Monday, January 21, 2008

ಬೊಗಳೆಗೂ ಭಾರ-ತಾ ರತ್ನ ಆದೇಶ

(ಬೊಗಳೂರು ಅರಾಜಕೀಯ ಬ್ಯುರೋದಿಂದ)
ಬೊಗಳೆಯ ಕೊರಳಿಗೆ ರತ್ನಳನ್ನು ಕಟ್ಟುವ ಪ್ರಯತ್ನದ ಹಿಂದಿನ ಅಸತ್ಯಾಂಶ ಬಯಲಾಗಿದೆ. ಬೊಗಳೆಗೆ ಎಲ್ಲರೂ ಒಟ್ಟು ಸೇರಿ ಸಂಚು ಹೂಡಿ ನೀಡಲು ಉದ್ದೇಶಿಸಿರುವುದು ಅನಾಗರಿಕ ರತ್ನ ಪ್ರಶಸ್ತಿ ಅಲ್ಲ, ಬದಲಾಗಿ ಭಾರ-ತಾ ರತ್ನ ಪ್ರಶಸ್ತಿ ಆದೇಶ ಎಂಬುದು ಪತ್ತೆಯಾಗಿದೆ.

ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಹಾದಿ ಬೀದಿಯಲ್ಲಿರುವವರೆಲ್ಲರ ಹೆಸರು ಕೇಳಿಬರುತ್ತಿರುವುದರಿಂದ ತೀವ್ರ ಕಂಗೆಟ್ಟ ಬೊಗಳೆ ರಗಳೆ ಬ್ಯುರೋ, ತಲೆ ತಪ್ಪಿಸಿಕೊಂಡಿತ್ತು. ಆದರೂ "ಭಾರ-ತಾ ರತ್ನ" ಎಂದು ಆದೇಶಿಸುವ ಹಯಗ್ರೀವಾಜ್ಞೆ ಈಗಾಗಲೇ ಹೊರಬಿದ್ದಿರುವುದಾಗಿ ತಿಳಿದುಬಂದಿದೆ.

ಸೂಟ್‌ಕೇಸ್‌ಗಟ್ಟಲೇ ಭಾರ ಭಾರವಾದ ರತ್ನಗಳನ್ನು ಹೊತ್ತು ತರಬೇಕು ಎಂದು ಈ ರೀತಿ ಆದೇಶ ನೀಡಿರುವುದು ಬಹುಶಃ ಜಾರಕಾರಣಿಗಳ ಜನಾಂಗೀಯರೇ ಇರಬೇಕು ಎಂದು ಶಂಕಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅವರ ಜನಾಂಗೀಯ ನಿಂದನೆ ಮಾಡಲು ಈಗಾಗಲೇ ಭಜ್ಜಿಗೆ ಕರೆ ಕಳುಹಿಸಲಾಗಿದೆ.

ಕರುನಾಡಿನಲ್ಲಿ ಈಗಾಗಲೇ ಚುನಾವಣೆಗಳೂ ಘೋಷಣೆಯಾಗಿರುವುದರಿಂದ ಮದಿರೆಯಲ್ಲಿ ಕರುನಾಡನ್ನು ತೇಲಾಡಿಸಿ ಅ-ಮಲುನಾಡು ಮಾಡಲು ಸಾಕಷ್ಟು ರತ್ನಗಳ ಅವಶ್ಯಕತೆಯೂ ಬೀಳುತ್ತಿದೆ. ಇದಕ್ಕಾಗಿ ಬೊಗಳೆ ರಗಳೆಗೆ ಹೆಚ್ಚು ಹೆಚ್ಚು ಭಾರವಿರುವ ರತ್ನಗಳನ್ನು ತುಂಬಿರುವ ಸೂಟ್‌ಕೇಸ್ ತಾ ಅಂತ ಆದೇಶ ನೀಡಲಾಗಿದೆ.

ಹೆಚ್ಚು ಹೆಚ್ಚು ಭಾರ ತಂದರೆ, ಅದನ್ನು ಹರಿದು ಹಂಚಿಬಿಡಬಹುದು. ಆ ನಂತರ ಅಳಿದುಳಿದರೆ ಮಿಕ್ಕ ದುಡ್ಡಿನಲ್ಲಿ ಮಾಧ್ಯಮ ರತ್ನ, ಉದ್ಯೋಗ ರತ್ನ, ಹಣಕಾಸು ರತ್ನ, ಸಹಕಾರ ರತ್ನ, ಪ್ರಚಾರ ರತ್ನ, ಕಲಾವಿದ ರತ್ನ, ಸಾಹಿತ್ಯ ರತ್ನ ಎಂಬಿತ್ಯಾದಿ ರತ್ನಗಳನ್ನು ಹೆಚ್ಚು ಹೆಚ್ಚು ಪ್ರಚಾರ ನೀಡಿದವರಿಗೆ, ಹೆಚ್ಚು ಹಣ ಕೊಟ್ಟವರಿಗೆ, ಹೆಚ್ಚು ಸಹಕಾರ ಮಾಡಿದವರಿಗೆ, ಬೆಂಬಲಿಸಿ ಲೇಖನ ಬರೆದವರಿಗೆ ವಿತರಿಸಬಹುದು. ಆದರೆ ಯೆಂಡ್ಕುಡುಕ ರತ್ನ ಪ್ರಶಸ್ತಿಯನ್ನೂ ಯಾರಿಗಾದರೂ ನೀಡಬೇಕು ಎಂಬುದಾಗಿ ನಮ್ಮ ಬ್ಯುರೋ ಪಟ್ಟು ಹಿಡಿದುಕೂತಿದೆ.

ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಅಡ್ಡದಂಧೆಕೋರರಿಗೆ, ದುಡ್ಡಿನಲ್ಲೇ ತೇಲಾಡುತ್ತಿರುವವರಿಗೆಲ್ಲರಿಗೂ ಭಾರ-ತಾ ರತ್ನ ಪ್ರಶಸ್ತಿ ಹೊರಬೀಳುವುದು ಖಚಿತವಾಗಿದೆ.

8 comments:

 1. ಹಾದಿ ಬೀದಿಯಲ್ಲೆಲ್ಲಾ ರತ್ನಗಳ ಸುರಿಮಳೆಯಂತೆ (ಯಾವೂರಲ್ಲಿ ಯಾವಾಗ ಅಂತ ಮಾತ್ರ ಕೇಳ್ಬೇಡಿ)- ಬೇಗ ಬೇಗ ಆರಿಸಿಕೊಳ್ಳಿ - ಮುಂದಿನ ಸಂಚಿಕೆಯ ಬೊ-ರದಲ್ಲಿ ನುಡಿಮುತ್ತುಗಳು ಉದುರುವುವ ಮೊದಲು, ರತ್ನಗಳನ್ನು ನಿಮ್ಮ ಮಡಿಲಿಗೆ ತುಂಬಿಸಿಕೊಳ್ಳಿ ಎಂದು ನಮ್ಮವರೊಬ್ಬರು ಹೇಳ್ತಿದ್ದಾರೆ.

  ಅಂದ ಹಾಗೆ, ಬಜ್ಜಿ, ಹಯಗ್ರೀವ, ಬೋಂಡಾ, ಇತ್ಯಾದಿಗಳ ಸರಬರಾಜು ಎಂದಿನಿಂದ ಶುರು ಮಾಡುತ್ತಿದ್ದೀರಿ, ಅನ್ವೇಷಿಗಳೇ. ಸದ್ಯದಲ್ಲೇ ಇನ್ನೊಂದು ನಿಮ್ಮ ತಾಣದಲ್ಲಿ ಕೊಂಡಿಹಾಕಿಕೊಳ್ಳಲಿದೆಯಾ?

  ReplyDelete
 2. (ಭೂಮಿಗೆ ಭಾರವಾದವರಿಗೆ ಮಾತ್ರ)ಭಾರ-ತಾ ರತ್ನ ಪ್ರಶಸ್ತಿ ನೀಡಬೇಕು. ಉದಾಹರಣೆಗೆ ಒದಿಯೊಗೌಡರಿಗೆ,ಬಾಲೂ ಪ್ರಸಾದರಿಗೆ ಇತ್ಯಾದಿ.

  ಇಂತಹ ಪ್ರಶಸ್ತಿಗಳನ್ನು ಮೊದಲೂ ಕೊಡುತ್ತಿದ್ದರು ಎನ್ನುವದಕ್ಕೆ ಉದಾಹರಣೆ ವಾಲಿ ಚೆನ್ನಪ್ಪನವರ ಈ ಕೆಳಗಿನ ತ್ರಿಪದಿಯಲ್ಲಿದೆ:
  "ಮುತ್ತು ರತ್ನಗಳನು ಬಳ್ಳ
  -ದಿಂದ ಅಳೆದು ಮಾರಿದಾ
  ನಮ್ಮ ನಾಡು ಭಾರತಾ,ಭಾರ-ತಾ!"

  ReplyDelete
 3. ಭಾರ-ತಾ ಆತನಿಗೆ ತಾ ಈತನಿಗೆ ತಾ ಎಂದು ಪ್ರತಿಯೊಬ್ಬರು ಒಬ್ಬೊಬ್ಬರ ಹೆಸರನ್ನು ಶಿಫಾರಸ್ಸು ಮಾಡುತ್ತಿರುವುದರಿಂದ ನಾವೂ ಕೂಡ ಆ ಕೆಲಸ ಯಾಕೆ ಮಾಡಬಾರದು ಎಂದು ಯೋಚಿಸಿ ಬೊಗಳೆಯ ಕಡೆಗೆ ತೋರುಬೆರಳು ಬೊಟ್ಟು ಮಾಡಿದೆವು, ಇನ್ನುಳಿದ ಮೂರು ಬೆರಳುಗಳು ದಿಕ್ಕುಮಾಡಿದ ಕಡೆಯನ್ನು ಗಮನಿಸಿಕೊಳ್ಳುತ್ತಾ.
  ಭಾರತಕ್ಕೆ ರತ್ನಪ್ರಾಯವಾದವರು ಯಾರು ಎಂಬುದನ್ನು ಹೇಳಬೇಕಾದವರು ಯಾರು? ಒಬ್ಬರು ರತ್ನವಾದರೆ ಉಳಿದವರೆಲ್ಲಾ ತಗಡುಗಳೇ ಎಂಬ ಕ್ಷುಲ್ಲಕವಾದ ಸಮಸ್ಯೆಯನ್ನು ಗಂಭೀರವಾಗಿ ವಿಮರ್ಶೆ ಮಾಡುವುದಕ್ಕೆ ಡಾ||ಗಾಮೊಳ್ಳಿ ಣಗೇಶ್ ತಯಾರಾಗುತ್ತಿರುವ ಸಂಗತಿ ನಮ್ಮ ಬ್ಯೂರೊಗೆ ತಲುಪಿದೆ.

  ReplyDelete
 4. ಶ್ರೀವತ್ಸಜೋಶಿJanuary 23, 2008 2:32 AM

  ಇದೀಗ ಬಂದ ವರದಿ:

  ರತ್ನ = ಹೆಂಡ್ಕುಡುಕ (ಉಲ್ಲೇಖ: ಜಿ.ಪಿ.ರಾಜರತ್ನಂ ಅವರ "ಹೆಂಡ್ಕುಡುಕ ರತ್ನ")

  ಅಂತಹ ರತ್ನನನ್ನು ಬೊಗಳೆಗೂ ಕೊಂಚ ‘ಭಾರ’ ತಾ... ಎಂದು ಕೋರಲಾಗಿದೆಯಂತೆ. ಅವನು ತರಲಿರುವ ಭಾರದಿಂದ ಬೊಗಳೆಯು ಕುಸಿದುಬೀಳಲಾರದು ಎಂದು ಸೋಮ(ರಸ)ಯಾಜಿಗಳು ಜ್ಯೋತಿಷ್ಯ ಹೇಳಿದ್ದಾರೆ.

  ReplyDelete
 5. ಶ್ರೀನಿವಾಸರೆ,
  ನೀವು ಹೇಳಿದ ರತ್ನಗಳು ಮುಂಬಯಿ ಸೆಂಟ್ರಲ್ ಸ್ಟೇಷನ್ ಪಕ್ಕದ ಹಾದಿಬೀದಿಗಳು ಅಂತ ನಮಗೆ ಗೊತ್ತಾಗಿದೆ. :)

  ಬಜ್ಜಿ ಬೋಂಡಾ ಎಲ್ಲಾ ಅದರ ಸ್ಯಾಂಪಲ್ ಕಳುಹಿಸಿದಲ್ಲಿ ಮತ್ತು ಅದನ್ನು ತಿಂದೂ ನಾವು ಸರಿಯಾಗಿಯೇ ಇದ್ದಲ್ಲಿ ಮಾತ್ರವೇ ಕೊಂಡಿ ಹಾಕಿಕೊಳ್ಳುತ್ತೇವ ೆ;)

  ReplyDelete
 6. ಸುನಾಥರೆ,

  ಇಂದಿನ ಪರಿಸ್ಥಿತಿಯ ಪ್ರಕಾರ,
  ಮುತ್ತು-ರತ್ನಗಳನ್ನು
  ಸೂಟುಕೇಸಿನಿಂದ ಅಳೆದು
  ಅಧಿಕಾರ ನಡೆಸೋ ನಾಡಿದು ಭಾರ-ಭಾರ-ತಾ...

  ReplyDelete
 7. ಸುಪ್ರೀತರೆ,
  ರತ್ನಗಳನ್ನು ಮಾತ್ರವೇ ಹುಡುಕುತ್ತಾರೆ. ಆದರೆ ಉಳಿದವರು ತಗಡುಗಳು ಎಂಬ ನಮ್ಮ ಬ್ಯುರೋಗೆ ಅಪಥ್ಯವಾದ ಸತ್ಯಾಂಶಗಳನ್ನೆಲ್ಲಾ ಬಹಿರಂಗಪಡಿಸುವುದರಿಂದ ಆತ್ಮ ಉಳ್ಳವರ ಅಭಿಮಾನ-ಭಂಗವಾಗುತ್ತದೆ.

  ಅದು ಡೀಫಾಲ್ಟ್ ಆಗಿ, ಯಾರಿಗೂ ಗೊತ್ತಾಗದ ಹಾಗೆಯೇ ಇರಲಿ.

  ReplyDelete
 8. ಜೋಷಿಯವರೆ,
  ನೀವು ಹೇಳಿದಂತಹ ರತ್ನ, ಪೀಪಾಯಿಗಟ್ಟಲೆ ಏರಿಸಿಕೊಂಡು ತರಾವರಿ ತೂರಾಡುತ್ತಲೇ ಬೊಗಳೆ ಮೇಲೆ ಬಿದ್ದರೆ, ಆ ಭಾರ ತಾಳಿಕೊಳ್ಳಲಾರದೆ ಮೊದಲೇ ತೂರಾಡುತ್ತಿರುವ ಈ ಬ್ಯುರೋ ಅಪ್ಪಚ್ಚಿಯಾಗದೇ ಇದ್ದೀತೇ?

  ನಮ್ಮಂಥವರಿಗೆ ಮಂಡೇ-ಮಾನಿಯಾ ಇರುವುದಿಲ್ಲ, ಕಾರಣ ಅದು ಸೋಮ(ರಸ)ವಾರ. ಆದರೆ ಮಂಡೆ ಇದ್ದವರಿಗೆ ಮಾತ್ರವೇ ಮಂಡೇ ಮಾನಿಯಾ ಅಂತ ಮಾತ್ರ ತಿಳಿದುಕೊಳ್ಳಬೇಡಿ.

  ReplyDelete

ನಿಮ್ಮ ಸಲಹೆ/ಅಭಿಪ್ರಾಯ ತಿಳಿಸಿ..

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...