇಟ್ ಕೊಡಿಸಿ, ತಾವು ಕೂಡ ಜಾತಿಯ ಕಲೆಯನ್ನು ತೊಳೆದಿದ್ದೇವಾದುದರಿಂದ ತಮಗೂ ಅದಕ್ಕಾದ ಖರ್ಚನ್ನು ಲಂಚದ ರೂಪದಲ್ಲಿ ನೀಡಬೇಕು ಎಂದು ಒತ್ತಾಯಿಸುವ ಯತ್ನಗಳು ಕೂಡ ಆರಂಭವಾಗಿದೆ.
 
ಇತ್ತೀಚೆಗೆ ಬಂದಿರುವ ಸ್ಫೋಟಕ ವರದಿಗಳ ಪ್ರಕಾರ, ಈ ವಿವಾಹ ವಿವಾದಕ್ಕೆ ತಮ್ಮನ್ನು ತಳ್ಳಲು ಯತ್ನಿಸುತ್ತಿರುವ ದಂಧೆಕೋರರ ವಿರುದ್ಧ ಸರ್ವಸಂಗ ಪರಿತ್ಯಾಗಿಗಳು ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದ್ದಾರೆ.
 
ಇದು ನಮ್ಮ ವರ್ಗದವರ ಸಂಖ್ಯಾ ಹೆಚ್ಚಳವನ್ನು ನಿಗ್ರಹಿಸಲು ಸರಕಾರ ಹೂಡಿರುವ ಸಂಚು ಎಂದು ಶ್ರೀ ಶ್ರೀ ಶ್ರೀ (ಮೂರುವರೆ ಸಾವಿರ) ಸಂಸಾರಾನಂದೇಶ್ವರೇಶ್ವರ ಸ್ವಾಮೀಜಿ ಅವರು ಇ-ಮೇಲ್‌ನಲ್ಲಿ ಘೋಷಿಸಿದ್ದು, ಪ್ರತಿಭಟಿಸಲು ಸಜ್ಜಾಗಿರುವುದಾಗಿ ಹೇಳಿದ್ದಾರೆ.
 
-------------------
ಜಾಹೀರಾತು
ಜಾಗ್ರತೆ.... ನಿಮ್ಮ ಭವಿಷ್ಯ ನಮ್ಮ ಕೈಯಲ್ಲಿದೆ...!!!!
ನಿಮ್ಮ ಭವಿಷ್ಯದ ವಾಣಿಯನ್ನು ಬೊಗಳೆ-ರಗಳೆ ಬ್ಯುರೋ ಸಿದ್ಧಪಡಿಸುತ್ತಿದೆ...!!!
ನಿಮ್ಮ ಪ್ರತಿಗಳನ್ನು ದ್ವಿಪ್ರತಿಯಲ್ಲಿ ಕಾದಿರಿಸಿ...!!!
ನಾಳಿನ ಸಂಚಿಕೆಯನ್ನು ಇಂದೇ ಕೊಂಡುಕೊಳ್ಳಿರಿ...

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ಇವತ್ತಿನ ಲೇಖನ ಓದಿ ನನಗೆ ಕೆಲವು ಸಂದೇಹಗಳು ಉಂಟಾಗಿವೆ. ಅವುಗಳ ಪರಿಹಾರವಾಗದೇ ಪ್ರತಿಕ್ರಿಯಿಸಲು ಸಾಧ್ಯವಿಲ್ಲ.

    1) ಲಂಚ ಅಂದರೇನು? ಇದೇನು ಹಣದ ರೂಪದಲ್ಲಿಯೇ ಇರುವುದಾ? ಮೇಜಿನ ಕೆಳಗೆ ಸಂಭಾವನೆ ಕೊಡ್ತಾರಲ್ಲ ಅದಾ?

    2) ಮದುವೆಯಾಗಲು ಮೇಲ್ಜಾತಿಯವರಿಗೆ ಮಾತ್ರ ಲಂಚ ಸಿಗುವುದೇ?

    3) ಮೇಲ್ಜಾತಿಯವರು ಎಂದರೆ ಯಾರು? ಮರದ ಮೇಲಿರುವವರಾ?

    4) ಮತ್ತೆ ಮದುವೆ ಯಾರ ಜೊತೆಗೆ ಆಗಬೇಕು? ಮನೆಯೊಂದಿಗೆ ಮದುವೆ ಆದರೆ ಕೂಡಾ ಲಂಚ ಸಿಗುತ್ತದಾ?

    ಸರಿಯುತ್ತರ ಕೊಡದಿದ್ದರೆ ...

    ಪ್ರತ್ಯುತ್ತರಅಳಿಸಿ
  2. ಮಾವಿನಯನಸರೆ,

    ನಿಮ್ಮ ಪ್ರಶ್ನೆಗೆ ಒಂದು ಪದ ಮೀರದಂತೆ ಬರೆದ ಉತ್ತರಗಳು ಇಲ್ಲಿವೆ. ಅಂಕಗಳನ್ನು ದಯಪಾಲಿಸಿ.

    1) ಪವಿತ್ರಧನ, ಅಲ್ಲ, ಇರಬಹುದು (ಒಂದೇ ಏಟಿಗೆ ಮೂರು ಪ್ರಶ್ನೆ ಇರುವುದರಿಂದ 3 ಪದ)
    2) ಅಲ್ಲ
    3) ಅಹುದಹುದು (ಎರಡು ಪ್ರಶ್ನೆ ಇರುವುದರಿಂದ ಎರಡು ಉತ್ತರ ಜೋಡಿಸಲಾಗಿದೆ).
    4) ನಿಮ್ಮಿಷ್ಟ, ಗೊತ್ತಿಲ್ಲ ! (ಎರಡು ಪ್ರಶ್ನೆ ಇರುವುದರಿಂದ ಎರಡು ಪದ).

    ಅಂಕಪಟ್ಟಿ ಬರಲಿ....

    ಪ್ರತ್ಯುತ್ತರಅಳಿಸಿ
  3. ಭಲೇ ವಿಕ್ರಮಾದಿತ್ಯ, ಕೊನೆಗೂ ನನಗೆ ಮಣ್ಣು ಮುಕ್ಕಿಸಿದೆ. ನಿನಗೆ ನೂರಕ್ಕೆ ಮೂರು ಅಂಕಗಳನ್ನು ದಯಪಾಲಿಸುತ್ತಿರುವೆ. ವ್ಯಾಕರಣದಲ್ಲಿ ತಪ್ಪಿದ್ದರೆ ಅದು ನನ್ನ ತಪ್ಪಲ್ಲ. E & OE

    ಪ್ರತ್ಯುತ್ತರಅಳಿಸಿ
  4. ವಿಕ್ರಮಾದಿತ್ಯ ಕೊಟ್ಟ ಅಂತ ಸಿಕ್ಕಾಪಟ್ಟೆ ಮಣ್ಣು ಮುಕ್ಕುವುದೇಕೆ ಮಾವಿನರಸರೆ,

    ಅಕ್ಷರ ದೋಷದಿಂದ ಹಣ್ಣು ಇದ್ದದ್ದು ಮಣ್ಣು ಅಂತ ನಿಮಗೆ ಕೇಳಿಸಿದೆ, ಅಥವಾ ಕಾಣಿಸಿದೆ... :)

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D