ಬೊಗಳೆ ರಗಳೆ

header ads

ಉದ್ಯೋಗ ನಿವಾರಣೆಯಿಂದ ಉದ್ವೇಗ ಹೆಚ್ಚಳ!

(ಬೊಗಳೂರು ಉದ್ಯೋಗ ನಿವಾರಣಾ ಬ್ಯುರೋದಿಂದ)
ಬೊಗಳೂರು, ಮಾ.10- ದೇಶದಲ್ಲಿ ಜಾರಕಾರಣಿಗಳು ಇರೋದ್ರಿಂದಾಗಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಈ ನಿರುದ್ಯೋಗಿಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕಗ್ಗತ್ತಲ ಖಂಡದಿಂದ ವಿಶೇಷ ಪ್ರತಿನಿಧಿಗಳನ್ನು ಭಾರತಕ್ಕೆ ಕಳುಹಿಸಿಕೊಟ್ಟಿರುವುದಾಗಿ ನೈಜೀರಿಯಾ ಪ್ರತಿನಿಧಿಗಳು ವರದಿ ಮಾಡಿದ್ದಾರೆ.

ಈಗಾಗಲೇ ನಮ್ಮ ದೇಶದ ಬುದ್ಧಿವಂತ ಗುಗ್ಗುಗಳಿಗೆಲ್ಲಾ ನೈಜೀರಿಯಾದಲ್ಲಿ ವಿಮಾನ ಅಪಘಾತವಾಗಿ ಯಾರೋ ಸತ್ತಿದ್ದಾರೆ, ಅವರ ಬ್ಯಾಂಕ್ ಬ್ಯಾಲೆನ್ಸ್ ಕೋಟಿ ಕೋಟಿ ಇದೆ, ಅದನ್ನು ನಾವು ಹಂಚಿಕೊಳ್ಳೋಣ ಎಂಬಿತ್ಯಾದಿ ವಿವರಗಳುಳ್ಳ ಇ-ಮೇಲ್‌ಗಳ ಮೂಲಕ ಉದ್ಯೋಗಕ್ಕೊಂದು ಅವಕಾಶ ಕಲ್ಪಿಸಿಕೊಡುತ್ತಿರುವ ಈ ಕಪ್ಪು ಬಣ್ಣದ ನಮ್ಮ ಪೂರ್ವಜ ವಂಶಜರು, ಇದೀಗ ದೇಶದಲ್ಲಿ ನೇರವಾಗಿಯೇ ಉದ್ಯೋಗಕ್ಕಿಳಿದಿದ್ದಾರೆ ಎಂದು ಇಲ್ಲಿ ವರದಿ ಮಾಡಲಾಗಿದೆ.

ಆದರೆ, ಈ ಬಗ್ಗೆ ಬುದ್ಧಿವಂತ ಗುಗ್ಗುಗಳನ್ನು ಎಚ್ಚರಿಸುವ ನಿಟ್ಟಿನಲ್ಲಿ 'ಬಿವೇರ್' ಅಂತ ತಲೆಬರಹ ಕೊಟ್ಟಿರುವ ಬಗ್ಗೆ ತೀವ್ರ ಆಕ್ಷೇಪವೆತ್ತಿರುವ ಏಕಸದಸ್ಯ ಅಖಿಲ ಭಾರತ ಕಾರ್ಯಮರೆತ ಪತ್ರಕರ್ತರ ಸಂಘದ ಏಕೈಕ ಅಧ್ಯಕ್ಷರೂ ಆಗಿರುವ ಬೊಗಳೆ ರಗಳೆ ಸಂತಾಪಕರು, ಈ ರೀತಿ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮಟ್ಟ ಹಾಕುವ ಯತ್ನ ಎಂದು ಟೀಕಿಸಿದ್ದಾರೆ.

ಇದಲ್ಲದೆ, ಇಂಥ ಎಚ್ಚರಿಕೆಗಳನ್ನು ನೀಡಿ ಬುದ್ಧಿವಂತರ ಜ್ಞಾನ ತಪ್ಪಿಸಲು ಮತ್ತು ಜನತೆಯನ್ನು ಹೆದರಿಸಲು ತೀವ್ರ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ರೀತಿಯೆಲ್ಲಾ ಎಚ್ಚರಿಸಿಬಿಟ್ಟರೆ, ನಯ್ಜೀರಿಯನ್ನರು ಮತ್ತು ಇದೇ ರೀತಿ ನಯ್ವಂಚನೆ ಮಾಡೋರು ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದಂತೆ ಬಿದ್ದಿರಬೇಕು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಉದ್ಯೋಗ ನಿವಾರಣೆಯಾದಲ್ಲಿ ಉದ್ವೇಗ ಹೆಚ್ಚುತ್ತದೆ. ಆದರೆ ನಿರುದ್ಯೋಗ ನಿವಾರಣೆಯಾದಲ್ಲಿ ಇದು ಕಡಿಮೆಯಾಗುತ್ತದೆ ಎಂಬುದು ಅವರ ಅಭಿಮತ.

ನೈಜೀರಿಯದ ಪೂರ್ವಜ ವಂಶಜರು ಕೆಲಸವಿಲ್ಲದೆ ಕುಳಿತವರಿಗೆ ಅತ್ತಿತ್ತ ಅಲೆಡಾಡಿಸುತ್ತಾ ಕೈತುಂಬಾ ಕೆಲಸ ಕೊಡಿಸುತ್ತಿದ್ದಾರೆ. ಸುಮ್ಮನೇ ಕೂತಿದ್ದವರನ್ನು ಎಚ್ಚರಿಸಿ ಓಡಾಡುವಂತೆ ಮಾಡುತ್ತಿದ್ದಾರೆ. ಇದರಿಂದ ದೈಹಿಕವಾಗಿಯೂ ಒಳ್ಳೆಯ ವ್ಯಾಯಾಮ ದೊರೆಯುತ್ತದೆ ಎಂದು ಪ್ರತಿಪಾದಿಸಿರುವ ಅವರು, ಬಿ-wear ಅಂತ ಎಚ್ಚರಿಕೆ ಕೊಡುತ್ತಿರುವುದೇಕೆ ಎಂಬುದನ್ನು ತೀವ್ರವಾಗಿ ಆಕ್ಷೇಪಿಸಿದ್ದಾರೆ.

ಬಿಚ್ಚುಡುಗೆ ನಟೀಮಣಿಯರು, ಆಧುನಿಕ ಜನಾಂಗದವರಿಗಾದರೆ Be-Wear ಅಂತ ಎಚ್ಚರಿಕೆ ನೀಡಿದರೆ ಸ್ವಲ್ಪ ಸ್ವಲ್ಪ ಬಟ್ಟೆ wear ಮಾಡಿಕೊಳ್ಳಬಹುದಿತ್ತು. ಆದರೆ ನಮಗೆ ಎಚ್ಚರಿಕೆ ನೀಡಲು ಅವರಿಗೇನು ಹಕ್ಕಿದೆ? ಎಂಬುದು ಸಂತಾಪಕರ ವ್ಯಾಖ್ಯಾನ.

ಹಾಗಿದ್ದರೆ, ಇಂಥವರಿಂದಾಗಿ ನಿರುದ್ಯೋಗ ನಿವಾರಣೆ ಹೇಗೆ ಸಾಧ್ಯ? ಇದು ಉದ್ಯೋಗ ನಿವಾರಣೆಯೇ ಅಥವಾ ನಿರುದ್ಯೋಗ ನಿವಾರಣೆಯೇ ಎಂದು ಬೆಪ್ಪುತಕ್ಕಡಿಯಂತೆ ಕೇಳಿದಾಗ, ಅವರೆಲ್ಲಾ ನೈಜೀರಿಯದ ನೈವಂಚಕರಿಂದಾಗಿ ಎಲ್ಲಾ ಹಣ ಕಳೆದುಕೊಂಡು ನಯಾಜೀವನ ಶುರುಮಾಡಿ, ಉದ್ಯೋಗ ಹುಡುಕುವುದನ್ನೇ ಉದ್ಯೋಗವಾಗಿಸಿಕೊಳ್ಳುತ್ತಿದ್ದಾರೆ. ಅಂದರೆ ಕೈತುಂಬಾ ಕೆಲಸ ಎಂದಾಯಿತು. ಅವರ ನಿರುದ್ಯೋಗವೂ ನಿವಾರಣೆಯಾದಂತಾಯಿತು ಎಂದು ಸ್ಪಷ್ಟನೆ ನೀಡಿದರು,

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ನೈಜೀರಿಯಾದ ವಂಚಕರ ಬಗ್ಗೆ ನಯವಾಗಿ, ನೈಸಾಗಿ, ನೀಟಾಗಿ ಬರೆದಿದ್ದಕ್ಕೆ ವಂದನೆಗಳು :).

    ಪ್ರತ್ಯುತ್ತರಅಳಿಸಿ
  2. ನೀಲಗಿರಿಯವರೆ,

    ಇದರಲ್ಲಿ ನಿಮ್ಮ ಕೈವಾಡವನ್ನು ನಾವು ಈಗಾಗಲೇ ಪತ್ತೆ ಹಚ್ಚಿದ್ದರಿಂದ ಕಣ್ಣಾ ಮುಚ್ಚೇ... ಕಾಗೇ ಗೂಗೇ... ನಿಮ್ಮಯ ಹಕ್ಕಿ ಕಾಯ್ದುಕೊಳ್ಳಿ....

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D